ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿನಿ ಹೆಗಡೆ ಸಣ್ಣಕಥೆ : ಜೀವತಂತು (ಭಾಗ 2)

By ತೇಜಸ್ವಿನಿ ಹೆಗಡೆ, ಬೆಂಗಳೂರು
|
Google Oneindia Kannada News

(ಕಥೆ ಮುಂದುವರಿದಿದೆ...)

"ಅರೆ ವ್ಹಾ... ಸಣ್ಣದಾಗಿ ಪೀಂ ಅಂದ್ರೂ ಸಾಕಲೇ ಕುಮುದಕ್ಕ... ಓಡ್ಕಂದು ಬರ್ತೆ ನೋಡು! ನಾ ಎಂತೂ ಮಾಡಿದ್ನಿಲ್ಯಪ್ಪ ನಿನ್ನ ರಾಜ್ಕುಮಾರಿಗೆ. ಟೊಪ್ಪಿ ಅಂದ್ರೆ ಅಲರ್ಜಿ ಅದ್ಕೆ... ಪಾಪ ನಿಂಗವೆಲ್ಲಾ ಸೇರಿ ಹಿಂಸೆ ಕೊಡದೆಂತಕ್ಕೆ? ಬಿಡಕಾಗ್ತಿಲ್ಯಾ ಹಾಂಗೇಯಾ?" ಪ್ರೀತಿಯುಕ್ಕಿ, ಮಗುವನ್ನೆತ್ತಿಕೊಂಡು ಹಣೆಗೊಂದು ಮುತ್ತು ಕೊಟ್ಟವಳೇ, ಟೊಪ್ಪಿ ಬಿಚ್ಚಿಬಿಟ್ಟಳು. ಸ್ವಿಚ್ ಆಫ್ ಮಾಡಿದಂತೆ ಥಟ್ಟನೆ ನಿಂತಿತು ಪುಟಾಣಿಯ ಅಳು. "ಲೇಯ್, ಬೇಡ್ದೇ... ಮುಸ್ಸಂಜೆ ಆಗ್ತಿದ್ದು... ಶೀತಗೀತ ಆದ್ರೆ ನನ್ನ ನಿದ್ದೆ ಹಾಳಾಗದು... ನೀನೋ, ಆರಾಮಾಗಿ ಗೊರಕೆ ಹೊಡಿತಿರ್ತೆ. ನಿನ್ನ ಭಾವಂಗೇನಾದ್ರೂ ವಿಷ್ಯ ಗೊತ್ತಾದ್ರೆ, ನಿನ್ನ ಗ್ರಹಚಾರ ಬಿಡಿಸ್ತ, ಅವ್ರ ಮುದ್ದಿನ ಮಗ್ಳಿಗೆ ತೊಂದ್ರೆ ಕೊಟ್ಟಿದ್ದಕ್ಕೆ ನೋಡು, ಪ್ಲೀಸ್ ಕೊಡಿಲ್ಲಿ... ಹಾಲು ಕುಡ್ಸಿ ಮಲಗ್ಸವು ಇನ್ನು." ತಂಗಿಯ ಒಪ್ಪಿಗೆಗೂ ಕಾಯದೆ, ಮಗುವನ್ನೆತ್ತಿಕೊಂಡು ಒಳಗೆ ನಡೆದಳು ಕುಮುದ.

"ಈ ಅಕ್ಕನ ಸೊಕ್ಕು ನೋಡ್ದ್ಯಾ ಅಜ್ಜಿ? ಮಹಾ, ತಂಗೊಂದೇ ಮಗು ಸಾಕಲೆ ಬತ್ತು ಹೇಳ ರೀತಿ ಆಡ್ತಪ." ಮುಖ ಉಬ್ಬಿಸಿಕೊಂಡಳು ಅಂಗಳದ ಕಡೆ ನಡೆದಳು. "ಹ್ಹಿಹ್ಹಿ... ಎಲ್ಲಾ ಹೊಸ ತಾಯಂದ್ರೂ ಹೀಂಗೇ ತಿಳ್ಕ. ಮುಂದಿನ ತಿಂಗ್ಳು ನಿನ್ನ ಮದ್ವೆ ಆಗ್ತು... ಆಮೇಲೆ ನೀನೂ ತಾಯಾಗ್ತೆ; ನಿಂದೂ ಇದೇ ತಕರಾರು ಇದ್ದೇ ಇರ್ತು... ನಾನೂ ಹೀಂಗೆ ನಗ್ತಾ ಇರ್ತಿ..." ಅವಳನ್ನನುಸರಿಸಿ ಬಂದ ವೆಂಕಜ್ಜಿ, ಕುಶಾಲು ಮಾಡಲು, ತನ್ನ ಭಾವೀ ಪತಿ ಅವಿನಾಶ್ ನೆನಪಾಗಿ ಅವಳ ಮೊಗ ನಸುಗೆಂಪೇರಿತು.

Jeevatantu, a Kannada short story by Tejaswini Hegde (part 2)

ಹಿಂದಿನ ದಿನವಷ್ಟೇ ಸಾರಿಸಿದ್ದ ಅಂಗಳದಿಂದ ಒಣಗಿದ ಸಗಣಿಯ ಘಮಲು ಸಂಜೆಗಾಳಿಗೆ ತೇಲಿಬರುತ್ತಿತ್ತು. ಕುಳಿತಿದ್ದ ಕಟ್ಟೆಯ ಪಕ್ಕದಲ್ಲೇ ಬೆಳೆಸಲಾಗಿದ್ದ ಅಲಸಂಡೆ ಬಳ್ಳಿಯಿಂದ ಕಾಯಿಗಳು ಚಿಗುರತೊಡಗಿದ್ದು ನೋಡಿ ಅವಳಲ್ಲೊಂದು ಕುತೂಹಲ ಮೂಡಿತು. "ಅಜ್ಜಮ್ಮಾ, ನಾವು ಮನಷ್ಯರು ನಮ್ ಮಕ್ಕಳನ್ನ ಎಷ್ಟು ಕಾಳ್ಜಿಯಿಂದ ನೋಡ್ಕತ್ತ... ಪಾಪದ ಮರಗಳು ತಮ್ ಸಂತಾನೋತ್ಪತ್ತಿಗೆ ಎಷ್ಟು ಕಷ್ಟ ಪಡ್ತಿರ್ತ ಅಲ್ದಾ?" ಮೊಮ್ಮಗಳ ಪ್ರಶ್ನೆಗೆ ಉತ್ತರಿಸದೇ, ಒಂದು ನಿಟ್ಟುಸಿರ ಬಿಟ್ಟು, ದೂರದಲ್ಲೆಲ್ಲೋ ದಿಗಂತವನ್ನೇ ನೋಡುತ್ತಾ ಕುಳಿತಿರು ವೆಂಕಜ್ಜಿ.

ಗಲ್ಲದ ಮೇಲೆ ಬಲಗೈಯನ್ನಿಟ್ಟುಕೊಂಡು ಬೆಳೆದಿದ್ದ ಕಾಯಿಪಲ್ಲೆಗಳನ್ನೇ ದಿಟ್ಟಿಸುತ್ತಿದ್ದ ಮಾನಸಾಳ ಮಡಿಲಿಗೆ ಕಪ್ಪು ಬಣ್ಣದ ನುಣುಪಾದ ಬೀಜವೊಂದು ಹಾರಿ ಬಿತ್ತು. ತುಸು ಆಶ್ಚರ್ಯದಿಂದ ಅದನ್ನೇ ದಿಟ್ಟಿಸುತ್ತಿದ್ದಂತೆ, ಫಟ್ ಚಟ್ ಎಂದು ಸದ್ದಾಗುತ್ತಾ ಎಲ್ಲೋ ಒಡೆಯುವ ಸೂಚನೆಯೊಂದಿಗೆ, ಮರುಕ್ಷಣ ಮತ್ತೊಂದು ಬೀಜ, ಇನ್ನೊಂದು, ಹೀಗೆ ಹಲವು ಸಣ್ಣಸಣ್ಣ ಬೀಜಗಳು ಅಂಗಳದಲ್ಲಿ ಬೀಳತೊಡಗಿದವು.

"ಅಜ್ಜಮ್ಮಾ, ಇದೆಂತೇ? ಎಲ್ಲಿಂದ ಹಾರಿ ಬೀಳ್ತಿದ್ದೇನಪಾ? ತಿನ್ನ ಬೀಜನಾ ಇದು?" ಹಾಗೇ ಮೂಸಿ ನೋಡಲು ಹೋದವಳನ್ನು ತಕ್ಷಣ ತಡೆದರು ವೆಂಕಜ್ಜಿ. "ಅಯ್ಯೋ ತಂಗಿ, ತಿನ್ನಡ್ದೇ... ಇದು ಹರಳೆಣ್ಣೆ ಬೀಜ. ಹಾಂಗೇ ತಿಂದ್ರೆ ಕೆಟ್ ವಿಷ... ಎಣ್ಣೆ ಮಾಡ್ಕಂಡ್ರೆ ರಾಶಿ ತಂಪು. ಹರಳೆಣ್ಣೆ ಗಿಡ ತನ್ನ ಕಾಯಿಂದ ಹೀಂಗೆ ಬೀಜ ಸಿಡಿಸಿ ಹರಡ್ತು, ಹೊಸ ಗಿಡ ಹುಟ್ಟಲೆ. ಹಾಂ, ನೀ ಆಗ ಕೇಳಿದ್ ಪ್ರಶ್ನೆಗೆ ಈಗ ಉತ್ತರ ಸಿಗ್ತು ಅಂದ್ಕತ್ತಿ..." ಸಣ್ಣ ನಗುವಿನೊಂದಿಗೆ ಅಜ್ಜಿ ಕೊಟ್ಟ ವಿವರಣೆಯಿಂದ ಮಾನಸಳಿಗೆ ರೋಮಾಂಚನವಾಯಿತು.

'ಅರೆರೆ... ಪ್ರಕೃತಿ ಅದೆಷ್ಟು ನಮಗಿಂತ ಸಶಕ್ತವಾಗಿದ್ಯಪ್ಪಾ! ವೆಲ್ ಪ್ಲ್ಯಾನ್ಡ್ ಆಗಿದೆ! ಸುಮ್ನೆ ನಾವೇ ಗ್ರೇಟ್ ಅಂದ್ಕೊಂಡು ಹೆಡ್ಡು ಬೀಳ್ತೀವಿ..." ಮನದೊಳಗೇ ಅಚ್ಚರಿಪಡುತ್ತಾ, ಆ ಎಲ್ಲಾ ಬೀಜಗಳನ್ನು ಆರಿಸಿ, ಮಡಿಲಲ್ಲಿ ತುಂಬಿಟ್ಟುಕೊಂಡಳು. ಆ ಪುಟ್ಟ ಬೀಜದೊಳಗೆ ಅಡಗಿರುವ ಅವ್ಯಕ್ತ ಜೀವಾತ್ಮವನ್ನು ಮೃದುವಾಗಿ ಸವರಿ ಪುಳಕಗೊಳ್ಳುತ್ತಿರುವಾಗಲೇ ಅವಳ ಮೊಬೈಲ್ ರಿಂಗಾಗಿದ್ದು.

English summary
Jeevatantu, a Kannada short story by writer Tejaswini Hegde on pleasure of motherhood, problems faced by mother when a girl child is born etc. There is always light at the end of dark tunnel. The short story is from collection Samhita.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X