ಮೇರಾ ಪಾವರ ಮೈನೆ ದಿಖಾಯಾ, ಉನಕಾ ಪಾವರ್ ಉನ್ಹೋನೇ ದಿಖಾಯಾ

By: ಟಿ.ಪಿ. ವ್ಯಾಸಮುದ್ರಿ, ಧಾರವಾಡ
Subscribe to Oneindia Kannada

ಅವನ ಪೂರ್ತಿ ಹೆಸರು ಹುಸೇನ್ಸಾಬ್ ರಾಜೇಸಾಬ್ ಕಿತ್ತೂರ. ಆದರ ಅವನನ್ ಅವರ ಮನ್ಯಾಗ, ಊರಾಗ ಎಲ್ಲಾರೂ ಹುಸ್ನ್ಯಾ ಅಂತ ಕರೀತಿದ್ದರು. ಕೆಲವರು ಅವನ ಹಿಂದ ಹುಚ್ಹ್ ಹುಸ್ನ್ಯಾ ಅಂತಿದ್ದರು. ಹುಚ್ಹ್ ಅನ್ಲಿಕ್ಕೆ ಅವೇನೂ ಅಪೂಟ ಹುಚ್ಹ್ ಅಲ್ಲ. ಯಾರಿಗೂ ಕಲ್ ಒಗಿತಿರಲಿಲ್ಲ, ಮೆಂಟಲ್ ಡಿಸ್ಆರ್ಡರೂ ಅಲ್ಲ. ಇಷ್ಟೇ ಏನಪಾ ಅಂದರ ಅಂಥಾಪರಿ ಚಕ್ಕಾಪಂದಿ ಇದ್ದಿದ್ದಿಲ್ಲ. ಸಾಲ್ಯಾಗನೂ ಅಷ್ಟರಪೂರ್ತೇನೆ ಇದ್ದ.

ಹಿಂಗಾಗಿ ಒಂದೊಂದು ಈಯತ್ತೆದಾಗ ಎರಡೆರಡ ವರ್ಷ ಕೂತಗೊತಿದ್ದ. ಕಡೀಕೆ ಮಾಸ್ತರಿಗೆ ಬ್ಯಾಸರಿಕಿ ಬಂದು ಮುಂದಿನ ವರ್ಗಕ್ಕ ಎತ್ತಿ ಹಾಕ್ತಿದ್ರು. ಹಿಂಗs ಮಾಡಿಕೋತ ಎಂಟ ವರ್ಷಕ್ಕ ನನ್ನ ಮಗಾ ಒಂದ ದಂಟ್ ಅಂದಾ ಅನ್ನೂ ಹಂಗ 18-19 ವರ್ಷಕ್ಕ ಮ್ಯಾಟ್ರಿಕ್ ಗೆ ಬಂದ. ಅದು ಪಬ್ಲಿಕ್ ಪರೀಕ್ಷೆ. ಯಥಾ ಪ್ರಕಾರ ನಪಾಸಾದ. ಅಂದ್ರ ಈಗ ಆವಾ ಎಂ.ಎ.ಬಿ.ಎಫ್.(ಅಂದರ ಮ್ಯಾಟ್ರಿಕ್ ಅಪಿಯರ್ಡ್ ಬಟ್ ಫೇಲ್ಡ್.) ಆದ ನಿರುದ್ಯೋಗಿ ಯುವಕ ಆಗಿ ಕೂತ.

ಇವನ ತಂದೆ ತಾಯಿ ರಾಜೇಸಾಬ್ ಮತ್ತ ಫಾತಿಮಾ ಇಬ್ಬರೂ ಒಳ್ಳೆಯವರೆ. ಅವರಿಗೆ 8-10 ಮಕ್ಕಳು. ಒಂದೆರಡು ಹೆಣ್ಣ ಮಕ್ಕಳನ್ನ್ ನಿಕಾಹ್ ಮಾಡಿ ಕೊಟ್ಟಿದ್ದರು. ಗಂಡ ಹೂಡ್ರೊಳಗ ಹುಸ್ನ್ಯಾನ ದೊಡ್ಡಾವ. ರಾಜೇಸಾಬ್ ಒಂದು ಡಬ್ಬೀ ಅಂಗಡಿ ಇಟಗೊಂಡು ಸೈಕಲ್ ರಿಪೇರಿ, ಹವಾ ಹಾಕೋದು ಮತ್ತ... ಛತ್ರಿ ರಿಪೇರಿ ಇಂಥಾದ್ ಮಾಡ್ತಿದ್ದ. ಫಾತಿಮಾ ನಾಕ ಮನಿ ಮುಸರಿ, ಒಗ್ಯಾಣ ಮತ್ತ ಸಂಜಿಮುಂದ ಮನ್ಯಾಗನs ಬೀಡಿ ಕಟ್ಟತಿದ್ಲು. ಅಕೀಗೆ ಎಲ್ಲಾರೂ ಬೂಬು ಅಂತಿದ್ರು. ಮತ್ತ ಒನ್ನಾಕು ಆಡು ಕೋಳಿ ಸಾಕೊಂಡಿದ್ರು. [ಮಾದೇವಮ್ಮನ ಲಿವಿಂಗ್ ಟುಗೆದರ್ ಸಂಸಾರ!]

Huch Hussain Saab shows his power to Meharunnisa

ಹಿಂಗs ಸಣ್ಣ ಆದಾಯದೊಳಗ ದೊಡ್ಡ ಸಂಸಾರ ಸಾಗಿಸಿಕೊಂಡು ಬಂದಿದ್ದರು. ಹುಸ್ನ್ಯಾನ ಮ್ಯಾಲ್ ಭಾಳ ಭರೋಸಾ ಇಟಗೊಂಡಿದ್ರು. ಬೂಬು ಕೆಲಸಕ್ಕ ಹೋದಲ್ಲೆಲ್ಲ, 'ಎವ್ವಾ ನಿಮ್ಮ ಯಜಮಾನರಿಗೆ ಹೇಳಿ ನಮ್ಮ ಹುಸ್ನ್ಯಾಗ ಒಂದ್ ನೌಕರಿ ಆಗೂಹಂಗ ಮಾಡ್ರಿ' ಅಂತ ಹೇಳಿಕೊತನ ಇದ್ಲು.

ಒಮ್ಮೆ ಒಬ್ಬರ ಮನ್ಯಾಗ, 'ಎ ಬೂಬು ಪೆಪರ್ದಾಗ ಏನೋ ಬಂದದಂತ. ನಿಮ್ಮ ಹುಸ್ನ್ಯಾನ ಕಡಿಂದ ಒಂದು ಅರ್ಜಿ ಹಾಕಸ್ತಿಎನ ನೋಡು' ಅಂದ್ರು. ಆಗ ಬೂಬು, 'ಎವ್ವಾ ನಮಗ ಏನ್ ಗೊತ್ತಾಕ್ಕೇತಿ ನೀವ ಏನ ಮಾಡಬೇಕು ಹೇಳ್ರಿ' ಅಂದ್ಲು. ಅದಕ್ಕ ಆ ಮನಿಯಾಕಿ, 'ಏನ್ರಿ ಅದೇನೋ ಅನ್ತಿದ್ರ್ಯಲ್ಲ, ಬೂಬು ಕೇಳಲಿಕ್ಕೆ ಹತ್ಯಾಳ ನೋಡ್ರಿ' ಅಂತ ಗಂಡಗ ಅಂದ್ರು.

ಆಕೆಯ ಯಜಮಾನ ಮೂಗಿನ ಮ್ಯಾಲಿನ ಚಸ್ಮಾ ಕೈಯಾಗ ಹಿಡಕೊಂಡು ಹೊರಗ ಬಂದು, 'ರೇಲ್ವೆದಾಗ ಸಿಗ್ನಲ್ ಮನ್ ಜಾಗಾಕ್ಕ್ ಕರದಾರು. ಅರ್ಜಿ ಹಾಕ್ಸು' ಅಂದಾಗ, ಮತ್ತ ಬೂಬು ಅವರಿಗೂ ಅದನ್ನೇ ಹೇಳಿದಾಗ, ರಾಯರು ಪೋಸ್ಟ್ ಆಫಿಸ್ನ್ಯಾಗ ಅರ್ಜಿ ಫಾರಂ ಸಿಗತಾವು ತಗೊಂಡು ತುಂಬಿ ಕೊಡಬೇಕು ಅಂತ ಹೇಳಿದ್ರು.

ಬೂಬು ಸಂಗಾತ್ಲೇ ಮನೀಗೆ ಹೊದಾಕಿನೆ, ಹುಸ್ನ್ಯಾನ್ ಪೋಸ್ಟಿಗೆ ಅಟ್ಟಿ ಫಾರ್ಮ್ ತರಿಸಿ ಹುಸ್ನ್ಯಾನ ಕರಕೊಂಡು ರಾಯರ ಮುಂದ ಹಾಜರ್ ಆದ್ಲು. ಏ ಇಕಿ ಬಿಡು ಹಂಗ ಕಾಣ್ಸಂಗಿಲ್ಲ ಅಂತ ಚಸ್ಮಾ ಮೂಗಿಗೆ ಏರ್ಸಿ ಒಮ್ಮೆ ಫಾರ್ಮ್ ಪೂರಾ ಓದಿ ಹುಸ್ನ್ಯಾನ್ ಕೇಳಿಕೊಂಡು, ಎಲ್ಲ ವಿವರ ತುಂಬಿ ಅದಕ್ಕ ಏನೇನ ಲಗತ್ತಿಸಬೇಕು ಅಂತ ಹೇಳಿ, ಅದನ್ನ ರಜಿಸ್ಟರ್ ಮಾಡ ಮತ್ತ ಹಂಗ ಅದರ ಪಾವತಿ ಜ್ವಾಪಾನಾಗಿ ಇಟ್ಕೋ ಅಂತ ಹೇಳಿ ಕಳಿಸಿದರು.

ಹುಸ್ನ್ಯಾ ಆ ಪ್ರಕಾರ ಎಲ್ಲಾ ಮಾಡಿ ಪಾವತಿ ತಂದ. ಬೂಬು ಅದನ್ನ ಅವನ ಕೈಯಿಂದ ಗಬಕ್ಕನ ಕಸಗೊಂಡು ತನ್ನ ಎಲಿ ಅಡಕಿ ಚಂಚ್ಯಾಗ ಮಡಿಚಿ ಇಟ್ಟು ಚಂಚಿ ಕುಬಸದಾಗ್ ಭದ್ರವಾಗಿ ಇಟಗೊಂಡಳು. [ಬರ್ರೀ ಲೇ ಇಲ್ಲೇ ನನ್ನ ಉಳ್ಳಾಗಡ್ಡಿ ರೊಕ್ಕ ಕೊಡಿಸ್ರೋ!]

ಸಿಗ್ನಲ್ಮನ್ ಗ ಬೇಕಾದ ವಿದ್ಯಾ ಅರ್ಹತೆ 8ನೆಯತ್ತೆ. ಹುಸ್ನ್ಯಾ ನೋಡಿದ್ರ ಎಂಎಬಿಎಫ್ ಅ೦ದ್ರ ಇವನದು ಹೆಚ್ಚಿನ ವಿದ್ಯಾಅರ್ಹತೇನೆ ಆತಲ್ಲ. ಹಿಂಗಾಗಿ ಇಂಟರ್ವ್ಯೂ ಬಂತು ಮತ್ತ ಅದಕ್ಕ ಹೊಗ್ಯೂ ಬಂದ. ಆ ಮ್ಯಾಲೆ ಬೂಬು ಮಾತ್ರ ರಾಯರೇ ನೌಕರಿ ಕೊಡವರ್ಗತೆ ವಾರಕ್ಕೊಮ್ಮೆ ರಿಮೈಂಡರ್ ಹಾಕೊತನೆ ಇದ್ಲು. ಅವರೂ ಬರಬಹುದು ತಡಿ ತಡಿ ಅಂತ ಹೇಳಿಕೊತನ ಇದ್ರು.

ಹಿಂಗ ಇರುವಾಗ ಒಂದಿನ ಹುಸ್ನ್ಯಾಗ ಸಿಗ್ನಲ್ಮನ್ ಅಂತ ಹಾಜರಾಗುಹಂಗ ಆದೇಶ ಬಂತು. ಮತ್ತ ಎರಡ ತಿಂಗಳು ಜಿಲ್ಲಾ ಊರಾಗ ಟ್ರೇನಿಂಗ ಅಂತ ಇತ್ತು. ಮಗನ್ ಟ್ರೈನಿಂಗಿಗೆ ಕಳಿಸಿ ಕೊಟ್ಟರು ರಾಜೇಸಾಬ್ ದಂಪತಿಗಳು. ಇವರ ಊರ ಉತ್ತರ ದಿಕ್ಕಿಗೆ 2-3 ಕಿಲೋ ಮೀಟರ್ ದೂರದಾಗ ರೇಲ್ವೆ ಹಳಿ ಹಾದು ಹೋಗಿತ್ತು. ಊರ ಜನಾ ಬಡದಾಡಿ ಬಡದಾಡಿ ಇವರ ಊರಿಗೆ ಒಂದು ಸಣ್ಣ ನಿಲ್ದಾಣ ಮಾಡಿಸಿಗೊಂಡಿದ್ದರು. ಟ್ರೇನಿಂಗ ಮುಗಿಸಿಕೊಂಡು ಬರೂ ಮುಂದ ಹುಸ್ನ್ಯಾಗ ಅಲ್ಲಲ್ಲ ಹುಸೇನ್ಸಾಬಗ (ಯಾಕಂದ್ರ ಈಗ ಅವಗ ಕೇಂದ್ರ ಸರಕಾರದ ನೌಕರಿ ಸಿಕ್ಕದ. ನಮ್ಮಲ್ಲೆ ಒಬ್ಬವ ಸೈಕಲ್ ಕೀ ಚೈನ್ ಪ್ಲೇಟ್ ಮ್ಯಾಲ್ ಬಾಬುರಾವ್ ಅಂತ ಹೆಸರ ಬರಿಸಿದ್ದ. ಅದಕ್ಕ ಬ್ಯಾರೆ ಒಬ್ಬವ ಹೇಳ್ತಿದ್ದ. ಏನಂದರ: ಮೊದಲ ಕನ್ನಡ ಸಾಲ್ಯಾಗ್ ಇದ್ದಾಗ ಆವಾ ಬಾಬ್ಯಾ ಮುಂದ ಹೈಸ್ಕೂಲ್ ಗೆ ಹೋಗಾಕ ಹತ್ತಿಂದ ಬಾಬು ಆದ ಈಗ ನೌಕರಿ ಹತ್ತಿದ ಮ್ಯಾಲೆ ಬಾಬುರಾವ್ ಆಗ್ಯಾನ.) ಆರ್ಡರ್ ಕೊಟ್ಟಿದ್ದರು.

ಸುದೈವದಿಂದ ಅವರ ಊರಿನ ಸ್ಟೇಶನ್ಕ ಅವನ್ ನೌಕರಿ ಆಗಿತ್ತು. ಹಿಂಗ್ಗಾಗಿ ಮತ್ತಿಷ್ಟು ಛಲೋ ಆಗಿತ್ತು. ರಾಜೇಸಾಬ್ ದಂಪತಿಗಳ ಆನ೦ದಕ್ಕೆ ಮಿತಿಯೇ ಇರಲಿಲ್ಲ. ಅದು ಸಹಜನೂ ಆಗಿತ್ತು.

ಆ ಊರಿನ ಸ್ಟೇಶನ್ಕ ವಿಶೇಷ ಕಟ್ಟಡ ವಗೈರೆ ಇದ್ದಿದ್ದಿಲ್ಲ. ಫತ್ರೆ ತಗಡಿನ ಶೆಡ್ ದೊಳಗ ಮಾಸ್ತರ್ ಗ ಒಂದು, ಮತ್ತ ತಿಕೀಟ್ ಕೊಡವರಿಗೆ ಒಂದು, ಹಿಂಗ ಎರಡು ಖೋಲಿ ಇದ್ದು. ಮಂದಿಗೆ ಕೂಡ್ಲಿಕ್ಕೆ ಒಂದೆರಡು ಬೆಂಚ್ ಇಷ್ಟ. ಮಣ್ಣಿನ ಪ್ಲ್ಯಾಟಫಾರ್ಮ್ ಅಲ್ಲೊಂದೆರಡು ಬೆಂಚು. ಅಲ್ಲೆ ಒಂದೆರಡು ಬೇವಿನ ಗಿಡಾ ಇದ್ದು ಅವುಗಳ ನೆರಳೇ ನೆರಳು. ಸ್ಟೇಶನ್ ಆ ಕಡೆ ಹಳಿ ದಾಟಿ ಸ್ವಲ್ಪ ದೂರ ನಾಕ ಖಂಬದ ಮ್ಯಾಲೆ ತಗಡಿನ ಶೆಡ್ಡ ದೊಳಗ ಸಿಗ್ನಲ್ ರೂಂ ಅಂತ ಮಾಡಿದ್ರು. ಅದರಾಗನ ಹುಸೇನ್ಸಾಬ್ ನ ನೌಕರಿ. ಛಲೋನ ಮಾಡಿಕೋತ ಹೊಂಟಿದ್ದ.

ಬೂಬು ಈಗ ಖುಸಿಯೊಳಗ ಇದ್ಲು. ಅವ್ವಾರ ನಮ್ಮ ಹುಸ್ನ್ಯಾಗ ಕನ್ಯಾ ಬರಾಕ್ ಹತ್ಯಾವ್ರಿ ಅಂದ್ಲು. ಅದಕ್ಕ ಬಾಯಾರು ಛಲೋ ಆತ್ಲಾ ಬೂಬು ಲಗೂ ಲಗ್ನಾ ಮಾಡಿ ಬಿಡು. ನಿನಗೂ ವಯಸ್ಸಾತು. ಸೊಸಿ ಬಂದ್ಲಂದ್ರ ಮುಪ್ಪಿನ ಕಾಲಕ್ಕ್ ಬಿಸಿ ರೊಟ್ಟಿ ಮಾಡಿ ಕೊಡ್ತಾಳು ಅಂದ್ರು. ಅದಕ್ಕ ಬೂಬು ಎವ್ವಾ ಈಗಿನ ಕಾಲದ ಹುಡಿಗ್ಯಾರು ಏನ್ ಮಾಡ್ತಾವೋ ಏನೋ. ಅವರಷ್ಟಕ್ಕ್ ಅವರು ಆರಾಮ್ ಇದ್ರ ಸಾಕ್ರಿ ಅಂದ್ಲು. ಆವಾಗ ಅವ್ವಾರು ಇನ್ನರೆ ನಿನ್ನ ಹಡಿಯೋದು ಬಂದಾಗ್ಲಿ, ಇಲ್ಲಾಂದ್ರ ಅತ್ತಿ ಸೋಸಿ ಇಬ್ಬರದೂ ಒಮ್ಮೆ ಬಾಣಂತನ ಸುರು ಆದೀತು ಅಂದಾಗ, ವಯಸ್ಸಾದ ಬುಬೂನೂ ನಾಚಿ ನೀರಾದ್ಲು. ಆದರೂ ಅಲ್ಲಾ ಕೊಡ್ತಾನ ಯವ್ವಾ ನಮ್ಮ ಕೈಯಾಗ ಏನ್ ಐತಿ ಅನಕೊಂತ ಕೆಲಸ ಮುಗಿಸಿ ಮನಿಗೆ ಹೋದ್ಲು.

ಮುಂದ ಸ್ವಲ್ಪೇ ದಿನದಾಗ ಹುಸೇನ್ಸಾಬ್ ನ ನಿಕಾಹ್ ಆತು. ಅವನ ಹೆಣ್ತಿ ಮೆಹರುನ್ನಿಸಾ ಬೆಗ೦ ಮನಿ ತುಂಬಿಸಿಕೊಂಡಳು.

***
ಹೀಗೇ ಸಂಸಾರ ಸಾಗಿತ್ತು. ನೌಕರೀನೂ ಆರಾಮ ಇತ್ತು. ಆಗ ಹುಸ್ಸೇನಿಗೆ ತಾನೊಬ್ಬ ಕೇಂದ್ರ ಸರಕಾರದ ನೌಕರದಾರ. ತನ್ನ ಕಡೆ ಮನಗಂಡ ಪಾವರ್ ಅದಾವು, ತಾ ಒಬ್ಬ ಪಾವರಫುಲ್ ಮನಸ್ಯಾ ಅಂತ ಅನ್ನೂ ಹುಚ್ ತಲ್ಯಾಗ ಸೇರಿಕೊಂಡಿತು. ಆದರ ಯಾರ್ ಮುಂದ ಹೇಳೋದು ಅಂತೆಲ್ಲ ವಿಚಾರ ಮಾಡಲಿಕ್ಕೆ ಹತ್ತ. ಹಿಂಗಾಗಿ ಹೆಣ್ತಿ ಮುಂದ ಸ್ವಲ್ಪ್ ಪ್ರಶಾನಕಿ/ಬಡಾಯಿ ಸುರು ಹಚಿಗೊಂಡ. ಅಕಿ ಮುಂದ ಮೈ ಬೋಲೆತೋ ಕ್ಯಾ ಸಮಜೀ? ಮೇರೆ ಇಶಾರೆ ಪರ ಗಾಡಿ ಚಲತೀ ಔರ್ ಟಹರತಿ ಮಾಲೂಮ್, ಅಂದಾ ಅಕಿ ಅಇಸಾ ಕ್ಯಾ ಅಂದ್ಲು. ಹಾ೦ ಏಕ ಬಾರ್ ದಿಖಾತು, ಅಂದ.

ಒಂದ ದಿವಸ ಮಧ್ಯಾನ್ಹ್ ಮ್ಯಾಲೆ ಅಕಿನ್ನೂ ಸ್ಟೇಶನ್ಕ ಕರಕೊಂಡು ಹೋದ. ನಿಚ್ಹಣಿಕಿಯಿಂದ ಹತ್ತಿಸಿಕೊಂಡ. ಆಗ ಟಪಾಲ್ಗಾಡಿ ಬರೂ ಹೊತ್ತು. (ಸಣ್ಣ ಸ್ಟೇಶನ್ ಆಗಿದ್ದರಿಂದ ಮೇಲ್ ಎಕ್ಸ್ಪ್ರೆಸ್ ಗಾಡಿ ನಿಲ್ಲುತ್ತಿರಲಿಲ್ಲ. ಬರೀ ಪ್ಯಾಸೆಂಜರ್ ಗಾಡಿ ಮಾತ್ರ ಎರಡು ಮಿನಿಟು ನಿಲ್ಲೋದು). ಎಹ್ ದೇಖ್ ಎ ಗಾಡಿ ರುಕನೆಕಾನೈ ಫಿರ್ ಭಿ ರುಕಾತೂ ದೇಖ್, ಅಂತ ಹುಚ್ಚರಗತೆ ಕೆಂಪ ಸಿಗ್ನಲ್ ಎಳದಬಿಟ್ಟ. ಗಾಡಿ ನಿಂತು.

ಗಾರ್ಡ್ ಇಳದ್ ಬಂದು ಸ್ಟೇಶನ್ ಮಾಸ್ತರ್ ಕಡೆ ಗಲಾಟೆ ಸುರು ಮಾಡಿದರು. ಕೆಲವು ಪ್ಯಾಸೆಂಜರೂ ಯಾಕ್ ನಿಂತು ಅಂತ ಇಳಿದರು. ಸಂಜಿ ವಾಯು ವಿಹಾರಕ್ಕೆಂದು ಬಂದ ಊರಿನ ಕೆಲವು ಹಿರಿಯ ನಾಗರಿಕರು ಮತ್ತ ಕೆಲವರು ಸ್ಟೇಶನ್ ಕಡೆ ಬಂದವರು ಎಲ್ಲ ಸೇರಿ ಸ್ವಲ್ಪ್ ಜನ ಜಂಗುಳಿ ಆತು. ಗಾರ್ಡ್ ಸ್ಟೇಶನ್ ಮಾಸ್ತರಿಗೆ ಒಂದು ಕೈ ತಗೊಂಡ್ರು. ಏನ್ ಸರ್ ನೀವು ಸೀನಿಯರ್ ಮಾಸ್ತರು ಹಿಂಗೆಲ್ಲ ಕೆರ್ಲೆಸ್ಸ್ ಮಾಡೋದ ಅಂತ ದಬಾಸಿದರು. ಮಾಸ್ತರಿಗೆ ಅವಮಾನ ಅನಿಸ್ತು. ತಮ್ಮ 36-37 ವರ್ಷದ ಸರ್ವೀಸ್ದಾಗ್ ಒಂದೂ ಕಪ್ಪ ಚುಕ್ಕಿ ತೊಗೊಂಡವರಲ್ಲ.

ಮಾಸ್ತರ್ ಪಿತ್ತ್ ನೆತ್ತಿಗೆ ಏರಿತ್ತು. ಕರೀ ಆ ಸಿಗ್ನಲ್ ಮನ್ನನ ಅಂದ್ರು. ಆಗ್ ಹುಸೇನಸಾಬ್ ಬಂದು ತಲಿ ತಗ್ಗಿಸಿ ನಿಂತ. ಅವನ ಹಿಂದ ಮೆಹರುನ್ನಿಸಾನೂ ಇದ್ಲು. ಮಾಸ್ತರು ಸಿಟ್ನ್ಯಾಗ್ ಛಟಲ್ ಅಂತ ಒಂದು ಕಪಾಳಕ್ಕ ಬಿಗದೇ ಬಿಟ್ರು. ಮೂರ್ಖ ನಿನ್ನಿಂದ ನಾ ಕೆಟ್ಟ ಹೆಸರು ತಗೊಬೇಕಾತು. 'ಆಯ್ ಸಸ್ಪೆಂಡ್ ಯು ಆಯ್ ಡಿಸ್ಮಿಸ್ಸ್ ಯು' ಅಂತ ಇಂಗ್ಲಿಷ್ ದಾಗ ಕನ್ನಡದಾಗ ಮತ್ತ ಹಿಂದ್ಯಾಗ ಭಾಳ್ ಬೈದರು.

ಹುಸೇನಿ ತೆಳಗ ಹಾಕಿದ ಮಾರೀ ಮ್ಯಾಲ ಎತ್ತಲೇ ಇಲ್ಲ. ಮುಂದ ಒಂದೆರಡು ಮಿನಿಟದೊಳಗ ಗಾಡಿ ಹೊರಟು ಹೋತು. ಕೂಡಿದ ಮಂದೀನೂ ಕರಗಿತು. ಮಾಸ್ತರು ದುಮು ದುಮು ಉರಕೋತ ತಮ್ಮ ಖೋಲಿಗೆ ಹೋಗಿ ಕೂತು ಮನಿಯಿಂದ ತಂದ ಬಾಟ್ಲ್ಯಾಗಿನ ನೀರ ಗಟ ಗಟ ಕುಡದರು.

ಎಲ್ಲಾರೂ ಹೋದದ್ದು ನೋಡಿ ಮೆಹರುನ್ನಿಸಾ ಉನ್ಹೇ ತುಮಕೋ ಮಾರೆ ತೊ ಅಂದ್ಲು. ಆಗ ಆ ಹುಚ್ಹ್ ಹುಸ್ನ್ಯಾ ಅಂದ: ಮೇರಾ ಪಾವರ್ ಮೈನೆ ದಿಖಾಯಾ. (ಮೆಹರುನ್ನಿಸಾ ಮನಿಸ್ನ್ಯಾಗ್ ಮೇರೆ ಸಾಮನೇ ಅಂದ್ಲು), ಉನಕಾ ಪಾವರ್ ಉನ್ಹೋನೇ ದಿಖಾಯಾ (ಮೆಹರುನ್ನಿಸಾ ಮನಿಸ್ನ್ಯಾಗ್ ಸಬಕೆ ಸಾಮನೇ ಅಂದ್ಲು!)

ಮೆಹರುನ್ನಿಸಾಗೆ ಮೈಕೈ ಪರಚಿಕೊಳ್ಳುಹಂಗ ಆತು. ಆಗ ಅಕಿ ನಿರಭ್ರವಾದ ನೀಲಾಕಾಶದ ಕಡೆ ನೋಡುತ್ತ "ಹೇ ಪರರ್ದಿಗಾರ ನಮ್ಮ ಮರ್ದಗೆ ಇನ್ನೊಮ್ಮೆ ಇಂಥಾ ಪರಿಸ್ಥಿತಿ ತರಬ್ಯಾಡಪಾ" ಅಂತ ಬೇಡಿಕೋತ ಹುಸೇನಿ ಜೋಡಿ ಭಾರವಾದ ಹೆಜ್ಜೆ ಹಾಕುತ್ತ ಮನೆ ದಾರಿ ಹಿಡಿದಳು. ಆಗ ಪಡವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗುವ ಹವಣಿಕೆಯಲ್ಲಿ ಇದ್ದ.

ಲೇಖಕರು ಪರಿಚಯ ಮಾಡಿಕೊಂಡಿದ್ದು ಹೀಗೆ : ಜನ್ಮಭೂಮಿ ವಿಜಯಪುರ ಜಿಲ್ಹೆ (ಈಗ ಬಾಗಲಕೋಟ್ ಜಿಲ್ಹೆ). ಕರ್ಮ ಭೂಮಿ ಧಾರವಾಡ. ಧಾರವಾಡವೇ ನನ್ನ ಊರು ಅಂತ ಹೇಳಲಿಕ್ಕೆ ಅಭಿಮಾನವೆನ್ನಿಸುತ್ತದೆ. ನಾನು ನಿವೃತ್ತ ಆದಾಯ ತೆರಿಗೆ ಅಧಿಕಾರಿ. ನಿವೃತ್ತಿಯ ನಂತರ ಒಬ್ಬ ಮಗನೊಂದಿಗೆ ಬೆಂಗಳೂರಿನಲ್ಲಿ ವಾಸ. ಇನ್ನೊಬ್ಬ ಮಗ ಅಮೆರಿಕೆಯಲ್ಲಿ (ಕ್ಯಾಲಿಫೋರ್ನಿಯಾ) ಇರುವದರಿಂದ ಆಗಾಗ ಅಮೆರಿಕೆಗೆ ಬರುತ್ತಿರುತ್ತೇನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
SSLC fail Hussain Saab somehow gets job as lineman in Indian Railways. Somehow he gets married to Meharunnisa too. But, one day he wanted to show his power as a lineman to his wife. So, what happened next? Read this short story by TP Vyasamudri, Dharwad.
Please Wait while comments are loading...