ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!

ಆಸ್ತಿಗಾಗಿ ಕಾಯಿಲೆಯಿಂದ ಬಳಲುತ್ತಿರುವ ಮಗಳನ್ನು ಸಾಯಲು ಬಿಡುವಂಥ ತಂದೆಯರಿದ್ದಾರೆ. ಮಗಳನ್ನು ಸಾಯಲು ಬಿಡುವಂಥ ಅವಕಾಶವಿದ್ದರೂ ಎಲ್ಲ ಆಸ್ತಿ ಅಂತಸ್ತುಗಳನ್ನು ಧಿಕ್ಕರಿಸಿ ಆಕೆಯನ್ನು ಸುಂದರ ಹೂವಾಗಿ ಅರಳಿಸುವಂಥ ಅಪ್ಪಂದಿರೂ ಇದ್ದಾರೆ!

By Prasad
|
Google Oneindia Kannada News

ಅಂತಾರಾಷ್ಟ್ರೀಯ ಶಾಲೆಯೊಂದರ ತೋಟದ ಮಾಲಿ ಬೆಳಿಗ್ಗೆ ತನ್ಮಯತೆಯಿಂದ ತಾನು ಸಾಕಿ ಬೆಳೆಸುತ್ತಿರುವ ಗಿಡಗಳಿಗೆ ಪಾತಿ ಮಾಡಿ, ನೀರುಣಿಸುತ್ತ ಪೋಷಿಸುತ್ತಿದ್ದ. ಆತನ ಶ್ರದ್ಧೆಗೆ ಹೂವು ಬಿಟ್ಟಿದ್ದ ಗಿಡಕಂಟಿಗಳು ಕೂಡ ತಲೆಬಾಗಿ ತಲೆಯಲ್ಲಾಡಿಸುತ್ತಿದ್ದವು.

ಅಷ್ಟರಲ್ಲಿ ಆತನಿಗೆ ಪ್ರಿನ್ಸಿಪಾಲ್ ಅವರಿಂದ ಕರೆ ಬಂದಿತ್ತು. "ಪ್ರಿನ್ಸಿಪಾಲ್ ಮೇಡಂ ನಿನನ್ನು ಕರೆಯುತ್ತಿದ್ದಾರೆ. ಎಲ್ಲ ಕೆಲಸ ಬಿಟ್ಟು ಕೂಡಲೆ ಬರಬೇಕಂತೆ..." ಎಂದು ಶಾಲೆಯ ಜವಾನ ಒಂದೇ ಉಸಿರಿನಲ್ಲಿ ಹೇಳಿ ಬಂದ ದಾರಿಯಲ್ಲಿ ಮರೆಯಾಗಿದ್ದ.

ಮಾಲಿ ದಿಕ್ಕೆಟ್ಟವನಂತಾದ, ಏನು ಮಾಡಬೇಕೆಂದೇ ತಿಳಿಯಲಿಲ್ಲ. ಕೈಗಳೆಲ್ಲ ಕೆಸರಾಗಿದೆ. ಒಂದು ಕ್ಷಣ ಆತನಿಗೆ ತಲೆಯೇ ಓಡಲಿಲ್ಲ. ಪ್ರಿನ್ಸಿಪಾಲರು ಹೀಗೆ ಬರಬೇಕೆಂದು ತನ್ನನ್ನು ಎಂದೂ ಆದೇಶಿಸಿದವರಲ್ಲ. ಅದೂ ಕೂಡಲೇ ಬರಬೇಕೆಂದು ಬೇರೆ ಹೇಳಿದ್ದಾರೆ.['ಯಾವ ತಂದೆ ಮಗಳನ್ನು ಸಾಯಲು ಬಿಡಲು ಸಾಧ್ಯ?']

/news/bangalore/pre-monsoon-rain-continue-till-may-end-ksndmc-118250.html

ಏನೋ ಆಗಬಾರದ್ದು ಆಗಿಹೋಗಿರಬಹುದು. ಅದಕ್ಕೇ ಹೀಗೆ ಬರಹೇಳಿದ್ದಾರೆ ಎಂದು ಏನೇನೋ ಅಂದುಕೊಂಡ ಆತನ ಹೃದಯದ ಬಡಿತ ನೂರು ದಾಟಿತ್ತು. ಕೈಯಲ್ಲಿದ್ದ ಪಿಕಾಸಿ ಅಲ್ಲೇ ಬಿಸಾಕಿ, ನಲ್ಲಿಯಲ್ಲಿ ಕೈತೊಳೆದುಕೊಂಡು, ಹಸಿಕೈಯನ್ನು ಪ್ಯಾಂಟಿಗೆ ಒರೆಸಿಕೊಂಡು ಪ್ರಿನ್ಸಿಪಾಲ್ ರೂಮಿನತ್ತ ಓಟಕಿತ್ತ.

ಎಷ್ಟು ಸಾಗಿದರೂ ಪ್ರಿನ್ಸಿಪಾಲ್ ರೂಮ್ ಬರುತ್ತಲೇ ಇಲ್ಲವಲ್ಲ ಎಂದು ಆತನಿಗೆ ಭಾಸವಾಗುತ್ತಿತ್ತು. ಎದೆಯ ಬಡಿತ ಇನ್ನೂ ಹೆಚ್ಚಿತ್ತು. ನಾನು ಎಂದೂ ಕೆಲಸದಲ್ಲಿ ವ್ಯತ್ಯಯ ಉಂಟು ಮಾಡಿಲ್ಲ, ಯಾವ ಗಿಡಗಳಿಗೂ ಹಾನಿಯುಂಟು ಮಾಡಿಲ್ಲ, ಶ್ರದ್ಧೆಯಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಆದರೂ ಏಕೆ ಬೇಗನೆ ಬರಹೇಳಿದರು?

ಪ್ರಿನ್ಸಿಪಾಲ್ ರೂಮಿನ ಬಾಗಿಲು ಬಡಿದು, ಒಳಬರಬಹುದಾ ಎಂದು ಹದಿನೈದು ವರ್ಷಗಳ ಹಿಂದೆ ಇದ್ದಷ್ಟೇ ವಿಧೇಯತೆಯಿಂದ ಕೇಳಿದ್ದ. ಒಂದೆಡೆ ಶಿಸ್ತಿನ ಸಿಪಾಯಿಯಂತಿದ್ದ ಪ್ರಿನ್ಸಿಪಾಲ್, ಉಡುಪಿನಲ್ಲಿ ಅತ್ಯಂತ ಅಚ್ಚುಕಟ್ಟು, ಮತ್ತೊಂದೆಡೆ ಕೆದರಿದ ಕೂಡಲು, ಹೊಲಸು ಬಟ್ಟೆ, ಮಣ್ಣಿನ ವಾಸನೆ ಮೈತುಂಬ ತುಂಬಿಕೊಂಡಿರುವ ತೋಟದ ಮಾಲಿ.[ಅಪ್ಪಾ, ನನ್ನ ಬದುಕಿಸಿಕೋ ಎಂದು ಆ ಪುಟಾಣಿ ಗೋಗರೆದರೂ...]

ಪ್ರಿನ್ಸಿಪಾಲ್ ಮೇಡಂ ಅದೇ ಗಾಂಭೀರ್ಯತೆಯಿಂದ, "ಇದನ್ನು ಓದು" ಎಂದು ಆತನ ಕೈಗೆ ಒಂದು ಲೇಖನವನ್ನು ಕೈಗಿತ್ತರು. ಆತನ ಕೈ ಗಡಗಡ ನಡುಗಲು ಪ್ರಾರಂಭಿಸಿತು, ಮುಖದಲ್ಲಿ ಬೆವರಿನ ಹನಿಗಳು ಇಳಿಯಲು ಆರಂಭಿಸಿದ್ದವು. ಏಕೆಂದರೆ, ಆತನಿಗೆ ಒಂದೂ ಅಕ್ಷರ ಓದಲು ಬರುತ್ತಿರಲಿಲ್ಲ.

Best letter written by daughter on father on Mother's day

"ನನಗೆ ಇದರಲ್ಲೇನಿದೆ ಎಂದು ತಿಳಿಯುತ್ತಿಲ್ಲ, ನಾನು ಅನಕ್ಷರಸ್ಥ. ನನ್ನಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ. ಕಟ್ಟಕಡೆಯ ಅವಕಾಶ ಕೊಡಿ. ನನ್ನ ಮಗಳಿಗೆ ಒಂದೂ ಪೈಸೆ ತೆಗೆದುಕೊಳ್ಳದಂತೆ ಸಹಾಯ ಮಾಡಿದ್ದೀರಿ. ನನ್ನನ್ನು ಕೆಲಸದಿಂದ ತೆಗೆದರೂ ಪರವಾಗಿಲ್ಲ, ದಯವಿಟ್ಟು ನನ್ನ ಮಗಳನ್ನು ಮಾತ್ರ ಇಲ್ಲಿಂದ ಕಳಿಸಬೇಡಿ" ಎಂದು ಅಳುತ್ತಲೇ ಮಾಲಿ ಅಂಗಲಾಚಲು ಆರಂಭಿಸಿದ. ಆತ ಪ್ರಿನ್ಸಿಪಾಲ್ ಕಾಲಿಗೆರಗುವುದು ಮಾತ್ರ ಬಾಕಿಯಿತ್ತು.

ಅಷ್ಟರಲ್ಲಿ ಪ್ರಿನ್ಸಿಪಾಲರು, "ಅಳಬೇಡ. ಯಾಕೆ ಅಳ್ತಿದ್ದಿ? ನೀನೇನು ತಪ್ಪು ಮಾಡಿಲ್ಲ. ನೀನು ಎಂಥ ವ್ಯಕ್ತಿ ಅಂತ ನನಗೆ ಗೊತ್ತಿಲ್ಲವೆ? ಮಗಳಿಗೆ ಫೀಸ್ ಕೂಡ ತೆಗೆದುಕೊಳ್ಳದೆ ಓದಲು ಅವಕಾಶ ಮಾಡಿಕೊಟ್ಟಿದ್ದೇನೆ. ಏಕೆಂದರೆ, ಆಕೆ ಅಂಥ ಬ್ರೀಲಿಯೆಂಟ್ ಸ್ಟೂಡೆಂಟ್. ತಾಳು, ನಿನ್ನ ಮಗಳೇ ಬರೆದಿರುವ ಈ ಲೇಖನದಲ್ಲಿ ಏನು ಬರೆದಿದೆ ಎಂದು ಶಿಕ್ಷಕರೊಬ್ಬರು ನಿನಗೆ ಓದಿ ತಿಳಿಸುತ್ತಾರೆ" ಎಂದು ಶಿಕ್ಷಕರೊಬ್ಬರನ್ನು ಕರೆಸಿದರು.

ಆ ಲೇಖನ ಹೀಗಿತ್ತು...

ನಾನು ಬಿಹಾರದ ಮೂಲೆಯಲ್ಲಿರುವ ಹಳ್ಳಿಯಲ್ಲಿವಳು. ಅಲ್ಲಿ ರಸ್ತೆಗಳಿಲ್ಲ, ವೈದ್ಯಕೀಯ ಸವಲತ್ತುಗಳಿಲ್ಲ. ಇನ್ನು ಶಾಲೆಯಲ್ಲಿ ಓದುವುದನ್ನು ಕನಸಿನಲ್ಲಿಯೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮಗುವನ್ನು ಹೆತ್ತುತ್ತಲೇ ಅನೇಕ ತಾಯಂದಿರು ಇಲ್ಲಿ ಜೀವ ತೆತ್ತಿದ್ದಾರೆ. ಅಂಥ ನತದೃಷ್ಟ ತಾಯಂದಿರಲ್ಲಿ ನನ್ನ ತಾಯಿಯೂ ಒಬ್ಬಳು.

ದುರಾದೃಷ್ಟದ ಸಂಗತಿಯೆಂದರೆ, ನಾನು ಹುಟ್ಟುತ್ತಲೇ ಒಂದು ಕ್ಷಣವೂ ಕೂಡ ಆಕೆಗೆ ನನ್ನನ್ನು ಎತ್ತಿ ಲಾಲಿಸಲು ಮುದ್ದಿಸಲು ಸಾಧ್ಯವಾಗಲಿಲ್ಲ. ನನ್ನನ್ನು ಮೊಟ್ಟಮೊದಲು ಕೈಗೆತ್ತಿಕೊಂಡಿದ್ದೇ ನನ್ನ ತಂದೆ, ಬಹುಶಃ ಅವರೊಬ್ಬರೇ.

ಏಕೆಂದರೆ, ನನ್ನ ಹುಟ್ಟು ಯಾರಿಗೂ ಬೇಕಾಗಿರಲಿಲ್ಲ. ನಾನು ಹೆಣ್ಣುಮಗಳಾಗಿ ಹುಟ್ಟಿದ್ದೆ. ಅಲ್ಲದೆ, ನನ್ನ ಹುಟ್ಟೇ ನನ್ನ ತಾಯಿಯ ಸಾವಿಗೆ ಕಾರಣವಾಯಿತು ಎಂದು ಹಲವರು ಆಡಿಕೊಳ್ಳತೊಡಗಿದ್ದರು. ನನ್ನ ಅಪ್ಪ ಬೇರೆ ಮದುವೆಯಾಗಬೇಕು ಎಂದು ಅಜ್ಜ ಅಜ್ಜಿ ಬಂಧು ಬಳಗ ಒಂದೇ ಸವನೆ ಗಂಟುಬಿದ್ದಿದ್ದರು. ಅವರಿಗೆ ಗಂಡು ಮಗು ಬೇಕಾಗಿತ್ತು.

/news/bangalore/pre-monsoon-rain-continue-till-may-end-ksndmc-118250.html

ತಾಯಿಯಿಲ್ಲದ ನನ್ನನ್ನು ಆತ್ಮೀಯತೆ, ಪ್ರೀತಿಯಿಂದ ಎತ್ತಿಕೊಂಡಿದ್ದ ಅಪ್ಪನದ್ದು ಒಂದೇ ಮಾತು 'ಮದುವೆಯಾಗಲ್ಲ'! ಉಳಿದವರೆಲ್ಲ ಏನೇನೋ ಕಾರಣ ಹೇಳಿ ಎಷ್ಟೇ ಅಂಗಲಾಚಿದರೂ ಅಪ್ಪ ಒಪ್ಪಲಿಲ್ಲ. "ನೀನು ಹೀಗೆಯೇ ಹಠಹಿಡಿದರೆ ನಿನಗೆ ಕವಡೆ ಕಾಸು ಕೂಡ ನೀಡುವುದಿಲ್ಲ, ಈ ಮನೆಯಲ್ಲಿ ನಿನಗೆ ಸ್ಥಳವಿಲ್ಲ" ಎಂದು ಅಜ್ಜ ಅಬ್ಬರಿಸುತ್ತಲೇ ಅಪ್ಪ ನನ್ನನ್ನೆತ್ತಿಕೊಂಡು ಮನೆಯಿಂದ ಹೊರಗೆ ಕಾಲಿಟ್ಟಿದ್ದ.

ಕೈಗೆತ್ತಿಕೊಂಡ ಜೀವಕ್ಕಾಗಿ ಅಪ್ಪ ಬೇರೆಯದನ್ನು ಚಿಂತಿಸಲೇ ಇಲ್ಲ. ಲಕ್ಷಗಟ್ಟಲೆ ಮೌಲ್ಯದ ಆಸ್ತಿ, ಅಂತಸ್ತು, ಮನೆ, ಅಕ್ಕರೆಯ ಅಪ್ಪಅಮ್ಮ, ಬಂಧು ಬಳಗವನ್ನೆಲ್ಲ ಧಿಕ್ಕರಿಸಿ ಹೊರನಡೆದಿದ್ದ. ಕೊನೆಗೆ ತಾನು ಅತಿಯಾಗಿ ಪ್ರೀತಿಸುತ್ತಿದ್ದ ದನಕರುಗಳನ್ನೂ ಬಿಟ್ಟು ಮನೆಯಿಂದ ಹೊರನಡೆದಿದ್ದ, ಕೇವಲ ನನಗಾಗಿ!

ಕೈಯಲ್ಲಿ ಒಂದೇ ಒಂದು ಕಾಸೂ ಇಲ್ಲದೆ ಈ ದೊಡ್ಡ ಊರಿಗೆ ಬಂದಿದ್ದ ಅಪ್ಪ. ಆತನ ಕೈಯಲ್ಲಿದ್ದುದು ಬ್ರಹ್ಮಾಂಡದಷ್ಟು ಪ್ರೀತಿ. ಆ ಪ್ರೀತಿಯನ್ನು ನನಗೆ ಇಷ್ಟಿಷ್ಟೇ ಇಷ್ಟಿಷ್ಟು ಉಣಿಸಿ ನನ್ನನ್ನು ಬೆಳೆಸಿದ, ನನ್ನನ್ನು ವಿದ್ಯಾವಂತಳನ್ನಾಗಿ ಮಾಡಿದ. ಅಪ್ಪ ಕಷ್ಟಪಟ್ಟಿದ್ದನ್ನು ಬಹುಶಃ ಪದಗಳಲ್ಲಿ ಹೇಳುವುದು ಅಸಾಧ್ಯ.

ನನ್ನ ತಟ್ಟೆಯಲ್ಲಿದ್ದ ಎಷ್ಟೋ ತಿನಿಸುಗಳು ಅಪ್ಪನಿಗೆ ಸೇರುತ್ತಿರಲಿಲ್ಲ. ಯಾಕೆ ಅವುಗಳ ಬಗ್ಗೆ ಅಪ್ಪನಿಗೆ ಅಷ್ಟು ತಾತ್ಸಾರವಿತ್ತು, ಯಾಕೆ ಅವುಗಳನ್ನು ಇಷ್ಟಪಡುತ್ತಿರಲಿಲ್ಲ ಎಂದು ನನಗೀಗ ಅರಿವಾಗುತ್ತಿದೆ. ಆ ಕಟ್ಟಕಡೆಯ ತಿನಿಸು ನನ್ನ ಹೊಟ್ಟೆ ಸೇರಿದರೇನೇ ಆತನ ಹೊಟ್ಟೆ ತುಂಬುತ್ತಿತ್ತು. ಅಯ್ಯೋ, ಅಪ್ಪನಿಗೆ ಇಷ್ಟವಿಲ್ಲ ಎಂದು ನಾನು ಗಬಗಬ ತಿಂದುಬಿಡುತ್ತಿದ್ದೆ. ಅಪ್ಪ ನನ್ನನ್ನೇ ನೋಡುತ್ತ ನಿಂತುಬಿಡುತ್ತಿದ್ದ. ಅಪ್ಪ ಹಾಗೇಕೆ ಮಾಡುತ್ತಿದ್ದ ಅಂತ ನನಗೀಗ ಅರ್ಥವಾಗುತ್ತಿದೆ.

Best letter written by daughter on father on Mother's day

ಅಜ್ಜಅಜ್ಜ ಬಂಧುಬಳಗದಿಂದ ತಿರಸ್ಕೃತನಾಗಿದ್ದ ಅಪ್ಪನಿಗೆ ಈ ಶಾಲೆ ಎಲ್ಲ ರೀತಿಯ ಗೌರವಗಳನ್ನು ನೀಡಿದೆ, ವಾಸಿಸಲು ಸೂರು ನೀಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅವನ ಮಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ನಿಸ್ವಾರ್ಥ ಪ್ರೀತಿ, ಆರೈಕೆ, ಕಾಳಜಿ, ತಾಳ್ಮೆ, ತ್ಯಾಗ ಒಬ್ಬ ತಾಯಿಯ ಸಂಕೇತವಾಗಿದ್ದರೆ, ಆ ತಾಯಿ ಮತ್ತಾರೂ ಅಲ್ಲ ನನ್ನ ಪ್ರೀತಿಯ ಅಪ್ಪ. ನನ್ನ ತಂದೆಯೇ ಈ ಜಗತ್ತಿನ ಅತ್ಯುತ್ತಮ ತಾಯಿ!

ಈ ಅಮ್ಮನ ದಿನ ನನ್ನ ತಂದೆಯನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಶಾಲೆಯಲ್ಲಿ ಅತ್ಯಂತ ಶಿಸ್ತಿನಿಂದ, ದಕ್ಷತೆಯಿಂದ ಕೆಲಸ ಮಾಡುತ್ತಿರುವ ಮಾಲಿಯೇ ನನ್ನ ಅಪ್ಪ ಎಂದು ಗರ್ವದಿಂದ ಹೇಳಬಯಸುತ್ತೇನೆ. ಇದೇನು ಅಮ್ಮನ ಬಗ್ಗೆ ಬರಿ ಎಂದರೆ ಅಪ್ಪನ ಬಗ್ಗೆ ಬರೆದಿದ್ದಾಳೆ ಎಂದು ಈ ಲೇಖನವನ್ನು ಓದಿ ನನ್ನ ಶಿಕ್ಷಕರು ಇದನ್ನು ತಿರಸ್ಕರಿಸಬದುದು. ಪರವಾಗಿಲ್ಲ. ಆದರೆ, ಈರೀತಿಯಾದರೂ ನಾನು ನನ್ನ ಅಪ್ಪನಿಗೆ ಧನ್ಯವಾದ ಹೇಳಬಯಸುತ್ತೇನೆ. ಧನ್ಯವಾದಗಳು.

***
ಶಿಕ್ಷಕರೊಬ್ಬರು ಲೇಖನವನ್ನು ಓದಿ ಮುಗಿಸುತ್ತಿದ್ದಂತೆ ಅಲ್ಲಿ ಕಿವಿಗಡಚಿಕ್ಕುವಂತೆ ಚಪ್ಪಾಳೆ ಕೇಳಿಬರಲಿಲ್ಲ. ಅಲ್ಲಿ ವಿಚಿತ್ರ, ವಿಶಿಷ್ಟವಾದ ಮೌನ ಆವರಿಸಿಕೊಂಡಿತ್ತು. ಆ ಹುಡುಗಿಯ ಅಪ್ಪನ ಕೊರಳುಗಳು ಮಾತ್ರವಲ್ಲ, ಅದನ್ನು ಓದಿದ ಶಿಕ್ಷಕಿ, ಪ್ರಿನ್ಸಿಪಾಲ್ ಕೊರಳುಗಳು ಕೂಡ ಉಬ್ಬಿದ್ದವು. ಮಾಲಿ ತೊಯ್ದು ತೊಪ್ಪೆಯಾಗಿಬಿಟ್ಟಿದ್ದ, ಬೆವರಿನಿಂದ ಅಲ್ಲ ತನ್ನ ಮಗಳು ಸುರಿಸಿದ ಪ್ರೀತಿಯಿಂದ.

ಮೊಣಕಾಲೂರಿ ಧಪ್ಪನೆ ಕೆಳಗೆ ಕುಳಿತ ಮಾಲಿಗೆ ಪ್ರಿನ್ಸಿಪಾಲ್ ಮೇಡಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು, ಆತನಿಗೆ ಕುಡಿಯಲು ನೀರು ಕೊಟ್ಟರು. ಏನನ್ನೋ ಹೇಳಲು ಹೊರಟರೂ ಮಾತು ಕೂಡಲೆ ಹೊರಡಲಿಲ್ಲ. ಕೊನೆಗೆ ಸುಧಾರಿಸಿಕೊಂಡು....

"ನಿನ್ನ ಮಗಳು ಬರೆದ ಈ ಲೇಖನ ನಾವು ತಿರಸ್ಕರಿಸಿಲ್ಲ. ಇದು ಶಾಲೆಯ ಇತಿಹಾಸದಲ್ಲಿಯೇ ಅಮ್ಮನ ದಿನಕ್ಕಾಗಿ ಬರೆದಂತಹ ಅತ್ಯದ್ಭುತ ಲೇಖನಗಳಲ್ಲಿ ಒಂದು. ನಿನ್ನಂಥ ಅಪ್ಪನನ್ನು ಪಡೆದಿದ್ದಕ್ಕೆ ಆಕೆ ನಿಜಕ್ಕೂ ಅದೃಷ್ಟವಂತಳು. ಇಂಥ ವಿದ್ಯಾರ್ಥಿಯನ್ನು ಪಡೆದ ಈ ಶಾಲೆಯೇ ಧನ್ಯ."

ನೀನು ಒಬ್ಬ ಮಾಲಿಯಾಗಿ ಎಷ್ಟೊಂದು ಹೂವುಗಳನ್ನು ಶಾಲೆಯಲ್ಲಿ ಅರಳಿಸಿದ್ದಿಯಾ. ಜೊತೆಗೆ ನಿನ್ನ ಮನೆಯಲ್ಲಿಯೇ ಬೆಲೆ ಕಟ್ಟಲಾಗದಂತಹ ಹೂವೊಂದನ್ನೂ ಅರಳಿಸಿದ್ದಿಯಾ. ನಾಳೆ ಅಮ್ಮನ ದಿನಕ್ಕಾಗಿ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಅದಕ್ಕೆ ನೀನೇ ಚೀಫ್ ಗೆಸ್ಟ್" ಎಂದು ಹೇಳಿ ಸೆರಗಿನಿಂದ ಕಣ್ಣೀರು ಒರೆಸಿಕೊಂಡು ಅವರು ಹೊರನಡೆದರು.

ಮಾಲಿಗೆ ಹೇಳುವುದಕ್ಕೇನೂ ಉಳಿದಿರಲಿಲ್ಲ. ಕುರ್ಚಿಯಲ್ಲಿ ಕುಳಿತ ಅಪ್ಪನ ಕಣ್ಣಲ್ಲಿ ಧಾರಾಕಾರ ನೀರು, ಹೊರಗಡೆ ಕಿಟಕಿಯಿಂದ ಇದನ್ನೆಲ್ಲ ನೋಡುತ್ತಿದ್ದ ಮಗಳ ಕಣ್ಣಲ್ಲೂ!

(ಈ ಮನಮುಟ್ಟುವಂಥ ಲೇಖನ ಬಂದಿದ್ದು ವಾಟ್ಸಾಪ್ ನಲ್ಲಿ. ನಿಮಗೂ ಇಷ್ಟವಾಗುತ್ತದೆ ಎಂಬ ಕಾರಣದಿಂದ ಇಲ್ಲಿ ನೀಡಿದ್ದೇವೆ.)

English summary
Best letter written by daughter on father for Mother's day. Kannada Short story going viral on whatsapp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X