ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಟಿಎಂ ಹುಡುಗಿ ಮತ್ತು ಆ ಎಚ್ಚರಿಕೆಯ ಗಂಟೆ!

By ಪ್ರಸಾದ ನಾಯಿಕ
|
Google Oneindia Kannada News

The unknown girl and the warning bell
ಜೂನ್ ತಿಂಗಳ 22ನೇ ತಾರೀಕು ಶನಿವಾರ ಸಂಜೆ ಸರಿಯಾಗಿ 8 ಗಂಟೆಗೆ ಸೌತ್ ಎಂಡ್ ಸರ್ಕಲ್ ಬಳಿಯಲ್ಲಿ ನಡೆದ ಆ ಘಟನೆ ಇಂಥದೊಂದು ತಿರುವನ್ನು ಪಡೆಯುತ್ತದೆ ಎಂದು ನಾನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ನಾನು ತೋರಿದ ಮಾನವೀಯತೆ ಆ ಕ್ಷಣದಲ್ಲಿ ಸತ್ತುಹೋಗಿದ್ದರೇ ಎಷ್ಟೋ ಚೆನ್ನಾಗಿತ್ತು ಎಂದು ಈಗ ಅನಿಸುತಿದೆ. ಆದರೆ, ಮಾಡುವುದೇನು?!

ಮಳೆ ಜಿಟಿಜಿಟಿ ಜಿನುಗುತ್ತಿತ್ತು, ಎಂಟು ಗಂಟೆಗೆ ಇನ್ನೂ ಐದು ನಿಮಿಷವಿತ್ತು. ಜ್ವರದಿಂದ ಬಳಲುತ್ತಿದ್ದ ನನಗೆ ಮಾತ್ರೆ ತೆಗೆದುಕೊಳ್ಳಲು ಹಣ ಬೇಕಾಗಿದ್ದರಿಂದ ಎಸ್‌ಬಿಎಂ ಎಟಿಎಂ ಹೊಕ್ಕಿದ್ದೆ. ಡೆಬಿಟ್ ಕಾರ್ಡ್ ಹಾಕಿ ಪಾಸ್ ವರ್ಡ್ ಒತ್ತುತ್ತಿದ್ದಾಗ, ಈ ಕಳ್ಳ ನನ್ನ ಮಕ್ಕಳು ಅದ್ಹೇಗೆ ಎಂಟಿಎಂನ್ನೇ ಎತ್ತಿಕೊಂಡು ಹೋಗುತ್ತಾರೆ ಎಂದು ತಲೆಯಲ್ಲಿ ಕೊರೆಯುತ್ತಿತ್ತು.

ಹಣವನ್ನು ಹೊರಹಾಕಲು ಮಷೀನು ಟರ್ರನೆ ಸದ್ದು ಮಾಡುತ್ತಿದ್ದ ಘಳಿಗೆಯಲ್ಲಿ ಬಾಗಿಲಿನ ಆಚೆ ನನ್ನ ನೋಟ ಹರಿಯಿತು. ಹೊರಗೊಬ್ಬಳು ಹದಿನೆಂಟರ ಸುಂದರ ತರುಣಿ ವಿಚಿತ್ರವಾಗಿ ಆಡುತ್ತಿದ್ದಳು. ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಮುಖ ಒಂಥರಾ ಗಡಿಬಿಡಿಯಲ್ಲಿದ್ದಂತೆ ತೋರುತ್ತಿತ್ತು. ಹೆಚ್ಚು ತಲೆಕೆಡಿಸಿಕೊಳ್ಳದೆ ಹೊರಬಂದಾಗ, ಆಕೆ ಒಳಹೋಗದೆ ನನ್ನನ್ನೊಮ್ಮೆ ನೋಡಿ, ತಾನುಟ್ಟಿದ್ದ ಕಾಟನ್ ಸೀರೆಯ ಚುಂಗನ್ನು ಹಿಡಿದು ಗಿರಗಿರನೆ ತಿರುಗಿಸುತ್ತ ಏನೋ ಯೋಚಿಸುತ್ತಿದ್ದಳು.

ಸುಶಿಕ್ಷಿತಳಂತೆ ಕಾಣಿಸುತ್ತಿದ್ದ ಆಕೆ ನನ್ನಿಂದ ಏನೋ ಬಯಸುತ್ತಿದ್ದಾಳೆ ಎಂದು ನನಗೆ ಅನಿಸಿತು. "ಎನಿ ಪ್ರಾಬ್ಲಂ?" ಎಂದು ಆಕೆಯನ್ನು ಕೇಳಿದೆ. "ನೋ ಥ್ಯಾಂಕ್ಸ್" ಎಂದು ಹೇಳಬಹುದು ಎಂದುಕೊಂಡಿದ್ದೆ, ಆದರೆ, ಹಾಗೆ ಅನ್ನದೆ, ಹಿಂಜರಿಯುತ್ತಲೆ ತನ್ನ ಕಥೆಯನ್ನು ಹೇಳಲು ಪ್ರಾರಂಭಿಸಿದಳು.

"ನನ್ನ ತಂದೆಗಾಗಿ ಮಾತ್ರೆ ತೆಗೆದುಕೊಳ್ಳಬೇಕೆಂದು ಎಂಟಿಎಂನಿಂದ 500 ರು. ಎಳೆದುಕೊಂಡು ಹೋದರೆ, ಅದು ನಕಲಿ ಎಂದು ಮೆಡಿಕಲ್ ಶಾಪಿನವ ಶಾಕ್ ನೀಡಿದ್ದ. ನಾನು ಶಾಪಿನವನಿಗೆ ಶಾಪ ಹಾಕುತ್ತ ಬ್ಯಾಂಕ್ ರಿಸೀಟನ್ನು ನೋಡಿದರೆ, ಬ್ಯಾಂಕಲ್ಲಿ ನಿಲ್ ಬ್ಯಾಲನ್ಸ್. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಸರ್. ತಂದೆಗೆ ತುಂಬಾ ಹುಷಾರಿಲ್ಲ, ಔಷಧಿ ತೆಗೆದುಕೊಂಡು ಹೋಗಲೇಬೇಕು" ಎಂದು ಅಳುಬರುವ ರೀತಿಯಲ್ಲಿ ಅಲವತ್ತುಕೊಂಡಳು.

ಆಕೆ ತನ್ನ ಮಾತು ಮುಗಿಸುತ್ತಿದ್ದ ಘಳಿಗೆ ಪಕ್ಕದಲ್ಲೇ ಇದ್ದ ಅಂಬರ ಚುಂಬನ ಬೃಹತ್ ಗಡಿಯಾರ, ಬಾಂಗ್ ಎಂದು ಒಮ್ಮೆ ಸದ್ದು ಮಾಡಿ, ಢಣ್ ಢಣ್ ಎಂದು ಹೊಡೆಯಲು ಪ್ರಾರಂಭಿಸಿತು. ಎಂಟನೇ ಬಾರಿ ಹೊಡೆದು ಮುಗಿಸುವ ಹೊತ್ತಿಗೆ ನನ್ನ ಯೋಚನಾ ಲಹರಿ ನೂರಾಎಂಟು ಬಾರಿ ಚಿಂತಿಸಿತ್ತು. ಒಂದು ದೃಢ ನಿರ್ಧಾರಕ್ಕೆ ಬಂದಿದ್ದೆ.

"ಡೋಂಟ್ ವರಿ ಯಂಗ್ ಲೇಡಿ. ಆ ನೋಟು ನನಗೆ ಕೊಡಿ, ಅದಕ್ಕೆ ಚೇಂಜನ್ನು ನೀಡುತ್ತೇನೆ. ಐದು ನೂರರ ನೋಟು ಸಾಕು ತಾನೆ? ಬೇಗನೆ ಮಾತ್ರೆ ತಗೊಂಡು ಮನೆಗೆ ಹೋಗಿ. ಆಲ್ ದಿ ಬೆಸ್ಟ್" ಎಂದು ಹೇಳಿ ಆಕೆಯ ಕೈಗೆ ನೂರರ ಐದು ನೋಟು ಇಟ್ಟಿದ್ದೆ. ಲಗುಬಗನೆ ನನ್ನ ಕೈಯಿಂದ ನೋಟುಗಳನ್ನು ಇಸಿದುಕೊಂಡು, ಥ್ಯಾಂಕ್ಸ್ ಹೇಳಿ, ಚಪ್ಪಲಿ ಕಾಣುವಂತೆ ಸೀರೆಯ ಸೆರಗನ್ನು ಎತ್ತಿಕೊಂಡು ಕ್ಷಣಾರ್ಧದಲ್ಲಿ ರಸ್ತೆ ದಾಟಿದ್ದಳು. ಆಕಾಶಕ್ಕೆ ದೊಡ್ಡ ತೂತು ಬಿದ್ದಿತ್ತು.

***
ನಾನು ಅದೆಂಥ ತಪ್ಪು ಮಾಡಿದೆನೆಂದು ಈಗ ನನಗೆ ಅನಿಸುತಿದೆ. ಕನಿಷ್ಠಪಕ್ಷ ಎಂಟು ಬಾರಿ ಅಂಬರ ಚುಂಬನ ಗಂಟೆ ಢಂಗಿಣಿಸಿದಾಗಲಾದರೂ ನಾನು ಆ ಎಚ್ಚರಿಕೆಯ ಗಂಟೆಗೆ ಕಿವಿಗೊಡಬೇಕಿತ್ತು. ಆಕೆ ನನಗೆ ಹೇಳಿದ್ದು ಹಸಿ ಸುಳ್ಳು ಎಂದು ಮರುದಿನ ಪೇಪರ್ ಓದಿದಾಗ ನನಗೆ ತಿಳಿಯಿತು. ಆಕೆಯ ಬಳಿ ನಕಲಿ ನೋಟು ಇದ್ದಿದ್ದೇನೋ ನಿಜ, ನಂತರ ಔಷಧಿ ಅಂಗಡಿಗೆ ಹೋಗಿದ್ದೂ ನಿಜ, ಆದರೆ ಔಷಧಿ ಕೊಳ್ಳಲು ಅಲ್ಲ!

ಆಗಿದ್ದೇನೆಂದರೆ, ನನ್ನಿಂದ ನೋಟು ಪಡೆದ ಆಕೆ ಆಟೋ ಹತ್ತಿ ನೇರವಾಗಿ ಡಾಲರ್ಸ್ ಕಾಲೋನಿಯಲ್ಲಿನ ಲಾಡ್ಜೊಂದನ್ನು ರಾತ್ರಿ ಹೊಕ್ಕಿದ್ದಾಳೆ. ಜೂ. 23ರ ಬೆಳಿಗ್ಗೆ ಆಕೆಯ ಶವ ರೂಮಿನ ಕೋಣೆಯಲ್ಲಿ ದೊರೆತಿದೆ. ಆಕೆಯ ಮೈಮೇಲಿನ ಬಟ್ಟೆ ಅಸ್ತವ್ಯಸ್ತವಾಗಿತ್ತು, ಕೊರಳಿಗೆ ಆಕೆಯುಟ್ಟಿದ್ದ ಸೀರೆ ಸೆರಗು ಬಿಗಿದುಕೊಂಡಿತ್ತು. ಆಕೆಯ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಆಕೆಯ ಆಪ್ತ ಸ್ನೇಹಿತರ ಪ್ರಕಾರ, ಆಕೆ ಸುಶಿಕ್ಷಿತಳಾಗಿದ್ದರೂ ಮನೆಯಲ್ಲಿ ಹಣದ ಅಡಚಣೆಯಿದ್ದರಿಂದ ವೇಗವಾಗಿ ಹಣ ಗಳಿಸಬೇಕೆಂದು ಕೆಲ ಸ್ನೇಹಿತರ ಸಂಗ ಮಾಡಿದ್ದನ್ನು ದೃಢಪಡಿಸಿದ್ದಾರೆ. ಅಂದ ಹಾಗೆ, ಹೋಟೆಲ್ ರೂಮಿನಲ್ಲಿ ಆಕೆಯ ಬಳಿಯಿದ್ದ ಪರ್ಸಿನಲ್ಲಿ ಸಿಕ್ಕಿದ್ದು ತಂದೆಗಾಗಿ ಕೊಳ್ಳಬೇಕಿದ್ದ ಮಾತ್ರೆಗಳಲ್ಲ, ಕೆಎಸ್ ಕಾಂಡೋಮ್ ಪ್ಯಾಕೆಟ್!

English summary
Kannada short story : When I was drawing money from ATM, a girl was waiting outside not with an intention of withdrawing the amount. When I extended my helping hand the clock tower nearby rang 8 times, with a warning. I should have heeded to the warning bell. Then what happened?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X