ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀ ರಾಘವ್... ಒಬ್ಬಂಟಿ ಅಲ್ಲವೇ ಅಲ್ಲ!

By ರಾಜೇಂದ್ರ ಎಚ್ಆರ್
|
Google Oneindia Kannada News

Nee Raghav - short story by Rajendra HR
ಆ ಸಂಜೆ, ನಂದಿಬೆಟ್ಟದ ಒಂದು ಮಗ್ಗುಲಲ್ಲಿ ತನ್ನ ಕೆಲಸ ಮುಗಿಸಿ ಹೊರಡುತ್ತಿದ್ದ ಸೂರ್ಯನನ್ನು ಗಮನಿಸುತ್ತಿದ್ದವನಿಗೆ ಅವಳು ಕಾಣಿಸಿದಳು. ರವಿಯನ್ನು ಮತ್ತೆ ದಿಟ್ಟಿಸಿ ನೋಡಿ ಅವಳ ಕಡೆಗೆ ತಿರುಗಿದೆ. ನಾನು ಮತ್ತೆ ಕನಸು ಕಾಣುತ್ತಿಲ್ಲವೆಂಬ ಅರಿವು ಸ್ಪಷ್ಟವಾಯಿತು. ಅವಳ ಬಗ್ಗೆ ಕೊನೆಯ ಬಾರಿ ಯೋಚಿಸಿದ್ದು 6 ತಿಂಗಳ ಹಿಂದೆ, ವಿಕ್ಟರಿ ಪಬ್ ನಲ್ಲಿ ಒಬ್ಬನೇ ಕುಡಿಯುತ್ತ ಕುಳಿತಾಗ. ಹೆಂಡತಿಯನ್ನು ಶಾಪಿಂಗ್ ಕರೆದುಕೊಂಡು ಹೋಗುವ ಭರದಲ್ಲಿ, ಭೇಟಿಯಾಗುವ ಮಾತನ್ನು ಮರೆತ ಗೆಳೆಯನ ಬೈದುಕೊಂಡ ನಂತರ, ಅದೇಕೋ ಕಣ್ತುಂಬಿ ಅವಳ ಬಿಂಬ ಮನ ಕದಡಿತ್ತು.

ಆ ದಿನಕ್ಕೆ ಸರಿ ಸುಮಾರು 12 ವರ್ಷಗಳ ಹಿಂದೆ... ನನ್ನ ಪ್ರಬುದ್ಧ ಯೌವನದ ದಿನಗಳಲ್ಲಿ, ನಾನು ಎಲ್ಲರಂತೆ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಕಾಲದಲ್ಲಿ, ನನ್ನ ಕನಸುಗಳನ್ನೆಲ್ಲಾ ಕದ್ದು ನನ್ನ ವಿಸ್ಮಯಕ್ಕೆ ಕಾರಣವಾದವಳವಳು.

ಅವಳು ವಿಸ್ಮಯ.

ನಾನವಳ ನೋಡಿದ ಮೊದಲ ದಿನವೇ ಕಾರಣವಿಲ್ಲದೆ ಇಷ್ಟವಾಗಿದ್ದು ಅವಳ ಸಣ್ಣ ನಗು. ಆ ನಗುವಿಗೆ ಅದ್ಯಾವ ದೊಡ್ಡ ಕಾರಣವೂ ಇಲ್ಲ. ನಿದ್ದೆ ಮಾಡುವಾಗಲು ಆ ನಗು ಅವಳ ಮುಖದ ಮೇಲೆ ಕುಣಿಯುತ್ತಿತ್ತು. ಕಾಡಿಗೆಯೇ ಕಾಣದಿದ್ದರೂ ಅವಳ ಕಣ್ಣುಗಳು ಸ್ಪಷ್ಟವಾದ ಸಂದೇಶ ಸಾರುವಂತಹ ಮಿನುಗುವ ನಕ್ಷತ್ರಗಳು. ಆ ಕಣ್ಣುಗಳಲ್ಲೇ ನನ್ನ ಜೀವನದ ದಿಕ್ಕು ದೆಸೆಗಳನ್ನು ಕಂಡುಕೊಂಡಿದ್ದೆ.

ಹಳೆಯ ನೆನಪುಗಳೆನೋ ಅದ್ಬುತ. ಆದರೆ ಇನ್ನೂ ಇಲ್ಲೇ ಹೀಗೆ ಕುಳಿತರೆ ನನ್ನ ಗುರುತಿಸಬಹುದೆಂಬ ಭಯದಲ್ಲಿ ಅವಳ ವಿರುದ್ಧ ದಿಕ್ಕಿನಲ್ಲಿ ಹೊರಡಲನುವಾದೆ.

"ಹೇಯ್ ರಾಘವ್..." ಅವಳು ನನ್ನನು ಗಮನಿಸಿದಳು. ನನಗೆ ಏನೂ ಕೇಳಿಸದಂತೆ ಅಲ್ಲಿಂದೆದ್ದು ಹೊರಟೆ.

"ಹೇಯ್ ರಾಘವ್", ನನ್ನ ಹಿಂದೆಯೇ ಬಂದು ಕೈ ಹಿಡಿದಳು. ತಿರುಗಿ ಅವಳೆಡೆಗೆ, "ಹಾಯ್.. ನಿಮಗೆ ನನ್ನ ಪರಿಚಯ ಇದೆಯಾ?"

"ರಾಘವ್, ನಾನು ವಿಸ್ಮಯ."

ಒಹ್! ಏನೋ ಹಳೆಯದೆಲ್ಲಾ ನೆನಪಿಸಿ ಕೊಂಡವನಂತೆ ನಕ್ಕು.. "ವಿಸ್ಮಯ...!" ಕಳೆದುಕೊಂಡ ಯೌವನ ಮತ್ತೆ ಸಿಕ್ಕ ಮುದುಕನಂತೆ ನಟಿಸುತ್ತಾ... "ಹೇಗಿದ್ದೀಯ?"

"ಸೂಪರ್.."

ಅವಳ ಜೊತೆಗಿದ್ದ ಹುಡುಗನನ್ನು ಗಮನಿಸುತ್ತಾ.. "ನಿನ್ನ ಮಗನ? ಏನ್ ಹೆಸರು?"

ಅವಳು ಉತ್ತರಿಸಲೇ ಆಗದ ಪ್ರಶ್ನೆ ಎಂಬಂತೆ ನನ್ನ ದಿಟ್ಟಿಸಿದಳು. ಅವನು "ಮೈ ನೇಮ್ ಇಸ್ ರಘು ಅಂಕಲ್" ಎಂದ. ರಘು..! ನನ್ನನ್ನೇ ನಿರಾಕರಿಸಿದವಳಿಗೆ ಕೆಲಸಕ್ಕೆ ಬಾರದ ನನ್ನ ಹೆಸರ ಮೇಲೆ ಮೋಹ.

"ಹೌ ಆರ್ ಯು?"

"ನಾನು ಅದ್ಬುತ. ಮದ್ವೆಯಾಗಿ 3 ಮಕ್ಕಳು. ಮನೇಲಿ ಜಾಸ್ತಿ ಕೆಲ್ಸ ಇಲ್ಲ ಅದಕ್ಕೆ...."

"ಹೇಯ್ ತಮಾಷೆ ಮಾಡ್ತಿದ್ದಿಯಾ?"

"ವರ್ಷ 38 ಆಯ್ತು.. ಸುಳ್ಳು ಹೇಳಿ ಏನ್ ಮಾಡ್ಲಿ?"

ಅವಳು ಸುಮ್ಮನೆ ಅತಿ ಅನ್ನಿಸುವಷ್ಟು ಸಂತೋಷಿಸುತ್ತಾ, "ಗ್ರೇಟ್ ..ಎಲ್ಲಿ ಇರೋದು ನೀನು? ನಾವೇಕೆ ಭೇಟಿ ಮಾಡಬಾರದು?" ಆಹಾ! ಹುಡುಗಿಯರ ಹೃದಯಕ್ಕೆ ಅದೆಷ್ಟು ಶಕ್ತಿ..! ನೀನಿಲ್ಲದೆ ನನ್ನ ಜೀವನವನ್ನು ಉಹಿಸಿಕೊಳ್ಳಲೇ ಸಾಧ್ಯವಿಲ್ಲ ಎಂದು ನನ್ನೆದೆಯ ಮೇಲೆ ಒರಗಿ ಕಣ್ಣೀರಿಕ್ಕವಳು, ಹಲವು ವರ್ಷಗಳ ನಂತರ ಫ್ಯಾಮಿಲಿಯ reunion ಬಗ್ಗೆ ಯೋಚಿಸುತ್ತಿದ್ದಾಳೆ!

"ರಾಘವ್, ಇವರು ನನ್ನ ಹಸ್ಬೆಂಡ್" ಕೋಲು ಮುಖದವನೊಬ್ಬ ಅವಳ ಜೊತೆ ಬಂದು ನಿಂತಿದ್ದ. "ಇವರು ರಾಘವ್, ನನ್ನ ಹಳೆಯ ಗೆಳೆಯ" ಅವಳು ಮುಂದುವರಿದು ನನ್ನ ಪರಿಚಯಿಸಿದಳು. ಅವಳು ನನಗೆ ಇದಕ್ಕಿಂತಲೂ ಒಳ್ಳೆಯ ರೀತಿಯಲ್ಲಿ ಪರಿಚಯಿಸಲು ಸಾಧ್ಯವಿಲ್ಲ. ಆದರೆ ಈ ಸುಂದರ ಸುಳ್ಳು ಅವಳ ನಗುವನ್ನು ನುಂಗಿತ್ತು. ಅದನ್ನು ಗಮನಿಸಿದ ನನ್ನ ಕಣ್ಣುಗಳು ಸುಮ್ಮನೆ ವ್ಯಂಗ್ಯವಾದ ನಗೆ ನಕ್ಕಿದ್ದವು.

"ನೈಸ್ ಟು ಮೀಟ್ ಯು...ಏನೂ ಮಾಡ್ಕೊಂಡಿದ್ದಿರಾ?" ಅವಳ ಪಕ್ಕದ ಆಕೃತಿ ಪ್ರಶ್ನಿಸಿತು.

"ಫೋಟೋಗ್ರಫಿ."

"ಅಲ್ಲಾ ಬದುಕೋಕೆ ಏನೂ ಮಾಡ್ಕೊಂಡಿದ್ದಿರಾ?" ಮರು ಪ್ರಶ್ನೆ..

"ಬದುಕೋಕೆ ಆಕ್ಸಿಜನ್-ಸೂರ್ಯನ ಬೆಳಕು ಪುಕ್ಕಟೆ ಅಲ್ವ..."

ನನ್ನ ಜೋಕಿಗೆ ಅವನು ನಗಲಿಲ್ಲ.. ಅವಳೂ ನಗಲಿಲ್ಲ.. ನಾನು ಮುಂದುವರಿದು, "ಸಾರೀ..... ನಾನು ಯಾವ ಕಂಪನಿಯಲ್ಲೂ ಕೆಲಸ ಮಾಡುತ್ತಿಲ್ಲ. ಹಲವು ವರ್ಷಗಳ ಹಿಂದೆ ಸಾಫ್ಟ್ವೇರ್ ಇಂಜಿನಿಯರ್ ಅನಿಸಿಕೊಂಡಿದ್ದೆ, ಸಿಕ್ಕಾಪಟ್ಟೇ ಸಂಬಳ ಕೊಟ್ಟುಬಿಟ್ಟರು, ಸೋಂಬೇರಿಯಾದೆ. ಕೆಲಸ ಬಿಟ್ಟೆ. ಕ್ಯಾಮರಾ ಹಿಡ್ಕೊಂಡು ಹೀಗೆ ತಿರುಗುತಿರ್ತೀನಿ. ನನ್ನ ಹೆಂಡತಿ ಜಾಸ್ತಿ ಪ್ರಶ್ನೆ ಕೇಳೋಲ್ಲ. ಪಾಪ 3 ಮಕ್ಕಳು ಬೇರೆ ನೋಡಿ."

"ಓಹ್!" ಎಂದುಕೊಂಡವನ ಭಾವ, ನಾನೊಬ್ಬ ಕೆಲಸಕ್ಕೆ ಬಾರದ 'ಇಡಿಯಟ್' ಅಂದಿದ್ದು ನನಗಿಷ್ಟವಾಯ್ತು.

"ಸರಿ, ಹಲವು ವರ್ಷಗಳ ನಂತರ ನಿನ್ನನು ಭೇಟಿಯಾಗಿದ್ದು ತುಂಬಾ ಸಂತೋಷವಾಯಿತು. ನಾನಿನ್ನು ಹೊರಡಬೇಕು ಸ್ವಲ್ಪ..."

"ಹೇಯ್, ನಿನ್ನ ಫ್ಯಾಮಿಲಿನ ಯಾವಾಗ ಭೇಟಿ ಮಾಡಿಸುತ್ತಿಯ?" ಅವಳು ಕೇಳಿದಳು.

"ಅವಳು ಚಿಕ್ಕಮಗಳೂರಿನಲ್ಲಿದ್ದಾಳೆ, ಅವಳು ಬಂದು ಕೂಡಲೇ ಕಾಲ್ ಮಾಡುತ್ತೀನಿ."

"ಸರಿ ಮತ್ತೆ ನಿನ್ನ ಫೋನ್ ನಂಬರ್ ಕೊಡು" ಅವಳೆಂದಳು.

ನಾನು ಸ್ವಲ್ಪ ಯೋಚಿಸಿ, 'ನೀರಾಘವ್' ನನ್ನ Facebook ಪ್ರೊಫೈಲ್.

"ಅಂದಹಾಗೆ, ನೀ ಫಾರ್ ನಿಹಾರಿಕ; ನನ್ನ ಪ್ರಶ್ನೆಯೇ ಕೇಳದ ವೈಫು! ನನ್ನ ಫೋನ್ ನಂಬರ್ FBಯಲ್ಲಿ ಪೋಸ್ಟ್ ಮಾಡುತ್ತೀನಿ." ಅವಳ ಉತ್ತರಕ್ಕೂ ಕಾಯದೆ ಹೊರಟೆ.

'ನಿಹಾರಿಕ' ಅಂದರೆ ಮಂಜಿನ ತೆರೆ, ಅದು ನಮಗೆ ಹುಟ್ಟುವ ಮೊದಲ ಮಗುವಿನ ಹೆಸರು ಎಂದು ಇದೇ ನಂದಿಬೆಟ್ಟದ ಮೇಲೆ ಹಲವು ವರ್ಷಗಳ ಹಿಂದೆ ವಿಸ್ಮಯ ನಿರ್ಧರಿಸಿದ್ದಳು. ಹುಟ್ಟದ ಆ ಮಗುವಿನ ನೆನಪು ಈ ಮೂಲಕವಾದರೂ ವಿಸ್ಮಯಳಿಗಾಗಲಿ ಎಂಬುದು ನನ್ನ ಸ್ವಾರ್ಥವಾಗಿತ್ತು!

ಪ್ರಶ್ನೆಯೇ ಕೇಳದ ವೈಫ್ನ ಅಸ್ತಿತ್ವದ ಬಗ್ಗೆ ಇರಬಹುದಾದ ನಿಮ್ಮ ಸಂಶಯಗಳು ಕೂಡ ಅರ್ಥಪೂರ್ಣವೆ. ನಾನು ಮದುವೆಯಾಗದೆ ಏನು ಸಾಧಿಸಿದೆ ಗೊತ್ತಿಲ್ಲ. ಆದರೆ ಮಾರಿಕೊಂಡ ಹೃದಯ ಮತ್ತೆಲ್ಲೂ ಸಿಗದಾದಾಗ, ಸಾಯಲು ಗೊತ್ತೇ ಇರದ ಪ್ರೀತಿ ನನ್ನನ್ನು ಪ್ರತಿದಿನವು 'ವಿಸ್ಮಯ'ಗೊಳಿಸುವಾಗ ನಾನು ಒಬ್ಬಂಟಿ ಎಂದೆನಿಸುವುದೇ ಇಲ್ಲ.

English summary
Nee Raghav : Kannada short story by Rajendra HR. No one is alone when love gives company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X