ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಸಂಕಲ್ಪ: ಸುಳ್ಳು ಆಪಾದನೆ ಎಂಬ ಮುಳ್ಳು ಚುಚ್ಚಿದರೆ...

By ಗುಣಮುಖ
|
Google Oneindia Kannada News

Don't bother about false allegations
ಸುಳ್ಳು ಆಪಾದನೆಗಳು, ಅಪಪ್ರಚಾರಗಳು, ಅವಮಾನಗಳು ಎಂತೆಂಥವರನ್ನು ಕಾಡಿವೆ. ಎಲ್ಲರನ್ನೂ ಒಂದಲ್ಲ ಒಂದು ಸಲ ಬೆನ್ನು ಹತ್ತಿವೆ, ಅವು ಯಾರನ್ನೂ ಬಿಟ್ಟಿಲ್ಲ. ಶ್ರೀ ಕೃಷ್ಣನಂತಹ, ಶ್ರೀ ಕೃಷ್ಣನನ್ನೇ ಬಿಟ್ಟಿಲ್ಲ! ಶಮಂತಕ ಮಣಿ ಪ್ರಕರಣದಲ್ಲಿ ಶ್ರೀ ಕೃಷ್ಣ ಸುಳ್ಳು ಆಪಾದನೆ ಎದುರಿಸಿದ್ದಾನೆ. ಸುಳ್ಳು ಆಪಾದನೆಯನ್ನು ನಮ್ಮ ಚಾರಿತ್ರ್ಯವನ್ನೇ ಗುರಿಯಾಗಿಟ್ಟುಕೊಂಡು ಸೃಷ್ಟಿಸಲಾಗುತ್ತದೆ. ನಮ್ಮ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯುವ ಪ್ರಯತ್ನ ಅಡಗಿರುತ್ತದೆ. ಆ ಸಂದರ್ಭದಲ್ಲಿ ನಾವೇನಾದರು ತಪ್ಪು ಹೆಜ್ಜೆಯಿಟ್ಟರೆ, ತಪ್ಪು ತೀರ್ಮಾನ ತೆಗೆದುಕೊಂಡರೆ ನಾವು ಸುಳ್ಳು ಆಪಾದನೆಯ ಸಂಚಿಗೆ ಬಲಿಯಾದೆವು ಎಂದರ್ಥ.

ಮೊನ್ನೆ ಸಿಕ್ಕ ಗೆಳತಿಯೊಬ್ಬಳು ತನ್ನ ಬಗ್ಗೆ ಹುಟ್ಟಿಕೊಂಡಿರುವ ಸುಳ್ಳು ಆಪಾದನೆಯನ್ನು, ಅದರಿಂದ ತನಗಾಗುತ್ತಿರುವ ಅವಮಾನ, ಕಿರಿಕಿರಿ ಹೇಳಿಕೊಂಡು ಕನಲಿದಳು. ನನಗೆ ಅವಳ ಬಗ್ಗೆ ಚೆನ್ನಾಗಿ ಗೊತ್ತು. ಅವಳ ಸಂಕಟದ ಕತೆ ಕೇಳುತ್ತಾ, ಆ ಆಪಾದನೆಯಲ್ಲಿ ಎಳ್ಳಷ್ಟೂ ನಿಜವಿಲ್ಲ ಎಂಬುದು ನನಗೆ ಮನದಟ್ಟಾಗಿತ್ತು. ಪಾಪ, ತುಂಬಾ ಸಂಕಟ ಅನುಭವಿಸುತ್ತಿದ್ದಳು. ಏನು ಸಮಾಧಾನ ಹೇಳುವುದು ಗೊತ್ತಾಗಲಿಲ್ಲ. ಸುಮ್ಮನೆ ಅವಳ ಸಂಕಟದ ಕತೆ ಕೇಳಿಕೊಂಡು ಮೌನವಾಗಿ ಸಾಂತ್ವನ ಹೇಳಿದೆ.

'ಹೇಳು, ಈ ಸುಳ್ಳು ಆಪಾದನೆಯನ್ನು ಹೇಗೆ ಎದುರಿಸಬೇಕು? ನಾನೇನಾದರು ತಪ್ಪು ನಡೆಯಿಟ್ಟರೆ ಆ ಆಪಾದನೆ ನಿಜವಾಗಿ ಬಿಡುತ್ತದೆ. ನನಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಇದರಿಂದಾಗಿ ನನ್ನ ಮನಃಶಾಂತಿ, ನೆಮ್ಮದಿ ಹಾಳಾಗಿದೆ.' ಎಂದಳು. ತಕ್ಷಣ ನನಗೆ ಏನು ಉತ್ತರ ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಕೊಂಚ ಹೊತ್ತು ಅವಳು ಹೇಳಿದ್ದನ್ನೇ ಧ್ಯಾನಿಸುತ್ತಾ ಕೂತೆ. ಏನೋ ಹೊಳೆಯಿತು. ತಕ್ಷಣ ಹೇಳಿದೆ 'ಏನು ಮಾಡಬೇಕೆಂದರೆ... ನೀನು ಸಂತೋಷದಿಂದ, ಸಮಾಧಾನದಿಂದಿರಬೇಕು ಅಷ್ಟೆ! ಕಾಲವೇ ಎಲ್ಲವನ್ನು ಪರಿಹರಿಸುತ್ತದೆ...' ಎಂದೆ.

ಅವಳ ಗೊಂದಲ ಅವಳ ಮುಖದಲ್ಲಿ ಪ್ರತಿಫಲಿಸಿತು. ಕೊಂಚ ಹಿಂಜರಿಕೆಯಿಂದಲೇ 'ನನಗೆ ಅರ್ಥವಾಗಲಿಲ್ಲ...' ಎಂದಳು. 'ಈ ಗುಟ್ಟು ನನಗೂ ಅಷ್ಟು ಬೇಗ ಅರ್ಥವಾಗಿರಲಿಲ್ಲ. ಈ ಕತೆ ಕೇಳು ನಿನಗೇ ಎಲ್ಲಾ ತಿಳಿಯಾಗುತ್ತದೆ' ಎಂದೆ. ಅವಳು ಕೊಂಚ ಅನುಮಾನದಿಂದ, ಗೊಂದಲದಿಂದಲೇ ಹೂಂಗುಟ್ಟಿದಳು.

***
ಜ್ಞಾನೋದಯವಾದ ನಂತರದ ದಿನಗಳವು. ಬುದ್ಧನ ಕೀರ್ತಿ ಹೂವಿನ ಪರಿಮಳದಂತೆ ಎಲ್ಲೆಡೆ ಹರಡುತ್ತಿತ್ತು. ವಸಂತದಲ್ಲಿ ಹೂವಿಗೆ ದುಂಬಿಗಳು ಮುತ್ತುವಂತೆ, ಬೆಲ್ಲದ ಅಚ್ಚಿಗೆ ಇರುವೆಗಳು ಮುಗಿಬೀಳುವಂತೆ, ಗೌತಮ ಬುದ್ಧನ ಧರ್ಮೋಪದೇಶಕ್ಕೆ, ದರ್ಶನಕ್ಕೆ ಜನ ಹಾತೊರೆಯುತ್ತಿದ್ದರು.

ಹಾಗೆಂದು ಗೌತಮ ಬುದ್ಧನಿಗೆ ವಿರೋಧಿಗಳು ಇರಲಿಲ್ಲವೆಂದೇನಲ್ಲ. ಜನರು ಬುದ್ಧನೆಡೆಗೆ ಆಕರ್ಷಿತರಾಗುತ್ತಿದ್ದಂತೆ, ಕೆಲವು ವಿರೋಧಿಗಳು ಹುಟ್ಟಿಕೊಂಡರು. ಜನ ಕಂದಾಚಾರದಿಂದ ಬಿಡುಗಡೆ ಹೊಂದಿ ಬುದ್ಧನ ಧಮ್ಮ ಮಾರ್ಗ ಅನುಸರಿಸಲಾರಂಭಿಸಿದಂತೆ ಡಂಭಾಚಾರಿಗಳ ಕಸುಬಿಗೆ ಹೊಡೆತ ಬಿತ್ತು. ಅವರ ಪ್ರಭಾವ, ಆದಾಯ ಮತ್ತು ಸಮಾಜದಲ್ಲಿ ಅವರ ವರ್ಚಸ್ಸು ಕುಂದಿತು. ಇದರಿಂದ ಕನಲಿ ಹೋದ ಕಪಟಿ ಕಂದಾಚಾರಿಗಳು ಗೌತಮ ಬುದ್ಧನ ಚಾರಿತ್ರ್ಯಕ್ಕೆ ಮಸಿ ಬಳಿಯುವ ಕುಟಿಲೋಪಾಯ ಮಾಡಿದರು.

ಒಬ್ಬ ವೇಶ್ಯೆಗೆ ದುಡ್ಡು ಕೊಟ್ಟು ದುರ್ಬೋಧನೆ ಮಾಡಿ, ಗೌತಮ ಬುದ್ಧನು ಧರ್ಮೋಪದೇಶ ಮಾಡುತ್ತಿರುವ ಜಾಗಕ್ಕೆ ಕಳುಹಿಸಿದರು. ಬೋಧಿವೃಕ್ಷದ ಕೆಳಗೆ ದೊಡ್ಡ ಜನ ಸಾಗರವೇ ನೆರೆದಿತ್ತು. ಬುದ್ಧನ ಕರುಣೆ ತುಂಬಿದ ಧರ್ಮೋಪದೇಶವನ್ನು ಜನ ನಿಶ್ಶಬ್ದವಾಗಿ ಕೇಳಿಸಿಕೊಳ್ಳುತ್ತಿದ್ದರು. ಗೌತಮ ಬುದ್ಧ, ಜನಸಾಗರ ಮತ್ತು ಧರ್ಮೋಪದೇಶ ಎಲ್ಲಾ ಒಂದಾಗಿ ಬೆರೆತು ವಾತಾವರಣ ಅದ್ವೈತವೇ ಆಗಿಹೋಗಿತ್ತು. ಅಂತಹ ಘನತೆ ತುಂಬಿದ ಸಭೆಗೆ ವೇಶ್ಯೆ ಬಂದವಳೇ, ಬುದ್ಧನನ್ನು ವಾಚಾಮಗೋಚರವಾಗಿ ಬಯ್ಯತೊಡಗಿದಳು.

'ಅಯ್ಯಾ ಕಪಟ ಸನ್ಯಾಸಿ... ನನ್ನ ಹೊಟ್ಟೆಯಲ್ಲಿ ನಿನ್ನ ಮಗು ಬೆಳೆಯುತ್ತಿದೆ. ನನ್ನನು ನಂಬಿಸಿ, ಗರ್ಭಿಣಿ ಮಾಡಿ ನಡು ನೀರಿನಲ್ಲಿ ಕೈ ಬಿಟ್ಟೆಯಲ್ಲೋ... ಈಗ ನೋಡಿದರೆ ಇಲ್ಲಿ ಬಂದು ಧರ್ಮೋಪದೇಶ ಮಾಡುತ್ತಿರುವೆಯಾ? ನನ್ನ ಜೊತೆ ಪ್ರಣಯದ ಆಟವಾಡಿ, ಮೋಸ ಮಾಡಿ ನೀನು ಹೀಗೆ ಓಡಿ ಬರಬಹುದೆ? ಓಡಿ ಬಂದರೆ ನಾನು ಸುಮ್ಮನೆ ಬಿಡುವೆನೆ? ಆ ದೇವರು ನಿನ್ನ ಮೆಚ್ಚುವನೆ? ನಡಿ... ನಡಿ... ನಿನ್ನ ಡಂಭಾಚಾರ ಸಾಕು, ನನ್ನನ್ನು ಮದುವೆಯಾಗು" ಎಂದಳು. ಅವಳ ಆಪಾದನೆಗೆ ಅವಳ ಉಬ್ಬಿದ ಹೊಟ್ಟೆ ಸಾಕ್ಷಿಯಾಗಿತ್ತು.

ಗೌತಮ ಬುದ್ಧ ಏನೂ ಮಾತಾಡಲಿಲ್ಲ. ಮೌನದಿಂದ ಕುಳಿತಿದ್ದ. ಅವನ ಕಣ್ಣುಗಳಿಂದ ಕರುಣೆ ಜಿನುಗುತ್ತಿತ್ತು. ಆದರೆ ಅವನ ಶಿಷ್ಯರು ಕೋಪದಿಂದ ತತ್ತರಿಸಿದರು. ಬುದ್ಧ ಅವರೆನ್ನೆಲ್ಲಾ ತನ್ನ ಕಣ್ಣ ಸನ್ನೆಯಿಂದಲೇ ಸುಮ್ಮನಿರುವಂತೆ ಆದೇಶಿಸಿದ. ಸೇರಿದ ಜನರಲ್ಲಿ ಗುಸು-ಗುಸು ಪಿಸು-ಪಿಸು ಶುರುವಾಯಿತು. ಕೆಲವರು ಬುದ್ಧನ ಕಡೆ ನೋಡಿ ಹುಳ್ಳಗೆ ನಕ್ಕರು. ಕೆಲವರು ಆ ಸುಂದರಿ ವೇಶ್ಯೆಯನ್ನೇ ಅನುಮಾನಿಸಿದರು. ಇಷ್ಟೆಲ್ಲಾ ಆದರೂ ಗೌತಮ ಬುದ್ಧ ಮಾತ್ರ ಸಮಾಧಾನದಿಂದ ಮೌನವಾಗಿ ಕುಳಿತಿದ್ದ.

ಇದ ಕಂಡು ಉತ್ತೇಜಿತಳಾದ ಆ ಹೆಣ್ಣು 'ಹೇ ಕಪಟಿ! ಮೌನವಾಗಿ ಕುಳಿತುಬಿಟ್ಟರೆ ಹೇಗೆ? ಕಾವಿ ಬಟ್ಟೆ ತೊಟ್ಟರೆ ಜನರನ್ನು ಮರಳು ಮಾಡಬಹುದು ಎಂದುಕೊಂಡೆಯಾ? ನನ್ನ ಜೊತೆ ಕಳೆದ ಮಧುರ ಕ್ಷಣಗಳ ಮರೆತೆಯಾ? ನಡಿ ನಡಿ... ನನ್ನ ಜೊತೆ ಸಂಸಾರ ಮಾಡು... ಇಲ್ಲದಿದ್ದರೆ ಮುಂದೆ ಹುಟ್ಟುವ ನಮ್ಮ ಮಗುವಿಗೆ ಯಾರು ದಿಕ್ಕು?' ಎಂದು ಜೋರಾಗಿ ಅತ್ತಳು. ಈ ನಾಟಕ ಇನ್ನೂ ಸ್ವಲ್ಪ ಹೊತ್ತು ನಡೆಯಿತು. ಬುದ್ಧನ ಶಿಷ್ಯರು, ಇನ್ನು ಸಹಿಸೆವು ಎಂದು ಕೋಪದಿಂದ ಅವಳನ್ನು ಸಭೆಯಿಂದ ತಳ್ಳಲು ಹೊರಟರು. ಮತ್ತೆ ಗೌತಮ ಬುದ್ಧ ಅವರನ್ನೆಲ್ಲಾ ಸುಮ್ಮನಿರುವಂತೆ ಸೂಚಿಸಿದ. ಆಗ ಅಚಾನಕ್ಕಾಗಿ ವೇಶ್ಯಯ ಹೊಟ್ಟೆಯಿಂದ ಪುಟ್ಟ ಬಟ್ಟೆಯ ಗಂಟು ಜಾರಿತು. ಅದು ಅವಳು ಗರ್ಭಿಣಿ ಎಂದು ನಿರೂಪಿಸಲು ಇಟ್ಟುಕೊಂಡಿದ್ದು. ಜನರಿಗೆ ತಕ್ಷಣ ಅವಳ ಕಪಟತನ, ಬುದ್ಧನ ಹಿರಿಮೆ ಅರ್ಥವಾಯಿತು. ಆಗಲೂ ಬುದ್ಧ ಸಂಭ್ರಮಿಸಲಿಲ್ಲ. ಅವಳು ತನ್ನ ತಪ್ಪನ್ನು ಒಪ್ಪಿಕೊಂಡಳು. ಕಪಟಿ ಕಂದಾಚಾರಿಗಳ ಸಂಚನ್ನು ವಿವರಿಸಿದಳು. ಕರುಣಾಸಾಗರ ಮೂರ್ತಿ ಅವಳನ್ನು ಕ್ಷಮಿಸಿದ, ಧಮ್ಮಕ್ಕೆ ಶರಣಾದ ಅವಳಿಗೂ ಧರ್ಮೋಪದೇಶ ಮಾಡಿದ.

***
ಅಂದು ಈ ಕತೆ ಕೇಳಿಹೋದ ಗೆಳತಿ ಮೊನ್ನೆ ಸಿಕ್ಕಿದ್ದಳು. ಅವಳ ಕತೆಯೂ ಸುಖಾಂತ್ಯವಾಯಿತು. ಆ ಕಷ್ಟದ ಸಂದರ್ಭದಲ್ಲಿ ಅವಳು ತೋರಿದ ಸಮಾಧಾನ ಚಿತ್ತ, ಸಹನೆ, ಸಂಯಮ ಅವಳನ್ನು ಸುಳ್ಳು ಆಪಾದನೆಯ ಸಂಕಟದಿಂದ ಪಾರುಮಾಡಿತು ಎಂದು ಅವಳೇ ಹೇಳಿದಳು. ನಾವೂ ಸಂಕಟದ ಸಮಯದಲ್ಲಿ, ಸುಳ್ಳು ಆಪಾದನೆಯ ಸಂದರ್ಭದಲ್ಲಿ ಸಂಯಮ, ಸಮಾಧಾನ ಚಿತ್ತ, ಸಹನೆ, ಸಹಿಷ್ಣುತೆ ತೋರುವ 'ಶುಭಸಂಕಲ್ಪ' ಮಾಡೋಣವೆ? [ಲೇಖಕರ ಈಮೇಲ್ : [email protected]] [connect with Gunamukha on facebook : https://www.facebook.com/#!/gunamukha]

English summary
Inspirational Kannada short story. False allegation have not left Sri Krishna or even Buddha. Common people are bound to face such allegations. But, don't bother about false allegations. Stay calm and be happy come what may. Ultimately happiness will be yours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X