ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತೋಷದಿಂದ ಬದುಕಲು ನಮಗೆ ಏನು ಬೇಕು?

By * ಗುಣಮುಖ
|
Google Oneindia Kannada News

What do we want to live happily
ಅವಕಾಶವಾದಾಗ ಒಮ್ಮೆ ಸಮುದ್ರ ತೀರದಲ್ಲಿ ಕೂತು ಗಮನಿಸಿ. ತೀರವನ್ನು ಒಮ್ಮೆ ಅವಲೋಕಿಸಿ. ದಂಡೆಗೆ ನಿರಂತರವಾಗಿ ಅಪ್ಪಳಿಸುವ ತೆರೆಗಳನ್ನು ನೋಡಿ. ಒಮ್ಮೆ ಸಡಗರದಿಂದ, ಕೆಲವೊಮ್ಮೆ ಸಿಟ್ಟಿನಿಂದ, ಕೆಚ್ಚಿನಿಂದ, ಅಬ್ಬರದಿಂದ, ಶಾಂತವಾಗಿ... ಹೀಗೆ ಹಲವು ಭಾವದಲ್ಲಿ ನಿರಂತರವಾಗಿ ದಂಡೆಗೆ ತೆರೆತೆರೆಯಾಗಿ ಅಪ್ಪಳಿಸುತ್ತಲೇ ಇರುತ್ತವೆ. ಹಾಗೆ ಮುಂದುವರಿದು ನೋಡಿ, ಯಾವ ಭಾವದಲ್ಲಿ ಅಪ್ಪಳಿಸಿದರು ಮತ್ತೆ ಅಂತರಮುಖಿಯಾಗಿ ಸಮುದ್ರದೊಳಗೆ ಹೋಗುತ್ತವೆ.

ನಮ್ಮ ಬದುಕು ಹಾಗೆ ಅಲ್ಲವೇ? ಹೊರಗೆಲ್ಲ ಏನೇ ಅರ್ಭಟ, ಅಡಂಬರ, ಗಾಂಭೀರ್ಯ, ಸಿಟ್ಟು, ಸರಸ, ವಿರಸ, ದರ್ಪ, ವಿನೋದ ಭಾವದಿಂದ ವರ್ತಿಸಿದರೂ, ಕೊನೆಗೆ ನಾವೆಲ್ಲಾ ಅಂತಿಮವಾಗಿ ಬಯಸುವುದು ಹಿಡಿ ಪ್ರೀತಿ, ಅರೆಪಾವು ವಿಶ್ವಾಸ ಅಲ್ಲವೆ? ಈ ಭಾವದಿ ನಿಮ್ಮ ಸುತ್ತಲಿರುವವರನ್ನು ಗಮನಿಸಿ ನೋಡಿ, ಎಲ್ಲರೂ ಒಳ್ಳೆಯವರಾಗಿ ಕಾಣುತ್ತಾರೆ! ನಿಮ್ಮನ್ನೇ ಪರಿಶೀಲನೆ ಒಳಪಡಿಸಿ ನೋಡಿ, ನಿಮಗೆ ಅಚ್ಚರಿಯಾಗುವಷ್ಟು ಬೇರೆಯದೇ ವ್ಯಕ್ತಿಯಾಗಿ ಕಾಣುತ್ತೀರಿ.

ಅದೆಲ್ಲಾ ಸರಿ, ನಮ್ಮ ಬದುಕು ಇಷ್ಟು ಸರಳವಾದರೂ, ಯಾಕೆ ನಾವೆಲ್ಲ ಹೀಗೆ ವರ್ತಿಸುತ್ತೇವೆ, ಬದುಕಿನಲ್ಲಿ ಏನೆಲ್ಲಾ ಅರಸಿ ಓಡುತ್ತೇವೆ? ಎಷ್ಟೆಲ್ಲಾ ಧಾವಂತಕ್ಕೆ ಒಳಗಾಗುತ್ತೇವೆ? ದುಡಿಮೆ, ಸಮಾಜ ಗೌರವ, ಸಂಪತ್ತು, ಗಳಿಕೆ ಹೆಸರಲ್ಲಿ ಎಷ್ಟೆಲ್ಲಾ ಹಾರಡುತ್ತೇವೆ. ನಮ್ಮ ಅಗತ್ಯ ಅರೆಪಾವು ವಿಶ್ವಾಸ ಮತ್ತು ಒಂದಿಷ್ಟು ಪ್ರೀತಿಯಾದರು... ಯಾಕೆ ಈ ಧಾವಂತ? ನಾವೆಲ್ಲಾ ಸಂತೋಷದಿಂದ ಬದುಕಲು ನಮಗೆ ಏನು ಬೇಕು? ಎಷ್ಟು ಹಣ ಬೇಕು? ಎಷ್ಟು ದುಡಿಯಬಹುಕು? ಎಷ್ಟು ಆಸ್ತಿ ಬೇಕು? ಎಂದು ಯೋಚಿಸುವಾಗಲೆಲ್ಲ ನನಗೆ ಲಿಯೋ ಟಾಲ್ಸ್ಟಾಯ್ ಬರೆದ ಪ್ರಸಿದ್ಧ ಕತೆ 'ಮನುಷ್ಯನಿಗೆ ಎಷ್ಟು ಭೂಮಿ ಬೇಕು?' ನೆನಪಾಗುತ್ತದೆ. ಸಂಕ್ಷಿಪ್ತವಾಗಿ ಆ ಕತೆಯ ಭಾವಾರ್ಥ ಈ ರೀತಿ ಇದೆ.

***
ಪಾಪಣ್ಣ ಒಬ್ಬ ಸಣ್ಣ ರೈತ, ಉಳಲು ಇರುವ ಭೂಮಿ ಸಾಲದೆಂದು, ಅದರಿಂದ ಬರುವ ದುಡಿಮೆ ಸಾಲದೆಂದು ಯಾವಾಗಲು ಪೇಚಾಡುತ್ತಿರುತ್ತಾನೆ. ಯಾವಾಗ ನೋಡಿದರು ಹೆಂಡತಿಯೊಂದಿಗೆ, ಇನ್ನೊಂದು ಚೂರು ಜಾಸ್ತಿ ಭೂಮಿಯಿದ್ದರೆ ಎಷ್ಟು ಚೆನ್ನಾಗಿರುತಿತ್ತು, ಕೊಂಚ ಅನುಕೂಲಕರ ಜೀವನ ನಡೆಸಬಹುದಿತ್ತು... ಎಂದು ಕುರುಬುತ್ತಿರುತ್ತಾನೆ. ಯಾರಾದರು ಸರೀಕರು ಭೂಮಿ ಕೊಂಡರೆ ಸಾಕು ಇವನು ಕುರುಬುವುದು ಇನ್ನು ಹೆಚ್ಚಾಗುತ್ತಿರುತ್ತದೆ. ಕೊನೆಗೆ ಒಂದು ದಿನ ನಾಲ್ಕು ಎಕರೆ ಭೂಮಿ ಕೊಳ್ಳಲು ಅವಕಾಶ ಸಿಕ್ಕಾಗ, ಕೊಂಚ ದುಡ್ಡು ಹೊಂದಿಸುತ್ತಾನೆ. ಆದರೆ ಆ ದುಡ್ಡು ಸಾಲದೇ ಕೊನೆಗೆ ಮನೆಯಲ್ಲಿರುವ ಸಣ್ಣ ಪುಟ್ಟ ಸಾಮಾನು ಮಾರುತ್ತಾನೆ. ಕೊನೆಗೆ ಅದು ಕೂಡ ಸಾಲದೇ ಹಿರಿಯ ಮಗನನ್ನು ಜೀತಕ್ಕೆ ಬಿಡುತ್ತಾನೆ. ನಮ್ಮಲ್ಲಿನ ಅನೇಕರಂತೆ ಹೋರಾಡಿ ದುಡ್ಡು ಹೊಂದಿಸಿ ಕೊನೆಗೆ ನಾಲ್ಕು ಎಕರೆ ಭೂಮಿ ಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಸ್ವಲ್ಪ ಕಾಲದ ನಂತರ ತಕ್ಕಮಟ್ಟಿಗೆ ಅನುಕೂಲಕರ ಜೀವನ ನಡೆಸುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಇನ್ನೂ ಒಂದಿಷ್ಟು ಭೂಮಿಯಿದ್ದಿದ್ದರೆ... ಎಂದು ಕುರುಬುವುದು, ಕನಸಿ ಕೊರಗುವುದು ನಿಲ್ಲುವುದೇ ಇಲ್ಲ. ಮರಕ್ಕಿಂತ ಮರ ದೊಡ್ಡದು ಎಂಬಂತೆ ಯಾವಾಗಲು ಅವನಿಗಿಂತ ಹೆಚ್ಚು ಭೂಮಿ ಇರುವವರೇ ಅವನ ಕಣ್ಣಿಗೆ ಕಾಣುತ್ತಿರುತ್ತಾರೆ, ಕನಸಲ್ಲಿ ಕಾಡುತ್ತಿರುತ್ತಾರೆ.

ಸಾಕಷ್ಟು ಕಾಲದಿಂದ ಪಾಪಣ್ಣ ಹೆಚ್ಚು ಭೂಮಿಗಾಗಿ ಒರಲುವುದು, ಕೊರಗುವುದು ಕಂಡು ವಿಧಿರಾಯ ನಗುತ್ತಿರುತ್ತಾನೆ. ಸಿಗಲಿ, ಸಿಗಲಿ ಇನ್ನೂ ಹೆಚ್ಚು ಭೂಮಿ ಸಿಗಲಿ ಎಂದು ವ್ಯಂಗ್ಯವಾಡುತ್ತಿರುತ್ತಾನೆ. ಪಾಪಣ್ಣನ ಹಳ್ಳಿಯ ಜಮೀನ್ಧಾರನೊಬ್ಬ ತನ್ನ ಜಮೀನೆಲ್ಲಾ ಮಾರುತ್ತಾನೆ. ಹಲವು ಹಳ್ಳಿಯವರ ಜೊತೆ ಪಾಪಣ್ಣನೂ ಕೊಂಚ ಭೂಮಿ ಕೊಳ್ಳುತ್ತಾನೆ. ಎಲ್ಲಾ ಜಮೀನು ಕೊಳ್ಳಲಾಗಲಿಲ್ಲವಲ್ಲ ಎಂದು ಕೊರಗುವುದು ಪಾಪಣ್ಣ ಬಿಡುವುದಿಲ್ಲ.

ಕಡಿಮೆ ದುಡ್ಡಿಗೆ ಹೆಚ್ಚು ಭೂಮಿ ಕೊಳ್ಳುವ ಬಗ್ಗೆ ಪಾಪಣ್ಣ ಭೂಮಿ ಮಾರಾಟದ ಮಧ್ಯವರ್ತಿಗಳನ್ನು ಸಂಪರ್ಕಿಸಿದಾಗ, ಕಡಿಮೆ ದುಡ್ಡಿಗೆ ಹೆಚ್ಚು ಭೂಮಿಗೆ ಕೊಳ್ಳಬೇಕೆಂದರೆ ಕಾಡಂಚಲ್ಲಿರುವ ಬುಡಕಟ್ಟು ಜನ ಜನರನ್ನು ಸಂಪರ್ಕಿಸಲು ಹೇಳುತ್ತಾರೆ.

ಉತ್ಸಾಹದಿಂದ ಪಾಪಣ್ಣ ಕೊಂಚ ದುಡ್ಡು ಹೊಂದಿಸಿಕೊಂಡು, ಬುಡಕಟ್ಟು ಜನ ಜನರನ್ನು ಕಾಣುತ್ತಾನೆ. ಬುಡಕಟ್ಟು ಜನರ ವ್ಯಾಪಾರ ಪದ್ಧತಿ ಕೊಂಚ ಬೇರೆ ತರ. ಪಾಪಣ್ಣನಿಗೆ ಅವರ ವ್ಯಾಪಾರ ಪದ್ಧತಿ ಕೊಂಚ ವಿಚಿತ್ರವಾಗಿ ತೋರುತ್ತದೆ. ಕೇವಲ ಸಾವಿರ ರೂಪಾಯಿಗೆ ಪಾಪಣ್ಣ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದು ಕ್ರಮಿಸುವಷ್ಟು ಭೂಮಿ ಅವನದು ಎಂದು ಬುಡಕಟ್ಟು ಹಿರಿಯರು ಹೇಳುತ್ತಾರೆ. ಆದರೆ ಅವನು ನಡಿಗೆ ಶುರು ಮಾಡಿದ ಜಾಗಕ್ಕೆ ಸೂರ್ಯ ಮುಳುಗುವ ಹೊತ್ತಿಗೆ ಮತ್ತೆ ಬಂದಿರಬೇಕು. ಹೀಗೆ ಪಾಪಣ್ಣ ವರ್ತುಲಾಕಾರವಾಗಿ ಕ್ರಮಿಸಿದ ಭೂಮಿ ಅವನಿಗೆ ಕೇವಲ ಸಾವಿರ ರೂಪಾಯಿಗೆ ಕ್ರಯ ಮಾಡಲಾಗುವುದು ಎಂದು ಮಾತುಕತೆ ಗಟ್ಟಿ ಮಾಡಿ ಕೊಳ್ಳುತ್ತಾರೆ. ಹಾಗೇನಾದರು ನಡಿಗೆ ಶುರು ಮಾಡಿದ ಜಾಗಕ್ಕೆ ಸೂರ್ಯ ಮುಳುಗುವ ಹೊತ್ತಿಗೆ ಬರೆದೆ ಹೋದರೆ ದುಡ್ಡು ವಾಪಸಿಲ್ಲ ಮತ್ತು ಎಳ್ಳಷ್ಟು ಭೂಮಿ ಸಿಗುವುದಿಲ್ಲ, ಎಂಬದು ಈ ವ್ಯಾಪಾರದ ಷರತ್ತು. ಈ ಷರತ್ತಿಗೆ ಪರವಾಗಿಲ್ಲ ಬಿಡಿ ಎಂದ ಪಾಪಣ್ಣ.

ಪಾಪಣ್ಣನ ಸಂತೋಷಕ್ಕೆ ಪಾರವೆಯಿಲ್ಲ! ಕಡಿಮೆ ದುಡ್ಡಿಗೆ ಹೆಚ್ಚು ಭೂಮಿ ಸಿಗುವ ಖುಷಿಗೆ ಅದರ ಹಿಂದಿನ ದಿನದ ರಾತ್ರಿ ನಿದ್ದೆಯೇ ಹತ್ತುವುದಿಲ್ಲ. ಆ ರಾತ್ರಿ ಅವನ ಮನೆ ಹಿಂದೆಯೇ ಕೂತಿದ್ದ ವಿಧಿರಾಯ ಇದ ಕಂಡು ಮುಸಿಮುಸಿ ನಗುತ್ತಿರುತ್ತಾನೆ.

ಪಾಪಣ್ಣ ಕಾಯುತ್ತಿದ್ದ ಸೂರ್ಯನ ಉದಯವಾಯಿತು. ಸರಿ, ಪಾಪಣ್ಣ ಸರಸರನೆ ನಡಿಗೆ ಆರಂಭಿಸಿದ, ಭೂಮಿ ಆಸೆ ಹೆಚ್ಚಾಗಿ ನಡುನಡುವೆ ಓಡಿದ, ಜೋರಾಗಿ ಓಡಿದ. ಊಟ ತಿಂಡಿ, ನೀರಡಿಕೆ, ವಿಶ್ರಾಂತಿ ಊಹಂ ಯಾವುದಕ್ಕೂ ಕ್ಷಣಕಾಲ ನಿಲ್ಲಲಿಲ್ಲ. ಅದೆಲ್ಲ ದಿನವು ಇದ್ದಿದ್ದೇ, ಈ ದಿನ ಭೂಮಿ ಗಳಿಸುವ ದಿನ... ಹಾಗೆಂದು ಪಾಪಣ್ಣ ನಿರ್ಧರಿಸಿದ್ದ. ದೇಹ ಬಳಲಿತು, ಪಾಪಣ್ಣನ ಭೂಮಿ ಇಚ್ಛೆ ಇನ್ನಷ್ಟು ಬಲವಾಯಿತು.

ಮೊದಲು ಅಂದುಕೊಂಡಿದ್ದು ಮಧ್ಯಾಹ್ನದ ಹೊತ್ತಿಗೆ ತನ್ನ ಪಯಣದ ಆರಂಭದ ಗುರುತಿನ ಜಾಗಕ್ಕೆ ಹಿಂದಿರುಗುವುದೆಂದು, ಆದರೆ ಈ ತರದ ಅವಕಾಶ ಎಲ್ಲರಿಗು ದಿನವೂ ಸಿಕ್ಕುವುದಿಲ್ಲವಲ್ಲ. ಹಾಗೆಂದೇ ಪಾಪಣ್ಣ ಇನ್ನೂ ಸ್ವಲ್ಪ ಹೆಚ್ಚು ಭೂಮಿ ಕ್ರಮಿಸಲು ಮುಂದಾದ. ದೇಹ ಮತ್ತಷ್ಟು ಬಳಲಿತು. ಕೊನೆಗೆ ಸೂರ್ಯ ಮೆಲ್ಲನೆ ಪಶ್ಚಿಮದ ಕಡೆ ಕೆಳಗಿಳಿಯಲಾರಂಭಿಸಿದ. ಬೆಳಕು ಮಂದವಾಗತೊಡಗಿತು. ಗಾಬರಿಗೆ ಬಿದ್ದ ಪಾಪಣ್ಣ ಎದ್ದು ಬಿದ್ದು ಓಡತೊಡಗಿದ. ದುಡ್ಡು ಹೋಯಿತು, ಭೂಮಿನೂ ಇಲ್ಲವೆಂದರೆ? ಗಾಬರಿ ಇನ್ನೂ ಹೆಚ್ಚಾಯಿತು. ಸರಸರನೆ ನಡೆದ, ಓಡಿದ, ಎಡವಿ ಬಿದ್ದ, ತೆವಳಿದ... ಆಕಾಶ ಭೂಮಿ ಒಂದಾದರು ಸರಿಯೇ ಆರಂಭಿಸಿದ ಜಾಗಕ್ಕೆ ತಲುಪಲೇ ಬೇಕು ಎಂದು ಹಟಕ್ಕೆ ಬಿದ್ದ. ದೂರದಲ್ಲಿ ಬುಡಕಟ್ಟು ಹಿರಿಯರು ಪಾಪಣ್ಣನಿಗಾಗಿ ಕೂಗುತ್ತಿರುವುದು ಕೇಳುತಿತ್ತು.

'ಇಲ್ಲ... ಇಲ್ಲ ಇನ್ನೂ ಸೂರ್ಯ ಮುಳುಗಿಲ್ಲ ಬಂದೆ ಬಂದೆ... ಇದಿಷ್ಟು ಭೂಮಿ ನಂದೇ...ಇದಿಷ್ಟು ಭೂಮಿ ನಂದೇ...' ಎಂದು ವಿಕಾರವಾಗಿ ಕೂಗುತ್ತಾ ತನ್ನ ಜೀವದ, ದೇಹದ ಕೊನೆಯ ಔನ್ಸ್ ಶಕ್ತಿಯನ್ನು ಬಳಸುತ್ತಾ ಓಡಿದ ಪಾಪಣ್ಣ. ಇದ ಕಂಡು ಅವನ ಬೆನ್ನ ಹಿಂದೆಯೇ ಇದ್ದ ವಿಧಿರಾಯ ಮುಸಿಮುಸಿ ನಗುತ್ತಿದ್ದ. ಊಟ ತಿಂಡಿ ಬಿಡಿ, ನೀರು ಕುಡಿಯಲು ಸಮಯ ವ್ಯರ್ಥ ಮಾಡದೆ ಬೆಳಗಿನಿಂದ ಓಡುತ್ತಿದ್ದ ಪಾಪಣ್ಣ. ಹಾಗು ಹೀಗೂ ತಾನು ನಡಿಗೆ ಆರಂಭಿಸಿದ ಜಾಗಕ್ಕೆ ಸೂರ್ಯ ಮುಳುಗುವ ಹೊತ್ತಿಗೆ ಬಂದ ಪಾಪಣ್ಣ ಬುಡಕಟ್ಟು ಹಿರಿಯರಿಗೆ 'ಇದಿಷ್ಟು ಭೂಮಿ ನನ್ನದೇ...’ 'ಇದಿಷ್ಟು ಭೂಮಿ ನನಗೇ ಬೇಕು' ಎಂದು ಹೇಳುತ್ತಾ ಬಾಯಲ್ಲಿ ರಕ್ತಕಾರುತ್ತ ಕುಸಿದು ಬಿದ್ದ. ಬುಡಕಟ್ಟು ಜನ ಅಯ್ಯೋ ಪಾಪ ಎಂದುಕೊಂಡು ಪಾಪಣ್ಣನನ್ನು ಮೇಲೆತ್ತಲು ಹೋದರು, ಆದರೆ ಅಷ್ಟು ಹೊತ್ತಿಗೆ ಪಾಪಣ್ಣನ ಜೀವ ಹಾರಿಹೋಗಿತ್ತು. ಬುಡಕಟ್ಟು ಜನ 'ಹೌದಪ್ಪ ಇಷ್ಟು ಭೂಮಿ ನಿನ್ನದೇ...’ ಎನ್ನುತ್ತಾ ಕರುಣೆಯಿಂದ ಆರಡಿ ಮೂರಡಿ ಹಳ್ಳ ತೋಡಿ ಪಾಪಣ್ಣನ್ನು ಅಲ್ಲೇ ಮಣ್ಣು ಮಾಡಿದರು.

***
ನಾವೆಲ್ಲಾ ಸಂತೋಷದಿಂದ ಬದುಕಲು ನಮಗೆ ಏನು ಬೇಕು? ಎಷ್ಟು ಹಣ ಬೇಕು? ಎಷ್ಟು ದುಡಿಯಬೇಕು? ಎಷ್ಟು ಆಸ್ತಿ ಬೇಕು? ಎಷ್ಟು ಭೂಮಿಕಾಣಿ ಬೇಕು? ಎಂದು ಆಲೋಚಿಸಿದಾಗಲೆಲ್ಲ ಈ ಕತೆ ನೆನಪಾಗುತ್ತದೆ. ನೆಮ್ಮದಿಯ, ಸಂತೃಪ್ತಿಯ, ಸಂತಸದ ಬದುಕ ಬದುಕಲು ನಮಗೆ ಏನು ಬೇಕು? ಯೋಚಿಸಿ... ನಮ್ಮ ಗಡಿಬಿಡಿಯ ಬದುಕಿನಲ್ಲಿ ಈ ಬಗ್ಗೆ ಕೊಂಚ ಧ್ಯಾನಿಸೋಣ. [ಲೇಖಕರ ಈಮೇಲ್ : [email protected]]

English summary
Earth provides enough to satisfy every man's needs, but not every man's greed. ― Mahatma Gandhi. So, be content with what God has given to you. When we expect and experience the love whole world looks beautiful. Inspirational short stories by Gunamukha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X