ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಸಂಕಲ್ಪ : ಯಥಾ ದೃಷ್ಟಿ ತಥಾ ಸೃಷ್ಟಿ

By * ಗುಣಮುಖ
|
Google Oneindia Kannada News

ಮೊನ್ನೆ ಒಬ್ಬ ಯುವ ಸ್ನೇಹಿತನ ಹತ್ತಿರ ಮಾತನಾಡುತ್ತಿದ್ದೆ. ಆಗ ತಾನೆ ಕಂಪನಿ ಬದಲಿಸಿದ್ದ. ಏಕೆಂದು ಕೇಳಿದ್ದಕ್ಕೆ ತುಂಬಾ ಕುತೂಹಲದ ವಿವರಗಳನ್ನು ಹೇಳಿದ. ಕಂಪನಿಯ ಬಗ್ಗೆ, ಅದರ ನಿಯಮಗಳ ಬಗ್ಗೆ ಅವನದು ತುಂಬಾ ದೂರುಗಳಿದ್ದವು. ಸ್ವಲ್ಪ ಹೊತ್ತಿನ ನಂತರ ನನಗೆ ಗೊತ್ತಾಗಿದ್ದೇನೆಂದರೆ, ಅವನು ಮೂರು ವರ್ಷದಲ್ಲಿ ನಾಲ್ಕು ಕಂಪನಿ ಬದಲಿಸಿದ್ದ. ಪ್ರತಿ ಕಂಪನಿಯ ಬಗ್ಗೆ ಅವನದು ತುಂಬಾ ಸ್ಪಷ್ಟವಾದ ದೂರುಗಳಿದ್ದವು. ಅವನ ಪ್ರಕಾರ, ಆದರ್ಶವಾದ ಕಂಪನಿಯ ರೂಪುರೇಷೆ ಬಗ್ಗೆ ಕೇಳಿದೆ. ಅದಕ್ಕೆ ಅವನಲ್ಲಿ ಸ್ಪಷ್ಟವಾದ ಉತ್ತರವಿರಲಿಲ್ಲ.

"ಅಲ್ಲಯ್ಯ... ಕಂಪನಿಗಿಂತ ನಿನ್ನಲ್ಲೇ ಏನೋ ಲೋಪವಿರಬಹುದಲ್ಲವೇ? ನೀನೇ ಆತ್ಮವಿಮರ್ಶೆ ಮಾಡಿಕೊಂಡು, ನಿನ್ನಲ್ಲಿ ರಚನಾತ್ಮಕ ಬದಲಾವಣೆ ಮಾಡಿಕೊಳ್ಳಬಾರದೇಕೆ?" ಎಂದೆ. "ಏನ್ ಸಾರ್ ನೀವು... ಸಮಾಧಾನ ಹೇಳುವುದು ಬಿಟ್ಟು... ನನಗೇ ತಿದ್ದಿಕೋ ಅಂತೀರಲ್ಲ" ಅಂದ ಬೇಸರದಿಂದ. ನಾನು ಸರಿಯಾಗಿದ್ದೇನೆ ಅದರೆ ಜಗತ್ತು ಸರಿಯಾಗಿಲ್ಲ ಎಂಬ ಮನಸ್ಥಿತಿ ಅವನದು. "ಅಯ್ಯ ಮಿತ್ರ! ಬೇಸರ ಬೇಡ ಈ ಕತೆ ಕೇಳು... ಎಲ್ಲಾ ನಿನಗೇ ತಿಳಿಯಾಗುತ್ತದೆ" ಎಂದು ಈ ಕತೆ ಹೇಳಿದೆ.

***

The world looks how we see it

ಹಿಮಗಿರಿ ಊರ ಮುಂದಿನ ವಿಶಾಲವಾದ ಆಲದ ಮರದ ಕೆಳಗೆ ಒಬ್ಬ ಸಾಧು ವಾಸವಾಗಿದ್ದ. ದಾರಿಹೋಕರು ಕೊಟ್ಟಿದ್ದನ್ನೆ ಸ್ವೀಕರಿಸಿ, ಅವರ ಕಷ್ಟಸುಖ ವಿಚಾರಿಸುತ್ತ, ಅವರಿಗೆ ಒಂದಿಷ್ಟು ಒಳ್ಳೆ ಮಾತುಗಳನ್ನು ಹೇಳುತ್ತಾ ಕಾಲಕಳೆಯುತ್ತಿದ್ದ. ಅವನ ಮಾತುಗಳಲ್ಲಿ ಮತ್ತು ಸನ್ನಿಧಿಯಲ್ಲಿ ನೆಮ್ಮದಿ ಕಂಡುಕೊಂಡ ಜನರು ಸಾಧುವನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು.

ಒಂದು ದಿನ ಸಾಧು ಧ್ಯಾನನಿರತನಾಗಿದ್ದಾಗ, ಚಂದ್ರಾಪುರದಿಂದ ಬಂದ ಕುಟುಂಬವೊಂದು ವಿಶಾಲವಾದ ಆಲದ ಮರದ ಬಳಿ ವಿಶ್ರಾಂತಿಗೆಂದು ತಂಗಿತು. ಧ್ಯಾನವನ್ನು ಮುಗಿಸಿದ ನಂತರ ಸಾಧು ಆ ಕುಟುಂಬದ ಯಜಮಾನ ವೀರಣ್ಣನ ಜೊತೆ ಮಾತುಕತೆಗಿಳಿದ. ವೀರಣ್ಣ ತನ್ನ ಕುಟುಂಬ ಸಮೇತ ಚಂದ್ರಾಪುರದಿಂದ ಸುರಪುರಕ್ಕೆ ಹೊರಟಿದ್ದ. ಚಂದ್ರಾಪುರದ ಜನರ ವರ್ತನೆಯಿಂದ ಬೇಸತ್ತ ಅವನು, ಊರನ್ನು ತೊರೆಯಲು ನಿರ್ಧರಿಸಿದ್ದ. ಚಂದ್ರಾಪುರದ ಜನರ ಬಗ್ಗೆ ಅವನಿಗೆ ಎಳ್ಳಷ್ಟೂ ಸದಭಿಪ್ರಾಯವಿರಲಿಲ್ಲ. ಚಂದ್ರಾಪುರದಲ್ಲಿ ಒಬ್ಬನೇ ಒಬ್ಬ ಒಳ್ಳೆ ಮನುಷ್ಯನಿಲ್ಲ ಎಂಬುದು ಅವನ ಕೊರಗು. ಸಾಧುವಿನಲ್ಲಿ ತನ್ನ ಕಷ್ಟ ಹೇಳಿಕೊಂಡ ವೀರಣ್ಣ, ಸುರಪುರದ ಬಗ್ಗೆ ಸಾಧುವಿನ ಅಭಿಪ್ರಾಯ ಕೇಳಿದ. ಆಗ ಸಾಧು "ಅಯ್ಯ ವೀರಣ್ಣ, ಸುರಪುರದ ಜನರೂ ಸರಿಯಿಲ್ಲ, ಅಲ್ಲಿಯ ಜನ ಭಾರಿ ಜಗಳಗಂಟರು. ನನ್ನ ಅಭಿಪ್ರಾಯದಲ್ಲಿ ನೀನು ಚಂದ್ರಾಪುರಕ್ಕೆ ಹಿಂದಿರುಗಿ ಹೋಗುವುದೇ ಒಳ್ಳೆಯದು. ಅಲ್ಲೇ ಹೊಂದಾಣಿಕೆ ಮಾಡಿಕೊಂಡು ಇರುವುದು ಒಳ್ಳೆಯದು" ಎಂದ. ಸಾಧುವಿನ ಮಾತನ್ನು ಗೌರವಿಸಿ ವೀರಣ್ಣ ಚಂದ್ರಾಪುರಕ್ಕೆ ಹಿಂದಿರರುಗಿದ.

ಸ್ವಲ್ಪ ಸಮಯದ ನಂತರ, ಗೋಪಣ್ಣನ ಕುಟುಂಬವೂ, ಸಾಧು ಧ್ಯಾನ ನಿರತನಾಗಿದ್ದ ಆಲದ ಮರದ ಬಳಿ ವಿಶ್ರಾಂತಿಗೆಂದು ಬಂದಿತು. ಸಾಧುವಿನ ಆಶೀರ್ವಾದ ಪಡೆದ ಕುಟುಂಬ ಸ್ವಲ್ಪ ಖಿನ್ನವಾಗಿರುವಂತೆ ಕಂಡುಬಂತು. ಸಾಧು ಗೋಪಣ್ಣನನ್ನು ವಿಚಾರಿಸಿದಾಗ, ಗೋಪಣ್ಣನು "ಸ್ವಾಮೀ, ನಾನು ಚಂದ್ರಾಪುರದಲ್ಲಿ ತುಂಬಾ ವರುಷದಿಂದಿದ್ದೆ. ಅಲ್ಲಿಯ ಜನರು ತುಂಬಾ ಸ್ನೇಹಶೀಲರು, ತುಂಬಾ ಸಹಕಾರ ನೀಡಿದರು. ಅಂತಹ ಊರನ್ನು ಬಿಟ್ಟು ಈಗ ಅಪರಿಚಿತ ಸುರಪುರಕ್ಕೆ ಅನಿವಾರ್ಯ ಕಾರಣದಿಂದ ಸ್ಥಳಾಂತರವಾಗಬೇಕಿದೆ. ಅಲ್ಲಿಯ ಜನ ಹೇಗೋ... ಏನೋ... ಎಂಬ ಚಿಂತೆ ನನ್ನ ಕುಟುಂಬವನ್ನು ಕಾಡುತ್ತಿದೆ" ಎಂದ. ಆಗ ಸಾಧು "ಗೋಪಣ್ಣ ಏನೂ ಹೆದರಬೇಡ, ಚಂದ್ರಾಪುರದ ಜನರಷ್ಟೇ ಸುರಪುರದ ಜನರೂ ಬಹಳ ಸ್ನೇಹಪ್ರಿಯರು, ಸಹಕಾರ ಮನೋಭಾವದವರು. ಯಾವುದೇ ಆತಂಕವಿಲ್ಲದೆ ಸುರಪರಕ್ಕೆ ಹೊರಡು. ನೀನು ಮನೆಯ ಯಜಮಾನ. ನೀನು ಖಿನ್ನನಾದರೆ ನಿನ್ನ ಕುಟುಂಬದ ಗತಿಯೇನು? ನಗುನಗುತ್ತಾ ಸುರಪುರಕ್ಕೆ ಹೊರಡು. ನಿನಗೆ ಒಳ್ಳೆಯದಾಗಲಿ" ಎಂದು ಹರಸಿದ.

ಅಲ್ಲೇ ಕೂತಿದ್ದ ಹಿಮಗಿರಿಯ ಊರ ಪ್ರಮುಖ, ಸಾಧುವಿನ ವರ್ತನೆ ಕಂಡು ಅಚ್ಚರಿಗೊಂಡ. "ಏನು ಸ್ವಾಮೀ, ವೀರಣ್ಣನಿಗೆ ಹಾಗೆ ಹೇಳಿದಿರಿ... ಗೋಪಣ್ಣನಿಗೆ ಬೇರೆಯದೇ ಹೇಳಿದಿರಿ... ಇದರಲ್ಲಿ ಯಾವುದು ಸತ್ಯ?" ಎಂದವನ ಧ್ವನಿಯಲ್ಲಿ ಗೊಂದಲವಿತ್ತು. ಆಗ ಸಾಧು ನಗುತ್ತ "ಒಳ್ಳೆ ಪ್ರಶ್ನೆ, ನೀವು ಗಮನಿಸಿದಿರಾ? ವೀರಣ್ಣ ಇಡೀ ಚಂದ್ರಾಪುರದಲ್ಲಿ ಒಬ್ಬನೇ ಒಬ್ಬ ಒಳ್ಳೆ ವ್ಯಕ್ತಿ ಸಿಗಲಿಲ್ಲವೆಂದ. ಅಲ್ಲಿ ಸಮಸ್ಯೆಯಿರುವುದು ಊರಲ್ಲಿ, ಊರ ಜನರಲ್ಲಿ ಅಲ್ಲ, ವೀರಣ್ಣನಲ್ಲಿ. ಅವನು ಯಾವುದೇ ಊರಿಗೆ ಹೋದರೂ ಮತ್ತೆ ಅದೇ ಸಮಸ್ಯೆಯಿಂದ ಬಳಲುತ್ತಾನೆ. ಹಾಗಾಗಿ ವೀರಣ್ಣನಿಗೆ ಅಲ್ಲೇ ಹೊಂದಾಣಿಕೆ ಮಾಡಿಕೊಂಡಿರಲು ಹೇಳಿದೆ. ಗೋಪಣ್ಣ ಒಳ್ಳೆ ಸ್ವಭಾವದ ಮನುಷ್ಯ. ಅನಿವಾರ್ಯ ಕಾರಣದಿಂದ ಊರು ಬಿಟ್ಟು ಹೋಗಬೇಕಾಗಿದೆ. ಅವನು ಒಳ್ಳೆಯ ಸ್ವಭಾವದವ, ಹಾಗಾಗಿ ಅವನಿಗೆ ಎಲ್ಲೇ ಹೋದರೂ ಒಳ್ಳೆಯವರೇ ಸಿಗುತ್ತಾರೆ, ಅವನು ಎಲ್ಲರಲ್ಲೂ ಒಳ್ಳೇತನವನ್ನೇ ಕಾಣುತ್ತಾನೆ. ಹಾಗಾಗಿ ಅವನಿಗೆ ಧೈರ್ಯದಿಂದ ಸುರಪುರಕ್ಕೆ ಹೋಗಲು ಹೇಳಿದೆ. ಈಗ ನಿಮ್ಮ ಅನುಮಾನ ಪರಿಹಾರವಾಯಿತೇ?" ಎಂದು ಸಾಧು ಮುಗುಳ್ನಕ್ಕ. ಹಿಮಗಿರಿಯ ಊರ ಪ್ರಮುಖ ಉತ್ತರ ಸಿಕ್ಕ ಸಂತೃಪ್ತಿಯಲ್ಲಿ ಸಾಧುವಿಗೆ ನಮಸ್ಕರಿಸಿದ.

***
ಶ್ರೀಕೃಷ್ಣ ಧರ್ಮರಾಯನಿಗೆ ಜಗತ್ತಿನಲ್ಲಿರುವ ಒಳ್ಳೆಯವರನ್ನು, ಕೆಟ್ಟವರನ್ನು ಲೆಕ್ಕ ಹಾಕಿಕೊಂಡು ಬರಲು ಹೇಳಿದಾಗ, ಧರ್ಮರಾಯನಿಗೆ ಎಲ್ಲರೂ ಒಳ್ಳೆಯವರಾಗಿ ಕಂಡು, ಜಗತ್ತಿನಲ್ಲಿ ಕೆಟ್ಟವರೇ ಇಲ್ಲವೆಂದನಂತೆ. ಅದೇ ರೀತಿ ಶ್ರೀಕೃಷ್ಣ ದುರ್ಯೋಧನನಿಗೆ ಹೇಳಿದಾಗ ದುರ್ಯೋಧನನಿಗೆ ಜಗತ್ತಿನಲ್ಲಿ ಒಬ್ಬನೇ ಒಬ್ಬ ಒಳ್ಳೆಯ ವ್ಯಕ್ತಿ ಸಿಕ್ಕಲಿಲ್ಲವಂತೆ! ಅದಕ್ಕೆ ಹಿರಿಯರು ಹೇಳಿದ್ದು ನಮ್ಮ ಜೀವನ ದೃಷ್ಟಿ ಹೇಗೋ ಹಾಗೆಯೇ ಭಗವಂತನ ಸೃಷ್ಟಿ. ಬನ್ನಿ ನಾವು ಎಲ್ಲರಲ್ಲೂ, ಎಲ್ಲದರಲ್ಲೂ ಒಳ್ಳೆಯತನ ಕಾಣುವ "ಶುಭಸಂಕಲ್ಪ" ಮಾಡೋಣ. [ಲೇಖಕರ ಈಮೇಲ್ : [email protected]] ಫೇಸ್ ಬುಕ್ ಪುಟ.

***
ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!

English summary
Inspirational Kannada short story. Never blame the people, world for the hardships we face. We are creators and owners of all the problems. If you think world is good, world looks beautiful to you. See good in everything.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X