ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥಾಪ್ರಿಯರಿಗಾಗಿ ಒಂದು ಬಹುಮಾನಿತ ಕಥೆ

By ಸಾವಿತ್ರಿ ವೆಂ. ಹಟ್ಟಿ, ಲಕ್ಕುಂಡಿ, ಗದಗ
|
Google Oneindia Kannada News

Savita Hatti
ಗದಗ ಜಿಲ್ಲೆಯ ಲಕ್ಕುಂಡಿ ಅಂದರೆ ಬಹಳ ಕಾರಣಗಳಿಂದ ಬಹಳ ಪ್ರಸಿದ್ಧ. ಅದು ಶಿಬಿ ಚಕ್ರವರ್ತಿ, ಅತ್ತಿಮಬ್ಬೆಯರಿಂದಾಗಿ ಅಮರ ಕೀರ್ತಿ ಪಡೆದುದರ ಜೊತೆಗೆ ಗುಡಿ ಗುಂಡಾರ, ಕೆರೆ ಬಾವಿಗಳಿಂದಲೂ ಪ್ರಸಿದ್ಧವಾಗಿದೆ. ಹಾಗೆಯೇ ಹೂವುಗಳಿಗೂ, ಕಂಬಳಿಗೂ ಪ್ರಸಿದ್ಧ. ಅಂತಹ ಐತಿಹಾಸಿಕ ಸ್ಥಳದಲ್ಲಿ ನಾನು ಜನಿಸಿದೆ ಅಂತ ಬಹಳ ಧಿಮಾಕು ನನಗೆ. ಇಂತಹ ಧಿಮಾಕು ಮಾಡುವಷ್ಟು ಚೈತನ್ಯ, ಜ್ಞಾನ, ಆತ್ಮವಿಶ್ವಾಸವನ್ನು ತುಂಬಿದವರು ನನ್ನ ಗುರುಮಾತೆಯವರಾದ ಶ್ರೀಮತಿ ಕಾಶೀಬಾಯಿ ಸಿದ್ಧೋಪಂತ ಮತ್ತು ಗುರುಗಳಾದ ಶ್ರೀ ಸಿ.ಎಫ್.ಹೊಂಬಳ ಅವರು.

ನಾನು ನಾಲ್ಕನೇ ತರಗತಿ ಮುಗಿಸುವ ಹೊತ್ತಿಗೆ ಕನ್ನಡವನ್ನು ಚೆನ್ನಾಗಿಯೇ ಓದುತ್ತಿದ್ದೆ. ಆದರೆ ವ್ಯಾಕರಣದ ಗಂಧ ಗಾಳಿ ಗೊತ್ತಿರಲಿಲ್ಲ. ಎರಡರ ಮಗ್ಗಿ ಮಾತ್ರ ಬರುತ್ತಿತ್ತು. ಮುಂದಿನ ಯಾವ ಮಗ್ಗಿನೂ ಬರ್ತಿರಲಿಲ್ಲ. ಆದರೆ, ಆಶ್ಚರ್ಯವೆಂದರೆ ಅವ್ವ ಮಾರುತ್ತಿದ್ದ ಮಲ್ಲಿಗೆ ಮಗ್ಗಿ ಲೆಕ್ಕವನ್ನ ಬಾಯಿಂದಲೇ ಹೇಳುತ್ತಿದ್ದೆ. ಆದರೆ ಈ ಸಾಲಿ ಮಗ್ಗಿ ಬಾಯಿಪಾಠ ಮಾಡುವುದಕ್ಕೆ ನನಗೆ ಆಗಿರಲಿಲ್ಲ. ಆಗ ನನ್ನ ಅಕ್ಕ ಮಹಾದೇವಿಯು ನನ್ನನ್ನು ತಂಗಿಯೊಂದಿಗೆ ಗುರೂಜಿ ಶಾಲೆ ಅಂತಲೆ ನಮ್ಮಲ್ಲಿ ಹೆಸರಾಗಿದ್ದ ಶ್ರೀಮತಿ ಕಾಶೀಬಾಯಿ ಸಿದ್ಧೋಪಂತ ಎಂಬ ಬ್ರಾಹ್ಮಣ ಅಜ್ಜಿಯವರ ಕಡೆಗೆ ಮನೆ ಪಾಠಕ್ಕೆ ಸೇರಿಸಿದರು. ಅಲ್ಲಿಗೆ ಸೇರಿಸಿದ್ದು ಲೆಕ್ಕ-ಮಗ್ಗಿ ಕಲಿಯಲಿ ಎಂದು. ಆದರೆ ನನಗೆ ಮಗ್ಗಿ ಲೆಕ್ಕಕ್ಕಿಂತ ಹೆಚ್ಚಿಗೆ ಆಕರ್ಷಣೆ ಕನ್ನಡ ಭಾಷೆ ಮತ್ತು ವ್ಯಾಕರಣದ ಕಡೆಗೆ. ಏಕೆಂದರೆ ಗುರೂಜಿಯವರ ಕನ್ನಡ ಕಲಿಸುವ ಶೈಲಿ ಅಷ್ಟು ಆಕರ್ಷಕವಾಗಿತ್ತು.

ನನ್ನ ಕನ್ನಡ ಕಲಿಕೆಯ ಮೇಲೆ ವಿಶೇಷ ಪ್ರಭಾವ ಬೀರಿ ನನ್ನನ್ನು ಉತ್ತಮ ವಿದ್ಯಾರ್ಥಿನಿಯನ್ನಾಗಿ ರೂಪಿಸಿದ ನನ್ನ ಗುರುಮಾತೆಯವರಾದ ಹಳ್ಳಿಗರ ಮನದಲ್ಲಿ 'ಕಾಶಮ್ಮ' ಎಂದೇ ಚಿರವಾಗಿ ಉಳಿದಿರುವ ಅವರ ಬಗ್ಗೆ ಹೇಳಲೇಬೇಕು. ಅವರು ಮಹಾದೇವಭಟ್ಟರು ಎಂಬ ಬ್ರಾಹ್ಮಣ ಶಿಕ್ಷಕರ ನಾಲ್ಕು ಜನ ಮಕ್ಕಳಲ್ಲಿ ಎರಡನೆಯವರು. ಅವರು ಹುಟ್ಟಿದ್ದು ಬ್ರಿಟಿಷರ ಕಾಲದಲ್ಲಿ. ಇನ್ನೂ ಹತ್ತನೇ ವಯಸ್ಸನ್ನೂ ಕೂಡ ದಾಟದೇ ಇದ್ದಾಗಲೇ ಅವರಿಗೆ ವಿವಾಹ ಸಂಸ್ಕಾರ ಮಾಡಿದರಂತೆ. ಮುಂದೆ ಅವರು ಹರೆಯಕ್ಕೆ ಕಾಲಿಡುವ ಮೊದಲೆ ಅವರ ಪತಿ ನಿಧನರಾದರು (ಕಾರಣ ನನಗೆ ಗೊತ್ತಿಲ್ಲ). ಆಗಿಂದಲೆ ಕಾಶಮ್ಮನವರಿಗೆ ತಲೆ ಬೋಳಿಸಿ, ಮಡಿ ಉಡಿಸಿದರು. ಆಗಿನಿಂದ 1998-99ರವರೆಗೂ ಅವರು ಲಕ್ಕುಂಡಿಯ ಮಕ್ಕಳಿಗೆ ಅತಿ ಕಡಿಮೆ ಶುಲ್ಕ ಪಡೆದು ವಿದ್ಯಾದಾನ ಮಾಡುತ್ತ ಜೀವನ ನೌಕೆ ನಡೆಸಿದರು. ಅವರಲ್ಲಿ ವಿದ್ಯಾರ್ಜನೆ ಮಾಡಿದ ಸಾವಿರಾರು ಜನರಲ್ಲಿ ನಾನೂ ಒಬ್ಬಳು. ಆದರೆ ಅವರೇ ಹೇಳುತ್ತಿದ್ದಂತೆ ನಾನು ಅವರ ಅಪರೂಪದ ಶಿಷ್ಯಳು. ನನಗೂ ಅಷ್ಟೆ ನನ್ನ ಗುರುಮಾತೆ ಕಾಶಮ್ಮನವರೆಂದರೆ ನನಗೆ ಪ್ರಾಣ.

ನಾನು ಅವರಲ್ಲಿ ವಿದ್ಯಾರ್ಜನೆಗೆ ಸೇರಿಸಲ್ಪಟ್ಟ ದಿನದಿಂದ ನನಗೆ ಹೊಸ ಲೋಕ ಗೋಚರವಾಗುತ್ತಾ ಹೋಯಿತು. ಅಲ್ಲಿಯವರೆಗೆ ಕನ್ನಡ ಅಂದರೆ ಶಾಲಾ ತರಗತಿಯ ಕನ್ನಡ ಪಾಠ-ಪದ್ಯಗಳನ್ನು ಓದುವುದು ಅಷ್ಟೆ ಎಂದು ತಿಳಿದಿದ್ದ ನನಗೆ ಕನ್ನಡದ ವಿಸ್ತಾರವನ್ನು ತಿಳಿಸಿದವರು ಗುರೂಜಿ. ಅವರು ಪ್ರತಿ ಗುರುವಾರ ದಿನ ಸಂಜೆ ತರಗತಿಯಲ್ಲಿ ಯಾವುದಾದರೊಂದು ಕನ್ನಡ ಕಥೆಯನ್ನು ಹೇಳುತ್ತಿದ್ದರು. ಕನ್ನಡ ಮೂಲಾಕ್ಷರಗಳು, ಅವುಗಳ ರೂಪು-ರಚನೆ, ಉಚ್ಛಾರ-ವರ್ಗೀಣ, ಪದ, ವಾಕ್ಯಾಂಗ, ವಾಕ್ಯ, ಕರ್ತೃ, ಕರ್ಮ, ಕ್ರಿಯಾಪದ, ವಿಶೇಷಣ... ಹೀಗೆ ಅವರು ಒಂದೊಂದನ್ನೇ ತಿಳಿಸಿ ಹೇಳುತ್ತಾ ಹೋದಂತೆ ನನಗೆ ಕನ್ನಡ ಅಂದರೆ ಅದೆಷ್ಟು ಹೆಮ್ಮೆ ಆಗಿಬಿಟ್ಟಿತೆಂದರೆ ತಾಯಿಗೆ ಹೂವಿನ ಮೂಟೆ ಕೊಡಲು ಪೇಟೆಗೆ ಹೊರಟರೂ, ತಂದೆಗೆ ಬುತ್ತಿ ಕೊಡಲು ಹೊಲಕ್ಕೆ ಹೊರಟರೂ, ಗೆಳತಿಯರನ್ನು ಶಾಲೆಗೆ ಕರೆಯಲು ಅವರ ಮನೆಗೆ ಹೊರಟರೂ, ಕೊನೆಗೆ ಒಂದಕ್ಕೆ ಎರಡಕ್ಕೆ ಹೊರಟರೂ ನನ್ನ ಅಕರ್ಮಕ, ಸಕರ್ಮಕ ಕರ್ತರಿ ಪ್ರಯೋಗಗಳು ಅನೂಚಾನವಾಗಿ ಮನದಲ್ಲಿ ಲಗ್ಗೆ ಹಾಕುತ್ತಲೇ ಇರುತ್ತಿದ್ದವು.

ಪ್ರತಿ ವಿದ್ಯಾರ್ಥಿ/ನಿಯೂ ಗುರೂಜಿಗೆ ನಿತ್ಯವೂ ಒಂದು ವಿಷಯದ ಮೇಲೆ ನಿಬಂಧ ಬರೆದು ತೋರಿಸಬೇಕಿತ್ತು. ಕಾಗುಣಿತ, ವ್ಯಾಕರಣಕ್ಕೆ ಎಷ್ಟು ಪ್ರಾಧಾನ್ಯತೆಯೋ ಅಷ್ಟೇ ಪ್ರಾಧಾನ್ಯತೆ ವಿಷಯದ ಆಯ್ಕೆಗೂ ಇರುತ್ತಿತ್ತು. ಹೀಗೆ ನಿಬಂಧಗಳನ್ನು ಬರೆದು ಗುರೂಜಿಯವರಿಂದ ಭಲೇ ಅನ್ನಿಸಿಕೊಳ್ಳಲು ನಾನು ಸದಾ ಕಾತುರಳಾಗಿರುತ್ತಿದ್ದು, 'ಭಲೇ' ಶಬ್ದವನ್ನು ಮೊದಲು ನಾನೆ ಪಡೆದು ಧನ್ಯಳಾಗುತ್ತಿದ್ದೆ. ನನ್ನ ಕನ್ನಡ ನಿಬಂಧಗಳಲ್ಲಿ ಅಪ್ಪ-ಅಮ್ಮ, ಗುರು ಶಿಷ್ಯರು, ಆಕಳು-ಹುಲಿ, ಬೆಕ್ಕು-ಇಲಿ, ರೊಟ್ಟಿ-ಪಲ್ಲೆ, ಹೊಲ-ಮನೆ, ಪಾಠಿ-ಪುಸ್ತಕ ಹೀಗೆ ಎಲ್ಲರೂ ಎಲ್ಲವೂ ಜೊತೆಯಲ್ಲೇ ಬಂದು ಹೋಗುತ್ತಿದ್ದುದುಂಟು. ಹೋಗುತ್ತಿದ್ದುದುಂಟು ಅಂತ ಏಕೆ ಹೇಳಿದೆನೆಂದರೆ ಅದನ್ನೆಲ್ಲಾ ಬರೆಯಲು ಪಾಠಿ ಬಳಪ ಉಪಯೋಗಿಸುತ್ತಿದ್ದೆವು!

ಹೀಗೆ ನಿತ್ಯವೂ ಕೀರ್ತನೆ, ವಚನ, ಕಥೆ, ನಿಬಂಧ ಬರಹ, ವರ್ಷಕ್ಕೊಂದು ಸಲ ನಾಟಕ, ನೃತ್ಯ ಇತ್ಯಾದಿಗಳ ಮೂಲಕ ಮಾತೃಭಾಷೆಯಾದ ಕನ್ನಡ ಭಾಷೆಯ ಮೇಲೆ ಅಗಾಧ ಅಭಿಮಾನ, ಮಮತೆ ನನ್ನಲ್ಲಿ ಉಕ್ಕುವಂತೆ ಮಾಡಿದವರು ನನ್ನ ಗುರೂಜಿ. ಅವರಿಂದ ನಾನು ಕನ್ನಢಾಭಿಮಾನಿಯಾದೆ.

ಮುಂದೆ ಬಿ.ಎಚ್.ಪಾಟೀಲ್ ಹೈಸ್ಕೂಲಿಗೆ ಹೋದಾಗ ಅಲ್ಲಿ ಕನ್ನಡ ಶಿಕ್ಷಕರಾಗಿದ್ದವರು ಸಿ.ಎಫ್.ಹೊಂಬಳ ಎಂಬ ಗುರುಗಳು. ಅವರ ಪಾಠ ಕೇಳುತ್ತಿದ್ದರೆ ಹೊರಗಿನ ಯಾವ ವಿಷಯವೂ ಮನಸ್ಸಿನ ಸಮೀಪ ಸುಳಿಯುತ್ತಿರಲಿಲ್ಲ. ಅವರು ತನ್ಮಯರಾಗಿ ಪಾಠ ಮಾಡುತ್ತಿದ್ದಷ್ಟೆ ಮೈಯೆಲ್ಲಾ ಕಣ್ಣು ಕಿವಿಯಾಗಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳಲ್ಲಿ ನಾನೂ ಒಬ್ಬಳು. ಅವರು, ಎಸ್.ವ್ಹಿ.ಹಟ್ಟಿ ಬರವಣಿಗೆ ಶೈಲಿ ಭಾಳ ಚೊಲೊ ಐತಿ ಅಂತ ಹೊಗಳುತ್ತಲೇ ನನ್ನನ್ನು ಬರವಣಿಗೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು.

ನನ್ನಲ್ಲಿ ಸ್ಫೂರ್ತಿ ತುಂಬಿ ಕನ್ನಡಕ್ಕೆ ಒಂದು ಕಾಣಿಕೆಯಂತೆ ನನ್ನನ್ನು ರೂಪಿಸಿದ ನನ್ನ ಗುರುಮಾತೆ ಹಾಗೂ ಗುರುಗಳು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಪದತಲದಲ್ಲಿ ಕುಳಿತು ಪಾಠ ಕೇಳಿದ, ಕ್ಷಣಗಳು ಈಗಷ್ಟೆ ನಡೆದ ಘಟನೆಯಂತೆ ಕಣ್ಮುಂದೆ ತೇಲಿ ಬರುತ್ತಿವೆ. ಅವರ ಶುಭಾಶಯ, ಶ್ರಮ ನನ್ನ ವ್ಯಕ್ತಿತ್ವದೊಂದಿಗೆ ಲೀನವಾಗಿ ಆ ಮೂಲಕ ಅವರು ಚಿರವಾಗಿದ್ದಾರೆ.

English summary
This is the 3rd prize winning story by Savitri Hatti from Lakkundi, Gadag district. Gunamukha, Oneindia-Kannada columnist had organized inspirational short story competition. Here Savitri writes about the teachers who instilled Kannada love in her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X