ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡ್ಲೇಕಾಯಿ ವೃದ್ಧ ಮತ್ತು ಒಣಗಿದ್ದ ಟೀ ಗ್ಲಾಸ್

By ಪ್ರದೀಪ್ ಪರಮೇಶ್ವರ್, ಭದ್ರಾವತಿ
|
Google Oneindia Kannada News

Pradeep from Bhadravati
ಜೀವನ ಒಂದು ಚಾಲೇಂಜ್. ಈ ಭೂಮಿಯ ಮೇಲೆ ಬದುಕಲು ಆಸೆ ಇಟ್ಟುಕೊಂಡವನು ಈ ಸವಾಲನ್ನು ಸ್ವೀಕರಿಸಲೇಬೇಕು. ಜೀವನದಲ್ಲಿ ಕಷ್ಟನಷ್ಟಗಳು ಬರುವುದು ಸಹಜ. ಆದರೆ, ಈ ಸವಾಲನ್ನು ಸ್ವೀಕರಿಸಿ ತನ್ನ ಬದುಕನ್ನು ತನಗೆ ಬೇಕಾದ ಹಾಗೆ ರೂಪಿಸಿಕೊಂಡವನು ಜಯಿಸುತ್ತಾನೆ. ಬದುಕಿನ ವಿವಿಧ ಘಟ್ಟಗಳಲ್ಲಿ ಈ ಸವಾಲನ್ನು ಸ್ವೀಕರಿಸಲು, ನಮಗೆ ಹಿಂದಿನಿಂದ ಪುಷ್ ಮಾಡುವಂಥ ಸ್ಫೂರ್ತಿ ಎಲ್ಲಿಂದಲಾದರೂ ಬರಬಹುದು. ಅಂಥದೊಂದು ಸ್ಫೂರ್ತಿಯ ಸೆಲೆಯ ಜಾಡು ಹಿಡಿದು ಬದುಕು ರೂಪಿಸಿಕೊಂಡವರ ಕಥೆ ಇಲ್ಲಿದೆ. 'ಶುಭಸಂಕಲ್ಪ' ಸಣ್ಣಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ಭದ್ರಾವತಿಯ ಪ್ರದೀಪ್ ಅವರು ತಮ್ಮ ಕಥೆಯನ್ನು ನಿವೇದಿಸಿಕೊಂಡಿದ್ದಾರೆ, ಓದಿರಿ. - ಸಂಪಾದಕ.

***
ಮೆಕ್ಯಾನಿಕಲ್ ಇಂಜಿನೀಯರಿಂಗ್‌ನ ನಾಲ್ಕನೇ ಸೆಮಿಸ್ಟರ್‌ನ ರಿಸಲ್ಟ್ ಹೊರಬಂದಿತ್ತು, ನಾನು ಡಿಸ್ಟಿಂಕ್ಷನ್ ಪಡೆದು ಪಾಸಾಗಿರಲಿಲ್ಲ. ಮೂರನೇ ಮತ್ತು ನಾಲ್ಕನೇ ಸೆಮ್ನ ಆರು ವಿಷಯಗಳಲ್ಲಿ ಅನುತ್ತೀರ್ಣವಾಗಿದ್ದೆನು. ಅಂದರೆ ಇಯರ್ ಬ್ಯಾಕ್ (ಒಂದು ವರ್ಷ ಮನೆಯಲ್ಲಿ ಕೂರಬೇಕಾಗಿತ್ತು). ಕಥೆಯ ಮುಂದಕ್ಕೆ ಹೋಗುವ ಮುನ್ನ ನನ್ನ ಬಗ್ಗೆ ಸ್ವಲ್ಪ ಹೇಳುತ್ತೇನೆ. ಪಿ.ಯು. ನಂತರ ಬಿ.ಎ.ನೋ ಅಥವಾ ಬಿ.ಕಾಂ.ನೋ ಓದೋಣ ಎಂದು ಅಂದುಕೊಂಡವನು ನಾನು. ಆದರೆ ನನ್ನ ಅಪ್ಪನ ಅಪ್ಪಣೆಯೇ ಬೇರೆಯಾಗಿತ್ತು. ನಾನು ಇಂಜಿನೀಯರಿಂಗ್ ಮಾಡಲೇಬೆಕೆಂದು ಹಠ ಹಿಡಿದರು. ಅದರಂತೆ ಮುಂದೆ ನಾನು ಇಂಜಿನೀಯರಿಂಗ್ ಸೇರಲೇಬೇಕಾಯ್ತು. ಇನ್ನು ನನ್ನ ತಂದೆ ಲಕ್ಷಾದೀಶ್ವರನೋ ಕೋಟ್ಯಾದೀಶ್ವರನೂ ಅಲ್ಲ, ಆತ ಒಬ್ಬ ಟೀ ಅಂಗಡಿ ಮಾಲೀಕ.

ಅಂತು ಇಂತು ಪರೀಕ್ಷೆಯ ಫಲಿತಾಂಶ ಮನೆಗೆ ಮುಟ್ಟಿತು. ತಿಳಿದ ತಕ್ಷಣವೇ ಮನೆಯಿಂದ ಅಮ್ಮನ ಫೋನ್ ಊರಿಗೆ ಬಾರೋ ಅಂತ. ಆಕೆಗೆ ಕಳವಳ ಇರುವನೊಬ್ಬನೇ ಮಗ ಏನಾದರು ಅನಾಹುತ ಮಾಡಿಕೊಂಡಾನೂ ಎಂದು. ಏನು ಮಾಡೋದು ನನ್ನ ಪರಿಸ್ಥಿತಿ ತ್ರಿಶಂಕುವಿನಂತಾಗಿತ್ತು. ಊರಿಗೆ ಹೋದರೆ ನೆಂಟರ ಕಾಟ, ನೆರೆಹೊರೆಯ ಜನರ ಕಾಟ. ಏನೋ ತಮ್ಮ ರಜಾನಾ? ನಮ್ಮ ಹುಡುಗನಿಗೆ ಕ್ಯಾಂಪಸ್ ಆಯ್ತು, ನಿಂದು? ಎಂಬ ಪ್ರಶ್ನೆಗಳು ಖಾತ್ರಿಯಾಗಿದ್ದವು. ಊರಿಗೆ ಹೋಗದೆ ಇದ್ದರೆ ಅಮ್ಮನ ಕಾಟ, ಹೇಗೋ ಒಪ್ಪಿ ಮನೆಗೆ ಹೋಗಲು ಸಿದ್ದವಾದೆ.

ಅಂದು 4.30ಕ್ಕೆ ಶಿವಮೊಗ್ಗ ಇಂಟರ್ ಸಿಟಿ ರೈಲಿತ್ತು. ಎರಡು ಗಂಟೆಗೆ ನಾನಿದ್ದ ರೂಮನ್ನು ತೊರೆದೆ. ನಿಮಗೆ ಗೊತ್ತಲ್ಲಾ ಬೆಂಗಳೂರು ನಗರದ ರಕ್ಕಸ ಟ್ರಾಫಿಕ್. ಹಾಗೂ - ಹೀಗೂ ರೈಲ್ವೇ ನಿಲ್ದಾಣ ತಲುಪಿ, ಹನುಮಂತನ ಬಾಲದಂತಹ ಕ್ಯೂನಲ್ಲಿ ಟಿಕೆಟು ಪಡೆದು, ದಿನ ಯಾಂತ್ರಿಕ ಬದುಕಿನಲ್ಲಿ ನುಗ್ಗಾಡುವ ಜನರ ನಡುವೆ ನುಸುಳಿ ರೈಲಿನಲ್ಲಿ ಕುಳಿತೆ. ಮನಸ್ಸಿನಲ್ಲಿ ಏನೋ ಸಂಕಟ, ತಳಮಳ ಅವತ್ತಿನ ಬೆಳಕು ಸಹ ನನ್ನ ಮನಸ್ಸಿನ ಹಾಗೆ ಮಂದಗತಿಯಾಗಿತ್ತು.

ತಲೆಯಲ್ಲಿ ನಾನಾ ಯೋಚನೆಗಳು, ಕಾಲೇಜಿನಲ್ಲಿ ನನಗಾದ ಅವಮಾನ, ಅಪಮಾನ ಅಂಕಪಟ್ಟಿಯಲ್ಲಿದ್ದ ಕೊನೆಯ ಸಾಲಿನ ಹೆಸರು ಇತ್ಯಾದಿ ಇತ್ಯಾದಿಗಳು ನನ್ನ ಕಣ್ಣಿಗೆ ರಾಚುತಿತ್ತು. ಬದುಕು ಶೂನ್ಯ, ಸುಮ್ಮನೆ ವ್ಯರ್ಥ. ಬೇಡಪ್ಪ ಈ ಜನರ ಮಧ್ಯೆ ಬದುಕುವುದು ಬೇಡ, ದೂರ ಹೋಗೋಣ, ಇಲ್ಲ ಬದುಕಿಗೆ ವಿದಾಯ ಹೇಳೋಣ ಎಂಬ ಪ್ರಶ್ನೆಗಳು ನನಲ್ಲಿ ಸ್ಪರ್ಧೆಗಿಳಿದಿದ್ದವು. ರೈಲು ಚಲಿಸಲು ಶುರುವಾಗಿ ಕೆಲ ಗಂಟೆಗಳಾಗಿತ್ತು.

ಸಂತೆಯಂತೆ ಇದ್ದ ರೈಲಿನ ಬೋಗಿಯಲ್ಲಿ ನಾನು ಸಮಸ್ಯೆ ಮಾರುವ ವ್ಯಾಪಾರಿಯಂತಾಗಿದ್ದೆ. ಚಿಂತೆಯಲ್ಲಿ ತಲ್ಲೀನನಾದ ನನಗೆ ಸಮಯದ ವೇಗವು ಮತ್ತು ರೈಲಿನ ವೇಗವು ತಿಳಿಯಲಾಗಲಿಲ್ಲ. ಕೆಲ ಸಮಯದ ಬಳಿಕ ಸಾಕಷ್ಟು ಪ್ರಯಾಣಿಕರು ಖಾಲಿಯಾಗಿದ್ದರು. ಜಿಟಿ ಜಿಟಿ ಮಳೆಯಲ್ಲಿ ರೈಲು ಅರಸೀಕೆರೆಯನ್ನು ತಲುಪಿತ್ತು, ದಿನ ಜನ-ಜಂಗುಳಿಯಲ್ಲಿ ಇರುತ್ತಿದ್ದ ಅರಸೀಕೆರೆ ಸ್ಟೇಷನ್ ಜ್ವರ ಬಂದಂತೆ ಮಂಕಾಗಿತ್ತು. ಕಿಟಕಿಯ ಕಂಬಿಯಲ್ಲಿ ಮಳೆಯ ಹನಿಯು ತೊಟ್ಟಿಕ್ಕುತ್ತಿರುವುದನ್ನೇ ಗಮನಿಸುತ್ತಿದ್ದ ನನಗೆ ರೈಲು ಹೊರಡುವ ಮುನ್ನ ತನ್ನ ಕೀರಲು ಧ್ವನಿಯಲ್ಲಿ ಅರಸೀಕೆರೆ ಸ್ಟೇಷನ್‌ಗೆ ವಿದಾಯವ ಹೇಳಿ ಮುನ್ನುಗ್ಗ ತೊಡಗಿದೆ ಎನ್ನಿಸುತಿತ್ತು.

ಮತ್ತದೆ ಚಿಂತೆಯ ಚಕ್ರದಲ್ಲಿ ಮನಸ್ಸು ಗಿರಕಿ ಹೊಡೆಯತೊಡಗಿತ್ತು. ಆದೇ ಸಮಯದಲ್ಲಿ ಕಡಲೇಕಾಯಿ ಮಾರುತ್ತ ಬಂದ ವೃದ್ಧ ಯಾರೋ ಪರಿಚಿತರನ್ನು ಕಂಡಂತೆ ನನ್ನನ್ನು ಅನೇಕ ಬಾರಿ ಕಣ್ಣರಳಿಸಿ ನೋಡಿ ಮುನ್ನಡೆದ. ಆತ ಮುಂದೆ ಹೋದಾಗ ನನ್ನ ಮನಸ್ಸು ಪತ್ತೇದಾರಿಯ ವೇಷ ಹಾಕತೊಡಗಿತ್ತು. ಯಾರು ಆ ವೃದ್ದ? ನೋಡಲು 80ರ ಆಸುಪಾಸಿರಬಹುದು. ಕೃಷಕಾಯನಾಗಿದ್ದ, ನೋಡಿದರೆ ಬ್ರಾಹ್ಮಣರ ಮನೆತನದವನಂತೆ ಕಾಣುತ್ತಿದ್ದ. ಆತನ ಈಗಿನ ಪರಿಸ್ಥಿತಿಗೆ ಬಲವಾದ ಘಟನೆಯೇ ಕಾರಣವಾಗಿರಬಹುದೆಂದು ಸ್ವಲ್ಪ ಯೋಚಿಸುವವರಿಗೆ ತಿಳಿಯುತಿತ್ತು.

ನನ್ನನ್ನೇಕೆ ಹಾಗೆ ನೋಡಿದ ಎಂದು ಯೋಚಿಸುತ್ತದ್ದೆ. ಮುಂದಿನ ಎಲ್ಲಾ ಬೋಗಿಗಳಿಗೆ ಹೋಗಿ ಮತ್ತೆ ವಾಪಸ್ಸಾದ ವೃದ್ದ ನನ್ನನ್ನು ಕಂಡು, "ಮಗು ನೀನು ನನ್ನ ಮಗನ ಹಾಗಿದ್ದೀಯ, ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ" ಎಂದು ಒಂದು ಬೋಗಸೆ ಕಡಲೇಕಾಯಿಯನ್ನು ನನ್ನ ಕೈಗಿಟ್ಟ. ನಾನು ಜೇಬಿನಿಂದ 5 ರೂಪಾಯಿ ಎತ್ತಿ ಆತನಿಗೆ ನೀಡಲು ಮುಂದಾದೆ, ಆತ ನಿರಾಕರಿಸಿದ, ಅಷ್ಟರಲ್ಲಿ ರೈಲು ಮುಂದಿನ ನಿಲ್ದಾಣದಲ್ಲಿ ನಿಂತಿತು. ಸರಸರನೆ ಇಳಿದ ವೃದ್ಧ ಸ್ಟೇಷನ್‌ನ ಕಂಬಕ್ಕೊರಗಿ ನನ್ನನ್ನೇ ನೋಡುತ್ತಿದ್ದ ವೃದ್ಧ. ಕಡೆಗೆ ಏನು ಗೊತ್ತಿಲ್ಲದೆ ಭಾವನಾತ್ಮಕವಾಗಿ ಕೈಬೀಸಿದೆ.

ರೈಲು ಮುಂದೆ ಮುಂದೆ ಸಾಗಿದಂತೆ ಆ ವೃದ್ಧ ಕತ್ತಲಲ್ಲಿ ಮರೆಯಾಗತೊಡಗಿದ. ಮರೆಯಾದ ವೃದ್ಧ ನಾನಿಲ್ಲದಿದ್ದರೂ ಭವಿಷ್ಯದಲ್ಲಿ ನನ್ನ ಪರಿವಾರದ ಪರಿಸ್ಥಿತಿಯನ್ನು ಬಿಂಬಿಸತೊಡಗಿದ. ಸುಮಾರು ಹೊತ್ತು ಕೇಬಲ್ ಇಲ್ಲದ ಟಿ.ವಿ.ಯಂತೆ ಸುಮ್ಮನೆ ಕುಳಿತಿದ್ದೆ. ವೃದ್ಧನ ಜಾಗದಲ್ಲಿ ನನ್ನ ತಂದೆ ನೆನಪಾಗತೊಡಗಿದ.

ಅಂತು-ಇಂತು ಅಂದಿನ ಪ್ರಯಾಣ ಮುಗಿಸಿ ಮನೆ ಸೇರಿದೆ. ಅಮ್ಮನಿಗೆ ಸಮಾಧಾನ. ಅಪ್ಪನ ಅರೋಗ್ಯ ಕ್ಷೀಣಿಸಿದೆ ಎಂದು ಆತನ ಮುಖವೇ ಸಾರುತ್ತಿತ್ತು. ಕಣ್ಣಲ್ಲೇ ಮಗನಿಗೆ ಊಟ ಬಡಿಸು ಎಂದು ಹೇಳಿ ಶುಗರ್ ಮಾತ್ರೆಯನ್ನು ಕೈಯಲ್ಲಿಡಿದು ಜಗಲಿಯಲ್ಲಿ ಕುಳಿತರು.

ದಿನೇ ದಿನೇ ತಂದೆಯ ಆರೋಗ್ಯ ಕ್ಷೀಣಿಸತೊಡಗಿತ್ತು. ಅನಿವಾರ್ಯವಾಗಿ ಟೀ ಅಂಗಡಿಯ ಉಸ್ತುವಾರಿ ನನ್ನ ಹೆಗಲಿಗೆ ಬಿತ್ತು. ಕೆಲಸವನ್ನೇನೋ ಮನಃಪೂರ್ವಕವಾಗಿ ಮಾಡುತ್ತಿದ್ದೆ. ಆದರೆ ಈ ಹಾಳಾದ ಜನರು ಒಬ್ಬ ಉಗ್ರವಾದಿಗೆ ಪ್ರಶ್ನಿಸುವಂತೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಕಾಲೇಜ್ ಬಗ್ಗೆ, ವಿಷಯ ಫೇಲ್ ಆಯ್ತ ಎಂದು... ಒಂದು ದಿನ ಹೀಗೆ ತಲೆ ತಿಂತಾ ಇದ್ದ ರಾಜಣ್ಣನಿಗೆ, "ನಿಮ್ಮ ಮಗಳು ಓಡೋದ್ಲಂತೆ" ಅಂದೆ, ಆತ ಮರು ಮಾತಾಡಾದೆ ಹೊರಗೆ ನಡೆದ ಆದರೆ ನನಗೇನೆ ಬೇಸರವಾಯ್ತು.

ಟೀ ಗ್ಲಾಸ್ ಶುದ್ಧ ಮಾಡೋಕೆ ಒಬ್ಬ ಕ್ಲೀನರ್ ಇರುತ್ತಿದ್ದ. ಇಲ್ಲ ಅಂದ್ರೆ ಅಮ್ಮನೇ ತೊಳೀತ್ತಿದ್ದು. ಒಂದು ದಿನ ಕ್ಲೀನರ್ ಕುಮಾರ ಕೈಕೊಟ್ಟ. ಅಮ್ಮನೂ ಮನೆಗೆ ಹೋಗಿದ್ರು. ಇದ್ದ ಎಲ್ಲ ಟೀ ಗ್ಲಾಸ್ ಖಾಲಿಯಾಗಿತ್ತು. ಎಲ್ಲ ಗ್ಲಾಸುಗಳೂ ಟೀಯಿಂದ ಒಣಗಿದ್ದವು. ಎಲ್ಲಾ ಗ್ಲಾಸ್‌ನ ಲೋಟವನ್ನು ಟ್ಯಾಪ್ ಚಾಲೂ ಮಾಡಿ ತೊಳೀತಿರುವಾಗ ನನ್ನ ಒಳ ಮನಸ್ಸು ಪುಸುಗುಡೋಕೇ ಶುರುಮಾಡತೊಡಗಿತ್ತು.

ನಿನ್ನಪ್ಪನೇ ಸರಿ, ಆತ ಮಾಡಿದ್ದೇ ಸರಿ... ಕೈಯಲ್ಲಿ ಒಂದೊಂದೇ ಗ್ಲಾಸ್ ತೊಳಿತ ಇದ್ದೆ... ಆದರೆ ತಲೆಯಲ್ಲಿ ಮಾತ್ರ, ಯೋಚನೆಗಳು ಥೇಟರ್‌ನ ರೀಲ್‌ನ ಹಾಗೆ ಓಡುತ್ತಾ ಇತ್ತು. ತನ್ನ ಮಗ ಲೋಟ ತೊಳಿಬಾರದು ಅಂತ ನನ್ನನ್ನು ಇಂಜಿನೀಯರಿಂಗ್ ಸೇರಿಸಿದ್ದು ಆತ ಪಾಪ! ಎಷ್ಟು ಜನರ ಲೋಟ ತೊಳೆದಿರಲಿಕ್ಕಿಲ್ಲಾ, ಎಷ್ಟು ಜನರ ಮಾತು ಕೇಳಿರಲಿಕ್ಕಿಲ್ಲ ಅನ್ನಿಸತೊಡಗಿತ್ತು.

ವೃದ್ಧ ಮತ್ತು ಗ್ಲಾಸಿನ ಸನ್ನವೇಷಗಳೇ ನನಗೆ ಸ್ಪೂರ್ತಿಯ ಸೆಲೆಯಾಯಿತು. ಈಗ ನನ್ನ ತಂದೆಯ ಆರೋಗ್ಯ ಚೇತರಿಕೆಯಾಗಿದೆ, ನಾನೂ ಎಲ್ಲಾ ವಿಷಯದಲ್ಲೂ ತೇರ್ಗಡೆಯಾಗಿ ಒಂದು ಸಣ್ಣ ಕಂಪನಿಯಲ್ಲಿ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಮ್ಮನ್ನು ಉತ್ತೇಜಿಸಲು ಪ್ರೇರೇಪಿಸಲು ಮಹಾನ್ ಧೀಮಂತ ವ್ಯಕ್ತಿಗಳು ಬೇಕಾಗಿಲ್ಲ, ಮಹಾನ್ ಘಟನೆಗಳು ಬೇಕಾಗಿಲ್ಲ. ನಮ್ಮಲ್ಲಿ ನಡೆಯುವ ಕೆಲ ಸಂಗತಿಗಳು, ಕೆಲ ವ್ಯಕ್ತಿಗಳೇ ಕಾರಣವಾಗಿರುತ್ತಾರೆ. ಇದು ನನ್ನ ಕಥೆ! ನಿಮ್ಮ ಕಥೆ ಏನು? ನೆನಪಿನ ಬುತ್ತಿ ಬಿಚ್ಚಿಡಿ.

English summary
Life is a challenge. Whoever wants to live on the earth have to accept this challenge to move ahead and succeed. You won't know who inspires you to take up the challenge or where it comes from. Pradeep from Bhadravati has won first prize in Shubhasankalpa short story contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X