ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಂಕಾರದ ಮಾತು ನನಗೇ ಬುದ್ಧಿ ಕಲಿಸಿತ್ತು!

By ಸುರೇಶ ಎಚ್.ಸಿ., ಸಿಂಗಪುರ
|
Google Oneindia Kannada News

Suresha Bhatta, Singapore
"ನನ್ನ ಹತ್ತಿರದ ಸಂಬಂಧಿಕರ ಮದುವೆಯನ್ನು ನೋಡಲು ನಾನು ಹೋಗಬೇಕು ಅಂತ ಕೇಳಿದರೆ ಕೊಡೋಲ್ಲ ಅಂದು ಬಿಟ್ಟರಲ್ಲ - ಎಷ್ಟು ಕೊಬ್ಬು ಇವರಿಗೆ! ನಾನು ಹರಿಶ್ಚಂದ್ರನಂತೆ ಹೋಗಿ ಇದ್ದುದ್ದನ್ನು ಇದ್ದ ಹಾಗೆಯೇ ಹೇಳಬಾರದಿತ್ತು! ಸತ್ಯವಂತರಿಗಿದು ಕಾಲವಲ್ಲ, ಮದುವೆಗೆ ಇನ್ನೂ 3 ವಾರವಿದೆ, ಈಗೇಕೆ ಯೋಚನೆ? ಮದುವೆಯ ದಿನ ಹತ್ತಿರ ಬರಲಿ - ನಾನು ನನ್ನ ಬುದ್ದಿವಂತಿಕೆಯನ್ನು, ನನಗೆ ಬೇಕಾದ್ದನ್ನು ಸಾಧಿಸಿ ತೋರಿಸುತ್ತೇನೆ!" ಎಂಬ ನನ್ನ ಅಹಂಕಾರದ ಮಾತುಗಳು ಕಡೆಗೆ ನನಗೇ ಬುದ್ಧಿ ಕಲಿಸಿದ್ದವು.

***
ಇದು ಸುಮಾರು 1986ರಲ್ಲಿ ನಡೆದ ಘಟನೆ. ನಾನು ಬೆಂಗಳೂರಿನಲ್ಲಿ ನನ್ನ ಎರಡನೇ ವರ್ಷದ ಡಿಪ್ಲೋಮಾ ಓದುತ್ತಿದ್ದೆ. ನಾವು ಕ್ಯಾಂಪಸ್‌ನಲ್ಲೇ ಇರಬೇಕಾಗಿದ್ದು, ಕೇವಲ ಶನಿವಾರ ಮಧ್ಯಾಹ್ನ ಮತ್ತು ಭಾನುವಾರ ಮಾತ್ರ ಕ್ಯಾಂಪಸ್‌ನಿಂದ ಆಚೆ ಹೋಗಲು ಅನುಮತಿಯಿರುತ್ತಿತ್ತು.

ಮೂರನೇ ಸೆಮೆಸ್ಟರ್ ಮಧ್ಯದಲ್ಲಿ ನನ್ನ ಹತ್ತಿರದ ಸಂಬಂಧಿಕರೊಬ್ಬರ ಮದುವೆ ನಿಶ್ಚಯವಾಗಿತ್ತು. ನಾನು ಶಿಸ್ತಿನ ಸಿಪಾಯಿಯಂತೆ ನನ್ನ ತರಗತಿಯ ಉಪಾಧ್ಯಾಯರ ಬಳಿ ಒಂದು ದಿನದ ರಜೆ ಕೇಳಿದೆ. ಅವರು ಮುಲಾಜಿಲ್ಲದೇ ಸಾಧ್ಯವಿಲ್ಲ ಎಂದರು. ಮದುವೆಗೆ ಇನ್ನೂ 3 ವಾರವಿದ್ದುದರಿಂದ ಆಗ ಸುಮ್ಮನಾದೆ. ಮದುವೆಯ ದಿನ ಹತ್ತಿರ ಬಂದಾಗ ನಾನು ವಾರಾಂತ್ಯದಲ್ಲಿ ಹೊರಟು, ಊರಿಗೆ ಹೋಗಿ ಸೋಮವಾರ ಮದುವೆ ಮುಗಿಸಿ ಮಂಗಳವಾರ ಬೆಳಿಗ್ಗೆ ಕ್ಯಾಂಪಸ್‌ಗೆ ಬಂದೆ. ಯಾವುದಕ್ಕೂ ಇರಲಿ ಅಂತ ವೈದ್ಯರೊಬ್ಬರ ಬಳಿ ಹೋಗಿ ಅನಾರೋಗ್ಯದ ಪ್ರಮಾಣಪತ್ರವನ್ನು ತಂದಿದ್ದು, ಅದನ್ನು ಸಲ್ಲಿಸಿದೆ.

ಪಾಠ-ಪ್ರಕರಣ ಎಂದಿನಂತೆ ಪ್ರಾರಂಭವಾಗಿತ್ತು. ಸುಮಾರು 3-4 ದಿನಗಳ ನಂತರ ಉಪ-ಪ್ರಾಂಶುಪಾಲರಿಂದ ಕರೆ ಬಂತು. ನಾನು ಅವರ ಆಫೀಸಿಗೆ ಹೋದೆ. ಅವರು "ನೀನು ಮದುವೆಗೆ ಹೋಗಿದ್ದು, ಸುಳ್ಳು ಪತ್ರವನ್ನು ಸಲ್ಲಿಸ್ಸಿದ್ದು ಎಲ್ಲಾ ನಮಗೆ ಗೊತ್ತು. ನಿನಗೆ ಎಚ್ಚರಿಕೆಯ ಪತ್ರ (Warning Letter) ಕೊಡುತ್ತಿದ್ದೇವೆ. ಇದರ ಒಂದು ಪ್ರತಿಯನ್ನು ನಿನ್ನ ಪೋಷಕರಿಗೂ ಕಳಿಸಿದ್ದೇವೆ. ಇನ್ನೊಮ್ಮೆ ಈ ರೀತಿ ಏನಾದರೂ ಕಂಡುಬಂದಲ್ಲಿ ನಿನ್ನನ್ನು ಡಿಸ್‍ಮಿಸ್ ಮಾಡುತ್ತೇವೆ" ಎಂದರು. ಸುಳ್ಳನ್ನು ಸತ್ಯವೆಂದು ಪ್ರತಿಪಾದಿಸುವ ಜಾಣತನವಿಲ್ಲದೇ ನಾನು ಕೂಡಲೇ ನನ್ನ ತಪ್ಪನ್ನು ಒಪ್ಪಿಕೊಂಡೆ. "ನಿನ್ನ ಬುದ್ಧಿವಂತಿಕೆಯನ್ನು ಈ ರೀತಿಯಲ್ಲಿ ಉಪಯೋಗಿಸುವ ಬದಲು ಓದಿನ ಮೇಲೆ ಗಮನ ಕೊಡು" ಎಂದು ಅವರು ಕಿವಿಹಿಂಡಿ ಕಳಿಸಿದರು.

ಪಿಯುಸಿಯವರೆಗೆ ಹಳ್ಳಿಯಲ್ಲಿ, ಕನ್ನಡ ಮಾಧ್ಯಮದಲ್ಲಿ ಕಲಿತ, ಸರಿಯಾಗಿ ಇಂಗ್ಲಿಷಿನಲ್ಲಿ ಮಾತನಾಡಲು ಬರದ ನಾನು ಆಗ ಬೆಂಗಳೂರಿನಲ್ಲಿ, ಅಂತರ-ರಾಜ್ಯದ ಬುದ್ಧಿವಂತ ಮಕ್ಕಳ ನಡುವೆ ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿದ್ದು, ತರಗತಿಯಲ್ಲಿದ್ದ 30 ಜನರಲ್ಲಿ ಆವರೆಗೆ ಸುಮಾರು 12ನೆಯ rank ತೆಗೆಯುತ್ತಿದ್ದೆ.

ಆದ ಅವಮಾನ ನನ್ನನ್ನು ಇನ್ನೂ ಕೆಳಕ್ಕೆ ತಳ್ಳುವ ಎಲ್ಲಾ ಸಾಧ್ಯತೆಯೂ ಇತ್ತು. ಆದರೆ ಆ ಕ್ಷಣದಲ್ಲಿ ನನಗನ್ನಿಸಿದ್ದು "ನಾನು ಮಾಡಿದ್ದು ತಪ್ಪು. ಅವರು ನನ್ನ ಒಳಿತಿಗಾಗಿಯೇ ಶಿಕ್ಷೆ ನೀಡಿದ್ದಾರೆ" ಅಂತ. ಅಲ್ಲಿಂದ ಮುಂದೆ ಹಗಲಿರುಳು ಪರಿಶ್ರಮ ಪಟ್ಟ ನಾನು 5ನೇ ಸೆಮೆಸ್ಟರ್‌ಗೆ ಬರುವ ವೇಳೆಗೆ ಎರಡನೇ rank ಬಂದಿದ್ದೆ. ಅದೇ ಉಪ-ಪ್ರಾಂಶುಪಾಲರಿಂದ ನನ್ನ ಮಾಕ್ಸ್‌ಕಾರ್ಡ್ ಪಡೆದಾಗ ಅವರು ನನ್ನನ್ನು ಬಹಳ ಚೆನ್ನಾಗಿ ಮಾತನಾಡಿಸಿದರು.

ನನ್ನ ನಂತರ ತನ್ನ ಅಂಕಪಟ್ಟಿಯನ್ನು ಪಡೆದುಕೊಂಡ ನನ್ನ ಸ್ನೇಹಿತನ ಬಳಿ ಅವರು "ನೀನು ಓದಿದ್ದು ಸಾಲದು; ಸುರೇಶನನ್ನು ನೋಡಿ ಕಲಿ" ಅಂದರಂತೆ. ಇದನ್ನು ಕೇಳಿ ನನಗೆ ಸ್ವರ್ಗಕ್ಕೆ ಮೂರೇ ಗೇಣು. ನನ್ನ ಜೀವನದಲ್ಲಿ ಇದು ಅತಿ ದೊಡ್ಡ ತಿರುವು. ತಪ್ಪನ್ನು ಎಲ್ಲರೂ ಮಾಡುತ್ತಾರೆ; ಆದರೆ ಅದನ್ನು ಒಪ್ಪಿಕೊಂಡು, ತಿದ್ದಿಕೊಳ್ಳುವ ಮನಸ್ಸಿದ್ದರೆ ಏನನ್ನೂ ಸಾಧಿಸಲು ಸಾಧ್ಯ ಎನಿಸಿತು. [ಶುಭಸಂಕಲ್ಪ ಲೇಖನಗಳು]

English summary
Inspirational true life short story by Suresha Bhatta, Singapore. People may commit mistakes, but those people will win who make amends and walk on the right path.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X