ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಸಂಕಲ್ಪ : ಸಮಸ್ಯೆ ಅಷ್ಟೇ ತಾನೆ, ಬಿಟ್ಟಾಕ್ರೀ!

By * ಗುಣಮುಖ
|
Google Oneindia Kannada News

Inspirational Kannada short stories
ಇಂಗ್ಲಿಷ್‌ನಲ್ಲಿ ಒಂದು ಗಾದೆ ಮಾತಿದೆ, 'ವೆನ್ ಇಟ್ ರೇನ್ಸ್ ಇಟ್ ಪೋರ್ಸ್(When it rains, it pours)' ಅಂದರೆ 'ಮಳೆ ಶುರುವಾಯಿತೆಂದರೆ, ಅದು ಎಡೆಬಿಡದೆ ಸರಿಯಾಗಿ ಜಡೆಯುತ್ತದೆ'. ಈ ಮಾತಿನ ಭಾವರ್ಥವಿಷ್ಟೇ, ಕಷ್ಟಗಳು ಬಂದರೆ ಒಂದರ ನಂತರ ಒಂದು, ರಾಶಿ ರಾಶಿಯಲ್ಲಿ ನಮ್ಮನ್ನು ಮುತ್ತಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ, ನಮ್ಮ ಆಲೋಚನೆಗಳೆಲ್ಲಾ ಕಲಸುಮೇಲೋಗರವಾಗಿ, ನಮ್ಮ ಚಿಂತನೆಯಲ್ಲಿ ಸ್ಪಷ್ಟತೆಯೇ ಮೂಡುವುದಿಲ್ಲ. ಬದುಕೆಂದರೆ ಸಮಸ್ಯೆಗಳ ಸಾಗರವೆನಿಸಿ ಬಿಡುತ್ತದೆ. ಯಾವ ಸಮಸ್ಯೆಗೆ ಅಂತ ಗಮನ ಕೊಡುವುದು? ಎಂಬ ಗೊಂದಲ ಬೇರೆ.

ಯಾರಾದರು ಆತ್ಮೀಯರು ವಿಚಾರಿಸಿದರೆ 'ಏನಂತ ಹೇಳಲಿ ಸಮಸ್ಯೆಗಳು ಒಂದೇ ಎರಡೇ...' ಎಂಬ ಉತ್ತರ ತಾನೆತಾನಾಗಿ ಬಾಯಿಂದ ಬರುತ್ತದೆ. ಇಂತಹ ಸಂದರ್ಭದಲ್ಲಿ, ಏನೂ ಬೇಡವೆನಿಸಿ ನಾವೆಲ್ಲಾ ಎಷ್ಟೊಂದು ಸಲ ತಲೆ ಮೇಲೆ ಕೈಹೊತ್ತು ಕುಳಿತುಬಿಡುತ್ತೇವೆ. ಏಕಾಂಗಿಯಾಗಿ ಬಿಟ್ಟೆವು, ನಮ್ಮ ಜೀವನವೆಲ್ಲ ಸಮಸ್ಯೆಗಳ ಸರಮಾಲೆಯಾಯಿತು ಎಂದು ನಂಬಿಬಿಡುತ್ತೇವೆ. ಜೀವನದಲ್ಲಿ ನಮಗೆಲ್ಲಾ ಈ ಅನುಭವ ಒಂದಲ್ಲ ಒಂದು ಸಾರಿ ಆಗೇತೀರುತ್ತದೆ. ಹಾಗಾದಾಗ ಏನು ಮಾಡಬೇಕು? ಹೇಗೆ ಪರಿಹಾರ ಕಂಡುಕೊಳ್ಳಬೇಕು? ಎಂದು ಆಲೋಚಿಸುತ್ತಿರುವಾಗಲೇ, ಉತ್ತರ ಹುಡುಕುತ್ತಿರುವಾಗಲೇ ನನಗೊಂದು ಕತೆ ನೆನಪಾಗುತ್ತದೆ.

***
ಐವತ್ತೈದರ ಹರಯದ ಪ್ಯಾಟ್ರಿಕ್, ದುಡಿದಿದ್ದು ಇನ್ನೂ ಸಾಕು, ನೆಮ್ಮದಿಯಾಗಿ ಹೆಂಡತಿ ಮಕ್ಕಳೊಡನೆ ಕಾಲ ಕಳೆಯುವ ಎಂದು ವಾಲೆಂಟರಿ ರಿಟೈರ್ಮೆಂಟ್ ತೆಗೆದುಕೊಂಡ. ಪ್ಯಾಟ್ರಿಕ್ ಪ್ಯಾರಿಸ್ ನಗರದ ಗಡಿಬಿಡಿ ಜೀವನದಿಂದ ಬೇಸತ್ತಿದ್ದ. ವ್ಯಾಪಾರದಲ್ಲಿ ಸಾಕಷ್ಟು ದುಡಿದಿದ್ದ ಪ್ಯಾಟ್ರಿಕ್ ಊರ ಹೊರಗಿನ ಪ್ರಶಾಂತ ಸ್ಥಳದಲ್ಲಿ ಒಂದು ದೊಡ್ಡ ಫಾರ್ಮ್-ಹೌಸ್ ಕೊಂಡುಕೊಂಡ. ವಿಶಾಲವಾದ ನೂರು ಎಕರೆಯ ಫಾರ್ಮ್-ಹೌಸ್ ಅದು. ಅಲ್ಲಿ ಬೆಳೆಯುವ ಬೆಳೆಯ ಆದಾಯವೇ ಅವನ ಉಳಿದ ಜೀವನದ ಅವಧಿಯನ್ನು ನೆಮ್ಮದಿಯಿಂದ ಕಳೆಯಲು ಸಾಕಾಗಿತ್ತು. ವ್ಯಾಪಾರದಿಂದ ಗಳಿಸಿದ ಕೊಂಚ ಹಣವನ್ನು ಉಳಿತಾಯ ಮಾಡಿ ಬ್ಯಾಂಕಲ್ಲಿ ಠೇವಣಿ ಬೇರೆ ಇಟ್ಟಿದ್ದ. ಹಾಗಾಗಿ ತನ್ನ ವಿಶ್ರಾಂತ ಜೀವನವನ್ನು ಫಾರ್ಮ್-ಹೌಸ್‌ನಲ್ಲಿ ನೆಮ್ಮದಿಯಿಂದ ಕಳೆಯುವ ಹುಮ್ಮಸ್ಸಿನಲ್ಲಿದ್ದ.

ಹೆದ್ದಾರಿಯ ಸಮೀಪವೇ ಆ ಫಾರ್ಮ್-ಹೌಸ್ ಇದ್ದಿದ್ದರಿಂದ, ಬೇಕೆಂದಾಗ ಪ್ಯಾರಿಸ್ ನಗರಕ್ಕೆ ಹೋಗಿ ಬರಲು ಅನುಕೂಲವಿತ್ತು. ಒಂದು ಶುಭದಿನದಂದು ತನ್ನ ಸಂಸಾರ ಸಮೇತ ಫಾರ್ಮ್-ಹೌಸ್‌ಗೆ ಬಂದಿಳಿದ. ಸುಂದರ ಮತ್ತು ಪ್ರಶಾಂತ ವಾತಾವರಣಕ್ಕೆ ಮೊದಲ ದಿನವೇ ಮಾರು ಹೋದ. ಎಲ್ಲಾ ಚೆನ್ನ ಎಂದು ಅಂದುಕೊಳ್ಳುವಷ್ಟರಲ್ಲಿ, ಸಂಜೆ ಹೊತ್ತಿಗೆ ಒಂದು ಸಮಸ್ಯೆ ಶುರುವಾಗಿತ್ತು. ಫಾರ್ಮ್-ಹೌಸ್‌ನಲ್ಲಿ, ಪ್ಯಾಟ್ರಿಕ್‌ನ ವಿಶಾಲವಾದ ಮನೆಯ ಪಕ್ಕದಲ್ಲಿ ಒಂದು ಪುಟ್ಟ ಕೆರೆಯಿತ್ತು. ಮೀನು ಹಿಡಿಯುವ ಹುಚ್ಚಿನ ಪ್ಯಾಟ್ರಿಕ್ ಅದನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಕೂಡ. ಆ ಪುಟ್ಟ ಕೆರೆಯೇ ಸಮಸ್ಯೆಯ ಆಗರವಾಗಿ ಪರಿಣಮಿಸಿತ್ತು. ರಾತ್ರಿಯಾಗುತ್ತಿದಂತೆ ಕಪ್ಪೆಗಳ ವಟಗುಟ್ಟುವಿಕೆ ಶುರುವಾಗಿತ್ತು. ವಾತವರಣದಲ್ಲಿ ಮಳೆ ಬರುವ ಸೂಚನೆ ಬೇರೆ ಇತ್ತು. ರಾತ್ರಿ ಹೆಚ್ಚಾದಂತೆ ಕಪ್ಪೆಗಳ ವಟಗುಟ್ಟುವಿಕೆ ವಿಪರೀತವಾಯಿತು. ರಾತ್ರಿಯಲ್ಲಾ ಕೆರೆಯಲ್ಲಿ ವಾಸವಾಗಿದ್ದ ಕಪ್ಪೆಗಳೆಲ್ಲ ವಟಗುಟ್ಟುತ್ತಿದ್ದರೆ ಪಾಟ್ರಿಕ್ ನಿದ್ದೆಯಿಲ್ಲದೆ ಹೊರಳಾಡಿದ. ಒಂದೇ... ಎರಡೇ... ಕೋಟಿ, ಕೋಟಿ ಕಪ್ಪೆಗಳ ಸತತ ಬೊಬ್ಬೆ. ಅವನ ಹೆಂಡತಿ ಮಕ್ಕಳು ಸ್ವಲ್ಪಹೊತ್ತು ಗೊಣಗಾಡಿ, ಹಾಗೆ ನಿದ್ದೆ ಹೋದರು. ಉಫ್...! ಪಾಪ ಪ್ಯಾಟ್ರಿಕ್ ಮಾತ್ರ ನಿದ್ದೆಯಿಲ್ಲದೆ ಹಾಗೆ ರಾತ್ರಿಯನ್ನು ನೂಕಿದ.

ಈ ಸಮಸ್ಯೆಗೆ ಅವನು ಉತ್ತರವನ್ನು ಕಂಡುಹಿಡಿಯಲೇಬೇಕಿತ್ತು. ಸೂರ್ಯೋದಯದ ಹೊತ್ತಿಗೆ ಅವನ ವ್ಯಾಪಾರಿ ಬುದ್ಧಿ ಪರಿಹಾರ ಕಂಡುಕೊಂಡಿತ್ತು.

ಬೆಳಗಾದಂತೆ ಬೇಗನೆ ರೆಡಿಯಾಗಿ, ಹೆದ್ದಾರಿಯ ಪಕ್ಕದಲ್ಲಿದ್ದ ಸುಪ್ರಸಿದ್ಧ ರೆಸ್ಟೋರೆಂಟ್‌ಗೆ ಹೊರಟ. ಆ ಪ್ರದೇಶದಲ್ಲಿ ಬಾತುಕೋಳಿಯಂತೆ, ಮೀನಿನಂತೆ, ಕಪ್ಪೆ ಕಾಲುಗಳಿಂದ ವಿಶೇಷ ಖ್ಯಾದ್ಯ ತಯಾರಿಸಿ ತಿನ್ನುವ ಅಭ್ಯಾಸವಿತ್ತು. ರೆಸ್ಟೋರೆಂಟ್ ಮ್ಯಾನೇಜರನ್ನು ಕಂಡು ಹೇಳಿದ 'ನನ್ನ ಫಾರ್ಮ್ ಹೌಸ್ ಕೆರೆಯಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಲಕ್ಷ ಕಪ್ಪೆಗಳಿವೆ. ನಿಮಗೆ ದಿನಕ್ಕೆ ಸಾವಿರ ಕಪ್ಪೆ ತಂದು ಕೊಟ್ಟರೆ ತೆಗೆದುಕೊಳ್ಳುತ್ತಿರಾ?' ಎಂದ. ಪ್ಯಾಟ್ರಿಕ್ ಮಾತು ಕೇಳಿ ಮ್ಯಾನೇಜರ್ ಗಾಬರಿಯಾದ, ಲಕ್ಷ ಲಕ್ಷ ಕಪ್ಪೆಗಳು! ದಿನಕ್ಕೆ ಸಾವಿರ ಕಪ್ಪೆಗಳನ್ನು ಸರಬರಾಜು ಮಾಡಲು ಸಿದ್ಧವಿರುವ ಪ್ಯಾಟ್ರಿಕ್! ಕೊನೆಗೆ ವಾರಕ್ಕೆ ಸಾವಿರ ಕಪ್ಪೆಗಳನ್ನು ತಂದು ಕೊಡುವಂತೆ ಒಂದು ವ್ಯಾಪಾರದ ಒಪ್ಪಂದ ಮಾಡಿಕೊಂಡ. ಮರುದಿನದಿಂದಲೇ ಸರಬರಾಜು ಮಾಡುವಂತೆ ಹೇಳಿದ.

ಪ್ಯಾಟ್ರಿಕ್‌ಗೆ ಖುಷಿಯೋ ಖುಷಿ... ಕಪ್ಪೆಗಳ ಸಮಸ್ಯೆ ಬಗೆಹರಿಯಿತು ಮತ್ತು ಜೊತೆಗೆ ಸಾಕಷ್ಟು ದುಡ್ಡು ಬೇರೆ! ಹೆಂಡತಿ ಮಕ್ಕಳಿಗೆ ಈ ಶುಭ ಸಮಾಚಾರ ಹೇಳಲು ಮನೆಕಡೆ ಶರವೇಗದಲ್ಲಿ ಹೊರಟ. ಅವನು ಮರುದಿನದಿಂದಲೇ ಕಪ್ಪೆಗಳ ಸರಬರಾಜು ಮಾಡಬೇಕಿತ್ತು.

ಮರುದಿನ ರೆಸ್ಟೋರೆಂಟ್ ಮ್ಯಾನೇಜರ್ ಮುಂದೆ, ಪ್ಯಾಟ್ರಿಕ್ ಕೇವಲ ನಾಲ್ಕು ಕಪ್ಪೆಗಳೊಂದಿಗೆ ನಿಂತಿದ್ದ. ಪೆಚ್ಚು ಪೆಚ್ಚಾಗಿ ನಗುತ್ತ 'ಕ್ಷಮಿಸಿ! ನಾನು ತಪ್ಪು ತಿಳಿದಿದ್ದೆ, ನನ್ನ ಫಾರ್ಮ್ ಹೌಸ್ ಕೆರೆಯಲ್ಲಿ ಇದ್ದಿದ್ದು ಕೇವಲ ನಾಲ್ಕು ಕಪ್ಪೆಗಳು... ಇವುಗಳ ವಟಗುಟ್ಟುವಿಕೆ ಕೇಳಿ, ಇವು ಸೃಷ್ಟಿಸಿದ ಶಬ್ದ ಕೇಳಿ ನಾನು ಲಕ್ಷ ಲಕ್ಷ ಕಪ್ಪೆಗಳಿರಬಹುದೂ ಅಂದುಕೊಂಡಿದ್ದೆ... ದಯವಿಟ್ಟು ಕ್ಷಮಿಸಿ!' ಎಂದ. ಹೌದು ಅವನು ದಿನಪೂರ್ತಿ ಕಷ್ಟಪಟ್ಟು ಹಿಡಿದಿದ್ದು ಕೇವಲ ನಾಲ್ಕೇ ನಾಲ್ಕು ಕಪ್ಪೆಗಳೇ. ಅಷ್ಟಲ್ಲದೇ ಫಾರ್ಮ್-ಹೌಸ್ ಕೆರೆಯಲ್ಲಿ ಬೇರೆ ಕಪ್ಪೆಗಳಿರಲಿಲ್ಲ!

***
ನಮ್ಮನ್ನು ಕಾಡುವ ಸಮಸ್ಯೆಗಳು, ಬೇರೆ ಜನರ ಟೀಕೆಗಳು ಅಷ್ಟೇ ಅಲ್ಲವೇ? ಸಮಸ್ಯೆಗಳು, ಟೀಕೆಗಳು ಸೃಷ್ಟಿಸುವ ಗೊಂದಲಕ್ಕೆ, ಶಬ್ದಮಾಲಿನ್ಯಕ್ಕೆ ನಾವು ಕತ್ತಲಲ್ಲಿ ಕುಳಿತು ಸಾವಿರ ಸಾವಿರ ಸಮಸ್ಯೆಗಳನ್ನು ಕಲ್ಪಿಸಿಕೊಳ್ಳುತ್ತೇವೆ ಅಲ್ಲವೇ? ನಿಮಗೆ ಯಾವಾಗಲಾದರು ಅನೇಕ ಸಮಸ್ಯೆ ನಿಮ್ಮನ್ನು ಕಾಡುತ್ತಿವೆ, ತುಂಬಾ ಜನ ನಿಮ್ಮನ್ನು ಟೀಕಿಸುತ್ತಿದ್ದಾರೆ ಎಂದೆನಿಸಿದರೆ, ಪಟ್ಟಾಗಿ ಕುಳಿತು ನಿಮ್ಮ ಸಮಸ್ಯೆಗಳನ್ನು ಅಥವಾ ಟೀಕೆಗಳನ್ನು ಪಟ್ಟಿ ಮಾಡಿ, ಎಲ್ಲಾ ಸಮಸ್ಯೆಗಳಿಗೆ ಪ್ರಾಮುಖ್ಯತೆಯ ಸೂಚ್ಯಂಕ ಕೊಡಿ. ನಿಮ್ಮ ಸಮಸ್ಯೆಗಳ ಚಿಕ್ಕಪಟ್ಟಿ, ನಿಮ್ಮನ್ನು ತಬ್ಬಿಬ್ಬುಗೊಳಿಸಿ ಉಲ್ಲಾಸ ಕೊಡದಿದ್ದರೆ ಹೇಳಿ!

ಬನ್ನಿ, ಜೀವನದಲ್ಲಿ ಸಮಸ್ಯೆಗಳು ಹೆಚ್ಚೆನಿಸಿದಾಗ, ಕತ್ತಲಲ್ಲಿ ಕುಳಿತು ಏನೇನೋ ಕಲ್ಪಿಸಿಕೊಳ್ಳದೆ, ಜೀವನದಿಂದ ವಿಮುಖಗೊಳ್ಳದೆ, ಧೈರ್ಯದಿಂದ ಮುನ್ನುಗ್ಗಿ ಎದುರಿಸುವ 'ಶುಭಸಂಕಲ್ಪ' ಮಾಡೋಣ. [ಲೇಖಕರ ಈಮೇಲ್ : [email protected]]

ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, 'ಶುಭಸಂಕಲ್ಪ'ದೊಂದಿಗೆ ಗುಣಮುಖರಾಗುವುದೇ ಭಾಗ್ಯ...! [ಫೇಸ್‌ಬುಕ್‌ನಲ್ಲಿ ಗುಣಮುಖ]

English summary
Inspiration Kannada short stories by Gunamukha : There are no big problems, there are just a lot of little problems. Never try to solve all the problems at once — make them line up for you one-by-one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X