ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಬಹುಮಾನ : ನನ್ನ ಕನ್ನಡದ ಭಾವ, ಕನ್ನಡದ ಅಜ್ಜ!

By ವಿನಾಯಕ ಭಟ್, ಬೆಂಗಳೂರು
|
Google Oneindia Kannada News

Kannada is my life : Vinayak Bhat
ಕಾನ್ವೆಂಟ್‌ನಲ್ಲಿ ಓದುತ್ತಿರುವ ಪುಟ್ಟ ಮಗುವಿನ ಮಾತನ್ನು ಗಮನವಿಟ್ಟು ಆಲಿಸಿ ನೋಡಿ. ಒಂದು ಸಣ್ಣ ವಾಕ್ಯದಲ್ಲಿ ಎಷ್ಟು ಕನ್ನಡ ಪದಗಳಿರುತ್ತವೆ, ಎಷ್ಟು ಇಂಗ್ಲಿಷ್ ಪದಗಳಿರುತ್ತವೆ ಎಂದು ಲೆಕ್ಕ ಹಾಕಿ. ಗಾಬರಿಬಿದ್ದು ಹೋಗುತ್ತೀರಿ. ಮನೆಯಲ್ಲಿ ಕನ್ನಡಮಯ ವಾತಾವರಣವಿದ್ದರೂ ಹೊರಗಡೆಯಲ್ಲಿ ಎಲ್ಲವೂ ಆಂಗ್ಲಮಯ. ಕನ್ನಡ ಸ್ಥಿತಿ ಇಂದು ಅಯೋಮಯ. ಇಂದಿನ ಮಕ್ಕಳಿಗಾಗಲಿ, ಹೊರಗಿನವರಿಗಾಗಲಿ ಕನ್ನಡದ ಪ್ರೇಮ, ಕನ್ನಡದ ಭಾಷಾ ಸ್ಫೂರ್ತಿ ತುಂಬುವವರು ಯಾರು? ಪರಿಸ್ಥಿತಿ ಹೀಗಿರುವಾಗ, ವಿನಾಯಕ ಭಟ್ ಅವರು ಬರೆದಿರುವ ಈ ಲೇಖನ, ನಿಮ್ಮಲ್ಲಿ ನಿದ್ದೆ ಹೋಗಿರುವ ಕನ್ನಡತನವವನ್ನು ಬಡಿದೆಬ್ಬಿಸದೆ ಇರದು. 'ಶುಭಸಂಕಲ್ಪ' ಸಣ್ಣಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಳಿಸಿದ ಈ ಕಥೆ ಕನ್ನಡ ಜಾಗೃತಿಗಾಗಿ - ಸಂಪಾದಕ.

***
ನಾನು ಹುಟ್ಟಾ ಕನ್ನಡಿಗ. ಇಂಗ್ಲಿಷ್ ಎಂದರೆ ಅಷ್ಟಕ್ಕಷ್ಟೆ. ವ್ಯವಹಾರಕ್ಕೆ ಎಷ್ಟು ಬೇಕೋ ಅಷ್ಟು ಇಂಗ್ಲಿಷ್ ಗೊತ್ತು. ಆದರೆ ಇಂಗ್ಲಿಷೇ ಸರ್ವಸ್ವ ಎಂಬಂತೆ ಆಡುವ ಕನ್ನಡಿಗರಿದ್ದಾರಲ್ಲ, ಅವರನ್ನು ಕಂಡರೆ ಮೈ ಉರಿ. ತಪ್ಪಾಗಿ ಇಂಗ್ಲಿಷ್ ಮಾತನಾಡಬಾರದು ಎಂಬ ಕನ್ನಡಿಗ ಸಹೋದ್ಯೋಗಿಗಳ ವ್ಯಾಮೋಹವನ್ನು ನಾನು ಖಂಡಿಸಿದ್ದುಂಟು. ಎಫ್ ಎಂ ರೇಡಿಯೋಗಳ ಉದ್ಘೋಷಕರು ಕಾಟಾಚಾರಕ್ಕೆ ಏನೋ ಒಂದು ಕನ್ನಡ ಸಿಕ್ಕಾಪಟ್ಟೆ ಇಂಗ್ಲಿಷು ಮಾತನಾಡುವಾಗ ಚಪ್ಪರಿಸಿ ಕೇಳುವ ನೀವು, ನಾವು ಇಂಗ್ಲಿಷು ಮಾತಾಡುವುದರಲ್ಲಿ ವ್ಯಾಕರಣ ದೋಷ ಹುಡುಕುವುದು ಏಕೆ ಎಂದು ವಾದ ಮಾಡಿ ಗೆದ್ದಿದ್ದುಂಟು!

ನನ್ನೊಳಗೊಬ್ಬ ಕನ್ನಡಿಗ ಹೇಗೆ ಇಷ್ಟು ಗಟ್ಟಿಯಾಗಿದ್ದಾನೆ? ಬೆಂಗಳೂರಿಗೆ ಬಂದು ಒಂದೇ ವರ್ಷಕ್ಕೆ ತಮಿಳು, ತೆಲುಗು ಹೀಗೆ ಇದ್ದಬಿದ್ದ ಭಾಷೆಗಳನ್ನೆಲ್ಲ ಕಲಿಯುವವರಿದ್ದಾರೆ. ಆದರೆ ನನಗೆ ಯಾಕೆ ೧೨ ವರ್ಷಗಳ ನಂತರವೂ ತಮಿಳು, ತೆಲುಗು ಒಂದು ವಾಕ್ಯ ಸಹ ಬರುವುದಿಲ್ಲ? ಕನ್ನಡವನ್ನೇ ನಂಬಿ ಬದುಕು ಕಟ್ಟಿಕೊಳ್ಳಲು ನನಗೆ ಹೇಗೆ ಸಾಧ್ಯವಾಯಿತು ಎಂದು ಯೋಚಿಸಿದರೆ ನನ್ನಲ್ಲಿ ಕನ್ನಡ ಬೀಜ ಬಿತ್ತಿದ ಒಬ್ಬ ವ್ಯಕ್ತಿ ಗೋಚರಿಸುತ್ತಾರೆ; ನನ್ನಲ್ಲಿ ಕನ್ನಡ ಭಾಷೆಯ ಬಗ್ಗೆ ಸ್ಫೂರ್ತಿ ತುಂಬಿದ ಆ ವ್ಯಕ್ತಿ ನೆನಪಾಗುತ್ತಾರೆ.

ಎರಡು ಹಂತಗಳಲ್ಲಿ ಅವರು ನನ್ನ ಜೀವನದಲ್ಲಿ ಬಂದು ಹೋದರು.

ನಾನು ಚಿಕ್ಕವನಾಗಿದ್ದಾಗ ಆಗಾಗ ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ತಾಯಿ ಅವರನ್ನು ಭಾವ ಎಂದು ಕರೆಯುತ್ತಿದ್ದುದರಿಂದ ನಾವೆಲ್ಲ ಭಾವ ಭಾವ ಎಂದೇ ಕರೆಯುತ್ತಿದ್ದೆವು. ಬಿಳಿ ಪಂಚೆ, ಬಿಳಿ ಅಂಗಿ, ಕೈಲೊಂದು ಬ್ಯಾಗು, ಬ್ಯಾಗು ತುಂಬ ಪೇಪರು, ಪತ್ರಿಕೆಗಳು. ನಾನು ಅ ಆ ಇ ಈ ತಿದ್ದಲು ಕಲಿಯುತ್ತಿದ್ದ ಹೊತ್ತಿನಲ್ಲಿ ಅವರ ಬ್ಯಾಗಿನಲ್ಲಿ ಏನಿರುತ್ತದೆ ಎಂದು ಇಣುಕುವ ಗೋಜಿಗೆ ಹೋಗುತ್ತಿರಲಿಲ್ಲ. ಅವರ ಕಿಸೆಯಿಂದ ತೆಗೆದುಕೊಡುವ ನಿಂಬೆಹುಳಿ ಪೆಪ್ಪರ್‌ಮೆಂಟಿಗಾಗಿ ಕಾಯುತ್ತಿದ್ದೆ. ತುಸು ದೊಡ್ಡವನಾಗುತ್ತಿದ್ದ ಹಾಗೆ ಭಾವ ಪ್ರತಿ ಶುಕ್ರವಾರವೇ ಅದೇಕೆ ನಮ್ಮ ಮನೆಗೆ ಬರುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಪ್ರತಿ ಶುಕ್ರವಾರವೂ ಅವರು ಶಿರಸಿಗೆ ಹೋಗಿ ಇದ್ದಬದ್ದ ಪತ್ರಿಕೆಗಳನ್ನೆಲ್ಲ ಕೊಂಡು ತಂದು ಗುಡ್ಡೆ ಹಾಕಿಕೊಳ್ಳುತ್ತಿದ್ದರು. ಸಂಯುಕ್ತ ಕರ್ನಾಟಕ, ಉದಯವಾಣಿ, ಪ್ರಜಾವಾಣಿ, ತುಷಾರ, ಮಯೂರ, ಉತ್ಥಾನ, ಮಲ್ಲಿಗೆ, ಚಂದಮಾಮ, ಲಂಕೇಶ್ ಪತ್ರಿಕೆ ಹೀಗೆ ಸಮಸ್ತ ಕನ್ನಡ ಪತ್ರಿಕೋದ್ಯಮವೇ ಅವರ ಬ್ಯಾಗಲ್ಲಿ! ನಮ್ಮ ಮನೆಯ ಜಗುಲಿಯ ಮೂಲೆಯಲ್ಲಿ ಕುಳಿತು ರಾತ್ರಿ ೧ ಗಂಟೆಯವರೆಗೂ ಓದುತ್ತಿದ್ದರು. ಪ್ರಕಟವಾದ ಚಿತ್ರಗಳು, ವಿಶೇಷವಾಗಿ ವ್ಯಂಗ್ಯಚಿತ್ರಗಳ ಮೇಲೆ ಏನೇನೋ ಅಂಕಿಗಳನ್ನು ಬರೆಯುತ್ತಿದ್ದರು. ಕೊನೆಗೆ ಗೊತ್ತಾಗಿದ್ದೇನೆಂದರೆ ಆ ಅಂಕಿಗಳನ್ನೆಲ್ಲ ಸಂಕಲಿಸಿ, ವ್ಯವಕಲಿಸಿ, ಭಾಗಿಸಿ ಎರಡು ಅಂಕಿ ಸೃಷ್ಟಿಸಿಕೊಂಡು ಮಟಕಾ(ಓ.ಸಿ.) ಆಡುತ್ತಿದ್ದರು!

ಈ ಇಷ್ಟೂ ಕೆಲಸವನ್ನೂ ನಮ್ಮ ಮನೆಯಲ್ಲೇ ಮಾಡಿಕೊಂಡು ಹೋಗಲು ಕಾರಣ, ಅವರ ಮನೆಯಲ್ಲಿ ಹೆಂಡತಿ ಕಾಟ. ಒಮ್ಮೊಮ್ಮೆ ಆಕೆ ಭಾವನನ್ನು ಹುಡುಕಿಕೊಂಡು ನಮ್ಮ ಮನೆಗೇ ಬರುತ್ತಿದ್ದರು. ಆಗ ಅವರು ಕೇಳುತ್ತಿದ್ದುದೇನು ಗೊತ್ತೆ? "ನಮ್ಮ ಮನೆಯ ಪೇಪರ್ ಕಾರು ನಿಮ್ಮ ಮನೆ ಕಡೆ ಬಂದಿದೆಯಾ?" ಅಂತ!

ತಮ್ಮ ಕೆಲಸ ಮುಗಿದ ಮೇಲೆ ಅವನ್ನೆಲ್ಲ ಮನೆಗೆ ಕೊಂಡು ಹೋಗದ ಭಾವ ನಮ್ಮ ಮನೆಯಲ್ಲೇ ಒಂದುಕಡೆ ಇಟ್ಟುಬಿಡುತ್ತಿದ್ದರು. ಕನ್ನಡದ ಸ್ವಾದ ಅರ್ಥವಾಗತೊಡಗುವ ಹೊತ್ತಿಗೆ ನನ್ನ ಓದು ಚಂದಮಾಮದಿಂದ ಆರಂಭಗೊಂಡಿತು. ಕ್ರಮೇಣ ವಿಸ್ತರಿಸುತ್ತ ತುಷಾರ, ಮಯೂರ, ಉತ್ಥಾನ, ಮಲ್ಲಿಗೆ ಇತ್ಯಾದಿ ಪತ್ರಿಕೆಗಳ ಪ್ರತಿ ಪುಟವನ್ನೂ ಓದುತ್ತಿದ್ದೆ. ಪ್ರೌಢಶಾಲೆಯಲ್ಲಿರುವಾಗಲೇ ತುಷಾರದಲ್ಲಿ ಬರುತ್ತಿದ್ದ ಕಠಿಣ ವಿಮರ್ಶೆಗಳು, ಮಯೂರದ ಸಾಹಿತ್ಯಾತ್ಮಕ ಲೇಖನಗಳು ಇಷ್ಟವಾಗತೊಡಗಿದವು. ಸಣ್ಣ ಕಥೆಗಳನ್ನು ಚಪ್ಪರಿಸತೊಡಗಿದೆ. ಕವಿತೆಗಳು ಅರಗತೊಡಗಿದವು. ಸುದ್ದಿ ಪತ್ರಿಕೆಗಳ ಸಿನಿಮಾ ಪುರವಣಿಗಳು ಬಾಯಿಪಾಠವಾಗತೊಡಗಿದವು. ಸಾಪ್ತಾಹಿಕವನ್ನು ಪಠ್ಯಕ್ಕಿಂತ ಇಷ್ಟಪಟ್ಟು ಓದುತ್ತಿದ್ದೆ. ಭಾವ ಎಲ್ಲವನ್ನೂ ನನಗಾಗಿಯೇ ತರುತ್ತಾರೇನೋ ಎನ್ನುವಷ್ಟು ಅಕ್ಕರೆ ಹುಟ್ಟತೊಡಗಿತು. ಜೊತೆಗೆ ಕನ್ನಡ ಸಿನಿಮಾಗಳನ್ನೂ ತುಂಬ ನೋಡುತ್ತಿದ್ದ; ಕೆಲವೊಮ್ಮೆ ನನ್ನನ್ನೂ ಕರೆದೊಯ್ಯುತ್ತಿದ್ದ.

ನನ್ನ ಅಣ್ಣನ ಮಕ್ಕಳು ಮಾತು ಕಲಿಯುವ ಹೊತ್ತಿಗೆ ಭಾವ - ಅಜ್ಜ ಆಗಿ ರೂಪಾಂತರಗೊಂಡರು. ನನ್ನ ಅಷ್ಟೇ ಏಕೆ ನನ್ನ ತಾಯಿಯ ಬಾಯಿಯಲ್ಲೂ ಭಾವ ಮರೆಯಾಗಿ ಅಜ್ಜ ನಗತೊಡಗಿದ. ಅಜ್ಜ, ಈಗ ತುಸು ವಯಸ್ಸಾದ ಪೇಪರ್ ಕಾರ್ ಆಗಿ ಬದಲಾಗಿದ್ದ. ಅವನ ಮನೆಯಲ್ಲಿ ಏನೇನೋ ಸಮಸ್ಯೆ ಇದ್ದವು. ಸ್ವತಃ ಹೆಂಡತಿಯೇ ಅವನ ಎಲೆ ಅಡಿಕೆಯ ತಂಬಾಕನ್ನು ಕದ್ದು, ಅದನ್ನು ಒಣಗಿಸಿ ಪುಡಿ ಮಾಡಿ, ಹಾಳೆ ಸುರುಳಿ ಸುತ್ತಿ ಬೀಡಿ ಮಾಡಿಕೊಂಡು ಕದ್ದು ಸೇದುತ್ತಿದ್ದಳಂತೆ! ಅದಕ್ಕೇ ಅವಳಿಗೆ ಗೂರಲು ಹಿಡಿದಿರುವುದು ಎಂದು ಅಜ್ಜ ಬೈಯುತ್ತಿದ್ದ.

ಅದೇನೇ ಇರಲಿ. ಅಜ್ಜನ ಪೇಪರ್ ಯಾನ ಮುಂದುವರಿದೇ ಇತ್ತು. ಜೊತೆಗೆ ನನ್ನ ಓದಿನ ಪಯಣವೂ ಸಾಗಿತ್ತು. ಕಾಲೇಜು ಮುಗಿಯುವ ಹೊತ್ತಿಗೆ ನನ್ನೊಳಗೊಬ್ಬ ಕನ್ನಡದ ರಕ್ತ ಹರಿಯುತ್ತಿರುವ ನನ್ನದೇ ಚೈತನ್ಯ ಎದೆಯೆತ್ತರಕ್ಕೆ ಎದ್ದು ನಿಂತಿತ್ತು.

ಆದರೆ ಏನು ಓದಬೇಕು, ಏನು ಉದ್ಯೋಗ ಮಾಡಬೇಕು ಎಂಬುದರ ಕಿಂಚಿತ್ತೂ ಅರಿವಿಲ್ಲದ ನಾನು ವಿಜ್ಞಾನದಲ್ಲಿ ಪದವಿ ಪಡೆದೆ. ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸವೂ ಸಿಕ್ಕುತ್ತಿತ್ತು. ಆದರೆ ಇಂಗ್ಲಿಷ್‌ಮಯ ವಾತಾವರಣದಲ್ಲಿ ಕೆಲಸ ಮಾಡುವ ಕಲ್ಪನೆಯೂ ನನ್ನಲ್ಲಿ ರೇಜಿಗೆ ಹುಟ್ಟಿಸಿತ್ತು. ಕನ್ನಡಮಯ ವಾತಾವರಣ ಬೇಕು ಎಂದರೆ ಕನ್ನಡ ಪತ್ರಿಕೆಯಲ್ಲಿಯೇ ಕೆಲಸ ಮಾಡಬೇಕು. ಪತ್ರಿಕೋದ್ಯಮದ ಗಂಧಗಾಳಿ ಇಲ್ಲದ ನಾನು ನೇರವಾಗಿ ಉದಯವಾಣಿಯ ಅಂದಿನ ಸಂಪಾದಕರಾದ ಈಶ್ವರ ದೈತೋಟ ಅವರ ಎದುರು ಹೋಗಿ ಇಂಗಿತ ಹೇಳಿಕೊಂಡೆ. ಅವರು ಕೊಂಚ ಬುದ್ಧಿ ಹೇಳಿ ಕೆಲಸ ಕೊಟ್ಟರು! ಅಲ್ಲಿಂದ ನಂತರ ವಿಜಯ ಕರ್ನಾಟಕ. ನಂತರ ಟಿವಿ ಮಾಧ್ಯಮ. ಇಂದು ಜ಼ೀ ಕನ್ನಡ ವಾಹಿನಿ; ಧಾರಾವಾಹಿ, ಚಲನಚಿತ್ರ, ಕಿರುಚಿತ್ರಗಳ ಬರವಣಿಗೆ ನನ್ನ ಉದ್ಯೋಗ, ಹವ್ಯಾಸ ಎರಡೂ. ನನ್ನ ಪದವಿ, ನನ್ನ ಮ್ಯಾನೇಜ್ ಮೆಂಟ್ ಕೌಶಲ ಯಾವವೂ ನನಗೆ ಉದ್ಯೋಗ ಕೊಟ್ಟಿದ್ದಲ್ಲ; ಕನ್ನಡವೇ ನನಗೆ ಉದ್ಯೋಗ ಕೊಟ್ಟಿದ್ದು, ಕನ್ನಡವೇ ಜೀವನ ಕೊಟ್ಟಿದ್ದು.

ನನ್ನೊಳಗಿನ ಕನ್ನಡತನಕ್ಕೆ ನೀರೆರೆದ ಆ ಭಾವ ಕಂ ಅಜ್ಜ ಇಂದು ನೆನಪು ಮಾತ್ರ. [ಮೊದಲ ಬಹುಮಾನ ಪಡೆದ ಲೇಖನ]

English summary
Shubhasankalpa short story contest : 2nd prize winning write up by Vinayak Bhat. Vinayak says Kannada has given him employment, life of his choice. Inspire the kids of present generation to read more Kannada magazines, talk more in Kannada than in English.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X