ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಶ್ಚಟಗಳ ದಾಸನಾದ ಮನಸಿಗೊಂದು ಮದ್ದು

ಮನಸು ಕದಡಿಹೋದಾಗ, ಮುದಡಿದಾಗ ನಿಮ್ಮ ನೋವ್ವನ್ನು ಗೌರವಿಸಿ, ಸುಮ್ಮನಿದ್ದು ಬಿಡಿ. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಮನಸ್ಸಿಗೂ ತಿಳಿಯಾಗಲು ಕೊಂಚ ಕಾಲಾವಕಾಶ ಕೊಡಿ.

By * ಗುಣಮುಖ
|
Google Oneindia Kannada News

ಹಲವು ವರುಷಗಳ ನಂತರ ಯುವ ಸ್ನೇಹಿತನೊಬ್ಬ ಸಿಕ್ಕಿದ್ದ. ತುಂಬಾ ಲವಲವಿಕೆಯ, ಜೀವನೋತ್ಸಾಹದ ಯುವಕ. ನಾವೆಲ್ಲ ತುಂಬಾ ಇಷ್ಟಪಡುತ್ತಿದ್ದ ಪ್ರತಿಭಾವಂತ ಹುಡುಗ. ಜೀವನದಲ್ಲಿ ಸಾಧಕನಾಗುತ್ತಾನೆ, ದೊಡ್ಡಮಟ್ಟದಲ್ಲಿ ಹೆಸರು ಮಾಡುತ್ತಾನೆ ಎಂದು ಅಂದುಕೊಂಡಿದ್ದೆವು. ಹಠಾತ್ತನೆ ಕೆಲ ಸಮಯ ಎಲ್ಲರಿಂದ ದೂರವಾಗಿದ್ದ. ತುಂಬಾ ದಿನಗಳ ನಂತರ ಸಿಕ್ಕವನು ನಮಗೆ ಗಾಬರಿಯಾಗುವಷ್ಟು ಬದಲಾಗಿದ್ದ, ಕಳೆಗುಂದಿದ್ದ. ತುಂಬಾ ಕೃಶನಾಗಿಹೋಗಿದ್ದ. ಕಣ್ಣಲ್ಲಿನ ಕಾಂತಿ ಕುಂದಿಹೋಗಿತ್ತು. ಕಾರಣ ಕುಡಿತಕ್ಕೆ ಬಿದ್ದಿದ್ದ.

ಜೀವನದಲ್ಲಾದ ಮೋಸಕ್ಕೆ ನೊಂದ ಅವನು, ಕುಡಿತದಲ್ಲಿ ಪರಿಹಾರ ಕಾಣಲು ಪ್ರಯತ್ನಿಸಿದ್ದ. ನೆಮ್ಮದಿಯ ಹುಡುಕಾಟದಲ್ಲಿ ಧಾರಾಕಾರವಾಗಿ ಕುಡಿದಿದ್ದ. ನೆಮ್ಮದಿ ಬಿಡಿ, ಇರುವ ಗೌರವ, ಹಣ ಮತ್ತು ಮುಖ್ಯವಾಗಿ ಆರೋಗ್ಯವನ್ನು ಕುಡಿತ ಕಿತ್ತುಕೊಂಡಿತ್ತು. ಕೆಲ ಸಮಯದ ನಂತರ ಅದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಅನೇಕರದು ಇದೇ ಸಮಸ್ಯೆ. ಕದಡಿಹೋದ ಮನಸ್ಸನ್ನು ಶಾಂತಗೊಳಿಸಲು ಯಾವುದೋ ಒಂದು ದುರಭ್ಯಾಸ ಬೆಳೆಸಿಕೊಂಡುಬಿಡುತ್ತಾರೆ. ನಂತರ ಅದರಿಂದ ಹೊರಬರಲು ಒದ್ದಾಡುತ್ತಾರೆ. ದುರಭ್ಯಾಸವೆಂದರೆ ಕುಡಿತವಿರಬಹುದು, ಸಿಗರೇಟು, ಡ್ರಗ್ಸ್, ಅಥವಾ ಅನಾರೋಗ್ಯಕರ ಜೀವನಶೈಲಿ.

How to calm an agitated mind

ಯಾವುದೋ ನೋವ್ವಿಗೆ, ಅವಮಾನಕ್ಕೆ, ತಿರಸ್ಕಾರಕ್ಕೆ, ಸೋಲಿಗೆ... ಹೀಗೆ ಯಾವುದೋ ಕಾರಣಕ್ಕೆ ಮನಸ್ಸು ಕದಡಿಹೋದಾಗ, ಮನಃಶಾಂತಿ ಕಳೆದುಕೊಂಡಾಗ ಏನು ಮಾಡಬೇಕು? ಏನು ಮಾಡಬೇಕು ಎಂದರೆ? ಏನನ್ನೂ ಮಾಡಬೇಡಿ ಎನ್ನುತ್ತಾನೆ ಬುದ್ಧ. ಎಂತದೋ ನೋವ್ವಿಗೆ ಮದ್ದು ಹುಡುಕಲು ಹೋಗುವ ಮನುಷ್ಯ ತನ್ನ ಬಲಹೀನ ಕ್ಷಣದಲ್ಲಿ ಯಾವುದೋ ವಿಷಯ ವ್ಯಸನಕ್ಕೆ ಬೀಳುವುದೇ ಹೆಚ್ಚು. ಒಮ್ಮೆ ಕೆಟ್ಟ ಅಭ್ಯಾಸದ, ವ್ಯಸನದ ಹಾದಿ ತುಳಿದ ಮೇಲೆ ಯಾವುದಕ್ಕೆ ಯಾವುದು ಎಂಬ ಗೊಂದಲದಲ್ಲೇ ಬದುಕು ಸವೆದುಹೋಗುತ್ತದೆ, ದುರಂತದಲ್ಲಿ ಕೊನೆಯಾಗುತ್ತದೆ. ಹಾಗಾಗಬಾರದು ಎಂದರೆ... ಏನು ಮಾಡಬೇಕು... ಎಂದು ಯೋಚಿಸುತ್ತಿದ್ದಾಗ ಸಿಕ್ಕಿದ್ದು ಈ ಕತೆ. ಒಮ್ಮೆ ಓದಿ ನೋಡಿ, ಹೊಸ ದಾರಿ ಕಂಡೀತು.

***
ಬುದ್ಧನಿಗೆ ಜ್ಞಾನೋದಯವಾದ ಅನಂತರದ ದಿನಗಳವು. ಶ್ರೀಗಂಧದ ಪರಿಮಳದಂತೆ ಬುದ್ಧನ ಕರುಣೆ ಮತ್ತು ಖ್ಯಾತಿ ಸಣ್ಣಗೆ ಹರಡುತ್ತಿತ್ತು. ಒಮ್ಮೆ ಬುದ್ಧ ತನ್ನ ಶಿಷ್ಯರೊಂದಿಗೆ ಶೋಧಿಸುತ್ತಾ, ಬೋಧಿಸುತ್ತಾ ಒಂದೂರಿಂದ ಇನ್ನೊಂದೂರಿಗೆ ಹೋಗುತ್ತಿದ್ದ. ಉತ್ತರ ಭಾರತದಲ್ಲಿ ಕಡು ಬೇಸಿಗೆಯ ದಿನಗಳವು. ಒಂದು ಸುಡು ಬಿಸಿಲಿನ ಮಧ್ಯಾಹ್ನ ಒಂದು ಕಾನನದಲ್ಲಿ ವಿಶ್ರಾಂತಿಗೆಂದು ತಂಗಿದರು. ಊಟದ ಸಮಯವಾದ್ದರಿಂದ ಕೆಲ ಶಿಷ್ಯರು ಹತ್ತಿರದ ಊರಿಗೆ ಭಿಕ್ಷಾಟನೆಗೆ ಹೊರಟರು. ಬುದ್ಧದೇವನ ಬಳಿ ಉಳಿದ ಶಿಷ್ಯನೊಬ್ಬನಿಗೆ ಹತ್ತಿರದಲ್ಲೆಲ್ಲಾದರು ನೀರು ಸಿಗುವುದೋ ನೋಡು ಎಂದು ಹೇಳಿದ. ಬುದ್ಧನ ಕರುಣಾಮಯ ಸಾಂಗತ್ಯದಲ್ಲಿ ತನ್ನನ್ನೇ ಮರೆತಿದ್ದ ಶಿಷ್ಯ ನಾಚಿ, ನಸುನಗುತ್ತ, ಗುರುದೇವ ಎಷ್ಟು ಬಳಲಿದ್ದಾರೊ ಹಳಹಳಿಸುತ್ತ ತಕ್ಷಣ ನೀರು ಹುಡುಕುತ್ತಾ ಹೊರಟ.

ಕೊಂಚ ಹುಡುಕಾಡಿದ ನಂತರ ಕಾನನದ ಅಂಚಿನಲ್ಲಿ ಪುಟ್ಟ ಕೊಳವೊಂದು ಸಿಕ್ಕಿತು. ಸಂತಸದಿಂದ ಹತ್ತಿರ ಹೋದಾಗ ಕೊಂಚ ನಿರಾಸೆಯಾಯಿತು. ಎತ್ತಿನ ಗಾಡಿಯೊಂದು ಕೊಳದ ನಡುವೆ ಹೋಗಿದ್ದರಿಂದ, ನೀರಲ್ಲಿ ಕೆಸರೆದ್ದು ಬಗ್ಗಡವಾಗಿತ್ತು. 'ಅಯ್ಯೋ ಈ ಕದಡಿದ ನೀರನ್ನು ಗುರುದೇವನಿಗೆ ಹೇಗೆ ಕೊಡುವುದು?' ಎಂದು ವ್ಯಾಕುಲಿತನಾದ. ಸುತ್ತಾಮುತ್ತ ನೋಡಿದರೆ ಎಲ್ಲೂ ನೀರು ಸಿಗುವ ಲಕ್ಷಣ ಕಾಣಲಿಲ್ಲ. ನಿರಾಸೆಯಿಂದ ಬುದ್ಧದೇವನ ಬಳಿ ಮರಳಿದ. 'ಗುರುದೇವ ಹತ್ತಿರದಲ್ಲೊಂದು ಪುಟ್ಟ ಕೊಳವಿದೆ, ಆದರೆ ಕೆಸೆರೆದ್ದು ನೀರು ಬಗ್ಗಡವಾಗಿದೆ' ಎಂದ. ಬುದ್ಧ 'ಹೌದೇನು' ಎಂದು ಸುಮ್ಮನಾದ. ಕೆಲ ಸಮಯದ ನಂತರ ಅದೇ ಶಿಷ್ಯನನ್ನು ಕರೆದು ಅದೇ ಕೊಳಕ್ಕೆ ಹೋಗಿ ನೀರು ತರಲು ಹೇಳಿದ. ಕೊಂಚ ಅನುಮಾನಿಸಿದ ಶಿಷ್ಯ ಗುರುವಿನ ಆಜ್ಞೆಗೆ ಎದುರು ಹೇಳಲಾರದೆ ಮತ್ತೆ ಕೊಳದ ಬಳಿ ಹೋದ. ಶಿಷ್ಯನ ಅನುಮಾನ, ಹಿಂಜರಿಕೆಯನ್ನು ಗ್ರಹಿಸಿದ ಬುದ್ಧದೇವ ನಸುನಕ್ಕ.

ಕೊಳದ ಬಳಿ ಹೋದ ಶಿಷ್ಯನಿಗೆ ಅಚ್ಚರಿ ಕಾದಿತ್ತು. ಕೊಳ ಪ್ರಶಾಂತವಾಗಿ, ಕೆಸರೆಲ್ಲ ತಳ ಸೇರಿ ನೀರು ತಿಳಿಯಾಗಿತ್ತು. ಸಂತಸದಿಂದ ಸಾಕಷ್ಟು ನೀರು ತೆಗೆದುಕೊಂಡು ಮರಳಿದ. ಅಷ್ಟೊತ್ತಿಗೆ ಶಿಷ್ಯಂದಿರೆಲ್ಲ ಮರಳಿದ್ದರು. ಬುದ್ಧದೇವ ನೀರನ್ನು ತಂದ ಶಿಷ್ಯನನ್ನು ಕೇಳಿದ 'ಎರಡನೇ ಬಾರಿ ನೀರು ತರಲು ಹೋದಾಗ ನೀರು ತಿಳಿಯಾಗಿತ್ತು ಅಲ್ಲವೆ... ಅದಕ್ಕೆ ನೀನೇನು ಮಾಡಿದೆ?' ಎಂದ. ಆಗ ಶಿಷ್ಯ 'ಗುರುದೇವ ನಾನೇನೂ ಮಾಡಲಿಲ್ಲ... ಸ್ವಲ್ಪ ಸಮಯಾವಕಾಶ ನೀಡಿದ್ದರಿಂದ ಕೆಸರೆಲ್ಲಾ ತಳ ಸೇರಿ ನೀರು ತನ್ನಷ್ಟಕ್ಕೆ ತಾನೆ ತಿಳಿಯಾಯಿತು' ಎಂದ.

ಆಗ ಶಿಷ್ಯರನ್ನೆಲ್ಲಾ ಉದ್ದೇಶಿಸಿ 'ನೋಡಿ ಕದಡಿ ಬಗ್ಗಡವಾಗಿದ್ದ ನೀರು, ಯಾವುದೇ ಪ್ರಯತ್ನವಿಲ್ಲದೇ ಸ್ವಲ್ಪ ಸಮಯದ ನಂತರ ತನ್ನಷ್ಟಕ್ಕೆ ತಾನೇ ತಿಳಿಯಾಯಿತು. ನಮ್ಮ ಮನಸ್ಸೂ ಹಾಗೆಯೇ. ಮನಸ್ಸು ಯಾವುದೋ ಕಾರಣಕ್ಕೆ ಕದಡಿಹೋದಾಗ... ನೆಮ್ಮದಿ ಹುಡುಕುತ್ತಾ ಏನೇನೊ ಮಾಡಲು ಹೋಗಬೇಡಿ... ಸುಮ್ಮನಿದ್ದು ಬಿಡಿ. ಅಪ್ರಯತ್ನವೇ ಮುಖ್ಯವಿಲ್ಲಿ. ನೀವು ಪ್ರಯತ್ನ ಮಾಡಿದಷ್ಟು ಇನ್ನೂ ಕದಡುತ್ತದೆ. ಸುಮ್ಮನೆ ನೀವು ನಿಮ್ಮ ಮನಸಿನ ವೀಕ್ಷಕರಾಗಿಬಿಡಿ. ಮನಸು ತಾನೇ ತಾನಾಗಿ ತಿಳಿಯಾಗಲಿ, ನೆಮ್ಮದಿ ಕಂಡುಕೊಳ್ಳಲಿ.' ಎಂದ.

***
ಮನಸು ಕದಡಿಹೋದಾಗ, ಮುದಡಿದಾಗ ನಿಮ್ಮ ನೋವ್ವನ್ನು ಗೌರವಿಸಿ, ಸುಮ್ಮನಿದ್ದು ಬಿಡಿ. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಮನಸ್ಸಿಗೂ ತಿಳಿಯಾಗಲು ಕೊಂಚ ಕಾಲಾವಕಾಶ ಕೊಡಿ. ಕಾಲ ಎಲ್ಲವನ್ನೂ ಮರೆಸುತ್ತೆ, ಎಲ್ಲಾ ಗಾಯವನ್ನೂ ಮಾಯಿಸುತ್ತದೆ. 'ಕಾಲಾಯ ತಸ್ಮೈ ನಮಃ..' ಎಂದಿದ್ದಾರೆ ಹಿರಿಯರು. ಮನುಷ್ಯರೆಂದ ಮೇಲೆ ಕಷ್ಟ, ನಷ್ಟ, ಸೋಲು, ನೋವ್ವು ಇದ್ದೇ ಇದೆ. ಆದರೆ ಅದು ನಮ್ಮ ಜೀವನವನ್ನು ನಿಯಂತ್ರಿಸುವ, ನಿರ್ದೇಶಿಸುವ ಮಟ್ಟಕ್ಕೆ ಹೋಗಬಾರದು. ನಮ್ಮ ಬದುಕು ನಮ್ಮ ಕೈಯಲ್ಲಿದ್ದೆ, ಅದನ್ನು ಸುಂದರವಾಗಿಸುವ 'ಶುಭಸಂಕಲ್ಪ'ವೂ ನಮ್ಮ ಕೈಯಲ್ಲಿದೆ, ಅಲ್ಲವೇ?

ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!

English summary
Inspirational short story. How to calm an agitated or disturbed mind? Bhagavan Buddha says, just don't do anything. Mind itself calms down. Never surrender yourself to bad habits like drinking, drugs, smoking when the chips are down. An anecdote from Buddha's life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X