ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭಸಂಕಲ್ಪ : ಚಿಂತೆ ಬಿಸಾಕು, ಧೈರ್ಯದಿಂದ ಬದುಕು

By * ಗುಣಮುಖ
|
Google Oneindia Kannada News

ಮೊನ್ನೆ ಓದುಗ ಮಿತ್ರರೊಬ್ಬರು, ಎಲ್ಲಾ ಸರಿಯಿದೆ ಅನಿಸಿದರೂ, ಸದಾ ಒಂದಲ್ಲಾ ಒಂದು ರೀತಿಯ ಭಯ ಕಾಡುತ್ತಿರುತ್ತವೆ ಎಂದು ಪತ್ರ ಬರೆದಿದ್ದರು. ಆ ಪತ್ರದಲ್ಲಿ ಬದುಕಿನ ಅಭದ್ರತೆ, ಅಸ್ಥಿರತೆ ತುಂಬಿದ ಭವಿಷ್ಯ, ಸಮಸ್ಯೆಯ ನಿರೀಕ್ಷೆಯಿಂದ ಉಂಟಾಗುವ ಭಯ, ಆತಂಕದ ಬಗ್ಗೆ ಹೇಳಿಕೊಂಡರು. ಈ ಭಯದಿಂದ ಹೊರಬರುವ ಬಗೆ ಹೇಗೆ? ಏನಾದರೂ ಉಪಾಯಗಳಿದ್ದರೆ ತಿಳಿಸಿ ಎಂದರು.

ಅಂಜಿಕಿನ್ಯಾತಕಯ್ಯ? ಎಂದು ಪುರಂದರ ದಾಸರು ಹಾಡಿದ್ದಾರೆ. ಹಾಗೆ ನೋಡಿದರೆ, ಎಲ್ಲರನ್ನೂ ಒಂದಲ್ಲ ಒಂದು ಭಯ ಕಾಡುತ್ತಿರುತ್ತದೆ. ಅಂದುಕೊಂಡಿದ್ದು ಗಳಿಸುತ್ತೇವೋ ಇಲ್ಲವೋ? ಗಳಿಸಿದ್ದು ದಕ್ಕುತ್ತದೋ ಇಲ್ಲವೋ? ಗಳಿಸಿದ್ದು ಕಳೆದುಕೊಳ್ಳುತ್ತೇವೋ ಏನೋ? ಯಾರಾದರೂ ಕಿತ್ತುಕೊಳ್ಳುತ್ತಾರೋ ಏನೋ? ನನಗಿಂತ ಅವನು ಹೆಚ್ಚುಗಳಿಸಿದರೆ? ಹೀಗೇ... ಇನ್ನು ಸಂಬಂಧಗಳಲ್ಲಿ ಕೂಡ ಅನೇಕ ಭಯಗಳು ಕಾಡುತ್ತವೆ. ಅವಳು/ಅವನು ಪ್ರೀತಿಸುತ್ತಾಳೋ/ನೋ ಇಲ್ಲವೋ? ಪ್ರೀತಿಸಿದವರು ದಕ್ಕುತ್ತಾರೋ ಇಲ್ಲವೋ? ದಕ್ಕಿದವರು ಕೊನೆವರೆಗೂ ಜೊತೆಯಿರುತ್ತಾರೋ ಇಲ್ಲವೋ? ಮಧ್ಯದಲ್ಲಿ ಕೈ ಕೊಟ್ಟರೆ, ನನಗೆ ಯಾರು ಗತಿ? ಕೊನೆವರೆಗೂ ಇರುವವರು ಬದಲಾದರೆ ಏನು ಗತಿ? ಹೀಗೇ...

ಆಧುನಿಕ ಬದುಕು ಸಂಕೀರ್ಣತೆಯೊಂದಿಗೆ, ಅನೇಕ ಭಯಗಳನ್ನು ಹೊತ್ತು ತಂದಿದೆ. ನಮ್ಮ ಬದುಕು ಬಳಲುವುದು ಸದಾ ಕಾಡುವ ಇಂತಹ ಭಯಗಳಿಂದಲೇ ಅಲ್ಲವೇ? ನಮ್ಮ ಮೇಲೆ ನಮಗೆ ವಿಶ್ವಾಸ ಕಮ್ಮಿಯಾದಾಗ ಭಯ ಹೆಚ್ಚಾಗುತ್ತಾ? ಅಥವಾ ನಾವು ನಿಶ್ಶಕ್ತರಾಗಿ, ನಮ್ಮ ಕರ್ತವ್ಯದಿಂದ ವಿಮುಖರಾದಾಗ ಭಯ ಹೆಚ್ಚಾಗುತ್ತಾ? ಅಥವಾ ನಾವು ಸದಾ ಸಮಸ್ಯೆಯನ್ನು ಕುರಿತು ಚಿಂತಿಸುವುದರಿಂದ ಭಯ ಹೆಚ್ಚಾಗುತ್ತಾ? ಹಾಗೋ.. ಹೀಗೋ.. ಒಟ್ಟಿನಲ್ಲಿ ಈ ಭಯ ತುಂಬಿದ ಬದುಕು ನಮ್ಮ ಮನಸ್ಸಿನ ನೆಮ್ಮದಿ ಮತ್ತು ಆರೋಗ್ಯ ಹಾಳು ಮಾಡುತ್ತದೆ.

Dare to defeat fear

ನಂಬಲಿಕ್ಕೆ ಕಷ್ಟವಾದರೂ... ವಿಸ್ಮಯಕಾರಿ ವಿಷಯವೆಂದರೆ, ಎಂತಹ ಮಹಾನುಭಾವರಿಗೂ, ಸಮರ್ಥರಿಗೂ ಭಯ ತನ್ನ ದರ್ಶನ ನೀಡುತ್ತಿರುತ್ತದೆ. ಆದರೆ ಭಯವಾದಾಗ ನೀವು ಏನು ಮಾಡುವಿರಿ ಎಂಬುದರ ಮೇಲೆ ನಿಮ್ಮ ಮನಶ್ಶಾಂತಿ, ನೆಮ್ಮದಿ ನಿರ್ಧಾರವಾಗುತ್ತದೆ. ಕ್ರಿಕೆಟ್‌ನ ಮಹಾನ್ ಸಾಧಕ ಸಚಿನ್ ತೆಂಡೂಲ್ಕರ್‌ನಂತಹ ಸಚಿನ್‌ಗೂ ಪ್ರತಿ ಕ್ರಿಕೆಟ್ ಮ್ಯಾಚ್‌ನ ಮುನ್ನ ನಾನು ಬ್ಯಾಟಿಂಗ್‌ನಲ್ಲಿ ವಿಫಲವಾದರೆ? ಎಂಬ ಭಯವಿರುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸಾಮಾನ್ಯರಿಗೂ, ಸಾಧಕರಿಗೂ ಇರುವ ಬಹುಮುಖ್ಯ ವ್ಯತ್ಯಾಸವೆಂದರೆ ಭಯವನ್ನು ಅವರು ಹೇಗೆ ಎದುರಿಸುತ್ತಾರೆ ಎನ್ನುವುದು. ಪ್ರತಿನಿತ್ಯ ಶಿಸ್ತು, ಕಠಿಣ ಪರಿಶ್ರಮದಿಂದ ಅವರು ಭಯವನ್ನು ಮೆಟ್ಟಿ ನಿಲ್ಲುತ್ತಾರೆ. ಆದಾಗ್ಯೂ, ವಿಫಲವಾದರೆ ಮತ್ತೆ ನಿರಂತರ ಪರಿಶ್ರಮಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೆ. ನಿರಂತರ ಸಾಧನೆಗೆ ತೊಡಗುವ ವ್ಯಕ್ತಿಗೆ ಭಯ ಪಡುವುದಕ್ಕೆ, ಚಿಂತಿಸುವುದಕ್ಕೆ ಸಮಯವೇ ಇರುವುದಿಲ್ಲ.

ನಿಮ್ಮ ಸಮಯವನ್ನು ನಿಮ್ಮ ಭಯಗಳ ಬಗ್ಗೆ ಚಿಂತಿಸಲು ವಿನಿಯೋಗಿಸುವಿರೋ? ಅಥವಾ ಅದನ್ನು ಮೀರುವ ಕಠಿಣ ಪರಿಶ್ರಮಕ್ಕೆ ವಿನಿಯೋಗಿಸುವಿರೋ ಎಂಬುದರ ಮೇಲೆ ನಿಮ್ಮ ಮಾನಸಿಕ ನೆಮ್ಮದಿ ನಿರ್ಧಾರವಾಗುತ್ತದೆ. ನಿಮಗೆ ಒಬ್ಬ ತರುಣ ಸನ್ಯಾಸಿಯ ಬದುಕಲ್ಲಿ ನಡೆದ ಒಂದು ಪುಟ್ಟ ಘಟನೆಯನ್ನು ಹೇಳಬೇಕು.

***
ಒಮ್ಮೆ ತರುಣ ಸನ್ಯಾಸಿಯೊಬ್ಬ ವಾರಣಾಸಿಯಲ್ಲಿ ದುರ್ಗಾದೇವಿ ದರ್ಶನ ಪಡೆದು ದೇವಸ್ಥಾನದಿಂದ ಹೊರಗೆ ಬಂದ. ಹೊರಬಂದವನನ್ನು ಪುಂಡು ಕೋತಿಗಳು ಕಾಡಲಾರಂಭಿಸಿದವು. ಅವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಕೊಂಚ ದೂರ ನಡೆದ. ಅಲ್ಲಿಗೂ ಅವನನ್ನು ಹಿಂಬಾಲಿಸಿದವು. ಕೊನೆಗೆ ಗಾಬರಿಯಾಗಿ ವಾರಣಾಸಿಯ ಬೀದಿಯಲ್ಲಿ ಓಡತೊಡಗಿದ. ಹಟಮಾರಿ ಕೋತಿಗಳು ತರುಣ ಸನ್ಯಾಸಿಯ ಬೆನ್ನು ಹತ್ತಿದವು. ಓಡುತ್ತಿದ್ದ ತರುಣ ಸನ್ಯಾಸಿಯನ್ನು ಕಂಡ ಹಿರಿಯ ಸಾಧುವೊಬ್ಬ "ಓಡಬೇಡ! ಅವುಗಳನ್ನು ಎದುರಿಸಿ ತಿರುಗಿ ನಿಲ್ಲು!" ಎಂದು ಕೂಗಿ ಹೇಳಿದ.

ಹಿರಿಯ ಸಾಧುವಿನ ವಾಣಿ ಕೇಳಿ ತರುಣ ಸನ್ಯಾಸಿ ಓಡುವುದು ನಿಲ್ಲಿಸಿ ತಿರುಗಿ ಬಿದ್ದ ನೋಡಿ. ಬೆನ್ನು ಹತ್ತಿದ ಕೋತಿಗಳೆಲ್ಲ ಬೆದರಿ ಓಡಿಹೋದವು. ಆಶ್ಚರ್ಯವಾಯಿತು... ಅರೇ ಇಷ್ಟೇನೆ? ಎನಿಸಿತು. ಅಂದಿನಿಂದ ಆ ತರುಣ ಸನ್ಯಾಸಿಯ ಬದುಕಿನ ದೃಷ್ಟಿಕೋನವೆ ಬದಲಾಗಿಹೋಯಿತು. ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸಿ ತಿರುಗಿಬಿದ್ದರೆ, ಧೈರ್ಯ ತೋರಿದರೆ ಬದುಕಿನಲ್ಲಿ ಸೋಲೇ ಇಲ್ಲ ಎಂದು ಅರಿತ. ಅಂದಿನವರೆಗೆ ಕಲಿತ ವೇದಾಂತಕ್ಕೆ ಒಂದು ಹೊಸ ದೃಷ್ಟಿಕೋನ ಸಿಕ್ಕಿತು. ಪ್ರಪಂಚದಾದ್ಯಂತ ಕೋಟ್ಯಂತರ ಜನರನ್ನು ತನ್ನ ವ್ಯಕ್ತಿತ್ವದಿಂದ, ತನ್ನ ಪ್ರವಚನದಿಂದ ಸೂಜಿಗಲ್ಲಿನಂತೆ ಸೆಳೆದ, ಸ್ಫೂರ್ತಿ ತುಂಬಿದ. ಆ ತರುಣ ಸನ್ಯಾಸಿ ಗತಿಸಿ ನೂರಾರು ವರುಷ ಕಳೆದರೂ ಇನ್ನೂ ಸ್ಫೂರ್ತಿ ತುಂಬುತ್ತಿರುವ ಆ ತರುಣ ಸನ್ಯಾಸಿ ಬೇರೆ ಯಾರೂ ಅಲ್ಲ, ಭಾರತ ಕಂಡ ಅದ್ವಿತೀಯ ಆಧ್ಯಾತ್ಮದ ನಾಯಕ ಸ್ವಾಮೀ ವಿವೇಕಾನಂದ!

***
ಹೆದರಿ ಓಡಿದರೆ ಅಟ್ಟಿಸಿಕೊಂಡು ಬರುವ ಕೋತಿಗಳಂತೆ ನಮ್ಮ ಬದುಕಿನ ಸಮಸ್ಯೆಗಳು ಮತ್ತು ಭಯಗಳು. ನಿರ್ಭಯರಾಗಿ ಎಂದ ಸ್ವಾಮಿ ವಿವೇಕಾನಂದರ ಸಿಂಹವಾಣಿಯಲ್ಲೇ ನಮಗೆ ಅಭಯವಿದೆ. ಬನ್ನಿ, ಇಂದಿನಿಂದ ಸಮಸ್ಯೆಗಳ ಬಗ್ಗೆ ಚಿಂತಿಸುವ, ಭಯ ಪಡುವ ಮಾರ್ಗವ ತೊರೆದು, ಬದುಕನ್ನು ಧೈರ್ಯದಿಂದ ಎದುರಿಸಿ ಕರ್ತವ್ಯಮುಖರಾಗುವ ಮಾರ್ಗದಲ್ಲಿ ಸಾಗುವ 'ಶುಭಸಂಕಲ್ಪ' ಮಾಡೋಣ! [ಲೇಖಕರ ಈಮೇಲ್ : [email protected]]

ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!

English summary
Inspirational Kannada short story by Gunamukha. A response to the letter by a reader who feared he might lose his job. 'Be not Afraid of anything. You will do Marvelous work. it is Fearlessness that brings Heaven even in a moment' - Swami Vivekananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X