ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಿಯನ್ನು ಗುರುತಿಸುವ ಮನಸ್ಸು ಕೊಡಪ್ಪಾ ದೇವರೆ!

By * ಗುಣಮುಖ
|
Google Oneindia Kannada News

Pray God to give power to identify love
ನಾವೆಲ್ಲಾ ದೇವರು ನಮಗೆ ಕಾಣಿಸಲಿ ಎಂದು ಹಂಬಲಿಸುತ್ತೇವೆ, ಆರಾಧಿಸುತ್ತೇವೆ, ಮತ್ತೆಮತ್ತೆ ಪ್ರಾರ್ಥಿಸುತ್ತೇವೆ. ಆದರೆ ನಾವೆಲ್ಲಾ ನಿಜವಾಗಿ ದೇವರನ್ನು ಕೇಳಿಕೊಳ್ಳಬೇಕಾಗಿರುವುದು, ಸರ್ವಾಂತರ್ಯಾಮಿಯಾಗಿರುವ, ಅಂದರೆ ನಮ್ಮ ಸುತ್ತಲು ಇರುವ ದೇವರನ್ನು ಕಾಣುವ ಕಣ್ಣುಗಳನ್ನು ನಮಗೆ ದಯಪಾಲಿಸಲಿ ಎಂದು. ಹಾಗೆಯೇ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರೀತಿಗಾಗಿ ಕಾತರಿಸಿ, ಹಂಬಲಿಸಿ, ಕನವರಿಸಿ ಪ್ರಾರ್ಥಿಸುವವರೇ. ಆದರೆ ನಾವೆಲ್ಲ ನಿಜವಾಗಿ ಕೇಳಿಕೊಳ್ಳಬೇಕಿರುವುದು, ನಮ್ಮ ಸುತ್ತಲು ಇರುವ ಪ್ರೀತಿಯನ್ನು ಗುರುತಿಸಿ, ಸ್ವೀಕರಿಸಿ, ಗೌರವಿಸುವಂತೆ ಆಗುವ ನಮ್ಮ ಒಳ ಮನ ಪರಿವರ್ತನೆಯನ್ನು.

ಏನನ್ನೋ, ಯಾರನ್ನೋ ಪರಿವರ್ತಿಸಲು ಹೊರಡುವ ನಾವು, ಕೊನೆಗೆ ಪರಿವರ್ತಿಸಬೇಕಾಗಿದ್ದು ನಮ್ಮನಲ್ಲವೇ? ನಮ್ಮ ಗ್ರಹಿಕೆಯ ಮಟ್ಟವನ್ನಲ್ಲವೇ? ಎಂಬ ಅರಿವನ್ನು ಮುಟ್ಟುತ್ತೇವೆ. ಹೀಗೆ ಹೇಳುತ್ತಿರುವಾಗಲೇ ನನಗೊಂದು ಎಲ್ಲೋ ಕೇಳಿದ ಕತೆ ನೆನಪಾಗುತ್ತಿದೆ.

***
ಅಂದು ಆ ದಂಪತಿಗಳ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಸಮಾರಂಭ. ವಿಚ್ಛೇದನಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಆ ಸಮಾರಂಭಕ್ಕೆ ವಿಶೇಷ ಮಹತ್ವ ಬಂದಿತ್ತು. ಡ್ಯಾನ್ ಮತ್ತು ರೋಸಿಯವರ ಆ ಸಮಾರಂಭಕ್ಕೆ ಇಡೀ ಊರಿಗೆ ಊರೇ ಬಂದು ಶುಭ ಹಾರೈಸಿತು. ತಮ್ಮ ಸೊಗಸಾದ ಗುಣವಂತಿಕೆ, ನಯ ವಿನಯಗಳ ವರ್ತನೆಯಿಂದ ಡ್ಯಾನ್ ಮತ್ತು ರೋಸಿ ಇಡೀ ಊರಿನ ಪ್ರೀತಿಗೆ ಪಾತ್ರರಾಗಿದ್ದರು. ನಮ್ಮ ಮಕ್ಕಳು ಕೂಡ ಡ್ಯಾನ್ ಮತ್ತು ರೋಸಿಯರ ತರಹ ಬಾಳಬೇಕು ಎಂದು, ಎಲ್ಲರಿಗೂ ಆಳದಲ್ಲಿ ಆಸೆ ಹುಟ್ಟಿಸುವಷ್ಟು ಆದರ್ಶಪ್ರಾಯರಾಗಿದ್ದರು. ಆ ಪುಟ್ಟ ಪಟ್ಟಣದಲ್ಲಿ ಅವರನ್ನು ಬಲ್ಲದವರೇ ಇಲ್ಲ. ಅವರ ದಾಂಪತ್ಯ ಯುವ ಜೋಡಿಗಳಿಗೆ ಆದರ್ಶಪ್ರಾಯವಾಗಿತ್ತು. ಎಷ್ಟೋ ಸಾರಿ ಏನು ಬಂತು, ಪ್ರತಿಸಾರಿಯೂ... ಆ ಊರಿನ ಪಾದ್ರಿ ಚರ್ಚಿನಲ್ಲಿ ಮದುವೆಯನ್ನು ಮಾಡಿಸುವಾಗ, ಮದುವೆಯ ಬಾಂಧವ್ಯ ಬೋಧಿಸುವಾಗ 'ಆದರ್ಶ ವಿವಾಹ'ಕ್ಕೆ ಡ್ಯಾನ್ ಮತ್ತು ರೋಸಿಯ ದಾಂಪತ್ಯದ ಉದಾಹರಣೆ ಕೊಡುತ್ತಿದ್ದ.

ಹೀಗಿರುವ ಆದರ್ಶ ದಂಪತಿಗಳ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಆ ದಿನ ಇಡೀ ಊರೇ ನಲಿದು ಸಂಭ್ರಮಿಸಿ, ದಂಪತಿಗಳಿಂದ ರಾತ್ರಿಯ ಔತಣ ಸ್ವೀಕರಿಸಿ, ಶುಭ ಹಾರೈಸಿ ಮನೆಗೆ ಮರಳಿದರು.

ಇದಾಗಿ ಮರುದಿನ, ಕಾಡ್ಗಿಚ್ಚಿನಂತೆ ಒಂದು ಸುದ್ದಿ ಹಬ್ಬಿತು. ರೋಸಿ ಡ್ಯಾನ್-ನಿಂದ ವಿಚ್ಛೇದನ ಬಯಸಿ ಕೋರ್ಟಿನಲ್ಲಿ ದಾವೆ ಹೂಡಿದ್ದಳು! ಇಡೀ ಊರಿಗೆ ಹೃದಯಾಘಾತ. ಯಾರಿಗೂ ನಂಬಲು ಸಾಧ್ಯವೇ ಆಗಲಿಲ್ಲ. ಯಾರಾದರೂ ಸೂರ್ಯ ಪಶ್ಚಿಮದಲ್ಲಿ ಹುಟ್ಟಿದನೆಂದರೆ ಸುಲಭವಾಗಿ ನಂಬುತ್ತಿದ್ದರೋ ಏನೋ. ಆ ಊರಿನ ಕೋರ್ಟ್ ನ್ಯಾಯಾಧೀಶನಿಗೂ ಕೂಡ ಅರ್ಜಿ ಸ್ವೀಕರಿಸಲು ಸಾಧ್ಯವಾಗಲಿಲ್ಲ, ರೋಸಿಯನ್ನು ಪರಿಪರಿಯಾಗಿ ಕೇಳಿಕೊಂಡರು ಕೇಳದೆ ಹಠ ಮಾಡಿ ರೋಸಿ ವಿಚ್ಛೇದನಕ್ಕೆ ಅರ್ಜಿ ಹಾಕೇ ಬಿಟ್ಟಳು, ವಿಚ್ಛೇದನಕ್ಕೆ ಕಾರಣವನ್ನೂ ತಿಳಿಸದೆ. ದುರಂತವೆಂದರೆ ನೋಡಿ, ಹಿಂದಿನ ದಿನದ ಔತಣಕೂಟಕ್ಕೆ ಬಂದವರಲ್ಲಿ, ಶುಭ ಹಾರೈಸಿದವರಲ್ಲಿ ನ್ಯಾಯಾಧೀಶನೂ ಇದ್ದ!

ಸರಿ, ಕುತೂಹಲ ತಾಳಲಾರದೆ ನ್ಯಾಯಾಧೀಶ ಅರ್ಜಿದಾರರನ್ನು ತಕ್ಷಣವೇ ವಿಚಾರಣೆಗೆ ಕರೆದ. ವಿಚಾರಣೆಯ ದಿನ ಇಡೀ ಊರಿಗೆ ಊರೇ ಕೋರ್ಟ್‌ನಲ್ಲಿ ನೆರೆದಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ. ಎಲ್ಲರ ನಿರೀಕ್ಷೆಯಂತೆ, ನ್ಯಾಯಾಧೀಶ ರೋಸಿಯನ್ನು ವಿಚ್ಛೇದನಕ್ಕೆ ಕಾರಣವನ್ನು ಕೇಳುವುದರೊಂದಿಗೆ ವಿಚಾರಣೆ ಆರಂಭಿಸಿದ. ರೋಸಿ ಸೌಮ್ಯ ಸ್ವಭಾವದ ಹೆಣ್ಣು ಮಗಳು, ನಲವತ್ತೈದರ ಗಡಿ ದಾಟಿರುವ ಗ೦ಭೀರ ಸ್ವಭಾವದ ಹೆಣ್ಣುಮಗಳು. ಅಳತೆ ತಪ್ಪಿ ಮೀರಿ ವರ್ತಿಸಿದ್ದು ಯಾರು ನೋಡಿಲ್ಲ ಮತ್ತು ಕೇಳಿಲ್ಲ. ಎಲ್ಲರಿಗೂ ಕುತೂಹಲ, ರೋಸಿಯ ವಿಚ್ಛೇದನ ಅರ್ಜಿಗೆ ಕಾರಣವೇನಿರಬಹುದೆಂದು?

ನ್ಯಾಯಾಧೀಶ ತಡಮಾಡದೆ ತನ್ನ ವಿಚಾರಣೆ ಶುರುಮಾಡಿದ "ಅಮ್ಮ ರೋಸಿ, ಮೊನ್ನೆ ತಾನೇ ನಿನ್ನ ಮತ್ತು ಡ್ಯಾನಿಯ ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ಸಮಾರಂಭ ನಡೆಯಿತು. ನಿನ್ನ ಅರ್ಜಿಗೆ ಬಲವಾದ ಕಾರಣ ತಿಳಿಸದಿದ್ದರೆ, ನಾವು ವಿಚಾರಣೆಯಲ್ಲಿ ಮುಂದುವರೆಯುವ ಹಾಗಿಲ್ಲ. ದಯವಿಟ್ಟು ನೀನು ವಿಚ್ಛೇದನ ಬಯಸಲು ಕಾರಣವೇನು ಎಂದು ಈ ಕೋರ್ಟಿಗೆ ತಿಳಿಸು?"

ಕ್ಷಣ ಕಾಲ ಅಳುಕಿದ ರೋಸಿ, ಧೈರ್ಯವನ್ನು ಒಟ್ಟು ಗುಡಿಸಿಕೊಂಡು ತನ್ನ ಅಂತರಾಳದ ನೋವನ್ನು ಹೇಳಿಕೊಂಡಳು "ಸ್ವಾಮೀ, ನನ್ನ ಗಂಡ ಡ್ಯಾನಿ ಕೆಟ್ಟವನಲ್ಲ, ಒಂದು ದಿನವೂ ಕಡೆಗಣಿಸಿದವನಲ್ಲ. ಯಾವುದಕ್ಕೂ ಕೊರತೆ ಮಾಡಿದವನಲ್ಲ. ಆದರೆ ಅವನ ಒಂದು ದುರಭ್ಯಾಸ ನನ್ನನೂ ಈ ತಿರ್ಮಾನಕ್ಕೆ ನೂಕಿದೆ." ವಿಚಾರಣೆಯನ್ನು ಕೇಳುತ್ತಿದ್ದವರಲ್ಲಿ ಡ್ಯಾನಿ, ಅವನ ಸಹೋದರು, ಸ್ನೇಹಿತರು ಮತ್ತು ಅವನ ವಯಸ್ಸಾದ ತಾಯಿ ಕೂಡ ಇದ್ದರು. ಎಲ್ಲರಿಗೂ ಅಚ್ಚರಿ, ಏನಿದ್ದೀತು ಡ್ಯಾನಿಯ ದುರಭ್ಯಾಸ ನಮಗೆ ಗೊತ್ತಿಲ್ಲದಿರುವುದು? ಡ್ಯಾನಿ ತನ್ನ ಸಭ್ಯ ನಡವಳಕೆಯಿಂದ ಇಡೀ ಊರಿಗೆ ಪ್ರಸಿದ್ಧನಾಗಿದ್ದ.

ರೋಸಿ ಮುಂದುವರೆದು "ನಮಗೆ ಪ್ರತಿ ರಾತ್ರಿ ಊಟಕ್ಕೆ ಬ್ರೆಡ್ ಬಳಸುವುದು ಅಭ್ಯಾಸ. ನನ್ನ ಗಂಡ ಪ್ರತಿಸಾರಿ ಬ್ರೆಡ್ ಕತ್ತರಿಸುವಾಗ, ಕಂದಿದ, ಗಟ್ಟಿಯಾದ ಭಾಗವನ್ನು ನನಗೆ ಕೊಟ್ಟು, ಮೃದುವಾದ ಬಿಳಿ ಭಾಗವನ್ನು ತಾನು ತಿನ್ನುತ್ತಿದ್ದ. ಒಂದು ದಿನವಲ್ಲ, ಎರಡು ದಿನವಲ್ಲ... ಸತತ ಇಪ್ಪತ್ತೈದು ವರ್ಷ ನನಗೆ ಈ ರೀತಿ ನನ್ನ ನಡೆಸಿಕೊಂಡಿದ್ದಾನೆ. ಮುಂದಾದರೂ ಬದಲಾಗಬಹುದು ಎಂಬ ಆಸೆಯಲ್ಲಿ ನಾನು ಸುಮ್ಮನಿದ್ದೆ. ಆದರೆ ಆ ಬದಲಾಗುವ ದಿನ ಬರಲೇ ಇಲ್ಲ. ಇಪ್ಪತ್ತೈದನೇ ವಿವಾಹ ವಾರ್ಷಿಕೋತ್ಸವದ ಸಂತೋಷದ ರಾತ್ರಿ ಕೂಡ ಈ ರೀತಿ ಮಾಡಿದಾಗ ನನಗೆ ತಡೆಯಲಾಗಲಿಲ್ಲ. ಇನ್ನೆಷ್ಟು ದಿನ ಈ ಅವಮಾನವನ್ನು, ಕೀಳು ನಡತೆಯನ್ನು ಸಹಿಸಲಿ? ನೀವೇ ಹೇಳಿ. ಸಾಕು ಸಾಕಾಗಿದೆ ನನಗೆ ಈ ಬದುಕು" ಎಂದು ಹೇಳುತ್ತಾ... ಹೇಳುತ್ತಾ ರೋಸಿಯ ಕಣ್ಣಲ್ಲಿ ಅಶ್ರುಧಾರೆ, ಕುತೂಹಲದಿಂದ ಕೇಳುತ್ತಿದ್ದವರ ಕಣ್ಣಲ್ಲೂ... ಕೋರ್ಟ್‌ನಲ್ಲಿ ಅಲ್ಲಲ್ಲಿ ನಿಟ್ಟುಸಿರು. 'ಯಾವ ಹುತ್ತದಲ್ಲಿ ಯಾವ ಹಾವಿದೆಯೋ...' 'ಛೇ ಡ್ಯಾನಿ ಈ ರೀತಿ ಮಾಡಿದನೇ?' ಎಂಬ ಅಸಮಾಧಾನದ ನುಡಿ ಕೋರ್ಟಲ್ಲಿ.

ಕೊನೆಗೆ ನ್ಯಾಯಾಧೀಶ ಡ್ಯಾನಿಯನ್ನು ಕಟಕಟೆಗೆ ಕರೆದ. ಡ್ಯಾನಿ ಗಂಭಿರವಾಗಿ ಬಂದು ನಿಂತು ಕೋರ್ಟಿಗೆ ವಂದಿಸಿದ.

"ಡ್ಯಾನಿ ಈ ಆಪಾದನೆಯ ಬಗ್ಗೆ ನೀನು ಹೇಳುವುದೇನಾದರು ಇದೆಯೇ?" ಎಂದ ನ್ಯಾಯಾಧೀಶನ ಧ್ವನಿಯಲ್ಲಿ ಬೇಡ ಬೇಡವೆಂದರೂ, ಡ್ಯಾನಿಯ ಕುರಿತು ಕೊಂಚ ಅಸಹನೆ, ಅಸಮಾಧಾನವಿತ್ತು.

"ನ್ಯಾಯಾಧೀಶರೆ, ಈ ಆಪಾದನೆಗೆ ನಾನು ಉತ್ತರಿಸುವುದಿಲ್ಲ, ನನ್ನ ತಾಯಿ ಬಂದು ಉತ್ತರಿಸಲಿದ್ದಾಳೆ!" ಎಂದ ಡ್ಯಾನಿ ಧ್ವನಿಯಲ್ಲಿ ಕಿಂಚತ್ತು ಅಪರಾಧಿ ಭಾವವಿರಲಿಲ್ಲ. ಅದನ್ನು ಕಂಡು ನೆರೆದಿದ್ದ ಜನರಲ್ಲಿ ಆಕ್ರೋಶ ಮತ್ತು ಆಶ್ಚರ್ಯ ಒಟ್ಟಿಗೆಯಾಯಿತು. ಡ್ಯಾನಿಯ ವಯಸ್ಸಾದ ತಾಯಿ ಕಟಕಟೆಯಲ್ಲಿ ಬಂದು ನಿಂತಳು. ಎಲ್ಲರಿಗೂ ಕುತೂಹಲ, ಏನು ಅಪರೂಪದ ಸಂಸಾರದ, ಡ್ಯಾನಿಯ ಗುಟ್ಟನ್ನು ಹೇಳುವಳೋ ಎಂದು. ಅತ್ತೆ ಎಂದಾದರು ಸೊಸೆಯ ಪರವಾಗಿ ಮಾತಾಡಲು ಸಾಧ್ಯವೇ? ಎಂಬ ಆತಂಕ ಬೇರೆ.

"ಸ್ವಾಮೀ, ಡ್ಯಾನಿ ನನ್ನ ಹಿರಿಯ ಮಗ. ಅವನು ಸೇರಿ ನಾಲ್ಕು ಜನ ಮಕ್ಕಳು. ಚಿಕ್ಕ ವಯಸ್ಸಿನಿಂದ ಅವನಿಗೆ ಬ್ರೆಡ್ ಅಂದರೆ ವಿಶೇಷ ಇಷ್ಟ ಮತ್ತು ಪ್ರೀತಿ. ಅದರಲ್ಲೂ ಕೆಂಚಗೆ ಕಂದಿದ, ಗಟ್ಟಿಯಾದ ಬ್ರೆಡ್‌ನ ಭಾಗವೆಂದರೆ ಪ್ರಾಣ. ಅವನಿಗೆ ಆ ಗಟ್ಟಿಯಾದ ಬ್ರೆಡ್ ಭಾಗ ಎಷ್ಟು ಇಷ್ಟವೆಂದರೆ, ಅವನು ತನ್ನ ತಮ್ಮ, ತಂಗಿ, ತಂದೆ ಹೋಗಲಿ ಹೆತ್ತ ತಾಯಿಯಾದ ನನಗೆ ಕೂಡ ಕೊಡುತ್ತಿರಲಿಲ್ಲ, ಹಂಚಿಕೊಳ್ಳುತ್ತಿರಲಿಲ್ಲ. ಏನೋ ವಿಚಿತ್ರ ಸ್ವಭಾವವೆಂದು ನಾವೇ ಹೊಂದಿಕೊಂಡಿದ್ದೆವು. ಆದರೆ ಮದುವೆಯಾದ ಮೇಲೆ ರೋಸಿಯ ಮೇಲೆ ಏನು ಒಲವು ಮುಡಿತೋ, ಎಷ್ಟು ಪ್ರೀತಿ ಹುಟ್ಟಿತೋ... ತನ್ನ ಪ್ರೀತಿಯ ತಿನಿಸನ್ನು ಅವಳಿಗೆ ಕೊಡಲು ಶುರುಮಾಡಿದ. ಇದನ್ನೂ ನೋಡಿ ಕೆಲ ದಿನ ನಾವೆಲ್ಲಾ ನಕ್ಕಿದ್ದು ಇದೆ. ತನಗೆ ಪ್ರಾಣಕ್ಕೆ ಪ್ರಿಯವಾದ ತಿನಿಸನ್ನು ಅವನು ಅವಳಿಗೆ ಪ್ರೀತಿಯಿಂದ ಅರ್ಪಿಸುತಿದ್ದರೆ... ನೋಡಿ ಅವಳಿಗೆ ಅದರ ಪರಿವೆ ಇಲ್ಲ. ಅದನ್ನು ಅವಮಾನ, ಹಿಂಸೆ ಎಂದು ಭಾವಿಸಿದ್ದಾಳೆ. ಒಂದು ಚಿಕ್ಕ ಮಾತುಕತೆಯಲ್ಲಿ ಬಗೆಹರಿಯಬಹುದಾಗಿದ್ದ ಈ ಸಮಸ್ಯೆ ಈ ಹಂತಕ್ಕೆ ತಲುಪಿದೆ. ಇನ್ನೂ ಹೇಳುವುದಕ್ಕೆ ಏನೂ ಇಲ್ಲ ಸ್ವಾಮೀ..." ಹೀಗೆ ಹೇಳಿ ಅವನ ತಾಯಿ ಅಪಾರ್ಥದಿಂದ ಮುರಿಯಬಹುದಾಗಿದ್ದ ತನ್ನ ಮಗನ ಮದುವೆಯನ್ನು ಉಳಿಸಿದಳು. ಅಷ್ಟೊಂದು ಪ್ರೀತಿಯ ಕ್ರಿಯೆಯನ್ನು ಅವಮಾನವೆಂದು ತಿಳಿದೆನಲ್ಲ ಎಂದು ರೋಸಿಯಲ್ಲಿ ಪಶ್ಚಾತಾಪ ಮೂಡಿತು ಮತ್ತು ಅವರ ದಾಂಪತ್ಯ ಮತಷ್ಟು ಗಟ್ಟಿ ಮಾಡಿತು.

***
ಈ ಕತೆ ನೆನಪಾದಗಲೆಲ್ಲಾ, ನಾನು ದೇವರನ್ನು ಕೇಳಿಕೊಳ್ಳುವುದಿಷ್ಟೇ ಇಷ್ಟೇ... 'ಭಗವಂತ! ಅಪಾರ್ಥಗಳಿಂದ ನನ್ನ ದೂರವಿಡು... ಅಪಾರ್ಥವಾದಗಲೆಲ್ಲ ಒಂದು ಚಿಕ್ಕ ಮಾತುಕತೆಗೆ ನನ್ನ ನೆನಪಿಸು, ಪ್ರೇರಪಿಸು. ನನ್ನ ಸುತ್ತಲು ತುಂಬಿರುವ ಪ್ರೀತಿಯನ್ನು ಗುರುತಿಸುವ ಮನಸ್ಸು ಕೊಡು!' (ಲೇಖಕರ ಈಮೇಲ್ : [email protected])

(ಮುಂದಿನ ವಾರದ ಕತೆ 'ಕಾರ್ಯೇಷು ಮಂತ್ರಿ')

English summary
Inspirational short stories by Gunamukha : We love to be loved. But, when it comes to identifying love inside others we fail. So, pray God to give power to identify, respect love in others, who love us the most.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X