ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ

By * ಗುಣಮುಖ
|
Google Oneindia Kannada News

Turn a deaf ear
ಅಂದು ಆ ಊರಿನಲ್ಲಿ ಬಹು ಸಡಗರದ ಜಾತ್ರೆ. ಆ ಪ್ರಾಂತ್ಯದಲ್ಲೇ ಬಹು ಪ್ರಸಿದ್ಧ ಜಾತ್ರೆ ಅದು. ಜಾತ್ರೆ ಸಮಯದಲ್ಲಿ ಬಹು ವಿಧದ ಮೋಜಿನ, ಸವಾಲಿನ ಆಟಗಳನ್ನು, ಪಂದ್ಯಗಳನ್ನು ಆಯೋಜಿಸಲಾಗಿತ್ತು. ಅಲ್ಲಿ ಬಹು ವರ್ಷಗಳಿಂದ ಯಾರೂ ಸ್ಪರ್ಧಿಸದ, ಗೆಲ್ಲದ ಒಂದು ಸವಾಲಿನ ಸ್ಪರ್ಧೆಯಿತ್ತು. ಅದೇ ದೊಡ್ಡದೊಂದು ಕಂಬ ಹತ್ತಿ, ಅದರ ಮೇಲಿನ ಮಡಿಕೆಯನ್ನು ಒಡೆಯುವ ಸ್ಪರ್ಧೆ.

ಅದು ಅಂತಿಂಥ ಕಂಬವಲ್ಲ, ಮುಗಿಲನ್ನು ಸೀಳಿ ಹೊರಟಂತಹ ಎತ್ತರದ ದೊಡ್ಡ ಮಲ್ಲಕಂಬ. ಆ ಎತ್ತರದ ಕಂಬದ ನೆತ್ತಿಯಲ್ಲೊಂದು ಬಣ್ಣದ ನೀರು ತುಂಬಿದ ಮಡಿಕೆ. ಕಂಬಕ್ಕೆ ಢಾಳಾಗಿ ಎಣ್ಣೆ ಹಚ್ಚಲಾಗಿದೆ. ಜಾರುವ ಕಂಬವನ್ನು ಹತ್ತಿ ಮಡಿಕೆ ಒಡೆಯುವುದೇ ಸವಾಲು. ಗೆಲ್ಲುವುದನ್ನು ಬಿಡಿ, ಹಲವಾರು ವರ್ಷಗಳಲ್ಲಿ ಯಾರೂ ಸವಾಲನ್ನು ಸ್ವೀಕರಿಸಿದವರೇ ಇಲ್ಲ. ಎಂತೆಂಥ ವೀರರು, ಶೂರರು, ಮಲ್ಲರು ಬೇರೆ ಬೇರೆ ಪ್ರಾಂತ್ಯದಿಂದ ಬಂದು ಪ್ರಯತ್ನಿಸಿದ್ದಾರೆ. ಊಹುಂ... ಯಾರೂ ಯಶಸ್ವಿಯಾಗಿಲ್ಲ. ಆ ಊರೇನು ಬಿಡಿ, ಇಡೀ ಪ್ರಾಂತ್ಯವೇ ಈ ಕಂಬ ಹತ್ತಿ ಮಡಿಕೆ ಒಡೆಯುವ ಕೆಲಸ ಅಸಾಧ್ಯವೆಂಬ ದೃಢ ನಿರ್ಧಾರಕ್ಕೆ ಬಂದುಬಿಟ್ಟಿತು. ಹಾಗೆಂದು ಇಡೀ ಸಮುದಾಯಕ್ಕೆ ಸಮುದಾಯವೇ ನಂಬಿಬಿಟ್ಟಿತ್ತು. ಯಾರಾದರು ಪ್ರಯತ್ನಿಸುವೆನೆಂದರೆ, ಜನರ ನಿರುತ್ಸಾಹಗೊಳಿಸುವ ಮಾತು ಕೇಳಿಯೇ, ಅಪಹಾಸ್ಯಕ್ಕೆ ಈಡಾಗುವ ಭಯದಿಂದ ಆ ಪ್ರಯತ್ನ ಕೈ ಬಿಡುತ್ತಿದ್ದರು. ಅದನ್ನು ಮೀರಿ ಯಾರಾದರು ಪ್ರಯತ್ನಿಸಿ, ಜಾರಿ ಬಿದ್ದರಂತೂ ಆಡಿಕೊಳ್ಳುವ ಜನರ ಬಾಯಿಗೆ ಹಬ್ಬ! ಮತ್ತೊಂದು ವಿಷಯ ಸಿಗುವವರೆಗೆ ಪ್ರಯತ್ನಿಸಿದ ವ್ಯಕ್ತಿ ಅಪಹಾಸ್ಯಕ್ಕೀಡಾಗುತ್ತಿದ್ದ.

ಪರಿಸ್ಥಿತಿ ಹೀಗಿರುವಾಗ, ಬಹುದಿನದ ನಂತರ 'ನಾನು ಪ್ರಯತ್ನಿಸುವೆ' ಎಂದ್ಹೇಳಿ ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ಕಂಬ ಹತ್ತುವ ಸವಾಲನ್ನು ಸ್ವೀಕರಿಸಿದ. ಇಡೀ ಜಾತ್ರೆಯಲ್ಲೇ ಒಂದು ದೊಡ್ಡ ಸಂಚಲನವುಂಟಾಯಿತು. ಜನ ಅಪನಂಬಿಕೆಯಿಂದ, ಅಪಹಾಸ್ಯದ ದೃಷ್ಟಿಯಿಂದ ಅವನ ಕಡೆ ನೋಡಿದರು. ಅಪರಿಚಿತ ವ್ಯಕ್ತಿ ಅಂತಹ ಬಲಿಷ್ಠನೇನಲ್ಲ. ಸಾಧಾರಣ ಎತ್ತರದ, ಸಾಮಾನ್ಯ ಮೈಕಟ್ಟಿನ ಮನುಷ್ಯ. ಯಾವುದೇ ರೀತಿಯಿಂದ ನೋಡಿದರೂ ಜನರಿಗೆ ಅವನ ಬಗ್ಗೆ ಕನಿಷ್ಠ ನಂಬಿಕೆಯೂ ಹುಟ್ಟಲಿಲ್ಲ. ಜನ ಗಹಗಹಿಸಿ ನಕ್ಕರು, ಕೆಲವು ಕರುಣಾಮಯಿಗಳು ಬುದ್ಧಿವಾದ ಹೇಳಲು ಪ್ರಯತ್ನಿಸಿದರು. ಅವ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೆ, ಉತ್ತರಿಸದೆ ಸಣ್ಣಗೆ ಮುಗುಳ್ನಗುತ್ತ ನಿಂತಿದ್ದ. ಊರಿನ ಹಿರಿಯನಿಗೆ ಆಶ್ಚರ್ಯವಾದರೂ ಏನಾದರು ಹಾಳಾಗಿ ಹೋಗಲಿ ಅಂದುಕೊಂಡು ಅಪರಿಚಿತನಿಗೆ ಕಂಬ ಹತ್ತಿ ಮಡಿಕೆ ಒಡೆಯುವ ಪ್ರಯತ್ನಕ್ಕೆ ಅನುಮತಿ ನೀಡಿದ. ಹೇಗೂ ಇದು ಆಗುವ, ಹೋಗುವ ಕೆಲಸವೆಲ್ಲವೆಂದು, ಅಪರಿಚಿತ ಯಶಸ್ವಿಯಾದರೆ ಒಂದು ದೊಡ್ಡ ಬಹುಮಾನ ಮತ್ತು ಸನ್ಮಾನವನ್ನು ಅನುಮಾನದಲ್ಲೇ ಘೋಷಿಸಿದ.

ಎಲ್ಲರ ಅಪಹಾಸ್ಯದ, ದೊಡ್ಡ ಗೇಲಿಯ ಮಾತಿನ ನಡುವೆಯೇ ಅಪರಿಚಿತ ಕಂಬ ಹತ್ತುವ ಪ್ರಯತ್ನಕ್ಕೆ ಮೊದಲಿಟ್ಟ. ಆರಡಿ ಮೇಲೆ ಹೋದರೆ ಮೂರಡಿ ಕೆಳಗೆ ಜಾರಿದ. ಏರಿದ ಮತ್ತೆ ಜಾರಿದ... ಕೆಲ ಸಮಯ ಸುಮ್ಮನಿದ್ದ ಜನ 'ಅಯ್ಯೋ ನಾನ್ ಹೇಳ್ಲಿಲ್ವ... ನೋಡಿ ಹೇಗೆ ಜಾರ್ತಾಯಿದ್ದಾನೆ', 'ಇಂಥ ಮೂರ್ಖನನ್ನ ನನ್ನ ಜೀವನದಲ್ಲೇ ನೋಡಿಲ್ಲ', ' ಇಷ್ಟು ಜನ ಹೇಳ್ತಾಯಿದ್ರೂ, ಕೇಳ್ದೆ ಇರೋನ್ ತರ ನಿಂತಿರೋದು ನೋಡಿ', 'ಅವನ ಗತ್ತು ನೋಡ್ರಿ... ಬಡ್ಡಿ ಮಗನಿಗೆ ಅಹಂಕಾರ!', 'ಯಾರ ಮಗನೋ ಏನೋ... ಸುಮ್ನೆ ಅನ್ಯಾಯವಾಗಿ ಬಿದ್ದು ಕೈ ಕಾಲು ಮುರ್ಕೋಳ್ತಾನಲ್ಲರೀ...' ಹೀಗೆ ತಲೆಗೊಂದು ಮಾತಾಡತೊಡಗಿದರು.

ಎಲ್ಲರೂ ನೋಡುನೋಡುತ್ತಿದ್ದಂತೆ ಛಲಬಿಡದೆ ಮತ್ತೆ ಮತ್ತೆ ಪ್ರಯತ್ನಿಸಿ ಕಂಬ ಹತ್ತತೊಡಗಿದ. ಜಾರಿದವನು ಏರಿದ, ಅಲ್ಲಲ್ಲಿ ನಿಂತು ಕೆಲ ಕ್ಷಣ ಸಾವರಿಸಿಕೊಂಡು ಮೆಲ್ಲ ಮೆಲ್ಲನೆ ಮೇಲೆ ಹೋಗತೊಡಗಿದ. ಕೆಲ ಸಮಯದ ನಂತರ ಕಂಬ ಪಳಗಿತು. ಎಲ್ಲರನ್ನು ಅಚ್ಚರಿ ಪಡಿಸುತ್ತಾ ಕೊನೆಗೆ ಕಂಬ ಹತ್ತಿ ಮಡಿಕೆ ಒಡೆದೇಬಿಟ್ಟ! ಜನರೆಲ್ಲಾ ಕ್ಷಣ ಕಾಲ ಸ್ಥಂಭೀಭೂತರಾದರು, ದಿಗ್ಭ್ರಾಂತರಾದರು! ಹೀಗೆ ಜನರ ನಿರೀಕ್ಷೆಯನ್ನು ಮೀರಿ ಅಸಾಧ್ಯವೊಂದು ಜರಗಿತ್ತು!

ಕೊನೆಗೆ ವಿಜಯಿಯಾಗಿ ಕೆಳಗೆ ಇಳಿದ ನಂತರ... ಅದೇ ಜನರಿಂದ ಅಪರಿಚಿತನಿಗೆ ಜೈಕಾರ... ಎಲ್ಲದಕ್ಕೂ ಅವನದು ಕೇವಲ ಮುಗ್ದ ಸ್ನಿಗ್ಧ ಮುಗಳ್ನಗೆಯ ಪ್ರತಿಕ್ರಿಯೆ ಮಾತ್ರ. ಕೊನೆಗೆ ಕೊಟ್ಟ ಮಾತಿನಂತೆ, ಊರ ಹಿರಿಯ ಅವನಿಗೆ ದೊಡ್ಡದಾಗಿ ಸನ್ಮಾನಿಸಿ, ಬಹುಮಾನ ನೀಡಿ ಕೇಳಿದ... 'ಅಲ್ಲಯ್ಯ! ಇಷ್ಟು ಜನ ಆಸಾಧ್ಯ ಎಂದು ಕೈ ಬಿಟ್ಟಿದ್ದು ನೀನು ಹೇಗೆ ಸಾಧಿಸಿದೆ? ಏನು ನಿನ್ನ ಗುಟ್ಟು?'

ಅಪರಿಚಿತ 'ಯಜಮಾನ್ರೆ ಕ್ಷಮಿಸಿ... ನನಗೆ ಕಿವಿ ಕೇಳುವುದಿಲ್ಲ... ನಾನು ಹುಟ್ಟಾ ಕಿವುಡ!' ಎಂದು ಕೈ ಸಂಜ್ಞೆ ಮಾಡಿ ತೋರಿಸಿದ. ಹೌದು! ಅವನಿಗೆ ಸುತ್ತಲಿನ ಜನರ ನಿರುತ್ಸಾಹದ, ಸೋಲಿನ ಭಯದ, ಅಪನಂಬಿಕೆಯ, ಅಪಹಾಸ್ಯದ, ಗೇಲಿಯ ಮಾತುಗಳು ಕೇಳಿರಲೇ ಇಲ್ಲ!

***
ಸುತ್ತಲಿನ ಜನರ ನಿಂದನೆಯ, ಸೋಲಿನ ಭಯದ, ಅಪಹಾಸ್ಯದ, ಗೇಲಿಯ, ನಿರುತ್ಸಾಹಗೊಳಿಸುವ, ಅಪನಂಬಿಕೆಯ ಮಾತು ಕೇಳಿ ಮನ ಗಲಿಬಿಲಿಗೊಂಡಾಗ, ನೊಂದಾಗಲೆಲ್ಲ, ಈ ಕತೆಯ ತೊಡೆಯ ಮೇಲೆ ತಲೆಯಿಟ್ಟು ಕ್ಷಣಕಾಲ ವಿರಮಿಸುತ್ತೇನೆ, ಆಗ ಕತೆ ಭುಜ ತಟ್ಟಿ ನನ್ನಲಿ ಅಂಜಿಕೆ ಮೀರಿದ ನಂಬಿಕೆಯ ಸಣ್ಣ ಮುಗಳ್ನಗೆಯನ್ನು ಮತ್ತು ಗೆಲುವಿನ ಕನಸುಗಳನ್ನು ಬಿತ್ತುತ್ತದೆ! ನೀವೂ ಒಮ್ಮೆ ಪ್ರಯತ್ನಿಸಿ ನೋಡಿ!

ಬಸವಣ್ಣನವರು ಅದಕ್ಕಲ್ಲವೇ ಹೀಗೆ ಹೇಳಿದ್ದು,

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು
ಕೂಡಲಸಂಗಮದೇವ. (ಲೇಖಕರ ಈಮೇಲ್ : [email protected])

English summary
Inspirational short stories by Gunamukha : To succeed we may have to pass through many hurdles. People will be around to pull your legs. But, turn a deaf ear to distractors and concentrate on what you are doing. Success automatically follows you.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X