ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಾ ನಾಗರಾಜ್ ನೀಳ್ಗತೆ : ತಮಾಗುಚಿ

By * ಶಾಂತಾ ನಾಗರಾಜ್, ಬೆಂಗಳೂರು
|
Google Oneindia Kannada News

Shantha Nagaraj Bangalore
"ತಾತ ಸ್ವಲ್ಪ ಈ ತಮಾಗುಚಿನ ಟೇಕ್ ಕೇರ್ ಮಾಡ್ತೀರಾ? ನಾನು ಸ್ಕೂಲಿಂದ ಬರೋವರ್ಗೂ" ಪುಟ್ಟ ಅನಂತ ಹಲ್ಲುಕಿಸಿಯುತ್ತಾ ನಿಂತಿದ್ದ. ಹೊರಗೆ ಹಾಲಿನಲ್ಲಿ ಅವರಮ್ಮ ಕಿರುಚಿದಳು "ಏಯ್ ಅನೀ ನೀನಿನ್ನೂ ಕಾರನ್‍ಫ಼್ಲೇಕ್ಸ್ ತಿಂದಿಲ್ಲ, ಸಾಕ್ಸ್ ಒಂದೇ ಹಾಕ್ಕೊಂಡಿದೀ ಶೂ ಎರಿಸಿಕೋ. ಸ್ಕೂಲ್ ಬಸ್ ಕಾಯಲ್ಲ ಕಣೋ. ಅದು ನಿನ್ನ ಬಿಟ್ ಹೋದ್ರೆ ಆಮೇಲೆ ನಾ ಇಡೀ ದಿನ ನಿನ್ನ ಮನೇಗೂ ಸೇರ್ಸಲ್ಲ ಹೊರಗೇ ಬಿದ್ದಿರಬೇಕಾಗತ್ತೆ ತಿಳ್ಕೋ..." ಅನಂತ ತಾತನ ಹಾಸಿಗೆಯ ಮೇಲೆ ತಮಾಗುಚಿಯನ್ನು ಇರಿಸಿ ಹೊರಗೆ ಓಡಿದ. ದಿನಪತ್ರಿಕೆಯನ್ನು ಓದುತ್ತಾ ಕುಳಿತ ರಾಮು ಅವರ ಕಿವಿಯ ಮೇಲೆ ಸೊಸೆ ಸುಧಾ ಮಕ್ಕಳನ್ನು ಅವಸರ ಪಡಿಸುತ್ತಿರುವುದು ಕೇಳಿಸುತ್ತಿತ್ತು.

ಸಿಂಗಪುರದ ಕನ್ನಡಿಗರ ಮನೆಯಲ್ಲಿ ಅದೂ ಮಕ್ಕಳಿರುವ ಮನೆಯಲ್ಲಿ ನಿತ್ಯದ ಬೆಳಗಿನ ಒತ್ತಡವಿದು. ಕೆಲವೇ ನಿಮಿಷಗಳಲ್ಲಿ ಮುಂಬಾಗಿಲನ್ನು ಧಪ್ಪನೆ ಎಳೆದುಕೊಂಡು ಮೂವರೂ ಲಿಫ಼್ಟ್ ಕಡೆಗೆ ಹೋದದ್ದು ರಾಮು ಅವರಿಗೆ ತಿಳಿಯಿತು. ಇನ್ನು ರಾಮು ಮದ್ಯಾಹ್ನ ಎರಡೂವರೆಯವರೆಗೆ ಈ ಹದಿನೈದನೇ ಮಹಡಿಮನೆಯಲ್ಲಿ ಏಕಾಂಗಿ! ಸುಧಾ ಎಂಟೂವರೆಗೆ ಬರುವ ಬಸ್‍ನಲ್ಲಿ ಮಕ್ಕಳನ್ನು ಅಕ್ಷರಶಃ ತಳ್ಳಿ ಕೂಡಿಸುತ್ತಾಳೆ. ಬೆಳಿಗ್ಗೆ ಆರೂವರೆಯಿಂದ "ಏಳ್ರೋ ಏಳ್ರೋ ಏ ಆದೀ ನೀನು ದೊಡ್ಡವನಲ್ಲವೇನೋ ಮೊದಲು ಏಳೋ" ಎಂದೆಲ್ಲಾ ಸಮಾಧಾನವಾಗಿಯೇ ಉದಯರಾಗ ಪ್ರಾರಂಭಿಸಿ ಎಂಟರ ಹೊತ್ತಿಗೆ ಅವಳ ಧ್ವನಿ ತಾರಕಕ್ಕೇರಿರುತ್ತದೆ. "ಗುದ್ದ್‍ಬಿಡ್ತೀನಿ, ಹೊಡೆದ್ರೆ ಹೆಂಗಿರತ್ತೆ ಗೊತ್ತಾ? ನಾಲಕ್ ಬಾರಿಸಿದಾಂದ್ರೆ ಕೆನ್ನೆ ಮೇಲೆ ಬಾಸುಂಡೆ ಬರತ್ತೆ" ಎಂದೆಲ್ಲಾ ಬೆದರಿಸುವ ಮಂತ್ರಗಳು ಉದುರುತ್ತಿದ್ದರೂ ಮಕ್ಕಳು ಅದಕ್ಕೆ ಕೇರೇ ಮಾಡದೇ ಯಾಂತ್ರಿಕವಾಗಿ ತಮಗನಿಸಿದ್ದನ್ನೇ ಮಾಡುತ್ತಾರೆ. ಯಾಕೆಂದರೆ ಅವಳೆಂದೂ ಮಕ್ಕಳಿಗೆ ಹೊಡೆದೇ ಇಲ್ಲ!

ಸದ್ದೇ ಇಲ್ಲದ ಆ ಮನೆ ಬಿಕೋ ಎನ್ನುತ್ತಿದೆ. ರಾಮು ನಿಧಾನವಾಗಿ ಬಚ್ಚಲು ಮನೆಗೆ ಹೋಗಿ ಸ್ನಾನಕ್ಕೆ ತೊಡಗುತ್ತಾರೆ. ಬಿಸಿನೀರಿನ ಜೊತೆಗೆ ಅವರ ಕಣ್ಣೀರೂ ಬೆರೆತು ನೆಲದ ಟೈಲ್ಸ್‌ಲ್ಲಿ ಫಳಗುಟ್ಟುತ್ತದೆ. ಏನೆಲ್ಲಾ ಆಗಿಹೋಯಿತು ತಮ್ಮ ಬದುಕಲ್ಲಿ? ಕೇವಲ ಎರಡೂವರೆ ತಿಂಗಳ ಹಿಂದೆ ಐವತ್ತು ವರ್ಷ ನಗುನಗುತ್ತಾ ಜೊತೆಗೆ ಬಾಳಿದ ಹೆಂಡತಿ ಕೂತವಳು ಎದ್ದುಹೋಗುವ ಹಾಗೆ ಸಾವಿನಮನೆಗೆ ಹೋಗಿಯೇ ಬಿಡುತ್ತಾಳೆಂದು ಯಾರು ಊಹಿಸಿದ್ದರು? "ನೀನು ಹೀಗೆ ಮಾಡಬಾರದಿತ್ತು ರಾಜಿ" ಮನಸ್ಸು ಲೊಚಗುಡುತ್ತದೆ. ತಮಗೆ ಎಪ್ಪತ್ತೈದರ ಸಂಭ್ರಮ! ತಮ್ಮ ಮದುವೆಗೆ ಐವತ್ತರ ಸಂಭ್ರಮ! ತಮ್ಮ ಈ ಮಗ ಸೊಸೆ ಮೊಮ್ಮಕ್ಕಳು, ತಾವೇ ಸಾಕಿದ ಅಣ್ಣನ ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳು ಬೆಂಗಳೂರು ಹತ್ತಿರದ ಸೊಂಡೇಕೊಪ್ಪದ ತಮ್ಮ ಮನೆಯಲ್ಲಿ ಎಂಥಾ ಸಂಭ್ರಮದ ಸಮಾರಂಭ ನಡೆಸಿದರು. ಅದಾದ ಎರಡೇ ದಿನಕ್ಕೆ ರಾತ್ರಿ ಮಲಗಿದ ರಾಜಮ್ಮ ಬೆಳಿಗ್ಗೆ ಏಳಲೇ ಇಲ್ಲವೆಂದರೆ ಈ ಸಾವನ್ನು ಹೇಗೆ ಅರಗಿಸಿಕೊಳ್ಳಬೇಕು? ಜನರೆಲ್ಲಾ "ಆಹಾ ಮುತ್ತೈದೆ ಸಾವು, ಶರಣರ ಪುಣ್ಯ ಮರಣದಲ್ಲಿ, ಒಂದು ನರಳಲಿಲ್ಲ ಮಲಗಲಿಲ್ಲ ಎಂಥಾ ಪುಣ್ಯವಂತೆ" ಅಂತ ಹಾಡಿಹೊಗಳಿದ್ದರು. ಹಬ್ಬ ಮಾಡಿದ್ದರು. ನಮ್ಮ ಹಿಂದುಗಳೇ ಹಾಗೆ. ಬದುಕಿದರೂ ಹಬ್ಬ, ಸತ್ತರೂ ಹಬ್ಬ! "ನೀನೇನೋ ಸತ್ತು ಹಬ್ಬ ಮಾಡಿಸಿಕೊಂಡು ಎಲ್ಲರ ಮನಸ್ಸಿನಲ್ಲಿ ಖುಷಿಯಾಗಿ ಬದುಕಿಬಿಟ್ಟೆ ರಾಜಿ, ನಾನು ನೋಡು ಬದುಕಿದ್ದೂ ಈಗ ಸತ್ತಂತೆ."

ದೇವರ ಮುಂದೆ ಸೊಸೆ ಹಚ್ಚಿದ ದೀಪ ಢಾಳಾಗಿ ಉರಿಯುತ್ತಿತ್ತು. ಯಾಕೋ ಒಂದೇ ಮನಸ್ಸಿನಿಂದ ಕೈಮುಗಿಯುವುದೂ ಸಾಧ್ಯವಾಗಲಿಲ್ಲ. ಯಾಂತ್ರಿಕವಾಗಿ ಒಂದು ಸುತ್ತು ತಿರುಗಿ ನಮಸ್ಕಾರ ಮಾಡಿ ರೂಮಿಗೆ ಬಂದು ಬಟ್ಟೆ ಧರಿಸಿ ಡೈನಿಂಗ್‍ಟೇಬಲ್ಲಿಗೆ ಬಂದರು. ಒಂದು ತಟ್ಟೆಯಲ್ಲಿ ಬೆಳಿಗ್ಗೆ ಟೋಸ್ಟ್ ಮಾಡಿದ ಎರಡು ಬ್ರೆಡ್ ಸ್ಲೈಸ್ಗಳು ತಣ್ಣಗೆ ಕೊರೆಯುತ್ತಿದ್ದವು. ಅದಕ್ಕೊಂದು ತಟ್ಟೆ ಮುಚ್ಚುವುದನ್ನೂ ಸೊಸೆ ಮರೆತಿದ್ದಳು. ಪಕ್ಕದಲ್ಲೇ ಸಾಸ್ ಬಾಟಲ್ ಇತ್ತು. ಬ್ರೆಡ್ ತಿನ್ನುವುದಕ್ಕೆ ಅವರ ನಾಲಿಗೆ ಬಿಲ್‍ಕುಲ್ ಒಪ್ಪದೇ ಮುಷ್ಕರ ಹೂಡಿತು. ಮಧ್ಯಾಹ್ನದ ಊಟಕ್ಕೆ ಇವತ್ತು ಅದೇನು ಪಕ್ವಾನ ಸಿದ್ಧವಾಗಿದೆಯೋ ನೋಡೋಣವೆಂದು ಅಡುಗೆಮನೆಗೆ ಹೋದರು. ಗ್ಯಾಸ್ ಒಲೆಯಮೇಲೆ ದೊಡ್ಡ ಬಾಂಡಲೆಯಲ್ಲಿ ಅರ್ಧದಷ್ಟು ಬ್ರೆಡ್ ಉಪ್ಪಿಟ್ಟು ಇವರನ್ನೇ ನೋಡಿ ನಸುನಗುತ್ತಿರುವಂತೆ ಅನಿಸಿತು! ಸೂಜಿ ಚುಚ್ಚಿದ ಬೆಲೂನಿನಂತಾಗಿ ವಾಪಸ್ ರೂಮಿಗೆ ಮರಳಿದರು. ತಮ್ಮ ಮಂಚಕ್ಕೆ ಅಂಟಿಕೊಂಡಂತಿದ್ದ ಕಪಾಟಿನಲ್ಲಿದ್ದ ಬಿಸ್ಕತ್ ತೆಗೆದು ತಿಂದು ಬೆಳಿಗ್ಗೆ ಮಗ ತಂದಿಟ್ಟಿದ್ದ ಫ್ಲಾಸ್ಕಿನಿಂದ ಕಾಫಿಯನ್ನು ಅದರ ಮುಚ್ಚಳಕ್ಕೆ ಬಗ್ಗಿಸಿಕೊಂಡು ಕುಡಿದರು. ಅಲ್ಲಿಗೆ ಬೆಳಗಿನ ಬ್ರೇಕ್‌ಫಾಸ್ಟ್‌ನ ಋಣ ತೀರಿತು. (ಕಥೆ ಮುಂದುವರಿದಿದೆ...)

English summary
Weekend special : A heart touching Kannada long story by Shantha Nagaraj, Bangalore. Subject of the story is Tamagotchi, a pal to young and even to older.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X