ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಬ್ರಿ ಸಮೀಪದ ಕಾಡಿನಲ್ಲಿ ನಕ್ಸಲ್ ಹೆಣ್ಣಿನ ಆತ್ಮಹತ್ಯೆ!

By * ಆತ್ರಾಡಿ ಸುರೇಶ ಹೆಗ್ಡೆ
|
Google Oneindia Kannada News

Naxal women commit suicide in Hebri jungle
ಹೆಬ್ರಿಯಿಂದ ಕಬ್ಬಿನಾಲೆಗೆ ಹೋಗುವ ದಾರಿಯಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿ, ಕಾಡಿನ ಮಧ್ಯೆ ಇದ್ದ, ಆ ದೊಡ್ಡ ಮರದ ಗೆಲ್ಲಿನಿಂದ ನೇತಾಡುತ್ತಿದ್ದ ಹೆಣ್ಣಿನ ಶವವನ್ನು ಕೆಳಗಿಳಿಸಿ ಪಂಚನಾಮೆ ನಡೆಸಲಾಯಿತು. ಶವವಾಗಿ ಮಲಗಿದ್ದ ಆ ಹೆಣ್ಣಿನ ಪರಿಚಯ ಅಲ್ಲಿ ಎಲ್ಲರಿಗೂ ಇದ್ದಂತಿತ್ತು. ಆಕೆ ಕಬ್ಬಿನಾಲೆಯ ಬಡ ರೈತ ವಾಸು ನಾಯ್ಕ ಮತ್ತು ಗಿರಿಜ ದಂಪತಿಗಳ ಹಿರಿಯ ಮಗಳಾದ ಜಯಂತಿ ಎಂದೂ, ಅಲ್ಲದೇ, ಹೆಬ್ರಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಆಕೆ, ಈಗ್ಗೆ ಏಳೆಂಟು ತಿಂಗಳಿಂದ ಕಾಣೆಯಾಗಿದ್ದಳೆಂದೂ, ಅಲ್ಲಿ ನೆರೆದಿದ್ದ ಜನರು ಗುಸು ಗುಸು ಮಾತಾಡಿಕೊಳ್ಳುತ್ತಿದ್ದರು. ಮರಣೋತ್ತರ ಪರೀಕ್ಷೆಗೆ ಶವವನ್ನು ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆಗೆ ಸಾಗಿಸಲಾಯಿತು. ಆ ಶವವನ್ನು ಕೆಳಗಿಳಿಸುವಾಗ, ಶವದ ಕೈಯಲ್ಲಿ ಭದ್ರವಾಗಿದ್ದ ಆ ಮರಣ ಪತ್ರ ಪೋಲೀಸ್ ಅಧಿಕಾರಿಗೆ ದೊರೆತಿತ್ತು. ಹೆಬ್ರಿ ಠಾಣೆಗೆ ಮರಳಿದ ಪೋಲೀಸ್ ಅಧಿಕಾರಿ ಆ ಪತ್ರವನ್ನು ಬಿಡಿಸಿದಾಗ ಕಂಡಿದ್ದು, ಮುದ್ದಾದ ಅಕ್ಷರಗಳಿಂದ ಬರೆದಿರುವ, ಬರೋಬರಿ ಎರಡೂವರೆ ಪುಟಗಳ, ಸುದೀರ್ಘ ಪತ್ರ.

“ನಾನು ಬಹಳಷ್ಟು ಆಲೋಚಿಸದ ನಂತರವೇ ಈ ನಿರ್ಧಾರಕ್ಕೆ ಬಂದಿರುತ್ತೇನೆ. ನನಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟರೆ ಬೇರಾವ ಉಪಾಯಗಳೇ ಹೊಳೆಯುತ್ತಿಲ್ಲ. ಅಲ್ಲದೇ ಬೇರೆ ಉಪಾಯ ಇದೆಯೆಂದೂ ನನಗೆ ಈಗ ಅನಿಸುತ್ತಿಲ್ಲ ಕಣೋ. ನಿನಗೇನು ಗೊತ್ತು, ನಿನಗೆ ಹೇಗೆ ಗೊತ್ತಾಗಬೇಕು ಮಹರಾಯ. ನನ್ನ ಕಷ್ಟ ನನಗೊಬ್ಬಳಿಗೆ ಗೊತ್ತು. ಯಾರಲ್ಲಿ ಹೇಳಿಕೊಳ್ಳಲಿ ನಾನು? ಈಗ ಹಿಂದಿನ ಎಲ್ಲಾ ಘಟನೆಗಳೂ ನೆನಪಾಗುತ್ತಿದೆ ನನಗೆ.

ಹೆಬ್ರಿ ಪದವಿ ಪೂರ್ವ ಕಾಲೇಜಿಗೆ ಸೇರಿದ ಮೊದಲ ದಿನವೇ, ಚಿಗುರು ಮೀಸೆಯ ಹಿಂದಿನ ನಿನ್ನ ಆ ಮೋಹಕ ನಗೆ, ನನ್ನ ಮೇಲೆ ಅದ್ಯಾವ ಮೋಡಿ ಮಾಡಿತ್ತೋ ಆ ದೇವರೇ ಬಲ್ಲ. ದಿನ ಕಳೆದಂತೆ ನಾನು ನಿನ್ನನ್ನು ಆರಾಧಿಸಲೇ ಶುರು ಮಾಡಿಬಿಟ್ಟಿದ್ದೆ. ಒಂದು ದಿನವೂ ನಿನ್ನನ್ನು ನೋಡದೇ ಇದ್ದಿರಲು ಆಗುತ್ತಿರಲಿಲ್ಲ. ನಾನು ಕಬ್ಬಿನಾಲೆಯಿಂದ ಹೆಬ್ರಿಗೆ ಬರುತ್ತಿದ್ದ ಬಸ್ಸಿಗೇ ನೀನೂ ಅರ್ಧದಾರಿಯಲ್ಲಿ ಹತ್ತುತ್ತಿದ್ದೆ. ನೀನು ಆ ಬಸ್ಸಿಗೆ ಬರುವ ತನಕ ನಾನು ಅದೆಷ್ಟು ಕಾತರತೆಯಿಂದ ಕಾಯುತ್ತಿದ್ದೆ ಗೊತ್ತಾ. ನೀನು ಬಂದ ಮೇಲೆ ನಾವು ನಮ್ಮ ಕಣ್ಣುಗಳಿಂದಲೇ ನಡೆಸುತ್ತಿದ್ದ ಸಂಭಾಷಣೆ ಬೇರಾರ ಅರಿವಿಗೂ ಬರುತ್ತಿರಲಿಲ್ಲವೆಂದೇ, ನಾವಿಬ್ಬರೂ ತಿಳಿದಿದ್ದೆವು. ಒಂದೊಂದು ದಿನ ಮನೆಯಿಂದ ಹೊರಡುವಾಗ ತಡವಾಗಿ, ಆ ಬಸ್ ಏನಾದರೂ ತಪ್ಪಿಹೋದರೆ, ನನಗಾಗುತ್ತಿದ್ದ ತಳಮಳ ಅಷ್ಟಿಷ್ಟಲ್ಲ.

ಆ ಎರಡು ವರುಷ ನಿನ್ನ ಸಾಮಿಪ್ಯದಲ್ಲಿ ನನಗಾದ ಆ ರೋಮಾಂಚನಕಾರಿ ಅನುಭವಗಳು ಬಣ್ಣನೆಗೇ ನಿಲುಕದ್ದು. ಅವುಗಳನ್ನು ಅನುಭವಿಸಿದವರಿಗಷ್ಟೇ ಅದರ ಅರಿವಾದೀತು. ಪ್ರೀತಿಸುವವರನ್ನು ಈ ಸಮಾಜ ಎಷ್ಟೇ ಕೀಳು ದೃಷ್ಟಿಯಿಂದ ನೋಡಿದರೂ, ಹೀಗಳೆದರೂ, ಪ್ರೀತಿಯ ಅನುಭವ ಆದವರಿಗಷ್ಟೇ ಗೊತ್ತು ಕಣೋ, ಪ್ರೀತಿ ಅಂದರೆ ಏನು ಅನ್ನೋದು. ಜೀವನದಲ್ಲಿ ನಿಸ್ವಾರ್ಥ ನಿಷ್ಕಲ್ಮಶ ಪ್ರೀತಿಯನ್ನು ಅನುಭವಿಸದವನ ಬಾಳು ನಿಜಕ್ಕೂ ವ್ಯರ್ಥವೇ ಸರಿ. ನಾವಿಬ್ಬರು ಹಂಚಿಕೊಳ್ಳದ ವಿಷಯಗಳೇ ಇದ್ದಿರಲಿಲ್ಲ. ಏನೇ ವಿಷಯ ಇದ್ದರೂ ಮೊಟ್ಟ ಮೊದಲು ಅದನ್ನು ನಿನಗೆ ತಿಳಿಸಬೇಕು. ನಿನಗೂ ಅಷ್ಟೇ, ನಿಮ್ಮ ಮನೆಯಲ್ಲಿನ ಮತ್ತು ನಿನ್ನ ಗೆಳೆಯರ ನಡುವಣ ಅದೆಷ್ಟೋ ವಿಷಯಗಳನ್ನು ನಿಸಂಕೋಚವಾಗಿ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದೆ. ಮನೆಯಲ್ಲಿ ಏನಾದರೂ ವಿಶೇಷ ತಿಂಡಿ ಮಾಡಿದ್ದರೆ, ಕಟ್ಟಿಕೊಂಡು ಬಂದು ಒಬ್ಬರಿಗೊಬ್ಬರು ನೀಡುತ್ತಿದ್ದೆವು. ಹಂಚಿಕೊಂಡು ತಿನ್ನದಿದ್ದರೆ, ಇಬ್ಬರಿಗೂ ಸಮಾಧಾನವೇ ಇರುತ್ತಿರಲಿಲ್ಲ. ದಿನದ ಇಪ್ಪತ್ತನಾಲ್ಕು ಘಂಟೆಯೂ, ನೀನು ನನ್ನ ಜೊತೆಗಿದ್ದಾಗಲೂ ಅಥವಾ ಇಲ್ಲದೇ ಇದ್ದಾಗಲೂ, ನಿನ್ನೊಂದಿಗಿನ ನನ್ನ ಸಂವಾದ ನಿರಂತರವಾಗಿ ಸಾಗುತ್ತಲೇ ಇರುತ್ತಿತ್ತು. ಹಗಲಲ್ಲೂ ಕನಸು ಕಾಣುತ್ತಿರುವಂತೆ, ಕನಸಿನಲ್ಲೂ ನನಸಿನಲ್ಲಿ ನಡೆಯುತ್ತಿರುವಂತೆ, ನಿರಾತಂಕವಾಗಿ ಸಾಗುತ್ತಿತ್ತು.

ಕಾಲೇಜಿನ ವಾರ್ಷಿಕ ಸಮಾರಂಭದಲ್ಲಿ ಏರ್ಪಡಿಸಿದ್ದ ನಾಟಕ ಪ್ರದರ್ಶನದಲ್ಲೂ ನಾವಿಬ್ಬರೂ ಜೊತೆ ಜೊತೆಯಾಗಿ ಅಭಿನಯಿಸುವ ಅವಕಾಶ ದೊರೆತದ್ದು ನಮ್ಮಿಬ್ಬರ ಸೌಭಾಗ್ಯವೇ ಆಗಿತ್ತು. ಅಬ್ಬಾ ನಾಟಕದ ಆ ಸಂಭಾಷಣೆಗಳನ್ನು ಅಷ್ಟೊಂದು ಜನರ ಮುಂದೆ ವೇದಿಕೆಯಲ್ಲಿ ನುಡಿಯುತ್ತಿರುವಾಗ ನಾನು ನನ್ನ ಹೃದಯವನ್ನೇ ಬಿಚ್ಚಿಟ್ಟ ಅನುಭವವಾಗಿತ್ತು. ಆ ಊರಿನ ಜನತೆಯ ಮುಂದೆ ನಮ್ಮ ಪ್ರೀತಿಯನ್ನು ಬಹಿರಂಗ ಪಡಿಸಿ ಬಿಡುತ್ತಿದ್ದೇವೇನೋ ಎನ್ನುವ ಅನುಮಾನ ಬಂದಿತ್ತು ನನಗೆ. ಆ ಸಂಭಾಷಣೆಗಳು ಹಾಗಿದ್ದವು. ಆದರೆ, ಅದರ ಒಳಗುಟ್ಟು ನಮ್ಮಿಬ್ಬರಿಗಷ್ಟೇ ಗೊತ್ತಿತ್ತು. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆ ಪಾತ್ರಗಳಿಗೆ ಜೀವ ತುಂಬಿದ್ದ ನಾವು, ಒಳ್ಳೆಯ ನಟನೆಗಾಗಿ ಬಹುಮಾನಗಳನ್ನೂ ಪಡೆದಿದ್ದೆವು. ನೆನಪಿದೆಯಾ? ದ್ವಿತೀಯ ವರುಷದ ಪರೀಕ್ಷೆ ಮುಗಿದ ನಂತರ ರಜೆ ಶುರು ಆಯ್ತು ಅನ್ನುವಾಗ, ನಾವಿಬ್ಬರೂ ಜೊತೆಯಾಗಿ ಕಳೆದ ಆ ಎರಡು ಘಂಟೆಗಳ ನೆನಪು ಹೇಗೆ ಮಾಸಿಹೋದೀತು ಹೇಳು. ಅಂದೇ ಅಲ್ಲವೇನೋ ನಾವು, ನಮ್ಮ ಭವಿಷ್ಯದ ಬಗ್ಗೆ, ನೌಕರಿ, ಮದುವೆ, ಮನೆ, ಮಕ್ಕಳು ಇವೆಲ್ಲದರ ಬಗ್ಗೆ ನಿಖರವಾಗಿ ಯೋಜನೆ ರೂಪಿಸಿಕೊಂಡು ಮಾತನಾಡಿದ್ದು? ಆದರೆ ಯಾವುದಕ್ಕೂ ತರಾತುರಿ ಬೇಡ ಅಂದಿದ್ದೆ ನೀನು. ಕಾಲೇಜು ವಿದ್ಯಾಭ್ಯಾಸ ಮುಗಿಸಿ, ನೌಕರಿ ಪಡೆದು ನಮ್ಮ ಕಾಲಿನ ಮೇಲೆ ನಾವು ನಿಂತ ಮೇಲೆಯೇ ಮುಂದಿನ ಯೋಜನೆ ಕಣೇ ಅಂದಿದ್ದೆ. ಅದಕ್ಕೆ ನಾನೂ ಒಪ್ಪಿದ್ದೆ. ನಿನ್ನ ಮಾತುಗಳೆಂದರೆ ನನಗೆ ವೇದ ವಾಕ್ಯಗಳಂತೆ. ನೀನು ಏನೇ ನುಡಿದರೂ, ಯೋಚಿಸಿಯೇ ನುಡಿದಿರುತ್ತೀ ಎನ್ನುವ ನಂಬಿಕೆ ನನ್ನದಾಗಿತ್ತು.

ಆದರೆ ಆ ರಜೆಯಲ್ಲಿ ನೀನು ಹಠಾತ್ ಕಾಣೆಯಾಗಿ ಬಿಟ್ಟಿದ್ದೆ ಅಂತ ಸುದ್ದಿ ಹರಡಿತ್ತು ಊರಲ್ಲೆಲ್ಲಾ. ರಜೆ ಮುಗಿದು ಫಲಿತಾಂಶ ಬಂದರೂ ನಿನ್ನ ಸುಳಿವಿರಲಿಲ್ಲ. ನಾನು ಬಿ.ಎ.ಗೆ ಹೆಬ್ರಿ ಪದವಿ ಕಾಲೇಜಿನಲ್ಲಿ ಸೇರಿಕೊಂಡ ಮೇಲೂ ನಿನ್ನ ಪತ್ತೆಯೇ ಇರಲಿಲ್ಲ. ನನಗೆ ಹುಚ್ಚು ಹಿಡಿಯುವುದೊಂದು ಬಾಕಿ ಇತ್ತು. ಯಾರನ್ನು ಕೇಳಿದರೆ ನಿನ್ನ ಸುದ್ದಿ ಸಿಗಬಹುದು ಎನ್ನುವುದೇ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ ಕಾಲೇಜಿಗೆ ಹೋಗದೇ ಇರುವುದು ನನ್ನಿಂದ ಸಾಧ್ಯ ಇರಲಿಲ್ಲ. ಹೋಗಲೇ ಬೇಕಾಗಿತ್ತು. ಕಾಲೇಜು ಆರಂಭವಾಗಿ ಎರಡು ವಾರಗಳು ಕಳೆದಿರಬಹುದೇನೋ. ಒಂದು ದಿನ ನಾನು ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಅದೆಲ್ಲಿಂದಲೋ ಓರ್ವ ಹುಡುಗ ಅಲ್ಲಿ ಪ್ರತ್ಯಕ್ಷನಾಗಿದ್ದ. ಬಂದವನೇ ನನ್ನ ಕೈಗೆ ನಿನ್ನ ಪತ್ರವನ್ನು ತಲುಪಿಸಿ, ನನ್ನ ಬೆನ್ನ ಹಿಂದಿನ ಆ ದಟ್ಟ ಕಾಡಿನ ಮರಗಳ ನಡುವೆ ಮರೆಯಾಗಿದ್ದ. ಪತ್ರವನ್ನು ಓದಿದವಳಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ನನ್ನ ಕನಸಿನ ಗೋಪುರಗಳೆಲ್ಲಾ ಒಮ್ಮೆಗೇ ಚೂರು ಚೂರಾಗಿ ನೆಲಸಮವಾಗಿತ್ತು. ಕಾಲೇಜಿಗೆ ಹೋಗಲಾರದೇ, ಮನೆಗೆ ಹಿಂದಿರುಗಿದ್ದೆ. ಹೊಟ್ಟೆ ನೋವು ಎಂದು ಅಮ್ಮನಿಗೆ ಸುಳ್ಳು ಹೇಳಿ, ನನ್ನ ಕೋಣೆಗೆ ಹೋದವಳು, ದಿಂಬಿನಲ್ಲಿ ನನ್ನ ಮುಖವನ್ನು ಹುದುಗಿಸಿಕೊಂಡು ಗಂಟೆಗಟ್ಟಳೆ ಅಳುತ್ತಾ ಬಿದ್ದಿದ್ದೆ.

ವಿದ್ಯಾವಂತರಾಗಿ, ಒಂದೊಳ್ಳೆಯ ಕೆಲಸ ಹುಡುಕಿಕೊಂಡು, ಮದುವೆಯಾಗಿ ಸಂಸಾರ ಮಾಡುವ ಅನ್ನುವ ಯೋಜನೆ ಹಾಕಿದ್ದ ನೀನು, ನನ್ನನ್ನು ಕನಸಿನ ಲೋಕಕ್ಕೆ ಕರೆದೊಯ್ದಿದ್ದು ನೆನಪೇ ಹೋಯ್ತೇನೋ ನಿನಗೆ? ಅದು ಹೇಗೆ ನೀನು ಆ ನಕ್ಸಲರ ಹೇಳಿಕೆಗಳನ್ನು ನಂಬಿಕೊಂಡು ಅವರ ಹಿಂಬಾಲಕನಾಗಿ ಹೊರಟು ಬಿಟ್ಟೆ? ನನ್ನ ನೆನಪೇ ಬಂದಿರಲಿಲ್ಲವೇ ನಿನಗೆ? ಅವರೆಲ್ಲಾ ಯಾವ ರೀತಿ ಮಂಕು ಬೂದಿ ಎರಚಿಬಿಟ್ಟರು ನಿನ್ನ ಬುದ್ಧಿಗೆ? ನೀನು ಸೇರಿದ್ದೂ ಅಲ್ಲದೇ ನನಗೂ ಆಹ್ವಾನ ನೀಡಿಬಿಟ್ಟಿದ್ದೀಯಲ್ಲಾ?

ಏನು ಮಾಡಲಿ ಹೇಳು. ನಿನ್ನ ಪ್ರೀತಿಯಲ್ಲಿ ಸಂಪೂರ್ಣವಾಗಿ ಹುಚ್ಚಿಯಾಗಿದ್ದ ನನಗೆ, ನಿನ್ನ ಮಾತಿನಂತೆ, ಮನೆ ಬಿಟ್ಟು ನಿನ್ನನ್ನು ಸೇರಿಕೊಳ್ಳುವುದು ಕಷ್ಟವೇ ಆಗಿರಲಿಲ್ಲ. ನಕ್ಸಲರ ಧ್ಯೇಯೋದ್ದೇಶಗಳನ್ನು ನಾನು ಮತ್ತು ನಮ್ಮ ಮನೆಯವರು ಯಾರೂ ಒಪ್ಪುವುದಿಲ್ಲ. ಆದರೂ ನನಗೆ ನೀನು ಮುಖ್ಯ. ನನಗೆ ನಿನ್ನ ಮಾತುಗಳೇ ವೇದವಾಕ್ಯ. ಹಾಗಾಗಿ ನೀನು ಸೂಚಿಸಿದ್ದ ನಿರ್ದಿಷ್ಟ ಸ್ಥಳಕ್ಕೆ ಖಾಲಿ ಕೈಯಲ್ಲಿ ಬರುವಂತೆ ನೀನು ತಿಳಿಸಿದಂತೆ ಬಂದು ನಿಂತಿದ್ದೆ. ಬಟ್ಟೆಬರೆ ತಂದರೆ ಅನುಮಾನ ಬಂದೀತು ಎನ್ನುವ ಮುನ್ನೆಚ್ಚರಿಕೆ ನಿನ್ನದು. ಅಲ್ಲಿಂದ ಯೋಜನೆಯಂತೆಯೇ ನೀನು ನನ್ನನ್ನು ಕಾಡಿನೊಳಕ್ಕೆ ಕರೆದೊಯ್ದಿದ್ದೆ. ಸಂಜೆಯೊಳಗೆ ನನಗೆ ಬೇಕಾದ ಉಡುಗೆ ತೊಡುಗೆಗಳ ವ್ಯವಸ್ಥೆ ಮಾಡಿಬಿಟ್ಟಿದ್ದೆಯಲ್ಲಾ…

ಆ ಹದಿನೈದು ಹುಡುಗರ ಗುಂಪಿನಲ್ಲಿ ನಾನೋಬ್ಬಳೇ ಹೆಣ್ಣು. ಆ ಒಂದು ತಿಂಗಳಲ್ಲಿ, ಎಷ್ಟು ಕಷ್ಟ ಪಟ್ಟಿದ್ದೆ ನಾನು. ಕೋವಿ ಹಿಡಿಯಲು, ಗುರಿ ಇಡಲು, ಗುಂಡು ಹಾರಿಸಲು, ಚೂರಿ ಬಳಸಲು, ಮರ ಹತ್ತಲು, ಬಚ್ಚಿಟ್ಟುಕೊಳ್ಳಲು, ಓಡಲು, ಹೀಗೆ ಒಂದಲ್ಲ ಎರಡಲ್ಲ, ನಾನು ನಿನ್ನಿಂದ ಕಲಿತಿದ್ದ ವಿದ್ಯೆಗಳು. ತಿಂಗಳು ಎರಡಾಗುವಷ್ಟರಲ್ಲಿ ನಾನು ನಿಮ್ಮೆಲ್ಲರಿಗೆ ಸರಿಸಾಟಿಯಾಗಿ ನಿಂತುಬಿಟ್ಟಿದ್ದೆ. ಗುಂಪಿನ ಎಲ್ಲಾ ಸದಸ್ಯರಿಗೂ ಖುಷಿಯಾಗಿತ್ತು. ಮುಂದಿನ ಆರೇಳು ತಿಂಗಳು ನಾವು ನಡೆಸಿದ ಕಾರ್ಯಾಚರಣೆಗಳು ನನ್ನ ಮನಸ್ಸಿಗೆ ಹಿಡಿಸುತ್ತಿರಲಿಲ್ಲವಾದರೂ, ನಿನ್ನ ಸಾಂಗತ್ಯದಲ್ಲಿ ನನಗೆಲ್ಲವೂ ಕೌತುಕಮಯವಾಗಿದ್ದವು. ನಿನಗಾಗಿ ನಾನೆಲ್ಲಾ ನೋವನ್ನೂ ಸಹಿಸಿಕೊಂಡು ನಗು ನಗುತ್ತಾ ಇದ್ದೆ. ಅಂದು ಆ ಭುಜಂಗ ಶೆಟ್ರ ಮನೆಯವರನ್ನು ಹೆದರಿಸಿ ದೋಚಿಕೊಂಡು ಬಂದಿದ್ದ ಚಿನ್ನಾಭರಣಗಳನ್ನು ಆಂಧ್ರಕ್ಕೆ ಕೊಂಡುಹೋಗಿ ಮಾರಿಬರುವ ಮುನ್ನ, ನನಗೆ ತೊಡಿಸಿ, ಫೋಟೋ ತೆಗೆದು ಆನಂದಿಸಿದ್ದಿ ನೀನು. ಹುಡುಗರೆಲ್ಲಾ ನಮ್ಮಿಬ್ಬರನ್ನು ಏಕಾಂತದಲ್ಲಿ ಬಿಟ್ಟು ಹೋದಾಗ, ನನ್ನನ್ನು ನೀನು ರಮಿಸುತ್ತಿದ್ದಾಗ ನಾನು ಅನುಭವಿಸಿದ ಆ ಆನಂದ ಹೇಗಿತ್ತೆಂದು ಬಣ್ಣಿಸಲಿ. ಆದರೆ, ಎಂದೂ ಎಲ್ಲೆ ಮೀರಿದವನಲ್ಲ ನೀನು. ನಾವು ಮುಂದೆ ಮದುವೆಯಾಗುವವರು. ಹಾಗಾಗಿ ನಮ್ಮ ಮದುವೆಯಾಗುವ ತನಕ ದೈಹಿಕ ಸಂಬಂಧ ಬೆಳೆಸಬಾರದು ಎನ್ನುವ ಕಟ್ಟುಪಾಡು ನೀನೇ ಹಾಕಿಕೊಂಡಿದ್ದೆ. ನಿಜವಾಗಿಯೂ ಆ ಕಾರಣದಿಂದ ನಾನು ನಿನ್ನನ್ನು ಇನ್ನೂ ಹೆಚ್ಚು ಮೆಚ್ಚಿದ್ದೆ ಕಣೋ…

ಅಲ್ಲಿ ನಮ್ಮ ಗುಂಪಿನ ನಾಯಕನಾಗಿದ್ದ ಮುದ್ರಾಡಿಯ ರಾಜೀವ ನಾಯ್ಕ ಪೋಲೀಸರ ಗುಂಡಿಗೆ ಬಲಿಯಾದ ನಂತರ ನೀನೇ ನಮ್ಮ ಗುಂಪಿಗೆ ನಾಯಕನಾಗಿದ್ದೆ. ಹಾಗಾಗಿ ನನ್ನ ಮಾತಿಗೂ ಗುಂಪಿನಲ್ಲಿ ಬೆಲೆ ಇರುತ್ತಿತ್ತು. ನಿನ್ನ ನಾಯಕತ್ವದಲ್ಲಿ ನಾವು ನಡೆಸಿದ ಆ ನಾಲ್ಕಾರು ಮಹಾನ್ ಕಾರ್ಯಾಚರಣೆ ಇಡೀ ನಾಡಿನಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿಬಿಟ್ಟಿತ್ತು. ಕಮ್ಮರಡಿ ಬಳಿ ಸರಕಾರಿ ಬಸ್ಸು ಸುಟ್ಟು ಹಾಕಿದ ಪ್ರಸಂಗ ಮತ್ತು ಮೇಗರವಳ್ಳಿಯ ಬಳಿ ಪೋಲೀಸ್ ವಾಹನವನ್ನು ಅಡ್ಡಕಟ್ಟಿ, ನಾಲ್ಕು ಮಂದಿ ಪೋಲೀಸರನ್ನು ಅಧಿಕಾರಿಯ ಸಮೇತ ಹತ್ಯೆಗೈದು, ಅವರ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಘಟನೆ ನಮ್ಮ ರಾಜ್ಯದ ಗೃಹ ಸಚಿವರ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿತ್ತು. ವಿಧಾನಸಭೆಯಲ್ಲೂ ನಿನ್ನ ಹೆಸರಿನ ಉಲ್ಲೇಖವಾಗಿತ್ತು.

ಪೋಲೀಸ್ ಇಲಾಖೆಯ ಮೊದಲ ವೈರಿಯಾಗಿಬಿಟ್ಟಿದ್ದೆ ನೀನು. ಪೋಲೀಸರು ಎಷ್ಟೇ ಪ್ರಯತ್ನಮಾಡಿದರೂ, ನಿನ್ನ ಚಾಣಾಕ್ಷ್ಯತನಕ್ಕೆ ಸಾಟಿಯಾಗಲು ಕಷ್ಟಕರವಾಗಿತ್ತು. ಇನ್ನೇನು ಸಿಕ್ಕಿಬಿದ್ದೆವು ಅನ್ನುವಾಗ ಅದ್ಯಾವ ಮಾಯದಿಂದ ನೀನು ನಮ್ಮನ್ನೆಲ್ಲಾ ಪಾರುಮಾಡಿಬಿಡುತ್ತಿದ್ದೆ ಹೇಳು. ಅಬ್ಬಾ.. ಒಮ್ಮೊಮ್ಮೆ ನನಗೆ ನಿನ್ನ ಮೇಲೆ ಅನುಮಾನ ಮೂಡುತ್ತಿತ್ತು. ಇವನು ನನ್ನನ್ನು ಪ್ರೀತಿಸುವ ಅವನೇನಾ ಅಂತ. ವೀರ ಸೈನಿಕರ ಆ ಚಾಕಚಕ್ಯತೆಯನ್ನೆಲ್ಲಾ ನೀನು ಎಲ್ಲಿ ಕಲಿತಿದ್ದೆ ಹೇಳು. ನೀನೇನಾದರೂ ಸೈನ್ಯಕ್ಕೆ ಸೇರಿದ್ದರೆ, ಬಹುಷಃ ವೀರಚಕ್ರವನ್ನೋ, ಶೌರ್ಯಚಕ್ರವನ್ನೋ ಗಿಟ್ಟಿಸಿಕೊಳ್ಳುತ್ತಿದ್ದೆ. ಆಗ ಅನಿಸುತ್ತಿತ್ತು ನನಗೆ, ಈ ದೇಶದ ಯುವಜನಾಂಗದ ಶಕ್ತಿಯೆಲ್ಲಾ ಹೇಗೆ ವ್ಯರ್ಥವಾಗಿ ಹೋಗುತ್ತಿದೆ ಎಂದು.

ಅದೊಂದು ದಿನ ಕೆಟ್ಟ ಗಳಿಗೆಯಲ್ಲಿ ನಮ್ಮ ಗುಂಪಿನ ರಮೇಶ, ದಕ್ಷಿಣ ಕನ್ನಡದ ಗಡಿಯ (ಎಸ್ ಕೆ ಬಾರ್ಡರ್) ಸಮೀಪ ನಡೆದ ಪೋಲೀಸರ ಅನಿರೀಕ್ಷಿತ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದ. ಆತ್ಮಹತ್ಯೆ ಮಾಡಿಕೊಳ್ಳಲೂ ಸಮಯಾವಕಾಶ ಸಿಗಲಿಲ್ಲ ಆತನಿಗೆ. ಆ ಘಟನೆ ನಮ್ಮ ಗುಂಪಿನಲ್ಲಿ ಭಯಹುಟ್ಟಿಸಿತ್ತು. ನೀನು ಹತ್ತು ಹಲವು ಬಾರಿ ಆ ಬಗ್ಗೆ ನನ್ನಲ್ಲಿ ನುಡಿದಿದ್ದೆ. ರಮೇಶ ಬಾಯಿ ಬಿಟ್ಟರೆ ನಾವೆಲ್ಲಾ ಬಲಿಯಾಗ್ತೇವೆ ಕಣೇ ಅಂತ. ಆದರೂ ಎರಡು ಮೂರು ತಿಂಗಳು ನಾವು ಸದ್ದಿಲ್ಲದೇ ತಣ್ಣಗೇ ಇದ್ದು ಬಿಟ್ಟಿದ್ದರಿಂದ ಬಚಾವಾಗಿದ್ದೆವು.

ಆದರೆ, ಕೈ ಖಾಲಿಯಾಗಿದೆಯೆಂಬ ಅರಿವು ನಿನಗಾದಾಗ, ಹಣದ ತುರ್ತು ಆವಶ್ಯಕತೆ ಉಂಟಾದಾಗ, ಕನ್ನ ಹಾಕಲೇ ಬೇಕಿತ್ತು ನಾವು. ಅಂದು ರಾತ್ರಿ ನಾವು ತಿಂಗಳೆಯ ಸಮೀಪದ ನಾರಾಯಣ ಹೆಗ್ಡೇರ ಮನೆಗೆ ಹೋಗುವುದೆಂದು ನಿರ್ಧರಿಸಿದುದರ ಸುಳಿವು ಹೇಗೆ ಪೋಲೀಸರಿಗೆ ತಿಳಿದು ಹೋಯ್ತೋ ದೇವರೇ ಬಲ್ಲ. ಬಹುಷಃ ನಮ್ಮ ಗುಂಪಿನಲ್ಲೇ ಯಾರೋ ಪೋಲೀಸರ ದೂತರು ಇದ್ದಿರಬೇಕು. ಕತ್ತಲಲ್ಲಿ ಹೆಗ್ಡೇರ ಮನೆಯ ಸುತ್ತಾ ನಮಗಾಗಿ ಇಡೀ ದಂಡನ್ನೇ ಬಿಟ್ಟಿದ್ದರು. ನಾವು ಮನೆಯೊಳಗೆ ಹೋಗಿ ಮನೆಯಲ್ಲಿದ್ದವರನ್ನೆಲ್ಲಾ ಒಂದು ಕಡೆ ಕೂಡಿಹಾಕಿ, ಇನ್ನೇನು ಹಣಾಭರಣಗಳನ್ನು ದೋಚಿಕೊಳ್ಳಬೇಕು, ಅನ್ನುವಾಗ ಹೊರಗಿನಿಂದ, ಧ್ವನಿವರ್ಧಕದಲ್ಲಿ ಪೋಲೀಸ್ ಅಧಿಕಾರಿಯ ಸ್ವರ ಕೇಳಿಸಿತ್ತು. ಮನೆಯಿಂದ ಹೊರಬರುವಷ್ಟರಲ್ಲಿ, ಗುಂಡಿನ ದಾಳಿ ಶುರು ಆಗಿತ್ತು. ನಮ್ಮನ್ನೆಲ್ಲಾ ಹಿಂದಿನ ಕತ್ತಲಿನ ಹಾದಿಯಲ್ಲಿ ಓಡಿಹೋಗಲು ತಿಳಿಸಿದ, ನೀನು ಪ್ರತಿದಾಳಿಗೆ ನಿಂತಿದ್ದೆ. ಅದೇ ಕೊನೆ. ಮತ್ತೆ ನಿನ್ನ ಮುಖ ದರ್ಶನವೇ ಆಗಿಲ್ಲ. ನಮ್ಮನ್ನೆಲ್ಲ ಬದುಕುಳಿಸಿದ ನೀನು ಪೋಲೀಸರ ಗುಂಡಿಗೆ ಬಲಿಯಾಗಿ ಬಿಟ್ಟಿದ್ದೆ. ಮರುದಿನ ಎಲ್ಲ ಪತ್ರಿಕೆಗಳಲ್ಲೂ ನೀನು ಕೊಲೆಯಾದ ಸುದ್ದಿಯೇ ಪ್ರಮುಖವಾಗಿತ್ತು. ನನಗೆ ಅಳಬೇಕೋ ಬೇಡವೋ ಅನ್ನುವುದೇ ಗೊತ್ತಾಗಿರಲಿಲ್ಲ. ಏಕೆಂದರೆ, ಮುಂದೊಂದು ದಿನ ನಮ್ಮ ಗತಿ ಅದೇ ಎನ್ನುವ ಕಠು ಸತ್ಯದ ಅರಿವು ನಮಗೆ ಮೊದಲಿನಿಂದಲೂ ಇತ್ತು ತಾನೇ…

ಅಲ್ಲಿಂದ ರಾತ್ರಿಯಿಡೀ ಪಯಣಿಸಿದ್ದ ನಾವು ಅತೀ ದೂರದ ದಟ್ಟಾರಣ್ಯದಲ್ಲಿ ಅಡಗಿ ಕೂತಿದ್ದೆವು. ನಾನೊಬ್ಬಳೇ ಪೇಟೆಗೆ ಹೋಗಿ ತಿಂಡಿ ತಿನಿಸುಗಳನ್ನು ಕಟ್ಟಿಸಿಕೊಂಡು ಬರುತ್ತಿದ್ದೆ. ಹೆಣ್ಣಿನ ಮೇಲೆ ಯಾರಿಗೂ ಅನುಮಾನ ಬಾರದು ಎನ್ನುವ ನಂಬಿಕೆ ನಮ್ಮದಾಗಿತ್ತು. ದಿನಗಳು ಕಳೆದಂತೆ ನಮ್ಮ ಗುಂಪಿನಲ್ಲಿ ಒಡಕು ಮೂಡತೊಡಗಿತು. ಸಶಕ್ತ ನಾಯಕತ್ವದ ಕೊರತೆ ಎದ್ದುಕಾಣುತ್ತಿತ್ತು. ನೀನಿಲ್ಲದ ನಾನು ಈ ಗುಂಪಿನಲ್ಲಿ ಜೀವನ ಸಾಗಿಸುವುದಾದರೂ ಹೇಗೆ? ಒಂಟಿ ಹೆಣ್ಣಾಗಿದ್ದ ನನ್ನನ್ನು ಗುಂಪಿನ ಹುಡುಗರು ಕೆಟ್ಟ ದೃಷ್ಟಿಯಿಂದ ನೋಡಲು ಶುರು ಮಾಡಿದರು. ದಿನಗಳು ಕಳೆದಂತೆ ಆ ಹುಡುಗರು ನನ್ನ ಮಾನಹರಣ ಮಾಡುವುದಂತೂ ಖಂಡಿತ ಎನ್ನುವ ಅರಿವು ನನಗಾಗಿತ್ತು. ಅಲ್ಲದೆ, ಇಲ್ಲಿ ಇದ್ದು ನಾನು ಸಾಧಿಸಲೇನೂ ಇಲ್ಲ. ನನಗೆ ಈ ನಕ್ಸಲರ ಉದ್ದೇಶವೇ ಇನ್ನೂ ಮನದಟ್ಟಾಗಿಲ್ಲ. ಹಿಂಸೆಯಿಂದಲೇ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕೆಂಬ ಮಾರ್ಗ ನನಗೇಕೋ ಹಿಡಿಸಲೇ ಇಲ್ಲ. ನಾನು ಇಲ್ಲಿ ಇದ್ದಿದ್ದು ಬರೀ ನಿನಗಾಗಿ ಅಷ್ಟೇ. ನನಗೆ ಇನ್ಯಾವುದರಲ್ಲೂ ಆಸಕ್ತಿಯೇ ಇದ್ದಿರಲಿಲ್ಲ.

ನನಗೆ ಅಲ್ಲಿ ನೆಮ್ಮದಿ ಇರಲಿಲ್ಲ ಕಣೋ. ಹಾಗಾಗಿ, ಆ ಗುಂಪಿನಿಂದ ಓಡಿ ಹೋಗಬೇಕೆಂಬ ಯೋಚನೆ ಬರತೊಡಗಿತು. ಆದರೆ ಎಲ್ಲಿಗೆ ಹೋಗಲಿ? ಪೋಲೀಸರಿಗೆ ಶರಣಾದರೆ ಅಥವಾ ಮನೆಗೆ ಹಿಂದಿರುಗಿದರೆ, ನನಗಂತೂ ಜೀವಾವಧಿ ಶಿಕ್ಷೆಯೋ, ಮರಣದಂಡನೆಯೋ ಕಟ್ಟಿಟ್ಟ ಬುತ್ತಿ ಎನ್ನುವುದು ಗೊತ್ತಿತ್ತು. ಅಥವಾ, ಪೋಲೀಸರೇ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಂದು ಬಿಸಾಕಿ, “ಎನ್ ಕೌಂಟರ್" ಕೊಲೆ ಎಂದು ಸುದ್ದಿ ಹರಡಿಸಬಹುದು. ಇಲ್ಲೇ ಇದ್ದರೂ ನನಗೆ ಉಳಿಗಾಲವಿರಲಿಲ್ಲ. ಅತ್ತ ಕಣಿವೆ ಇತ್ತ ಹುಲಿ ಎಂಬಂಥ ಪರಿಸ್ಥಿತಿ ನನ್ನದಾಗಿತ್ತು.

ಹಾಗಾಗಿ ಬೇರೆ ದಾರಿ ಕಾಣದೇ, ನಾನು ಸಾಯಲು ನಿರ್ಧಾರ ಮಾಡಿಬಿಟ್ಟೆ. ಹಾಗೆ ಮಾಡಿಯಾದರೂ ನೀನು ಸೇರಿದ ಲೋಕವನ್ನು ಸೇರಿಕೊಳ್ಳಬಹುದು ಎನ್ನುವ ಯೋಚನೆ ನನ್ನದಾಗಿದೆ. ಆದರೆ, ಸಾಯೋದಾದರೂ, ಅದೇಕೋ ನಮ್ಮೂರಿನ ಬಳಿಯೇ ಸಾಯಬೇಕು ಎಂಬ ಇಚ್ಛೆ ಕಣೋ ನನಗೆ. ನನ್ನ ಹೆಣವಾದರೂ ನಮ್ಮ ಮನೆಯವರ ಕೈಸೇರಲಿ ಎಂಬ ಆಸೆ ಇದ್ದಿರಬೇಕು ಒಳಮನದಲ್ಲಿ. ಹಾಗಾಗಿ ನಮ್ಮ ಗುಂಪಿನವರಿಗೆ ಏನೇನೊ ಕಾರಣ ನೀಡಿ, ಒತ್ತಾಯ ಮಾಡಿ ಇತ್ತ ಕರೆದುಕೊಂಡು ಬಂದಿದ್ದೇನೆ.

ಈಗ ಎಲ್ಲರೂ ಗಾಢವಾದ ನಿದ್ರೆಯಲ್ಲಿದ್ದಾರೆ. ಒಬ್ಬ ಮಾತ್ರ ಕಾವಲಿಗಾಗಿ ಅತ್ತಿಂದಿತ್ತ ಸುತ್ತುತ್ತಿದ್ದಾನೆ. ನಾನು ಈ ಪತ್ರ ಬರೆಯುವುದನ್ನು ನೋಡಿದ ಆತ “ಹೇ ಏನದು? ಯಾರಿಗೆ ಕಾಗದ ಬರೀತಿದ್ದೀ?" ಅಂದ. “ಕಾಗದ ಅಲ್ಲ ಮಾರಾಯ, ಅವನ ನೆನಪಿನಲ್ಲಿ ಕವಿತೆ ಬರೀತಿದ್ದೇನೆ" ಅಂದಿದ್ದೆ. “ನಿನಗೆ ತುಂಬಾ ಬೇಜಾರು ಅಲ್ವಾ… ಬರಿ ಬರಿ, ಬರೆದಾದ ಮೇಲೆ ನಂಗೂ ತೋರಿಸು ಆಯ್ತಾ?" ಅಂದಿದ್ದಕ್ಕೆ ಸರಿ ಅಂದಿದ್ದೆ. ಕಾಗ್ದ ಬರೆದು ಮುಗಿಸಿ ನಾನು ಮೂತ್ರವಿಸರ್ಜನೆಯ ನೆಪಹೇಳಿ, ಸ್ವಲ್ಪ ಕಾಡಿನೊಳಕ್ಕೆ ಹೋಗ್ತೇನೆ. ಅಲ್ಲಿ ಇರುವ ಆ ದೊಡ್ಡ ಮರದ ಗೆಲ್ಲಿಗೆ ನೇಣು ಬಿಗಿದು ನಿನ್ನನ್ನು ಸೇರಿಕೊಳ್ಳಲು ಬಂದು ಬಿಡ್ತೇನೆ. ಆ ಮರವೇ ಏಕೆ ಅನ್ನೋದು ನಿನಗೂ ಗೊತ್ತು. ಆ ಮರದ ಕೆಳಗೆ ಕೂತೇ ಅಲ್ಲವೇ ನಾವು ನಮ್ಮ ಸುಖಕ್ಷಣಗಳನ್ನು ಕಳೆಯುತ್ತಿದ್ದುದು? ಈಗ ಇನ್ನೇನು ಮಾಡಲೂ ನನಗೆ ತೋಚುತ್ತಿಲ್ಲ. ಇದೊಂದೇ ದಾರಿ ಉಳಿದಿರೋದು ನನ್ನ ಪಾಲಿಗೆ. ಇನ್ನೆರಡು ದಿನಗಳಲ್ಲಿ, ನಾವು ಚಿಕ್ಕಂದಿನಿಂದ ಓದುತ್ತಿದ್ದ ನಮ್ಮ ನೆಚ್ಚಿನ ಉದಯವಾಣಿಯಲ್ಲಿ, “ಹೆಬ್ರಿ ಸಮೀಪದ ಕಾಡಿನಲ್ಲಿ ನಕ್ಸಲ್ ಹೆಣ್ಣಿನ ಆತ್ಮಹತ್ಯೆ!" ಎಂಬ ತಲೆಬರಹದೊಂದಿಗೆ ನನ್ನ ಆತ್ಮಹತ್ಯೆಯ ಸುದ್ದಿಯೂ ಪ್ರಕಟವಾಗುತ್ತದೆ.

ಬರ್ತಾ ಇದ್ದೇನೆ ಕಣೋ ನಾನು… ಸ್ವಾಗತಿಸಲು ತಯಾರಾಗಿರು ಆಯ್ತಾ… ಇಂತೀ ನಿನ್ನವಳಾಗದೇ ಉಳಿದು, ಈಗ ನಿನ್ನವಳಾಗಲು ಹೊರಟವಳು… ಜಯಂತಿ"

(ಇದೊಂದು ಕಾಲ್ಪನಿಕ ಕತೆ, ಅಷ್ಟೇ!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X