ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಸಾಯಿಯ ಭಗವದ್ಗೀತೆ : ಜೋಗಿ ಸಣ್ಣ ಕಥೆ

By Prasad
|
Google Oneindia Kannada News

Jogi (Girish Rao)
ಸಮಕಾಲೀನ ಕನ್ನಡ ಸಾಹಿತ್ಯದ ವಿವಿಧ ಮಜಲುಗಳನ್ನು ಆಸಕ್ತಿಯಿಂದ ಗಮನಿಸುವವರಿಗೆ ಜೋಗಿ ಅಥವಾ ಗಿರೀಶ್ ರಾವ್ ಅವರನ್ನು ಮತ್ತೆ ಪರಿಚಯಿಸುವ ಅಗತ್ಯವಿಲ್ಲ. ಇತ್ತೀಚೆಗೆ ಅಮೆರಿಕಾದಲ್ಲಿ ಜರುಗಿದ ಅಕ್ಕ ಸಮ್ಮೇಳನದಿಂದ ಮರಳಿ ಬಂದ ನಂತರ ಜೋಗಿ ಅವರು ಬರೆದ ಸಣ್ಣ ಕಥೆ 'ದೇಸಾಯಿಯ ಭಗವದ್ಗೀತೆ' ಈಗ ನಿಮ್ಮ ಪಾಲು.

* ಜೋಗಿ, ಬೆಂಗಳೂರು

ದೇಶಭಕ್ತ ದೇಸಾಯಿ ಸಾವಿರದ ಎಂಟು ಬಾರಿ ಭಗವದ್ಗೀತೆಯ ಹದಿನೆಂಟೂ ಅಧ್ಯಾಯಗಳನ್ನೂ ಬರೆದ ಪುಸ್ತಕಗಳ ಕಟ್ಟನ್ನು ಹೊತ್ತುಕೊಂಡು ಮಠಕ್ಕೆ ಕಾಲಿಡುವ ಹೊತ್ತಿಗೆ ಸಂಜೆಯಾಗಿತ್ತು. ಗುರುಗಳು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದೂ ಮಾರನೆಯ ದಿನ ಬೆಳಗ್ಗೆ ಅವರನ್ನು ನೋಡಬಹುದೆಂದೂ ಮಠದ ಆಡಳಿತಾಧಿಕಾರಿ ಕೇಶವದಾಸರು ಅಸಹನೆಯ ಧ್ವನಿಯಲ್ಲಿ ಹೇಳಿ, ದೇಸಾಯಿಯನ್ನು ಜಗಲಿಯಲ್ಲಿ ಮಲಗುವುದಕ್ಕೆ ಸೂಚಿಸಿ ತಮ್ಮ ಪಾಡಿಗೆ ತಾವು ಎಲ್ಲಿಗೋ ಹೋಗಿಬಿಟ್ಟರು.

ದೇಸಾಯಿಗೆ ತುಂಬ ಬೇಸರವೇನೂ ಆಗಲಿಲ್ಲ. ಆದರೆ ತಾನು ಮೂರು ವರ್ಷ ಕಷ್ಟಪಟ್ಟು ಭಗವದ್ಗೀತೆಯನ್ನು ಸಾವಿರದ ಎಂಟು ಸಲ ಬರೆದಿದ್ದನ್ನು ಕೇಶವದಾಸರು ನಿಕೃಷ್ಟವಾಗಿ ಕಂಡರು ಎನ್ನುವ ದುಃಖ ಮಾತ್ರ ಅವನನ್ನು ಬಾಧಿಸುತ್ತಲೇ ಇತ್ತು. ಅವರಿಗೆ ಅದರ ಮಹತ್ವ ಎಲ್ಲಿಂದ ತಿಳೀಬೇಕು. ಅವರು ಆಡಳಿತಾಧಿಕಾರಿಗಳು. ದುಡ್ಡಿನ ಲೆಕ್ಕಾಚಾರ ನೋಡಿಕೊಳ್ಳುವವರು. ಗುರುಗಳಿಗೆ ತನ್ನ ಕಾರ್ಯ ಎಷ್ಟು ಅಗಾಧ ಎನ್ನುವುದು ಗೊತ್ತಾಗುತ್ತದೆ ಎಂದು ದೇಸಾಯಿ ಸಮಾಧಾನಪಟ್ಟುಕೊಂಡು ಮಠದ ಜಗಲಿಯಲ್ಲಿ ಬಿದ್ದುಕೊಂಡ.

ಮಧ್ಯಾಹ್ನದಿಂದ ದೇಸಾಯಿ ಏನೂ ತಿಂದಿರಲಿಲ್ಲ. ಮಠದಲ್ಲಿ ಪುಷ್ಕಳ ಭೋಜನದ ವ್ಯವಸ್ಥೆಯಿರುತ್ತದೆ ಎಂದು ದೇಸಾಯಿಗೆ ಯಾರೋ ಹೇಳಿದ್ದರು. ಮಠದ ಆವರಣದೊಳಗೆ ಕಾಲಿಟ್ಟು, ಭೋಜನಶಾಲೆ ಎಲ್ಲಿದೆ ವಿಚಾರಿಸುವ ಹೊತ್ತಿಗೇ, ಹುಳಿತೇಗಿನಿಂದ ಒದ್ದಾಡುತ್ತಿದ್ದ ಆಚಾರ್ಯರೊಬ್ಬರು ಈಗ ಭೋಜನಶಾಲೆಗೆ ಹೋಗಿ ಏನ್ಮಾಡ್ತೀರಿ, ನಿಮ್ಮ ಪಿಂಡ. ಏಕಾದಶಿ ಅಲ್ವೇ ಇವತ್ತು.." ಎಂದು ಹಸಿವಿನಿಂದ ಕಂಗೆಟ್ಟ ದನಿಯಲ್ಲಿ ಹೇಳಿ ಹೊಟ್ಟೆ ನೇವರಿಸಿಕೊಂಡು ಮರೆಯಾಗಿದ್ದರು.

ನೀರಾದರೂ ಸಿಗಬಹುದೇನೋ ಎಂದು ದೇಸಾಯರು ಅತ್ತಿತ್ತು ನೋಡಿದರು. ಮಠದ ನಿರ್ಜನ ಜಗಲಿಯಲ್ಲಿ ಒಂದು ಹೂಜಿ ಕೂಡ ಕಾಣಿಸಲಿಲ್ಲ. ಆಗಲೇ ಕತ್ತಲು ದಟ್ಟವಾಗುತ್ತಿತ್ತು. ಬಾವಿಕಟ್ಟೆ ಎಲ್ಲಿದೆ ಎಂದು ಹುಡುಕಿಕೊಂಡು ಹೋಗುವ ಶಕ್ತಿಯೂ ತನ್ನಲ್ಲಿ ಉಳಿದಿಲ್ಲ ಎನ್ನಿಸಿ ದೇಸಾಯಿ ಮುದುಡಿ ಮಲಗಲು ಯತ್ನಿಸಿದರು. ಅವರು ಮಲಗಿದ ಜಾಗದಿಂದ ಹೊರಳಿ ನೋಡಿದರೆ ಮೂಲದೇವರ ಸನ್ನಿಧಿಯೂ, ಅದರ ಮುಂಚೆ ಹಚ್ಚಿಟ್ಟ ನಂದಾದೀಪವೂ ಕಾಣಿಸುತ್ತಿತ್ತು. ದೇವರು ಕೂಡ ಏಕಾದಶಿಯಾದ್ದರಿಂದ ಉಪವಾಸ ಬಿದ್ದಿರಬಹುದಾ ಎಂದುಕೊಂಡು ದೇಸಾಯಿಗೆ ನಗು ಬಂತು.

ಇದ್ದಕ್ಕಿದ್ದ ಹಾಗೆ ದೇಸಾಯಿಗೆ ತನ್ನ ಚೀಲದಲ್ಲಿರುವ ದ್ರಾಕ್ಷಿ ಗೋಡಂಬಿ ನೆನಪಾಯಿತು. ಕೃಷ್ಣಾಪುರದ ಜನ ದೇಸಾಯಿಗೆ ಸನ್ಮಾನ ಮಾಡಿ ಕಳುಹಿಸಿಕೊಟ್ಟಿದ್ದರು. ಗೀತಯಜ್ಞ ಪಾರಂಗತ ಎಂದು ಬಿರುದು ಕೊಟ್ಟಿದ್ದರು. ಕೃಷ್ಣಾಪುರಕ್ಕೆ ಗುರುಗಳು ಬಂದು ಗೀತಯಜ್ಞದಲ್ಲಿ ಎಲ್ಲರೂ ಪಾಲುಗೊಳ್ಳಬೇಕು ಎಂದು ಅಪ್ಪಣೆ ಕೊಡಿಸಿ ಮೂರು ವರ್ಷ ಕಳೆದಿದ್ದವು. ಉತ್ಸಾಹದಿಂದ ಭಗವದ್ಗೀತೆ ಬರೆಯಲು ಆರಂಭಿಸಿದ್ದ ಅನೇಕರು, ಅದನ್ನು ಅರ್ಧಕ್ಕೇ ಕೈಬಿಟ್ಟು ಸುಮ್ಮನಾಗಿದ್ದರು. ದೇಸಾಯಿ ಮಾತ್ರ ಪಟ್ಟುಬಿಡದೇ ಭಗವದ್ಗೀತೆ ಬರೆಯಲು ಆರಂಭಿಸಿ, ಮೂರು ವರ್ಷದಲ್ಲಿ ಸಾವಿರದ ಎಂಟು ಸಾರಿ ಭಗವದ್ಗೀತೆ ಬರೆದು ಮುಗಿಸಿದ್ದರು.

ಹಾಗಂತ ದೇಸಾಯರು ನಿರುದ್ಯೋಗಿ ಎಂದು ಭಾವಿಸಬಾರದು. ಅವರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಕೃತ ಉಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದರು. ತಿಂಗಳಿಗೆ ನಾನ್ನೂರೈವತ್ತು ರುಪಾಯಿ ಸಂಬಳವನ್ನು ಕಾಲೇಜಿನ ಆಡಳಿತ ಮಂಡಳಿ ಕೊಡುತ್ತಿತ್ತು. ಸರ್ಕಾರದಿಂದ ನೇಮಕಗೊಂಡ ಮೇಷ್ಟ್ರುಗಳು ತಿಂಗಳಿಗೆ ಹತ್ತು ಹದಿನೈದು ಸಾವಿರ ಸಂಬಳ ಪಡೆಯುತ್ತಿದ್ದರೆ, ದೇಸಾಯಿ ಮುಂದೊಂದು ದಿನ ತನ್ನ ವೃತ್ತಿ ಖಾಯಂ ಆಗಬಹುದು ಎಂದು ನಂಬಿಕೊಂಡು ಸುಖವಾಗಿದ್ದರು. ಕೆಲಸ ಖಾಯಂ ಆದ ತಕ್ಷಣ ಅನಸೂಯಳಿಗೊಂದು ಒಂದೆಳೆ ಸರ ಮಾಡಿಸಬೇಕು, ಮಗಳಿಗೊಂದು ಬೆಂಡೋಲೆ ಕೊಡಿಸಬೇಕು ಮತ್ತು ಕೇವಲ ಮಳೆಗಾಲದಲ್ಲಿ ಮಾತ್ರ ಸೋರುತ್ತಿದ್ದ ಮನೆಗೆ ಹೆಂಚು ಹೊದಿಸಿ ರಿಪೇರಿ ಮಾಡಿಸಬೇಕು ಎಂಬ ಸಣ್ಣ ಆಸೆಯನ್ನಿಟ್ಟುಕೊಂಡು ದೇಸಾಯರು ವೃತ್ತಿಪಾಲನೆ ಮಾಡುತ್ತಾ ಬಂದಿದ್ದರು.

ಅವರು ಭಗವದ್ಗೀತೆಯ ಮೊರೆ ಹೊಕ್ಕಿದ್ದಕ್ಕೆ ಮತ್ತೊಂದು ಕಾರಣವೂ ಇತ್ತು. ಅವರಿಗೀಗ ಏಳರಾಟ ಶನಿ ನಡೆಯುತ್ತಿತ್ತು. ಆ ಅವಧಿಯಲ್ಲಿ ಇದ್ದಬದ್ಧ ಸಂಪತ್ತೆಲ್ಲ ಸೊರಗಿಹೋಗಿ, ಕಾಣದ ಕಷ್ಟಗಳು ಎದುರಾಗುತ್ತವೆ ಎಂದು ಅವರಿಗೆ ಹೊಟೆಲ್ ಪೂರ್ಣಿಮಾದ ನೂರಾ ಒಂದನೇ ರೂಮಿನಲ್ಲಿ ಶಾಶ್ವತವಾಗಿ ಬೀಡುಬಿಟ್ಟಿದ್ದ ಹಸ್ತಸಾಮುದ್ರಿಕಾ ತಜ್ಞ ಶಿವಶಂಕರ ಶಾಸ್ತ್ರಿ ಹೇಳಿಬಿಟ್ಟಿದ್ದ. ಅವನ ಮಾತನ್ನು ನಿಜಮಾಡುವಂತೆ, ಅನಸೂಯ ಬಚ್ಚಲುಮನೆಯಲ್ಲಿ ಕಾಲುಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಳು. ಅವಳು ಹಾಸಿಗೆ ಹಿಡಿದ ಮೂರು ತಿಂಗಳ ಕಾಲ ದೇಸಾಯಿಯೇ ಅಡುಗೆ ಮಾಡಿ, ಮಗಳ ಬಟ್ಟೆ ಒಗೆದು ಅವಳನ್ನು ಶಾಲೆಗೆ ಕಳುಹಿಸಬೇಕಾಗಿತ್ತು. ಆಗಾಗ ಬ್ಯಾಂಡೇಜು ಬಿಚ್ಚಿಸುವುದಕ್ಕೆ ಮತ್ತು ಕಟ್ಟುವುದಕ್ಕೆ ಅನಸೂಯಾಳನ್ನು ಜಟಕಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಈ ತಾಪತ್ರಯಗಳಿಂದ ಕಂಗಾಲಾಗಿದ್ದ ದೇಸಾಯಿ, ಇದಕ್ಕೆಲ್ಲ ಏಕೈಕ ಪರಿಹಾರ ಎಂಬಂತೆ ಗೀತಯಜ್ಞದಲ್ಲಿ ಮನಸ್ಸು ನೆಟ್ಟು, ಐಹಿಕದ ಸಂಕಷ್ಟಗಳನ್ನು ಮರೆಯುವುದಕ್ಕೊಂದು ದಾರಿ ಕಂಡುಕೊಂಡಿದ್ದ.

ಭಗವದ್ಗೀತೆಯನ್ನು ಬರೆಯುತ್ತಾ ಬರೆಯುತ್ತಾ ದೇಸಾಯಿಗೆ ಒಮ್ಮೊಮ್ಮೆ ಶ್ರೀಕೃಷ್ಣನೇ ತನ್ನ ಮುಂದೆ ನಿಂತು ತನಗೆ ಸಾಂತ್ವನ ಹೇಳುತ್ತಿದ್ದಾನೇನೋ ಅನ್ನಿಸುತ್ತಿತ್ತು. ಒಂದೊಂದು ಸಲ ಅರ್ಜುನ ಕೇಳಿದ ಒಂದೇ ಒಂದು ಪ್ರಶ್ನೆಗೆ ಎಷ್ಟೆಲ್ಲ ಮಾತಾಡಿಬಿಟ್ಟ ಕೃಷ್ಣರಾಯ. ಆ ಯುದ್ಧಭೂಮಿಯ ಮಧ್ಯೆ ನಿಂತು ಹದಿನೆಂಟು ಅಧ್ಯಾಯ ಹೇಳುವಷ್ಟು ಪುರುಸೊತ್ತಾದರೂ ಎಲ್ಲಿತ್ತು ಎಂದು ಅನುಮಾನವಾಗುತ್ತಿತ್ತು. ಸಂಜಯ ಅದನ್ನೆಲ್ಲ ಕುರುಡ ಧೃತರಾಷ್ಟ್ರನಿಗೆ ಹೇಳಿದ್ದಾದರೂ ಹೇಗೆ? ಅದನ್ನು ಕೇಳಿದ ನಂತರ ಧೃತರಾಷ್ಟ್ರ ಯಾಕೆ ಬದಲಾಗಲಿಲ್ಲ? ಶ್ರೀಕೃಷ್ಣನ ವಿಶ್ವರೂಪ ದರ್ಶನ ಅರ್ಜುನನಿಗೆ ಮಾತ್ರ ಕಂಡಿರಬೇಕಾದರೆ, ಅದನ್ನು ಸಂಜಯ ಹೇಗೆ ಧೃತರಾಷ್ಟ್ರನಿಗೆ ವರ್ಣಿಸಿದ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಾಗುತ್ತಿದ್ದವು. ದೇಸಾಯಿ ಅಂಥ ದ್ವಂದ್ವ ಕಾಡಿದಾಗಲೆಲ್ಲ ತನ್ನ ತಲೆಯನ್ನು ತಾನೇ ಮೊಟಕಿಗೊಂಡು ಅನನ್ಯ ಭಕ್ತಿಯಿಂದ ಯತ್ರ ಯೋಗೇಶ್ವರ ಕೃಷ್ಣೋ, ಯತ್ರ ಪಾರ್ಥೋ ಧನುರ್ಧರಃ ..." ಎಂದು ಬರೆಯುತ್ತಾ ತನ್ನ ಅನುಮಾನವನ್ನು ಮರೆಯಲು ಯತ್ನಿಸುತ್ತಿದ್ದ.

ನಡುರಾತ್ರಿ ದಾಟಿದಂತೆಲ್ಲ ದೇಸಾಯಿಯ ಹಸಿವು ಹೆಚ್ಚಾಗತೊಡಗಿತು. ಗೀತೆಯ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬಂದವು. ಹಸಿದವನೂ ನಾನೇ, ತಿನ್ನುವವನೂ ನಾನೇ, ನೀನು ನೆಪ ಮಾತ್ರ ಎಂದು ಗೀತೆಯನ್ನು ತನ್ನ ಹಸಿವಿಗೆ ಹೊಂದಿಸಿಕೊಳ್ಳುತ್ತಾ ದೇಸಾಯಿ ಎದ್ದು ಕೂತ. ಹಸಿವೆ ಎಂಬುದು ಕೇವಲ ದೈಹಿಕ ಸ್ಥಿತಿ ಮಾತ್ರ. ಅದನ್ನು ಮಾನಸಿಕ ಸ್ಥೈರ್ಯದಿಂದ ಮೀರಬಹುದು ಎಂದು ಹೇಳಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಂಡ. ಎಲ್ಲರೂ ಮಲಗಿರುವ ಹೊತ್ತಿಗೆ, ಎದ್ದಿರುವವನು ಯೋಗಿ ಎಂಬ ಮತ್ತೊಂದು ಸಾಲು ಹೊಳೆದು ಮನಸ್ಸಿಗೆ ಖುಷಿಯಾಯಿತು. ಎಲ್ಲವನ್ನೂ ಕೃಷ್ಣಾರ್ಪಣವೆಂದು ದೇವರಿಗೇ ಒಪ್ಪಿಸಿ ಸುಮ್ಮಗಿರುವ ಏಕೋಭಾವ ತನಗೆ ಯಾಕೆ ಸಾಧ್ಯವಾಗಲಿಲ್ಲ ಎಂದು ದೇಸಾಯಿಗೆ ಆಶ್ಚರ್ಯವಾಯಿತು. ಗೀತೆಯ ಪ್ರತಿಯೊಂದು ಸಾಲೂ ತನಗೆ ಗೊತ್ತಿದೆ. ಕರ್ಮಯೋಗವೂ ಗೊತ್ತು, ಭಕ್ತಿಯೋಗವೂ ಗೊತ್ತು, ಜ್ಞಾನಯೋಗವೂ ಗೊತ್ತು. ಆದರೂ ಏನೋ ತಳಮಳ. ನಿಜವಾಗಿಯೂ ಭಗವದ್ಗೀತೆ ತನ್ನೊಳಗೆ ನೆಲೆಯಾಗಿದ್ದರೆ ಈ ತಳಮಳದಿಂದ ಮುಕ್ತಿ ಸಿಗಬೇಕಾಗಿತ್ತಲ್ಲ ಎಂದುಕೊಂಡ. ಕರ್ಮ ತೊಳೆದುಹೋಗದೇ ಇದರಿಂದ ಮುಕ್ತಿ ಸಾಧ್ಯವಿಲ್ಲವೇನೋ ಎನ್ನಿಸತೊಡಗಿತು, ಹಾಗಿದ್ದರೆ ಕರ್ಮದಿಂದ ಜೀವಿ ಮುಕ್ತನಾಗುವುದು ಹೇಗೆ? ಕರ್ಮೇಂದ್ರಿಯಾಣಿ ಸಂಯಮ್ಯ ಯ ಅಸ್ತೆ ಮನಸಾ ಸ್ಮರನ್. ಇಂದ್ರಿಯಾರ್ಥಾನ್ವಿಮೂಢಾತ್ಮಾ ಮಿಥ್ಯಾಸಾರ ಸ ಉಚ್ಯತೆ...

***

ಯಾರೋ ಗಲಾಟೆ ಮಾಡುತ್ತಿದ್ದರು. ದೇಸಾಯಿ ಕಣ್ಣುತೆರೆದರೆ ಜಗಲಿ ಗುಡಿಸುತ್ತಿದ್ದ ಮುದುಕನೊಬ್ಬ ದೇಸಾಯಿಯನ್ನು ಎಬ್ಬಿಸಲು ಹರಸಾಹಸ ಮಾಡುತ್ತಿದ್ದ. ತನಗೆ ಯಾವಾಗ ನಿದ್ದೆ ಬಂತು, ಯಾವಾಗ ಬೆಳಗಾಯಿತು ಅನ್ನುವುದು ತಿಳಿಯದೇ ಕಂಗಾಲಾಗಿ ದೇಸಾಯಿ ಎದ್ದು ಕೂತ. ಅಷ್ಟರಲ್ಲಾಗಲೇ ಮುದುಕ, ದೇಸಾಯಿಯ ಬಟ್ಟೆಗಂಟುಗಳನ್ನು ಎತ್ತಿ ಅತ್ತ ಎಸೆದುಬಿಟ್ಟಿದ್ದ. ದೇಸಾಯಿ ಅವನ ಮುಖವನ್ನೇ ನೋಡುತ್ತಾ ಸಿಟ್ಟಿನಿಂದ ಏನೋ ಹೇಳಬೇಕು ಅನ್ನುವಷ್ಟರಲ್ಲಿ ಆತ ದೇಸಾಯಿಯ ಕೈ ಹಿಡಿದು ಪಕ್ಕಕ್ಕೆ ಎಳೆದು, ಅವನು ಮಲಗಿದ್ದ ಜಾಗವನ್ನು ಗುಡಿಸುತ್ತಾ ಮುಂದೆ ಹೋದ. ದೇವಾನ್ ಭಾವಯತಾನೇನಾ ತೇ ದೇವಾ ಭಾವಯಂತು ವಃ .. ಪರಸ್ಪರಂ ಭಾವಯಂತಾ ಶ್ರೇಯಃ ಪರಮವಾಪ್ಯ್ಸಥ ಎಂಬ ಸಾಲುಗಳನ್ನು ನೆನಪಿಸಿಕೊಳ್ಳುತ್ತಾ ದೇಸಾಯಿ ಅಂಗಳದಲ್ಲಿ ಬಿದ್ದಿದ್ದ ಭಗವದ್ಗೀತೆಯ ಕಟ್ಟುಗಳನ್ನು ಎತ್ತಿಕೊಂಡು ಗುರುಗಳ ದರ್ಶನಕ್ಕೆಂದು ಹೊರಟ.

ಗುರುಗಳ ದರ್ಶನ ಸುಲಭದಲ್ಲೇನೂ ಆಗಲಿಲ್ಲ. ಇಬ್ಬರು ಶಿಷ್ಯಂದಿರು ದೇಸಾಯಿಯನ್ನು ದಾರಿಯಲ್ಲೇ ತಡೆದು ನಿಲ್ಲಿಸಿದರು. ದೇಸಾಯಿ ತನ್ನ ಗೀತಯಜ್ಞವನ್ನು ಸಾವಿರದ ಎಂಟು ಸಲ ಭಗವದ್ಗೀತೆ ಬರೆದುದನ್ನೂ ಹೆಮ್ಮೆಯಿಂದ ಹೇಳಿಕೊಂಡು ಗುರುಗಳಿಗೆ ಅದನ್ನು ಅರ್ಪಿಸಬೇಕು ಎಂದು ನಿವೇದಿಸಿಕೊಂಡ. ಶಿಷ್ಯರು ಅದರಿಂದೇನೂ ಪ್ರಭಾವಿತರಾದಂತೆ ಕಾಣಲಿಲ್ಲ. ಗುರುಗಳು ದ್ವಾದಶಿ ನೈವೇದ್ಯ ಸ್ವೀಕಾರ ಮಾಡಿದ ನಂತರವೇ ದರ್ಶನ ನೀಡುತ್ತಾರೆಂದು ಹೇಳಿ, ದೇಸಾಯಿಯನ್ನು ಅಲ್ಲೇ ಕಾಯುತ್ತಿರುವಂತೆ ಸೂಚಿಸಿದರು.

ದೇಸಾಯಿ ಮಧ್ಯಾಹ್ನದ ತನಕ ಕಾದರೂ ಗುರುಗಳ ದರ್ಶನಭಾಗ್ಯ ಸಿಗಲಿಲ್ಲ. ಶಿಷ್ಯಂದಿರು ಗಲಾಟೆ ಮಾಡಬಾರದು, ಕಾಯಬೇಕು, ಗುರುಗಳು ವಿಶ್ರಾಂತಿಯಲ್ಲಿದ್ದಾರೆ ಎಂದೆಲ್ಲ ಹೇಳಿ ಹೇಳಿ ಹೋಗುತ್ತಿದ್ದರು. ಹಾಗೇ ಕೂತು ಕೂತು ದೇಸಾಯಿಗೆ ಒಂಥರ ಮಂಪರು ಬಂದಂತಾಯಿತು. ಅಲ್ಲೇ ಸತ್ತು ಹೋಗುತ್ತೇನೇನೋ ಎಂದು ಭಯವಾಯಿತು. ಆದರೂ ಗುರುಗಳ ದರ್ಶನವಾಗದೇ ಹೊರಡುವುದಿಲ್ಲ ಎಂಬ ಹಠದಲ್ಲಿ ದೇಸಾಯಿ ಕಾಯುತ್ತ ಕೂತ. ತಲೆಯೊಳಗೆ ಕುರುಕ್ಷೇತ್ರ ನಡೆಯುತ್ತಿತ್ತು. ಎರಡೂ ಸೇನೆಗಳ ನಡುವೆ ಅರ್ಜುನನ ರಥವನ್ನು ಕೃಷ್ಣ ತಂದು ನಿಲ್ಲಿಸಿಕೊಂಡಿದ್ದ. ಅತ್ತ ಕಡೆ ಸಾಗರದಂತೆ ಹಬ್ಬಿದ ಸೈನ್ಯ, ಇತ್ತಕಡೆ ಸಾಗರದಂತೆ ಹಬ್ಬಿದ ಸೇನೆ. ರಥ, ಆನೆ, ಕುದುರೆ, ಕಾಲಾಳು, ಕಿರೀಟ, ಗಡ್ಡದ ಮುದುಕ ಭೀಷ್ಮ, ಯಾರೋ ಶಂಖ ಊದಿದರು. ಸೇನೆ ಇದ್ದಕ್ಕಿದ್ದಂತೆ ನುಗ್ಗಿತು. ಯಾರೋ ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರೀ... ಎಂದು ಜೋರಾಗಿ ಅರಚಿಕೊಳ್ಳುತ್ತಿದ್ದರು.

***

ಸಂಜೆಯ ಹೊತ್ತಿಗೆ ಗುರುಗಳು ದೇಸಾಯಿಯನ್ನು ನೋಡಿದರು. ಸಾವಿರದ ಎಂಟು ಸಾರಿ ಭಗವದ್ಗೀತೆ ಬರೆದದ್ದನ್ನು ಕೊಂಡಾಡಿದರು. ದೇಸಾಯಿಯ ಹತ್ತಿರ ಅವೆಲ್ಲವನ್ನೂ ತೆಗೆದುಕೊಂಡು ಹೋಗಿ ನಮ್ಮ ಸಂಗ್ರಹದಲ್ಲಿಡಿ ಎಂದು ದೇಸಾಯಿಗೆ ಪ್ರಸಾದ ಕೊಟ್ಟರು. ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ ಎಂದು ಹರಸಿದರು.

ದೇಸಾಯಿ ಕಷ್ಟಪಟ್ಟು ಆ ಪುಸ್ತಕಗಳ ಗಂಟನ್ನು ಹೊತ್ತುಕೊಂಡು, ಶಿಷ್ಯ ತೋರಿಸಿದ ಉಗ್ರಾಣದ ಕಡೆಗೆ ಹೆಜ್ಜೆಹಾಕಿದ. ಶಿಷ್ಯ ಮುಂದೆ ಮುಂದೆ ನಡೆದುಕೊಂಡು ಹೋಗಿ ಒಂದು ಉಗ್ರಾಣದಂತಿದ್ದ ಕೋಣೆಯ ಮುಂದೆ ನಿಂತು ಬೀಗ ಕೈ ಗೊಂಚಲು ತೆಗೆದ. ಅದರಲ್ಲಿದ್ದ ಬೀಗದ ಕೈಗಳನ್ನು ಒಂದೊಂದಾಗಿ ಹಾಕಿ ಹದಿನೆಂಟನೇ ಪ್ರಯತ್ನಕ್ಕೆ ಬೀಗ ತೆರೆದುಕೊಂಡಿತು. 'ಅಲ್ಲಿ ಒಳಗಿಡಿ' ಎಂದು ಶಿಷ್ಯೋತ್ತಮ ದೇಸಾಯಿಗೆ ಜಾಗ ತೋರಿಸಿದ.

ದೇಸಾಯಿ ಬಾಗಿಲ ಎದುರು ನಿಂತು ಒಳಗೆ ಕಣ್ಣುಹಾಯಿಸಿದರು. ಒಳಗೆ ದೇಸಾಯಿ ಹೆಗಲ ಮೇಲಿದ್ದಂಥ ಬಟ್ಟೆಯ ನೂರಾರು ಕಟ್ಟುಗಳು ಅಸ್ತವ್ಯಸ್ತ ಬಿದ್ದಿದ್ದವು. ಅವುಗಳ ಮೇಲೆ ಅಷ್ಟೆತ್ತರ ಧೂಳು ಅಂಟಿಕೊಂಡಿತ್ತು. ಒಳಗಿನಿಂದ ಕಮಟು ವಾಸನೆ ಮೂಗಿಗೆ ಬಡಿಯುತ್ತಿತ್ತು. ದೇಸಾಯಿ ಒಳಗೆ ಕಾಲಿಡುತ್ತಿದ್ದ ಹಾಗೆ, ಬಾಗಿಲಿಗೆ ಅಡ್ಡಡ್ಡ ಕಟ್ಟಿಕೊಂಡಿದ್ದ ಜೇಡರಬಲೆ, ದೇಸಾಯಿಯ ಮುಖಕ್ಕೂ ಕಣ್ಣಿಗೂ ಅಂಟಿಕೊಂಡಿತು. ಅದನ್ನು ಬಿಡಿಸಿಕೊಳ್ಳುವ ಯತ್ನದಲ್ಲಿ ದೇಸಾಯಿಯ ಹೆಗಲ ಮೇಲಿದ್ದ ಗಂಟು ನೆಲಕ್ಕೆ ಬಿತ್ತು.

ಶಿಷ್ಯ ಅಲ್ಲೇ ಇರ್ಲಿ ಬಿಡಿ, ಒಳಗೆ ಧೂಳಿದೆ, ಬನ್ನಿ ಬನ್ನಿ ಎಂದು ಅವಸರಿಸಿದ. ದೇಸಾಯಿಗೆ ಆ ಕೋಣೆ ಆ ಕ್ಷಣ ಕೊನೇ ದಿನದ ಕುರುಕ್ಷೇತ್ರದ ಹಾಗೆ ಕಂಡಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X