ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪ ತೋರಿದೆಡೆಗೆ...

By Prasad
|
Google Oneindia Kannada News

Naveen Bhat - First prize winner
ಅಕ್ಕ ಸಮ್ಮೇಳನದ ಸಣ್ಣಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ನವೀನ್ ಭಟ್ ರಚಿತ ಕಥೆ 'ದೀಪ ತೋರಿದೆಡೆಗೆ'. ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕಥಾಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ತೀರ್ಪುಗಾರರ ಮೆಚ್ಚುಗೆ ಗಳಿಸಿದ ಶೃಂಗೇರಿಯ ನವೀನ್ ಭಟ್ ಅವರ ನೀಳ್ಗಥೆಯನ್ನು ನಾಲ್ಕು ಭಾಗಗಳಲ್ಲಿ ಪ್ರಕಟಿಸಲಾಗುತ್ತಿದೆ.

* ನವೀನ ಭಟ್ 'ಗಂಗೋತ್ರಿ', ಶೃಂಗೇರಿ

ಆರತಿ ತಟ್ಟೆಯಲ್ಲಿ ಗಡಿಬಿಡಿಯೇ ಇಲ್ಲದೆ ಉರಿಯುತ್ತಿರುವ ಕರ್ಪೂರದ ಜ್ವಾಲೆಯ ಮೇಲೆ ಆ ಅವನು ಭಕ್ತಿಯಿಂದ ಕೈ ತೋರಿಸುತ್ತಿರುವಾಗ, ಮಿನುಗುವ ಒಟ್ಟೂ ಆರು ಉಂಗುರಗಳು ಕೇದಾರನ ಬದುಕಿನ ಯಾವ ಮಹಾ ವಿಷಾದವನ್ನು ತಮ್ಮೊಳಗೆ ಬಿಂಬಿಸಿ ತೋರಿಸುತ್ತಿವೆಯೋ... ಅದು ಕೇದಾರನಿಗೊಬ್ಬನಿಗೇ ಗೊತ್ತು. ಆ ಅವನು ಆರತಿಗೆ ಅಂಗೈ ತೋರಿಸಿ ಬೆರಳುಗಳನ್ನು ಕಣ್ಣಿಗೊತ್ತಿಕೊಂಡ. ಅವನ ಬೆನ್ನಿಗಂಟಿಕೊಂಡಂತೆ ನಿಂತಿದ್ದ ಆ ಅವಳು ಕೂಡ ತನ್ನ ನೀಳ ಬೆರಳುಗಳನ್ನು ಕಣ್ಣಿಗೊತ್ತಿಕೊಂಡಳು. ಕುತ್ತಿಗೆಯನ್ನು ಕೊಂಚವೇ ಬಾಗಿಸಿ, ಗರ್ಭಗುಡಿಯಲ್ಲಿದ್ದ ದೇವರಿಗೆ ಆಕೆ ಕೈ ಮುಗಿದು, ಕಣ್ಮುಚ್ಚಿ ನಿಂತಾಗ, ನೆತ್ತಿಯಿಂದ ಕಿವಿಗಳ ಮೇಲೆ ನಿರಾಯಾಸ ಬಿದ್ದುಕೊಂಡ ರೇಷ್ಮೆ ಕೂದಲುಗಳ ಮಧ್ಯೆಯಿಂದ ಕಿವಿಗೆ ಧರಿಸಿದ್ದ ಚಿನ್ನದೋಲೆ ಮಿರುಗಿ ಕಿರುನಕ್ಕಂತೆ ಕಂಡಾಗ ಕೇದಾರನಲ್ಲಿ ಯಾಕೋ ಎಂದೂ ಇಲ್ಲದ ಮೃದಂಗನಾದ. ಇಲ್ಲ, ಬಹುಶಃ ಈ ಚಿನ್ನದೋಲೆಗಳಿಗಿಂತ ಅವರಿಬ್ಬರೂ ಒಟ್ಟೊಟ್ಟಿಗೆ ಕೂತು ಬಂದಿಳಿದ ಆ ಬಿಳಿಯ Swift ಕಾರು ಬೆಲೆ ಬಾಳಬಹುದು. ಆ ಕಾರಿನ ನುಣುಪು ಅಂಗಾಂಗಗಳು ತಮ್ಮಲ್ಲಿ ಈ ಹಳ್ಳಿಯ ಕಚ್ಚಾ ಚಿತ್ರಗಳು ಪ್ರತಿಬಿಂಬಿತವಾಗುವುದನ್ನೂ ಸಹಿಸುವುದಿಲ್ಲವೇನೋ ಎಂಬಷ್ಟು ಶುಭ್ರವಾಗಿತ್ತು ಅದು! ಊಹೂಂ, ಈ ಚಿನ್ನದೋಲೆಗಳಾಗಲೀ, ಉಂಗುರಗಳಾಗಲೀ ಬೆಳ್ಳಗೆ ನಿಂತ ಕಾರಾಗಲೀ, ಕೇದಾರನಿಗೊಂದು ವಿಷಯವೇ ಅಲ್ಲ. ಅಷ್ಟಕ್ಕೂ ಅವನ ದೇವಾಲಯದ ಅಂಗಳಕ್ಕೆ ತಿಂಗಳಿಗೆ ಎರಡು ಮೂರು ಬಾರಿಯಾದರೂ ಇಂಥ ಕಾರುಗಳು ಬಂದು ಹೋಗುತ್ತಿರುತ್ತವೆ. ತೀರ ಮುಂಚಿನ ದಿನಗಳಲ್ಲಿ ಅಂಥ ಕಾರುಗಳು ಬಂದು ಮರಳಿ ಹೋದಮೇಲೂ ಒಂದಷ್ಟು ಹೊತ್ತು ಉಳಿದಿರುತ್ತಿದ್ದ ಸುಟ್ಟ ಪೆಟ್ರೋಲಿನ ನವಿರುಘಮವನ್ನು ಆಸ್ವಾದಿಸಲಿಕ್ಕೆ ದೇವಾಲಯದ ಹೆಬ್ಬಾಗಿಲು ದಾಟಿ ಆತ ಹೊರಬರುವುದಿತ್ತು. ಆದರೆ, ಇತ್ತೀಚೆಗೆ... ಯಾಕೋ, ಈ LPG ಉಪಯೋಗಿಸಲು ಶುರುವಾದಾಗಿನಿಂದ ಪೆಟ್ರೋಲಿನ ಘಮ ಉಳಿದಿಲ್ಲ; ಅಥವಾ ಅಷ್ಟರಮಟ್ಟಿಗೆಕೇದಾರನೂ ಬೆಳೆದಿದ್ದಾನೆ ಎಂದರೆ ಸರಿಯಾದೀತು.

2
ಆ ಅವನು ಮತ್ತು ಕೇದಾರ ಇಬ್ಬರೂ ಬೆಳೆದಿದ್ದು ಒಟ್ಟಿಗೇನೇ. ಆದರೆ ಊರಿನ ಜನಗಳೆಲ್ಲ ಹೇಳುವುದು ಗಿರಿ ಹೇಗೆ ಬೆಳೆದ ನೋಡು! ಎಂದೇ ಹೊರತು, ಅವನಿಗಿಂತ ಎರಡು ವರ್ಷಕ್ಕೆ ಹಿರಿಯವನಾದ ಈ ಕೇದಾರ ಬೆಳೆದನೆಂದಲ್ಲ. ಯಾಕೆಂದರೆ ಕೇದಾರ ಎಸ್ಸೆಸ್ಸೆಲ್ಸಿಯ ನಂತರ ಗಿರಿಯಂತೆ ಪಟ್ಟಣದ ಹೈಬ್ರೀಡು ಗಾಳಿಯನ್ನು ಉಸಿರಾಡಲಿಲ್ಲ; ಮಾತ್ರವಲ್ಲ, ನಿಂಬೆಹಣ್ಣು ಕುಯ್ಯಬಹುದಾದಷ್ಟು ಹರಿತದ ಇಸ್ತ್ರಿಯಿರುವ ಬಟ್ಟೆ ಹಾಕಿಕೊಂಡು ಓಡಾಡುವುದು ಇಂದಿಗೂ ಅವನಿಗೆ ಗೊತ್ತಿಲ್ಲ. ಮನೆಯಿಂದ ದೇವಸ್ಥಾನಕ್ಕೆ ಹೋಗುವ ಹಾದಿಯ ಮಧ್ಯೆ ಅವನ ಎಣ್ಣೆಗಪ್ಪು ಮೈಯನ್ನೂ ಎದೆಯ ರೋಮಗಳನ್ನೂ ಅರ್ಧಂಬರ್ಧ ಮುಚ್ಚುತ್ತಿದ್ದುದು ಹಳೆಯದೊಂದು ಶಾಲು ಮಾತ್ರ. ಇವತ್ತಿಗಾದರೂ ಅಷ್ಟೆ, ಕೇದಾರ ತಾನು ಬೆಳೆದೆನೆಂದರೂ ಎಷ್ಟು ಬೆಳೆದ ಮಹಾ? ಗಿರಿ, ನೆರಿಗೆ ಮುರಿಯದ ಪ್ಯಾಂಟಿನೊಳಗೆ ತೂರಿಕೊಳ್ಳಲು ಕಲಿತಾಗ, ಇವ ತೊಡೆ ಕಾಣಿಸುವ ಪಂಚೆ ಉಡಲು ಕಲಿತಿದ್ದ, ಅಷ್ಟೆ. ಅಂಗಿಯ ಚುಂಗಿನಲ್ಲಿ ಮೂಗೊರಿಸಿಕೊಳ್ಳುತ್ತಿದ್ದ ಗಿರಿ ಕರ್ಚೀಫು ಬಳಸಲು ಶುರುಮಾಡಿದಾಗಿನ್ನೂ, ಕೇದಾರ ಎಡಗೈಯನ್ನು ಮೂಗಿನ ತುದಿಯುದ್ದಕ್ಕೂ ಎಳೆದು ಕೊಂಡು ಮೂಗು ಕೆಂಪಾಗಿಸಿಕೊಳ್ಳುತ್ತಿದ್ದ; ಅದಕ್ಕಿಂತ ಮುಂದೆ ಬೆಳೆಯುವದನ್ನು ಮರೆತ ಮರದಂತೆ ಉಳಿದುಬಿಟ್ಟ ಅವನು. ಅಥವಾ ಮುಜರಾಯಿ ಇಲಾಖೆಯ ದೇವಸ್ಥಾನದ ಪೂಜಾರಿ ಕೆಲಸವೇ ಅವನನ್ನು ಆ ಪರಿ ಮರಗಟ್ಟಿಸಿತು.

ಹಾಗೊಂದು ಇಪ್ಪತ್ತೆರಡು ವರ್ಷಗಳಾಗುವ ಹೊತ್ತಿಗೆ ಕೇದಾರನಲ್ಲಿ ಎದ್ದು ತೋರುತ್ತಿದ್ದ ಒಡ್ಡತನವನ್ನು ಕಂಡವರ್‍ಯಾರೋ; ದೇವಸ್ಥಾನದ ಮೆಟ್ಟಿಲಿಳಿದು ಹೋಗುವ ಹೊತ್ತಿಗೆ ಹೇಳಿ ಹೋಗಿದ್ದರು, ಕೇದಾರ, ನೀನಿನ್ನೂ ಬೆಳೆಯಬೇಕು. ಆಗೆಲ್ಲ ಅವನಿಗರ್ಥವಾದದ್ದು ಬೆಳೆಯುವುದೆಂದರೆ ತೊಲೆಯಂಥ ತೋಳುಗಳು ಮತ್ತು ಮರದ ದಿಮ್ಮಿಯಷ್ಟೇ ಬಲಿಷ್ಠ ತೊಡೆಗಳನ್ನು ಪಡೆಯುವುದು ಎಂದು. ಅಂದಿನಿಂದ ಕೇದಾರ ಚಪ್ಪಲಿ ಹಾಕುವುದು ಬಿಟ್ಟು ಬರಿಗಾಲಲ್ಲಿ ತಿರುಗಿದ. ಅಂಗಾಲು ಟಾರುರಸ್ತೆಯಷ್ಟು ಒರಟಾಯಿತು. ದೇವಸ್ಥಾನದಿಂದ ಮನೆಗೆ ಓಡಾಡುವ ಹಾದಿಯ ಮಧ್ಯೆ ಕೇದಾರ ನಡೆದರೆ ಚಿಕ್ಕಪುಟ್ಟ ಕಲ್ಲುಗಳೂ ನಲುಗುತ್ತಿದ್ದವು. ತಗ್ಗಿನ ಬಾವಿಯಿಂದ ನೀರು ಹೊರುವ ತಾಮ್ರದ ಕೊಡ ಕೂತು ಕೂತು, ಹೆಗಲು ಆಮೆಚಿಪ್ಪಿನಷ್ಟೇ ಒರಟಾಯ್ತು. ದೇವಸ್ಥಾನದ ನಂದಾದೀಪದ ಕುಡಿಯ ಕಪ್ಪು ತೆಗೆದು ತೆಗೆದು, ಕರ್ಪೂರದ ಉರಿ ತಾಗಿ ತಾಗಿ, ಕೈ ಬೆರಳುಗಳು ಹೆಗಡೇರ ಮನೆಯ ಗರಗಸ ಚೂಪುಗೊಳಿಸುವ ಅರದಷ್ಟೇ ಒರಟಾದವು. ಮೀಸೆ ಹಸಿರೊಡೆದು, ಕಪ್ಪಾಗಿ, ಅಷ್ಟಷ್ಟೇ ಬ್ಲೇಡು ಬಳಸಲು ಶುರು ಮಾಡಿದಾಗಂತೂ ಕೇದಾರ ಅಂದುಕೊಂಡೇ ಅಂದುಕೊಂಡ ತಾನು ಬೆಳೆದೆ ಎಂದು! ಅದಕ್ಕಿಂತ ಮುಂದೆ ಮತ್ತೆಂದೂ ಕೇದಾರ ಯಾವ ಬಗೆಯಲ್ಲೂ ಬೆಳೆಯಲು ಹೋಗಲಿಲ್ಲ. ಇದ್ದಲ್ಲೇ ಮಡುಗಟ್ಟಿದ; ಮರಗಟ್ಟಿದ. ಗುಡ್ಡದ ತುದಿಯ ದೇವಾಲಯದಿಂದ ದಿಗಂತದೆಡೆಗೆ ಚಾಚಿ ನಿಂತ ಹಸಿರು ಕಾಡನ್ನೂ, ಆ ಶೈಲಗಳನ್ನೂ ಒಮ್ಮೊಮ್ಮೆ ತಿಂಗಳ ಬೆಳಕಿನ ಇರುಳಲ್ಲಿ ಸುರಿದ ಮಂಜನ್ನೂ, ಅಬ್ಬರದ ಬಿಸಿಲನ್ನೂ, ಕವಿದು ಬೀಳೋ ಮಳೆಯನ್ನೂ ತನ್ಮಯತೆಯಿಂದ ದಿನಾ ನೋಡುವ ಇನ್ನೊಂದು ಜೀವ ಇಲ್ಲ, ಕೇದಾರನನ್ನು ಬಿಟ್ಟು. ಕೇದಾರನ ಪಾಲಿಗೆ ಆ ದೃಶ್ಯಗಳೆಂದರೆ ಎಸ್ಸೆಸ್ಸೆಲ್ಸಿಯವರೆಗೆ ಓದಿಕೊಂಡಿದ್ದ, ಅಷ್ಟಷ್ಟು ಕನ್ನಡ ಪದ್ಯಗಳನ್ನೂ, ಕವಿತೆಗಳನ್ನೂ ಮೈ ತುಂಬ ಸಾಕಾರವಾಗಿಸಿಕೊಂಡಿದ್ದ ದೃಶ್ಯಕಾವ್ಯಗಳು. ಒರಟೊರಟಿನ ಅವನ ಒಳಗುಗಳಲ್ಲಿ ಅತಿ ವಿರಳವಾಗಿ ಸೆಲೆಯೊಡೆಯುವ ಮೃದುತನದ ಪರಿಚಯವಿರುವ ಒಂದೇ ಒಂದು ಅಸ್ತಿತ್ವವೆಂದರೆ ಈ ದೇವಾಲಯವೆತ್ತರದ ದೃಶ್ಯವೈಭವ ಮಾತ್ರ. ಅದವನ ಖಾಸಗಿ ಕ್ಷಣದ ಜೀವಂತ ಒಡನಾಡಿ. ಕೇದಾರ ಇನ್ನೊಂಚೂರೇ ಚೂರು classic ಅನ್ನಿಸಿಕೊಂಡಿದ್ದರೂ ಸಾಕಿತ್ತು. ಮೃದುಮೃದುಲ ಕಾವ್ಯ ಅವನೊಂದಿಗಿರುತ್ತಿತ್ತು. ಆದರೆ, ಅವನ ಒರಟುತನಗಳು ಅವನ ಏಕಾಂತ ಕ್ಷಣಗಳಲ್ಲೂ ಬಿಡುವಂತಿರಲಿಲ್ಲ. ಹಾಗಾಗಿ ಹಸಿರು ವನರಾಶಿಯ ಚಿತ್ರದ ಜೀವಂತಿಕೆ. ಅವನ ಎದೆಯ ಕದ ತಟ್ಟಿದಾಗೆಲ್ಲ ತೆರೆದುಕೊಂಡಿದ್ದು ಕಾವ್ಯವಲ್ಲ; ಬದಲಿಗೆ ಒಂಟಿ ಬಂಗಲೆಯ ನಡುರಾತ್ರಿಯಲ್ಲಿ ಹಲ್ಲಿ ಲೊಚಗುಟ್ಟಿದಂಥ ಅಸ್ಪಷ್ಟ ಕನಲು.

* * *
ಕಾರ್ತೀಕದ ತುಳಸಿಹುಣ್ಣಿಮೆ ಮುಗಿಯುವುದಕ್ಕೇ ಕಾಯುತ್ತಿದ್ದರೇನೋ ಎಂಬಂತೆ, ಕಾರ್ತೀಕದ ಹಣತೆ ಆರಿದ ಬೆನ್ನಿಗೇ, ಲಗ್ನಪತ್ರಿಕೆ ಹಿಡಿದುಕೊಂಡು ಮಗನದ್ದೋ ಮಗಳದ್ದೋ ಮದುವೆ ಎಂದು ಕರೆಯಲು ಬರುವ ಜನಗಳ ಮುಖದಲ್ಲಿ ತನ್ನ ಕಣ್ಣಿಗೆ ಕಾಣುತ್ತಿದ್ದ ಕೊಂಚ ಕುಹಕವನ್ನು ಎಷ್ಟೇ ಕಷ್ಟಪಟ್ಟರೂ ಕಾಣದೇ ಇರಲೇ ಆಗುತ್ತಿರಲಿಲ್ಲ ಅವನಿಗೆ. ಜಾನಕಮ್ಮ ಸಂಜೆಯ ಹೊತ್ತಿನಲ್ಲಿ ಮನೆಯಂಗಳದ ಕಟ್ಟೆಬದಿಯ ಮಲ್ಲಿಗೆ ಮೊಗ್ಗು ಕೊಯ್ಯುತ್ತಾ, ಕಟ್ಟೆಯ ಆ ಕಡೆ ನಿಂತಿರುತ್ತಿದ್ದ ಪಕ್ಕದ ಮನೆಯ ವಸುಧಮ್ಮನ ಜೊತೆ ಹರಟುತ್ತಿದ್ದ ಬಹುಪಾಲು ಸುದ್ದಿಯೆಲ್ಲ ಕೇದಾರನ ವಯಸ್ಸು, ಮತ್ತು ಅವನಿಗೊಂದು ಮದುವೆ ಮಾಡಬೇಕೆಂದು ಬಹುಕಾಲದ ಬೇಗುದಿಯ ಸುತ್ತವೇ ಇರುತ್ತಿದ್ದವು. ಹಾಗೆ ಮಗನಿಗೊಂದು ಹೆಣ್ಣು ಸಿಕ್ಕು ಮದುವೆಯಾದರೆ, ಜಾನಕಮ್ಮನಿಗೆ ಬರೀ ಹಣತೆಗಳನ್ನು ಕೊಳ್ಳುವುದಕ್ಕೆ ಸಾವಿರ ರೂಪಾಯಿ ಬೇಕಾಗಬಹುದು ಆ ಪರಿಯ ಹರಕೆ ಹೊತಿದ್ದಾರೆ ಆಕೆ. ಕೇದಾರನ ಇಪ್ಪತ್ತಾರನೇ ವಯಸ್ಸಿನಿಂದ ಮದುವೆಯ ಪ್ರಯತ್ನಗಳು ಶುರುವಾಗಿದ್ದರೂ, ಇಪ್ಪತ್ತೆಂಟಕ್ಕಾದರೂ ಹೆಣ್ಣು ಸಿಗದೇ ಹೋದಾಳಾ ಎಂಬ ಉಡಾಫೆಭರಿತ ವಿಶ್ವಾಸದಲ್ಲಿಯೇ ನೆಮ್ಮದಿಯಾಗಿದ್ದರು ಜಾನಕಮ್ಮ. ಆದರೆ ... ಮೂವತ್ತಕ್ಕೂ ಮದುವೆ ಕನಸಾಗಿಯೇ ಉಳಿದಾಗ ನಿಜಕ್ಕೂ ಭಯಪಟ್ಟರು. ನೆನಪಾದ ದೇವರುಗಳಿಗೆಲ್ಲ ಹರಕೆ ಹೊತ್ತರೂ ಈ ಮೂವತ್ತೆರಡನೆಯ ವಯಸ್ಸಿಗೂ ಮಗ ಕೇದಾರನಿಗೆ ಹೆಣ್ಣು ಸಿಗಲಿಲ್ಲ. ಖರೆ ಅಂದರೆ ಜಾನಕಮ್ಮ ಇಷ್ಟು ವಯಸ್ಸಾದವರಂತೆ ಕಾಣುತ್ತಿರುವುದೇ ಈ ನಾಲ್ಕು ವರ್ಷಗಳಿಂದೀಚೆಗೆ. ಹಾಗಾಗಿಯೇ ಯಾವುದರಲ್ಲಿಯೂ ಆಸಕ್ತಿ ಉಳಿದಿಲ್ಲ. ಮನೆಯಲ್ಲಿರುವುದು ಮೂವರೇ ಆದರೂ, ಅಡುಗೆ ಮಾಡಲೂ ಬೇಜಾರು. ಲಗ್ನಪತ್ರಿಕೆ ಹಿಡಕೊಂಡು ಮದುವೆಗೆ ಕರೆಯಲು ಬರುವವರ ಮೇಲೆ ತನಗೇ ಅರ್ಥವಾಗದಂಥ ಸಿಟ್ಟು. ಒಂದು ಕಾಲದಲ್ಲಿ ಆತಿಥ್ಯಕ್ಕೆ ಹೆಸರಾಗಿದ್ದ ಜಾನಕಮ್ಮ ಇವತ್ತು, ಮದುವೆಗೆ ಕರೆಯಲು ಬರುವ ಜನಗಳೆದುರಿಗೆ ಅರೆಮನಸಿ ನಿಂದಲೇ ಕಾಫಿಯನ್ನೋ, ಟೀಯನ್ನೋ ಕೊಡುವಾಗ ಅಯಾಚಿತವಾಗಿ ಲೋಟವನ್ನು ಕುಕ್ಕುತ್ತಾರೆ. ಕೆಲವೊಮ್ಮೆ ಲೋಟದೊಳಗಿನ ಬಿಸಿಯ ಚಹ ತುಳುಕಿ ಬೆರಳಿಗೆ ಬಿಸಿ ತಟ್ಟಿದಾಗಲೇ, ಇಟ್ಟಿದ್ದು ಕುಕ್ಕಿದಂತಾಯ್ತೆಂಬ ಎಚ್ಚರ, ತನ್ನೊಳಗಿನ ಅಸಹನೆ ಇಂಥಾದ್ದು ... ಎಂಬ ವಿಷಾದ. ಹೊಸ ಸೀರೆ ಬೇಕೆಂದು ಪತಿಯೆದುರು ಬೇಡಿಕೆಯನ್ನೇ ಇಡದೆ ಎರಡು ವರ್ಷವಾಯಿತು. ಯಾಕೋ ಹೊಸತುಗಳು ಆಕರ್ಷಕವೆನಿಸುತ್ತಿಲ್ಲ.

<strong>ದೀಪ ತೋರಿದೆಡೆಗೆ... (ಭಾಗ 2)</strong>ದೀಪ ತೋರಿದೆಡೆಗೆ... (ಭಾಗ 2)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X