ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪ ತೋರಿದೆಡೆಗೆ... (ಭಾಗ 4)

By * ನವೀನ ಭಟ್ 'ಗಂಗೋತ್ರಿ', ಶೃಂಗೇರಿ
|
Google Oneindia Kannada News

Naveen Bhat - First prize winner
(ಕಥೆ ಮುಂದುವರಿದಿದೆ...)

ಹಳೆಯ ದಿನಗಳಲ್ಲಿ ಇಬ್ಬರೂ ಜೀಕಿ ಬಿಟ್ಟ ಜೋಕಾಲಿ, ಹಾಗೇ ನಿಧಾನಕ್ಕೆ ತೂಗಿತೂಗಿ ನಿತ್ರಾಣವಾಗಿ, ಈಗ ನಿಂತುಬಿಟ್ಟಿತ್ತು. ಒಂದಷ್ಟು ಕಾಲ ಗಿರಿ ಊರಿಗೆ ಬಂದು ದೇವಸ್ಥಾನಕ್ಕೆ ಬಂದಾಗ ದೇವರನ್ನೂ, ಕೇದಾರನನ್ನೂ ಮಾತಾಡಿಸಿಕೊಂಡು ಹೋಗುತ್ತಿದ್ದನಾದರೂ ಬರಬರುತ್ತಾ ಅವೆಲ್ಲ ಮುಗುಳುನಗೆಗೆ ಸೀಮಿತವಾದದ್ದೂ ನಿಜವೇ. ಕಳೆದೊಂದು ವರ್ಷದ ಈಚೆಯಿಂದಂತೂ ಗಿರಿ, ಬಟ್ಟೆಗಳಿಗೆ ಮಾತ್ರವಲ್ಲ, ಮುಖಕ್ಕೂ ಇಸ್ತ್ರಿ ಹಾಕಿಕೊಂಡಿದ್ದನೋ ಎಂಬುವವನಂತೆ ನಗೆಯನ್ನೇ ಅರಳಿಸುತ್ತಿರಲಿಲ್ಲ. ಕೇದಾರನಾದರೂ, ಇನ್ನೇನು... ಆತ ಸೌಜನ್ಯದ ವರ್ತನೆ ತೋರದಿದ್ದರೆ ಅದು ಗಿರಿಯ ಬಳಿ ಮಾತ್ರವೇ. ಅವನು ದೂರವೇ ನಿಂತಂದಿನಿಂದ ಕೇದಾರನಿಗೆ ತುಟಿಯರಳಿಸುವ ಪ್ರಮೇಯವೇ ಬರಲಿಲ್ಲ. ಇವತ್ತಿಗಾದರೂ ವಸ್ತುತಃ ಮದುವೆಯೆಂಬುದು ಕೇದಾರನ ಮನಸಿನ ಬಯಕೆಯೇನೂ ಅಲ್ಲ; ಸುತ್ತಲಿನವರ ಒತ್ತಾಯಕ್ಕೆ, ಹೇರಿಕೆಗೆ ಅವ ಹೊತ್ತುಕೊಂಡಿರುವ ಹೊರೆ ಅದು. ಬಹುಶಃ ಅವನು ತನ್ನ ಗುನುಗುಗಳೊಂದಿಗೆ ಜೆಡ್ಡುಗಟ್ಟಿದ ನಿಶ್ಶಬ್ದದೊಂದಿಗೆ ಏಕಾಂಗಿಯಾಗಿಯೇ ಇದ್ದುಬಿಡಬಲ್ಲ. ಸಂಚಲನೆ ಅವನ ಶೈಲಿಯಲ್ಲ. ಬದುಕೆಂಬುದನ್ನು ಹಂಚಿಕೊಂಡು ಬದುಕೋಣ ಬಾ ಎಂದು ಸಂಗಾತಿಯನ್ನು ಕರೆಯುವುದಕ್ಕೆ ಅವನಲ್ಲಿ ಅಂಥ ಪರಿಯ ಯಾವ ಭಾವನೆಯೂ ಇಲ್ಲ. ಅಪ್ರೌಢ ವಯಸ್ಸಿನಲ್ಲೇ ಆಗಿದ್ದಿದ್ದರೂ ಆತ ಈವರೆಗೆ ಮನಸೆಂಬುದನ್ನು ತೆರೆಯುವ ಪ್ರಯತ್ನ ಮಾಡಿದ್ದಿದ್ದರೆ ಅದು ಗಿರಿಯ ಹತ್ತಿರ ಮಾತ್ರವೇ. ಇವತ್ತಿಗೆ ಗಿರಿಯ ಬದುಕು ಹರಿಯುತ್ತಿರುವ ಮಾರ್ಗವೇ ಬೇರೆ, ಕೇದಾರನದೇ ಬೇರೆ, ಕೇದಾರನೆಂದರೆ ಅಕಸ್ಮಾತ್ ಅರ್ಧಕ್ಕೆ ನಿಂತ ಮಧುರ ಗಾಯನದಂಥವನು; ಅರೆನಿದ್ರೆಯಲ್ಲೇ ಎಚ್ಚರವಾದ ಪುಟ್ಟ ಮಕ್ಕಳ ಅಸಹನೆಯಂಥವನು. ಅವನ ವಿಕ್ಷಿಪ್ತ ಶೃತಿಯನ್ನು ತಿಳಿದು ಮರುನುಡಿಸುವ ಮಾಯಾವಿ ಬರುವವರೆಗೂ ಆತ ಬದಲಾಗಲಾರ.

3
ಅವನಿಗೆಂದೂ ಇಂಥ ಭಾವಗಳು ಎದೆ ತುಂಬ ಹಾದುಹೋದದ್ದಿಲ್ಲ. ಇವತ್ತೇ ಇದೇ ಕ್ಷಣವೇ ಮೊದಲು; ಅಷ್ಟು ನವಿರುತನವೊಂದು ರೇಷ್ಮೆಯ ನುಣುಪಿನಂತೆ ತನ್ನ ಮನಸನ್ನು ಎಷ್ಟು ಅಪ್ತವಾಗಿ ನೇವರಿಸುತ್ತಿದೆ ಎಂದೆನಿಸಿತು. ಕೇದಾರ ಹಿಂದೆಂದೂ ಅರಿಯದಿದ್ದ ವಿಚಿತ್ರ ಮೃದು ಕಂಪನಕ್ಕೆ ಅಚ್ಚರಿಗೊಂಡ. ದೇವಾಲಯದ ಗರ್ಭಗೃಹದ ಬಾಗಿಲ ಮುಂದೆ ನಿಂತು, ಆರತಿಗೆ ಕೈ ನೀಡಿ ಕಣ್ಣಿಗೊತ್ತಿಕೊಂಡು, ದೇವರಿಗೆ ಕೈ ಮುಗಿಯುತ್ತಾ ತುಸುವೇ ಕತ್ತು ಬಾಗಿಸಿದ ಅವಳು. ಅವಿರತವಾಗಿ ನೆತ್ತಿಯಿಂದಿಳಿದುಬಿದ್ದ ಕಪ್ಪು ನೀಳ ಕೇಶರಾಶಿ, ಕೈ ಮುಗಿಯಲೆಂದು ಜೋಡಿಸಿದ ಬೆಣ್ಣೆಯಷ್ಟೇ ಮುದ್ದು ಬೆರಳುಗಳು, ಮೈ ತುಂಬ ಉಟ್ಟ ಸೀರೆ, ಕಾರಣವಿರದೆ ನಾಚಿಕೊಂಡಂತಿದ್ದ ಕಂಗಳು... ಪುಟ್ಟ ಹಣತೆಯೊಂದು ಹುಬ್ಬುಗಳ ಮಧ್ಯೆ ಬೆಳಗುತ್ತಿರುವಂಥ ತಿಲಕ, ಎಳೆಶಿಶುವೊಂದನ್ನು ಈಗಷ್ಟೇ ಮಲಗಿಸಿ ಎದ್ದುಬಂದು ಹೀಗಿಲ್ಲಿ ಕೈ ಮುಗಿಯುತ್ತಿರುವಳೇನೋ ಎಂಬಂಥ ಅವಳ ನಿಲುವು...

ಕೇದಾರನಾಳದಲ್ಲಿ ಕಾವ್ಯವೇನೂ ಹುಟ್ಟಲಿಲ್ಲ. ಆದರೆ ಅವನೆಂದೂ ತೆರೆದು ನೋಡಿರದ ಮನಸಿನ ಅಜ್ಞಾತ ಕದಗಳನ್ನು ಯಾರೋ ತಟ್ಟುತ್ತಿರುವ ಅನುಭವ. ಪ್ರಜ್ಞೆ ಮೂಡಿದಂದಿನಿಂದ ಇಂದಿನವರೆಗೂ ಸುಳಿಯದೊಂದು ಮೃದುಲತೆ ಅವನಲ್ಲಿ ಸುಳಿದುಹೋಯ್ತು. ಬದುಕಿನ ಉಳಿದಾವ ಭಾಗವೂ ಅವನಿಗೆ ಈ ಕ್ಷಣಕ್ಕೆ ವಿಷಯವಾಗಲಿಲ್ಲ. ಇದುವರೆಗೆ ಬದುಕಿಗಿಳಿದಿರದಿದ್ದ ಮೃದುಲತೆಯನ್ನು ಈ ಕ್ಷಣ, ಒಂದು ಹನಿಯನ್ನೂ ಬಿಡದಂತೆ ತನ್ನೊಳಗೆ ಬಿಟ್ಟುಕೊಳ್ಳುವ ಧ್ಯಾನದಂಥ ಮನಸು. ಆಕೆ ತಿರುಗಿ ಹೋಗುವಾಗ ತುಟಿಯಂಚಿನಲ್ಲಿ ಕಿರುನಕ್ಕಳಾ ಕೇದಾರನೆಡೆಗೆ? ನಿಶ್ಚಿತವಿಲ್ಲ. ಆದರೆ ಇದೇ ಇದೇ ಮೊದಲ ಬಾರಿಗೆ ಕೇದಾರನೆದೆಯಲ್ಲಿ ಅರಳಿದೊಂದು ಜೀವಂತ ನಗೆ, ಅವನ ತುಟಿಗಳ ಮೇಲೆ ಸುಳಿದದ್ದು ಮಾತ್ರ, ಸತ್ಯ. ನಿಜವೆಂದರೆ ಸ್ತ್ರೀತ್ವವೆಂಬ ಮಾರ್ದವತೆಯನ್ನು ಅವನೆಂದಿಗೂ ಮನಸಾ ನೋಡಿರಲೇ ಇಲ್ಲ. ಇವತ್ತಿದು ಅವನೊಳಗಿನ ಹೊಸ ಯುಗ, ಹೊಸ ಪರ್ವ! ಒಡ್ಡುತನದ ಜಿಡ್ಡನ್ನೆಲ್ಲ ಒಡೆದು ಒಮ್ಮಿಂದೊಮ್ಮೆಲೇ ಹೂಬನಕ್ಕೆ ಜಿಗಿದಂಥ ಆನಂದ!! ಬಿಳಲುಗಳು ಹೆಣೆದಿದ್ದ ಬದುಕಿನ ಆವರಣಗಳ ಕಳಚಿ, ಮುಕ್ತ ಸ್ವಚ್ಛಂದ ಮಳೆಗೆ ಮೈಯೊಡ್ಡಿದಂಥ ಮನಸು. ನಿಂತನಿಂತಲ್ಲೇ ಕೇದಾರ ಬದುಕೆಲ್ಲ ಹೊಸದೆಂಬಂತೆ ಸಂಭ್ರಮಿಸಿದ.

ಕೈಲಿದ್ದ ಅರತಿ ತಟ್ಟೆಯಲ್ಲಿ ಕರ್ಪೂರದ ಜ್ವಾಲೆ ಉರಿದುರಿದು, ಇದೀಗ ನೀರಿನಿಂದ ಹೊರ ತೆಗೆದ ಮೀನು ಬದುಕಲು ಪ್ರಯತ್ನಿಸುತ್ತಾ ಒದ್ದಾಡುವಂತೆ ಆರಿಹೋಗದೇ ಇರುವ ಪ್ರಯತ್ನಕ್ಕೆ ತೊಡಗಿತ್ತು. ತನ್ನನ್ನು ಪುನೀತಗೊಳಿಸಿದ ಈ ನವವಧುವಿನ ಮುಗ್ಧ ಕಂಗಳಿಂದ ದೂರ ಸರಿಯಲು ಕೇದಾರನಿಗೇನೂ ಮನಸಿರಲಿಲ್ಲ. ಆದರೆ ಹಿಡಿದುಕೊಂಡಿದ್ದ ಅರತಿ ತಟ್ಟೆಯ ಬಿಸಿ ಕೈಬೆರಳುಗಳನ್ನು ಚುರುಗುಟ್ಟಿಸಿತು. ಇವ ಹೀಗೇ ನಿಂತಿದ್ದು ಕಂಡು, ಗಿರಿಗೆ ಏನೆನ್ನಿಸಿತೋ ಪರ್ಸಿನಿಂದ ಹಸಿರು ಗಾಂಧಿ ನೋಟೊಂದನ್ನು ತೆಗೆದು ಆರತಿ ತಟ್ಟೆಗೆ ಹಾಕಿದ. ಕೇದಾರನಿಗೆ ಪಿಚ್ಚೆನಿಸಿತು. ಹೀಗೆ ಏಳು ನಿಮಿಷ ಅರತಿ ತಟ್ಟೆ ಹಿಡಿದು ಎದುರಿಗೆ ನಿಂತಿದ್ದು ನಿನ್ನ ನೋಟಿಗಾಗಿ ಅಲ್ಲ ಎಂದು ಅರಚಬೇಕೆನ್ನಿಸಿತು... ಆದರೆ ಅದೇ ಕ್ಷಣ... ತಾನು ಹಾಗೇ ನಿಂತಿದ್ದರೆ ಬೇರೆ ಅರ್ಥ ಬರುವುದಕ್ಕೂ ಸಾಧ್ಯವಿಲ್ಲವೆನಿಸಿ ಅವನು ಸುಮ್ಮನೇ ಉಳಿದ. ಅಷ್ಟೊತ್ತಿಗಾಗಲೇ ಆ ಅವಳು, ಸಂಗಾತಿಯ ಕೈಯಲ್ಲಿ ಕೈಯಿಟ್ಟು ನಿಧಾನಕ್ಕೆ ಮರಳಿ ಹೊರಟು ನಿಂತಿದ್ದಳು; ಸಂಜೆ ಹೊತ್ತಿಗೆ ಬಂದು ಕತ್ತಲ ಗುಡಿಯಲ್ಲಿ ಮಂಗಳದೀಪ ಬೆಳಗಿ, ಅಷ್ಟೇ ನಿಸ್ವೃಹತೆಯಿಂದ ಮರಳುವ ತಾಪಸ ಕನ್ಯೆಯಂತೆ, ಅವಳ ಕಂಗಳಲ್ಲಿ ಇದ್ದುದು, ಕೇದಾರನೆದೆಯಲ್ಲಿ ಹೊತ್ತಿದ ಮಂಗಳದೀಪ ಆರದೆ ಉರಿಯಲಿ ಎಂಬ ಇಚ್ಛೆ!? ಕೇದಾರ ಕಂಗಳ ತುಂಬ ಹೇಳತೀರದ ಗೌರವಭಾವವನ್ನಿಟ್ಟುಕೊಂಡು, ದೇವಾಲಯದ ಶಿಲಾಸ್ತಂಭದೊಂದಿಗೆ ಇನ್ನೊಂದು ಕಂಭವೇ ಆಗಿ ನಿಂತುಬಿಟ್ಟ. ಮುಚ್ಚಿದ ಕಂಗಳ ಹಿಂದೆ, ಸಂಧ್ಯಾವಂದನೆಯ ಅರ್ಘ್ಯದ ಜೊತೆಗೆಲ್ಲೋ ಈ ದೀಪದ ಹೆಣ್ಣು ಸಜೀವ ಅರಾಧನೆಯ ಮೂರ್ತಿಯಾದಂಥ ಚಿತ್ರ. ಅಮ್ಮನನ್ನು ಅಮ್ಮಾ ಎಂದು ಎದೆ ತುಂಬಿ ಕರೆವ ಭಾವ. ದೀಪದ ಹೆಣ್ಣು ಕೇದಾರನನ್ನು ಯಾವ ಭಾವಕ್ಕೂ ಅಂಟಿಸಿ ನಿಲ್ಲುತ್ತಿಲ್ಲ. ಬದಲಿಗೆ, ಅಂಗೈಯಗಲದ ಆಗಸದಲ್ಲಿ ಬ್ರಹ್ಮಾಂಡ ಕಾಣುವ ಕಲಾವಂತಿಕೆ ಹೇಳಿಕೊಟ್ಟು ಹೊರಟಿದ್ದಾಳೆ. ಹೊರಗೆ, ಅವರಿಬ್ಬರೂ ಕುಳಿತು ಬಂದಿದ್ದ ಸ್ವಿಫ್ಟ್ ಕಾರು ಸಣ್ಣದೊಂದು ಕೆಮ್ಮು ಕೆಮ್ಮಿ ಹೊರಟ ಸದ್ದಾಯಿತು. ಕೇದಾರ ಹೊರಗೋಡಿ ಬಂದ, ಕವಿದು ನಿಂತಿರುವ ಪೆಟ್ರೋಲಿನ ಘಮವನ್ನು ಆಸ್ವಾದಿಸಲಿಕ್ಕೆಂದಲ್ಲ. ಬದಲಿಗೆ, ದೀಪ ಬೆಳಗಿದಾಕೆಯ ಪಾದದ ಗುರುತು ಮಣ್ಣ ಮೇಲೆ ಉಳಿದಿರಬಹುದಾ ಎಂದು ನೋಡಲಿಕ್ಕೆ. ಅವಳನ್ನು ಹೊತ್ತ ಕಾರು ಉದ್ದ ದಾರಿಯಲ್ಲಿ ಸಾಗಿ ಕಣ್ಮರೆಯಾಯಿತು.

(ಮುಗಿಯಿತು)

<strong>ಕಥೆಯ ಮೊದಲ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ</strong>ಕಥೆಯ ಮೊದಲ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X