ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯಾಮರಣ

By * ತ್ರಿವೇಣಿ
|
Google Oneindia Kannada News

Dayamarana, short story by Triveni
ಡಾ. ಸುದರ್ಶನ್‌ರ ರೌಂಡ್ಸ್‌ ಅದೇ ತಾನೇ ಪ್ರಾರಂಭವಾಗಿತ್ತು. ಪ್ರತಿ ರೋಗಿಯನ್ನೂ ಮೆಲುವಾದ ದನಿಯಲ್ಲಿ ಆತ್ಮೀಯವಾಗಿ ವಿಚಾರಿಸುತ್ತಾ, ಅವರ ದೇಹಸ್ಥಿತಿಯ ಏರುಪೇರುಗಳನ್ನು ಗಮನಿಸುತ್ತಾ ಬರುತ್ತಿದ್ದರು. ಆ ನರ್ಸಿಂಗ್‌ ಹೋಂನ ರೋಗಿಗಳ ಪಾಲಿಗೆ ಸುದರ್ಶನ್‌ ಎಂದರೆ ಸಾಕ್ಷಾತ್‌ ಧನ್ವಂತರಿ. ಅವರ ಕೈಗುಣದ ಮೇಲೆ ಅಷ್ಟು ವಿಶ್ವಾಸ ಅವರಿಗೆ.

ಸುದರ್ಶನರ ವ್ಯಕ್ತಿತ್ವವೂ ಹಾಗೆಯೇ ಇತ್ತು. ತುಂಬಾ ಸಮಾಧಾನಿ. ಕರುಣೆ, ಸಾಂತ್ವನವನ್ನು ಹೊರಚೆಲ್ಲುವ ಶಾಂತ ಮುಖಭಾವ. ತಮ್ಮ ಸ್ನೇಹಮಯ ವ್ಯಕ್ತಿತ್ವದಿಂದ ಎಂತಹ ಅಪರಿಚಿತರನ್ನೂ ತಮ್ಮತ್ತ ಆಯಸ್ಕಾಂತದಂತೆ ಸೆಳೆದುಕೊಂಡುಬಿಡುತ್ತಿದ್ದರು. ಎಷ್ಟೇ ಕೆಲಸದ ಒತ್ತಡವಿದ್ದರೂ ತಮ್ಮ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿರಲಿಲ್ಲ.

ತಾವೇ ಆ ನರ್ಸಿಂಗ್‌ಹೋಮಿನ ಮಾಲೀಕರಾಗಿದ್ದರೂ ಇತರ ಸಹೋದ್ಯೋಗಿಗಳ ಮೇಲೆ ದರ್ಪ ದಬ್ಬಾಳಿಕೆಯನ್ನು ತೋರಿಸದೆ ಅವರ ಸಲಹೆಗಳನ್ನೂ ಮನ್ನಿಸುತ್ತಿದ್ದರು. ಸರಕಾರಿ ವೈದ್ಯರಾಗಿ ಅನೇಕ ಸ್ಥಳಗಳಲ್ಲಿ ಸೇವೆ ಸಲ್ಲಿಸಿ, ಅಪಾರ ಅನುಭವ ಪಡೆದು ನಿವೃತ್ತಿಯ ವಯಸ್ಸು ಸಮೀಪಿಸಿದಂತೆ ಆ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ತಮ್ಮದೇ ಸ್ವಂತ 'ಅಶ್ವಿನಿ ನರ್ಸಿಂಗ್‌ ಹೋಂ" ತೆರೆದಿದ್ದರು. ಅವರು ಈ ನರ್ಸಿಂಗ್‌ ಹೋಂ ಪ್ರಾರಂಭಿಸಿದ್ದು ಜನಸೇವೆಯ ಉದ್ದೇಶದಿಂದಲೇ ಹೊರತು ಹಣ ಮಾಡಲಲ್ಲ. ಸುದರ್ಶನ್‌ ನಿಜಕ್ಕೂ ಒಬ್ಬ ಬಲು ಅಪರೂಪದ ವೈದ್ಯರು.

ಕೆಲವು ವೃದ್ಧ ರೋಗಿಗಳು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಾ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದರೂ, ಆ ಭಾವನೆಯ ಛಾಯೆಯನ್ನೂ ಕೂಡ ಮೊಗದಲ್ಲಿ ಹಾಯಬಿಡದೆ, ಅವರ ದೂರುಗಳನ್ನು ಅತಿ ಆಸಕ್ತಿಯಿಂದ ಅಲಿಸುತ್ತಾ ಸೂಕ್ತ ಸಮಾಧಾನ ಹೇಳುತ್ತಿದ್ದರು. ಇದರಿಂದ ಆ ರೋಗಿಗಳಿಗೆ ಡಾಕ್ಟರಿಗೆ ತಾವು ತುಂಬಾ ಆಪ್ತರೆಂಬುವ ಧನ್ಯತಾಭಾವ ಮೂಡುತ್ತಿತ್ತು.

ಆ ವಾರ್ಡಿನ ಕೊನೆಯ ಮಂಚದಲ್ಲಿದ್ದ ಮಂಜುನಾಥಯ್ಯನವರು ಡಾಕ್ಟರು ತಮ್ಮ ಬಳಿ ಬರುವುದನ್ನೇ ನಿರೀಕ್ಷಿಸುತ್ತಾ ಮಲಗಿದ್ದರು. 'ಹೇಗಿದ್ದೀರಾ? ಮಂಜುನಾಥಯ್ಯನವರೇ, ನಿಮ್ಮ ಕೊನೆಯ ಮಗ ಅಮೆರಿಕಾದಿಂದ ಇಲ್ಲಿಗೆ ಬಂದ ಮೇಲೆ ನಿಮ್ಮ ಕಾಯಿಲೆ ಅರ್ಧ ವಾಸಿ ಆದ ಹಾಗಿದೆ" ಎಂದು ಅವರನ್ನು ಹಾಸ್ಯ ಮಾಡಿದರು ಡಾಕ್ಟರ್‌.

ಶರಮಂಚದ ಮೇಲಿನ ಭೀಷ್ಮನಂತೆ ನೋವುಣ್ಣುತ್ತಾ ಮಲಗಿದ್ದ ಮಂಜುನಾಥಯ್ಯನವರ ತುಟಿಯ ಮೇಲೆ ಶುಷ್ಕ ನಗೆಯಾಂದು ಹಾದು ಹೋಯಿತು.

'ಡಾಕ್ಟರೇ, ನಿಮಗೂ ನನ್ನ ಸ್ಥಿತಿ ತಮಾಷೆ ಅಗಿದೆಯೇ? ನಾನೊಂದು ಮಾತು ಕೇಳ್ತೀನಿ, ದಯವಿಟ್ಟು ನಡೆಸಿಕೊಡಿ. ಜನ್ಮಾಂತರದಲ್ಲೂ ನಾನು ನಿಮಗೆ ಋಣಿಯಾಗಿರ್ತೀನಿ" ಎಂದರು ದೈನ್ಯದಿಂದ ಮಂಜುನಾಥಯ್ಯ.

ಡಾಕ್ಟರಿಗೆ ಈ ರೋಗಿ ತಮ್ಮಿಂದ ಬೇಡುತ್ತಾ ಇರುವ ಉಪಕಾರವೇನೆಂಬುದು ಗೊತ್ತಿತ್ತು. ಅದು ಆಗದ ಹೋಗದ ಮಾತೆಂಬುದೂ ಗೊತ್ತು. ಆದ್ದರಿಂದಲೇ ಹೆಚ್ಚು ಮಾತು ಬೆಳೆಸದೆ, 'ಹೆಚ್ಚು ಯೋಚನೆ ಮಾಡಿ ಆಯಾಸ ಮಾಡಿಕೊಳ್ಳಬೇಡಿ, ಮಾತ್ರೆಗಳನ್ನೆಲ್ಲಾ ತೆಗೆದುಕೊಂಡಿರಿ ತಾನೇ?" ಎಂದು ಔಪಚಾರಿಕವಾಗಿ ಕೇಳುತ್ತಾ ಆ ವಾರ್ಡಿನಿಂದ ಹೊರಬಿದ್ದರು.

***

ಮಂಜುನಾಥಯ್ಯನವರನ್ನು ಡಾ.ಸುದರ್ಶನ್‌ ಸುಲಭದಲ್ಲಿ ಮರೆಯಲಾರರು. ಏಕೆಂದರೆ ಅವರ ರೋಗದ ಚರಿತ್ರೆಯೇ ಹಾಗಿದೆ. ಎರಡು ವರ್ಷಗಳ ಹಿಂದೆ ಅವರು ಮೊದಲ ಬಾರಿಗೆ ಅಶ್ವಿನಿ ನರ್ಸಿಂಗ್‌ ಹೋಮಿನಲ್ಲಿ ದಾಖಲಾಗಿದ್ದರು.

ತಮ್ಮದೇ ಆದ ಸ್ವಂತ ಉದ್ಯಮ ಹೊಂದಿದ್ದು, ಸಾಕಷ್ಟು ಸ್ಥಿತಿವಂತರಾಗಿದ್ದರು ಮಂಜುನಾಥಯ್ಯನವರು. ಆರೋಗ್ಯವಂತರಾಗಿದ್ದು ಚಟುವಟಿಕೆಯಿಂದಿದ್ದ ಅವರಿಗೆ ಇದ್ದಕ್ಕಿದ್ದಂತೆ ಒಂದು ದಿನ ಕೈಕಾಲುಗಳಲ್ಲಿ ಸ್ವಲ್ಪ ನೋವು ಪ್ರಾರಂಭವಾಯಿತು. ವಾಯುನೋವಿರಬೇಕು ಎಂದು ಅವರು ಉದಾಸೀನದಿಂದಲೇ ಇದ್ದರು. ಆದರೆ ಆ ನೋವು ತೋಳು, ತೊಡೆ, ಸೊಂಟ, ಕುತ್ತಿಗೆ ಎಂದು ಇಡೀ ದೇಹವನ್ನೇ ವ್ಯಾಪಿಸಿಕೊಂಡಿತು.

ಹೆಜ್ಜೆಗಳನ್ನೂ ಎತ್ತಿಡಲೂ ಅಗದಂತಹ ಯಮನೋವು ಅದು. ಹೀಗಾದ ಮೇಲೆ ಮಂಜುನಾಥಯ್ಯ ತೀರಾ ಪರಾವಲಂಬಿ ಆಗಿಬಿಟ್ಟರು. ಮಲಮೂತ್ರ ವಿಸರ್ಜನೆಯೆಲ್ಲಾ ಮಲಗಿದ ಕಡೆಯೇ ಆಗಬೇಕಾಗಿತ್ತು. ಇಷ್ಟು ಸಾಲದೆಂಬಂತೆ ಮೈಮೇಲೆಲ್ಲಾ ಸಣ್ಣ ಸಣ್ಣ ಹುಣ್ಣುಗಳಾಗಿ ಕೀವು ತುಂಬತೊಡಗಿತು. ಅವರೇ ಸಹಿಸಲಾಗದಂತಹ ದುರ್ನಾತ.

ಇಂತಹ ಸ್ಥಿತಿಯಲ್ಲಿ ಸುದರ್ಶನರ ಬಳಿಗೆ ಬಂದಿದ್ದರು ಮಂಜುನಾಥಯ್ಯ. ಅವರನ್ನು ಸುದರ್ಶನ್‌ ಎಲ್ಲಾ ತರಹದ ತಪಾಸಣೆಗಳಿಗೆ ಒಳಪಡಿಸಿದ್ದರು. ಆದರೆ ಯಾವುದರಿಂದಲೂ ಅವರಿಗೆ ಬಂದಿರುವ ರೋಗವೇನೆಂಬುದು ಮಾತ್ರ ಪತ್ತೆಯಾಗಲಿಲ್ಲ. ಸುದರ್ಶನ್‌ ತಮ್ಮ ಅಷ್ಟೂ ವರ್ಷಗಳ ವೈದ್ಯಕೀಯ ಸೇವೆಯ ಅವಧಿಯಲ್ಲಿ ಇಂತಹ ರೋಗಿಯನ್ನು ನೋಡುತ್ತಿರುವುದು ಇದೇ ಮೊದಲು. ಅವರ ಜಾಣ್ಮೆ, ಕೌಶಲ್ಯ, ಅನುಭವಗಳಿಗೇ ಮಂಜುನಾಥಯ್ಯನವರ ಕಾಯಿಲೆ ಸವಾಲಾಗಿ ಹೋಗಿತ್ತು. ತಮಗೆ ತಿಳಿದ ಬೇರೆ ಕೆಲವು ನುರಿತ ತಜ್ಞರನ್ನು ಕರೆಸಿಕೊಂಡು ಮಂಜುನಾಥಯ್ಯನವರನ್ನು ಅವರಲ್ಲಿಯೂ ಪರೀಕ್ಷೆಗೊಡ್ಡಿದ್ದರು. ಆದರೆ ಯಾವುದರಿಂದಲೂ ಪ್ರಯೋಜನ ದೊರೆತಿರಲಿಲ್ಲ.

ಕೊನೆಗೆ ಕೆಲವು ತಾತ್ಕಾಲಿಕ ನೋವು ನಿವಾರಕಗಳನ್ನು, ಶಕ್ತಿದಾಯಕ ಟಾನಿಕ್‌ಗಳನ್ನು ಮಾತ್ರ ಬರೆದುಕೊಟ್ಟು ಮಂಜುನಾಥಯ್ಯನವರನ್ನು ಮನೆಗೆ ಕಳಿಸಿಬಿಟ್ಟಿದ್ದರು. ಕಳಿಸುವ ಮುನ್ನ ಮಂಜುನಾಥಯ್ಯನವರ ಪತ್ನಿ ಚಂದ್ರಮತಿಯಲ್ಲಿ ಅವರ ಪತಿಯ ಕಾಯಿಲೆಯನ್ನು ಗುಣಪಡಿಸುವಲ್ಲಿ ತಮ್ಮ ವೈಫಲ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು, ಅವರನ್ನು ಬೇರೆ ಕಡೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದಾದಲ್ಲಿ ತಮ್ಮ ಅಭ್ಯಂತರ ಏನಿಲ್ಲವೆಂದು ಹೇಳಿದ್ದರು.

ಚಂದ್ರಮತಿ ಕಾಲೇಜೊಂದರಲ್ಲಿ ಉಪನ್ಯಾಸಕಿ. ಸೂಕ್ಷ್ಮಮತಿಯ ಹೆಂಗಸು. ಅವರ ಜೀವನದಲ್ಲಿ ಸುಖ ಸಮೃದ್ಧಿಗಳಿಗೇನೂ ಕೊರತೆ ಇರಲಿಲ್ಲ. ಮಂಜುನಾಥಯ್ಯನವರು ತಮ್ಮ ಬುದ್ಧಿಬಲ, ಪರಿಶ್ರಮಗಳಿಂದ ಅಪಾರ ಸಂಪತ್ತನ್ನು ಕೂಡಿಸಿದ್ದರು. ಉನ್ನತ ಪದವಿಗಳಲ್ಲಿರುವ ಮೂರುಜನ ಗಂಡುಮಕ್ಕಳು ಅವರಿಗೆ. ಸೊಸೆಯರು, ಮೊಮ್ಮಕ್ಕಳಿಂದ ತುಂಬಿದ ಸುಂದರ ಸಂಸಾರ ಅವರದಾಗಿತ್ತು. ಬದುಕಿನ ಸಮಸ್ತ ಸುಖಗಳನ್ನೂ ಹನಿಹನಿಯಾಗಿ ಸವಿಯುತ್ತಿದ್ದಾಗಲೇ ಮಂಜುನಾಥಯ್ಯನವರ ಅನಾರೋಗ್ಯ ಅವರ ಮೇಲೆ ಸಿಡಿಲಿನಂತೆ ಬಂದೆರಗಿತ್ತು.

ತಮ್ಮ ಪ್ರೀತಿಯ ಸಂಗಾತಿಯನ್ನು ಮತ್ತೆ ಮೊದಲಿನಂತೆ ಆರೋಗ್ಯವಂತರನ್ನಾಗಿ ನೋಡಬೇಕೆಂದು ಬೇಕಾದಷ್ಟು ಶ್ರಮಿಸಿದ್ದರು. ಡಾ. ಸುದರ್ಶನ್‌ ಶಿಫಾರಸು ಮಾಡಿದ್ದ ಮತ್ತೆ ಕೆಲವು ವೈದ್ಯರುಗಳಲ್ಲಿ ಪತಿಯನ್ನು ಕರೆದೊಯ್ದಿದ್ದರು. ಹಗಲು ರಾತ್ರಿಗಳೆನ್ನದೆ, ನಿದ್ರೆ ಆಹಾರವಿಲ್ಲದೆ ಊರೂರು ಸುತ್ತಾಡಿದ್ದರು. ಆದರೆ ಎಲ್ಲಾ ಕಡೆಯೂ ಅವರಿಗೆ ನಿರಾಸೆಯೇ ಕಟ್ಟಿಟ್ಟ ಬುತ್ತಿಯಾಗಿತ್ತು. ಎಲ್ಲಾ ಪ್ರಯತ್ನಗಳೂ ಮುಗಿದ ನಂತರ - 'ಇನ್ನು ಯಾವ ಆಸ್ಪತ್ರೆಯೂ ಬೇಡ. ಚಿಕಿತ್ಸೆಯೂ ಬೇಡ. ಬದುಕಿರುವವರೆಗೂ ನನ್ನ ಯಜಮಾನರು ನನ್ನ ಬಳಿಯಲ್ಲಿಯೇ ಇರಲಿ" ಎಂದು ಮಂಜುನಾಥಯ್ಯನವರನ್ನು ಮನೆಯಲ್ಲೇ ಇರಿಸಿಕೊಂಡು ತಮ್ಮ ಕಣ್ಣಿನಂತೆ ಕಾಪಾಡಿಕೊಂಡು ಬಂದಿದ್ದರು.

ಎರಡು ಮೂರು ತಿಂಗಳಿಗೊಮ್ಮೆ ನಗರದ ಹೊರವಲಯದಲ್ಲಿದ್ದ ತಮ್ಮ ಬೃಹತ್‌ ಬಂಗಲೆಗೆ ಸುದರ್ಶನ್‌ ಅವರನ್ನು ವಿನಂತಿಸಿ, ಕರೆಸಿಕೊಳ್ಳುತ್ತಿದ್ದರು. ಸುದರ್ಶನ್‌ ರೋಗಿಯನ್ನು ಪರೀಕ್ಷಿಸಿ ಇಂಜೆಕ್ಷನ್‌, ಮಾತ್ರೆಗಳನ್ನು ಕೊಟ್ಟು ರೋಗಿಯ ನೋವು ಹತೋಟಿಯಲ್ಲಿರುವಂತೆ, ಸಹನೀಯವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕಿಂತ ಹೆಚ್ಚಿನದು ಅವರಿಂದ ಸಾಧ್ಯವಾಗಿರಲಿಲ್ಲ.

ಪ್ರತಿಬಾರಿ ಅವರ ಮನೆಗೆ ಹೋದಾಗಲೂ ಸುದರ್ಶನರಿಗೆ ನರಕದರ್ಶನವಾದಂತಾಗುತ್ತಿತ್ತು. ಮಂಜುನಾಥಯ್ಯನವರ ಕೋಣೆಯನ್ನೆಲ್ಲಾ ವ್ಯಾಪಿಸಿದ ದುರ್ಗಂಧವನ್ನು ನಿವಾರಿಸಲು ಅಲ್ಲಿ ಉರಿಸಿರುತ್ತಿದ್ದ ಸುಗಂಧ ಬತ್ತಿಗಳಿಂದಲೂ ಸಾಧ್ಯವಾಗುತ್ತಿರಲಿಲ್ಲ. ಮೈಯ ಅಂಗುಲ ಅಂಗುಲದಲ್ಲೂ ಸೂಜಿಯಿಂದ ಚುಚ್ಚಿದಂತೆ ನೋವು ಅನುಭವಿಸುತ್ತಿದ್ದ ಅವರು ವಿಕಾರವಾಗಿ ಕಿರುಚಾಡುತ್ತಿದ್ದರು. ಇದನ್ನೆಲ್ಲಾ ಪ್ರತಿದಿನವೂ ಅನಿವಾರ್ಯವಾಗಿ ಅನುಭವಿಸುತ್ತಿದ್ದ ಅವರ ಕುಟುಂಬದ ಯಾರೊಬ್ಬರ ಮುಖದಲ್ಲೂ ಜೀವಕಳೆಯೇ ಇದ್ದಂತೆ ಅನಿಸುತ್ತಿರಲಿಲ್ಲ ಸುದರ್ಶನರಿಗೆ.

ದಯಾಮರಣ : ಕಥೆಯ ಮುಂದಿನ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X