ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯಾಮರಣ (ಭಾಗ 3)

By * ತ್ರಿವೇಣಿ
|
Google Oneindia Kannada News

(ಕಥೆ ಮುಂದುವರಿದಿದೆ...)

ಚಂದ್ರಮತಿ ಒಳಬಂದರು. ಈಚೆಗೆ ಗಂಡನ ಅನಾರೋಗ್ಯದಿಂದ ಕಂಗೆಟ್ಟಿದ್ದರೂ ಆಕೆ ಸುಂದರಿಯೆಂದು ಧಾರಾಳವಾಗಿ ಹೇಳಬಹುದಿತ್ತು. ಹೊಂಬಣ್ಣದ ಮೈಕಾಂತಿ, ಎತ್ತರದ ನಿಲುವು, ಮುಖದಲ್ಲಿ ತುಂಬಿತುಳುಕುತ್ತಿದ್ದ ಪ್ರೌಢತೆಯಿಂದ ಅವರು ನೋಡುಗರಲ್ಲಿ ಗೌರವದ ಭಾವ ಮೂಡಿಸುತ್ತಿದ್ದರು. ಚಂದ್ರಮತಿ ಡಾಕ್ಟರರ ಮುಂದಿದ್ದ ಕುರ್ಚಿಯಲ್ಲಿ ಅವರ ಅಪ್ಪಣೆ ಪಡೆದು ಕುಳಿತುಕೊಂಡರು.

'ಡಾಕ್ಟರೇ, ನನ್ನ ಯಜಮಾನರನ್ನು ಈ ಗುರುವಾರ ಮನೆಗೆ ಕಳಿಸುವುದಾಗಿ ಹೇಳಿದಿರಂತೆ, ಹೌದೇ?" ಎಂದು ಮಾತಿಗೆ ಪೀಠಿಕೆ ಹಾಕಿದರು ಚಂದ್ರಮತಿ.

'ಹೌದು, ಅವರು ಈಗ ಮೊದಲಿನಂತೆ ಯಾವುದೇ ಆಹಾರವನ್ನು ಸೇವಿಸಬಹುದು. ಆದರೆ ಅವರ ನೋವು ಮಾತ್ರ ಕಡಿಮೆಯಾಗುವಂತಹದಲ್ಲ. ಅದಕ್ಕೂ ಸಾಕಷ್ಟು ಉಪಶಮನದ ಬೇರೆ ಬೇರೆ ಮಾತ್ರೆಗಳನ್ನು ಬರೆದುಕೊಡುತ್ತೀನಿ. ತೆಗೆದುಕೊಳ್ಳಿ. ನನ್ನನ್ನು ಕ್ಷಮಿಸಿ, ಈ ವಿಷಯದಲ್ಲಿ ಅವರಿಗೆ ನಾನು ಹೆಚ್ಚೇನೂ ಮಾಡಲಾರೆ" ಎಂದರು ಸುದರ್ಶನ್‌ ತಮ್ಮ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತಾ.

'ಅದೆಲ್ಲ ಸರಿ ಡಾಕ್ಟರ್‌. ಆದರೆ ಅವರು ಈ ವೇದನೆಯಿಂದ ಕ್ಷಣಕ್ಷಣವೂ ಸಾಯುವುದನ್ನು ನನ್ನಿಂದ ನೋಡಲಾಗುವುದಿಲ್ಲ. ನೀವು ಮನಸ್ಸು ಮಾಡಿದರೆ ಅವರನ್ನು ಈ ಯಾತನೆಯಿಂದ ಮುಕ್ತಗೊಳಿಸಬಹುದು" ಎಂದರು ಕೊಂಚ ತಡವರಿಸುತ್ತಲೇ ಚಂದ್ರಮತಿ.

'ನಿಮ್ಮ ಮಾತಿನ ಅರ್ಥ?" ಅರ್ಥವಾದಂತೆಯೇ ಪ್ರಶ್ನಿಸಿದರು ಡಾಕ್ಟರ್‌.

'ನಿಮಗೆ ತಿಳಿಯದುದು ಇದರಲ್ಲಿ ಏನಿದೆ ಡಾಕ್ಟರೇ? ಅವರನ್ನು ಯಾವುದಾದರೂ ಇಂಜೆಕ್ಷನ್‌ ಕೊಟ್ಟು ಮುಗಿಸಿಬಿಡಿ. ಬದುಕಿನಲ್ಲಂತೂ ಸುಖ ಕಾಣದ ಆ ಜೀವಕ್ಕೆ ಸಾವಿನಿಂದಾದರೂ ನೆಮ್ಮದಿ ದೊರೆಯಲಿ."

ಚಂದ್ರಮತಿಯ ಮಾತಿನ ಅರ್ಥ ನಿಧಾನವಾಗಿ ಮೆದುಳಿಗೆ ಹೊಳೆದಂತೆ ತಟಕ್ಕನೆ ತಲೆ ಎತ್ತಿ ನೋಡಿದರು ಸುದರ್ಶನ್‌. ಆ ನೋಟದ ಬಿರುಸಿಗೆ ತತ್ತರಿಸಿಹೋದರು ಚಂದ್ರಮತಿ. ಆದರೂ ಭಂಡಧೈರ್ಯದಿಂದ- 'ನಿಮ್ಮ ಮೇಲೆ ಯಾರಿಗೂ ಅನುಮಾನ ಬರದ ಹಾಗೆ ನಾನು ನೋಡಿಕೊಳ್ತೀನಿ" ಎಂದರು.

ಸುದರ್ಶನ್‌ ತಮ್ಮ ಕುರ್ಚಿಯಿಂದ ರಭಸವಾಗಿ ಮೇಲೆದ್ದು, 'ನೀವು ಹೇಳುತ್ತಿರುವುದೇನು ಮಿಸೆಸ್‌ ಮಂಜುನಾಥಯ್ಯನವರೇ ? ಒಂದು ವೇಳೆ ನಾನೇನಾದರೂ ನೀವು ಹೇಳಿದಂತೆ ಮಾಡಿದರೆ ಅದರ ಪರಿಣಾಮವೇನಾಗುತ್ತದೆ ಗೊತ್ತೇ? ಕೊಲೆಯ ಆರೋಪ ಹೊತ್ತು ನಾನು ಜೈಲಿಗೆ ಹೋಗಬೇಕಾಗುತ್ತದೆ. ಇಷ್ಟು ವರ್ಷ ನಾನು ಈ ವೃತ್ತಿಯಲ್ಲಿ ಗಳಿಸಿದ ಘನತೆ, ಗೌರವಗಳೆಲ್ಲಾ ಮಣ್ಣುಪಾಲಾಗಿ ಹೋಗುವುದಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದ ಕಾನೂನು ನನ್ನನ್ನು ಈ ವೃತ್ತಿಯನ್ನೇ ಮುಂದುವರಿಸದಂತೆ ಪ್ರತಿಬಂಧಕ ತರಬಹುದು."

ಎಂದೂ ಯಾರಿಗೂ ಒರಟಾಗಿ ಮಾತನಾಡದ ಸುದರ್ಶನ್‌ ಚಂದ್ರಮತಿಯ ಮೇಲೆ ಬೆಂಕಿಯ ಮಳೆಯನ್ನೇ ಕರೆದರು. ಒಂದು ನಿಮಿಷ ಸುಮ್ಮನಿದ್ದು-

'ನನಗೆ ಹೇಳುವ ನೀವೇ ಏಕೆ ಈ ಕೆಲಸ ಮಾಡಬಾರದಿತ್ತು? ಹೇಗೂ ಊರಾಚೆಯ ನಿರ್ಜನ ಪ್ರದೇಶದಲ್ಲಿರುವ ಬಂಗಲೆಯಲ್ಲಿ ನಿಮ್ಮ ಅಧೀನದಲ್ಲೇ ಇರುವ ಮಂಜುನಾಥಯ್ಯನವರಿಗೆ ಕೊಡುವ ಹಾಲಿನಲ್ಲೋ, ನೀರಿನಲ್ಲೋ ವಿಷ ಬೆರೆಸಿ ಕುಡಿಸಿದ್ದರೆ ಅವರ ಕಥೆ ಮುಗಿದೇ ಹೋಗಿರುತ್ತಿತ್ತಲ್ಲಾ?" ಎಂದರು ವ್ಯಂಗ್ಯವಾಗಿ ವೈದ್ಯರು.

ಕ್ಷಣಕಾಲ ಇಬ್ಬರೂ ಏನೂ ಮಾತನಾಡಲಿಲ್ಲ . ಸುದರ್ಶನರಿಗೆ ತಮ್ಮ ಮಾತು ಅಗತ್ಯಕ್ಕಿಂತ ಹೆಚ್ಚು ಬಿರುಸಾಯಿತು ಅನ್ನಿಸಿತು. ಚಂದ್ರಮತಿಯ ಕಣ್ಣಾಲಿಗಳು ಕಂಬನಿಯ ಕೊಳಗಳಾಗುತ್ತಿರುವುದನ್ನು ಗಮನಿಸಿ ತಮ್ಮನ್ನು ತಾವು ಸಾವರಿಸಿಕೊಂಡು ಸಂತೈಸುವ ದನಿಯಲ್ಲಿ-

'ಐಯಾಮ್‌ ವೆರಿ ಸ್ಸಾರಿ, ನಿಮ್ಮ ಫೀಲಿಂಗ್ಸ್‌ ನನಗೆ ಅರ್ಥ ಆಗುತ್ತದೆ. ಇಷ್ಟು ವರ್ಷ ಪ್ರೇಮದಿಂದ ಒಡನಾಡಿದ ಪತಿಯನ್ನು ಕೊಲ್ಲುವಂತೆ ಕೇಳಿಕೊಳ್ಳುತ್ತಿರುವ ನಿಮ್ಮ ಮನಸ್ಸು ಅದೆಷ್ಟು ಘಾಸಿಗೊಂಡಿದೆ ಎಂದು ನಾನು ಊಹಿಸಬಲ್ಲೆ"

'..........."

'ಆದರೆ ಪ್ರತಿಯಾಂದು ಕೆಲಸಕ್ಕೂ ಒಂದು ನೀತಿ ನಿಯಮವಿರುತ್ತದೆ. ಈ ಕೆಲಸ ನಿಮ್ಮಿಂದ ಹೇಗೆ ಸಾಧ್ಯವಿಲ್ಲವೋ ನನ್ನಿಂದಲೂ ಅದು ಸಾಧ್ಯವಿಲ್ಲ. ನೀವು ವಿಧಿಯನ್ನು ನಂಬುವವರು ಅಲ್ಲವೇ? ಮಂಜುನಾಥಯ್ಯನವರನ್ನು ಅವರ ಹಣೆಯಬರಹಕ್ಕೆ ಬಿಟ್ಟು ಬಿಡಿ. ಅವರ ಮೃತ್ಯು ವಿಧಿ ಬರೆದಂತೆಯೇ ಬರಲಿ. ಅದು ನಮ್ಮಿಂದ ಸಂಭವಿಸುವುದು ಬೇಡ. ನಿಮಗೆ ಈ ಘೋರವನ್ನು ನೋಡಲು ಕಷ್ಟವಾಗಬಹುದು. ಆದರೆ ಇಂತಹ ಕಷ್ಟಗಳು ಬಂದಾಗ ಕಲ್ಲಾಗಿರುವುದೇ ಈ ಜೀವನದ ಮರ್ಮ" ಎಂದು ನಿಧಾನವಾಗಿ ವೇದಾಂತಿಯಂತೆ ನುಡಿದರು.

ಚಂದ್ರಮತಿ ಸೆರಗಿನಿಂದ ಕಂಬನಿ ಒರೆಸಿಕೊಂಡು- 'ಬರ್ತೀನಿ ಡಾಕ್ಟರ್‌, ನನ್ನಿಂದ ನಿಮಗೆ ತುಂಬಾ ತೊಂದರೆಯಾಯಿತು, ಮತ್ತೆ ಭೇಟಿಯಾಗೋಣ" ಎಂದು ಅಲ್ಲಿಂದ ಎದ್ದು ಸರಸರ ನಡೆದು ಕಣ್ಮರೆಯಾದರು.

ದಯಾಮರಣ : ಕಥೆಯ ಕೊನೆಯ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X