ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಕಥೆ : ಬಣ್ಣದ ಮೋಹದ ಶುಕ್ರಿ

By Prasad
|
Google Oneindia Kannada News

Vaishali Hegde
ಸಿನೆಮಾ ಹುಚ್ಚಿನ ಮನೆಗೆಲಸದ ಶುಕ್ರಿ ಹೇಳದೇ ಕೇಳದೇ ಇದ್ದಕ್ಕಿದ್ದಂತೆ ಮಾಯವಾಗಿ ಹೋದದ್ದಾದರೂ ಎಲ್ಲಿಗೆ? ಆಕೆಯ ಗೆಳೆತನ, ಬಣ್ಣದ ಮೋಹ ನಾನಾ ಅನುಮಾನಗಳಿಗೆ, ಊಹಾಪೋಹಗಳಿಗೆ ಕಾರಣವಾಗಿತ್ತು. ಶುಕ್ರಿ ಕೊನೆಗೂ ಸಿಕ್ಕಳಾ?

* ವೈಶಾಲಿ ಹೆಗಡೆ

"ಶುಕ್ರಿ ಬಂದಿದೆನ್ರಾ ಅಮ್ಮ ಇಲ್ಲಿ?" ಎನ್ನುತ್ತಾ ದೇವಿ ವಿಚಿತ್ರ ಚಹರೆ ಮಾಡಿಕೊಂಡು ಬೆಳ್ಳಂಬೆಳಿಗ್ಗೆ ಬಂದಿದ್ದಳು. ಎಲ್ಲೇ ಅವಳು? ನಿನ್ನೆ ಬರ್ಲೆ ಇಲ್ವಲೆ? ಒಂದ್ ಕೆಲ್ಸನೂ ಆಗ್ಲಿಲ್ಲ? ನಿನ್ನೆ ಪಾತ್ರೆ, ಬಟ್ಟೆ, ಮನೆ ಕೆಲಸ ಎಲ್ಲ ನಾನೇ ಮಾಡ್ಕಂಡೆ. ಅದ್ರ ಕಾಲದಲ್ಲಿ ಆಫಿಸಿಗ್ ಅರ್ಧ ದಿವ್ಸ ರಜೆ ಹಾಕ್ಬೇಕಾಯ್ತಲ್ಲೇ? ಎಂದು ವಾಪಸ್ ದೇವಿಗೆ ದಬಾಯಿಸಿದ್ದೆ. ಆದ ಕತೆ ಇಷ್ಟು. ಮೊನ್ನೆ ಸಂಜೆಯಿಂದ ಶುಕ್ರಿ ಕಾಣಿಸುತ್ತಿಲ್ಲ. ಅವಳ ತಾಯಿ ದೇವಿ ಕೇರಿಯೆಲ್ಲ ಹುಡುಕಿ ಮುಗಿಸಿ, ಇಲ್ಲಿ ಬಂದಿದ್ದಾಳೆ. ಶುಕ್ರಿ ದಿನವೂ ನಮ್ಮ ಮನೆಯ ಕಸ ಮುಸುರೆ ಅದು ಇದು ಎಂದು ಬೆಳಿಗ್ಗೆಯೇ ಬಂದು ಮುಗಿಸಿಕೊಟ್ಟು, ನಮ್ಮಲ್ಲಿಯೇ ಊಟ ಮಾಡಿ, ರಾಮ ನಾಯ್ಕರ ಮನೆಯಲ್ಲಿ ಸಂಜೆಯ ಒಂದಿಷ್ಟು ಕೆಲಸ ಮುಗಿಸಿ 5 ಗಂಟೆಗೆಲ್ಲ ಮನೆ ಸೇರುವದು ದಿನಚರಿ. ಮೊನ್ನೆ ಸಂಜೆ ಮನೆಗೆ ಹೋಗಿಲ್ಲ. ಎಲ್ಲಿಯೋ ಯಾರದೋ ಮನೆಯಲ್ಲಿ ಸಿನಿಮಾ ಹುಚ್ಚಿನ ಹುಡುಗಿ ಕುಳಿತಿರಬೇಕೆಂದು ಹೆಚ್ಚು ತಲೆಕೆಡಿಸಿಕೊಳ್ಳದೆ ದೇವಿ ಮೀನುಸಾರು, ಗಂಜಿಯೂಟ ಮುಗಿಸಿದ್ದಳು. ಆಗ ಸಣ್ಣಗೆ ಎದೆ ಹೊಡೆದುಕೊಳ್ಳಲು ಶುರುವಾಗಿ, ಅಲ್ಲಿ ಇಲ್ಲಿ ಹೋಗಿ ಕೇಳತೊಡಗಿದ್ದು, ಈಗ ಬೆಳಬೆಳಿಗ್ಗೆ ನಮ್ಮ ಮನೆಗೆ ಬಂದಿತ್ತು ಸವಾರಿ.

"ರಾಮ ನಾಯ್ಕರ ಮನೆಲ್ಲಿ ಕೆಳಿದ್ಯೆನೆ?"
"ಹೌದ್ರಾ, ಅಲ್ಲಿಂದ ಸಂಜೀಗೆ ಯಾವಗ್ನಂಗೆ ಹೊಂಟಿತ್ತನ್ತ್ರಾ, ಎಲ್ಲಿಗ್ ಹೋಗಿರುದ್ರಾ ಈ ಹುಡ್ಗೀ? ಮತ್ತೆ ಯಾರೆನ್ತರೂ ಮಾಡೀರೆ, ಅಮ್ಮ ಎಂತ ಮಾಡ್ಲರಾ...." ಎನ್ನುತ್ತಲೇ ಹೋ ಎಂದು ಅಳತೊಡಗಿದಳು.

ತಡಿಯೇ, ಈಗಲೇ ಎಂತ ಅಳ್ತೀ? ನಾ ಇವ್ರಿಗೆ ಹೇಳಿ ನೋಡ್ತೆ ಹುಡುಕ್ವಾ ಎಂದು ಅವಳಿಗೆ ಸಮಾಧಾನ ಮಾಡಿ ಕಳಿಸಿದರೂ, ನಂಗೂ ಚಿಂತೆಗಿಟ್ಟುಕೊಂಡಿತ್ತು, ಈ ಮಳ್ಳು ಹುಡುಗಿ ಎಲ್ಲಿ ಹೋದಳೋ ಏನೋ ಎಂದು ದುಗುಡವಾದರೂ ಜೊತೆಗೇ ಮತ್ತೊಂದು ಪ್ರಶ್ನೆ ಎದ್ದಿತು ನಾಳೆಗೆ ಮನೆಗೆಲಸಕ್ಕೆ ಯಾರು? ಅಲೆ ದೇವಿ, ನಿಮ್ಮ ಕೇರಿಲ್ಲಿ ಯಾರಾರೂ ಇದ್ರೆ, ಇಲ್ಲ ಅಂದ್ರೆ ನಾಳೆ ದಿನ ನೀನೆ ಕೆಲ್ಸಕ್ಕೆ ಬಂದು ಹೋಗು ಮಾರಾಯ್ತಿ, ಇಲ್ದಿದ್ರೆ ಸಂಭಾಳ್ಸುಕ್ಕಾಗ, ತಲೆಕೆಡಿಸ್ಕಬೇಡ, ಶುಕ್ರಿ ನಾಳೀಕ್ ಬರೂದ್ ಬಿಡು ಎಂದಿದ್ದಕ್ಕೆ ಹ್ನೂ ಅನ್ನುವಂತೆ ತಲೆಯಲುಗಿಸಿ ಗೇಟಿನತ್ತ ಸಾಗುತ್ತಿದ್ದವಳನ್ನೇ ನೋಡುತ್ತಾ ನಿಂತಳು ಸುಮನ.

ಶುಕ್ರಿ ಸುಮಾರು ಹದಿನೇಳು ವರ್ಷದ ಹಾಲಕ್ಕಿ ಒಕ್ಕಲರ ಹುಡುಗಿ. ಅವರ ಕೇರಿಯಲ್ಲಿ ನೋಡಿದರೆ, ಸ್ವಲ್ಪ ಹೆಚ್ಚೇ ಎನ್ನುವಂತ ಬಿಳಿ ಬಣ್ಣದ ಹುಡುಗಿ. ಜೊತೆಗೆ ಅಲಂಕಾರದ ಹುಚ್ಚು ಬೇರೆ. ಹಾಗಾಗಿ ಎದ್ದು ಕಾಣುವಂತಿದ್ದಳು. ವಾರವಿಡೀ, ಮನೆಗೆಲಸ ಮಾಡಿಕೊಂಡಿರುವ ಅವಳಿಗೆ ರವಿವಾರ ರಜೆಯ ದಿನ. ಪ್ರತಿ ರವಿವಾರವೂ ತಪ್ಪದೆ ಸಿನಿಮಾ ಥೇಟರಿನಲ್ಲಿ ಹಾಜರ್. ಅವಳಿಗೆ ಸಿನಿಮಾದ ಕತೆಗಿಂತಲೂ, ಹೀರೋಯಿನ್ ಬಟ್ಟೆಬರೆ, ಅಲಂಕಾರ, ಕೇಶವಿನ್ಯಾಸ, ಬಳೆ, ಸರ, ಎಂಬಿತ್ಯಾದಿ ಚಕಪಕ ಡೀಟೆಲ್ಸ್ಗಳಲ್ಲಿ ಆಸಕ್ತಿ. ಸಿನಿಮಾ ಮುಗಿಸಿ ಮಾರನೆ ದಿನ ಕೆಲಸಕ್ಕೆ ಬಂದವಳು, ಇಡೀ ದಿನ "ಅಮ್ಮ, ಹೀರೋಹಿಣಿ ಎಷ್ಟ್ ಚಂದ ಇತ್ರಾ? ಹೊಸಾ ನಂನಿ ಸೀರೆ ಉಟ್ಕನ್ಡಿತ್ರಾ, ಒಂದ್ ಹಾಡಲ್ಲಿ ಎಷ್ಟ್ ಚಂದ ಚಪ್ಪಲ ಹಾಕಂಡಿತ್ರಾ" ಇದೆ ಬಗೆಯ ವರದಿಗಳು. ಸಿನೆಮ ಕತೆ ಎಂತದೆ? ಎಂತ ಸಿನೆಮಾನೇ? ಎಂದು ಕೇಳಿದರೆ "ಎಂತದೋ ಇತ್ರಾ, ಕತೆ ಸಮ ಅರ್ಥ ಆಗ್ಲಿಲ್ರಾ, ಅದು ಬಿಟ್ಟಾಕಿ, ನೀವು ಸೇಲೀಮ್ಕೆ ಹೋಗಬರ್ರ, ಹೊಸ ಹೀರೋಹಿನಿರಾ...." ಎಂದು ಮತ್ತೆ ಹೀರೋಯಿನ್ಗೆ ಬರುತ್ತಿತ್ತು ಅವಳ ಮಾತು. ತನ್ನ ಸಂಬಳದಲ್ಲಿ, ಬರೀ ಬಳೆ, ಕ್ಲಿಪ್ಪು, ರಿಬ್ಬನ್, ಪೌಡರ್ ಎಂದು ಹಾಳು ಮಾಡುತ್ತಾಳೆ ಎಂದು ದೇವಿಗೆ ಹೇಳಿ, ನಮ್ಮ ಬ್ಯಾಂಕಿನಲ್ಲೇ, ಅವಳ ಹೆಸರಲ್ಲಿ ಒಂದು ಅಕೌಂಟ್ ತೆಗೆಸಿ, ಅವಳ ಸಂಬಳದ ಅರ್ಧ ಭಾಗವನ್ನು, ಖಾತೆಗೆ ಕಟ್ಟಿ, ಅರ್ಧವನ್ನಷ್ಟೇ ಅವಳಿಗೆ ಕೊಡುತ್ತಿದ್ದೆ. ದೇವಿಗೂ ಸಮಾಧಾನ, ನಾಳೆ ಅವಳ ಮದುವೆಗಾದರೂ ಆಯಿತು ಬ್ಯಾಂಕಿನಲ್ಲಿಟ್ಟಿರುವ ದುಡ್ಡು ಎಂದು.

ಈ ಶುಕ್ರಿಯ ಇನ್ನೊಂದು ವಿಶೇಷವೆಂದರೆ, ಅವಳಿಗೆ ತನ್ನ ಹಳೆಯ ಬಗೆಯ ಒಕ್ಕಲರ ಹೆಸರಾದ ಶುಕ್ರಿ ಎಂಬುದರ ಬಗೆಗಿನ ಅಸಮಾಧಾನ. ಈಗೀಗ, ಅವಳ ವಾರಗೆಯ ಹುಡುಗಿಯರಿಗಿರುವಂತೆ ಮಾಲಿನಿ, ಶಾಲಿನಿ, ಮಂಜುಳಾ, ರೂಪಾ ಎನ್ನುವಂತ ಹೆಸರಿದ್ದರೆ ಎಷ್ಟು ಚೆನ್ನಾಗಿತ್ತು, "ನನ್ಗೆಂತ ನಮ್ಮಜ್ಜಿ ಹೆಸರಿಟ್ಟೀರೋ ಏನೋ" ಎಂದು ಯಾವಾಗಲೂ ಹಲುಬುತ್ತಿದ್ದಳು. ಹೋದ ತಿಂಗಳು, ಮಗ ಸೊಸೆ ಅಮೆರಿಕೆಯಿಂದ ಬಂದಾಗ ಸೊಸೆಯ ಅಲಂಕಾರಗಳನ್ನೆಲ್ಲ ಕಂಡು ಸೂಕ್ಷ್ಮವಾಗಿ ಗಮನಿಸುತ್ತಿದ್ದಳು. ಸೊಸೆ ಇವಳನ್ನು, ಶುಕ್ರೀ, ಬಾರೆ ಇಲ್ಲಿ ಎಂದು ಯಾವುದೋ ಕೆಲಸಕ್ಕೆ ಕರೆದಾಗ, ಮುಖ ದುಮ್ಮಿಸಿಕೊಂಡು "ಸಣ್ಣಮ್ಮ, ನೀವು ಶುಕ್ರಿ ಅನ್ಬ್ಯಾಡ್ರ" ಎಂದಿದ್ದಳು. ಮತ್ತೆ ನಿನಗೆಂತ ಶಕೀರಾ ಎನ್ಬೇಕೆನೆ. ನಿನ್ನೆಸ್ರು ಶುಕ್ರಿ ಅಲ್ವನೆ ಎಂದು ಸೊಸೆ ನುಡಿದಾಗ, ಅಡಿಗೆಮನೆಯಲ್ಲಿದ್ದ ನನಗೆ ನಗು. ಅವಳು, ಒಂದಿಷ್ಟು ಬಣ್ಣದ ಹೇರ್ಬ್ಯಾನ್ಡ್, ಒಂದು ನೆಲ್ಪಾಲಿಶ್, ಲಿಪ್ ಸ್ಟಿಕ್ಕನ್ನು ಇವಳಿಗೆ ಕೊಟ್ಟಾಗ ಶುಕ್ರಿ ಮುಖ ಊರಗಲವಾಗಿತ್ತು. ಅವತ್ತಿಂದ ನನ್ನ ಸೊಸೆ ಇವಳ ಫೆವರಿಟ್ ಪರ್ಸನ್. ಅವರು ವಾಪಸ್ ಹೋದಮೇಲೆ ತುಂಬಾ ದಿನಗಳವರೆಗೆ ಕೇಳುತ್ತಿದ್ದಳು, "ಮತ್ಯಾವಾಗ ಬರ್ತೀರು ಸಣ್ಣಮ್ಮ" ಎಂದು.

ಇದೆ ಯೋಚನೆಯಲ್ಲಿಯೇ ಬೆಳಗಿನ ಕೆಲಸಗಳನ್ನು ಪೂರೈಸಿಕೊಂಡು, ಸುಮನ ಕೆಲಸಕ್ಕೆ ಹೊರಡುವ ತರಾತುರಿಯಲ್ಲಿರುವಾಗ, ವಾಕಿಂಗ್ ಹೋಗಿದ್ದ ಮನೋಹರ್ "ಸುದ್ದಿ ಗೊತ್ತೇನೆ" ಎಂದು ಕೂಗುತ್ತಲೇ ಒಳಬಂದರು. ಶುಕ್ರಿ ಕತೆ ಇವರಿಗೆ ಇಷ್ಟುಬೇಗ ಹೇಗೆ ತಿಳಿಯಿತು ಎಂದು ಆಶ್ಚರ್ಯಪಡುತ್ತಲೇ ದೋಸೆ ಹುಯ್ಯುತ್ತಿದ್ದ ಸುಮನ ಕಾವಲಿಸಟ್ಟುಗವನ್ನು ಕೈಯ್ಯಲ್ಲಿ ಹಿಡಿದುಕೊಂಡೆ ಹೊರಬಂದಾಗ, ಮನೋಹರ್ ಹೇಳಿದ್ದೆ ಬೇರೆ. "ಸುದ್ದಿ ಕೇಳಿದ್ಯೇನೆ? ಪೇಟೆಯಲ್ಲಿ, 2 ಆಭರಣದಂಗಡಿ, 3 ಪೆಟ್ರೋಲ್ ಬಂಕ್ ದರೋಡೆಯಾಗಿದೆ! ಒಂದು ಆಭರಣದಂಗಡಿಯ ಸೆಕ್ಯುರಿಟಿ ಗಾರ್ಡ್ ಮತ್ತು ಬೀಟ್ ಪೋಲೀಸರಿಬ್ಬರೂ ಆಸ್ಪತ್ರೆಯಲ್ಲಿದ್ದಾರೆ. 4-5 ಜನ ಇದ್ದರಂತೆ ಒಂದು ಏಕೆ-47 ಬೇರೆ ಇತ್ತಂತೆ." ದರೋಡೆಯ ಕತೆ ತಿಂಡಿ ತಿನ್ನುವಾಗಲೂ ಮುಂದುವರಿದಿದ್ದರಿಂದ ಶುಕ್ರಿ ಪರದೆಯ ಹಿಂದೆ ಸರಿದು ಹೋಗಿಬಿಟ್ಟಳು. ಆದರೆ, ತಟ್ಟೆ ತೊಳೆದುಬಿಡಿ ಶುಕ್ರಿ ಇವತ್ತು ಬರ್ತಾ ಇಲ್ಲ ಎನ್ನುವಾಗ ಮತ್ತೆ ನೆನಪಾಯಿತು, ಒಹ್ ಇವರಿಗೆ ಹೇಳಲೇ ಇಲ್ಲ ಎಂದು. ಶುಕ್ರಿಯ ನಾಪತ್ತೆಯ ವಿಷಯ ಹೇಳಿ, ಕೋರ್ಟಿಗೆ ಹೋಗುವಾಗ ಸ್ವಲ್ಪ ಸ್ಟೇಷನ್ನಿನಲ್ಲಿ ಹೇಳಿ ಹೋಗಿ. ನೀವು ಹೇಳಿದರೆ ಸ್ವಲ್ಪ ಅಲ್ಲಿ ಇಲ್ಲಿ ವಿಚಾರಿಸಬಹುದು.

"ಅಯ್ಯೋ ಆ ಮಳ್ಳು ಹುಡುಗಿ ಇಲ್ಲೇ ಎಲ್ಲೋ ನೆಂಟರ ಮನೆಗೆ ಹೋಗಿರಬೇಕು, ಮನೆಲ್ಲಿ ಜಗಳವಾಯಿತೋ ಏನೋ, ಬರ್ತಾಳೆ ಬಿಡು, ಈಗ ಅವರೆಲ್ಲ ದರೋಡೆ ಗದ್ದಲದಲ್ಲಿರ್ತಾರೆ, ಇದೆಂತ ವಿಷಯನೇ, ಇನ್ನೊಂದ್ ನಾಲಕ್ಕು ದಿನ ಆದರೂ ಬರದೆ ಇದ್ರೆ ಹೇಳಿದರಾಯಿತು" ಎಂದುಬಿಟ್ಟರು. ಇದೆ ಸರಿ ಎನ್ನಿಸಿ ಸುಮನಳೂ ತಯಾರಾಗಿ ಬ್ಯಾಂಕಿಗೆ ಹೊರಟಳು. ಆ ದಿನವಿಡೀ ಎಲ್ಲರ ಬಾಯಲ್ಲೂ ಬರೀ ದರೋಡೆಯದೆ ಸುದ್ದಿ. ನಿಜವೆಷ್ಟೋ, ರೆಕ್ಕೆಪುಕ್ಕ ಹಚ್ಹ್ಚಿದ್ದೆಷ್ಟೋ? ಸಂಜೆಯಾಗುವುದರೊಳಗೆ ಹೊಸ ಹೊಸ ಆಯಾಮಗಳು ಹುಟ್ಟಿಕೊಂಡುಬಿಟ್ಟಿದ್ದವು.

ಇವೆಲ್ಲ ಆಗಿ ಈಗ ಸುಮಾರು ಒಂದು ತಿಂಗಳಾಗಿದೆಯೇನೋ, ಶುಕ್ರಿಯ ಪತ್ತೆ ಹತ್ತಿಲ್ಲ. ಮನೆಗೆಲಸಕ್ಕೆ ಒಕ್ಕಲ ಕೇರಿಯಿಂದಲೇ ಇನ್ನೊಬ್ಬ ಹುಡುಗಿ ಬರುತ್ತಿದ್ದಾಳೆ. ಚುರುಕು ಹುಡುಗಿ. ಎಸ್ಸೆಲ್ಸಿವರೆಗೆ ಓದಿದವಳು. ಗದ್ದೆ ಕೆಲಸ ಎಲ್ಲ ಬೇಡ ಎಂಬ ಬಿಗುಮಾನ. ಅದಕ್ಕೆ ಚೂರುಪಾರು ಮನೆಗೆಲಸವಾದರೆ ಸರಿ ಎಂದುಕೊಂಡು ಬರುತ್ತಾಳೆ. ಆವಾಗಾವಾಗ ದೇವಿ ಬಂದು ಎಂತಾರೂ ತಿಳೀತ್ರ ಅಮ್ಮಾ ಎಂದು ವಿಚಾರಿಸಿಕೊಂಡು ಹೋಗುತ್ತಾಳೆ. ಅವತ್ತು ಸಂಜೆ ಮನೆಗೆ ಬಂದ ಮನೋಹರ್ ಸ್ವಲ್ಪ ದುಗುಡದಿಂದ ಕೂತಿದ್ದರು.

"ಎಸ್ಆಯ್ ಫೋನ್ ಮಾಡಿದ್ದರು. ಒಂದ್ಸಲ ಸ್ಟೇಷನ್ನಿಗೆ ಬಂದು ಹೋಗಿ ಅಂತ. ಹೋಗಿದ್ದೆ . ಆ ದರೋಡೆಕೋರರ ಸುಳಿವು ಸಿಕ್ಕಿದೆಯಂತೆ. ನಿಮ್ಮ ಕೆಲಸದ ಹುಡಿಗಿ ಆಗಲೇ ಅಲ್ಲವ ಕಾಣೆಯಾಗಿದ್ದು?" ಅಂದರು. "ನಿಮಗೆ ತಲೆ ಸರಿ ಇದೆಯೇನ್ರೀ? ಆ ಇನ್ಸ್ಪೆಕ್ಟರ್ ತಲೆ ಸರಿ ಇದೆಯೇನ್ರೀ?"

ಇಲ್ಲಿ ಕೇಳು, ಆ ಗುಂಪಿನ ಮುಂದಾಳು ಒಬ್ಬ ಸೈನಿಕನಂತೆ, ಏಕೆ-47 ಅವನತ್ರ ಅದಕ್ಕೆ ಬಂದಿದ್ದು. ಸೈನ್ಯದ್ದು ಅದು. ಅಲ್ಲಿಯೂ ಅವನ ನಡತೆ ಸರಿ ಇಲ್ಲ ಎಂದು ಸಸ್ಪೆಂಡ್ ಮಾಡಿದ್ದರಂತೆ. ಇಲ್ಲೇ ಪಕ್ಕದೂರಿನ ಹಾಲಕ್ಕಿ ಹುಡುಗನಂತೆ ಮಾರಾಯ್ತಿ ಅವನು! ಶುಕ್ರಿಯ ನೆಂಟರ ಪೈಕಿಯ ಊರಿನವನು!

ಅದಕ್ಕೆ ನಮ್ಮ ಶುಕ್ರಿ ಹೇಗೆ ಸಂಬಂಧಾರೀ?

ಕಥೆಯ ಮುಂದಿನ ಭಾಗ : ಬಣ್ಣದ ಮೋಹದ ಶುಕ್ರಿ (ಭಾಗ 2) »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X