ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲ್ಲಿವೆ ಅಸಲೀ ನ್ಯಾನೋ ಕಥೆಗಳು!

By * ಗೋಪಕುಮಾರ್, ಮೈಸೂರು
|
Google Oneindia Kannada News

ನ್ಯಾನೋ ಕಥೆ ಎಂಬ ಅತಿಸಂಕ್ಷಿಪ್ತ ಕಥಾ ಪ್ರಸಂಗವನ್ನು ಮೊಟ್ಟ ಮೊದಲಬಾರಿಗೆ ಕಥಾ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಹವ್ಯಾಸಿ ಲೇಖಕ ಗೋಪಕುಮಾರ್ ಅವರಿಗೆ ಸಲ್ಲುತ್ತದೆ. ಯಾರ ಮರ್ಜಿ ಇಲ್ಲದೆ ಹೊಸ ಬಗೆಯ ಸಾಹಿತ್ಯ, ಹೊಸ ಹುರುಪಿನ ಲೇಖಕರನ್ನು ಹುಟ್ಟುಹಾಕುವುದು ದಟ್ಸ್ ಕನ್ನಡ.ಕಾಂನ ಕಾಯಕ. ಅದರಂತೆ ಕೊಂಚ ಬ್ರೇಕ್ ನ ನಂತರ ಗೋಪಕುಮಾರ್ ಅವರ ನ್ಯಾನೋ ಕಥೆಗಳು ಮತ್ತೆ ಬಂದಿವೆ. ಪುರುಸೊತ್ತಿಲ್ಲದ ಆದರೂ ವೆಬ್ ಪುಟವನ್ನು ಒಮ್ಮೆ ಜಾಲಾಡುವ ಅಭಿಲಾಷೆ ಇರುವ ನೆಟ್ಟಿಗರಿಗೆ ಈ ಕಥೆಗಳು ಕೊಂಚ ರಿಲ್ಯಾಕ್ಸ್ ನೀಡುವುದಂತೂ ಗ್ಯಾರಂಟಿ.

ಭವಿಷ್ಯ
ಇಂಗ್ಲೀಷ್ ಶಾಲೆ ಸೇರಿದ ಮಕ್ಕಳ ಭವಿಷ್ಯಕ್ಕಾಗಿ ಅವರೂ ಇಂಗ್ಲೀಷ್ ಕಲಿತರು. ಮನೆಯಲ್ಲಿ, ಮನದಲ್ಲಿ ಬರೀ ಇಂಗ್ಲೀಷ್. ಮೊಮ್ಮಕ್ಕಳಾದಾಗ ಅವರ ಭವಿಷ್ಯಕ್ಕಾಗಿ ಅವರು ಕನ್ನಡವನ್ನೇ ಮರೆತರು.

ರಹಸ್ಯ
ಸದಾಸಮಯ ತನ್ನ ಬಳಿಗೆ ಬಂದವರ ಮನಸ್ಸಿನ ಸಮಸ್ಯೆಗಳನ್ನು ಆಲಿಸಿ ಅವರಿಗೆ ನೆಮ್ಮದಿಯ ಚಿಕಿತ್ಸೆ ನೀಡುತ್ತಿದ್ದ ಖ್ಯಾತ ಮನಶಾಸ್ತ್ರಜ್ಞನಿಗೆ ತನ್ನ ಹೆಂಡತಿ ಯಾವ ಕಾರಣಕ್ಕಾಗಿ ಡೈವೋರ್ಸ್ ನೋಟೀಸ್ ನೀಡಿದಳೆಂಬುದು ಮಾತ್ರ ತಿಳಿಯಲೇ ಇಲ್ಲ.

ಸ್ವದೇಶ
ವಿದೇಶದಿಂದ ತಾಯ್ನಾಡಿಗೆ ಮರಳುವಾಗ ಮನಸ್ಸಿನಲ್ಲಿದ್ದುದು ಇಲ್ಲಿನ ಮಣ್ಣಿನ ವಾಸನೆ, ಹಸಿರು, ಕೆರೆ ಮತ್ತು ಅಮ್ಮನ ಕೈರುಚಿಯ ಹಳ್ಳಿಯ ಊಟ. ಮನೆ ತಲುಪಿ ಸಂತೋಷದಿಂದ ಎಲ್ಲರೂ ಊಟಕ್ಕೆ ಕುಳಿತಾಗ ಬಡಿಸಿದ್ದು ಮಾತ್ರ ಪಿಜ್ಜಾ, ಚಿಕನ್ ಮತ್ತು ಪೆಪ್ಸಿ!

ಅನಾಮಧೇಯ
ಕೊಡಗೈದಾನಿಯಾಗಿದ್ದ ಅವರು ಯಾರಿಗೂ ಇಲ್ಲ ಎಂದಿದ್ದಿಲ್ಲ. ಪ್ರಾಯದ ಮುಸ್ಸಂಜೆ ಸಮೀಪಿಸುತ್ತಿದ್ದಂತೆ ಅವರ ಸಂಪತ್ತೂ ಸಹ ವಿದಾಯ ಹೇಳಿಹೊರಟಿತ್ತು. ಒಂದು ಕಾಲದಲ್ಲಿ ಮನೆ, ಹೊಲ, ಗದ್ದೆ, ತೋಟವಿದ್ದವರು ಈಗ ಬಾಡಿಗೆ ಮನೆಯಲ್ಲಿದ್ದಾರೆ. ಆದರೆ ತಿಂಗಳ ಖರ್ಚಿಗೆ ಮಾತ್ರ ಯಾವುದೇ ತೊಂದರೆಯಿಲ್ಲ. ಹಲವು ಅನಾಮಧೇಯರಿಂದ ಅವರಿಗೆ ಪ್ರತಿ ತಿಂಗಳೂ ಹಣ ಹರಿದು ಬರುತ್ತಿದೆ.

ಆಕಸ್ಮಿಕ
ಆಕಸ್ಮಿಕವಾಗಿ ಬಸ್ಸಿನ ಬ್ರೇಕ್ ಹಾಕಿದಾಗ ಸೀಟಿನಲ್ಲಿ ಕುಳಿತಿದ್ದ ಒಬ್ಬ ಪ್ರಯಾಣಿಕ ಕೆಳಕ್ಕೆ ಬಿದ್ದ. ಬಾಕಿ ಪ್ರಯಾಣಿಕರೆಲ್ಲರೂ ಗಹಗಹಿಸಿ ನಕ್ಕರು. ಅವನು ಎದ್ದು ತನ್ನ ಸೀಟಿನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುವಾಗಲೇ ಆತನ ಬಲಗೈ ಬಲಹೀನವಾದುದೆಂದು ಪ್ರಯಾಣಿಕರಿಗೆ ತಿಳಿದದ್ದು.

ಸಂಗೀತದ ನಶೆ
ಸಂಗೀತ ಕಲಿಯುತ್ತಿದ್ದ ಕಾಲದಲ್ಲಿ ಸಂಗೀತವೆಂಬುದು ನಶೆಯಂತಾಗಿತ್ತು ಆತನಿಗೆ. ಅದೆಷ್ಟು ಗಂಟೆಗಳು ನಿರಂತರವಾಗಿ ಮೈಮರೆತು ಹಾಡುತ್ತಿದ್ದ!
ಈಗ ಆತನ ಸಂಗೀತಕ್ಕೆ ಕೋಟಿಗಳು ಸುರಿಯಲು ಜನರಿದ್ದಾರೆ. ಆದರೇಕೋ ಈಗಂತೂ ಮೈಮರೆತು ಹಾಡಲು ಸಾಧ್ಯವಾಗುತ್ತಲೇ ಇಲ್ಲ.

ನಂಬಿಕೆಯ ಬೇಡಿ
ವರದಕ್ಷಿಣೆ ವಿಷಯದಲ್ಲಿ ನಾನಂದುಕೊಂಡ ದುಡ್ಡಿಗಿಂತ ಹತ್ತು ಸಾವಿರ ಕಡಿಮೆ ಹೇಳಿದ್ರು. ಬೇಡ ಅಂತ ಹೇಳಿ ಬಂದ್ಬಿಟ್ಟೆ ಫೋನ್ ಕೆಳಗಿಟ್ಟ.
ಸಾರ್ ಈ ಜಾಗದಲ್ಲಿ ಒಳ್ಳೆ ಹೋಟೇಲ್ ಯಾವುದೂ ಇಲ್ಲ. ಇಲ್ಲಿರೋ ಹೈವೇ ಹೋಟೇಲೇ ಗತಿ ಡೈವರ್ ಕಾರ್ ನಿಲ್ಲಿಸಿದ.
ಮೂರು ಇಡ್ಲಿ, ಒಂದು ಟೀ ಆರ್ಡರ್ ನೀಡಿದ. ಎಂಟು ರೂಪಾಯಿ ಬಿಲ್ಲಿಗೆ ಐನೂರು ರೂಪಾಯಿ ಕೊಟ್ರೆ ಹೆಂಗೆ ಸಾರ್? ನನ್ನತ್ರನೂ ಚಿಲ್ರೆ ಇಲ್ಲ.. . . . . ಪರ್ವಾಗಿಲ್ಲ ಬಿಡಿ ಸಾರ್, ಇನ್ನೊಂದ್ಸಲ ಬಂದಾಗ ಕೊಡುವಿರಂತೆ ಯಾವುದೋ ಅನ್ಯಗ್ರಹ ಜೀವಿಯನ್ನು ನೋಡುವಂತೆ ಹೋಟೆಲ್‌ನವನನ್ನೇ ನೋಡುತ್ತಾ ನಿಂತುಬಿಟ್ಟ ಅವನು.

ಷರತ್ತು
ಅಪರೂಪದ ಕಲಾವಿದನೊಬ್ಬ ದಾರಿದ್ರ್ಯದಲ್ಲಿ ಅಸುನೀಗಿದ. ಆತನ ಹೆಂಡತಿಯ ಬಳಿ ಶವಸಂಸ್ಕಾರಕ್ಕೂ ಹಣವಿಲ್ಲ. ಕಲಾವಿದನ ಫೋಟೋ ಕ್ಲಿಕ್ಕಿಸಲು ಬಂದಿದ್ದ ಪತ್ರಕರ್ತನೊಬ್ಬ ಅದಕ್ಕೊಂದು ಉಪಾಯ ಹುಡುಕಿದ. ದೊಡ್ಡ ಕಂಪೆನಿಯೊಂದು ಕಲಾವಿದನ ಶವಸಂಸ್ಕಾರದ ಖರ್ಚು ವಹಿಸಿಕೊಂಡಿತು. ಆದರೆ ಅವರದ್ದೊಂದು ಷರತ್ತಿತ್ತು. ಶವಪೆಟ್ಟಿಗೆ ಮತ್ತು ಶವಕ್ಕೆ ಹೊದಿಸಿದ ಬಟ್ಟೆಯಲ್ಲಿ ಅವರ ಹೆಸರು ದೊಡ್ಡದಾಗಿ ತೋರಿಸಬೇಕು!

ದುಬಾರಿ
ಮೊದಲ ತಿಂಗಳ ಸಿಕ್ಕಾಗ ಅಮ್ಮನಿಗೆ ಹಾಗೂ ತಮ್ಮನಿಗಾಗಿ ಕೊಂಚ ದುಬಾರಿ ಬಟ್ಟೆಗಳನ್ನೇ ಖರೀದಿಸಿ ಊರಿಗೆ ಹೊಗಿದ್ದಳು. ಮನೆ ತಲುಪಿ ತಮ್ಮನಿಗಾಗಿ ಹುಡುಕಾಡಿದಾಗ ಬೆಳಿಗ್ಗೆಯಿಂದ ಕಾಣ್ತಾ ಇಲ್ಲ ಕಣೇ ಎಂದು ಅಮ್ಮ ಹೇಳಿದ್ದಳು.
ಸ್ವಲ್ಪ ಸಮಯದ ನಂತರ ಮುದ್ದಿನ ತಮ್ಮ ನೇರಳೆಹಣ್ಣಿನೊಂದಿಗೆ ಪ್ರತ್ಯಕ್ಷನಾದ.
ನಿನಗೆ ಇಷ್ಟಾಂತ ಬೆಳಿಗ್ಗೇನೆ ಗುಡ್ಡಕ್ಕೆ ಹೋಗಿ ನೇರಳೆಹಣ್ಣು ತಂದೆ ಕಣೇ, ಇದಿರಲಿ ನನಗೇನೇ ತಂದಿದ್ದೀಯ ಪಟ್ಟಣದಿಂದ?
ಇದಕ್ಕಿಂತ ದುಬಾರಿಯಾದುದು ಯಾವುದೂ ತಂದಿಲ್ಲ
ಅವಳು ಹೆಮ್ಮೆಯಿಂದ ಹೇಳಿದಳು.

ಆಮಂತ್ರಣ
ಪ್ರತಿ ತಿಂಗಳು ಅಪ್ಪನಿಗೆ ಮನಿಆರ್ಡರ್ ಕಳುಹಿಸುವಾಗ ಸಂದೇಶದ ಸ್ಥಳ ಮಾತ್ರ ಬರಿದಾಗಿರುತ್ತಿತ್ತು. ಆದರೆ ಈ ಬಾರಿ ಸಂದೇಶದ ಸ್ಥಳದಲ್ಲೊಂದು ಮಿಂಚು ಕಾಣಿಸಿತ್ತು. ಮಗ ಬರೆದಿದ್ದ. ನನ್ನ ಮದುವೆ ಈ ತಿಂಗಳ ೨೪ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸಾಧ್ಯವಾದರೆ ಬನ್ನಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X