ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಕೃತಿ

|
Google Oneindia Kannada News

Self portrait of an ameture artist
ಒಮ್ಮೊಮ್ಮೆ ಹುಚ್ಚು ಮನಸ್ಸು ಏನೇನನ್ನೋ ಮಾಡಲು ಹಂಬಲಿಸುತ್ತದೆ. ಕೆಲಸವಿಲ್ಲದಾಗ ಏನೆಲ್ಲಾ ಮಾಡಲು ಅಜ್ಞಾಪಿಸುತ್ತದೆ. ಅಂತಹುದೇ ಒಂದು ದಿನ ಅಂತಾ ಕಾಣುತ್ತೆ. ನನ್ನ ಭಾವ ಚಿತ್ರ ನಾನೇ ಬಿಡಿಸಿಕೊಂಡು ನೋಡಬೇಕೆಂಬ ಆಸೆ ಆಯಿತು. ನಾನೊಬ್ಬ ವೃತ್ತಿಪರ ಕಲಾವಿದನಲ್ಲ. ಹವ್ಯಾಸಕ್ಕಾಗಿ ಯಾವುದಾದರೂ ಪತ್ರಿಕೆಗಳ ಚಿತ್ರಗಳನ್ನು ಕಾಪಿ ಮಾಡಬಲ್ಲಷ್ಟು ರೇಖೆಗಳನ್ನು ಎಳೆಯಬಲ್ಲೆನಷ್ಟೆ.

* ಶೇಷಗಿರಿ ಜೋಡಿದಾರ್, ಬೆಂಗಳೂರು

ತೋಚಿದಾಗ ಇಷ್ಟ ಬಂದ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದೆ. ಮತ್ತೆ ಶಾಲೆಯಲ್ಲಿ ಬೋರ್ಡ್ ಮೇಲೆ ನನ್ನ ಕ್ಲಾಸ್ನಲ್ಲಿ ಚಿತ್ರಗಳನ್ನು ಬಿಡಿಸದೆ ವಿಧಿ ಇರಲಿಲ್ಲ. ಹಾಗಾಗಿ ಯಾಕೆ ಪ್ರಯತ್ನ ಪಡಬಾರದು ಅನಿಸಿ ಬರೆಯುವ ಹಾಳೆಯ ಮೇಲೆ ಪೆನ್ಸಿಲ್ ನಿಂದ ಚಿತ್ರ ಬಿಡಿಸಲು ಶುರು ಮಾಡಿದೆ. ನಾನು ಹೇಗಿದ್ದೇನೆ? ನನ್ನ ತಲೆ ಅಥವಾ ಮುಖ ಸೌತೆಕಾಯೋ? ಕುಂಬಳ ಕಾಯಿಯೋ? ಮೊದಲು ಮುಖದ ವಿನ್ಯಾಸ ನೆನಪಿಸಿಕೊಂಡೆ. ಕನ್ನಡಿಯಲ್ಲಿ ಒಮ್ಮೆ ಸರೀಯಾಗಿ ಮುಖ ನೋಡಿಕೊಂಡೆ. ಯಾಕೋ, ನನ್ನ ಮುಖ ನನ್ನ ತಮ್ಮಂದಿರಂತೆ ವೃತ್ತಾಕಾರದಲ್ಲಿಲ್ಲ ಎನಿಸಿತು. ಹಾಗೆಂದು ಮೂಳೆಯ ಕೋಲು ಮುಖವೂ ಅಲ್ಲ. ಒಂದು ರೀತಿ ಅಂಡಾಕಾರ ಅಥವಾ ಚೌಕಾಕಾರ ಎರಡೂ ಅಲ್ಲದ ಒಂದು ಆಕೃತಿ.

ಹಾಗಾದರೆ ನಾನು ನನ್ನ ರೂಪರೇಖೆಯನ್ನು ಎಲ್ಲಿಂದ ಆರಂಭಿಸಲಿ? ಸ್ವಲ್ಪ ಯೋಚಿಸಿ ಹೊರಗೆರೆಗಳನ್ನು ಎಳೆದೆ. ಉದ್ದನೆಯ ಕೂದಲು, ಎದುರು ಸುಳಿಯ ಎಡಕ್ಕೆ ವಾಲಿರುವ ಬೈತಲೆ, ವಯಸ್ಸಿಗೆ ಮೀರಿ ಕಾಣುವ ದಪ್ಪ ದಪ್ಪ ಸುಕ್ಕುಗಳು, ಹುಬ್ಬು ಸಹಾ ನೆಟ್ಟಗಿಲ್ಲದ ತಿರುಚಿಕೊಂಡ ಕೂದಲುಗಳು, ರೆಪ್ಪೆಯ ಬಗ್ಗೆ ಹೆಚ್ಚು ಯೋಚಿಸುವ ಅಥವಾ ಹೋಲಿಸುವ ಅವಶ್ಯಕತೆ ಇರಲಿಲ್ಲ. ಕಾರಣ ಗಂಡಸರಿಗೂ ರೆಪ್ಪೆ ಇರುತ್ತದೆ, ಅಷ್ಟೆ. ಕಣ್ಣ ಕೆಳಗೆ ಕಪ್ಪು ಗೆರೆಗಳು, ಜೋಲು ಬಿದ್ದಿರುವ ಸ್ನಾಯುಗಳ ಒಂದು ಪದರ ಜಲಜ ಶಿಲೆಗಳ ಪದರಗಳಂತೆ. ಎರಡು ಹುಬ್ಬಿನ ನಡುವೆ ಮೂಗು. ಸ್ವಲ್ಪ ದಪ್ಪ. ಅಗಲ ಹೊಳ್ಳೆಗಳು. ಮುಖದ ಇನ್ನು ಸ್ವಲ್ಪ ಕೆಳಗಿನ ಭಾಗಗಳ ಬಗ್ಗೆ ಯೋಚಿಸಿದಾಗ ಒಂದು ಪ್ರಾಕ್ಟಿಕಲ್ ಪ್ರಾಬ್ಲಂ ಬಂತು.

ನನ್ನ ಮೂಗಿನ ಕೆಳಭಾಗವನ್ನು ಮೂವತ್ತು ವರ್ಷದಿಂದ ಮೀಸೆ ಆವರಿಸಿರುವುದರಿಂದ ಅ ಜಾಗ ನಯವಾಗಿದೆಯೋ ಅಥವಾ ಒರಟಾಗಿದೆಯೋ? ಇಲ್ಲ ಬ್ಲೇಡಿನ ಒಂದು ದೊಡ್ಡ ಗಾಯದ ಗೆರೆ ಜ್ಞಾಪಕಕ್ಕೆ ಬಂತು. ಇನ್ನು ಎಡ ಮತ್ತು ಬಲ ಕೆನ್ನೆಗಳು ಅಷ್ಟೇ. ಸತತ ಮೂರು ದಶಕಗಳ ಗಡ್ಡ ಕೃಷಿಯಿಂದಾಗಿ ಅಲ್ಲಿನ ಮೇಲ್ಮೈ ಬಗ್ಗೆ ಅನುಮಾನ. ಮತ್ತೊಮ್ಮೆ ಕನ್ನಡಿ ನೋಡಿದೆ. ಏನೂ ಕಾಣುವುದಿಲ್ಲ. ನೆರೆತ ಮುದಿ ಬಿಳಿ ಗಡ್ಡದ ಅಸ್ತವ್ಯಸ್ತ ಬಿರುಕೂದಲುಗಳು. ರೆಗ್ಯುಲರ್ ಆಗಿ ಶೇವ್ ಮಾಡುವ ಅಭ್ಯಾಸ ಬಿಟ್ಟು ಬಹಳೇ ವರ್ಷಗಳಾಗಿದೆ. ಅಲ್ಲೂ ಸಹಾ ಏನೋ ಮಚ್ಚೆಗಳು, ಚಿಕನ್ ಪಾಕ್ಸ್ ನ ಕಲೆ ಇರಬಹುದು. ಎರಡು ಕೆನ್ನೆಗಳ ಮಧ್ಯೆ ನೀಗ್ರಾಯಿಡ್ ತುಟಿಗಳ ಕೆಳಭಾಗದಲ್ಲಿ ಗದ್ದದ ದೊಡ್ಡ ಗುಳಿ. ಕಿವಿ ಕೆನ್ನೆಯ ನಡುವೆ ಸೀಳು ಕಾಣದ ರೋಮ ಆವೃತ ಕಿವಿಯ ಹಾಲೆ.

ಮತ್ತೊಮ್ಮೆ ಕನ್ನಡಿಯಲ್ಲಿ ಮುಖ ನೋಡಿದೆ. ಹೌದು.. ನನ್ನ ವೀಕ್ಷಣೆ ಸರಿಯಾಗಿದೆ. ಇನ್ನು ಪೆನ್ಸಿಲ್ ತೊಗೊಂಡು ಹಣೆಯ ಮೇಲಿನ ದಪ್ಪನೆಯ ಸುಕ್ಕೊಂದನ್ನು ಗೀಚಿದೆ. ಹಣೆಯ ಮೇಲೆ ಬೀಳುವ ಒಂದು ಗೊಂಚಲು ಕೂದಲಿಂದ ಆರಂಭವಾಯಿತು ಚಿತ್ರ. ಹಣೆಯ ಮೇಲಿನ ಆಳವಾದ ಒಂದು ಗಾಯದ ಕಲೆ ಇನ್ನೂ ಹಾಗೆ ಇದೆ. ಜ್ಞಾಪಕವಿಲ್ಲ. ಎಷ್ಟುವರ್ಷದ ಹಿಂದೆ ಎಂದು ಸರಿಯಾಗಿ ಗೊತ್ತಿಲ್ಲ. ಈಜಲು ಹೋಗಿ ಡೈವ್ ಮಾಡಿ ಮೇಲೆ ಬರುವಾಗ ಮೆಟ್ಟಿಲಿನ ಕಲ್ಲಿಗೆ ತಾಗಿ ಭಾವಿಯೇ ರಕ್ತವಾಗಿ ಎಲ್ಲರೂ ಹೆದರಿ, ಅಕ್ಕನ ಹೊಸ ಸೀರೆಯನ್ನೇ ಹರಿದು ಪಟ್ಟಿಮಾಡಿದರೂ ಮಾಗಲಾರದ ಕಲೆ. ಅಳಿಯದ ಕಲೆಯನ್ನು ಬಣ್ಣದಲ್ಲಾಗಲೀ ರೇಖೆಗಳಲ್ಲಾಗಲೂ ಚಿತ್ರಿಸಲು ಸಾಧ್ಯವೇ? ಹೇಳಲಾರೆ, ಪ್ರಯತ್ನಿಸುವ... ಇನ್ನೂ ಮುಖದ ಹೊರ ರೂಪ ರೆಖೆಯೇ ಸಿದ್ಧವಾಗಿಲ್ಲ. ಏಕೆ ಅವಸರ?

ಮತ್ತೊಮ್ಮೆ ಕನ್ನಡಿಯಲ್ಲಿ ಹಿಂದೂ ಮುಂದು ನೋಡಿ ಸಂಗಮ ದೂರವನ್ನು ಅಳೆದು ಮೇಲೆ ಕೆಳಗೆ ನೋಡಿದಾಗ ತಲೆ ತುಂಬಾ ಉದ್ದಾ ಅನಿಸ ಹತ್ತಿತು. ಹೇಗೆ ಇರಲಿ, ಇದು ನನ್ನ ರೂಪವನ್ನು ವೈಭವೀಕರಿಸುವ ಪ್ರಯತ್ನವೇನಲ್ಲವಲ್ಲ ಎಂದು ನನಗೆ ನಾನೇ ಹೇಳಿಕೊಂಡೆ. ಹೇಗಿದ್ದೇನೋ ಹಾಗೆ ನನ್ನ ಚಿತ್ರವನ್ನು ನಾನೇ ಬಿಡಿಸುವುದು ಒಂದು ಚಾಲೆಂಜಿಂಗ್ ಕೆಲಸ. ನಿರ್ವಿಕಾರ ಭಾವನೆಯಿಂದ ಮುಂದುವರೆಸಲು ಸಾಧ್ಯವಿಲ್ಲ. ಎಲ್ಲೋ ಒಂದು ಗೆರೆ ಕಡಿಮೆ ಮಾಡಿದರೆ ನನ್ನ ಆನೆಯ ಕಣ್ಣುಗಳು ಇನ್ನಷ್ಟು ಸರಿ ಹೋಗಬಹುದು. ತುಟಿ ತೆಳ್ಳಗೆ ಮಾಡಿದರೆ ಮುಖದ ವಿನ್ಯಾಸಕ್ಕೆ ಸರಿಹೊಂದಬಹುದು. ಕಣ್ಣುಗಳು ಪ್ರಖರತೆ ಎಲ್ಲಿ ಹೋಗಿದೆ? ಸದ್ಯಕ್ಕೆ ಈ ತಕ್ಷಣದ ಮನಸ್ಸಿನ ಸ್ಥಿತಿಯಿಂದ ಹೀಗೆ ಕಾಣುತ್ತಿರಬಹುದು. ಸುತ್ತಾಡಿಬಂದಿರುವ ಸುಸ್ತು ಇರಬಹುದೇ? ಸಂಜೆ ಹೊತ್ತಿಗೆ ಸುಸ್ತೆಲ್ಲ ಕಳೆದು ಮತ್ತೆ ಕಾಂತಿ ಬರಬಹುದೆ?

ಒಂದು ಕಪ್ಪು ಚುಕ್ಕೆ, ಅಥವಾ ಶೇಡ್ ಕೊಟ್ಟರೆ ಸರಿ ಮಾಡಬಹುದು. ಬೇಡ. ಹಾಗೆ ಮಾಡಿದರೆ ನಾನು ಬಿಡಿಸುವ ನನ್ನ ಭಾವ ಚಿತ್ರ ಇನ್ನ್ಯಾರದೋ ಆಗಿಬಿಟ್ಟೀತು. ಪೆನ್ಸಿಲ್ ನಿಂದ ಹೊರಗೆರೆಯನ್ನು ಎಳೆದು ಅಲ್ಲಲ್ಲಿ ಎರಡು ಮೂರು ಬಾರಿ ಬೆರಳ ತುದಿಯಿಂದ ಪೆನ್ಸಿಲ್ ನ ಚೂಪಾದ ತುದಿಯನ್ನು ಓರೆಯಾಗಿ ಆಡಿಸಿದೆ. ಸ್ಥೂಲವಾಗಿ ಮುಖದ ಆಕೃತಿ ಕಾಣಿಸತೊಡಗಿತು. ಆದರೆ ಇನ್ನೂ ಕಣ್ಣು, ಮೂಗು, ಕೂದಲಿನ ಕೆಳಗೆ ಮರೆಯಾಗಿರುವ ಕಿವಿ ಹಣೆ ಮುಚ್ಚಿರುವುದನ್ನು ತೋರಿಸಬೇಕು. ಅಂದಹಾಗೆ ಹೋದವಾರ ಕ್ಷೌರ ಮಾಡಿಸಿಕೊಂಡಿರುವುದರಿಂದ ಕೂದಲು ಉದ್ದವಾಗಿ ಹಣೆ ಮುಚ್ಚಿರಬೇಕೆ? ಅಥವಾ ಚಿಕ್ಕದಾಗಿ ಕಟ್ ಮಾಡಿಸಿಕೊಂಡಿದ್ದರೆ ಕಿವಿ ಪ್ರಧಾನವಾಗಿ ಕಾಣಬೇಕಲ್ಲವೆ.

ಥಟ್ ಎಂದು ಇನ್ನೊಂದು ವಿಷಯ ಹೊಳೆಯಿತು. ನನ್ನ ಕಣ್ಣು ಕಾಲೇಜ್ ದಿನಗಳಿಂದ ಕನ್ನಡಕ ಹಾಕಿಕೊಂಡು ಫ್ರೇಮಿನ ಆ ಜಾಗದಲ್ಲಿ ಒಂದು ಕಲೆ ಬಿದ್ದಿದೆ. ಹಾಗೆ ಕಣ್ಣಿನ ಕೆಳಗೂ ಅದೇ ಸದಾ ಮುಚ್ಚಿಕೊಳ್ಳುವ ದೇಹದ ಭಾಗ ತಿಳಿಯಾಗಿ ಕಾಣುವಂತೆ. ಅಂದರೆ ನನ್ನ ಕಣ್ಣಿನ ಕೊರತೆಗಳನ್ನು ಗಾಜಿನ ಹಿಂದೆ ಅವಿತಿಡಬಹುದು ಮನಸ್ಸು ಮಾಡಿದರೆ. ಯಾವ ಕನ್ನಡಕ ಹಾಕಿಕೊಳ್ಳಬೇಕು? ಎರಡು ಕನ್ನಡಕಗಳನ್ನು ಯಾವಾಗಲು ನನ್ನ ಬಳಿ ಇಟ್ಟುಕೊಂಡಿರುತ್ತೇನೆ. ಹೆಚ್ಚು ವತ್ಯಾಸ ಇಲ್ಲದಿದ್ದರೂ ಒಂದು ಸಾದಾ ಗ್ಲಾಸಿನ ತೆಳ್ಳನೆಯ ಹಗುರವಾದದ್ದು ಮತ್ತು ಪ್ರೋಗ್ರೆಸ್ಸಿವ್ ಲೆನ್ಸ್,ಇನ್ನೊಂದು ಫೋಟೋ ಗ್ರೇ. ಬಿಸಿಲೇರಿದಾಗ ಬಣ್ಣ ಬದಲಾಗುವ ಹಾಗೂ ನೆರಳಿಗೆ ಬಂದಾಗ ಸಾದಾ ಮಸೂರವಾಗುವ ಚಾಳೀಸು. ಈಗೇಕೆ ಅದೆಲ್ಲದರ ಯೋಚನೆ? ಮೊದಲು ನನ್ನ ಚಿತ್ರ ಬಿಡಿಸೋಣ.

ನಾನೊಬ್ಬ ಹವ್ಯಾಸಿ ಚಿತ್ರಕಾರ. ನನ್ನನ್ನು ನಾನೇ ಯಥಾವತ್ತಾಗಿ ಚಿತ್ರಿಸಿಕೊಳ್ಳಬೇಕು. ನನ್ನ ದೇಹದ ರೂಪು ರೇಷೆಗಳನ್ನು ತಿದ್ದಿ ಮೂಲ ಆಕಾರಕ್ಕೆ ಮೋಸ ಮಾಡಿ ಅಸ್ತಿತ್ವ ಕಳೆದು ಕೊಳ್ಳುವುದು ಬೇಡ ಎನಿಸಿತು. ಆದರೆ ನನ್ನ ರೂಪವನ್ನು ಚಿತ್ರದಲ್ಲಾದರೂ ಸರಿಪಡಿಸುವ ಸ್ವತಂತ್ರ ವಿಲ್ಲವೇ? ಆದರೆ ಇದು ಸ್ವತಂತ್ರದ ಪ್ರಶ್ನೆ ಅಲ್ಲ. ವಾಸ್ತವಿಕತೆಯ ಬಣ್ಣದ ನಿಜ ರೂಪದ ಇನ್ನೊಂದು ಸುಳ್ಳು ರೂಪವನ್ನು ತೋರಿಸುವುದು ನ್ಯಾಯವೇ? ನಾನು ಯಾರನ್ನು ಮೆಚ್ಚಿಸಲು, ಏನನ್ನು ಮರೆಮಾಚಲು ಯೋಚಿಸುತ್ತಿದ್ದೇನೆ. ವಿಚಿತ್ರ ತೊಳಲಾಟ. ಪ್ರಕ್ಷುಬ್ದ ಮನಸ್ಸು. ಬೆರಳ ನಡುವೆ ಬಿಗಿಯಾಗಿ ಹಿಡಿದಿದ್ದ ಇದ್ದಿಲು,ಹಲ್ಲಲ್ಲಿ ಕಚ್ಚಿ ಹಿಡಿದಿದ್ದ ಪೆನ್ಸಿಲ್, ಹಾಳೆ ಹಿಡಿದ ಎಡಗೈ ಹಿಂದೆ ಮುಂದೆ ಆಡಿಸುತ್ತ, ಬಲಗೈ ಸೊಂಟದ ಮೇಲೆ ಇಟ್ಟುಕೊಂಡು ನೋಡಿದೆ. ಬಿಳಿ ಹಾಳೆಯಲ್ಲಾ ಖಾಲಿ ಖಾಲಿ. ಎಲ್ಲವೂ ಅಸ್ಪಷ್ಟ. ತೀರ ಅಪರಿಚಿತ ಮುಖ. ಯಾರೀತ?

ಸೀಸದಕಡ್ಡಿ ಹಾಳೆಯ ಮೇಲೆ ಮೃದುವಾಗಿ ಚಲಿಸಲಾರಂಭಿಸಿತು. ಹಣೆ, ಕೂದಲು, ಕಿವಿಗಳು, ಹೊಳ್ಳೆಗಳು, ಒರಟಾದ ಪ್ರಾಯದ ಕಪ್ಪು ಬಿಳುಪಿನ ಗಡ್ಡ, ಆಳ ಗುಳಿಯ ಗಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ನೋಡುತ್ತಾ ಎಡಗೈನಲ್ಲಿ ಹಾಳೆಯನ್ನು ಸರಿಪಡಿಸುತ್ತಾ ಮುಖದ ಆಕೃತಿ ಮೂಡಲಾರಂಭಿಸಿತು. ಒಂಥರಾ ಸಮಾಧಾನ. ಮುಖ ಗುರುತಿಸಬಲ್ಲಷ್ಟು ಚೆನ್ನಾಗಿ ಮೂಡಿದೆ ಅನಿಸಿತು. ನನ್ನದೇ ಮುಖ ಎಂದು ಧೈರ್ಯದಿಂದ ಹೇಳಿಕೊಳ್ಳಬಹುದು. ರಬ್ಬರ್, ಬ್ಲೇಡ್ ಗಳ ಸಹಾಯದಿಂದ ಸ್ವಲ್ಪ ದುರಸ್ತಿ ಕಾರ್ಯ ಮುಂದುವರಿಸಿ ಕೊನೆಗೆ ತಲೆಯ ಮುಂದಿನ ಭಾಗ ಮುಖ ಸಮಾಧಾನ ತಂದರೂ, ತಲೆಯ ಹಿಂಭಾಗದ ವಿವರಗಳು ಕಾಣೆಯಾಗಿದ್ದವು. ಆದರೆ ಅದರ ಇರದಿರುವಿಕೆ ಅಷ್ಟು ಪ್ರಧಾನ ಎನ್ನಿಸಲಿಲ್ಲ. ಕನ್ನಡಕಕ್ಕೆ ಹಳೆಯ ಫ್ರೇಮನ್ನೇ ಹಾಕಿದೆ. ಗಾಜಿನಹಿಂದಿರುವ ಪುಟ್ಟ ಕಣ್ಣುಗಳಿಗೆ ಬಣ್ಣ ಅವಾಯ್ಡ್ ಮಾಡಬೇಕು ಎಂದುಕೊಂಡೆ. ಮತ್ತೊಮ್ಮೆ ಮೂಡಿರುವ ರೇಖಾಕೃತಿಯನ್ನು ನೋಡಿ, ಹಾಳೆಯನ್ನೊಮ್ಮೆ ದಿಟ್ಟಿಸಿದೆ. ಓ.ಕೆ. ಅನ್ನಿಸಿತು. ಇನ್ನು ಮುಖದ ಕೆಳಭಾಗ! ಪರವಾಗಿಲ್ಲ. ಹೆಚ್ಚು ಕಡಿಮೆ ಎಲ್ಲವನ್ನು ನನ್ನ ಜುಬ್ಬಾ ಮುಚ್ಚಿ ಹಾಕುತ್ತದೆಂದುಕೊಂಡೆ. ಕತ್ತಿನ ಕೆಳಭಾಗ ಹಾಗೂ ಶ್ವಾಸನಾಳದ ಮುಂಭಾಗದಲ್ಲಿ ಚರ್ಮದ ಸುಕ್ಕುಗಳು ಜಾಸ್ತಿಯಾಗಿದೆಯೇ, ಇತ್ತೀಚಿಗೆ. ನಾನು ಗಮನಿಸಿರಲಿಲ್ಲ. ಮುದಿತನದ ಸ್ಪಷ್ಟ ಸಂಕೇತ ಈ ನೆರಿಗೆಗಳು. ಇದನ್ನು ಮುಚ್ಚುವ ಅವಶ್ಯಕತೆ ಇಲ್ಲ.

ನನ್ನ ಮೇಲಿನ ಮೋಹ ಕಡಿಮೆ ಆಗುತ್ತಾ ಬಂದಂತೆ, ನನ್ನ ಚಿತ್ರದ ಮೇಲಿನ ಪ್ರೀತಿ ಹೆಚ್ಚಾಗುತ್ತಾಹೋಯಿತು. ಬಣ್ಣದಿಂದ ಚಿತ್ರದ ಗುಣಗಳನ್ನು ಉತ್ತಮಪಡಿಸಬಹುದು ಎಂದು ಅನಿಸಿತು. ಹಾಗೆಂದೇ ಉದ್ದೇಶಪೂರ್ವಕವಾಗಿಯೇ ಅಸ್ವಾಭಾವಿಕ ಬಣ್ಣಗಳನ್ನೇ ಉಪಯೋಗಿಸಲು ನಿರ್ಧರಿಸಿ ಬೇಜವಾಬ್ದಾರಿಯಿಂದ ಸಿಕ್ಕಸಿಕ್ಕ ಬಣ್ಣವನ್ನು ಒರಟಾಗಿ ಚೌಕಟ್ಟಿನಲ್ಲಿ ತುಂಬಿದೆ. ಶೇಡ್ ಮಾಡುವ ತಂಟೆಗೆ ಹೋಗಲಿಲ್ಲ. ಮುಖದ ಒಂದೊಂದೇ ಭಾಗಗಳ ಪ್ರತ್ಯೇಕತೆಯನ್ನು ಮಾತ್ರ ಉಳಿಸಿಕೊಂಡೆ. ಕುತ್ತಿಗೆಯನ್ನು ಸುತ್ತುವರೆದ ಜುಬ್ಬದ ಕಾಲರ್ ಸ್ವಲ್ಪ ಲೂಸ್ ಆಗಿದ್ದು, ಒಂದು ಗುಂಡಿಯ ಫೋಲ್ಡ್ ಎಡಕ್ಕೆ ವಾಲಿದೆ. ಗಾಢ ನೀಲಿಯಿಂದ ಆರಂಭಗೊಂಡು ಎದೆಗೂಡಿನಲ್ಲೇ ತುಂಡಾಗುವ ಹಾಳೆಯ ಕೊನೆಯವರೆಗೂ ಬಣ್ಣತಿಳಿಯಾಗುತ್ತ ಬಂದು ಚೌಕಟ್ಟಿನಲ್ಲಿ ಬೆರೆತು ಒಂದಾಗಿದೆ. ಭುಜಗಳು ಸಹಜವಾಗಿಯೇ ಇರುವಂತೆ ಕಂಡಿತು.ಆದರೆ...ತೋಳುಗಳಿಗೆ ತಮ್ಮದೇ ಆದ ಸ್ವಂತ ಅಸ್ತಿತ್ವ ಇಲ್ಲದಂತೆ ಭಾಸವಾಗುತ್ತಿತ್ತು.

ನಯವಾದ ಕುಂಚ ಬದಲಾಯಿಸಿ ನಾಜೂಕಾದ ಕೊನೆಯಹಂತದ ರಿಪೇರಿ ಕೆಲಸ ಆರಂಭಿಸುವಾಗ ಮನಸ್ಸು ಹಗುರವಾಗಿತ್ತು. ಜಲವರ್ಣ ವಾದುದರಿಂದ ಸ್ವಲ್ಪ ಹುಷಾರಾಗಿ ಕುಂಚವನ್ನು ಆಡಿಸಬೇಕು. ಗಡ್ಡಕ್ಕೆ ಹೆಚ್ಚು ಸಮಯಬೇಕಾಗಲಿಲ್ಲ. ಯಾವ ಬಣ್ಣದಲ್ಲಾದರೂ ಮುದಿತನ ಸಹಜತೆಯನ್ನು ಪಡೆಯುತ್ತದೆ. ಹಣೆಯ ನೆರಿಗೆ, ಸುಕ್ಕುಗಳು ಮತ್ತು ನನ್ನ ಬಾಲ್ಯದ ಮರೆಯಲಾರದ ಈಜುವಾಗ ಉಂಟಾದ ಕಲೆ ಎಲ್ಲವೂ ಸ್ಪಷ್ಟವಾಗಿತ್ತು. ಮೂಗು, ತುಟಿ ಅಂದುಕೊಂಡಂತೆ ಕಂಡಿತು. ಕೇಶವಿನ್ಯಾಸ ನಿರಾಸೆಯಾಯಿತು. ಪ್ರಯತ್ನಪಟ್ಟರೂ ಮುಖಕ್ಕೆ ಮತ್ತು ಕೂದಲು ತಾಳೆಯಾದಂತೆ ಕಂಡು ಬರಲಿಲ್ಲ. ಯಾರದೋ ಮುಖಕ್ಕೆ ಇನ್ನ್ಯಾರದೋ ಕೃತಕ ಟೋಫನ್ ಹಾಕಿದಂತೆ ಕಂಡಿತು. ಅದರೂ ಅದನ್ನು ಸರಿಮಾಡಬೇಕೆಂದು ನನಗೆ ಅನಿಸಲಿಲ್ಲ.

ಕುಂಚ ಕೆಳಗಿಟ್ಟು, ಮೈಮುರಿದು ಒಮ್ಮೆ ಕಣ್ಣು ಮುಚ್ಚಿ ತಲೆಯ ಕೂದಲುಗಳನ್ನು ಕತ್ತಿನ ಚಲನೆಯಿಂದ ಹಿಂದಕ್ಕೆ ದೂಕಿದೆ. ನೆಟ್ಟಗೆ ಕೂತು ಮುಗಿದ ಭಾವಚಿತ್ರದ ಕಡೆ ನೋಡಿದೆ. ಓ.ಕೆ. ಪರವಾಗಿಲ್ಲ, ವಯಸ್ಸಿಗೆ ಅಪವಾದವೆನಿಸುವ ಉದ್ದ ಕೂದಲು, ಗಾಯದ ಕಲೆ ಪ್ರಧಾನವಾದ ಸುಕ್ಕುಗಟ್ಟಿದ ಹಣೆ, ಸ್ವಲ್ಪ ಉದ್ದವಾದ ಮುಖದ ರಚನೆ, ಎದ್ದು ಕಾಣುವ ಎದುರು ಸುಳಿಯ ಬೈತಲು, ಸಂಪೂರ್ಣ ನೆರೆತಿರುವ ಬಿಳಿಯ ಗಡ್ಡ, ಆ ಬಿಳಿ ಕೂದಲಿನಲ್ಲು ಎದ್ದು ಕಾಣುವ ಆಳವಾದ ಗಡ್ಡದ ಗುಳಿ, ಕಣ್ಣನ್ನು ಭಾಗಶಃ ಮುಚ್ಚಿರುವ ಕನ್ನಡಕ, ಅದರ ಹಿಂದಿನ ಕಣ್ಣುಗಳು..

ಕಣ್ಣುಗಳು..ಹೌದು..ಯಾಕೋ.. ಎಡವಟ್ಟಾಗಿದೆ... ಅನಿಸತೊಡಗಿತು. ಯಾಕೆ? ಎಲ್ಲಿ ತಪ್ಪಾಯಿತು? ನನ್ನ ಕಲಾಕೌಶಲ್ಯದ ಇತಿಮಿತಿಯೇ?ಅಥವಾ ನಾನು ಈ ವರೆವಿಗೆ ನೋಡಿದ ನನ್ನ ಕಣ್ಣುಗಳು ಈ ರೀತಿಯೇ ಇದ್ದವೇ? ಒಂದು ಭಾವಚಿತ್ರದ ಅಂತಃಸತ್ವ ಅದರ ಕಣ್ಣುಗಳೇ ಅಲ್ಲವೆ. ಒಳಗೆ ಹೋಗಿ ಮತ್ತೆ ಕನ್ನಡಿಯಲ್ಲಿ ಕಣ್ಣುಗಳನ್ನು ನೋಡಿಕೊಂಡು ಚಿತ್ರದ ಬಳಿ ಬಂದು ನಿಂತೆ. ಸಮಾಧಾನವಾಗಲಿಲ್ಲ.

ಮುಖ ತೊಳೆದುಕೊಂಡು ಬಂದು ಮತ್ತೆ ಚಿತ್ರವನ್ನು ತದೇಕಚಿತ್ತದಿಂದ ನೋಡುತ್ತಾನಿಂತೆ. ಯಾರನ್ನೋ ನೋಡಿದ ಹಾಗನಿಸಿತು. ಯಾರಿವನು? ನಾನಂದುಕೊಂಡ ನಾನಿರುವಂತಾದರೂ ಇಲ್ಲವಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X