ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ಯಾಮನ ಮೇರಿ

By Staff
|
Google Oneindia Kannada News

Sham's Mary
ಬಾಳ ದಾರಿಯಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ? ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲಾಗದ ಈ ಜೀವನದ ಅರ್ಥವಾದರೂ ಏನು? ಸಾರ್ಥಕತೆಯಾದರೂ ಏನು? ಕಣ್ಣಂಚಿನಿಂದ ಉದುರುವ ನೋವಿನ ಹನಿಗಳನ್ನು ಆನಂದಭಾಷ್ಪ ಅಂತ ಅಂದುಕೊಳ್ಳುವಷ್ಟು 'ಜ್ಞಾನ' ಸಂಪಾದಿಸಿದ್ದ ಶ್ಯಾಮ ಕೊನೆಯಲ್ಲಿ ಕಂಡುಕೊಂಡ ದಾರಿಯಾವುದಾದರೂ ಯಾವುದು?

* ರಾಜೇಂದ್ರ ಎಚ್.ಆರ್.

ಹುಟ್ಟು, ಬದುಕು, ಸಾವು
ಹಲವು ಉತ್ತರಗಳ ಒಗಟು.
ಹುಟ್ಟು ಸಾವು ಅವನಂದಂತೆ, ಅವನಿಗನಿಸಿದಂತೆ.
ಬದುಕು ಮಾತ್ರ ನಿನ್ನಂತೆ, ನೀ ನೆನೆದಂತೆ.

*
ಅದಾಗಲೆ 11 ಗಂಟೆ, ಸೂರ್ಯ ಮೇಲೇರಿಯಾಗಿತ್ತು. ಶ್ಯಾಮನು ಹಾಸಿಗೆಯೆಂಬ ಹಾಸಿಗೆಯಲ್ಲಿ ಮಗ್ಗಲು ಬದಲಾಯಿಸಿ ಕಣ್ಣು ತೆರೆದನು. ಬೆಳಿಗ್ಗೆ ಎಂಬುದು ಅದಾಗಲೆ ಕಳೆದು ಹೋಗಿದೆ ಎಂದು ಅರಿವಾದಾಗ, ಸಾಧಿಸಲು ಎನೂ ಬಾಕಿಯಿಲ್ಲ ಎಂದು ನೆನೆಪಿಸಿಕೊಂಡು, ನಾಳೆ ಬೆಳಿಗ್ಗೆ ಎದ್ದರೆ ಆಯಿತು ಎಂದು ತೀರ್ಮಾನಿಸಿ, ನಿದ್ರಾದೇವಿಯ ಜೊತೆ ಕನಸನ್ನು ಹಂಚಿಕೊಳ್ಳಲು ಹೊಂಚುಹಾಕಿ, ಕಣ್ಣೊಳಗೆ ಕತ್ತಲೆ ತುಂಬಿಕೊಂಡನು.

ಶ್ಯಾಮನು ಸೋಮಾರಿ ಮನೆಯನ್ನು ಸೇರಿ 1 ವರ್ಷವಾಗಿದೆ. ಶನಿ ಮಹಾತ್ಮನು ಬಾಡಿಗೆರಹಿತ ಮನೆಯನ್ನು ನೀಡಿದ್ದಾನೆ. ಅಲ್ಲಿ ನಿದ್ರಾದೇವಿಯದೆ ಯಜಮಾನಿಕೆ. ಅವಳು ಅವನನ್ನು ತನ್ನ ಬಾಹುಗಳಲ್ಲೆ ಬಂಧಿಸಿಟ್ಟುಕೊಳ್ಳುತ್ತಾಳೆ.

ಇಂದಿನ ಮಟ್ಟಿಗೆ ಭೂಮಿಯಮೇಲೆ ಶ್ಯಾಮನಿಗಾಗಿ ಹಂಬಲಿಸುವ ಇನ್ನೊಂದು ಸಜೀವ ಇದೆ ಎಂಬುದಾದರೆ ಅದು ಶ್ಯಾಮನ ಪ್ರೀತಿಯ ಮೇರಿ ಮಾತ್ರ. ತಾನು ಕೆಲಸ ಕಳಕೊಂಡ ಮರುದಿನವೇ ಮುರಿದುಬಿದ್ದ ತನ್ನ ದರಿದ್ರ ಲವ್‍ಸ್ಟೋರಿಯ ನಾಯಕಿಯ ನೆನಪಿಗಾಗಿ ಎಲ್ಲಿಂದಲೊ ಬಂದು ಜೊತೆಯಾಗಿದ್ದ ನಾಯಿಗೆ ಮೇರಿಯೆಂದು ನಾಮಕರಣ ಮಾಡಿದ್ದನು. ಮೇರಿಯೆಂದು ಕರೆದೊಡನೆ ಅದು ಧನ್ಯಭಾವದಿಂದ ಇವನ ಬಳಿ ಬಂದು ನಿಲ್ಲುತಿತ್ತು. ತನ್ನ ಒಂದಾನೊಂದು ಕಾಲದ ಜೀವದ ಗೆಳತಿ ಮೇರಿಹೀಗೆಲ್ಲ ಕರೆದರೆ ಬರುತ್ತಿರಲಿಲ್ಲ ಎಂದು ನೆನಪಿಸಿಕೊಂಡು ಮಲಗಿದಲ್ಲೇ ಸಂತೋಷಿಸುತ್ತಿದ್ದನು. ಅರ್ಥವಿಲ್ಲದ ನಗು, ಅರ್ಥವಿಲ್ಲದ ಅಳು ಅವನಿಗಂಟಿದ ರೋಗಕ್ಕೆ ಸಾಕ್ಷಿಯಾಗಿತ್ತು. ಸಾಯುವವರೆಗೂ ಬದುಕಬೇಕೆಂದು ಕೊಂಡಿದ್ದವನು ಸಾಯುತ್ತ ಬದುಕುವಂತಾಗಿದ್ದನು.

ಇವನ ಪೂರ್ವಕಾಲದ ಪುಟಗಳನ್ನು ತೆರೆದರೆ ಕಂಡುಬರುವ ಅಂಶಗಳಿಷ್ಟು.
ಜನ್ಮನೀಡಿ ವಿಧಿಕರೆದನೆಂದು ಓಡಿಹೋದ ತಾಯಿಯ ಮುಖವನ್ನೆ ಕಾಣದ ಶ್ಯಾಮನು, ತಂದೆ ಸುಬ್ಬರಾಯರ ಆರೈಕೆಯಲ್ಲಿ ಸುಖವಾಗಿಯೆ ಕಳೆದಿದ್ದನು. ತನ್ನ ದುಡಿವೆಲ್ಲ ಮಗನಿಗೆ, ನನ್ನ ಜೀವನವೇ ಮಗನ ಸುಖ, ಸಂತೋಷಕ್ಕೆ ಎಂಬಂತೆ ಬಾಳಿದವರು ಸುಬ್ಬರಾಯರು. ಎದೆ ಹಾಲಿಗಾಗಿ ಅತ್ತಾಗ, ಆಟವಾಡುತ ಬಿದ್ದಾಗ, ಜ್ವರ ಬಂದು ನರಳಿದಾಗ, ತಾಯಿಯ ಅಗತ್ಯವನ್ನು ಮರೆಸಿದವರು ಸುಬ್ಬರಾಯರು. ಕಾಲೇಜ್ ಮುಗಿಸಿ ಹೊರಬರುತಿದ್ದಂತೆಯೆ ಸುಲಭವಾಗಿಯೆ ಶ್ಯಾಮ ಕೆಲಸವನ್ನು ಸಂಪಾದಿಸಿದ್ದನು ಅಥವ ಹಾಗೆಂದುಕೊಂಡಿದ್ದನು. ಅವನ ಕೆಲಸಕ್ಕಾಗಿ ಹಲವು ಮನೆಗಳ ಬಾಗಿಲು ಕಾದ ಅನುಭವಗಳನ್ನು ರಾಯರು ಶ್ಯಾಮನೊಂದಿಗೆ ಹಂಚಿಕೊಂಡವರಲ್ಲ. ತಾನು ಬಯಸುವ ಮುಂಚೆಯೆ ಎಲ್ಲವನ್ನು ಪಡೆದಿದ್ದ ಶ್ಯಾಮ. ಈ ಮೇಲಿನ ಕಾರಣಗಳಿಂದ ಜೀವನದ ರೋಗಗ್ರಸ್ಥ ಮುಖಗಳನ್ನು ಕನಸಿನಲ್ಲಿಯೂ ಶ್ಯಾಮ ಕಂಡಿರಲಿಲ್ಲ.

ಈ ಕಾಲ ಘಟ್ಟದಲ್ಲಿ ಅಲೆಮಾರಿ ನಾಯಿಯೊಂದು ಶ್ಯಾಮನ ಜೊತೆಯಾಯಿತು... ಬನ್‍ನ ರುಚಿಹತ್ತಿ ತನ್ನ ಬಳಿ ಬಂದಿದೆಯೋ ಅಥವ ಬನ್ನಿನ ಋಣ ತೀರಿಸಲಿಕ್ಕಾಗಿ ತನ್ನ ಬಳಿ ಬಂದಿದೆಯೊ? ಆಗ ತಾನೆ ಕೈ ಸೇರುತ್ತಿರುವ ಸಂಬಳವನ್ನು ಮನೆ ಪಕ್ಕದ ಬ್ಯಾಂಕ್‍ನಲ್ಲಿ ಎಫ್.ಡಿ ಮಾಡುವುದೊಳಿತೊ ಅಥವಾ ಶೇರ್ ನಲ್ಲಿ ತೊಡಗಿಸುವುದೊಳಿತೊ? ತಾನು ಪ್ರೀತಿಸುತ್ತಿರುವ ಮೇರಿಯನ್ನು ಅವಳ ಧರ್ಮದಂತೆ ತೀರ್ಥಕುಡಿದು ಮದುವೆಯಾಗುವುದೊ ಅಥವ ಪಕ್ಕದ ರಸ್ತೆಯ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಮೂರು ಗಂಟು ಹಾಕುವುದೊ?

ಹೀಗೆಲ್ಲ ಸ್ವತಂತ್ರವಾಗಿ ಯೋಚಿಸುತಿದ್ದ ಶ್ಯಾಮನನ್ನು ನೆನೆದು ಸುಬ್ಬರಾಯರು ನಕ್ಕಂತೆ ನಟಿಸಿ ತೀರ್ಥಯಾತ್ರೆಗೆ ಹೊರಟರು. ಕರ್ತವ್ಯ ಪೂರೈಸಿದ ಖುಷಿ ಅವರನ್ನಾವರಿಸಿತ್ತು. ಮಗನ ಅಗತ್ಯಗಳಿಗೆ ನನ್ನ ಅವಶ್ಯವಿಲ್ಲದಿರುವುದ ನೆನೆದು, ಬೇಗ ಬರುವೆನೆಂದು ಸುಳ್ಳು ಹೇಳಿ ಹೊರಟಿದ್ದವರು, ಹಿಂದಿರುಗುವ ಯೋಚನೆಯನ್ನೆ ಮಾಡಿರಲಿಲ್ಲ. ತಂದೆಯ ಕಣ್ಣಂಚಿನ ನೋವಿನ ಹನಿಗಳನ್ನು ಆನಂದಬಾಷ್ಪ ಎಂದು ತಿಳಿಯುವಷ್ಟು ಜ್ಞಾನವನ್ನು ಮಾತ್ರ ಶ್ಯಾಮ ಸಂಪಾದಿಸಿದ್ದನು.

ಇತ್ತ ಮೇರಿಯ ಮಾವ ಎಲ್ವಿನನು ಶ್ಯಾಮನು ಮನೆಯೊಂದನ್ನು ಖರೀದಿಸಿದ ನಂತರವೆ ಮದುವೆ ಅಂದನು. ಮೇರಿಯು ಹುಂ ಗುಟ್ಟಿದಳು. ನೊಂದ ಶ್ಯಾಮನ ಸಮಾಧಾನಕ್ಕೆ ಎಲ್ವಿನನು ಸುಬ್ಬರಾಯರ ಜೀವಮಾನದ ಸಾಧನೆಗೆ ಸಾಕ್ಷಿಯಾಗಿ ನಿಂತಿದ್ದ ಸಣ್ಣಮನೆಯ ಮೇಲೆ ಸಾಧ್ಯವಾದಷ್ಟು ಲೋನ್ ಕೊಡಿಸುವ ಭರವಸೆಇತ್ತನು. ಶ್ಯಾಮನ ಜೊತೆಗಿದ್ದ ನಾಯಿಯು ಯಾವುದರ ಅರಿವು ಇಲ್ಲದೆ ಸುಬ್ಬರಾಯರನ್ನು ಕಾಣದೆ ಕಂಗೆಟ್ಟಿತ್ತು. 'ಜಾಸ್ತಿ ಕೆಲಸ-ಜಾಸ್ತಿ ಸಂಬಳದ' ಕಂಪೆನಿಯ ಹೊಸ ಯೋಜನೆಗೆ ಹೆಸರು ನೊಂದಾಯಿಸಿ ತಡವಾಗಿ ಮನೆತಲುಪುತಿದ್ದ ಶ್ಯಾಮನಿಗೆ ಮನೆಯಲ್ಲಿ ಎಲ್ಲವು ಸರಿಇಲ್ಲ ಎಂದೆನಿಸಿದಾಗ ಮಾತ್ರ ತಂದೆಯ ಅನುಪಸ್ಥಿತಿ ಅರಿವಾಗುತಿತ್ತು. ಆದರು ಕೆಲವೇ ತಿಂಗಳುಗಳಲ್ಲಿ ಮೇರಿಯನ್ನು ಮದುವೆಯಾಗುವ ರೋಮಾಂಚನವು ಎಲ್ಲವನ್ನೂ ಮರೆಸುತಿತ್ತು.

ಜಗತ್ತಿನ ಯಾವುದೋ ಒಂದು ಮೂಲೆಯಲ್ಲಾದ ಆರ್ಥಿಕ ಕುಸಿತದ ಪರಿಣಾಮಗಳು ಭಾರತದ ಬಡ ಪ್ರಜೆಗಳ ಮೇಲಾಯಿತು. ಹಲವರು ಕೆಲಸ ಕಳಕೊಂಡರು. ಇವುಗಳ ಅರಿವೆ ಇಲ್ಲದ ಮಾನ್ಯ ಕೈಗಾರಿಕಾ ಮಂತ್ರಿಗಳು, ಸನ್ಮಾನ ಸಮಾರಂಭದಲ್ಲಿ ಈ ಸಮಸ್ಯೆ ತಾತ್ಕಾಲಿಕ ಎಂದು ಹೇಳುತ್ತ ಶಾಲು ಹೊದಿಸಿಕೊಂಡು ಬೆಚ್ಚಗಾದರು. ಆರ್ಥಿಕ ಕುಸಿತದ ಮೊದಲ ಪರಿಣಾಮವಾಗಿ 'ಜಾಸ್ತಿ ಕೆಲಸ-ಜಾಸ್ತಿ ಸಂಬಳದ' ಯೋಜನೆ ರದ್ದಾಯಿತು. ಕೆಲವೆ ದಿನಗಳಲ್ಲಿ ಕೆಲಸವೇ ಇಲ್ಲವಾಯಿತು, ನಂತರ ಸಂಬಳವೂ. ಈ ಬೆಳವಣಿಗೆಗಳಿಂದಾಗಿ ಶ್ಯಾಮ ಮನೆ ಸೇರಿದ. ಶ್ಯಾಮನ ಬ್ಯಾಂಕ್ ಸಾಲ ರದ್ದಾಯಿತು, ಜೊತೆಗೆ ಮೇರಿಯ ಜೊತೆಗಿನ ಮದುವೆಯೂ. ಶ್ಯಾಮ ಒಬ್ಬಂಟಿಗನಾದ, ಶುಭ ಲಗ್ನದಲ್ಲಿ ಅಲೆಮಾರಿ ನಾಯಿಗೆ ಮೇರಿ ಎಂದು ನಾಮಕರಣ ಮಾಡಿ ನಿಟ್ಟುಸಿರು ಬಿಟ್ಟ. ವಿನ್‍ಸ್ಟ‍ನ್ ಚರ್ಚ್‍ನಲ್ಲಿ ಮೇರಿ-ಥಾಮಸ್ ಸತಿ-ಪತಿಗಳಾದರು. ಸುದ್ದಿ ತಿಳಿದ ಶ್ಯಾಮ ಮಾರ್ಕಂಡೇಯ್ಯ ಬಾರ್‌ನಲ್ಲಿ ತೀರ್ಥಕುಡಿದು ಪವಿತ್ರನಾದ. ಸುಬ್ಬರಾಯರು ಕೊರೆಯುವ ಹಿಮ ಚಳಿಯಲ್ಲಿ, ಹಿಮಾಲಯದ ತಪ್ಪಲಲ್ಲಿ ಏನನ್ನೋ ಭರ್ಜರಿಯಾಗಿ ಸಾಧಿಸಿದ ಭಾವದಲ್ಲಿ ಧ್ಯಾನ ಮಗ್ನರಾಗಿದ್ದರು.

ಶ್ಯಾಮನ ಜೀವನೌಕೆ ಒಂಟಿ ನಾವಿಕನ ಹಂಗಿಸುತ್ತ ಕೆಲವೇ ದಿನಗಳಲ್ಲಿ ದಿಕ್ಕು ಬದಲಿಸಿತು.
ಕತ್ತಲೆ ಕೊಣೆಯಲ್ಲೆ ಸಮಯ ಕಳೆಯುವಂತಾದ ಶ್ಯಾಮ ತನ್ನ ನೋವು ಮರೆಯಲು ಅತಿ ಅನಿಸುವಷ್ಟು ಮೇರಿಯನ್ನು ಹಾಗೂ ಕುಡಿತವನ್ನು ನೆಚ್ಚಿಕೊಂಡಿದ್ದ. ಕುಡಿದ ಮತ್ತಿನಲ್ಲಿ ಒಮ್ಮೆ ಮೇರಿಗು ಕುಡಿಸಿದ್ದ. ಮೇರಿಗೆ ನೋವು ಉಮ್ಮಳಿಸಿ ಬಂದಿತ್ತು. ತಾನು ಹೆಣ್ಣೆಂದು ಮನೆ ಬಿಟ್ಟು ಓಡಿಸಿದ್ದು, ದಾರಿ ಬದಿಯ ಕಜ್ಜಿ ನಾಯಿಗಳು ತನ್ನನ್ನು ಅಸಹ್ಯವಾಗಿ ನೋಡಿದ ನೆನಪುಗಳ ಅಲೆ ಎದ್ದು ಬಂದು, ಲೋಕ ಅನ್ಯಾಯಗಳಿಂದಲೇ ತುಂಬಿ ಹೋಗಿದೆ ಅನಿಸಿತ್ತು. ಜನರೇಕೆ ಬಣ್ಣದ ಬಾಟಲಿಯ ಅಂಗಡಿಯ ಮುಂದೆ ವಿಚಿತ್ರವಾಗಿ ತೂರಾಡುತ್ತ, ಜ್ಯೂಸ್ ಹೀರುತ್ತಾ ನಿಂತಿರುತ್ತಾರೆ ಎಂಬುದು ಮೇರಿಗೆ ಅರ್ಥವಾಗಿತ್ತು. ತನ್ನ ಮೂರನೆ ಕಣ್ಣನ್ನು ತೆರೆಸಿದ ಯಜಮಾನನ ಮೇಲಿದ್ದ ಪ್ರೀತಿ ದುಪ್ಪಟ್ಟಾಗಿತ್ತು. ಮನದ ದುಗುಡ ದಡಸೇರದಾಗ ಜೋರಾಗಿ ಬಿಕ್ಕಳಿಸುತಿದ್ದ ಶ್ಯಾಮನ ದುಖಕ್ಕೆ, ಕಂದು ಮಿಶ್ರಿತ ಬಿಳಿ ಬಣ್ಣದ ಮೇರಿಯು, ಕಪ್ಪು ಕಣ್ಣುಗಳಲ್ಲಿ ನೀರು ತುಂಬಿಕೊಂಡು ಪಾಲುದಾರಿಯಾಗುತಿತ್ತು.

ಶನಿಯ ದರ್ಶನವಾಗಿ, ಬದುಕಲು ಅವಕಾಶವೇ ಇಲ್ಲವೆನಿಸಿ ವಿಧಿಯನ್ನು ಹಳಿಯುತ್ತ ಹೊಸದಿನಗಳತ್ತ ಕುರುಡು ನೋಟವ ಬೀರುವ ಶ್ಯಾಮನಿಗೆ ತಂದೆಯ ನೆನಪು ಅತಿಯಾಗಿ ಕಾಡುತಿದೆ. ನಾನೇಕೆ ಒಬ್ಬಂಟಿಗನಾದೆ? ಒಮ್ಮಿಂದೊಮ್ಮೆಲೆ ನಾನೇಕೆ ಎಲ್ಲರಿಗೂ ಬೇಡವಾದೆ? ಎಂಬಂತ ಉತ್ತರ ಕಾಣದ ಪ್ರಶ್ನೆಗಳನ್ನು ಹುಟ್ಟಿಸಿ, ಉತ್ತರ ಹುಡುಕ ಹೊರಟಾಗ ನಾನೇಕೆ ಬದುಕಿರುವೆನೆಂಬ ಸರಳ ಪ್ರಶ್ನೆ ಎದುರಾಗಿ ಮುಗುಳುನಗುತಿತ್ತು. ಕೊನೆಗೆ ಭೂಮಿಗೆ ನಾ ಭಾರವೆನಿಸಿ ಸಾಯುವ ತೀರ್ಮಾನ ಮಾಡಿದ. ತಿಂಗಳಾಂತ್ಯಕ್ಕೆ ಬಂದ ತಂದೆಯ ಪೆನ್ಷ್‍ನ್ ಹಣದಲ್ಲಿ ಕೀಟನಾಶಕವನ್ನು ಖರೀದಿಸಿ ತಂದ. ಇತ್ತ ಸುಬ್ಬಾರಾಯರು ಮಗನ ಸಂಸಾರವನ್ನು ದೂರದಿಂದ ನೋಡಿ ಹೋಗುವ ಹೊಸ ಆಸೆಯನ್ನು ಹುಟ್ಟಿಸಿಕೊಂಡು ಧ್ಯಾನದಲ್ಲೂ ನರಳುತಿದ್ದರು. ಇವುಗಳನೆಲ್ಲ ಕಂಡು ವಿಧಿ ಜೋರಾಗಿ ನಗುತ್ತಲಿದ್ದ.

ವಾರಕಳೆದ ನಂತರವೂ ಸಾಯುವ ತೀರ್ಮಾನ ಸ್ಥಿರವಾಗಿ ಮನದಲಿ ನಿಂತು, ಪಕ್ಕದಲ್ಲೆ ಸುಳಿದಾಡುತಲಿದ್ದ ಮೇರಿ ಯೋಚನೆಗೆ ಕಾರಣವಾದಳು. ಸ್ವಲ್ಪ ಯೋಚಿಸಿ ಮೇರಿಯನ್ನು ಕರೆದುಕೊಂಡು ಪಕ್ಕದ ಊರಿಗೆ ಪ್ರಯಾಣಿಸಿ, ಕೊನೆಯ ಬಾರಿಗೆ ಎಂಬಂತೆ ಬ್ರೆಡ್ ಒಂದನ್ನು ಕೊಂಡು ಮೇರಿಗೆ ತಿನ್ನಿಸುತ್ತಲೇ ಅವಳ ಕಣ್ಣಕೋನಗಳಿಂದ ಕಣ್ಮರೆಯಾದ. ನೋವು ಅತಿಯಾಗಿ ಕಾಡಿತು. ತನ್ನ ಜೀವನದಲ್ಲಿ ಮಾಡಿದ ಮೊದಲ ಪಾಪ ಇದೇ ಅನಿಸಿತು. ಸಾಯುವ ನಿರ್ಧಾರದಲ್ಲಿ ಯಾವುದೇ ಬದಲಾವಣೆಗಳಿರಲಿಲ್ಲ. ಮನೆತಲುಪುವ ಮುಂಚೆ ಕುತ್ತಿಗೆಯಲ್ಲಿದ್ದ ಚಿನ್ನದಸರ, ಜೋಬಿನಲ್ಲಿದ 1400 ರೂಪಾಯಿಗಳನ್ನು ಮನೆಯ ಪಕ್ಕದ ರೋಡಿನಲ್ಲಿದ್ದ ಗಾಳಿಆಂಜನೇಯ ದೇವಸ್ಥಾನದ ಹುಂಡಿಗೆ ಸೇರಿಸಿ ಮನೆಸೇರಿದ.

ಸಾಯುವ ಆತುರತೆ ಜಾಸ್ತಿಯಾಗಿ, ಕೀಟನಾಶಕವನ್ನು ಒಂದು ಸಣ್ಣನೆಯ ಲೋಟಕ್ಕೆ ಬಗ್ಗಿಸಿದ. ಯಾವಾಗಲು ಆ ಸಣ್ಣಲೋಟದಲ್ಲಿ ಮದ್ಯ ಹೀರುತಿದ್ದ. ಇಂದು ಕೊನೆಯ ಬಾರಿಗೆ ಏನನ್ನಾದರು ಕುಡಿಯಲಿದ್ದ. ಒಮ್ಮೆ ಮಾತ್ರ ತಂದೆಯ ನೆನಪು ಕಾಡಿತು. ಆದರೆ ಮೇರಿ! ಮೇರಿ ಎಲ್ಲಿರುವಳೋ? ಈ ರಾತ್ರಿ ಯಾರು ಅನ್ನ ಹಾಕುವರೋ? ಕ್ಷಣದಲ್ಲಿ ಇವೆಲ್ಲ ಇಹಲೋಕದ ನಂಟುಗಳೆನಿಸಿ, ಇವುಗಳಿಂದ ಮುಕ್ತಿ ಸಿಗುವುದ ನೆನೆದು, ಹಸಿರು ಬಣ್ಣದ ದ್ರವ್ಯವನ್ನು ಕೈಗೆತ್ತಿಕೊಂಡ. ವಾಸನೆ ಅಸಹನೀಯವೆನಿಸಿತು. ಸಣ್ಣ ಯೋಚನೆ ತಲೆಯಲಿ ಮೊಳೆಯಿತು. ಸಾಯುವ ಮುನ್ನ ಮದ್ಯಸೇವಿಸಿದರೆ, ನೋವಿನ ಅರಿವೆ ಆಗದಿರಬಹುದು ಎಂದೆನಿಸಿ, ಕೂಡಲೆ ಹೊರಟ. ಆದರೆ ಜೇಬಿನಲ್ಲಿದ್ದ ಹಣ ದೇವರ ಹುಂಡಿ ಸೇರಿ ಹೆಚ್ಚು ಸಮಯವಾಗಿರಲಿಲ್ಲ. ಹಾಗಾಗಿ ನಿಂತು ಯೋಚಿಸಿ, ಸಾಯುವವನಿಗೆ ಭಯವಿರಬಾರದೆನಿಸಿ ಮತ್ತೆ ಕೈಗೆ ವಿಷದ ಲೋಟ ಸೇರಿಸಿದ.

ಕಣ್ಣು ಮುಚ್ಚಿದ, ಯಾವ ದೇವರ ನಾಮವು ನೆನಪಿಗೆ ಬರಲಿಲ್ಲ. ಆದರೆ ನಿಷ್ಕ್ರಿಯವಾಗುವ ಮುನ್ನ ಮೆದುಳು ಕೊನೆಯ ಬಾರಿಗೆಂಬಂತೆ ಕೆಲಸ ಮಾಡಿತು. ತಂದೆ ಪಾಪ ಪರಿಹಾರಕ್ಕಾಗಿ ದೇವರಿಗೆ ಕಟ್ಟಿಡುತಿದ್ದ ದುಡ್ದು ನೆನಪಾಯಿತು, ಚಿಲ್ಲರೆಯಾದರು 250ರಷ್ಟಿತ್ತು. ಅಷ್ಟನ್ನೂ ಬಾರ್‌ನ ಗಲ್ಲಾ ಪೆಟ್ಟಿಗೆಗೆ ಸೆರಿಸಿ, ಸಾಯುವ ಧೈರ್ಯ ಸಂಪಾದಿಸಿ ಮನೆ ತಲುಪಿದನು. ಯಾವುದೇ ಆಸೆ, ಆಕಾಂಕ್ಷೆ ಇಲ್ಲದ ಜೀವನಕ್ಕೆ ವಿದಾಯ ಹೇಳುವ ಮುನ್ನ ಮತ್ತೆ ಮೇರಿ ಕಾಡಿದಳು. ಕಣ್ಮುಂದೆ ಬಂದಳು, ದೂರ ಬಿಟ್ಟು ಬಂದಿದ್ದ ಮೇರಿ ಪುನಃ ಬಂದಂತೆ ಅನಿಸಿತು. ಮನಸ್ಸು ನನ್ನ ವಂಚಿಸುತ್ತಿದೆ ಅಂದುಕೊಳ್ಳುತ್ತಲೆ ಪ್ರಜ್ಞಾಹೀನಸ್ಥಿತಿ ತಲುಪಿದನು. ಸಾಯುವ ಮುಂಚಿನ ಸ್ಥಿತಿ ಅದು ಎನಿಸಿತು.

ಯಾರನ್ನು ಕಾಯದ ಸಮಯ ಹಂಗಿಲ್ಲದಂತೆ ಮುಂದೊಡಿತು. ಉತ್ಸಾಹದಲ್ಲಿ ಹುಟ್ಟಿದ ಸೂರ್ಯ ಕತ್ತಲೆಯನ್ನು ನುಂಗಿತ್ತು.

ಶ್ಯಾಮ ಕಣ್‍ತೆರೆದ, ತಾನು ಸಾಯಲಿಲ್ಲವೇ ಅಂದುಕೊಳ್ಳುವಾಗಲೆ ಭಯ ಹೆಚ್ಚಾಯಿತು, ಪಕ್ಕದಲ್ಲೆ ವಿಷದ ಲೋಟ ಕಾಲಿಯಾಗಿ ಬಿದ್ದಿದೆ. ಸ್ವಲ್ಪ ದೂರದಲ್ಲಿ ಶ್ಯಾಮನ ಪ್ರೀತಿಯ ಮೇರಿ ಕೊಡ! ಇನ್ನೆಂದೂ ಶ್ಯಾಮನ ಕಾಡಲಾರದಂತೆ, ಅದೆಲ್ಲೋ ದೂರದಲ್ಲಿ ಬಿಟ್ಟುಬಂದಿದ್ದರು ಶ್ಯಾಮನ ಮನಸ್ಥಿತಿಯನ್ನು ಅರಿತಿದ್ದ ಮೇರಿಗೆ ಹಿಂತಿರುಗಿ ಬರವುದು ಕಷ್ಟವಾಗಲಿಲ್ಲ, ದಣಿವಾಗಿದ್ದರಿಂದ ವಿಷಕುಡಿಯುವುದು ಸುಲಭವಾಯಿತು. ವಿಷ ಜೀವಹಿಂಡಿದರು ಸ್ವಲ್ಪವು ನರಳದೆ ಕಣ್ಣಿನಲ್ಲಿ ಸಂತೃಪ್ತಿಯ ನೀರು ತುಂಬಿಕೊಂಡು ಪ್ರಾಣ ಬಿಟ್ಟಿದ್ದಳು ಮೇರಿ. ಶ್ಯಾಮನಿಗೆ ಎಲ್ಲವೂ ಅರ್ಥವಾಯಿತು, ಅಳಲೂ ಶಕ್ತಿ ಇರಲಿಲ್ಲ. ಸುಮ್ಮನೆ ಹೊರನಡೆದ. ನಡೆಯುತ್ತಲೆ ಇದ್ದ. ಬದುಕಲು ಕಾರಣ ಸಂಪಾದಿಸಲು.. ಜೀವನದ ಅರ್ಥ ಹುಡುಕಲು...

***
ಶ್ಯಾಮನ ಜೀವನಕ್ಕೆ ಹೊಸದಿಕ್ಕು ಸಿಗಲಿ, ತನ್ಮೂಲಕ ಮೇರಿಯ ಆತ್ಮಕ್ಕೆ ಶಾಂತಿಸಿಗಲಿ ಎಂದು ಹಾರೈಸುತ್ತ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X