ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಂದು ಸಂಜೆ

|
Google Oneindia Kannada News

Oh! She looks so beautiful in candlelight
ಸೂರ್ಯಾಸ್ತವಾಗುತ್ತಿತ್ತು. ಸಂಜೆ, 6.30ಯ ಸಮಯ. ಕೈಕಾಲು ಮುಖ ತೊಳೆದು, ಟ್ರಿಮ್ ಆಗಿ ಡ್ರೆಸ್ ಮಾಡಿಕೊಂಡು ಅವಳ ಮನೆಗೆ ಹೊರಟೆ. ನನ್ನ ಹತ್ರ ಆ ದೂದ್‌ವಾಲಾ ಟೈಪ್ ಹ್ಯಾಂಡಲ್ ಇರುವ ಅಟ್ಲಸ್ ಸೈಕಲ್ ಇತ್ತು. ಅದನ್ನು ತೆಗೆದುಕೊಂಡು ಹೋಗೋಕೆ ಇಷ್ಟವಾಗಲಿಲ್ಲ. ನಡೆದುಕೊಂಡೆ ಹೋದೆ. ಅವಳಿಗಿನ್ನು ಕಾಲೇಜ್ ಶುರುವಾಗಿರಲಿಲ್ಲ. ನನಗೆ ಶುರುವಾಗಿ 15 ದಿವಸಗಳಾಗಿದ್ದವು. ಅವಳಿಗೇನೋ ಕಾಲೇಜ್ ಬಗ್ಗೆ ತಿಳಿದುಕೊಳ್ಳಬೇಕಿತ್ತಂತೆ. "ಯಾವಾಗಲಾದರೂ ಸಂಜೆ ಫ್ರೀ ಇದ್ದಾಗ ಬಾ" ಅಂತ ಮೊನ್ನೆ ಸಿಕ್ಕಾಗ ಹೇಳಿದ್ದಳು.

-1-

"ಶೃತಿ ಇದಾಳಾ?"
"ಹಾ ಇದಾಳೇ ಬನ್ನಿ. ಏನ್ನಮ್ಮಾ ಶೃತಿ, ಯಾರೋ ಬಂದಿದಾರೇ ನಿನ್ನ ಭೇಟಿಯಾಗೊಕೆ. ಒಳಗೆ ಬನ್ನಿ" ಹಾಲ್‌ನಲ್ಲಿ ಕುಳಿತಿದ್ದ ಅವಳ ಚಿಕ್ಕಪ್ಪ ಕರೆದರು.
ಅವರು 5-6 ಜನ ಕೈಕೆಳಗೆ ಕೆಲಸ ಮಾಡುವರ ಜೊತೆ ಏನೊ ಚರ್ಚಿಸುತ್ತಿದ್ದರು.
"ಛೇ! ಶಿವನ (ಪಾರ್ವತಿ) ಪೂಜೆಗೇ ಅಂತಾ ಬಂದರೆ, ಕರಡಿಗಳೇ ಕುಳಿತಿದೆಯಲ್ಲಪ್ಪಾ!" ಅಂದುಕೊಂಡು, ಅಲ್ಲೇ ಬಾಗಿಲ ಬಳಿ ನಿಂತೆ.
"ಓ! ಕಿರಣ್, ಬಾ ಒಳಗ ಬಾ" ಅಂತಾ ಹೇಳ್ತಾನೇ ಒಳಗಿನಿಂದ ಬಂದಳು ಶೃತಿ.
"ನಿನ್ನೇ ಮಾತಾಡಿಸೋಣ ಅಂತಾ ಬಂದೇ. ಇವರೆಲ್ಲಾ ಇದ್ದಾರೆ. ಮತ್ತೊಮ್ಮ ಬರ್‍ತೀನಿ ಬಿಡು"
"ಹೇ...ಇಲ್ಲಾ, ಅವರು ಇನೇನೂ ಹೊಗ್ತಾರೇ, ಕೂತ್ಕೊಳೋ"
ನಾನು ಸೊಫಾ ಮೇಲೆ ಕುಳಿತಿದ್ದೇ ತಡ, ಅವರ ಚಿಕ್ಕಪ್ಪ ಎದ್ದೇ ಬಿಟ್ಟರು.
"ನಾನಿನ್ನು ಹೊರಡುತಿನಮ್ಮಾ ಶೃತಿ, ಮನೆ ಕಡೇ ಜೋಪಾನ" ಅಂತಾ ಹೊರನಡೆದರು. ಅವರನ್ನು ಹೊರಗೇ ಬಿಟ್ಟು, ಗೇಟ್ ಹಾಕಿಕೊಂಡು, ಬಾಗಿಲ ಮುಂದು ಮಾಡಿ, ಒಳಗೆ ಬಂದಳು ಅವಳು.

ಲೈಟ್ ಆನ್ ಮಾಡಿ, ನನ್ನ ಎದುರಿಗಿದ್ದ ಟೇಬಲ್‌ನ ಆಚೆಗೇ ಚೇರ್ ಮೇಲೆ ವಿರಾಮಿಸುತ್ತಾ -
"ಹೇಗಿದಿಯಾ ಕಿರಣ್?"
"ಚೆನ್ನಾಗಿದ್ದೀನಿ ಶೃತಿ"
"ಕಾಫೀ, ಟೀ, ಏನೂ ತರಲಿ?"
"ಏನೂ ಬೇಡ ಕಣೇ, ಅವೆಲ್ಲಾ ನಾನು ಕುಡಿಯೊಲ್ಲಾ"
"ಪಾನಕ ಮಾಡಲಾ?"
"ಬೇಡ...ಬೇಡ...ಪರವಾಗಿಲ್ಲಾ. ಆರಾಮಾಗಿ ಕೂತ್ಕೊ"
"ಎಲ್ಲಿ ಅಮ್ಮ, ತಂಗಿ ಕಾಣಿಸುತ್ತಿಲ್ಲಾ?"
"ಇಲ್ಲಾ ಅವರು ಶಾಪಿಂಗ್‌ಗೆ ಹೋಗಿದ್ದಾರೆ. ಬರೋದು ಲೇಟೇ ಆಗುತ್ತೆ. ಮನೆಯಲ್ಲಿ ಯಾರು ಇಲ್ಲ"

"ಓಹ್! ಹಾಗೇಂದರೇ, ಮನೆಯಲ್ಲಿ ನಾವಿಬ್ಬರೇ!" ಮನದಲ್ಲೇ ನುಡಿದೆ. ಹಲ್ಲಿ ಲೋಚ್ಚಗುಟ್ಟಿತು.

"ಈ ಮನೆ ಚೆನ್ನಾಗಿದೆಯಲ್ಲಾ. ಎಷ್ಟು ವರ್ಷವಾಯಿತು ಬಂದು?"
"ಹ್ಹ...ಹೌದು, ತುಂಬಾ ಚೆನ್ನಾಗಿದೆ. ಮುಂದಿನ ತಿಂಗಳು ಮುಗಿದರೆ 1 ವರ್ಷ ಆಗುತ್ತೆ"
"ಮತ್ತೇ, ನೀನು ಹೇಗಿದಿಯಾ? ರಜೆಯಲ್ಲಿ ಏನೂ ಮಾಡಿದೆ?"
"ನಾನಂತು ಫಸ್ಟ್ ಕ್ಲಾಸ್ ಆಗಿದೀನಿ ಕಿರಣ್. ಬೆಂಗಳೂರಿಗೆ ಹೋಗಿದ್ದೆ. ಹೋದ ವಾರನೇ ಬಂದದ್ದು. ವಾಪಾಸ್ ಬಂದಾಗಿನಿಂದ ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಗಾಗಿ ಸಿದ್ದತೆ ನಡೆಸಿದ್ದೀನಿ."
"ಗುಡ್...ಗುಡ್...ಯಾವಾಗಿದೆ ಪರೀಕ್ಷೆ?"
"ಮುಂದಿನ ವಾರನೇ. ಕಾಲೇಜ್ ಶುರುವಾಗೊದರೊಳಗೆ ಮುಗಿಸಿಬಿಡೋಣ ಅಂತಾ ಪ್ಲ್ಯಾನ್ ಮಾಡಿಕೊಂಡಿದೀನಿ"
"ನೀನು ಯಾವಾಗಿನಿಂದ ಈ ಭರತನಾಟ್ಯ ಕಲಿಯೋಕೆ..."

ಹೀಗೆ, ಆ ಮುಸ್ಸಂಜೆಯ ಏಕಾಂತದಲಿ, ನಾವಿಬ್ಬರೇ ಕುಳಿತಿದ್ದು. ನಮ್ಮಗಳ ನಡುವೆ ಮಾತುಗಳು ಮೊಳಕೆಯೊಡೆಯುತ್ತಿದ್ದವು. ಮಧ್ಯದಲ್ಲಿ ಎಲ್ಲಾದರೂ ಮಾತುಗಳು ನಿಂತಾಗ ಗೋಡೆ ಗಡಿಯಾರದ 'ಟಿಕ್...', 'ಟಿಕ್...' ಕಿವಿಗೆ ಬೀಳುತ್ತಿತ್ತು. ನಮ್ಮಿಬ್ಬರ ಮಾತುಗಳನ್ನು ಬಿಟ್ಟರೆ, ಅಷ್ಟರ ಮಟ್ಟಿಗಿನ ನಿಶ್ಯಬ್ದ ಆ ರೂಮಿನಲ್ಲಿ. ಇಂತಹ ಏಕಾಂತ ಸಿಕ್ಕಿದ್ದು ನನಗೆ ಅಚ್ಚರಿಯನ್ನೇ ತಂದಿತ್ತು.

"ಇವತ್ತೇ ಹೇಳಿ ಬಿಡಲಾ ಇವಳಿಗೆ?" ಶುರುವಾಯಿತು ನನ್ನೊಳಗೆ ಒಂದು ಸಂಭಾಷಣೆ.

"ಓಹ್..." ಇಬ್ಬರೂ ಒಂದೇ ಸಲೇ ಅಂದೆವು.
"ಛೇ! ಕರೇಂಟು ಹೋಯಿತು"
"ಒಂದು ನಿಮಿಷ ಬಂದೆ. ಮೇಣದ ದೀಪ ತಗೊಂಡು ಬರತೀನಿ" ಅಂತಾ ಒಳ ಹೋದಳು.

ಈಗಂತೂ, ನನಗೆ ಅಚ್ಚರಿಯ ಮೇಲೆ ಅಚ್ಚರಿ! ತಲೆಯಲ್ಲಿ ಯೋಚನೆಗಳದೇ ಲಹರಿ - "ಇದೇನಪ್ಪಾ ಮನೆಯಲ್ಲಿ ಯಾರು ಇಲ್ಲಾ, ಈಗ ಕರೇಂಟೂ ಬೇರೆ ಇಲ್ಲಾ!. ಹೊಸದಾಗಿ ಮದುವೆಯಾದವರು, ಪ್ರೇಮಿಗಳು ಈ ಕ್ಯಾಂಡಲ್ ಲೈಟ್‌ಗಾಗಿ ಹೋಟೆಲ್, ಬಾರ್, ರೆಸ್ಟೋರೆಂಟ್ ಅಂತ ಪರದಾಡಿದರೆ, ಇನ್ನೂ ಪ್ರೀತಿಯೇ ವ್ಯಕ್ತಪಡಿಸದ ನನಗೆ, ಈಗಲೇ ಈ ಬಂಪರ್ ಬಹುಮಾನ ಸಿಕ್ಕಿಬಿಟ್ಟಿದೆಯಲ್ಲಾ!"

ಸುತ್ತಲೂ ಕತ್ತಲು. ಏನೂ ಕಾಣಿಸುತ್ತಿಲ್ಲ. ಒಳಗಡೆಯಿಂದ ಬೆಂಕಿಪೊಟ್ಟಣದ ಕಡ್ಡಿಯನ್ನು ಗೀಚುತ್ತಿದ ಸಪ್ಪಳ. ನಾನು ಆ ರೂಮಿನ ಬಾಗಿಲ ಕಡೆಗೆ ನೋಡುತ್ತಿದ್ದೆ. ಮೆಲ್ಲನೆ ಒಳಗಿನಿಂದ ಬೆಳಕು ಮೂಡಿತು. ಮತ್ತದೇ ನಿಶ್ಯಬ್ದ, ಗೋಡೆ ಗಡಿಯಾರದ 'ಟಿಕ್...', ''ಟಿಕ್...' ಶಬ್ದ. ಒಳಗಡೆ ಮೂಡಿದ್ದ ಆ ಬೆಳಕು, ನಿಧಾನವಾಗಿ ಬಾಗಿಲ ಬಳಿ ಬರತೊಡಗಿತು. ಅವಳು ಮೇಣದ ದೀಪನ ಕೈಯಲ್ಲಿ ಹಿಡಿದು ಹೊರಗೆ ಬಂದಳು. ಮುಖಕ್ಕೆ ಹತ್ತಿರ ಹಿಡಿದಿದ್ದರಿಂದ, ಅದರ ಬೆಳಕು ಅವಳ ಮುಖದ ಮೇಲೆ ಸಂಪೂರ್ಣವಾಗಿ ಚೆಲ್ಲಿತ್ತು.

ಅವಳನ್ನಲಂಕರಿಸಿದ ಆ ಕಿವಿಯೋಲೆ,
ಅದರ ತಂಗಿ
ಮೂಗಿನೊಡತಿ-ಮೂಗುತಿ,
ಇವರಿಬ್ಬರ ಶೃಂಗಾರ ಸಖಿ
ಆ ಕಿರು ಬಿಂದಿಗೆ
ಈ ಎಲ್ಲ ಬಿನ್ನಾಣಗಿತ್ತಿಯರು
ಹೊತ್ತು ತಂದವು
ಆ ಚೆಲುವ ಮೊಗವ

ಒಂದೇ ಕ್ಷಣದ ಆ ದೃಶ್ಯ ಮನದಿಂದ ಎಂದಾದರು ಅಳಿಯಲೂ ಸಾಧ್ಯವೇ? ದಿನದ ಸಮಯದಲ್ಲಿ ಎಷ್ಟೋ ಬಾರಿ ಅವಳನ್ನು ನೋಡಿದ್ದೆ, ಆದರೆ ಇಷ್ಟು ಸ್ಪಷ್ಟವಾಗಿ, ಸ್ಪುಟವಾಗಿ ಎಂದೂ ನೋಡಿರಲಿಲ್ಲ. ಮೊದಲ ಸಲ ಚಂದ್ರನ ಬೆಳದಿಂಗಳಿಗಿಂತ, ಆ ಮೇಣದ ದೀಪದ ಬೆಳಕೇ ಇಷ್ಟವಾಗಿತ್ತು.

-2-

ಆ ಮೇಣದ ದೀಪವನ್ನು, ಟೇಬಲ್ ಮೇಲೆ ಇಟ್ಟು ನನ್ನ ಎದುರಿಗೆ ಕುಳಿತಳು. ಮತ್ತೆ ಅಲ್ಲಿ ಆವರಿಸಿದ್ದ ಮೌನವನ್ನು ಮುರಿದು, ಮುಂದುವರೆದವು ನಮ್ಮ ಮಾತುಗಳು -

"ಇವತ್ತು ಯಾಕೊ ಕರೆಂಟು ತೆಗೆದುಬಿಟ್ಟ. ದಿನಾಲು ಹೋಗೊಲ್ಲ"
"ಲೋಡ್ ಶೆಡ್ಡಿಂಗ್ ಶುರು ಮಾಡಿರಬೇಕು ಕಣೇ. ಬಹುಶಃ ಇವತ್ತಿಂದ ದಿನಾ ಹೋಗುತ್ತದೆಯೆನೋ"
"ನಿನ್ನ ಬಗ್ಗೆ ಹೇಳೋ. ಏನೂ ಹೇಳಲೇ ಇಲ್ಲಾ. ಹೇಗಿದೆ ಕಾಲೇಜ್ ಲೈಫ್?"
"ಚೆನ್ನಾಗಿದೆ. ಲ್ಯಾಬ್ ಕ್ಲಾಸ್‌ಗಳು ಶುರುವಾಗಿವೆ. ರಸಾಯನಶಾಸ್ತ್ರವೇ ಸ್ವಲ್ಪ ಕಷ್ಟ. ಅವೇನೊ ರಸಾಯನ ಕ್ರಿಯೆಗಳು ನೆನಪೇ ಇರೋಲ್ಲ"
"ನನಗೆ ರಸಾಯನಶಾಸ್ತ್ರ ಇಷ್ಟವಾದ ವಿಷಯ. ಗಣಿತಶಾಸ್ತ್ರವೇ ಆಗಿ ಬರೋಲ್ಲಾ. ಅದೇಕೊ, ಮೊದಲಿನಿಂದಲೂ ನನಗೆ ಸರಿಹೋಗಲೇ ಇಲ್ಲ. ಎಮ್.ಎನ್.ಸಿ ಕಾಲೇಜಿನ ಪ್ರೋಫೆಸರ್ ಬಳಿ ಟ್ಯೂಶನ್‌ಗೆ..."

ಗಣಿತಶಾಸ್ತ್ರ ಅವಳಿಗೆ ಮೊದಲಿನಿಂದಲೂ ಕಷ್ಟದ ವಿಷಯವೇ. ಅದೂ ನನಗೂ ಗೊತ್ತಿತ್ತು. ಅವಳು ಅದನ್ನೇ ವಿವರಿಸುತ್ತಿದ್ದಳು. ನಾನು ಏನೂ ಹೇಳಲಿಲ್ಲ.
ನನ್ನಲ್ಲಿನ ಗೊಂದಲ ನನ್ನ ಕೆದುಕುತಿತ್ತು - "ನಾನು ಇವಳನ್ನು ಇಷ್ಟಪಡುತ್ತಿದ್ದೀನಿ ಅಂತಾ ಈಗಲೇ ಹೇಳಿಬಿಡಲಾ? ಇಂಥಾ ಸುಸಂಧಿ ನನಗೆ ಇಷ್ಟು ಬೇಗ ಒದಗಿ ಬರುತ್ತದೆಂದು ನಾನು ಅಂದುಕೊಂಡೇ ಇರಲಿಲ್ಲ. ಆಯ್ತು, ಇಂಥ ಒಳ್ಳೆಯ ಸಮಯ ಸಿಕ್ಕಿದೆಯೆಂದರೆ, ಯಾಕೆ ಬಿಡಲಿ? ಹೇಳಿಯೇ ಬಿಡೋಣ. ಆದರೆ, ಏನಂತಾ ಹೇಳಲಿ? ಒಮ್ಮೆಲೇ 'ನಾನು ನಿನ್ನ ಪ್ರೀತಿಸುತ್ತಿದ್ದೀನಿ' ಅಂತ ಹೇಗೆ ಹೇಳೋಕಾಗುತ್ತೆ? ಅದು ಬೇರೆ, ನಮ್ಮಿಬ್ಬರಲ್ಲಿ ಅಷ್ಟು ಗಾಢವಾದ ಸ್ನೇಹವೂ ಇಲ್ಲ. ಹೇಗೆ ಶುರು ಮಾಡೋದು?"

ನನಗೇನು ತೋಚುತಾನೆ ಇರಲಿಲ್ಲ. ಕಿಟಕಿಯ ಪಕ್ಕದಲ್ಲೇ ಕುಳಿತಿದ್ದರಿಂದ್ದ, ಸಣ್ಣಗೆ ಬೀಸುತ್ತಿದ್ದ ಗಾಳಿ ಮೈ ಸೋಕುತ್ತಿತ್ತು. ನನ್ನನ್ನೇ ನೋಡುತಿದ್ದ ಆ ಮೇಣದ ದೀಪ -

ಸುತ್ತ-ಮುತ್ತಲೂ
ಆವರಿಸಿರುವ ಈ ಕತ್ತಲೂ,
ನಿಮ್ಮಿಬ್ಬರ ನಡುವೆ
ನಾ ಮೂಡಿಸಿರುವ ಬೆಳಕಿನಂಗಳ,
ಲೋ ಕಿರಣ,
ಪ್ರೀತಿಯ ಸಂಭಾಷಣೆಗೆ
ನಿನಗೆ ಬೇಕಿನ್ನೇ ಬೇರೆಯ ತಾಣ?

ಅಂತಾ ಹೇಳಿ, ಸಣ್ಣಗೆ ಬೀಸುತ್ತಿದ್ದ ಆ ಗಾಳಿಗೇ, ಪಟ-ಪಟನೇ ಅಲ್ಲಾಡಿ ನನಗೆ ಕಣ್ಣು ಹೊಡೆಯಿತು.

ಮತ್ತೇ ಅಂರ್ತಮುಖಿಯಾದೆ - "ಮೊದಲು ಈ ಕಾಲೇಜಿನ ಚರ್ಚೆಯಿಂದ ಹೊರಗೆ ಬರಬೇಕು. ಏನಾದ್ರು, ಅವಳಿಗೆ ಇಷ್ಟವಾಗುವ ವಿಷಯದ ಬಗ್ಗೆ ಮಾತು ಶುರು ಮಾಡಿದರೆ ಒಳ್ಳೆಯದಿರುತ್ತೆ."

ಅವಳು ಆ ಗಣಿತಶಾಸ್ತ್ರದ ಬಗ್ಗೆಯೇ ಮಾತಾಡುತಿದ್ದಳು. ಅವಳ ಕಣ್ಣು ಆ ಮೇಣದ ದೀಪದಲ್ಲೇ ನೆಟ್ಟಿತ್ತು. ಅದೇನೋ ಯೋಚಿಸುತ್ತಿದ್ದಳೆನಿಸುತ್ತೆ.
"ಇರಲಿ ಬಿಡು ಶೃತಿ, ಹೇಗಾದರೂ ಮಾಡಬಹುದು. ನಿನಗಷ್ಟೇ ಕಷ್ಟವಾದರೆ, ನಾನೇ ಹೇಳಿಕೊಡ್ತೀನಿ"
"ಢಣ್..." ಗೋಡೆ ಗಡಿಯಾರ ಶಬ್ದ ಮಾಡಿತು. ಅವಳ ಕಣ್ಣು ಮೇಣದ ದೀಪದಿಂದ ಕದಲಿತು. ಗಡಿಯಾರ ನೋಡಿ ನಾನೇ ಹೇಳಿದೆ - "ಗಂಟೇ 7.30ಯಾಯಿತು." ಆ ಗಡಿಯಾರದ ಕೆಳಗಿದ್ದ ಶೋಕೇಸ್‌ಲ್ಲಿ ಅವಳು ಕ್ರೀಡೆಯಲ್ಲಿ ಗೆದ್ದ ಪದಕಗಳು, ಕಪ್ಪುಗಳ ಸಾಲೇ ಇತ್ತು.

"ನಿನಗೆ ಕ್ರೀಡೆಗಳಲ್ಲಿ ಆಸಕ್ತಿ ಇದೆಯಂತಾ ಗೊತ್ತಿತ್ತು. ಆದರೆ, ಇಷ್ಟೊಂದು ಬಹುಮಾನಗಳನ್ನು ನೀನು ಗೆದ್ದಿದ್ದೀಯಾ ಅಂತ ಗೊತ್ತಿರಲ್ಲಿಲ್ಲ.
"ಅವೆಲ್ಲಾ, ಹೈಸ್ಕೂಲ್‌ನಿಂದ ಗೆಲ್ಲುತ್ತಾ ಬಂದಿದ್ದು."
"ಕೊನೆಯ ಬಾರಿಯ ಸ್ಪೋಟ್ಸ್ ಡೇಯಲ್ಲಿ ನೀನು ಆ 4x100 ಮೀ. ರ್‍ಯಾಲಿಯಲ್ಲಿ ನಿಮ್ಮ ಟೀಮ್‌ನ್ನು ಗೆಲ್ಲಿಸಿದ್ದು ನನಗೆ ಚೆನ್ನಾಗಿ ನೆನಪಿದೆ."
"ಹೌದು, ಅದೊಂದು ನಾನೆಂದೂ ಮರೆಯದ ಸ್ಪರ್ಧೆ ಕಿರಣ್."
"ನೀನು ಅಂದು ಓಡಿದ್ದು...ಅಬ್ಬಾ...ಅದೇನು ಓಟ...ಚಿರತೆಯನ್ನೇ ಮೀರಿಸುವಂತ್ತಿತ್ತು. ಕೊನೆಯ ಸುತ್ತಿನಲ್ಲಿ ನಿಂತಿದ್ದ ನಿನ್ನ ಕೈಗೆ ಆ ಬ್ಯಾಟನ್ ಬಂದಾಗ, ಬೇರೆ ತಂಡದ ಓಟಗಾರ್ತಿಯರೆಲ್ಲಾ ಮುಂದೆ ಹೋಗಿ ಬಿಟ್ಟಿದ್ದರು. ನೀನು ಕೊನೆಗಿದ್ದೆ. ನೀನು ಓಡೋಕೆ ಶುರು ಮಾಡಿದ ಮೇಲೆ ನೋಡು, ಒಬ್ಬೊಬ್ಬರಾಗಿ ಎಲ್ಲರೂ ಹಿಂದೆ ಬೀಳತೊಡಗಿದರು. ನೀನು ಹೋಗಿ ಕ್ರೀಸ್ ಮುಟ್ಟಿದಾಗ, ನಿನ್ನ ಹಿಂದೆ ಇದ್ದ 2ನೇ ಸ್ಪರ್ಧಿ ಇನ್ನೂ 1ಮೀ. ದೂರವಿದ್ದಳು."
"ನಿನಗೆ ವಿಶ್ ಮಾಡೋಣಾ ಅಂತಾ ಅಲ್ಲಿಗೆ ಬಂದೆ. ಆದರೆ, ಅಲ್ಲಿ ಹುಡುಗಿಯರೇ ಇದ್ದರು. ನನಗೆ ಸಂಕೋಚವಾಗಿ ವಾಪಾಸ್ ಬಂದುಬಿಟ್ಟೆ. ಎಷ್ಟೊಂದು ಸಲ, ನೀನು ಓಟದ ಸ್ಪರ್ಧೆಗಳಲ್ಲಿದ್ದಾಗ ನಾನು ಮೈದಾನದಲ್ಲೇ ಇರುತ್ತಿದ್ದೆ. ಅಕ್ಕ-ಪಕ್ಕ ನನಗೆ ಪರಿಚಯದವರ್‍ಯಾರು ಇರಲಿಲ್ಲ. ನಾನು ಜೋರಾಗಿ - ಓಡು ಶೃತಿ ಓಡು - ಅಂತಾ ಕೂಗ್ತಾ ಇದ್ದೆ. 'ಗುಂಪಲ್ಲಿ ಗೋವಿಂದ' ಅನ್ನೋ ಹಾಗೇ."

ಅವಳು ನಕ್ಕಳು. ಕೆಲ ಕ್ಷಣಗಳು, ಆ ತಿಳಿ ನಗೆ ಅವಳ ಮುಖದ ಮೇಲೆ ಹಾಗೆಯೇ ಉಳಿದಿತ್ತು -

ಗುಳಿಬಿದ್ದ ಕೆನ್ನೆಗಳು
ತುಟಿಯ ಸನಿಹದೀ ನಗು
ಕಣ್ಣಂಚಲಿ ಕುಳಿತ ಕಾಡಿಗೆ
ಮುಂಗುರುಳ ಉಯ್ಯಾಲೆ
ಈ ಸಿಂಗಾರಿಯ ನೋಟವ
ನೋಡುತಲಿರುವ ನನ ಕಣ್ಣ
ನಾನೇಕೆ ಪಿಳುಕಿಸಲಿ?
ಅದೇಗೆ ನಿನ್ನಿಂದ ಸರಿಸಲಿ?

ನಮ್ಮಿಬ್ಬರ ಮಧ್ಯೆ ಮಾತಿನ ಹೊಳೆ ಹರಿಯುತ್ತಿತ್ತು. ಕ್ರೀಡೆಯಲ್ಲಿಯ ಅವಳ ಆಸಕ್ತಿ, ಅವಳ ನಿರಂತರ ಗೆಲುವುಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇತ್ತು. ಕೆಲವು ಅತಿ ಕಠಿಣ ಸ್ಪರ್ಧೆಗಳಲ್ಲಿ ಅವಳು ಗೆದ್ದಿದ್ದು, ಕೆಲವೊಮ್ಮೆ ಸೋತಾಗ ಅತ್ತದ್ದು...ಎಲ್ಲವನ್ನು ವಿವರಿಸುತ್ತಾ ಅವಳು ಅದೆಷ್ಟು ತನ್ಮಯಳಾಗಿ ಮಾತಾಡುತ್ತಿದ್ದಳು.

-3-

ಎಲ್ಲೊ ಒಂದು ಕಡೆ, ನಮ್ಮಿಬ್ಬರ ಮಾತುಗಳ ಮಧ್ಯದಲ್ಲಿ, ಮತ್ತೆ ನನ್ನೊಳಗಿನ ಧ್ವನಿ ಮಾತಾಡತೊಡಗಿತು - "ಕಾಲೇಜು ವಿಷಯದಿಂದ ಹೊರಗೆ ಬಂದು, ಅವಳಿಗೆ ಇಷ್ಟವಿರುವ ವಿಷಯದ ಬಗ್ಗೆ ಮಾತಾಡಿದ್ದು ಆಯಿತು. ಈಗಾ ವಿಷಯಕ್ಕೆ ಬರಲಿ ಅಲ್ಲವಾ? ನಮ್ಮಿಬ್ಬರಲ್ಲಿ ಅಷ್ಟು ಗಾಢವಾದ ಸ್ನೇಹವಿಲ್ಲದಿದ್ದರೇನಂತೇ? ಒಳ್ಳೆಯ ಪರಿಚಯವಿದೆಯಲ್ಲಾ? ಅವಳು ನನ್ನೊಂದಿಗೆ, ಇಷ್ಟೊತ್ತು ಕೂತು ಮಾತಾಡುತ್ತಿದ್ದಾಳೆಂದರೇ, ಅವಳಿಗೂ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿರಬಹುದು, ಅವಳೂ ನನ್ನ ಇಷ್ಟ ಪಡುತ್ತಿರಬಹುದು. ಆಯ್ತು ಹಾಗಿದ್ರೆ. ಕೊನೆಪಕ್ಷ ಅವಳಿಗೇ ನನ್ನ ಭಾವನೆಗಳ ಸುಳಿವಾದರು ಕೊಡೋಣ. ಕಥೆಗೆ ಕ್ಲೈಮ್ಯಾಕ್ಸ್ ತೆರೆ ಎಳೆದೇ ಬಿಡ್ತೀನಿ."

ಹಾಗೆಂದುಕೊಂಡವನೇ, ಮೊದಲು ನಮ್ಮಿಬ್ಬರ ಸಂಭಾಷಣೆಯ ವಿಷಯಕ್ಕೆ ಅಂತ್ಯ ಹಾಡಿದೆ.
"ಶೃತಿ, ನೀರಡಿಕೆಯಾಗ್ತಿದೆ. ಒಂದು ಲೋಟ ನೀರು ತರುತ್ತಿಯಾ?"
"ಹಾ, ತರ್‍ತೀನಿ" ಎದ್ದು ಒಳಗೆ ನಡೆದಳು.

"ಎಷ್ಟೊ ಸಲ ಒಬ್ಬನೇ ಇದ್ದಾಗ ಅವಳನ್ನ ನೆನಪಿಸಿಕೊಳ್ಳೊದು, ಅವಳು ಕಾಲೇಜಿಗೆ ಯಾವಾಗ ಬರ್‍ತಾಳೊ ಅಂತಾ ನಾನು ದಿನಗಳನ್ನ ಕುಳಿತಿರೋದು ಎಲ್ಲಾ ಹೇಳೇಬಿಡೋಣ..."

"ತಗೋ..." ಲೋಟ ಕೈಗಿತ್ತಳು.
ಲೋಟವನ್ನು ಅವಳ ಕೈಯಿಂದ ತೆಗೊಂಡೆ. ನೀರನ್ನು ಗಟ-ಗಟನೇ ಕುಡಿದು, ಟೇಬಲ್ ಮೇಲಿಟ್ಟೇ.
"ಇನ್ನೂ ಬೇಕಾ?"
"ಇಲ್ಲಾ...ಇಲ್ಲ...ಸಾಕು" ಕರವಸ್ತ್ರದಿಂದ ಬಾಯನ್ನು ಒರೆಸಿಕೊಂಡೆ.
ಅವಳು ಮತ್ತೇ ತನ್ನ ಜಾಗದಲ್ಲೇ ಕುಳಿತಳು.
"ನಾನು ನಿನಗೊಂದು ವಿಷಯ ಹೇಳ..."

ಗೋಡೆ ಗಡಿಯಾರ "ಢಣ್...", "ಢಣ್...","ಢಣ್..." ಅಂತಾ ತನ್ನ ಕರ್ತವ್ಯಕ್ಕೆ ಕೈಹಾಕಿತು. ಅವಳೂ ಅದರ ಹಿಂದಿರುಗಿ ಅದರ ಕಡೆಗೆ ನೋಡಿದಳು. ಆ ಗಡಿಯಾರದ 8ನೇ "ಢಣ್..." ಇನ್ನೂ ಮುಗಿದಿರಲಿಲ್ಲ. ಫ್ಯಾನ್ ತಿರುಗತೊಡಗಿತು. "ಕರೆಂಟ್ ಬಂತು ಅನಿಸುತ್ತೆ ಶೃತಿ."

ಟ್ಯೂಬ್ ಲೈಟ್ ಪಕ್-ಪಕ್ ಅಂತಾ ಸಪ್ಪಳ ಮಾಡುತ್ತಾ ಆನ್ ಆಯಿತು. ನಾನು ತಲೆ ಬಗ್ಗಿಸಿ ಕಣ್ಣು ಮುಚ್ಚಿಕೊಂಡೆ. ಮೆಲ್ಲಗೆ ಕಣ್ಣು ತೆರೆದೆ.
ಅವಳು ಕಣ್ಣು ಸಣ್ಣದಾಗಿ ಮಾಡಿ, ಕೈಗಳನ್ನು ತನ್ನ ಕಣ್ಣಿಗೆ ಹಿಡಿದಿದ್ದಳು.

"ನೀನು ಏನೋ ಹೇಳ್ತಾಯಿದ್ದೆ ಕಿರಣ್."
"ಅದೇ...ನೀನು ಕಾಲೇಜಿಗೆ ಯಾವಾಗಿನಿಂದ ಬರ್‍ತೀದಿಯಾ?"
"ಜುಲೈ 10ರಿಂದ. ಆವತ್ತೇ ಫಸ್ಟ ಡೇ. ಯಾಕೆ?"
"ಶೃತಿ, ನೀನು ಬರೋ ತನಕ..."

ಯಾರೊ ಗೇಟ್ ತೆಗೆದ ಶಬ್ದ. ಕಿಟಕಿ ತೆಗೆದದ್ದೆಯಿತ್ತು. ಪಕ್ಕದ ಮನೆಯವರು ಇರಬಹುದು ಅನಕೊಂಡೆ. ಅವಳು ಕಿಟಕಿಯ ಕಡೆಗೇನೂ ನೋಡಲಿಲ್ಲ. "ಟರ್‌ರ್‌ರ್‌ರ್...", "ಟರ್‌ರ್‌ರ್‌ರ್..." ಕಾಲಿಂಗ್ ಬೆಲ್ ಹೊಡಕೊಳ್ತು. ನಾನು ಬಾಗಿಲ ಬಳಿ ನೋಡಿದೆ. ಶೃತಿ ಎದ್ದು ಹೋಗಿ ಬಾಗಿಲು ತೆರೆದಳು.

"ಮಮ್ಮಿ...."
ಬಂದದ್ದು ನನ್ನ (ಅಂತಾ ನಾನು ಅಂದುಕೊಂಡ) ಭಾವೀ ಅತ್ತೆ-ನಾದಿನಿ! ಕೈತುಂಬಾ ಶಾಪಿಂಗ್ ಲಗೇಜು. ಇವರಿಗೇ ಈಗಲೇ ಬರಬೇಕಿತ್ತಾ?
"ನೀನು ಬೇಗ ಬಂದದ್ದು ಚೆನ್ನಾಗಾಯಿತು ಮಮ್ಮಿ. ನೋಡು ಕಿರಣ್ ಬಂದಿದ್ದಾನೆ" ಅಮ್ಮನ ಕೈಯಿಂದ ಕೆಲವು ಚೀಲಗಳನ್ನು ತೆಗೊಂಡು ನನ್ನ ಕಡೆ ಹೆಜ್ಜೆ ಇಟ್ಟಳು.
ಕೃತಕವಾಗಿ ನಗುತ್ತಾ -"ಚೆನ್ನಾಗಿದೀರಾ ಆಂಟಿ?"
"ಹ್ಹುನಪ್ಪಾ, ನಾನು ಚೆನ್ನಾಗಿದೀನಿ. ನೀನು ಹೇಗಿದೀಯಾ?"
"ಚೆನ್ನಾಗಿದಿನಿ ಆಂಟಿ..." ಮುಂದುವರೆದವು, ಉಭಯ-ಕುಶಲೋಪಚಾರದ ಮಾತುಗಳು.

"ಆಯ್ತು, ನಾನಿನ್ನು ಹೋರಡ್ತೀನಿ."
"ಅರೇ, ಕೂತ್ಕೋಳಪ್ಪ, ಊಟ ಮಾಡ್ಕೋಂಡು ಹೋಗುವಿಯಂತೆ. ಇನ್ನೆನೂ ಅಂಕಲ್ ಕೂಡ ಬಂದು ಬಿಡ್ತಾರೆ."
"ಊಟ ಎಲ್ಲ ಬೇಡ ಆಂಟಿ. ಮತ್ತೊಮ್ಮೆ ಯಾವಾಗಲಾದರು ಬರ್‍ತೀನಿ."
"ಪರವಾಗಿಲ್ಲ ಕೂತ್ಕೋಳೋ. ಇವತ್ತು ಇಲ್ಲೇ ಡಿನ್ನರ್ ಮಾಡು."
"ಬೇಡ ಕಣೇ."
"ಹೇ, ಅಮ್ಮ ಬರೋಕೆ ಮುಂಚೆ ನೀನು ಏನೊ ಹೇಳ್ತಿದೇ ಕಿರಣ್. ಅದೇ ನಾನು ಕಾಲೇಜಿಗೆ ಬರೋ ತನಕ...ಅಂತಾ.."
"ಓ...ಹೌದಲಾ!... ಛೇ! ಮರತು ಹೋಯ್ತು. ನೆನಪಾದರೆ ಹೇಳ್ತೀನಿ ಬಿಡು."
"ಆಯ್ತು ಹಾಗಿದ್ರೆ. ಮತ್ತೆ ಬರತಿರು."
"ಓಕೆ, ಹೋಗಿಬರ್‍ತೀನಿ ಆಂಟಿ. ಬಾಯ್ ಶೃತಿ."
"ಬಾಯ್..."

ಚಪ್ಪಲ್ ಹಾಕಿಕೊಂಡು ಹೊರಗೆ ಬಂದೆ. ಶೃತಿ ಕೂಡ ನನ್ನ ಹಿಂದೆ ಬಂದಳು. ನಾನು ಗೇಟ್ ತೆರೆದು ಹೊರಗೆ ಹೋದೆ. ಅವಳು ಅಲ್ಲೇ ನಿಂತಿದ್ದಳು.
"ಕಾಲೇಜಲ್ಲಿ ಸಿಗೋಣ. ಬಾಯ್..."
"ಬಾಯ್..."

ತಲೆ ತಗಿಸಿಕೊಂಡು ನಡಿತಾ ಹೊರಟೆ. ಸ್ವಲ್ಪ ದೂರ ನಡೆದ್ದಿದೆ. ಒಂದು ಆಟೋ, ನನ್ನ ಪಕ್ಕದಿಂದನೇ ಹೋಯ್ತು. ಅವನು ಹಚ್ಚಿದ ರೇಡಿಯೋದಲ್ಲಿ - "ಯಾರೋ...ಯಾರೋ...ಗೀಚಿಹೋದ ಹಾಳು ಹಣೆಯ ಬರಹ..." ಬರುತ್ತಿತ್ತು. ಅಳಿಸಿ ಬೇರೆದ್ದನ್ನು ಬರೆಯಬೇಕೆಂದರೇ, ನನ್ನ ಹತ್ತಿರ ರಬ್ಬರ್ ಅಂದು ಇರಲಿಲ್ಲ, ಇಂದು ಇಲ್ಲ. ನನ್ನ ಬಾಳಪುಟಗಳಲ್ಲಿ ಬಂದು ಹೋಯಿತು - ಹೀಗೊಂದು ಸಂಜೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X