ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರನಾರಿ ನೀರುಪುಢಾರಿ

By Staff
|
Google Oneindia Kannada News

A kannada short story by Premashekhara
* ಪ್ರೇಮಶೇಖರ, ನವದೆಹಲಿ

ಬೆಟ್ಟದ ಹಾದಿಯಲ್ಲಿ ವಾರಗಟ್ಟಲೆ ನಡೆದು ಅವನು ಬಸವಳಿದಿದ್ದ. ಅಮ್ಮ ಕಟ್ಟಿಕೊಟ್ಟಿದ್ದ ಬುತ್ತಿ ಮುಗಿಯುತ್ತಾ ಬಂದಿತ್ತು. ನೀರು ಮುಗಿದು ಅದೆಷ್ಟೋ ಕಾಲವಾಗಿತ್ತು. ಕೆರೆಕುಂಟೆಗಳಿದ್ದೆಡೆ ನಿಂತು ಒಣರೊಟ್ಟಿ ತಿಂದು ನೀರು ಕುಡಿಯುತ್ತಿದ್ದ. ಬೆಟ್ಟವೇರತೊಡಗಿದಂತೆ ಕೆರೆಕುಂಟೆಗಳು ಕಾಣದಾದವು. ಅಲ್ಲಲ್ಲಿ ಒರತೆಗಳು ಕಂಡರೂ ದಾರಿ ಸಾಗಿದಂತೆ ಒಂದೊಂದಾಗಿ ಅವೂ ಮರೆಯಾಗಿಹೋದವು. ಸಿಕ್ಕಿದ ಗುಡಿಸಲುಗಳಲ್ಲಿ ನೀರು ಕೇಳಿದ. ಒಂದಿಬ್ಬರು ಕೊಟ್ಟರು. ಉಳಿದವರು "ನಮಗೇ ಇಲ್ಲ ನಿನಗೇನು ಕೊಡೋಣ? ಮಳೆಹನಿ ಕಂಡು ವರ್ಷಗಳೇ ಆಗಿಹೋದವು" ಅಂದರು. ಅವನವರನ್ನು ದೂಷಿಸಲಿಲ್ಲ. ಅವರ ಕಷ್ಟ ಅವನ ಕಣ್ಣೆದುರಿಗೇ ಇತ್ತು. ಅವರಿಗಾಗಿ ಮರುಗಿದ. ಈ ಬೆಂಗಾಡಿನ ಒಂದು ಜೀವವನ್ನಾದರೂ ನೀರುನೆರಳು ಯಥೇಚ್ಛವಾಗಿರುವ ತನ್ನೂರಿಗೆ ಕರೆದುಕೊಂಡುಹೋಗುವ ತನ್ನ ನಿರ್ಧಾರದ ಬಗ್ಗೆ ಅವನಿಗೆ ಹೆಮ್ಮೆಯೆನಿಸಿತು.

ಮೂಡಣ ಬೆಟ್ಟಗಳ ಸೀಮೆಯ ಹೆಣ್ಣೇ ಆ ವಂಶಕ್ಕೆ ಸೊಸೆಯಾಗಿ ಬರಬೇಕೆಂದು ಹಿಂದೆ ಯಾರೋ ಹುಟ್ಟುಹಾಕಿದ ಸಂಪ್ರದಾಯವೋ ಅಥವಾ ವಿಧಿಸಿದ ಕಟ್ಟಳೆಯೋ ಅಥವಾ ಕೊಟ್ಟ ಶಾಪವೋ ಅಂತೂ ಅವನ ಮನೆತನದ ವಿವಾಹವಯಸ್ಕ ಗಂಡುಗಳೆಲ್ಲಾ ಮೂಡಣ ಬೆಟ್ಟಸೀಮೆಯ ಹಾದಿ ಹಿಡಿಯುತ್ತಿದ್ದರು. ಅವನ ತಂದೆ ತಾತ ಮುತ್ತಾತರೆಲ್ಲಾ ಆ ಹಾದಿ ಹಿಡಿದಿದ್ದರು. ಆ ಮನೆತನದ ಗಂಡುಗಳ ತಾಯಂದಿರೆಲ್ಲಾ ಮೂಡಣ ಸೀಮೆಯ ಸ್ತ್ರೀಯರಾಗಿರುತ್ತಿದ್ದರು. ಹಾಗೇ ಅವರೆಲ್ಲರೊಡನೆ ಹಸೆಮಣೆ ಏರುವ ಸುಯೋಗವೂ ಮೂಡಣ ಸೀಮೆಯ ಕನ್ಯೆಯರದೇ ಆಗಿತ್ತು. ತನ್ನ ಹಿರೀಕರೆಲ್ಲರೂ ನಿಷ್ಠೆಯಿಂದ ಪಾಲಿಸಿಕೊಂಡು ಬಂದ ಆ ಪುರಾತನ ಸಂಪ್ರದಾಯವನ್ನು ಮುಂದುವರಿಸುವುದು ಅವನ ಕರ್ತವ್ಯವಾಗಿತ್ತು. ಮೂಡಣ ಸೀಮೆಯ ಸ್ತ್ರೀಯ ಮಡಿಲಲ್ಲಾಡಿ ಬೆಳೆದ ಅವನೆದೆಯಲ್ಲೀಗ ಅದೇ ಮೂಡಣ ಸೀಮೆಯ ಕನ್ಯಾಮಣಿಯನ್ನು ಮಡಿಲಲ್ಲಿ ಮಲಗಿಸಿಕೊಂಡು ಮುದ್ದಿಸುವ ಬಯಕೆ ಉದಿಸಿತ್ತು.

ಮಧ್ಯಾಹ್ನದ ರಣಬಿಸಿಲು. ಸುತ್ತಲೂ ಒಂದು ನರಪಿಳ್ಳೆಯೂ ಇಲ್ಲ. ಹಕ್ಕಿಗಳ ಕಲರವವೂ ಇಲ್ಲ. ಜೀವದ ಕುರುಹೇ ಇಲ್ಲ. ಅವನು ಸುಸ್ತಾಗಿ ನಿಂತುಬಿಟ್ಟ. ಅವನಮ್ಮ ಹೇಳಿದ್ದ ಊರು ತಲುಪಲು ಇನ್ನೊಂದು ಹರದಾರಿಯಷ್ಟೇ. ಅಲ್ಲಿಯವರೆಗೆ ನಡೆಯುವುದೂ ತನ್ನಿಂದಾಗದು ಎಂದವನಿಗೆ ಅನಿಸಿಬಿಟ್ಟಿತು. ತಲೆಯೆತ್ತಿ ಮೇಲೆ ನೋಡಿದ. ಉರಿಯುತ್ತಾ ಸಾಗಿದ್ದ ಸೂರ್ಯನಿಗೆ ಹೆದರಿ ಬಿಳೀ ಮೋಡವೊಂದು ಎಲ್ಲೋ ದೂರದಲ್ಲಿ ಮುದುರಿ ನಡೆದಿತ್ತು.

ಅವನು ಅತ್ತಲೇ ನೋಡಿದ. ಕೈಬೀಸಿ ಕರೆದ. "ನಾನಿದ್ದೇನೆ, ಹೆದರಿಕೆ ಯಾಕೆ? ಬಾ" ಅಂದ. ಮೋಡ ಗಕ್ಕನೆ ನಿಂತಿತು. ಅಂಥಾ ಪ್ರೇಮಪೂರಿತ ಆಹ್ವಾನವನ್ನು ಅದೆಂದೂ ಕೇಳಿರಲಿಲ್ಲ.
ಹಾಳಾದ್ದು, ಒಂದ್ ಹನೀನಾದ್ರೂ ಸುರಿಸಬಾರದಾ?'
ಇದರ ಮನೆ ಹಾಳಾಗ. ಹಂಗೇ ಹೊರಟ್‌ಹೋಗೋದ್ ನೋಡು.'

ಅದರ ಕಿವಿಗೆ ಬಿದ್ದಿದ್ದದೆಲ್ಲಾ ಇಂಥದೇ ಬೈಗಳುಗಳು. ಅದರ ಕಷ್ಟವನ್ನು ಯಾರೂ ಅರಿತಿರಲಿಲ್ಲ. ಸಹಾನುಭೂತಿ ತೋರಿರಲಿಲ್ಲ. ಹೀಗಿರುವಾಗ ಈಗ ಈ ಪರಿಯ ಪ್ರೇಮಲ ಆಹ್ವಾನ! ಮೋಡಕ್ಕೆ ಕುಣಿದಾಡುವಂತಾಯಿತು. ಒಂದೇ ಉಸಿರಿನಲ್ಲಿ ಅವನತ್ತ ಓಡಿತು. ಆದರೆ ಅದರ ಬಂಧುಬಾಂಧವರೆಲ್ಲಾ ಅಡ್ಡ ನಿಂತರು. ಅಮ್ಮ ಗದರಿದಳು, ಅಪ್ಪ ಕಪಾಲಕ್ಕೆ ಬಾರಿಸಿಯೇ ಬಿಟ್ಟ. ಅಣ್ಣತಮ್ಮ, ಅಕ್ಕತಂಗಿಯರಂತೂ "ಥೂ ನಾಚಿಕೆಯಿಲ್ಲದವಳು" ಎಂದು ಹೀಗಳೆದರು. ಗಂಡ, ಅದೆಲ್ಲೋ ಇದ್ದವ ಓಡಿ ಬಂದವನೇ ಮುಂದಲೆ ಹಿಡಿದು ದಬದಬ ಬಾರಿಸಿಯೇಬಿಟ್ಟ. "ಒಂದ್ ಹೆಜ್ಜೆ ಮುಂದಿಟ್ರೆ ಹುಟ್ಟಿಲ್ಲಾ ಅನ್ನಿಸಿಬಿಡ್ತೀನಿ" ಎಂದು ಅರಚಿದ.

ಇದಾವುದನ್ನೂ ಲೆಕ್ಕಿಸುವ ಸ್ಥಿತಿಯಲ್ಲಿ ಮೋಡ ಇರಲಿಲ್ಲ. ಹುಟ್ಟಿದಾಗಿನಿಂದಲೂ ಕೇಳಲು ಕಾತರಿಸಿದ್ದ ಪ್ರೇಮದ ಆಹ್ವಾನ ಕಿವಿಗೆ ಬಿದ್ದಾಗ ಅದನ್ನು ಧಿಕ್ಕರಿಸುವುದು ಅದಕ್ಕೆ ಸಾಧ್ಯವಾಗಲೇ ಇಲ್ಲ. ಎಲ್ಲರ ಹಿಡಿತಗಳಿಂದಲೂ ತಪ್ಪಿಸಿಕೊಂಡು, ಎಲ್ಲ ತಡೆಗಳನ್ನೂ ಹರಿದುಕೊಂಡು ಅದು ಕೆಳಗೆ ಓಡೋಡಿ ಬಂತು. ಸಾಕಷ್ಟು ದೂರ ಅದನ್ನು ಅಟ್ಟಿಸಿಕೊಂಡು ಬಂದ ಅದರ ಮನೆಯವರೆಲ್ಲರೂ ಕಾಲು ಕುಸಿದು ನಿಂತರು. ಶಾಪ ಹಾಕಿದರು: "ಅವನ ಬಳಿಗೇ ಹೋಗುತ್ತೀಯಲ್ಲ, ಹೋಗು. ನಿನ್ನಿಂದೆಂದೂ ಅವನಿಗೆ ಸುಖವಿರದಿರಲಿ. ನಿನ್ನಿಂದಾಗಿ ಅವನು ದಿಕ್ಕುದೆಸೆ ಮನೆಮಠ ಕಳೆದುಕೊಂಡು ಊರೂರು ಅಲೆಯಲಿ. ನಿನಗೆಂದೂ ನೆಮ್ಮದಿಯ ನೆಲೆಯಿಲ್ಲದಿರಲಿ. ಸದಾ ಅವನ ತಲೆಯ ಮೇಲೇ ನೀರಾಗಿ ಸುರಿಯುತ್ತಿರು."

ಶಾಪ ನಿಜವಾಗಿಯೇಬಿಟ್ಟಿತು. ಬಿಳೀಮೋಡ ಗಕ್ಕನೆ ಕಾಳಿಯಾಗಿಬಿಟ್ಟಿತು. ನೀರಾಗಿ ಕರಗಿತು. ಅವನ ತಲೆಯ ಮೇಲೆ ಸುರಿಯತೊಡಗಿತು.

ಅವನು ಬೆಚ್ಚಿದ. ಮುಂದೆ ಓಡಿದ, ಹಿಂದೆ ಹಾರಿದ, ಎಡಕ್ಕೆ ಹೊರಳಿದ, ಬಲಕ್ಕೆ ಬಿದ್ದ. ಅವನ ತಲೆಯ ಮೇಲಿನ ಜಲಪಾತ ನಿಲ್ಲಲಿಲ್ಲ. ಅವನು ಹೋದೆಡೆ ತಾನೂ ಹೊರಟಿತು. ಕಂಡ ಒಂದು ಗುಡಿಸಲಿನೊಳಗೆ ನುಗ್ಗಿದ. ತಲೆಯ ಮೇಲಿನ ನೀರಧಾರೆ ನಿಲ್ಲಲಿಲ್ಲ. ಅಲ್ಲಿದ್ದ ವೃದ್ಧ ದಂಪತಿಗಳು ಮಡಕೆ ಕುಡಿಕೆ ಪಾತ್ರೆ ಪರಡಿಗಳಲ್ಲೆಲ್ಲಾ ನೀರು ತುಂಬಿಸಿಕೊಂಡರು. ನಾವು ವೃದ್ಧರು, ಮುಚ್ಚಿಕೊಳ್ಳಲು ನಮ್ಮಲ್ಲೇನಿದೆ ಎಂದುಕೊಂಡು ನಾಚಿಕೆ ಬಿಟ್ಟು ಬಟ್ಟೆ ಬಿಚ್ಚಿ ಸ್ನಾನ ಮಾಡಿದರು. ಅವನ ತಲೆಯ ಮೇಲಿನ ನೀರಧಾರೆ ಸುರಿಯುತ್ತಲೇ ಇತ್ತು. ಅರೆಗಳಿಗೆಯಲ್ಲಿ ಗುಡಿಸಲ ತುಂಬಾ ನೀರೋ ನೀರು.

"ಅಕ್ಕಿರಾಗಿಯೆಲ್ಲಾ ನೆನೆದುಹೋಯಿತು. ಅಯ್ಯೋ ಮಾಡುವುದೇನು?" ಮುದುಕಿ ಅತ್ತಳು.
"ಸೌದೆಯೆಲ್ಲಾ ಒದ್ದೆಯಾಗಿಹೋಯಿತು. ಇನ್ನು ನಾನು ಕೊಡಲಿ ಹಿಡಿದು ಹೋಗಬೇಕೇ? ಇದೆಲ್ಲಿಯ ಗ್ರಹಚಾರ." ಮುದುಕ ಹಲುಬಿದ. ಇಬ್ಬರೂ ಸೇರಿ ಸಿಕ್ಕಿದ್ದರಲ್ಲಿ ಅವನಿಗೆ ಬಡಿದರು. "ತೊಲಗಾಚೆ!" ಓಡಿಸಿದರು. ಅವನು ದಿಕ್ಕೆಟ್ಟು ಓಡಿದ. ತಲೆಯ ಮೇಲಿನ ನೀರಧಾರೆ ನಿಲ್ಲಲಿಲ್ಲ. ಅದೀಗ ಜಾಸ್ತಿಯಾಗಿತ್ತು. ಅವನ ದುರ್ಗತಿ ಕಂಡು ಮೋಡ ಬಿಕ್ಕಿಬಿಕ್ಕಿ ಅಳತೊಡಗಿತ್ತು.

ಬೆಟ್ಟದ ಏರುದಾರಿಯಲ್ಲಿ ಅವನು ಏದುತ್ತಾ ಓಡಿದ. ಅವನು ಓಡಿದೆಡೆ ತೊರೆಯೊಂದು ಹರಿಯಿತು. ವರ್ಷದಿಂದ ನೀರು ಕಾಣದ ಮಂದಿ ದೇವರೇ ಇವನನ್ನು ತಮ್ಮ ಬಳಿಗೆ ಕಳಿಸಿರಬೇಕೆಂದು ತಿಳಿದು ಅವನನ್ನು ಹಿಡಿದು ನಿಲ್ಲಿಸಿ ತಂತಮ್ಮ ಮಡಿಕೆ ಕುಡಿಕೆಗಳನ್ನು ತಂದು ಅವನ ಮುಂದಿಟ್ಟರು. ಅವನ ಸುತ್ತಲೂ ಸಾರ್ವಜನಿಕ ನಲ್ಲಿಗಳ ಮುಂದಿನ ದೃಶ್ಯವೊಂದು ಸೃಷ್ಟಿಯಾಯಿತು. ಅವನ ನೀರು ಮುಗಿದುಹೋಗಬಹುದೆಂದೂ, ಮುಗಿಯುವುದರೊಳಗೆ ಆದಷ್ಟು ನೀರು ಹಿಡಿದುಕೊಂಡುಬಿಡಬೆಕೆಂದು ಅವರೆಲ್ಲಾ ಆತುರ ಪಟ್ಟರು. ಎಷ್ಟು ಕೊಡಗಳು ತುಂಬಿದರೂ ಅವನ ನೆತ್ತಿಯ ಮೇಲಿನ ನೀರು ಸುರಿಯುತ್ತಲೇ ಇತ್ತು. ಅವರಿಗೀಗ ನೆಮ್ಮದಿ. ಅವನನ್ನು ಕರೆದುಕೊಂಡುಹೋಗಿ ತಮ್ಮೂರ ಕೆರೆ ಏರಿಯ ಮೇಲೆ ನಿಲ್ಲಿಸಿದರು. ಅದು ಸ್ವಲ್ಪ ದೊಡ್ಡದಿತ್ತು. ಅರ್ಧದಿನದಲ್ಲಿ ಅದು ತುಂಬಿತು. ಪಕ್ಕದ ಹಳ್ಳಿಗೆ ಸುದ್ಧಿ ಹೋಯಿತು. ಅಲ್ಲಿನ ಜನ ಓಡೋಡಿ ಬಂದರು... ಈ ಊರಿನಲ್ಲಿ ನಡೆದದ್ದೇ ಅಲ್ಲೂ... ಆಮೇಲೆ ಇನ್ನೊಂದು ಊರು... ಮತ್ತೊಂದು ಊರು... ಮಗದೊಂದು ಊರು... ಒಂದುವಾರದಲ್ಲಿ ಅ ಪ್ರದೇಶದ ಕೆರೆಕುಂಟೆಗಳೆಲ್ಲಾ ತುಂಬಿ ತುಳುಕಿದವು. ಪುಟ್ಟ ನದಿಯೊಂದು ಆ ಬೆಟ್ಟಪ್ರದೇಶದಲ್ಲಿ ಹುಟ್ಟಿ ಕೆಳಗಿನ ಬಯಲಿನತ್ತ ಹರಿಯತೊಡಗಿತು.

ಅವನಿಗೀಗ ಯಾರೂ ದಿಕ್ಕಿರಲಿಲ್ಲ. ತಮ್ಮೂರ ಕೆರೆಕುಂಟೆಗಳೆಲ್ಲಾ ತುಂಬಿದ ಮೇಲೆ ಜನ ಅವನನ್ನು ನಿರ್ಲಕ್ಷಿಸಿಬಿಟ್ಟಿದ್ದರು. ಅವನು ತಲೆತಗ್ಗಿಸಿ ನಡೆಯತೊಡಗಿದ, ಬೆನ್ನ ದಿಂದೆ ತೊರೆಯೊಂದನ್ನು ಹರಿಸುತ್ತಾ. ಹಸಿವು ನೀರಡಿಕೆಯಾದಾಗ ನಾಲಿಗೆಯಲ್ಲಿ ಹೊರಚಾಚಿ ತಲೆಯ ಮೇಲಿಂದ ಧುಮ್ಮಿಕ್ಕುತ್ತಿದ್ದ ಜಲಧಾರೆಗೆ ಒಡ್ಡುತ್ತಿದ್ದ. ತಕ್ಷಣ ಮೋಡ ಸುತ್ತಲ ಗಿಡಮರ ಬಳ್ಳಿ ಗಾಳಿಯಿಂದ ಸಾರಸತ್ವವನ್ನು ಸೆಳೆದು ತನ್ನ ನೀರನ್ನು ಜೀವಜಲವನ್ನಾಗಿಸಿಬಿಡುತ್ತಿತ್ತು. ಹಸಿವೆಂದೂ ಅವನನ್ನು ಕಾಡಿಸಬಾರೆದೆಂದು ಅದು ಪಣ ತೊಟ್ಟಿತ್ತು. ತಾ ಕಂಡ ನಾಡುಗಳ ಬಗ್ಗೆ, ಚಿತ್ರವಿಚಿತ್ರ ಸ್ವಾರಸ್ಯಗಳ ಬಗ್ಗೆ ಅವನಿಗೆ ಹೇಳುತ್ತಿತ್ತು. ತಾನು ಒಂಟಿ ಎಂದವನಿಗೆ ಅನಿಸಲೇ ಇಲ್ಲ. ಬಾಳಸಂಗಾತಿಯನ್ನರಸಿ ತಾನೀ ಮೂಡಣ ದೇಶಕ್ಕೆ ಬಂದದ್ದು ಅವನಿಗೆ ಮರೆತೇಹೋಯಿತು. ತಾನೆಲ್ಲಿಯವನು ಎಂಬುದನ್ನೂ ಅವನು ಮರೆತುಬಿಟ್ಟ. ಮೋಡ ಅವನನ್ನು ವಿಶ್ವಮಾನವನನ್ನಾಗಿಸಿಬಿಟ್ಟಿತ್ತು. ಹೀಗೇ ಮೋಡ ಹೇಳುವ ಕಥೆಗಳನ್ನು ಕೇಳುತ್ತಾ ಊರೂರಿಗೆ ನೀರು ಹರಿಸುತ್ತಾ ಬದುಕು ಕಳೆದುಬಿಡಬೇಕೆಂದು ನಿರ್ಧರಿಸಿದ. ಒಮ್ಮೆ ಸಹಾರಾದ ಕಡೆಗೂ ಹೋದರೆ ಹೇಗೆ ಎಂದೂ ಅಂದುಕೊಂಡ.

ಆದರೆ ಲೋಕದ ವ್ಯಾಪಾರ ಬೇರೆಯದೇ ಆಗಿತ್ತು. ಬೆಟ್ಟದಲ್ಲಿ ನದಿಯೊಂದು ಹುಟ್ಟಿ ಇಳಿದು ಬಂದು ಕೆಳಗಿನ ಬಯಲಲ್ಲಿ ಹರಿಯತೊಡಗಿದ್ದು ಎಲ್ಲರಿಗೂ ಕುತೂಹಲ ಮೂಡಿಸಿತು. ನದೀಮೂಲವನ್ನರಸಿ ಹೊರಟವರು ಅವನಿದ್ದೆಡೆ ಬಂದು ತಲುಪಿದರು. ತಮ್ಮ ಕಣ್ಣುಗಳನ್ನೇ ನಂಬದಾದರು. ರಾಜಧಾನಿಗೆ ಸುದ್ಧಿ ಹೋಯಿತು. ಪೋಲೀಸರ ದಂಡು ಬಂದು ಅವನನ್ನು ನೇರವಾಗಿ ಕನ್ನಂಬಾಡಿಗೆ ಕರೆದುಕೊಂಡುಹೋಯಿತು. ಮುಖ್ಯಮಂತ್ರಿಗಳು ತಮ್ಮ ಬಾಜಾಭಜಂತ್ರಿಯೊಂದಿಗೆ ಆಗಮಿಸಿದರು.

"ನೀರಧಾರೆಯನ್ನು ಸ್ವಲ್ಪ ಹೊತ್ತು ನಿಲ್ಲಿಸು. ನಾನೊಂದು ಭಾಷಣ ಮಾಡಿ ನಂತರ ನಲ್ಲಿಯನ್ನು ತಿರುಗಿಸುವಂತೆ ನಿನ್ನ ಕಿವಿಯನ್ನು ತಿರುಗಿಸುತ್ತೇನೆ. ತಕ್ಷಣ ನೀನು ನೀರು ಹರಿಸಲು ಆರಂಭಿಸು" ಅಂದರು. ಅವನಿಗೇನೂ ಅರ್ಥವಾಗಲಿಲ್ಲ. ಪಿಳಿಪಿಳಿ ಕಣ್ಣುಬಿಟ್ಟ. ಮೋಡ ಅವಡುಗಚ್ಚಿತು. "ಮನೆಹಾಳ" ಎಂದು ಮುಖ್ಯಮಂತ್ರಿಯನ್ನು ಬೈದಿತು. ಆದರೆ ಮುಖ್ಯಮಂತ್ರಿಗಳಿಗೆ ಅದು ಕೇಳಿಸಲಿಲ್ಲ. ಅವರು ಮತ್ತೆಮತ್ತೆ ಅವನಿಗೆ ಅದನ್ನೇ ಹೇಳಿದರು. ಕೊನೆಯಲ್ಲಿ "ಇವನವ್ವನ" ಎಂದು ಬೈದರು. "ಏನಾದರೂ ಮಾಡಿ" ಎಂದು ಪಕ್ಕದಲ್ಲಿದ್ದ ನೀರಾವರಿ ಮಂತ್ರಿಗಳಿಗೆ ಹೇಳಿದರು. ನೀರಾವರಿ ಮಂತ್ರಿಗಳು ನಾಕು ಜನರನ್ನು ಕರೆದು ಪಿಸುಗಿಟ್ಟಿದರು. ಆ ಜನ ಒಂದು ದೊಡ್ಡ ಪರದೆ ತಂದು ಅವನನ್ನು ಮರೆಮಾಡಿದರು. ಮುಖ್ಯಮಂತ್ರಿಗಳ ಭಾಷಣ ಆರಂಭವಾಯಿತು.

"ನನ್ನ ಅಕ್ಕತಂಗಿಯರೇ, ಅಣ್ಣತಮ್ಮಂದಿರೇ... ನನ್ನ ದೇಹದ ಕಣಕಣವೂ ನಿಮ್ಮ ಸೇವೆಗಾಗಿ. ನಾನು ಮುಖ್ಯಮಂತ್ರಿಯಾದರೆ ನಾಡಿನ ಭಾಗ್ಯದ ಬಾಗಿಲನ್ನೇ ತೆರೆಯುವುದಾಗಿ ಚುನಾವಣೆಯ ಸಮಯದಲ್ಲಿ ನಾನು ನಿಮಗೆ ಆಶ್ವಾಸನೆ ಕೊಟ್ಟಿದ್ದು ನೆನಪಿದೆಯೇ? ಆ ಮಾತನ್ನೀಗ ನಾನು ಉಳಿಸಿಕೊಂಡಿದ್ದೇನೆ. ವರುಣದೇವನನ್ನು ಒಲಿಸಿಕೊಂಡು ನೀರಿನ ಅಕ್ಷಯಪಾತ್ರೆಯನ್ನು ನಿಮಗಾಗಿ ತಂದಿದ್ದೇನೆ. ಇನ್ನು ಮುಂದೆ ನೀರಿನ ಕೊರತೆ ನಿಮ್ಮನ್ನೆಂದೂ ಬಾಧಿಸಲಾರದು. ಇದೋ ನೋಡಿ..." ಎನ್ನುತ್ತಾ ಪರದೆಯನ್ನು "ಝಂಗ್" ಎಂದು ಸರಿಸಿದರು. ಜನ ಚಪ್ಪಾಳೆ ತಟ್ಟಿದರು. ನೀರು ಒಂದೇಸಮನೆ ಕನ್ನಂಬಾಡಿಯತ್ತ ಹರಿಯುವುದನ್ನೇ ನೋಡಿ ಬೆರಗಾದರು.

ಸುದ್ಧಿ ಎಲ್ಲೆಡೆ ಹರಡಿತು. ಪಕ್ಕದ ಮೆಟ್ಟೂರಿನಿಂದ ಜನಗಳ ಒಂದು ದೊಡ್ಡ ಗುಂಪು ಬಂದಿತು. "ಅವನನ್ನು ನಮ್ಮೂರಿಗೆ ಕಳಿಸಿಕೊಡಿ" ಎಂದು ಕೇಳಿತು. "ನಮ್ಮ ಕನ್ನಂಬಾಡಿ ಮೊದಲು ತುಂಬಲಿ. ಆಮೇಲೆ ನೋಡೋಣ" ಅಂದರು ಮುಖ್ಯಮಂತ್ರಿಯವರು ಮುಗುಮ್ಮಾಗಿ. ಮೆಟ್ಟೂರಿಗರು ಕೇಳಬೇಕಲ್ಲ. ಗಲಾಟೆ ಎಬ್ಬಿಸಿದರು. ಮುಖ್ಯಮಂತ್ರಿ ಜಪ್ಪಯ್ಯ ಅನ್ನಲಿಲ್ಲ. ಅಷ್ಟರಲ್ಲಿ ಮೆಟ್ಟೂರಿಗರಲ್ಲಿ "ಅಣ್ಣ ಡಿಎಂಕೆ" ಮತ್ತು "ತಂಬಿ ಡಿಎಂಕೆ" ಎಂಬ ಎರಡು ಗುಂಪುಗಳಾದವು. ಮೆಟ್ಟೂರಿಗೆ ನಾವು ನೀರು ತರುತ್ತೇವೆ, ನಾವು ತರುತ್ತೇವೆ ಎಂದು ಎರಡೂ ಗುಂಪಿನವರೂ ತಮ್ಮತಮ್ಮಲ್ಲೇ ಜಗಳಾಡತೊಡಗಿದರು. ಮೆಟ್ಟೂರಿಗರಿಗೆ ಮೆಟ್ಟುಗಳೇನು ಹೊಸದೇ? ಅವನ್ನೇ ಹಿಡಿದು ಬಡಿದಾಡಿದರು. ಅವನ ಪಂಚೆಯನ್ನು ಇವನು ಹರಿದ, ಇವನ ಬನಿಯನ್ನನ್ನು ಅವನು ಕಿತ್ತ. ಒಂದಿಬ್ಬರು ಸತ್ತೂಹೋದರು. ಗಲಾಟೆಗಳ ಚಿತ್ರಗಳನ್ನು ಪ್ರಕಟಿಸಿದ ಮೆಟ್ಟೂರಿನ ಕೆಲವು ಪತ್ರಿಕೆಗಳು ಘಟನೆಯನ್ನು ವಿರೂಪಗೊಳಿಸಿ "ಕನ್ನಂಬಾಡಿ'ಗಳಿಂದ ಮೆಟ್ಟೂರಿಗರ ಮೇಲೆ ಹಲ್ಲೆ, ಸಾವುನೋವು" ಎಂಬ ತಲೆಬರಹ ಕೊಟ್ಟವು. ಕನ್ನಂಬಾಡಿಯ ಜನರ ವರ್ತನೆಯನ್ನು ಖಂಡಿಸಿ ಮೆಟ್ಟೂರಿನಲ್ಲಿ ಬಂದ್ ಆಚರಿಸಲಾಯಿತು. ಇಷ್ಟೆಲ್ಲಾ ನಡೆಯುವಾಗ ಕನ್ನಂಬಾಡಿ ತುಂಬಿ ಹೆಚ್ಚಿನ ನೀರು ಹೊರಹರಿದುಹೋಗಿ ಮೆಟ್ಟೂರೂ ತುಂಬಿ ತುಳುಕಾಡಿತು. ಅದಂತೂ ಯಾರ ಗಮನಕ್ಕೂ ಬರಲೇ ಇಲ್ಲ. ಗಮನಿಸುವ ಸ್ಥಿತಿಯಲ್ಲೂ ಯಾರೂ ಇರಲಿಲ್ಲ.

ಮೆಟ್ಟೂರಿನ ಕೆಲವು ಬುದ್ಧಿವಂತರು ಒಂದಾಗಿ ಹೋರಾಡಿರೋ ಎಂದು ಅಣ್ಣತಂಬಿ ಡಿಎಂಕೆಗಳಿಗೆ ಬುದ್ಧಿ ಹೇಳಿದರು. ಅಣ್ಣತಂಬಿಗಳು ಆ ಮಾತನ್ನು ಕೇಳಿದವು. ಅವರವರ ನಡುವಿನ ಜಗಳ ನಿಂತಿತು. ಎಲ್ಲರೂ ಒಂದಾಗಿ ಮೇಲಿರುವ (ಅಂದರೆ ದಿಲ್ಲಿಯಲ್ಲಿ! ಸ್ವರ್ಗದಲ್ಲಲ್ಲ) ಮೇಜರ್ ಪುಢಾರಿಗಳಿಗೆ ಮನವಿ ಮಾಡಿಕೊಂಡರು. ಅವರೊಂದು ಟ್ರಿಬ್ಯೂನಲ್ ರಚಿಸಿದರು. ಆಮೇಲೆಲ್ಲಾ ಬರೀ ರಾಜಕೀಯ...

ತನ್ನಪಾಡಿಗೆ ತಾನು ಹೆಣ್ಣು ಹುಡುಕಿಕೊಂಡು ಹೋಗುತ್ತಿದ್ದ ಅವನು ಹೀಗೆ ಪುಢಾರಿಗಳ ಕೈಗೆ ಸಿಕ್ಕಿ ಒಂದು ಬಗೆಹರಿಸಲಾಗದ ಸಮಸ್ಯೆಯಾಗಿಹೋದ. ಪುಢಾರಿಗಳ ಕೈಗೆ ಸಿಕ್ಕಿದ ಯಾವುದು, ಯಾವನು, ಯಾವಳು ತಾನೆ ಮರ್ಯಾದೆಯಾಗಿ ಉಳಿಯಲು ಸಾಧ್ಯ? ಮತ್ತೆ... ಮ್... ಮತ್ತೆ... ಪುಢಾರಿಗಳ ಕೈಗೆ ಸಿಕ್ಕಿಹೋದವನ ಬಗ್ಗೆ ನಾನು ಮುಂದೇನು ತಾನೆ ಹೇಳಲು ಸಾಧ್ಯ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X