ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಕಥೆ : ವಾಸ್ತವ

By Staff
|
Google Oneindia Kannada News

Raghavendra Sharma, Talavata, Sagar
ಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?

* ಆರ್.ಶರ್ಮಾ, ತಲವಾಟ

ಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು ನಿಲ್ಲಿಸುವ ಪರಿ ತಿಳಿಯದೆ ಪರದಾಡತೊಡಗಿದ. ಎದುರು ಕುಳಿತ ಸ್ವಾಮೀಜಿಯ ಕಣ್ಣುಗಳನ್ನು ದುರುಗುಟ್ಟಿ ನೋಡಿದ. ಐದು ನಿಮಿಷಕ್ಕೆ ಮೊದಲು ಫಲತಾಂಬೂಲ ಅರ್ಪಿಸಿ ಪಾದಕ್ಕೆ ಎರಗುವಾಗಿನ ಮುಖಭಾವ ಈಗಿರಲಿಲ್ಲ. ಕಣ್ಣುಗಳು ಕೆಂಪೇರತೊಡಗಿತು. ಹೊಕ್ಕುಳಬಳ್ಳಿ ಛಳಕ್ಕೆಂದಿತು. ಗಂಟಲಿನಾಳಾದಿಂದ ಧ್ವನಿ ಹೊಮ್ಮತೊಡಗಿತು.

"ನಮ್ಮಂತೆ ಮನುಷ್ಯರು ನೀವು, ಕಾವಿ ಬಟ್ಟೆ ಉಟ್ಟಾಕ್ಷಣ ಬೇರೆಯಾಗುವ ಬಗೆ ಹೇಗೆ? ನಮ್ಮಷ್ಟೆ ದುಡ್ಡಿನ ವ್ಯಾಮೋಹ ನಿಮಗೆ. ದುಡ್ಡಿಲ್ಲದ ಕ್ಷಣವನ್ನು ನೀವೂ ನಮ್ಮಂತೆ ಊಹಿಸಿಕೊಳ್ಳಲಾರಿರಿ. ಜೀವನದ ಅಭದ್ರತೆ ನಮ್ಮಂತೆ ನಿಮಗೂ ಕಾಡುತ್ತದೆ. ಯಾಕೆ? ಅಷ್ಟೇ ಯಾಕೆ? ಸ್ವಪ್ನ ಸ್ಖಲನ ನಿಮಗೂ ಆಗಿಲ್ಲವೇನು? ಆವಾಗ ಸುಂದರ ಸ್ತ್ರೀ ನಿಮ್ಮ ಕನಸಿನಲ್ಲಿಯೂ ಬರಲಿಲ್ಲವೇನು? ಸ್ಖಲನವಾಗಲಿಲ್ಲ ಎಂದು ನನ್ನ ಬಳಿ ಸುಳ್ಳು ಹೇಳಬೇಡಿ, ಆಗದಿದ್ದರೆ ಅದು ಪ್ರಕೃತಿಗೆ ವಿರುದ್ಧವಾದ ಕ್ರಿಯೆ. ಆವಾಗ ನೀವು ಮುವತ್ತೈದನೇ ವಯಸ್ಸಿನೊಳಗೆ ಇಹಲೋಕ ತ್ಯಜಿಸಲೇಬೇಕಿತ್ತು." ಹೀಗೆ ಮುಂದುವರೆಯುತ್ತಲೇ ಇತ್ತು.

ಸ್ವಾಮೀಜಿಗಳ ಶಿಷ್ಯಕೋಟಿ ಒಮ್ಮೆ ಭ್ರಮಿಸಿತಾದರೂ ನಂತರ ಎಚ್ಚೆತ್ತುಕೊಂಡು ಅವನನ್ನು ಹೆಚ್ಚುಕಮ್ಮಿ ಹೊತ್ತುಕೊಂಡು ಆಚೆ ಬಿಟ್ಟಿತು. ಗಣ್ಯ ವ್ಯಕ್ತಿಯಾದ್ದರಿಂದ ಧರ್ಮದೇಟು ಬೀಳಲಿಲ್ಲ, ಸಾರ್ವಜನಿಕರ ದೃಷ್ಟಿಯಲ್ಲಿ ಅವನಿಗೆ ಮಾನಸಿಕ ರೋಗಿಯ ಪಟ್ಟ ದೊರಕುವ ಲಕ್ಷಣ ನಿಚ್ಚಳವಾಗತೊಡಗಿತು. ಹಾಗಂತ ಅವನೇನು ಹುಚ್ಚನಲ್ಲ, ಮಾನಸಿಕ ರೋಗಿಯೂ ಅಲ್ಲ. ಎಲ್ಲರಂತೆ ಸಾಮಾನ್ಯನೂ ಅಲ್ಲ. ಇಡೀ ತಾಲ್ಲೂಕಿನಲ್ಲಿ ಅವನದ್ದೆ ಆದ ಹೆಸರು ಗಳಿಸಿದ್ದ. ಇಪ್ಪತ್ತು ವರ್ಷಗಳಿಂದ ಹಲವಾರು ಸಂಘಸಂಸ್ಥೆಗಳಲ್ಲಿ, ಮಠ ಮಾನ್ಯಗಳಲ್ಲಿ ದುಡಿದು ಜನನಾಯಕ ಎನಿಸಿಕೊಂಡಿದ್ದ. ಇದೇ ವೇಗದಲ್ಲಿ ಮುನ್ನುಗ್ಗಿದರೆ ಆತ ಶಾಸಕನೂ ಆಗಬಹುದೆಂಬ ಮಾತು ತಾಲ್ಲೂಕಿನಾದ್ಯಂತ ಪ್ರಚಾರದಲ್ಲಿತ್ತು. ನಲವತ್ತರ ಸಣ್ಣ ವಯಸ್ಸಿನಲ್ಲಿ ಅವನಿಗೆ ಸಿಕ್ಕ ಜನಮನ್ನಣೆಗೆ ಹಲವಾರು ಜನರು ಕರುಬುತ್ತಿದ್ದರು. ಆದರೆ ಅಷ್ಟರಲ್ಲಿ ಈ ತರಹದ ವಿಚಿತ್ರ ಪರಿಸ್ಥಿತಿಯಲ್ಲಿ ಸಿಕ್ಕು ಪರಿಹಾರ ಕಾಣದೆ ಮಿಸುಕಾಡುತ್ತಿದ್ದ.

ಮೊದಲ ಬಾರಿ ಈ ರೀತಿ ಅನುಭವವಾದಾಗ ಆತ ಬಹಳ ಜನರ ಪ್ರತಿಭಟನೆ ಎದುರಿಸಬೇಕಾಯಿತು. ಅಡಿಕೆ ದರದ ಕುಸಿತಕ್ಕೆ ಬೆಂಬಲ ಬೆಲೆ ನೀಡುವುದರ ಕುರಿತು ಸರ್ಕಾರದ ವಿರುದ್ಧ ಪ್ರತಿಭಟನೆಯೊಂದರಲ್ಲಿ ಭಾಷಣ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಹೊಕ್ಕುಳಬಳ್ಳಿ ಛಳಕ್ಕೆಂದಿತು. ಒಂದರ ಹಿಂದೆ ಒಂದರಂತೆ ಆಲೋಚನೆಗಳು ನಿರಂತರವಾಗಿ ಮೂಡಿ ಬರತೊಡಗಿದವು. ಎಲ್ಲವನ್ನೂ ದೊಡ್ಡದಾಗಿ ಕೂಗಿ ಹೇಳಬೇಕೆನಿಸಿತು. ತಲೆ ಸಿಡಿದು ಹೋಗುತ್ತಿರುವ ಅನುಭವ ತಡೆಯಲಾರದೆ.

"ಮಹನೀಯರೆ ಅಡಿಕೆಗೆ ಈಗಾಗಲೆ ಇರುವ ದರ ಸಾಕಷ್ಟಿದೆ, ಬೆಲೆ ಹೆಚ್ಚಾದಾಗ ನಾವು ಸರ್ಕಾರಕ್ಕೆ ಕೊಡುವುದಿಲ್ಲ. ಕಡಿಮೆಯಾದಾಗ ಕೇಳಬಾರದು. ಇಷ್ಟಕ್ಕೂ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಅಡಿಕೆಯಿಂದ ಹಾನಿಯೇ ಹೊರತು ಪ್ರಯೋಜನವಿಲ್ಲ. ಅಡಿಕೆ ತಂಬಾಕಿನೊಂದಿಗೆ ಸೇರಿದ ಕಾರಣಕ್ಕೆ ಅದಕ್ಕೊಂದು ಬೆಲೆ. ಗುಟ್ಕಾದ ಸೇವನೆಯಿಂದ ನಮ್ಮ ಯುವಜನತೆಯ ದೇಹ ರೋಗಗಳ ಗೂಡಾಗುತ್ತಿದೆ. ನಮ್ಮ ಮಕ್ಕಳು ಅಡಿಕೆ ತಿಂದರೆ ಅಡಿಕೆ ಬೆಳೆಗಾರರಾದ ನಾವು ಹೊಡೆಯುತ್ತೇವೆ. ಹಾಗಿದ್ದ ಮೇಲೆ ಬೇರೆಯವರು ತಿಂದು ಹಾಳಾಗಲಿ ಎಂದು ಬಯಸುವುದು ಶುದ್ಧ ತಪ್ಪು. ಇಲ್ಲಿ ಸೇರಿರುವ ಅಡಿಕೆ ಬೆಳೆಗಾರರಲ್ಲಿ ಅವರು ಸ್ವತಃ ಉಪಯೋಗಿಸುವ ಅಡಿಕೆ ಎಷ್ಟು? ಅವರೇಕೆ ಉಪಯೋಗಿಸುವುದಿಲ್ಲ. ಯೋಚಿಸಿ ಅಡಿಕೆ ತಂಬಾಕುಗಳಂತಹ ಸಮಾಜದ ಆರೋಗ್ಯ ಹಾಳುಮಾಡುವ ಬೆಳೆಗಳನ್ನು ನಿಷೇಧಿಸಬೇಕು. ಆಹಾರ ಪದಾರ್ಥಗಳನ್ನು ಬೆಳೆಯುವ ಭತ್ತದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಅವರಿಗೆ ಸರ್ಕಾರದಿಂದ ಸಹಾಯಧನ ನಿಡಬೇಕು. ಅಡಿಕೆಗೆ ತೆರಿಗೆ ಹಾಕಿ ಆ ಹಣವನ್ನು ಆಹಾರ ಪದಾರ್ಥ ಬೆಳೆಯುವ ರೈತರಿಗೆ ನೀಡಬೇಕು."

ಅವನಿಂದ ಓತಪ್ರೋತವಾಗಿ ಹರಿದುಬರುತ್ತಿತ್ತು. ಅಡಿಕೆಗೆ ಬೆಂಬಲ ನೀಡುವುದಕ್ಕಾಗಿ ಸೇರಿದ್ದ ಸಭೆಯಲ್ಲಿ ಅಡಿಕೆಬೆಳೆಗಾರರೇ ಜಾಸ್ತಿ ಇದ್ದುದರಿಂದ ಅವನನ್ನು ಅಲ್ಲಿಂದ ಆಚೆ ಕರೆದುಕೊಂಡುಹೋಗುವುದಕ್ಕೆ ಪರದಾಟ ಪಡುವಂತಾಯಿತು. ಸಭಿಕರು ಕೈಗೆ ಸಿಕ್ಕ ವಸ್ತುಗಳನ್ನು ಅವನತ್ತ ಎಸೆದರು. ಅದೃಷ್ಟವಶಾತ್ ಅವನಿಗೆ ಅದು ತಗುಲಲಿಲ್ಲ. ಸಭೆಯಲ್ಲಿ ಅಷ್ಟು ಹೇಳಿದ ನಂತರ ಅವನ ಮನಸ್ಸಿನ ಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ನಂತರ ತನ್ನಿಂದಾದ ಪ್ರಮಾದದ ಅರಿವಾಯಿತು. ತಾನು ಸಭೆಯಲ್ಲಿ ಹೇಳಿದ ಮಾತುಗಳನ್ನು ಒಮ್ಮೆ ಜ್ಞಾಪಿಸಿಕೊಂಡ. "ಅರೆ ನಿಜ. ತಾನು ಸಭೆಯಲ್ಲಿ ಹೇಳಿದ್ದು ಸತ್ಯ. ಹೇಳಬಾರದ ಸತ್ಯವಲ್ಲ. ಆದರೆ ಅಲ್ಲಿ ಅದು ಕಹಿ ಸತ್ಯ. ಇದೊಂದೇ ಕಾರಣದಿಂದ ಅಡಿಕೆ ಬೆಳೆಗಾರರ ವಕ್ರದೃಷ್ಟಿಗೆ ಗುರಿಯಾದೆನಲ್ಲ ಇಪ್ಪತ್ತು ವರ್ಷಗಳ ಶ್ರಮ ಮಣ್ಣುಪಾಲಾಯಿತಲ್ಲ" ಎಂದು ವ್ಯಥೆಪಟ್ಟ.

ನಂತರ ಒಬ್ಬನೆ ಕುಳಿತು ಆ ಕ್ಷಣದ ಯೋಚನೆ ಮಾಡಿದಾಗೆಲ್ಲಾ ಅವನಿಗೆ ಭಯವಾಗುತ್ತಿತ್ತು. ತನ್ನ ನಿಯಂತ್ರಣದಲ್ಲಿಲ್ಲದ ಇದು ಖಾಯಿಲೆಯಾ ಎಂಬ ಚಿಂತೆ ಅವನನ್ನು ಕಾಡಿತು. ಛೆ ತನ್ನಂತ ದೃಢಮನಸ್ಸಿನವನಿಗೆ ಇಪ್ಪತ್ತು ವರ್ಷಗಳಿಂದ ನೂರಾರು ಸ್ವಭಾವದ ಸಾವಿರಾರು ಜನರೊಂದಿಗೆ ವ್ಯವಹರಿಸಿದವನಿಗೆ ಖಾಯಿಲೆ ಅದೂ ಮಾನಸಿಕೆ ಖಾಯಿಲೆ ಸಾಧ್ಯವೆ ಇಲ್ಲ ಎಂದು ಸಮಾಧಾನ ಮಾಡಿಕೊಂಡರೂ ಮರುಕ್ಷಣ ನೆನಪುಗಳು ಕಾಡುತ್ತಿತ್ತು. ಆ ತರಹದ ಯೋಚನೆಗಳು ಸ್ವಲ್ಪ ದಿನ ಕಾಡಿ ನಂತರ ಮಾಯವಾಯಿತು. ಅಷ್ಟರಲ್ಲಿ ಅಡಿಕೆಗೆ ಉತ್ತಮ ಧಾರಣೆ ಬಂದಿದ್ದರಿಂದ ಜನರೂ ಅದನ್ನು ಮರೆತರು.

ಎರಡನೆ ಸಲ ಹೊಕ್ಕುಳಬಳ್ಳಿ ಛಳಕ್ಕೆಂದಾಗ ಆತ ಸ್ವಾಮೀಜಿಗಳೊಂದಿಗೆ ಪ್ರಮುಖವಾದ ವಿಷಯದ ಸಂವಾದದಲ್ಲಿದ್ದ. ಜನರು ಈ ಬಾರಿ ಮಾತ್ರ ಕ್ಷಮಿಸಲಿಲ್ಲ. ಗುರುದ್ರೋಹಿ ಎಂದರು, ಬಹಿಷ್ಕಾರ ಹಾಕುವ ಪ್ರಸ್ತಾಪವೂ ಬಂತು, ಸ್ವಾಮೀಜಿಗಳ ಬಳಿ ನಿಯೋಗವೊಂದು ಹೋಯಿತು. ಅದರ ನೇತೃತ್ವವನ್ನು ಅವನ ಏಳ್ಗೆಯನ್ನು ಸಹಿಸಲಾರದವನೊಬ್ಬ ವಹಿಸಿದ್ದ. ಗುರುಗಳಿಗೆ ಹೇಳಬಾರದ್ದನ್ನೆಲ್ಲಾ ಹೇಳಿದ ಆತನ ವರ್ತನೆಯನ್ನು ಖಂಡಿಸಿದರು. ಅವನಿಗೆ ಮಠದಲ್ಲಿ ನೀಡಲಾದ ಹುದ್ದೆಯನ್ನು ವಾಪಾಸುಪಡೆದು ಸಮಾಜದಿಂದ ಆತನನ್ನು ಹೊರಗಟ್ಟುವಂತೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು. ಆದರೆ ಸ್ವಾಮೀಜಿಗಳು ಮಾತ್ರ ಮುಗುಳ್ನಕ್ಕು ನಿಯೋಗದ ಕ್ರಮವನ್ನು ಅನುಷ್ಠಾನಗೊಳಿಸದೆ ಅವರಿಗೆ ಮಂತ್ರಾಕ್ಷತೆ ಕೊಟ್ಟು ಕಳುಹಿಸಿದರು. ಸ್ವಾಮೀಜಿಯ ವರ್ತನೆ ನಿಯೋಗದವರಿಗೆ ಅರ್ಥವಾಗದಿದ್ದರೂ ಸ್ವಾಮಿಜಿಗೆ ಅವನಾಡಿದ ನಗ್ನ ಸತ್ಯದ ಮಹತ್ವ ತಿಳಿದಿತ್ತು.

'ವಾಸ್ತವ' ಕಥೆಯ ಮುಂದಿನ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X