ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಕಥೆ : ವಾಸ್ತವ (ಭಾಗ 3)

By * ಆರ್.ಶರ್ಮಾ, ತಲವಾಟ
|
Google Oneindia Kannada News

(ಕಥೆ ಮುಂದುವರಿದಿದೆ)

ಸ್ವಾಮೀಜಿಗಳನ್ನು ಮಂತ್ರಘೋಷಗಳ ಜತೆಗೆ ಪೂರ್ಣಕುಂಭದೊಂದಿಗೆ ಊರಿಗೆ ಸ್ವಾಗತಿಸಲಾಯಿತು. ಸ್ವಾಮೀಜಿ ಪೀಠವನ್ನು ಅಲಂಕರಿಸಿದರು. ಅವನು ತನ್ನ ಕುಟುಂಬದೊಂದಿಗೆ ಒಂದು ಕಡೆ ಹತಾಶನಾಗಿ ಕುಳಿತಿದ್ದ. ನೂರಾರು ಜನರು ಸೇರಿದ್ದರು. ಗುರುಪೀಠವನ್ನು ವಿರೋಧಿಸುವ ಗುಂಪು ಕೂಡ ಈ ವಿಷಯದಲ್ಲಿ ರಾಜಿಯಾದಂತೆ ಅಲ್ಲಿ ಸೇರಿದ್ದರು. ನಾಸ್ತಿಕರಿಗೂ ಕುತೂಹಲ ಹಾಗಾಗಿ ಅವರೂ ಅಂಗಿ ಬಿಚ್ಚಿ ಶಲ್ಯ ಹೊದ್ದು ಬಂದಿದ್ದರು. ಮಠಕ್ಕೆ ದೇಣಿಗೆ ಕೊಡದವರೂ ಅಲ್ಲಿದ್ದರು. ಜನರಲ್ಲಿ ದುಗುಡ ತುಂಬಿತ್ತು. ಒಂದಿಷ್ಟು ಜನರಿಗೆ ಅಂತರಾಳದಲ್ಲಿ ತಡೆಯಲಾರದ ಖುಷಿ ಹೊರಗಡೆ ನಡೆಯಬಾರದ ಅನಾಹುತ ನಡೆಯುತ್ತದೆ ಎಂಬ ಮುಖಭಾವವನ್ನು ತಂದುಕೊಳ್ಳಲು ಹರಸಾಹಸ ಪಡುತ್ತಿದ್ದರು. ಅಷ್ಟರಲ್ಲಿ ಅವನಿಗೆ ಹೊಕ್ಕುಳಬಳ್ಳಿ ಛಳಕ್ಕೆಂತು.

"ಇಲ್ಲಿ ಸೇರಿರುವವರೆಲ್ಲಾ ಭಕ್ತರೂ ಅಲ್ಲ, ಇವರಲ್ಲಿ ಭಕ್ತಿಯೂ ಇಲ್ಲ. ಎಲ್ಲರೂ ಪರಮ ಸ್ವಾರ್ಥಿಗಳು ಮತ್ತು ಪರಮ ಲೋಭಿಗಳು. ತಮಗೆ ಒಳ್ಳೆಯದಾಗಲಿ ಎಂದು ಗುರುಗಳ ಮಂತ್ರಾಕ್ಷತೆ ಪಡೆಯಲು ಬಂದವರು. ದಿನನಿತ್ಯ ಧರ್ಮ ವಿರೋಧಿ ಚಟುವಟಿಕೆ ಇವರ ಜೀವನ. ಸ್ವಾಮೀಜಿಗಳೆದುರಿಗೆ ಕೈಮುಗಿದು ನಾಟಕವಾಡುವ ಇವರು ನಂತರ ನಡೆ ನುಡಿಯಲ್ಲಿ ಹೆಜ್ಜೆ ಹೆಜ್ಜೆಗೂ ಮಠವನ್ನು ದೂಷಿಸುತ್ತಾರೆ. ಹಣದ ವಿಚಾರದಲ್ಲಿ ದಾಹಿಗಳು. ಇವತ್ತು ಇವರು ಈ ಪರಿ ಸೇರಿದ್ದು ಭಕ್ತಿಯಿಂದಲ್ಲ ಈ ಪರಿಸ್ಥಿತಿಯ ಲಾಭ ತನಗೆಷ್ಟು ಎಂದು ನೋಡಲು ಬಂದವರು......ಒಳ್ಳೆಯ ಕಾರ್ಯಕ್ಕೆ ಹತ್ತು ಜನ ಸೇರಿಸಲು ನಾನು ಪಾಡು ಪಟ್ಟಿದ್ದೇನೆ ಆದರೆ ಇಂದು..ನೋಡಿ......"

ಸಭೆಯಲ್ಲಿ ಗದ್ದಲ ಶುರುವಾಯಿತು. ಒಬ್ಬರು ಆತನಿಗೆ ಹೊಡೆಯಿರಿ ಎಂದರೆ ಮತ್ತೊಬ್ಬರು ಬಡಿಯಿರಿ ಎನ್ನುತ್ತಿದ್ದರು. ಆತನಿಗೆ ದೇಶದಿಂದಲೇ ಓಡಿಸಬೇಕು ಎನ್ನುತ್ತಿದ್ದರು ಮಗದೊಬ್ಬರು. ಗುರುಗಳು ಇಲ್ಲದಿದ್ದರೆ ಅವನ ಕಥೆ ನೋಡಬೇಕಿತ್ತು ಎನ್ನುತ್ತಿದ್ದ ಇನ್ನೊಬ್ಬ. ಆಶ್ಚರ್ಯವೆಂದರೆ ಹಾಗೆ ಹೇಳುತ್ತಿದ್ದಾತ ಆ ದಿನದವರೆಗೂ ಪಕ್ಕಾ ನಾಸ್ತಿಕನಾಗಿದ್ದ. ಮಠ ಸ್ವಾಮೀಜಿಗಳನ್ನು ಆತ ತಾನು ಮಾನ್ಯಮಾಡುವುದಿಲ್ಲ, ಅದು ಸೋಮಾರಿಗಳ ಸಂತೆ ಎನ್ನುತ್ತಿದ್ದ.

ಇಷ್ಟು ಗಲಭೆ ಗಲಾಟೆಗಳಾಗುತ್ತಿದ್ದರೂ ಸ್ವಾಮೀಜಿಗಳು ಮಾತ್ರ ಮುಗುಳ್ನಗುತ್ತಿದ್ದರು. ಅವರ ಈ ವರ್ತನೆ ಅವನ ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. ಸ್ವಾಮೀಜಿಗಳ ಸಹಾನುಭೂತಿ ಅವನೆಡೆಗೆ ಬಿದ್ದರೆ ಕಷ್ಟ ಎಂಬ ಚಿಂತೆ ಕಾಡುತ್ತಿತ್ತು. ಸ್ವಾಮಿಜಿಗೆ ಅವನ ಬಗ್ಗೆ ಸರಿಯಾಗಿ ಹೇಳಿದ್ದೀರಾ ಬಹಿಷ್ಕಾರ ಖಂಡಿತಾ ತಾನೆ, ಎಂದು ನಿಯೋಗದವರೊಡನೆ ಗುಸುಗುಸು ಪಿಸ ಪಿಸ ಮಾಡುತ್ತಿದ್ದರು. ಅವರಲ್ಲೊಬ್ಬನಿಗೆ ತಡೆಯದಾಯಿತು. ಪೀಠದ ಬಳಿ ಹೋಗಿ ತಾನು ಹೊದೆದ ಶಲ್ಯವನ್ನು ತನ್ನ ಬಾಯಿಗೆ ಅಡ್ಡ ಹಿಡಿದು, "ಅವನಿಗೆ ಬಹಿಷ್ಕಾರ ಹಾಕಲು ಇದು ಸರಿಯಾದ ಸಮಯ ನಿರ್ಣಯ ಕೊಡಿ ಎಂದ". ಸ್ವಾಮೀಜಿಗಳು ನಿಧಾನವಾಗಿ ಪೀಠದಿಂದ ಮೇಲೆದ್ದರು.

ಸಭೆ ಒಮ್ಮೆಲೆ ಸ್ತಬ್ದವಾಯಿತು. ಇಷ್ಟು ಹೊತ್ತು ಸಭೆಯ ಗಲಾಟೆಯಿಂದ ಅವನ ಮಾತುಗಳು ಯಾರಿಗೂ ಕೇಳುತ್ತಿರಲಿಲ್ಲ. ಈಗ ಮತ್ತೆ ಅವನ ಮಾತುಗಳು ಎಲ್ಲರಿಗೂ ಕೇಳಲಾರಂಬಿಸಿತು. "ಓ ಅಲ್ಲಿದಾರರಲ್ಲ ಅವರು ಇಷ್ಟು ದಿವಸ ಮಠವನ್ನು ವಿರೋಧಿಸುತ್ತಿದ್ದವರು, ಒಂದು ರೂಪಾಯಿ ದೇಣಿಗೆ ಕೊಟ್ಟವರಲ್ಲ, ಇವತ್ತು ಬಂದಿದ್ದು ಸ್ವಾರ್ಥಕ್ಕೆ, ಸಮಾಜವನ್ನು ಒಡೆಯಲು ಅವರ ಕಾಣಿಕೆ ಬಹಳ, ಅವರು ಹಿಂಸಾವಿನೋದಿಗಳು, ಮತ್ತೊಬ್ಬರಿಗೆ ತೊಂದರೆಯಾಗುತ್ತದೆಯಾದರೆ ಬೆಳಿಗ್ಗೆವರೆಗೂ ಸಭೆ ನಡೆಸುವ ಕುತ್ಸಿತ ಮನಸ್ಸಿನವರು. ಧರ್ಮ ದೇವರು ಎಲ್ಲಾ ಸುಳ್ಳು, ನೈತಿಕತೆ, ಸತ್ಯ ನ್ಯಾಯ ಎಲ್ಲಾ ಅನುಕೂಲಸಿಂಧು ಕಾರ್ಯಕ್ರಮಗಳು. ದುಡ್ಡು ಸಿಗುತ್ತದೆಯೆಂದರೆ ಧರ್ಮವನ್ನು ದೇವರನ್ನೂ, ನ್ಯಾಯ ನೀತಿಯನ್ನೂ ಧಿಕ್ಕರಿಸುವ ಜನರು...." ಕೆಲವರು ಧರ್ಮನಿಂದನೆ ಎಂದು ಕಿವಿ ಮುಚ್ಚಿಕೊಂಡರು. ಹಲವರು ಖುಷಿಪಡುತ್ತಿದ್ದರು. ಕಾರಣ ಕುರಿ ಕೊಬ್ಬಿದಷ್ಟು ಕಟುಕನಿಗೆ.....

ಇಷ್ಟೆಲ್ಲಾ ನಡೆದರೂ ಸ್ವಾಮೀಜಿಗಳ ಮುಖದಲ್ಲಿ ಮಂದಹಾಸವಿತ್ತು. ಕರಂಡಿಕೆಗೆ ಕೈಹಾಕಿ ಶ್ರೀಗಂಧವನ್ನು ತೆಗೆದುಕೊಂಡು ನಿಧಾನ ಅವನ ಬಳಿ ಹೋಗಿ ಮೂಗಿನ ಮೇಲೆ ದಪ್ಪನೆಯ ಒಂದು ಶ್ರೀಗಂಧದ ನಾಮ ಹಾಕಿದರು. ತಕ್ಷಣ ಆತನ ಮಾತುಗಳು ನಿಂತವು. ಅವನ ಕಣ್ಣುಗಳಿಂದ ದಳದಳನೆ ನೀರು ಇಳಿದು ಬರತೊಡಗಿತು. ಅವನು ನಿಧಾನವಾಗಿ ತನ್ನ ಎರಡೂ ಕೈಗಳನ್ನು ಜೋಡಿಸಿ ಸ್ವಾಮೀಜಿಗಳತ್ತ ಧನ್ಯತಾಭಾವದ ನೋಟದೊಂದಿಗೆ ಕುಸಿದು ಕುಳಿತ.

ಅದ್ಬುತವನ್ನು ಕಣ್ಣಾರೆ ಕಂಡ ಭಕ್ತಾಧಿಗಳು ಹರ್ಷೋದ್ಗಾರ ಹಾಕಿದರು. ಕಲಿಯುಗದಲ್ಲಿ ಅವತರಿಸಿದ ಪರಮಾತ್ಮ ಎಂದು ಸ್ವಾಮೀಜಿಗಳೆದುರು ಕೈಮುಗಿದು ನಿಂತರು. ಇದೆಲ್ಲಾ ಸಹಜವೆಂಬಂತೆ ಸ್ವಾಮಿಜಿ ಭಕ್ತರಿಗೆ ಮಂತ್ರಾಕ್ಷತೆ ನೀಡತೊಡಗಿದರು. ಅವನ ವಿರೋಧಿಗಳಿಗೆ ಸ್ವಾಮೀಜಿಯ ಈ ವರ್ತನೆ ಅಷ್ಟೊಂದು ಸಹ್ಯವಾಗಲಿಲ್ಲ. ತಾತ್ಕಾಲಿಕವಾಗಿ ಆಸ್ತಿಕರಾಗಿದ್ದವರು ಮತ್ತೆ ತಮ್ಮ ಮೂಲ ತತ್ವವಾದ ಮಠವಿರೋಧಿ ನಿಲುವಿಗೆ ಮರಳಿದರು. ಸ್ವಾಮೀಜಿಗಳ ಕಾರು ಧೂಳೆಬ್ಬಿಸುತ್ತಾ ಮಾಯವಾಯಿತು. ಅವನಿಗೆ ಜೀವನದಲ್ಲಿ ಮತ್ತೆಂದೂ ಹೊಕ್ಕಳಬಳ್ಳಿ ಛಳಕ್ಕೆನ್ನಲಿಲ್ಲ ಹಾಗು ಆನಂತರ ಮಠದ ಕೆಲಸಗಳಿಗೆ ತನ್ನನ್ನು ಇನ್ನೂ ಹೆಚ್ಚು ತೊಡಗಿಸಿಕೊಂಡು ಪುನೀತನಾದ.
***
ಇವೆಲ್ಲ ಘಟನೆಗಳ ನಡುವೆ ಶ್ರೀಗಂಧದೊಂದಿಗೆ ಸೂಜಿಮೆಣಸಿನ ಪುಡಿ ಬೆರಸಿ ಅವನ ಮೂಗಿನ ಮೆಲೆ ಹಚ್ಚಿ ಅವನ ಮನಸ್ಸಿನ ಒತ್ತಡವನ್ನು ದೇಹದ ಉರಿಯತ್ತ ಹೊರಳಿಸಿ ಯಶಸ್ವಿಯಾದ ಸ್ವಾಮೀಜಿಯ ತಂತ್ರ, ಶ್ರೀಗಂಧಕ್ಕೆ ಮೆಣಸಿನಪುಡಿ ಬೆರಸಿದ ಗಿಂಡಿಮಾಣಿಯ ಹೊರತಾಗಿ ಯಾರಿಗೂ ತಿಳಿಯಲಿಲ್ಲ.

<strong>« 'ವಾಸ್ತವ' ಕಥೆಯ ಮೊದಲ ಭಾಗ</strong>« 'ವಾಸ್ತವ' ಕಥೆಯ ಮೊದಲ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X