ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಶೇಖರ ಸಣ್ಣಕಥೆ ಕ್ರೌರ್ಯ

By Staff
|
Google Oneindia Kannada News

Permshekhar
* ಪ್ರೇಮಶೇಖರ, ಪಾಂಡಿಚೆರಿ

ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.

ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ ಒಂದೆರಡು ಮಾತಾಡಿ ಕಿಟಕಿಯತ್ತ ತಿರುಗಿದೆ. ಕಂಡಕ್ಟರ್ ಎಲ್ಲರ ಟಿಕೆಟ್ ಪರಿಶೀಲಿಸಿ ದೀಪಗಳನ್ನು ಆರಿಸುವ ಹೊತ್ತಿಗೆ ಮುಕ್ಕಾಲು ಗಂಟೆ ಕಳೆದುಹೋಗಿ ದಿಂಡಿವನಂ ಬಂದಾಗಿತ್ತು. ಅಲ್ಲಿ ಎರಡು ನಿಮಿಷ ನಿಂತ ಶಾಸ್ತ್ರ ಮಾಡಿ ಹೊರಟ ಬಸ್ಸು ಮತ್ತೆ ಕತ್ತಲುಗಟ್ಟಿದಂತೆ ನಾನು ಸೀಟನ್ನು ಹಿಂದಕ್ಕೆ ವಾಲಿಸಿ ಕಣ್ಣುಮುಚ್ಚಿದೆ. ಎಚ್ಚರವಾದದ್ದು ಊತಂಗರೈ ತಲುಪಿದಾಗಲೇ. ಗಡಿಯಾರ ನೋಡಿದೆ. ಒಂದೂಮುಕ್ಕಾಲಾಗಿತ್ತು. ಕೆಳಗಿಳಿದು ಹೋಗಿ ಟೀ ಕುಡಿದು ಬಂದು ಮತ್ತೆ ಕಣ್ಣು ಮುಚ್ಚಿದೆ. ಪಕ್ಕದ ಸೀಟಿನವನು ಅದ್ಯಾವಾಗ ಬಂದು ಕೂತನೋ ಗೊತ್ತಾಗಲಿಲ್ಲ. ನನಗೆ ಮತ್ತೆ ನಿದ್ದೆ ಆವರಿಸಿತ್ತು.

ಇದ್ದಕ್ಕಿದ್ದಂತೆ ಮುಖಕ್ಕೆ ಬಿಸಿಗಾಳಿ ರಾಚಿದಂತಾಗಿ ಗಕ್ಕನೆ ಕಣ್ಣುಬಿಟ್ಟೆ. ಬಸ್ಸು ನಿಂತಿತ್ತು. ದೀಪಗಳಿಲ್ಲದ ಕತ್ತಲು. ಜತೆಗೇ ಬಸ್ಸಿಡೀ ಮಂಜು ಮುಸುಕಿದಂತಿದ್ದು ಏನೂ ಸರಿಯಾಗಿ ಕಾಣುತ್ತಿರಲಿಲ್ಲ. ಬಸ್ಸಿನ ಮುಂಭಾಗದಿಂದ ಕ್ಷೀಣವಾಗಿ "ಭೊಸ್" ಎಂಬ ಶಬ್ಧ ಕೇಳಿಬರುತ್ತಿತ್ತು. ಏನಾಗಿದೆಯೆಂದು ಗೊತ್ತಾಗದೇ ಗಾಬರಿಯಾಯಿತು. ಪಕ್ಕ ತಿರುಗಿದರೆ ಸೀಟು ಖಾಲಿ. ಏಳಲು ಹೋದರೆ ಮುಂದುಗಡೆಯ ಸೀಟು ನನ್ನ ಎದೆಯ ಮೇಲೆ ಇದ್ದಂತೆನಿಸಿ ಮತ್ತೆ ಹಿಂದಕ್ಕೆ ಕುಸಿದೆ. "ಸೀಟನ್ನ ಸ್ವಲ್ಪ ಮುಂದಕ್ಕೆ ಮಾಡ್ಕೊಳ್ರೀ" ಎಂದು ಮುಂದಿದ್ದವರಿಗೆ ಹೇಳಿದೆ. ಯಾವ ಉತ್ತರವೂ ಬರಲಿಲ್ಲ. ಸೀಟೂ ಅಲುಗಲಿಲ್ಲ. ಅವರ್‍ಯಾರೋ ಇನ್ನೂ ಮಲಗಿಯೇ ಇದ್ದಾರೇನೋ, ಎಬ್ಬಿಸೋಣ ಎಂದುಕೊಂಡು ಮುಂದೆ ಕೈಚಾಚಿದೆ. ಸೀಟು ಖಾಲಿಯಾಗಿತ್ತು. ಅಲ್ಲಿದ್ದ ಮಹಾಶಯ ಸೀಟನ್ನು ಹಾಗೇ ಬಿಟ್ಟು ಎದ್ದು ಓಡಿಹೋಗಿದ್ದ.

ನನ್ನ ಸೀಟಿಗೆ ಅಂಟಿದಂತೇ ಮೆಲ್ಲಮೆಲ್ಲಗೆ ಪಕ್ಕಕ್ಕೆ ಜರುಗಿ ಕಷ್ಟಪಟ್ಟು ಹೊರಬಂದೆ. "ದಾರಿ ಬಿಡಪ್ಪ. ಎಲ್ಲಾ ಇಳಿದಾಯ್ತು" ಎಂಬ ಹೆಣ್ಣುದನಿ ಕೇಳಿ ಹಿಂದೆ ತಿರುಗಿದರೆ ಒಬ್ಬಳು ದಪ್ಪ ದೇಹದ ಹೆಂಗಸು ನನ್ನ ಹಿಂದೆ ನಿಂತಿದ್ದಳು. "ಏನಾಗಿದೆಯಮ್ಮ?" ಎಂದು ಕೇಳುತ್ತಲೇ ಬಾಗಿಲತ್ತ ನಡೆದೆ. "ಅದೇನೋ ಗೊತ್ತಿಲ್ಲ ಕಣಪ್ಪ. ಇದ್ದಕ್ಕಿದ್ದ ಹಾಗೆ ಮುಂದುಗಡೆಯಿಂದ ಬೊಸ್ಸೋ' ಅನ್ನೋ ಸದ್ದು ಬಂದು ಬಸ್ಸು ನಿಂತುಬಿಡ್ತು. ಮುಖದ ಮೇಲೆಲ್ಲಾ ಯಾರೋ ಬಿಸಿ ಹಬೆ ಊದಿದ ಹಾಗಾಯ್ತು. ಬಸ್ ನಿಂತದ್ದೇ ಎಲ್ಲರೂ ಧಡಧಡನೆ ಇಳಿದುಟ್ರು. ಈ ಸೀಟುಗಳ ಮಧ್ಯೆ ಸಿಕ್ಕು ತಕ್ಷಣ ಹೊರಕ್ಕೆ ಬರೋದಿಕ್ಕೆ ಆಗ್ಲಿಲ್ಲ" ಅಂದರು ಆಕೆ. ಎಂಜಿನ್ ಪಕ್ಕದಲ್ಲಿದ್ದ ಬಾಗಿಲು ಸಮೀಪಿಸಿದಂತೇ ಅಲ್ಲಿ ಬಿಸಿಹಬೆ ದಟ್ಟವಾಗಿದ್ದಂತೆ ಕಂಡಿತು. ಕೆಳಗಿಳಿದೆ. ನನ್ನ ಹಿಂದೆ ಆಕೆಯೂ "ಉಸ್ಸಪ್ಪಾ" ಎನ್ನುತ್ತಾ ಇಳಿದರು. ಹಿಂದೆ ಇನ್ನೂ ಒಂದಿಬ್ಬರು ಗೊಣಗಾಡುತ್ತಾ ಇಳಿದರು.

ಸಹಪ್ರಯಾಣಿಕರೆಲ್ಲರೂ ಗುಂಪುಗಟ್ಟಿ ನಿಂತು ಮಾತಾಡಿಕೊಳ್ಳುತ್ತಿದ್ದರು. ಕನ್ನಡ ತಮಿಳು ಇಂಗ್ಲೀಷ್ ಮೂರೂ ಬೆರೆತು ಗೊಂದಲವೋ ಗೊಂದಲ. ನನ್ನ ಪಕ್ಕದ ಸೀಟಿನವ ಗುಂಪಿನಂಚಿನಲ್ಲಿ ಸೈಂಧವನಂತೆ ಎತ್ತರಕ್ಕೆ ನಿಂತಿದ್ದ. ನನ್ನನ್ನು ನೋಡಿದವನೇ "ಎದ್ ಬಂದ್ರಾ? ಅದೇನೋ ರೇಡಿಯೇಟರ್ ಹಾಳಾಗಿದೆಯಂತೆ. ಏನೋ ಲೀಕೇಜ್ ಅಂತೆ. ಮುಂದುಗಡೆಯಿಂದ ಡಬ್' ಅನ್ನೋ ಸದ್ದು ಬಂತು. ತಕ್ಷಣ ಯಾರೋ ಮುಖದ ಮೇಲೇ ಬಿಸಿನೀರು ಎರಚಿದ ಹಾಗೆ ಆಗಿಬಿಡ್ತು" ಅಂದ. "ನಿಮ್ಮನ್ನ ಎಬ್ಬಿಸ್ದೆ. ನೀವು ಏಳಲೇ ಇಲ್ಲ" ಎಂದೂ ಸೇರಿಸಿದ. ಗಡಿಯಾರ ನೋಡಿದೆ. ಎರಡೂಮುಕ್ಕಾಲಾಗುತ್ತಿತ್ತು.

ಬಸ್ಸು ಮುಂದೆ ಹೋಗುವುದಿಲ್ಲವೆಂದು ಮುಂದಿನ ಐದು ನಿಮಿಷಗಳಲ್ಲಿ ತಿಳಿದುಬಂತು. "ಬೆಂಗಳೂರು ಡಿಪೋದಿಂದ ಸ್ಪೇರ್ ಬಸ್ ತರಿಸೋಕೆ ಆಗೋಲ್ಲ. ಎಲ್ಲರೂ ಸಿಕ್ಕಿದ ಬಸ್ಸುಗಳಲ್ಲಿ ಹತ್ತಿ ಹೊರಟುಬಿಡಿ. ಸ್ವಲ್ಪ ಹಣ ರಿಫಂಡ್ ಸಿಗುತ್ತೆ. ಅದನ್ನ ಅಲ್ಲೇ ಬೆಂಗ್ಳೂರಲ್ಲೇ ತಗೋಬೋದು. ನಿಮ್ ನಿಮ್ಮ ಟಿಕೇಟ್‌ಗಳನ್ನ ಭದ್ರವಾಗಿ ಇಟ್ಕೊಳ್ಳಿ. ಅಲ್ಲಿ ಬೆಂಗ್ಳೂರ್‌ಲಿ ತೋರಿಸ್ಬೇಕಾಗುತ್ತೆ. ಇಲ್ಲಾಂದ್ರೆ ರಿಫಂಡ್ ಕಷ್ಟ" ಅಂದ ಕಂಡಕ್ಟರ್ ರಸ್ತೆ ದಾಟಿ ಪೊದೆಗಳತ್ತ ಸರಿದುಹೋದ. ಒಂದಷ್ಟು ಜನ ಅವನಿಗೂ, ಸಾರಿಗೆ ಸಂಸ್ಥೆಗೂ ಶಾಪ ಹಾಕಿದರು. ಒಬ್ಬ "ಕರಾರಸಾನಿ ಅಂದರೆ ಕಡೇವರೆಗೂ ರಾದ್ಧಾಂತ ರಗಳೆಗಳೊಡನೆ ಸಾಗಿಸೋ ನಿಗಮ" ಅಂದ. ಇನ್ನೊಬ್ಬ ಪೈಪೋಟಿಯಲ್ಲಿ "ಸುವರ್ಣ ಕರ್ನಾಟಕ ಸಾರಿಗೆ... ಸಾರಿಗೆ ಉಪ್ಪೇ ಇಲ್ಲ" ಎಂದು ಹೇಳಿ ನಕ್ಕ. ಮತ್ತಾರೂ ನಗಲಿಲ್ಲ. "ಈ ನನ್ ಮಕ್ಳನ್ನ ಹಿಡಕೊಂಡು ಬಡಿಬೇಕು, ಇವರ್ ಹೆಂಡ್ರನ್ನ. ಥೂ!" ಮತ್ತೊಬ್ಬ ಕ್ಯಾಕರಿಸಿ ಉಗಿದ. ವಾಹನವೊಂದರ ಪ್ರಖರ ಬೆಳಕು ಹತ್ತಿರಾಯಿತು. ಒಂದು ಪಕ್ಕದಲ್ಲಿ ಕೈಕಟ್ಟಿಕೊಂಡು ನಿಂತಿದ್ದ ನಮ್ಮ ಡ್ರೈವರ್ ರಸ್ತೆಯ ಮಧ್ಯಕ್ಕೆ ಓಡಿಹೋಗಿ ಬಸ್ಸನ್ನು ನಿಲ್ಲಿಸಿದ. ಅಷ್ಟರಲ್ಲಾಗಲೇ ಏಳೆಂಟು ಜನ ಧಡಬಡನೆ ನಮ್ಮ ಬಸ್ಸಿನೊಳಗೆ ನುಗ್ಗಿ ತಮ್ಮ ಸಾಮಾನುಗಳನ್ನೆತ್ತಿಕೊಂಡು ಅತ್ತ ದೌಡಾಯಿಸಿದರು. ಗುಂಪು ಕಾಲುಭಾಗದಷ್ಟು ಕರಗಿತು. ನಾನೂ ಒಳಗೆ ಹೋಗಿ ನನ್ನ ಚೀಲವನ್ನೆತ್ತಿಕೊಂಡು ಬಂದೆ. ನಂತರ ಬಂದ ಎರಡು ಬಸ್ಸುಗಳಲ್ಲೂ ನಿಲ್ಲಲು ಮಾತ್ರ ಸ್ಥಳವಿತ್ತು. ಆದರೂ ಒಂದಿಬ್ಬರು ಹತ್ತಿಕೊಂಡರು. ಹೊಸೂರ್‌ನಲ್ಲಿ ಸೀಟ್ ಸಿಗತ್ತೆ ಬನ್ನಿ ಎಂದು ಕಂಡಕ್ಟರ್ ಕರೆದಾಗ ಹತ್ತಿಬಿಡೋಣ ಎಂದು ಒಂದುಕ್ಷಣ ಅನಿಸಿದರೂ ಒಂದೂವರೆ ಗಂಟೆ ತೂಕಡಿಸುತ್ತಾ ನಿಲ್ಲುವುದು ಕಷ್ಟ ಎನಿಸಿ ಸುಮ್ಮನಾದೆ. ವೇಗವಾಗಿ ತೂರಿಬರುತ್ತಿದ್ದ ಟಾಟಾ ಸುಮೋವೊಂದನ್ನು ನಾಕೈದು ಜನ ಅಡ್ಡಗಟ್ಟಿ ನಿಲ್ಲಿಸಿದರು. ಡ್ರೈವರ್ ಜತೆ ದರದ ಚೌಕಾಶಿಯ ನಂತರ ಮೂರು ಜನ ಅದರೊಳಗೆ ಸೇರಿಕೊಂಡರು. ಹಿಂದೆಯೇ ಬಸ್ಸೊಂದು ಬಂತು. ಅದರಲ್ಲಿ ಕೂರಲು ಸ್ಥಳವೇನೋ ಇತ್ತು. ಆದರೆ ಏಳೆಂಟು ಜನ ಯುವಕರು ನನ್ನನ್ನು ಅತ್ತ ನೂಕಿ ಒಳತೂರಿಕೊಂಡರು. ಬೇಸರದಲ್ಲಿ ಹಿಂದಕ್ಕೆ ಬಂದು ನಿಂತೆ.

ನಿಟ್ಟುಸಿರೊಂದು ಕೇಳಿ ಪಕ್ಕಕ್ಕೆ ತಿರುಗಿದೆ. ಹೆಗಲಲ್ಲಿ ತೆಳುವಾದ ಚೀಲ, ಬಲಗೈಯಲ್ಲಿ ಪುಟ್ಟ ಸೂಟ್‌ಕೇಸ್ ಹಿಡಿದುಕೊಂಡು ಒಬ್ಬಾಕೆ ನಿಂತಿದ್ದಳು. "ಇದೇನ್ ಸಾರ್ ಹಿಂಗಾಯ್ತಲ್ಲಾ" ಅಂದಳು. "ನೀವು ಬೆಂಗಳೂರಿಗೋ?" ಎಂದೂ ಕೇಳಿದಳು. "ಹೌದು. ನೀವು?" ಅಂದೆ. "ನಾನಾ? ನಾನೂ ಅಲ್ಲಿಗೇ ಹೋಗ್ತಾ ಇದೀನಿ. ಕೊನೇತಂಗಿಗೆ ಮಗು ಹುಟ್ಟಿದೆ. ನೋಡೋದಿಕ್ಕೆ ಹೋಗ್ತಿದೀನಿ" ಎಂದು ಹೇಳಿದಾಕೆ ಸರಳ ಸ್ನೇಹಪರಳಂತೆ ಕಂಡಳು. ಅವಳತ್ತಲೇ ನೋಡಿದೆ.

ಚಂದ್ರನ ನಸುಬೆಳಕಿನಲ್ಲಿ ಕಂಡದ್ದು ನಲವತ್ತರ ಅಸುಪಾಸಿನ ದುಂಡನೆಯ ನಗುಮುಖ. ತಲೆಗೆ ಒತ್ತಿದಂತೆ ಬಿಗಿದು ಬಾಚಿದ ಕೂದಲು. ಹಸಿರು ರೇಶಿಮೆ ಸೀರೆ ರವಿಕೆ. ಅಗಲ ಕಣ್ಣುಗಳು ನಿದ್ದೆಯಲ್ಲಿ ತೇಲುತ್ತಿದ್ದವು.

"ಏನೂ ಹೆದರೋದು ಬೇಡ. ಸ್ವಲ್ಪ ಹೊತ್ತು ಕಾಯೋಣ. ತಮಿಳುನಾಡಲ್ಲೇನು ರಾತ್ರಿಯೆಲ್ಲಾ ಬಸ್ಸುಗಳು ಸಿಗ್ತವೆ" ಅಂದೆ ಆಕೆಯಲ್ಲಿ ಧೈರ್ಯ ತುಂಬುವ ಉದ್ದೇಶದಿಂದ. ಅದೇ ಗಳಿಗೆಗೆ ಸರಿಯಾಗಿ ಖಾಲಿ ಟ್ಯಾಕ್ಸಿಯೊಂದು ಬಂದು ಗಕ್ಕನೆ ನಿಂತಿತು. "ಬೆಂಗ್ಳೂರ್?" ಕೇಳಿದ ಡ್ರೈವರ್. ಹಸಿರು ರೇಶಿಮೆ ಸೀರೆಯ ಹೆಂಗಸು ನನ್ನತ್ತ ನೋಡಿದಳು. ಹೆಗಲಲ್ಲೊಂದು ಸ್ಯಾಮ್‌ಸೊನೈಟ್ ಚೀಲ, ಕೈಯಲ್ಲಿ ಲ್ಯಾಪ್‌ಟಾಪ್ ಹಿಡಿದ ಜೀನ್ಸ್‌ಧಾರಿ ಯುವಕನೊಬ್ಬ ಅದೆಲ್ಲಿಂದಲೋ ಓಡಿಬಂದು "ಹೌದೂರೀ, ಎಷ್ಟು ತಗೋತೀರಿ?" ಅಂದ. ದನಿಯಲ್ಲಿ ಆತುರವಿತ್ತು. "ಎಷ್ಟು ಜನ ಇದ್ದೀರಿ?" ಡ್ರೈವರ್‌ನ ಪ್ರಶ್ನೆ. ಯುವಕ ಈಗ ನನ್ನತ್ತ ತಿರುಗಿದ. ನಾನು ಹೆಂಗಸಿನತ್ತ ತಿರುಗಿದೆ. ಅವಳ ಮುಖದ ತುಂಬಾ ಅನುಮಾನದ ನೆರಳುಗಳು. "ಸ್ವಲ್ಪ ಜಾಸ್ತಿ ಹಣ ತಗೋಬೋದು. ಪರವಾಗಿಲ್ಲ, ನೆಮ್ಮದಿಯಾಗಿ ಊರು ಸೇರ್‍ಕೋಬೋದು ಆಂಟೀ" ಎಂದ ಯುವಕ. ಅವನ ಪುಸಲಾಯಿಸುವಿಕೆ ವ್ಯರ್ಥವಾಗಲಿಲ್ಲ. ಸಮ್ಮತಿಯಲ್ಲಿ ಆಕೆಯ ಮುಖದ ಗೆರೆಗಳು ಸಡಿಲಾದವು. ನಾನೂ ಹ್ಞೂಂಗುಟ್ಟಿ ಡ್ರೈವರ್‌ನತ್ತ ತಿರುಗಿದೆ: "ನಾವು ಮೂರು ಜನ ಕಣಪ್ಪ. ಎಷ್ಟು ತಗೋತೀಯ?"

ಕಥೆಯ ಮುಂದಿನ ಭಾಗ...»

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X