ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಶೇಖರ ಸಣ್ಣಕಥೆ ಕ್ರೌರ್ಯ (ಭಾಗ 4)

By Staff
|
Google Oneindia Kannada News

* ಪ್ರೇಮಶೇಖರ, ಪಾಂಡಿಚೆರಿ

(ಕಥೆಯ ಮುಂದುವರಿದಿದೆ...)

ಕುಳ್ಳ ಗಹಗಹಿಸಿದ. "ಸರಿಯಾಗಿ ಹೇಳಿದೆ ಕಣಮ್ಮ. ಜಾಣರು ಮಾಡೋ ಕೆಲಸ ಇದು. ಈಗ ಸ್ವಲ್ಪ ನಾವು ಹೇಳಿದ ಹಾಗೆ ಕೇಳಿಬಿಡಮ್ಮ. ಜಾಣೆ ನೀನು." ದನಿಯಲ್ಲಿ ಅಣಕವಿತ್ತು. "ಹಂಗಂದ್ರೇನ್ರಿ?" ಹೆಂಗಸಿನ ದನಿಯಲ್ಲಿ ಗಾಬರಿ. ನನಗೂ ಗಾಬರಿಯಾಯಿತು. ಇದುವರೆಗೂ ಇವರು ನನ್ನನ್ನಷ್ಟೇ ಗುರಿಯಾಗಿಸಿಕೊಂಡಿದ್ದರು. ಹೆಂಗಸಿಗೆ ಹಾನಿಯೆಸಗುವಂಥ ಯಾವ ಸೂಚನೆಯನ್ನೂ ಅವರು ನೀಡಿರಲಿಲ್ಲ. ಈಗೇಕೋ ನನಗೆ ಅನುಮಾನವಾಗತೊಡಗಿತು. ಕುಳ್ಳನತ್ತ ತಿರುಗಿದೆ. ಅವನು ಹೆಂಗಸಿನ ಪಕ್ಕದಲ್ಲಿದ್ದ ಸಾಫ್ಟ್‌ವೇರ್ ಹುಡುಗನ ಲ್ಯಾಪ್‌ಟಾಪನ್ನು ಎಡಗೈಯಿಂದ ಎತ್ತಿ ಹಿಂದಿನ ಸೀಟಿನತ್ತ ಅಸಡ್ಡೆಯಿಂದ ಎಸೆದ. ಅದು ನನ್ನ ಭುಜಕ್ಕೆ ಬಡಿದು ನನ್ನ ಕಾಲಬಳಿ ಉರುಳಿಬಿತ್ತು. ನನ್ನ ಆತಂಕ ಎಲ್ಲೆ ಮೀರುತ್ತಿದ್ದಂತೇ ಕುಳ್ಳ ಹೆಂಗಸಿನ ಭುಜಕ್ಕೆ ಕೈ ಹಾಕಿದ. "ಜಾಣಮರೀ, ಸ್ವಲ್ಪ ಕೆಳಗೆ ಇಳಿಯಮ್ಮ. ಒಂಚೂರು ಕೆಲ್ಸಾ ಇದೆ."

"ಇದೇನಪ್ಪ ಇದೂ. ತೆಗೀ ಕೈನ." ಹೆಂಗಸು ಗಾಬರಿ ಅಸಹನೆಯಲ್ಲಿ ಅರಚಿದಂತೇ ಕುಳ್ಳ "ಅಯ್ ಇಳಿಯೇ ಕೆಳಗೇ" ಎನ್ನುತ್ತಾ ಅವಳ ರಟ್ಟೆಗೆ ಕೈಹಾಕಿ ಹೊರಗೆಳೆದ. ಹೆಂಗಸು "ಅಯ್ಯಮ್ಮಾ" ಎಂದು ಚೀರುತ್ತಿದ್ದಂತೇ ನನ್ನ ತಲೆಗೆ ಹೊಡೆತ ಬಿತ್ತು. "ಮುಂದುಗಡೆ ಸೀಟಿಗೆ ಹಣೆ ಅಂಟಿಸ್ಕೊಂಡು ಕೂರು." ಕರಿಯ ಗದರಿದ. ಸೀಟಿಗೆ ನನ್ನ ತಲೆಯನ್ನು ಒತ್ತಿಹಿಡಿದ. ಕುತ್ತಿಗೆಯ ಮೇಲೇನೋ ತಣ್ಣಗೆ ಹರಿಯಿತು. "ಕತ್ತು ಮೇಲೆತ್ತಿದರೆ ಕತ್ತರಿಸಿಬಿಡ್ತೀನಿ." ಸೀಳುಕಂಠದಲ್ಲಿ ಅರಚಿದ. ಬಾಗಿಲು ತೆರೆದು ಕಿಟಕಿಯ ಗಾಜನ್ನು ಸರ್ರನೆ ಮೇಲೆತ್ತಿದ. ಧಡ್ಡನೆ ಬಾಗಿಲು ಮುಚ್ಚಿದ. ದೈಹಿಕವಾಗಿ ನಾನು ಅವನಿಗೇನೂ ಕಡಿಮೆ ಇರಲಿಲ್ಲ. ಆದರೆ ಅವನಲ್ಲಿದ್ದ ಚಾಕು ನಮ್ಮಿಬ್ಬರ ಶಕ್ತಿಯ ಸಮತೋಲನವನ್ನು ಏರುಪೇರಾಗಿಸಿ ನನ್ನನ್ನು ನಿಸ್ಸಹಾಯಕಗೊಳಿಸಿತ್ತು. ಮುಂದಿನ ಸೀಟಿನಲ್ಲಿ ಧಡಭಡ ಸದ್ದುಗಳು. ಹೆಂಗಸಿನ ಅಳು ಚೀರಾಟ... ಎರಡು ಕ್ಷಣದಲ್ಲಿ ಅವಳು ಕಾರಿಂದ ಹೊರಗೆ ನೆಲದ ಮೇಲೆ ಧೊಪ್ಪನೆ ಬಿದ್ದ ಶಬ್ಧ. ಮರುಕ್ಷಣ ಧಡ್ಡನೆ ಮುಚ್ಚಿಕೊಂಡ ಬಾಗಿಲು. ಕ್ಷೀಣಗೊಂಡ ಆಕ್ರಂದನ...

ತಲೆ ಮೇಲೆತ್ತಿದೆ. ಕರಿಯ ಕಿಟಕಿಗೆ ಚಾಕು ಒತ್ತಿದ. ಮುಖದ ಸ್ನಾಯುಗಳನ್ನು ಪೈಶಾಚಿಕವಾಗಿ ವಕ್ರಗೊಳಿಸಿದ... ಕೇವಲ ಒಂದೆರಡು ನೂರು ಗ್ರಾಂಗಳ ಕಬ್ಬಿಣ ಕೇಡಿಗಳಲ್ಲಿ ತುಂಬಿದ ಪಾಶವೀ ಆತ್ಮವಿಶ್ವಾಸ... ನನ್ನ ನಿಸ್ಸಹಾಯಕತೆ... ಆ ಹೆಂಗಸಿನ ದುರ್ದೆಶೆ... ಇಡೀ ಬದುಕು ಅರ್ಥ ಕಳೆದುಕೊಂಡಿತ್ತು. ಅತ್ಯಾಚಾರ ಉಂಟುಮಾಡುವ ದೈಹಿಕ ಯಾತನೆ ಹಾಗೂ ಮಾನಸಿಕ ಆಘಾತ, ನಿಸ್ಸಹಾಯಕನಾಗಿ ಅತ್ಯಾಚಾರಕ್ಕೆ ಮೂಕ ಪ್ರೇಕ್ಷಕನಾಗುವ ಪಾಪಪ್ರಜ್ಞೆ- ಎರಡರಲ್ಲಿ ಯಾವುದು ಹೆಚ್ಚು ಕ್ಲೇಶಕರ? ನನ್ನಲ್ಲಿ ಈಗಲೂ ಉತ್ತರವಿಲ್ಲ.

ಮತ್ತೆ ಬಾಗಿಲ ಹಿಡಿಕೆಗೆ ಕೈಹಾಕಿದೆ. ಹತ್ತುಮಾರು ದೂರದ ಪುಟ್ಟಮರವೊಂದರ ಕೆಳಗಿನ ಕತ್ತಲ ನೆಲದ ಮೇಲೆ ನಿಶ್ಶಬ್ದ ಚಲನೆಗಳು ಕಂಡುಬಂದವು. ಮುಂದಿನ ಕ್ಷಣದಲ್ಲಿ ಕಿಟಕಿಯ ಗಾಜಿನ ಮೇಲೆ ನೀಳ ಚಾಕು ಹರಿದಾಡಿತು. ಈಗ ಅದರ ಹಿಂದಿದ್ದ ಮುಖ ಕುಳ್ಳನದು... ಮತ್ತೆರಡು ಭಯಾನಕ ನಿಮಿಷಗಳು... ಧಡಾರನೆ ತೆರೆದುಕೊಂಡ ಬಲಪಕ್ಕದ ಬಾಗಿಲು. ಕುಳ್ಳನ ದನಿ ಕಿವಿಗೆ ಅಪ್ಪಳಿಸಿತು: "ನಮ್ಮ ಭೋಜನ ಆಯ್ತು. ಎಲೇಲಿ ನಿಂಗೂ ಒಂಚೂರು ಉಳಿಸಿದ್ದೀವಿ. ಹೋಗಿ ನೆಕ್ಕು."

ಸೀಟಿನ ಮೇಲಿದ್ದ ತನ್ನ ಹಾಗು ಕರಿಯನ ಚೀಲಗಳನ್ನು ಹೊರಗೆಳೆದುಕೊಂಡ. ತೆರೆದ ಬಾಗಿಲನ್ನು ಹಾಗೇ ಬಿಟ್ಟು ಪಕ್ಕಕ್ಕೆ ಸರಿದುಹೋದ. ಕರಿಯ ಡಿಕ್ಕಿ ತೆರೆದು ಸೂಟ್‌ಕೇಸ್ ಎತ್ತಿಕೊಂಡ. ಡಿಕ್ಕಿಯನ್ನು ಮುಚ್ಚದೇ ತಗ್ಗಿನತ್ತ ಹೆಜ್ಜೆ ಹಾಕಿದ. ಮರಗಟ್ಟಿದ್ದ ಬೆರಳುಗಳನ್ನು ಬಾಗಿಲ ಮೇಲೆ ಪರಪರ ಹರಿದಾಡಿಸಿ ಪಿಡಿ ಹಿಡಿದು ತಿರುವಿದೆ. ಕಾಲುಗಳನ್ನು ಎಳೆದುಹಾಕಿ ಹೊರಗಿಳಿದೆ. ಎಡಮಂಡಿ ಚಳಕ್ ಎಂದಿತು. ಕಾರಿನ ಆ ಬದಿಯಲ್ಲಿ ಅವರಿಬ್ಬರ ಬೆನ್ನುಗಳು ಕಂಡವು. ನಿಶ್ಶಬ್ಧವಾಗಿ, ನಿರ್ವಿಕಾರವಾಗಿ, ನಿರ್ದಾಕ್ಷಿಣ್ಯವಾಗಿ ಅವು ನಡೆದುಹೋಗುತ್ತಿದ್ದವು.

ಮರದ ಕೆಳಗಿನ ಕತ್ತಲಿನತ್ತ ತಿರುಗಿದೆ. ಹೆಂಗಸಿನ ಅಸ್ಪಷ್ಟ ವಿನ್ಯಾಸ ಕಣ್ಣಿಗೆ ಬಿತ್ತು. ಅತ್ತ ನಡೆಯಲು ಹೆಜ್ಜೆ ಕಿತ್ತೆ. ಯಾರೋ ಎದೆಗೆ ಗುದ್ದಿದಂತಾಯಿತು. ಗಕ್ಕನೆ ನಿಂತೆ. ಆಗಬಾರದ್ದು ಆಗಿಹೋದ ಮೇಲೆ ಹೋಗಿ ಮಾಡುವುದಾದರೂ ಏನನ್ನು? ಈಗ ಮುಖ ತೋರಿಸುವ ನನ್ನ ಬಗ್ಗೆ ಅವಳಲ್ಲಿ ಅದೆಷ್ಟು ಅಸಹ್ಯ ಉಕ್ಕಬಹುದು! ಕಾಲುಗಳು ಹೂತ ಕಂಬದಂತೆ ನಿಂತುಬಿಟ್ಟವು. ಕತ್ತು ಅಯಾಚಿತವಾಗಿ ಸುತ್ತಲೂ ಹೊರಳಾಡಿತು.
ಕೇಡಿಗಳು ಹೋದೆಡೆ ಕಲ್ಲುಗಳು ತುಂಬಿದ ಇಳಿಜಾರು ಹಾದಿ ಮಸುಕುಬೆಳದಿಂಗಳಲ್ಲಿ ಅಸ್ಪಷ್ಟವಾಗಿ ಕಂಡಿತು. ಎಡಕ್ಕೆ ತಗ್ಗಿನಲ್ಲಿ ಬೆಳ್ಳಿಯ ತಗಡಿನಂತೆ ಹೊಳೆಯುತ್ತಿರುವುದು ಕೊಳವಿರಬೇಕು. ಅದರಾಚೆ ಕಡುಗಪ್ಪನೆಯ ಮರಗಳ ಗುಂಪು. ಬಲಕ್ಕೆ ಗೋಡೆಯಂತೆ ಎತ್ತರಕ್ಕೆ ಏರಿನಿಂತ ಕಲ್ಲುಗುಡ್ಡ. ಬೆನ್ನ ಹಿಂದೆ ದೂರದಲ್ಲಿ ಯಾವುದೋ ವಾಹನದ ಕ್ಷೀಣ ಮೊರೆತ...

ಮರದ ಕೆಳಗೆ ಮಡುಗಟ್ಟಿದ್ದ ಕತ್ತಲೆ ಒಮ್ಮೆ ನರಳಿ ಬಿಕ್ಕಿತು. ನ್ನ ಮೈಯಿಡೀ ನಡುಗಿಹೋಯಿತು. ಅತ್ತ ಕಾಲೆಳೆದೆ. ಅವಳು ಎದ್ದು ಕುಳಿತಿದ್ದಳು. ಬಾಯಿಯೊಳಗೆ ಕೈಹಾಕಿ ಏನನ್ನೋ ಹೊರಗೆಳೆಯುತ್ತಿದ್ದಳು. ಮೂರು ನಾಲ್ಕು ಕರವಸ್ತ್ರಗಳು ಒಂದೊಂದಾಗಿ ಹೊರಬಂದವು. ಕೊನೆಯದರ ಹಿಂದೆಯೇ "ವ್ಯಾಕ್" ಎಂಬ ಶಬ್ಧವೂ ಹೊರಬಂತು. ಶರೀರವನ್ನು ಹಿಂದಕ್ಕೆ ಮುಂದಕ್ಕೆ ತೂಗಾಡಿಸುತ್ತಾ ಮಡಿಲಿಗೇ ವಾಂತಿ ಮಾಡಿಕೊಂಡಳು.
ಮಾತಿಲ್ಲದೇ ಹಿಂತಿರುಗಿದೆ. ಕಾರಿನ ಬಾಗಿಲು ತೆರೆದೇ ಇತ್ತು. ನನ್ನ ಬ್ಯಾಗ್ ತೆರೆದು ನೀರಿನ ಬಾಟಲಿ ಹೊರಗೆಳೆದೆ. ತೆಗೆದುಕೊಂಡು ಹೋಗಿ ಅವಳ ಮುಂದೆ ಹಿಡಿದೆ. ಅವಳು ನನ್ನನ್ನೊಮ್ಮೆ ನೇರವಾಗಿ ನೋಡಿದಳು. ಮರುಕ್ಷಣ ಕೈಗಳಲ್ಲಿ ಮುಖ ಮುಚ್ಚಿಕೊಂಡಳು. ತೆಲೆಯನ್ನು ಮುಂದಕ್ಕೆ ಬಾಗಿಸಿ ತೊಡೆಗಳ ಮೇಲಿಟ್ಟು ಬಿಕ್ಕಿದಳು.

ಅತ್ತ ನೋಡಿದ ನನಗೆ ಕಂಡದ್ದು ಪೂರ್ಣವಾಗಿ ಬತ್ತಲಾಗಿದ್ದ ತೊಡೆಗಳು. ಅವಳ ಸೀರೆ ಮೈಮೇಲಿರಲಿಲ್ಲ. ಲಂಗ ಕತ್ತರಿಯಲ್ಲಿ ಕತ್ತರಿಸಿದಂತ ನಡುಮಧ್ಯಕ್ಕೆ ಸೀಳಿಹೋಗಿ ತೊಡೆಗಳ ಕೆಳಗೆ ನೆಲದ ಮೇಲೆ ಮುದುರಿಬಿದ್ದಿತ್ತು. ಅದನ್ನು ಇನ್ನೂ ಅವಳ ಮೈಗೆ ಕಟ್ಟಿಹಾಕಿದ್ದ ಲಾಡಿ ಹೊಟ್ಟೆಯ ನಡುಮಧ್ಯದಲ್ಲಿ ಆಳವಾಗಿ ಒಳಗಿಳಿದಿತ್ತು. ಇಡಿಯಾಗಿ ಮೈಮೇಲಿದ್ದುದು ರವಿಕೆ ಮಾತ್ರ. ಅದರ ಒಂದು ಹುಕ್ಕೂ ಅಲುಗಿರಲಿಲ್ಲ. ಅವಳ ಸೀರೆಗಾಗಿ ಸುತ್ತಲೂ ಕಣ್ಣಾಡಿಸಿದೆ. ಅದೆಲ್ಲೂ ಕಾಣಲಿಲ್ಲ. ಅವಳ ಇಡೀ ಮೈ ಮುಚ್ಚುವಂತಹ ದೊಡ್ಡ ಬಟ್ಟೆ ಯಾವುದೂ ನನ್ನಲ್ಲಿರಲಿಲ್ಲ. ಟವಲ್ ಸಹಾ ಇರಲಿಲ್ಲ. ನನ್ನ ಕೆಲವು ಬಟ್ಟೆಗಳು, ಒಂದು ಬಾತ್ ಟವಲ್ ಬೆಂಗಳೂರಿನ ಅಕ್ಕನ ಮನೆಯಲ್ಲಿ ಯಾವಾಗಲೂ ಇರುತ್ತಿದ್ದುದರಿಂದ ಪ್ರತೀ ಪ್ರಯಾಣದಲ್ಲೂ ಅವನ್ನು ತೆಗೆದುಕೊಂಡು ಹೋಗುವ ಅಗತ್ಯ ನನಗಿರಲಿಲ್ಲ. ನನ್ನ ಬ್ಯಾಗಿನಲ್ಲಿದ್ದದ್ದು ಮಾಮೂಲಿನಂತೆ ಒಂದೆರಡು ಪುಸ್ತಕಗಳು, ನೋಟುಬುಕ್ಕುಗಳು ಮತ್ತು ಟ್ರ್ಯಾನ್ಸಿಸ್ಟರ್ ಮಾತ್ರ. ನಾನು ಮತ್ತೊಮ್ಮೆ ನಿಸ್ಸಹಾಯಕನಾಗಿದ್ದೆ.

"ಬಾಯಿ ತೊಳಕೊಂಡು ನೀರು ಕುಡೀರಿ." ನನ್ನ ದನಿ ನನಗೇ ಅಪರಿಚಿತವಾಗಿತ್ತು. ನೀರಿನ ಬಾಟಲನ್ನು ಬಲವಂತವಾಗಿ ಅವಳ ಕೈಗೆ ಹಿಡಿಸಿದೆ. ಅವಳ ಬಿಕ್ಕುವಿಕೆ ಅಧಿಕವಾಯಿತು. "ನನ್ ಜೊತೆ ಬನ್ನೀ ಅಂತ ಇವರನ್ನ ಗೋಗರೆದೆ. ರಜಾ ಇಲ್ಲಾ ನೀನೊಬ್ಳೇ ಹೋಗು ಅಂದ್ಬಿಟ್ರೂ" ಎನ್ನುತ್ತಾ ಗಟ್ಟಿಯಾಗಿ ಅಳತೊಡಗಿದಳು. ನೀರಿನ ಬಾಟಲ್ ಅವಳ ಕೈಯಿಂದ ಜಾರಿ ಕೆಳಗೆ ಬಿತ್ತು. ಅಲ್ಲಿ ನನ್ನ ಉಪಸ್ಥಿತಿಯ ನಿರುಪಯುಕ್ತತೆ ಮೇಲೆಗರಿ ಎದೆಗೆ ಜಾಡಿಸಿ ಒದೆಯಿತು.

ಅವಳು ಮತ್ತೆ ಬಿಕ್ಕಿದಳು. "ನೀನು ಒಬ್ಳೇ ಬರೋಕೆ ಹೋಗಬೇಡಾ. ಕಾಲ ಒಳ್ಳೇದಲ್ಲಾ. ಭಾವಂಗೆ ರಜಾ ಆದಾಗಲೇ ಬಾ, ನಿಧಾನವಾದ್ರೂ ಪರವಾಗಿಲ್ಲ ಅಂತ ರಾಜಿ ಹತ್ತು ಸಲವಾದ್ರೂ ಹೇಳಿದ್ಲು. ಅವಳ ಮಾತನ್ನ ನಾನೇ ಕೇಳ್ಲಿಲ್ಲಾ." ಕಟ್ಟೆಯೊಡೆದಂತೆ ಮತ್ತೆ ಭೋರ್ಗರೆದ ಅಳು. ನಾನು ಮಾತಿಲ್ಲದೇ ನಿಂತೆ. ನಿಮಿಷದ ನಂತರ ಅವಳು ಚಕ್ಕನೆ ಅಳು ನಿಲ್ಲಿಸಿದಳು. ತಲೆಯೆತ್ತಿ ನನ್ನನ್ನೇ ದಿಟ್ಟಿಸಿದಳು. ಸರ್ರನೆ ಮುಂದೆ ಬಾಗಿ ನನ್ನ ಕಾಲುಗಳನ್ನು ತಬ್ಬಿಕೊಂಡಳು. "ಸಾರ್ ಸಾರ್... ಇದನ್ನ ಯಾರಿಗೂ ಹೇಳಬೇಡಿ ಸಾರ್... ನಿಮ್ ದಮ್ಮಯ್ಯಾ ಅಂತೀನಿ..."

ನಾನು ಬೆಚ್ಚಿದೆ. "ಇಲ್ಲಾ ಇಲ್ಲಾ ಹೇಳೋದಿಲ್ಲಾ..." ಎನ್ನುತ್ತಾ ಗಕ್ಕನೆ ಬಾಗಿ ಅವಳ ಭುಜ ಹಿಡಿದೆ. "ಕಾಲು ಹಿಡೀಬೇಡಿ..." ಎಡಗಡೆ ಸದ್ದಾಯಿತು. ಬಾಗಿದಂತೇ ಅತ್ತ ಹೊರಳಿದೆ. ಸಾಫ್ಟ್‌ವೇರ್ ಹುಡುಗ ನಿಂತಿದ್ದ. ಅಚ್ಚರಿಯಲ್ಲಿ ನೆಟ್ಟಗೆ ನಿಂತೆ. ಅವನು ಸಣ್ಣಗೆ ತುಟಿಯರಳಿಸಿದ.

"ನಾನು ಓಡಿಹೋದೆ ಅಂದ್ಕೊಂಡ್ರಾ? ಇಲ್ಲಾ ಸರ್. ನನ್ನ ಕರ್ತವ್ಯಾನ ನಾನು ಮರೆತು ಓಡಿಹೋಗೋದು! ಹೌ ಕ್ಯಾನ್ ಐ ಎವರ್ ಡೂ ದಟ್? ಇಲ್ಲೇ ಆ ಬಂಡೆ ಹಿಂದೆ ಅವಿತಿದ್ದೆ." ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ಅವನ ಮುಖವನ್ನೇ ಶೂನ್ಯವಾಗಿ ದಿಟ್ಟಿಸಿದೆ. ಹೆಂಗಸು ನನ್ನ ಕಾಲು ಬಿಟ್ಟು ಹಿಂದೆ ಸರಿದಳು. ಹರಿದ ಲಂಗವನ್ನು ಹಿಡಿದೆಳೆದು ತೊಡೆಗಳನ್ನು ಮುಚ್ಚಿಕೊಂಡು ಮುದುರಿ ಕೂತು ಅವನ ಮುಖವನ್ನೇ ನೇರವಾಗಿ ನೋಡಿದಳು.

"ನನ್ನ ಸಾಮಾಜಿಕ ಜವಾಬ್ದಾರಿಯ ಅರಿವು ನಂಗೂ ಇದೆ ಸರ್. ಇಂಥಾ ಒಂದು ಕ್ರೈಮ್, ದಟ್ ಟೂ ಎಗೈನ್‌ಸ್ಟ್ ಎ ವುಮನ್, ನಡೀತಿರೋವಾಗ ನಾನು ಸುಮ್ನಿರೋಕೆ ಹ್ಯಾಗೆ ಸಾಧ್ಯ?" ನನಗೆ ಏನೊಂದೂ ಅರ್ಥವಾಗಲಿಲ್ಲ. ಅವನ ಮಾತುಗಳು ತೀರಾ ಅಪರಿಚಿತವೆನಿಸಿದವು. "ಕೇಡಿಗಳಿಗೆ ಏನಾದ್ರೂ ಮಾಡಿದೆಯಾ?" ನಾಲಿಗೆಗೆ ಬಂದ ಪ್ರಶ್ನೆ ಅಯಾಚಿತವಾಗಿ ಹೊರಹಾರಿತು.

"ನಾಟ್ ದಟ್ ಸರ್. ಇಡೀ ಘಟನೇನ ನಾನು ಫ್ರೇಂ ಟು ಫ್ರೇಂ ಗಮನಿಸಿದ್ದೀನಿ. ಒಂದು ಡೀಟೇಲ್ಡ್ ರಿಪೋರ್ಟ್ ತಯಾರಿಸೋದಿಕ್ಕೆ ಅರ್ಧ ಗಂಟೆ ಸಾಕು. ನನ್ನ ಲ್ಯಾಪ್‌ಟಾಪ್ ಇಲ್ಲೇ ಇದೆಯಲ್ಲ. ಕೇಡಿಗಳು ಅದನ್ನ ಎತ್ಕೊಂಡು ಹೋಗ್ಲಿಲ್ಲ ಅನ್ನೋದನ್ನ ಗಮನಿಸಿದ್ದೀನಿ. ಅದನ್ನ ಇಲ್ಲೇ ಬಿಟ್ಟು ಅವರು ಒಳ್ಳೇ ಕೆಲಸ ಮಾಡಿದ್ದಾರೆ. ಐ ಆಮ್ ಥ್ಯಾಂಕ್‌ಫುಲ್ ಟು ದೆಮ್." ನನ್ನ ದಿಗಿಲು ಹತ್ತಿದ ನೋಟವನ್ನು ನಿರ್ಲಕ್ಷಿಸಿ ಮುಂದುವರೆಸಿದ: "ರಿಪೋರ್ಟ್ ತಯಾರಾದ ಕೂಡ್ಲೆ ಅದನ್ನ ನ್ಯೂಸ್ ಚಾನಲ್‌ಗಳಲ್ಲಿರೋ ನನ್ ಫ್ರೆಂಡ್ಸ್‌ಗೆಲ್ಲಾ ಇ ಮೇಲ್ ಮಾಡ್ತೀನಿ. ಬ್ರೇಕ್‌ಫಾಸ್ಟ್ ನ್ಯೂಸ್‌ನಲ್ಲಿ ಮೆಯಿನ್ ಐಟೆಂ ಮಾಡಿ ಅಂತ ಹೇಳ್ತೀನಿ. ಈ ರೋಗ್ಸ್ ಮಾಡಿರೋ ಅತ್ಯಾಚಾರ ಇಡೀ ದೇಶಕ್ಕೆ ತಿಳಿದುಹೋಗುತ್ತೆ. ರಾಷ್ಟ್ರದ ಅಂತಃಸಾಕ್ಷಿಯನ್ನೇ ಕಲಕಿಬಿಡತ್ತೆ."

ನಾನು ಪ್ರತಿಕ್ರಿಯಿಸಲಾರದಷ್ಟು ದಿಗ್ಭ್ರಮೆಗೊಳಗಾಗಿದ್ದೆ. ನನ್ನ ಸೋತ ಕಣ್ಣುಗಳು ಹೆಂಗಸಿನತ್ತ ಇಳಿದವು. ಅವಳು ಮತ್ತಷ್ಟು ಮುದುರಿಕೊಂಡಳು. ಹರಿದ ಲಂಗದ ಒಂದಂಚು ಕೈಜಾರಿ ಒಂಡು ತೊಡೆ ಬತ್ತಲಾಯಿತು. ಆತುರಾತುರವಾಗಿ ಅದನ್ನೆಳೆದು ಬಿಗಿಯಾಗಿ ಹಿಡಿದುಕೊಂಡಳು.

"ನಿಮ್ಮ ಸೂಟ್‌ಕೇಸಿನಲ್ಲಿ ಬೇರೆ ಬಟ್ಟೆಗಳಿವೆಯೇ? ಇರಿ, ಅದನ್ನೇ ಇಲ್ಲಿಗೆ ತರ್ತೀನಿ. ಎದ್ದು ಬೇರೆ ಸೀರೆ ಉಟ್ಕೊಳ್ಳಿ." ಆಕೆಗೆ ಹೇಳಿ ಕಾರ್‌ನತ್ತ ಎರಡು ಹೆಜ್ಜೆ ಹಾಕಿದೆ. ಹಿಂದೆ ತಿರುಗಿ ಆ ಹುಡುಗನಿಗೆ "ನೀನು ಈ ಕಡೆ ಬಾ" ಅಂದೆ. ಅವನು ನನ್ನ ಹಿಂದೆಯೇ ಬಂದು ನನ್ನನ್ನು ದಾಟಿ ಧಾಪುಗಾಲಿಟ್ಟು ಮುಂದೆ ಹೋದ. ನಾನು ಕಾರ್ ಸಮೀಪಿಸುವಷ್ಟರರಲ್ಲಿ ಅವನು ಮುಂದಿನ ಸೀಟಿನಲ್ಲಿದ್ದ ತನ್ನ ಬ್ಯಾಗನ್ನು ಹೊರಗೆಳೆದುಕೊಂಡಾಗಿತ್ತು.
ಅವಳು ಕುಳಿತಿದ್ದ ಸೀಟಿನಲ್ಲಿ ಅವಳ ಹೆಗಲ ಚೀಲ ಮಾತ್ರ ಸಿಕ್ಕಿತು. ಕೇಡಿಗಳು ಎತ್ತಿ ನಿಲ್ಲಿಸಿಯೇ ಹೋಗಿದ್ದ ಡಿಕ್ಕಿಯಲ್ಲಿ ಬಗ್ಗಿ ನೋಡಿದಾಗ ಅಲ್ಲಿ ಸೂಟ್‌ಕೇಸ್ ಕಂಡಿತು. ಎರಡನ್ನೂ ಎತ್ತಿಕೊಂಡು ನಾನು ಮರದತ್ತ ತಿರುಗಿದಾಗ ಅವನು ಅವಳ ಮುಂದೆ ಕುಕ್ಕರಗಾಲಿನಲ್ಲಿ ಕುಳಿತಿರುವುದು ಕಂಡಿತು.

"...ನಿಮಗೆ ನ್ಯಾಯ ಸಿಗುತ್ತೆ ಆಂಟೀ. ಅದಕ್ಕಾಗಿ ನಾನು ಹೋರಾಡ್ತೀನಿ. ನನ್ನ ಕರ್ತವ್ಯ ಅದು. ನಾಳೆ ಬೆಳಿಗ್ಗೆ ಇಡೀ ದೇಶಕ್ಕೆ ಸುದ್ದಿ ಹರಡುತ್ತೆ. ಇಡೀ ದೇಶ ಆ ರೇಪಿಸ್ಟ್‌ಗಳನ್ನ ಬೇಟೆಯಾಡುತ್ತೆ. ಅವರಿಬ್ರಿಗೂ ಶಿಕ್ಷೆ ಗ್ಯಾರಂಟಿ. ಇನ್ಯಾವತ್ತೂ ಇನ್ಯಾವ ಹೆಣ್ಣಿಗೂ ಈ ರೀತಿ ಅನ್ಯಾಯ ಆಗೋದಿಲ್ಲ. ಇದೆಲ್ಲಾ ಆಗಬೇಕಾದ್ರೆ ನೀವು ಸ್ವಲ್ಪ ಕೋ ಆಪರೇಟ್ ಮಾಡ್ಬೇಕು. ನನ್ನ ರಿಪೋರ್ಟ್ ಅಥೆಂಟಿಕ್ ಆಗಬೇಕಾದ್ರೆ, ಎಫೆಕ್ಟಿವ್ ಆಗಬೇಕಾದ್ರೆ ನಿಮ್ಮದು ಒಂದೆರಡು ಫೋಟೋ ಬೇಕು ನಂಗೆ. ನೀವು ಬೇರೆ ಥರಾ ಪೋಸ್ ಕೊಡೋದೇನೂ ಬೇಡ. ಈ ಪೋಸೇ ಇರಲಿ"

ಅವಳು ಮುಖವನ್ನು ಮಂಡಿಗಳ ನಡುವೆ ಹುದುಗಿಸಿ ಮತ್ತಷ್ಟು ಮದುರಿಕೊಂಡಳು. ಎರಡೂ ಕೈಗಳಲ್ಲಿ ಬಿಗಿಯಾಗಿ ಹಿಡಿದಿದ್ದ ಹರಿದ ಲಂಗದ ಅಂಚುಗಳನ್ನು ಮತ್ತಷ್ಟು ಬಲವಾಗಿ ಎಳೆದು ತೊಡೆಗಳನ್ನು ಮುಚ್ಚಿಕೊಳ್ಳಲು ಹೆಣಗಿದಳು. ಹುಡುಗನ ಕೈಯಲ್ಲಿದ್ದ ಡಿಜಿಟಲ್ ಕ್ಯಾಮೆರಾ ಒಂದೆರಡು ಸಲ ಮಿನುಗಾಡಿತು.

"ಅದೆಲ್ಲಾ ಏನೂ ಬೇಡಾ." ನಾನು ಗಾಬರಿಯಲ್ಲಿ ಕೂಗಿದೆ. ಅವನು ನನ್ನತ್ತ ಅಲಕ್ಷದಿಂದ ಕೈ ಒದರಿದ: "ನೀವು ಸುಮ್ಮನಿರಿ. ನಿಮಗೆ ಗೊತ್ತಾಗೋದಿಲ್ಲ. ನೀವು ಹಳೇಕಾಲದೋರು." ಅವಳತ್ತ ತಿರುಗಿದ. "ಥ್ಯಾಂಕ್ಸ್ ಆಂಟಿ. ನಿಮ್ಮ ಮುಖದ್ದೊಂದು ಫೋಟೋ ತಗೋತೀನಿ. ಎಲ್ಲೀ ಸ್ವಲ್ಪ ತಲೆಯೆತ್ತಿ." ಅವಳು ತಲೆಯೆತ್ತಿದಳು. ನಾನು ದಂಗುಬಡಿದುಹೋದೆ. ನನ್ನ ಕೈಗಳಲ್ಲಿದ್ದ ಅವಳ ಸೂಟ್‌ಕೇಸ್ ಮತ್ತು ಹೆಗಲಚೀಲಗಳು ಧೊಪ್ಪನೆ ಕೆಳಗೆ ಬಿದ್ದವು. ಅದರತ್ತ ಅವಳ ಗಮನವೇ ಇಲ್ಲ. ತಲೆ ಮೇಲೆತ್ತಿ ಆ ಹುಡುಗನನ್ನೇ ನೇರವಾಗಿ ನೋಡಿದಳು. ತೊಡೆಗಳನ್ನು ಮುಚ್ಚಿದ್ದ ಲಂಗದ ಅಂಚುಗಳನ್ನು ಕೆಳಗೆ ಬಿಟ್ಟಳು. ಬತ್ತಲು ಕಾಲುಗಳನ್ನು ಮಡಿಚಿ ದೇಹವನ್ನು ಹಿಂದಕ್ಕೆ ವಾಲಿಸಿ ಕೈಗಳನ್ನೂ ಹಿಂದೆ ಕೊಂಡೊಯ್ದು ನೆಲದ ಮೇಲೆ ಊರಿದಳು. ಅವಳ ಕಣ್ಣುಗಳು ಅವನ ಕ್ಯಾಮರಾದ ಮೇಲೇ ನೆಟ್ಟಿದ್ದವು.

"ಸೂಪರ್ ಆಂಟೀ! ಹೀಗೆ ಇರಿ... ಫ್ಯಾಂಟಾಸ್ಟಿಕ್..." ಕಣ್ಣಿಗೆ ಕ್ಯಾಮರಾ ಹೂಡಿದ ಹುಡುಗ ಪ್ರೋತ್ಸಾಹದ ಉದ್ಗಾರಗಳನ್ನು ತೆಗೆಯುತ್ತಿದ್ದಂತೇ ಅವಳು ಎರಡೂ ಕಾಲುಗಳಿಂದ ಅವನ ಮುಖಕ್ಕೇ ಜಾಡಿಸಿ ಒದ್ದಳು.
ಒದೆತದ ರಭಸ ಅದೆಷ್ಟು ಜೋರಾಗಿತ್ತೆಂದರೆ ಆ ಹುಡುಗ ಚೀತ್ಕರಿಸುವುದಕ್ಕೂ ಸಮಯ ಸಿಗದೇ ಎರಡು ಮಾರು ದೂರಕ್ಕೆ ಎಗರಿಬಿದ್ದ. ಅವನ ಕೈಯಿಂದ ಹಾರಿದ ಕ್ಯಾಮರಾ "ಚಟ್ ಡಟ್ ಟಟ್‌ಡಟ್" ಎಂದು ಇಳಿಜಾರಿನ ಕಲ್ಲುಗಳಿಗೆ ಬಡಿಯುತ್ತಾ ಸಾಗಿತು. ಕೊನೆಯಲ್ಲಿ ಕೇಳಿಬಂದದ್ದು "ಬುಳಕ್" ಎಂಬ ಶಬ್ದ. ಅವಳು ಚಿರತೆಯಂತೆ ಮೇಲೆ ಹಾರಿದಳು. ಒಂದೇ ನೆಗೆತಕ್ಕೆ ಅವನ ಬಳಿಸಾರಿ ಮೇಲೇಳುತ್ತಿದ್ದ ಅವನ ಎದೆಗೆ ಆವೇಶದಿಂದ ಒದ್ದಳು. ಉರುಳಿದ ಅವನ ಪಕ್ಕೆಗೆ ಮತ್ತೊಂದು ಒದೆತ... ಬತ್ತಲೆ ಕಾಲುಗಳು ಹುಡುಗನ ಮೈಮೇಲೆ ಸಿಕ್ಕಿದಲ್ಲಿ ಎರಗಿದವು... "ಓ ಬೇಡಾ. ಪ್ಲೀಸ್" ಎಂದು ಅರ್ತನಾಗಿ ಕೂಗಿದವನ ತಲೆಯ ಮೇಲೆ ಬೊಗಸೆಯಲ್ಲಿ ಮಣ್ಣು ಎತ್ತಿ ಎತ್ತಿ ಸುರಿದಳು... ಸುಸ್ತಾಗಿ ನಿಂತಳು.

ಅವನು ಎದ್ದ. ಅವಳತ್ತ ಭೀತಿಯ ನೋಟ ಹೂಡಿದ. ಬುಸುಗುಟ್ಟಿದ ಅವಳು ಕಲ್ಲೊಂದನ್ನೆತ್ತಿ ಅವನತ್ತ ನುಗ್ಗಿದಳು. ಅವನು "ಓ ನೋ" ಎಂದು ಚೀರುತ್ತಾ ಓಡತೊಡಗಿದ. ಎರಡು ಕ್ಷಣದಲ್ಲಿ ಗುಡ್ಡದ ಕಲ್ಲುಗೋಡೆಯ ಹಿಂದೆ ಮರೆಯಾಗಿಹೋದ. ಅವಳತ್ತ ತಿರುಗಿದೆ. ಕಲ್ಲನ್ನು ಎರಡೂ ಕೈಗಳಲ್ಲಿ ಮೇಲೆತ್ತಿ ನೆಟ್ಟಗೆ ನಿಂತಿದ್ದಳು. ಹರಿದ ಲಂಗದ ಅಂಚುಗಳು ಗಾಳಿಯಲ್ಲಿ ಪಟಪಟ ಬಡಿದುಕೊಳ್ಳುತ್ತಿದ್ದವು. ಎದೆ ಏರಿಳಿಯುತ್ತಿತ್ತು. ನೋಟ ಅವನು ಹೋದ ದಿಕ್ಕಿಗೇ ಕೀಲಿಸಿತ್ತು. ನಿಬ್ಬೆರಗಾಗಿ ನಿಂತೆ. ಏಕಾಏಕಿ ಯೋಚನೆ ಬಂತು. ಅವನ ಕೈಯಲ್ಲೂ ಚಾಕು ಅಥವಾ ಅದಕ್ಕಿಂತ ಹೆಚ್ಚಿನ ಗನ್ ಅಂಥದೇನಾದರೂ ಇದ್ದಿದ್ದರೆ...! ಛಿಲ್ಲನೆ ಬೆವತುಹೋದೆ. ನಿಮಿಷದ ನಂತರ ಅವಳ ಎದೆ ಒಮ್ಮೆ ಏರಿಳಿಯಿತು. ಕಲ್ಲು ಕೆಳಗೆ ಬಿದ್ದು ತಗ್ಗಿನಲ್ಲಿ ಸಶಬ್ಧವಾಗಿ ಉರುಳಿಹೋಯಿತು. ಅವಳ ಕೈಗಳು ಸೋತಂತೆ ಕೆಳಗಿಳಿದವು. ಮರುಕ್ಷಣ ಅವಳು ಕೆಳಗೆ ಕುಸಿದಳು. ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಮರದ ಕೆಳಗಿದ್ದ ಅವಳ ಸೂಟ್‌ಕೇಸ್ ಮತ್ತು ಕೈಚೀಲಗಳನ್ನು ಎತ್ತಿಕೊಂಡು ಅವಳತ್ತ ನಡೆದೆ. ಭುಜದ ಮೇಲೆ ಮೃದುವಾಗಿ ಕೈಯಾಡಿಸಿದೆ. "ಬಟ್ಟೆ ಹಾಕ್ಕೊಳ್ಳಿ." ಬಿಡಿಬಿಡಿಯಾಗಿ ಹೇಳಿದೆ. ಹಿಂದೆ ತಿರುಗಿ ನನ್ನ ನೀರಿನ ಬಾಟಲಿಗಾಗಿ ಹುಡುಕಾಡಿದೆ. ಸ್ವಲ್ಪ ದೂರ ಉರುಳಿಹೋಗಿದ್ದ ಅದು ಕುರುಚಲು ಗಿಡವೊಂದಕ್ಕೆ ತಾಗಿ ನಿಂತಿತ್ತು. ಎತ್ತಿಕೊಂಡೆ. ಬಿರಟೆ ಸಡಿಲಾಗಿತ್ತೋ ಏನೋ ನೀರೆಲ್ಲಾ ಸುರಿದುಹೋಗಿ ತಳದಲ್ಲಿ ಎರಡು ಗುಟುಕಿನಷ್ಟು ಮಾತ್ರ ಇತ್ತು. ಅವಳತ್ತ ನಡೆದೆ. ಕಣ್ಣೊರೆಸಿಕೊಂಡು ತಲೆಯೆತ್ತಿದಳು. ನೀರಿನ ಬಾಟಲನ್ನು ಅವಳ ಮುಂದೆ ಹಿಡಿದೆ. ಕೈಚಾಚಿ ತೆಗೆದುಕೊಂಡಳು.

(ಮುಗಿಯಿತು)

«...ಕಥೆಯ ಮೊದಲ ಭಾಗ«...ಕಥೆಯ ಮೊದಲ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X