• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನರಕದಲ್ಲಿ ಇಂದು : ಎಲ್ಲೂ ಕೇಳಿರದ ಪ್ರೇಮಕಥೆ

By Staff
|

ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅನೇಕಾರು ಕಥೆಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ತಮ್ಮ ಅಪ್ರಕಟಿತ ಕಥಾ ಕಣಜಕ್ಕೆ ಅವರು ಇಟ್ಟಿರುವ ಹೆಸರು "ಸಿನಿಮಾ ಮಾಡಲಾಗದ ಕಥೆಗಳು". ಈ ಕಥಾ ಗುಚ್ಛದಿಂದ ಆಯ್ದ ಒಂದು ಮುತ್ತು "ನರಕದಲ್ಲಿ ಇಂದು.." ಈ ಕತೆಯನ್ನು ಸೆಲ್ಯುಲ್ಯಾಡ್ ಗೆ ತರಬಹುದಾ? ಯಾವುದಕ್ಕೂ ನಿರ್ದೇಶಕರಿಗೇ ಎರಡು ಸಾಲು ಬರೆಯಿರಿ.

ಕಥೆಗಾರ : ಗುರುಪ್ರಸಾದ್, ಬೆಂಗಳೂರು

ಈಗ ಅಲ್ಲಿ ತುಂಬಾ ಬದಲಾವಣೆಗಳಾಗಿವೆ. ಮೊದಲು ಅಲ್ಲಿಗೆ ಹೋದವರನ್ನು ಎಣ್ಣೆಯಲ್ಲಿ ಹಾಕಿ ಹುರಿಯುತ್ತಿದ್ದರು, ಪಾಪಿಗಳ ಕಣ್ಣುಗಳಿಗೆ ಎಮ್.ಟಿ.ಆರ್ ಖಾರದ ಪುಡಿ ಹಾಕುತ್ತಿದ್ದರು, ವಿಷ ಜಂತುಗಳಿಂದ ಕಚ್ಚಿಸುತ್ತಿದ್ದರು.. ಈಗ ಹಾಗಿಲ್ಲ.. ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡ್ತಿದ್ದಾರೆ ಅಲ್ಲಿ..

*********

ಅಲ್ಲಿ ಬದಲಾವಣೆ ಆಗೋಕೂ ಕಾರಣಗಳಿವೆ. ಭೂಮಿಯಿಂದ ಹೋದವರಿಗೆ ಅವ್ಯಾವುದೂ ಶಿಕ್ಷೆಯಾಗೇ ಅನ್ನಿಸಲಿಲ್ಲ. ಬೆಂಗಳೂರಿನ ಪೊಲ್ಯೂಷನ್‌ನ್ನನ್ನೇ ಕಣ್ಣಿಗೊತ್ತಿಕೊಂಡವರು ನಾವು. ಅಲ್ಲಿನ ಖಾರದ ಪುಡಿ ಕಣ್ಣಿಗೆ ಘಾಟಾಗಲೇ ಇಲ್ಲ. ಎಣ್ಣೆ ಹಾಕಿ ಹಾಕಿ ಒಳಗೆಲ್ಲಾ ಬೆಂದು ಹೋದವರನ್ನು ಏನು ಬೇಯಿಸುತ್ತೆ ನರಕದ ಎಣ್ಣೆ..? ಮನುಷ್ಯನೆಂಬ ಯೋಚಿಸಬಲ್ಲ ವಿಷ ಜಂತುವನ್ನು ತಲೆ ಇಲ್ಲದ ಯಾವ ವಿಷ ಜಂತು ಕಚ್ಚಿ ಸಾಯಿಸಬಲ್ಲುದು..? ಹಾಗಾಗಿ.

*********

ತಪ್ಪು ನಿರ್ಧಾರವಾಗುತ್ತಿದಂತೆ ಅವರವರ ಪಾಪಗಳಿಗನುಸಾರವಾಗಿ ಶಿಕ್ಷೆಯ ಚಾರ್ಟ್ ರೆಡಿಯಾಗುತ್ತದೆ. ಬೆಳಿಗ್ಗಿನಿಂದ ಮುಸ್ಸಂಜೆಯವರೆಗೆ ಪಾಪಿಗಳಿಗೆ ಥರೇವಾರಿ ಶಿಕ್ಷೆಯಾಗುತ್ತದೆ. ರಾತ್ರಿ ಎಲ್ಲ ಪ್ರೇತಾತ್ಮಗಳನ್ನು ಹೊರಗೆ ಬಿಡುತ್ತಾರೆ. ಅವು ತಮಗೆ ಬೇಕೆನಿಸಿದ ಜಾಗಕ್ಕೆ ಹಾರಿ ಹೋಗಿ ಬೆಳಿಗ್ಗೆ ಸೂರ್ಯೋದಯದ ಸೂಚನೆಗಳು ಕಂಡು ಬರುತ್ತಿದಂತೆ ನರಕದ ಬಾಗಿಲೊಳಗಿರಬೇಕು. ತಡವಾಗಿ ಬಂದರೆ ಮತ್ತೆ ಶಿಕ್ಷೆಯಾಗುತ್ತದೆ. ಪ್ರತಿ ದೆವ್ವಗಳಿಗೂ ಒಂದೊಂದು ಹೆಚ್.ಎಮ್.ಟಿ ಗಡಿಯಾರ ಕೊಡಿಸುವ ಭರವಸೆ ಯಮ-ಚಿತ್ರಗುಪ್ತ ಸಂಗಮದ ಮಿಶ್ರ ಸರ್ಕಾರದ್ದು..

*********

ಈ ಸಂಜೆ ದೆವ್ವಗಳೆಲ್ಲಾ ಬೆಳಿಗಿನಿಂದ ತಮಗೆ ಹಿಂಸಿಸಿದವರನ್ನು ಬಾಯಿಗೆ ಬಂದಂತೆ ಬೈದುಕೊಂಡು ಹಾರಿ ಚದುರಿ ಹೋಗುತ್ತಿದ್ದವು.. ಅವು ಗಾಳಿಯಲ್ಲಿ ಗುಂಪು ಗುಂಪಾಗಿ ಹಾರಿ ಹೋಗೋದು ನೋಡಲಿಕ್ಕೆ ಚೆನ್ನ..ಸೆಷನ್ ಮುಗಿಸಿ ವಿಧಾನಸೌಧದಿಂದ ಹೊರಬರುತ್ತಿರುವ ಪುಡಾರಿಗಳಂತೆ..

*********

ನರಕದ ಈಶಾನ್ಯ ಮೂಲೆಯಲ್ಲಿರುವ ಗುಡ್ಡದ ಮೇಲೆ ಒಂಟಿ ಹುಣಸೆಮರವೊಂದಿದೆ. ಯಾವ ದೆವ್ವಗಳೂ ಅಪ್ಪಿತಪ್ಪಿಯೂ ಆ ಮರದ ಕಡೆಗೆ ಹೋಗೊದಿಲ್ಲ.. ಅದರ ಐತಿಹ್ಯ ಅಂತಹುದು.. ಆ ಒಬ್ಬನ್ನನ್ನು ಬಿಟ್ಟು. ಅವನ ಹೆಸರು ಗಿರಿಧರ..

*********

ಸಂಜೆಯಾಗುತ್ತಿದ್ದಂತೆ ಆತ ಅಲ್ಲಿ ಬಂದು ಕೂರುತ್ತಾನೆ. ಗುಡ್ಡದ ಕೆಳಗಿನ ಪ್ರಪಾತವನ್ನೇ ದಿಟ್ಟಿಸುತ್ತಾ.. ಕೈಗೆ ಸಿಗುವ ಒಂದೊಂದೇ ಗರಿಕೆಯನ್ನು ಕಿತ್ತು ಬುಡದ ರಸವನ್ನು ಹೀರುತ್ತಾ.. ಮುಖ್ಯವಾಗಿ ಅವಳನ್ನು ನೆನೆಯುತ್ತಾ.! ತಾನು ಸತ್ತು ಎರಡು ತಿಂಗಳಾಯಿತು.. ಆತ್ಮಹತ್ಯೆ ಮಹಾಪಾಪ ಅಂತ ತೀರ್ಮಾನವಾಗಿ ಅವನಿಗೆ ಘೋರ ಶಿಕ್ಷೆಯೂ ಆಯಿತು.. ಅವನು ಅದಕ್ಕೆ ಒಗ್ಗಿ ಹೋಗಿದ್ದು ಆಯಿತು.. ಭೂಮಿಯಲ್ಲಿ ಇವನ ಹುಡುಗಿಗೆ ಮದುವೆಯಾಗಿದ್ದೂ ಆಯಿತು.. ಇವನೂ ಹೋಗಿದ್ದ ಮದುವೆಗೆ ಹಾರಿಕೊಂಡು. ಏನೂ ಆಗದವಳಂತೆ ಅವಳು ನಗುನಗುತ್ತಾ ತಾಳಿ ಕಟ್ಟಿಸಿಕೊಳ್ಳುತ್ತಿದ್ದಾಳೆ. ಮುಯ್ಯಿ ಇಸ್ಕೋತ್ತಿದ್ದಾಳೆ. ಬಂದವರಿಗೆ ಊಟ ಮಾಡಿಕೊಂಡು ಹೋಗಿ ಅನ್ನುತ್ತಿದ್ದಾಳೆ.. ತನಗೇನು ಊಟ ಹಾಕಿಸ್ತಾಳೋ.. ತನಗೆ ಎಡೆಯಿಟ್ಟವಳು..

*********

ಮನಸೇ.. ನನ್ನ ಮನಸೇ.. ಏನಾಗಿದೆ ನಿನಗೆ..? ಅವಳ ಕಹಿ ನೆನಪೇ ಜೇನಾಗಿದೆ ನಿನಗೆ..! ಬಿ.ಆರ್.ಲಕ್ಷ್ಮಣರಾಯರ ಹಾಡು ಅವನಿಗೆ ನೆನಪಿಗೆ ಬರುತ್ತದೆ.. ಅವನ ದೇಹವಿಲ್ಲದ ಕಣ್ಣು ತೇವವಾಗುತ್ತದೆ.

*********

ನಂದಿನಿ ನರಕಕ್ಕೆ ಬಂದು ತುಂಬಾ ದಿನಗಳೇನಾಗಿಲ್ಲ.. ಬೆಳಗ್ಗೆಯಿಂದ ಶಿಕ್ಷೆಯನ್ನು ಅನುಭವಿಸಿ ಬಿಡುವಾಗುತ್ತಿದಂತೆ ನರಕವನ್ನೆಲ್ಲಾ ಸುತ್ತಿ ಬಿಡುವ ಉತ್ಸಾಹ ಅವಳದು.. ವಾರ್ಡನ್ ಅವಳಿಗೆ ಎಚ್ಚರಿಸಿರ್ತಾಳೆ.. ಆ ಹುಣಸೆಮರದ ಬಳಿ ಹೋಗದಿರಲು.. ಮಾಡಬಾರದು ಅಂದಿದ್ದನ್ನ ಮಾಡೋದೇ ನಂದಿನಿಯ ವ್ಯಕ್ತಿತ್ವ.. ಅದೇ ಅವಳನ್ನು ಇಂದು ಈ ಸ್ಥಿತಿಗೆ ತಂದಿಟ್ಟಿರೋದು..

********

ಅವತ್ತು ಅಮಾವಾಸ್ಯೆ.. ನಂದಿನಿ ಬಂದೇ ಬಿಡುತ್ತಾಳೆ ಆ ಹುಣಸೇ ಮರದ ಕಡೆಗೆ. ಥಂಡಿ ಗಾಳಿ ರೊಯ್ಯನೆ ಬೀಸುತ್ತಿದೆ.. ಆ ಹುಣಸೆಮರದಿಂದ ಪ್ರೇತಾತ್ಮಗಳ ಕರ್ಕಶ ಚೀತ್ಕಾರ ಸದ್ದು ಭಯಾನಕವಾಗಿ ಬರುತ್ತಿದೆ.. ಹಿಟ್ಲರ್ ಕೊಂದಿದ್ದ ನಾಲ್ಕು ಲಕ್ಷ ಮಂದಿಯ ಸಾವಿನ ಕೊನೆಯ ಚೀತ್ಕಾರ ಅದು.. ಗಂಡಸರು, ಹೆಂಗಸರು ಮಕ್ಕಳ ಧ್ವನಿಗಳು.. ಏಕಕಾಲಕ್ಕೇ ಸಾವಿನ ನೋವಿನಲ್ಲಿ ಕೂಗಿಕೊಂಡಂತೆ.. ಪದೇ.. ಪದೇ.. ಹೆದರಿಬಿಡ್ತಾಳೆ.. ನಂದಿನಿ.. ಆ ಘನ ಘೋರ ಕರ್ಕಶತೆಯ ಮಡುವಿನಲ್ಲಿ ನಿರ್ವಿಕಾರವಾಗಿ ಕೂತಿರುವ ಆ ಇನ್ನೊಂದು ಆತ್ಮವನ್ನು ಕಂಡಾಗಲಂತೂ ಎದೆ ಧಸಕ್ಕೆಂದು ಬಿಡುತ್ತದೆ ನಂದಿನಿಗೆ.. ಯಾರೋ ತನ್ನ ಬಳಿ ಬರುತ್ತಿವುದರ ಅರಿವಾದವನಂತೆ ಅವನು ತಿರುಗಿ ನೋಡ್ತಾನೆ.. ನಂದಿನಿ ಅವನ ಛಿದ್ರವಾಗಿದ್ದ ಮುಖ ನೋಡಿ ಅಲ್ಲಾಡಿ ಹೋಗುತ್ತಾಳೆ.. ತನ್ನ ಪ್ರೇಮ ವಿಫಲತೆಯ ನಂತರ ಗಿರಿಧರ ಸತ್ತದ್ದು.. ಓಡುವ ರೈಲಿಗೆ ತಲೆಕೊಟ್ಟು.. ನಂದಿನಿ ಮತ್ತೆ ಈ ಕಡೆ ಬರಲೇಬಾರದೂಂತ ತಿರ್ಮಾನಿಸಿಕೊಂಡು ಒಂದೇ ಕ್ಷಣದಲ್ಲಿ ಅಲ್ಲಿಂದ ಹಾರಿ ಬಿಡ್ತಾಳೆ.. ದೂರಕ್ಕೆ..

*********

ಅಂತಹ ಭಯಾನಕ ವಾತವರಣದಲ್ಲಿ ಆತ ಒಬ್ಬನೇ ಕೂತದ್ದಾದರೂ ಯಾಕೆ..? ಆ ಮರದಿಂದ ಬರುತ್ತಿರುವ ಸದ್ದುಗಳು ಅವನ್ನನ್ನು ಹೆದರಿಸುತ್ತಿಲ್ಲವೇ..? ಮುಖ್ಯವಾಗಿ ಅವನು ಯಾರು..? ನರಕದಲ್ಲಿ ಯಾವ ಡಿಪಾರ್ಟ್‌ಮೆಂಟ್‌ನಲ್ಲಿದ್ದಾನೆ..? ನಂದಿನಿಯ ಮನಸ್ಸಿನಲ್ಲಿ ನೂರು ಪ್ರಶ್ನೆಗಳು.. ಉತ್ತರಕ್ಕಾಗಿ ಅವಳ ಹುಡುಕಾಟ ಶುರುವಾಗುತ್ತದೆ.. ಆಶ್ಚರ್ಯವೆಂಬಂತೆ ಅವನ ಬಗ್ಗೆ ಯಾವ ಮಾಹಿತಿಯೂ ಅವಳಿಗೆ ಎಷ್ಟು ವಿಚಾರಿಸಿದರೂ ಸಿಗೋದಿಲ್ಲಾ..

*********

ಕುತೂಹಲ ಮಡುಗಟ್ಟುತ್ತದೆ ಅವಳಲ್ಲಿ.. ಈ ಒಂದು ವಾರದಿಂದ ಅವನನ್ನು ದಿನವೂ ಫಾಲೋ ಮಾಡುತ್ತಿದ್ದಾಳೆ.. ಅವನ ದಿನಚರಿಯಲ್ಲಿ ಯಾವ ಬದಲಾವಣೆಗಳೂ ಇಲ್ಲ.. ದಿನವೂ ಕೆಲಸ ಮುಗಿದ ನಂತರ ಅಲ್ಲಿಯೇ ಹೋಗಿ ಕೂರೋದು.. ಒಮ್ಮೊಮ್ಮೆ ಕರ್ಕಶವಾಗಿ ಅಳೋದು.. ಉದ್ದುದ್ದ ಉಗುರಲ್ಲಿ ನೆಲ ಕೆರೆಯೋದು ಬಿಟ್ಟರೆ..

*********

ತನ್ನೆಲ್ಲಾ ಧೈರ್ಯವನ್ನು ಒಗ್ಗೂಡಿಸಿ ಅವಳು ಕೇಳೇ ಬಿಡ್ತಾಳೆ.. '.. ನಾನಿಲ್ಲಿ ಕೂರ ಬಹುದಾ ಮಿಸ್ಟರ್..?'

'.. ನರಕ ನನಗೆಷ್ಟು ಸ್ವಂತವೋ.. ನಿಮಗೂ ಅಷ್ಟೇ ಸ್ವಂತ.. ಕೂರಿ..' ನಗುತ್ತಲೇ ಹೇಳ್ತಾನೆ ಗಿರಿಧರ..

' ಹ್ಹ..ಹ್ಹ.. ಒಳ್ಳೇ ಜೋಕು.. ನಿಮ್ಮ ಹೆಸರು ಗಿರಿಧರ ಅಂತ ಗೊತ್ತಾಯ್ತು.. ನನ್ನ ಹೆಸರು ನಂದಿನಿ.. ತುಂಬಾ ದಿನದಿಂದ ನಿಮ್ಮನ್ನು ಫಾಲೋ ಮಾಡ್ತಿದ್ದೀನಿ.. ಬೇರೆ ದೆವ್ವಗಳೆಲ್ಲಾ ಎಲ್ಲೆಲ್ಲೋ ಹೊಗ್ತವೆ.. ದಿಕ್ಕು ತೊಚಿದ ಕಡೆಗೆ.. ನೀವು ಮಾತ್ರ ಈ ಮರ ಬಿಟ್ಟು ಎಲ್ಲೂ ಹೋಗಲ್ಲಾ.. ಯಾಕೆ ಅಂತ ತಿಳ್ಕೋಬೋದಾ..?'

'ಏನೋ.. ಬೇಜಾರು..'

'ಅದೇ ಏನೂಂತ ತಿಳ್ಕೊಬೋದಾ..?'

'ನಾನು ತುಂಬಾ ಪ್ರೀತಿಸಿದ್ದ ಹುಡುಗಿ ನನಗೆ ಮೋಸ ಮಾಡಿದಳು.. ಆಶ್ಚರ್ಯ ಗೊತ್ತಾ.. ನಾನು ಸತ್ತಿದ್ದು ಅವಳಿಗಿನ್ನೂ ಗೊತ್ತೇ ಇಲ್ಲ.. ಹ್ಹ..ಹ್ಹ..' ಅವನ ಕಣ್ಣಲ್ಲಿ ನೀರು..

'ಕ್ಷಮಿಸಿ.. ನನಗೆ ಇದು ಗೊತ್ತಿರಲ್ಲಿಲ್ಲ.. ಹಳೇದನ್ನು ಕೆದಕಿ ನಿಮಗೆ ನೋವುಂಟು ಮಾಡಿದೆನಾ..?'

'ಪರವಾಗಿಲ್ಲ.. ಬಿಡಿ.. ನೀವೇನು ಇಲ್ಲಿ.. ನಿಮ್ಮದೂ ಆತ್ಮಹತ್ಯೆ ಕೇಸಾ..?'

'ದೇವೇಗೌಡ ಪೆಟ್ರೋಲ್ ಬಂಕ್ ಹತ್ರ ಸಿಗ್ನಲ್ ಜಂಪ್..'

ಅವನು ಗಹಗಹಿಸಿ ನಗ್ತಾನೆ.. ಅವನು ಹಾಗೆ ನಕ್ಕು ಬಹಳ ಕಾಲವೇ ಆಗಿರುತ್ತದೆ..

*********

'ಯಾಕೆ ಲೇಟು..'

'ವಾರ್ಡನ್ ನಾನು ಇಲ್ಲಿ ಬರೊಕೆ ಬಿಡಲಿಲ್ಲ.. ತುಂಬಾ ಕಷ್ಟ ಆಯ್ತು ಅವಳ ಕಣ್ಣು ತಪ್ಪಿಸೋಕೆ.. ಈ ಮರದ ಕೆಳಗೆ ಹೆಣ್ಣು ದೆವ್ವಗಳನ್ನು ಯಾಕೆ ಬರಲು ಬಿಡೋದಿಲ್ಲ ನಿಮಗೇನಾದರೂ ಗೊತ್ತಾ..?'

'ಬಹುಶ: ನಾನಿರ್ತೀನೀಂತ..'

ಇಬ್ಬರೂ ಗಹಗಹಿಸಿ ನಕ್ಕರು.. ಅವನು ಮುಂದುವರೆಸಿದ..

'ಈ ಹುಣಸೆ ಮರದಲ್ಲಿ ಹಿಟ್ಲರ್ ಕೊಂದ ಪ್ರತಿ ಆತ್ಮಗಳನ್ನು ಇರಿಸಲಾಗಿದೆ.. ಮತ್ತು ಮುಖ್ಯವಾಗಿ ಹಿಟ್ಲರ್‌ನ ಆತ್ಮವನ್ನು.. ಅವೆಲ್ಲವೂ ಹಿಟ್ಲರನ್ನು ಪ್ರತಿ ಕ್ಷಣವೂ ಹಿಂಸಿಸುತ್ತಿವೆ.. ಆ ಶಬ್ದಕ್ಕೆ ಕೆಲವು ಹೆಣ್ಣು ಆತ್ಮಗಳು ಹೆದರಿ ವಾರ್ಡನ್ ಬಳಿ ಕಳೆದ ಸಲ ಕಂಪ್ಲೇಂಟ್ ಮಾಡಿದ್ದರಿಂದ..'

'..ಓ.. ನಿಮಗೆ ಆ ಧ್ವನಿ ಹೆದರಿಸುವುದಿಲ್ಲವಾ..?'

'ನನಗೆ ಹೆದರಿಸೋ ಒಂದೇ ಒಂದು ಧ್ವನಿ ಎಂದರೆ ರೈಲು ಬರೋ ಶಬ್ಧ.. ಹ್ಹ..ಹ್ಹ..'

ಮತ್ತೊಮ್ಮೆ ಇಬ್ಬರೂ ನಕ್ಕರು..

'ನೀವು ಚೆನ್ನಾಗಿ ಮಾತಾಡ್ತೀರಾ..'

'ಅವಳೂ ಹಾಗೇ ಹೇಳ್ತಿದ್ಳು..'

'ಓ.. ಸಾರಿ..'

'ಇರಲಿ.. ಬಿಡಿ..'

'ಬನ್ನಿ ಹಾಗೇ ಸುತ್ತಾಡಿಕೊಂಡು ಬರೋಣಾ..'

'ಸರಿ.. ಆದರೆ.. ಒಂದೇ ಒಂದು ಕಂಡೀಷನ್‌ಉ..'

'ಏನು..?'

'ನೀವು ನನ್ನ ಹಿಂದೆ ಹಿಂದೆ ಬರಬೇಕು..'

'ಯಾಕೆ..?'

'ಆಗ ನಿಮಗೆ ನನ್ನ ಛಿದ್ರಗೊಂಡ ಕುರೂಪಿ ಮುಖ ನೊಡುವ ಕಷ್ಟ ಇರಲ್ಲ.. ಹ್ಹ..ಹ್ಹ..'

ಅವಳು ನಗಲಿಲ್ಲ..

*********

ಆ ದೇಹವಿಲ್ಲದವರು ಒಂದು ಲಾಂಗ್ ವಾಕ್ ಮುಗಿಸುವ ವೇಳೆಗೆ ಸಾಕಷ್ಟು ಮಾತಾಡಿದ್ದರು..

'..ಏನೇ ಹೇಳಿ.. ನಾವು ಜೀವನದಲ್ಲಿ ಎಡವುವ ಸಾಧ್ಯತೆಯೇ ಇಲ್ಲ..' ಅವನಂದ.

'ಯಾಕೋ..?' ಅವಳ ಪ್ರಶ್ನೆ.

'ಎಡವೋದು ಕಾಲಿರೋರ ಸಮಸ್ಯೆ.. ನಮಗೆಲ್ಲಿದೆ ಕಾಲು..ಹ್ಹ..ಹ್ಹ..'

ನಗ್ತಾರೆ..

'..ನೀವು ನಿಮ್ಮ ಹುಡುಗಿಯನ್ನ ತುಂಬಾ ಪ್ರೀತಿಸುತ್ತಿದ್ದರಾ..? ಎಷ್ಟು..?'

'ನೀವು ಬಹುಶಃ ಎಲ್ಲೂ ಕೇಳಿರದ ಪ್ರೇಮಕತೆ ನಮ್ಮದು..'

'ನಾನು ಅದನ್ನು ತಿಳ್ಕೋಬೋದಾ..? ನಿಮಗೆ ನೊವಾಗುತ್ತೆ ಅಂದ್ರೆ ಬೇಡಾ..'

'ಗಂಡಸಿನ ಸಮಸ್ಯೆಯೇ ಅದು.. ಅವನು ನೋವನ್ನು ತುಂಬಾ ದಿನ ಆಚರಿಸ್ತಾನೆ.. ಅದನ್ನ ಎಲ್ಲರ ಹತ್ತಿರ ಹೇಳಿಕೊಳ್ತಾ ತಾನು ವಿಶೇಷ ಎಂಬ ಭಾವವನ್ನ ಆನಂದಿಸ್ತಾನೆ..'

'ಹಾಗಾದರೆ ನಿಮ್ಮ ಕಥೆ ನಂಗೆ ಹೇಳ್ತೀರಿ..'

'ಖಂಡಿತ.. ಆದರೆ ಇವತ್ತಲ್ಲ.. ನಾಳೆ..!'

*********

ಮತ್ತದೇ ಜಾಗ.. ಮತ್ತದೇ ಭೇಟಿ.. ಮತ್ತದೇ ಲಾಂಗ್ ವಾಕ್.ಅವನು ಹೇಳುತ್ತಿದ್ದ.. ತನ್ನ ಕಥೆಯಲ್ಲಿ ತಾನೇ ತೀವ್ರವಾಗಿ ಮುಳುಗಿಹೋಗಿ..

'..ಅವಳು ನನ್ನನ್ನು ತುಂಬಾ ಪ್ರೀತಿಸುತ್ತಿದ್ದಳು.. ಅಥವಾ ಹಾಗೆ ನಟಿಸ್ತಿದ್ಳು.. ಸ್ವಲ್ಪವೂ ಅನುಮಾನ ಬರದ ಹಾಗೆ.. ಎರಡು ವರ್ಷಗಳ ಪ್ರೇಮ ನಮ್ಮದು.. ಚಿ.ಉದಯಶಂಕರ್ ಬರೆದೆರೋ ಎಲ್ಲಾ ಹಾಡುಗಳನ್ನೂ ಒಂದಕ್ಷರ ಸಾಹಿತ್ಯ ತಪ್ಪಿಸದೆ ಅವಳಿಗಾಗಿ ಹಾಡ್ತಿದ್ದೆ.. ಅದನ್ನವಳು ಕೇಳಿಸಿಕೊಳ್ಳಲೇ ಇಲ್ಲ.. ಅವಳ ಉತ್ಸಾಹವೆಲ್ಲಾ ಪಿವಿಆರ್‌ನಲ್ಲಿ ಸ್ಟೈಲ್ ಆಗಿ ಪಾಪ್‌ಕಾರ್ನ್ ತಿನ್ನುತ್ತಾ ಹಿಂದಿ ಸಿನಿಮಾ ನೋಡೋದು.. ನಾನು ಅವಳಿಗೆ ಕನ್ನಡದ ಅಧ್ಬುತ ಪುಸ್ತಕಗಳನ್ನು ಕೊಟ್ಟೆ ಓದಲೀಂತ.. ಇಂಗ್ಲೀಷನ್ನು ತಬ್ಬಿಕೊಂಡವಳು ಅವಳು.. ಅವಳಿಗದು ರುಚಿಸಲೇ ಇಲ್ಲ.. ದುಂದು ಮಾಡಬಾರದೆಂದೆ.. ಜುಗ್ಗ ಅಂದಳು.. ಪರೀಕ್ಷೆ ಹತ್ತಿರ ಬರ್ತಿದೆ.. ಓಡಾಡೋದು ಸ್ವಲ್ಪ ಕಮ್ಮಿ ಮಾಡೋಣಾಂದೆ.. ನಿನಗೆ ನನ್ನ ಮೇಲೆ ಆಸಕ್ತಿ ಹೋಗಿದೆ ಅಂದಳು.. ಸತ್ಯ ಹೇಳ್ತೀನಿ.. ನಾನು ನನ್ನ ಪ್ರೇಮಕ್ಕೆ ನಿಷ್ಠನಿದ್ದೆ.. ಅವಳಿಗದು ಅರ್ಥವಾಗಲೇ ಇಲ್ಲ..' ಕಣ್ಣಲ್ಲಿ ನೀರು ತುಂಬಿಕೊಂಡು ಒಂದೇ ಉಸಿರಲ್ಲಿ ಹೇಳುತ್ತಿದ್ದ..

'.. ಒಂದಿನ ಅವಳು ನನ್ನನ್ನು ಕೇಳಿದಳು.. ನನ್ನನ್ನು ನೀನು ಎಷ್ಟು ಪ್ರೀತಿಸ್ತಿಯಾ.. ಅಂತ.. ನಾನು ನನ್ನಷ್ಟೇ ಅಂದೆ.. ನಾನು ಏನು ಕೇಳಿದ್ರೂ ಕೊಡ್ತಿಯಾ.. ಅಂದಳು.. ನನ್ನ ಹೆಸರಿಗೆ ಅಪ್ಪ ಮಾಡಿರೋ ಮನೆ ಇದೆ.. ಅದೂ ನಿಂದೆ.. ಬ್ಯಾಂಕಲ್ಲಿ ಸ್ಪಲ್ಪ ದುಡ್ಡಿದೆ.. ಅದೂ ನಿಂದೆ.. ಅಮ್ಮ ಕೊಟ್ಟಿರೋ ಚಿನ್ನ ಇದೆ.. ಅದೂ ನಿಂದೆ.. ಹೇಳು ಇನ್ನೇನು ಬೇಕು..?'

'.. ನಾನು ಏನೋ ಕೇಳ್ತೀನಿ ನೀನು ನನ್ನನ್ನು ತುಂಬಾ ಪ್ರೀತಿಸ್ತಿದ್ರೆ ಇಲ್ಲ ಅನ್ನ ಕೂಡದು.. ಕೊಡ್ಲೇಬೇಕು..'

'ಆಯ್ತು..'

'ನೀನು ನನ್ನನ್ನು ಪ್ರಪಂಚದಲ್ಲೇ ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸೋದಾದರೆ, ನನ್ನ ಒಳಿತನ್ನೇ ಬಯಸೋದಾದರೆ ನನ್ನನ್ನ ಈ ಕ್ಷಣದಿಂದ ಮರೆತು ಬಿಡು.. ನಾನು ಮದುವೆಯಾಗ್ತಿದ್ದೀನಿ..'

'ತಮಾಷೆ ಮಾಡ್ತಿದ್ದಾಳೇನೋ ಅಂದ್ಕೊಂಡೆ.. ನೋಡಿ ಅಲ್ಲೂ ನಾನವಳನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳಲ್ಲಿಕ್ಕೆ ಆಗ್ಲಿಲ್ಲ.. ಹ್ಹ..ಹ್ಹ.. ಅವಳು ಬ್ಯಾಗಿನಿಂದ ಫೋಟೊ ಒಂದನ್ನು ತೆಗೆದಳು.. ಅವಳು ಮತ್ತು ಅವನು ಮದುವೆಯಾಗುತ್ತಿರುವ ಶ್ರೀಮಂತ ಹುಡುಗನ ಜೊತೆ ತೆಗೆಸಿಕೊಂಡ ತುಂಬಾ ಆತ್ಮೀಯ ಭಂಗಿಯ ಫೋಟೋ ಅದು..! ನನ್ನ ಎದೆಯಲ್ಲಿ ಸಿಡಿಲು.. ಕಣ್ಣಲ್ಲಿ ಮಳೆ.. ಅವಳ ಮುಖವನ್ನು ನೋಡಲಾಗದೇ ಅಲ್ಲಿಂದ ನಡೆದೆ.. ತುಂಬಾ ನಡೆದೆ ಅವತ್ತು.. ಯಶವಂತಪುರ ರೈಲ್ವೇ ಗೇಟ್ ಬಳಿ ರೈಲು ಬರ್ತಿತ್ತು.. ನಾನು ಅದರ ಎದುರಾಗಿ ನಡೆಯುತ್ತಿದ್ದೆ.. ನನಗೆ ಬೇರೆ ದಾರಿ ಇರ್ಲಿಲ್ಲ.. ಆ ರೈಲ್ವೇ ಹಳಿಯನ್ನು ಬಿಟ್ಟು.. ಅಷ್ಟೇ ಜ್ಞಾಪಕ ನನಗೆ.. '

ನಂದಿನಿ ಕಣ್ಣಲ್ಲಿ ನೀರು ತುಂಬಿಕೊಂಡು ಅವನ್ನನ್ನೇ ದಿಟ್ಟಿಸುತ್ತಿದ್ದಳು.. ಅವಳ ಧ್ವನಿ ಗದ್ಗದ ವಾಗಿತ್ತು..

*********

'ನನಗೆ ಪ್ರೇಮದ ಅನುಭವವೇ ಇಲ್ಲ.. ನಾನು ಯಾರನ್ನದರೂ ಪ್ರೀತಿಸಬೇಕು ಅಂತ ಅಂದ್ಕೊಂಡಿದ್ದೆ.. ನನಗೆ ತಕ್ಕವರು ಯಾರೂ ಸಿಕ್ಕೇ ಇರಲಿಲ್ಲ.. ಇವತ್ತಿನವರೆಗೆ..'

'ಏನು ಹೇಳ್ತಿದ್ದೀರಿ..?'

'..ಹೇಳಿ ನನಗಾಗಿ ಚಿ.ಉದಯಶಂಕರ್ ಹಾಡುಗಳನ್ನು ಹಾಡ್ತೀರಾ..? ಕನ್ನಡದ ಪುಸ್ತಕಗಳನ್ನು ಕದ್ದಾದರೂ ತಂದು ಕೊಡ್ತೀರಾ..? ನನ್ನ ಪಕ್ಕ ಕೂತು ಜಗತ್ತಿನ ಎಲ್ಲದರ ಬಗ್ಗೆ ಮಾತಾಡ್ತೀರಾ..? ನಿಮ್ಮನ್ನು ಪ್ರಪಂಚದಲ್ಲಿ ಯಾವ ಹುಡುಗಿಯೂ ಪ್ರೀತಿಸದ ರೀತಿಯಲ್ಲಿ ಪ್ರೀತಿಸಿ ತೋರಿಸ್ತೀನಿ..' ಧೃಡವಾಗಿ ಕೈ ಚಾಚುತ್ತಾಳೆ.. ಅದನ್ನು ಕೈ ಅನ್ನಬಹುದೋ ಇಲ್ಲವೋ ಗೊತ್ತಿಲ್ಲ..

ಅವನು ಒಮ್ಮೆ ಏಟು ತಿಂದವನು ಒಂದು ಕ್ಷಣ ಯೋಚಿಸುತ್ತಾನೆ..

'ನನಗೆ ಯೋಚಿಸಲು ಸ್ವಲ್ಪ ಸಮಯ ಸಿಗುತ್ತಾ..?'

'..ಎಷ್ಟು ಹೊತ್ತು..?'

'ಒಂದು ಸೆಕೆಂಡು..?'

ಇಬ್ಬರೂ ನಗ್ತಾರೆ.

*********

ಅಷ್ಟರಲ್ಲಿ ಅವರಿಬ್ಬರೂ ತುಂಬ ನಡೆದಿರ್‍ತಾರೆ.. ಯಾವ ಬಾಲಿಶ ಉದ್ವೇಗಗಳೂ ಅವರಿಬ್ಬರ ನಡುವೆ ಇಲ್ಲ.. ಅವನು ಅವಳಿಗಾಗಿ ಹಾಡ್ತಾನೆ.. ಅವಳು ಅವನು ಮರೆತ ಸಾಲುಗಳನ್ನು ಎತ್ತಿ ಕೊಡ್ತಾಳೆ.. ಅವನು ಮಾತನಾಡುತ್ತಾನೆ.. ಅವಳು ಕಿವಿಯಗ್ತಾಳೆ.. ಅವಳು ಮಾತಾಡ್ತಾಳೆ.. ಇವನು ಕವಿಯಾಗ್ತಾನೆ.. ಅವರಿಬ್ಬರ ನಡುವೆ ದೈಹಿಕವಾಗಿ ಮುಕ್ಕಿಬಿಡುವ ಯಾವ ಧಾವಂತಗಳೂ ಇಲ್ಲ.. ಐಹಿಕವಾಗಿ ಸುಖಿಸಿ ಬಿಡುವ ಯಾವ ಕಾಮನೆಗಳೂ ಇಲ್ಲ.. ಹೃದಯವನ್ನು ನಿರಂತರ ಹಂಚಿಕೊಳ್ಳುವ ಮಾತು, ಮೌನ ಮತ್ತು ಭಾವಗಳಷ್ಟೇ.. ಬಹುಶ: ಪ್ರಪಂಚದ ಏಕೈಕ ಸ್ವಚ್ಛ ಪ್ರೇಮಿಗಳಿವರು.. ನಮ್ಮಂಥಲ್ಲ..

*********

ಮಾತನಾಡುತ್ತಾ ಮಾತನಾಡುತ್ತಾ ತುಂಬಾ ದೂರ ಸಾಗಿ ಬಂದಿದ್ದಾರೆ.. ಬೆಳಗಾಗುವ ಸೂಚನೆಗಳು ಕಾಣ್ತಿವೆ.. ಇಬ್ಬರೂ ಹೊರಡೋ ಹೊತ್ತು.. ಮತ್ತೆ ಸಂಜೆಯವರೆಗೆ ಹೇಗೆ ಬಿಟ್ಟಿರೋದು ಅನ್ನೋ ದುಃಖ ಇಬ್ಬರದು.. ಹೋಗಲೇ ಬೇಕು ವಿಧಿ ಇಲ್ಲ..

*********

ಬಾಗಿಲ ಒಳಗೆ ಹೋಗೊ ಮುಂಚೆ ಕಣ್ಣುಗಳಲ್ಲೇ ಒಮ್ಮೆ ಮುದ್ದಿಸಿಕೊಳ್ತಾರೆ.. ಬಾಗಿಲು ತೆರೆಯುತ್ತದೆ.. ಅವರು ಕಂಡ ಆ ನೋಟ ಅವರಿಗೆ ಅಚ್ಚರಿಯೆನಿಸುತ್ತದೆ.. ಸುಖದ ಇನ್ನೊಂದು ಹೆಸರಿನ ಕ್ಷೇತ್ರ ಸ್ವರ್ಗವದು.. ಆನಂದದ ಪ್ರಪಂಚವದು.. ಇಬ್ಬರೂ ತಬ್ಬಿಬ್ಬಾಗುತ್ತಾರೆ.. ನಮ್ಮನ್ನು ಸ್ವರ್ಗದ ಒಳಗೆ ಹೇಗೆ ಬಿಟ್ಟರು..? ಇಬ್ಬರೂ ಗಲಿಬಿಲಿಗೊಂಡು ಅಲ್ಲಿನ ವಾಚ್‌ಮನ್‌ನ್ನು ಹೋಗಿ ವಿಚಾರಿಸ್ತಾರೆ..

'..ನಾವು ನರಕದ ಎಂಪ್ಲಾಯೀಸ್.. ಇಲ್ಲಿ ಮೊದಲು ನಮಗೆ ಪ್ರವೇಶವಿರಲ್ಲಿಲ್ಲ.. ಇವತ್ತು ಗೊತ್ತಿಲ್ಲದೆ ಸ್ವರ್ಗದ ಬಾಗಿಲಿಗೆ ಬಂದರೆ ಒಳಗೆ ಬಿಟ್ಟು ಬಿಡೋದೇ.. ಸ್ವಲ್ಪ ನೋಡಿಕೊಂಡು ಡ್ಯೂಟಿ ಮಾಡಿ..'ವಾಚ್‌ಮನ್ ತುಂಬಾ ಸ್ಪಷ್ಟವಾಗಿ ಹೇಳಿದ..

'ನರಕದಲ್ಲಿ ಯಾರು ಸ್ವಚ್ಛ ಪ್ರೇಮವನ್ನು ಆಚರಿಸ್ತಾರೋ ಅವರನ್ನು ಸ್ವರ್ಗಕ್ಕೆ ಇಮ್ಮೀಡಿಯಟ್ ಆಗಿ ಟ್ರಾನ್ಸ್‌ಫರ್ ಮಾಡೋ ಹೊಸ ರೂಲ್ಸ್ ಬಂದಿರೋದು ತಮಗೆ ಗೊತ್ತಿಲ್ಲ ಅಂದ್ಕೋತೀನಿ.. ವೆಲ್‌ಕಮ್ ಟು ಸ್ವರ್ಗ.. ಹ್ಯಾವ್ ಎ ನೈಸ್ ಟೈಂ.. ಮತ್ತು ಕಂಗ್ರಾಜುಲೇಷನ್ಸ್.. ಹಾಗೇ ಈ ಕೋಟಾದಲ್ಲಿ ಇದುವರೆಗೆ ಬಂದಿರೋ ಮೊದಲ ಮತ್ತು ಏಕೈಕ ಪ್ರೇಮಿಗಳು ನೀವು.. ನೇರ ಹೋಗಿ ರೈಟ್ ತೊಗೊಂಡ್ರೆ ನಿಮ್ಮ ಕಾಟೇಜ್ ಸಿಗುತ್ತೆ.. ಥ್ಯಾಂಕ್ಯು..'

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more