ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಕುಮಾರ್ ಅವರ ನ್ಯಾನೋ ಕಥೆಗಳ ಸರಣಿ 3

By Staff
|
Google Oneindia Kannada News

gopakumarಕಥೆ1: ನಾಗರೀಕತೆ

"ಅಪಕಲಿಪ್ತೊ" ವಾಹ್ ಎಂತಹ ಚಿತ್ರ.ನೋಡಿದರೆ ಇಂತಹ ಮೂವಿ ನೋಡಬೇಕು. ನಾಗರೀಕತೆಗೆ ಮುಂಚೆ ಜನ ಹೇಗೆ ಜೀವಿಸುತ್ತಿದ್ದರು ಅಂತ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ನನಗೆ ಅದರ ಲೊಕೇಶನ್, ಚಿತ್ರಕಥೆ, ಫೋಟೋಗ್ರಾಫ್ ಎಲ್ಲ ಇಷ್ಟವಾಯ್ತು"

"ಅಯ್ಯೋ, ಮುಂದೆ ನೋಡಿ" ಹೇಳಿ ಮುಗಿಸುವಷ್ಟರಲ್ಲಿ ಕಾರು ಒಬ್ಬ ಭಿಕ್ಷುಕನಿಗೆ ಹೊಡೆದಾಗಿತ್ತು.

"ಈಗೇನು ಮಾಡುವುದು?" ನಡುಗಿದ ಸ್ವರ.

"ಪುಣ್ಯಕ್ಕೆ ರಸ್ತೆಯಲ್ಲಿ ಯಾರೂ ಇಲ್ಲ. ಬೇಗ ರಿವರ್ಸ್ ತೆಗೆದುಕೊಂಡು ಹೊರಡೋಣ".


ಕಥೆ2 : ಕಳೆದುಹೋದ ನಕ್ಷತ್ರ

"ಜೈಲರ್ ಹೇಳಿದ್ರು, ಸರ್ಕಾರದಿಂದ ಹಣ ಬಿಡುಗಡೆಯಾಗಿದೆಯಂತೆ, ಒಂದು ವಾರದಲ್ಲಿ ಜೈಲಿನ ರಿಪೇರಿ ಕೆಲಸ ಶುರುವಾಗುತ್ತದಂತೆ. ಸದ್ಯ ಆಮೇಲಾದರೂ ಮಳೆ ಬಂದಾಗ ನೆಮ್ಮದಿಯಿಂದ ನಿದ್ದೆ ಮಾಡಬಹುದು. ಈಗ ನೋಡು ಸೂರಿನಿಂದ ನೀರು ಸೋರಿ ಕೊಳದಂತಾಗಿದೆ ನಮ್ಮ ರೂಮು"

"ಹೌದು" ಸುಮ್ಮನೆ ತಲೆಯಾಡಿಸಿದ.

"ಆದರೆ ರಾತ್ರಿ ಚಂದ್ರನನ್ನು , ನಕ್ಷತ್ರಗಳನ್ನು ನೋಡುತ್ತಾ ಮಲಗುವ ಪುಣ್ಯ ಮುಂದೆ ಸಿಗುವುದಿಲ್ಲ"

ಹೌದೆನ್ನುವ ಸರದಿ ಅವನದಾಗಿತ್ತು.


ಕಥೆ 3: ನವರತ್ನ

"ಪರ್ವಾಗಿಲ್ಲ ಪೊಲೀಸ್ ಸಾರ್, ತಗೊಳ್ಳಿ. ನನಗೊತ್ತಿದೆ ನಿಮಗೆ ಹಣದ ಅವಶ್ಯಕತೆ ಇದೆ. ನಿಮ್ಮ ಹೆಂಡತಿಗೆ ಅರ್ಜೆಂಟಾಗಿ ಆಪರೇಷನ್ ಮಾಡಬೇಕು. ಅದಕ್ಕಾಗಿ ನಿಮಗೆ ಮೂರು ಸಾವಿರದ ಕೊರತೆ ಇದೆ. ನನಗೆ ಟೀ ಶಾಪ್ ಮಣಿ ಎಲ್ಲಾ ಹೇಳಿದ. ನೀವು ಒಳ್ಳೆಯವರು ಸಾರ್, ಒಂದು ದಿನವೂ ನನ್ನನ್ನ ನೀವು ವೇಶ್ಯೆಯಂತೆ ಕರೆದದ್ದಿಲ್ಲ. ಎಲ್ಲರೂ ನೋಡೊ ಕೆಟ್ಟ ದೃಷ್ಟಿಯಿಂದ ನೋಡಿದ್ದಿಲ್ಲ. ಈ ದುಡ್ಡು ನಾನು ಬೆವರು ಸುರಿಸಿ ದುಡಿದದ್ದು, ತಗೊಳ್ಳಿ ಸಾರ್"

"ತುಂಬಾ ಉಪಕಾರವಾಯಿತು ರತ್ನ, ನೀನು ಹೆಸರಿಗೆ ತಕ್ಕ ಹಾಗೆ ರತ್ನನೇ" ಅವನಿಂದ ಹೆಚ್ಚು ಮಾತನಾಡಲಾಗಲಿಲ್ಲ.

"ಒಂದು ಮಾತು ಹೇಳಲಾ ಸಾರ್?"

"ಹೇಳು ರತ್ನ"

"ನನ್ನ ಅಪ್ಪನೂ ನನ್ನನ್ನ ರತ್ನ ಅಂತಾನೇ ಕರೀತಿದ್ರು"


ಕಥೆ 4 : ನಮ್ಮೂರ ಮಳೆ

ಊರೀಗ ತುಂಬಾ ಬದಲಾಗಿದೆ. ಊರಿಗೆ ಬಸ್ಸು ಬರದಿದ್ದ ಕಾಲದಲ್ಲಿ ಗದ್ದೆ, ತೋಟ, ಗುಡ್ಡಗಳನ್ನು ನೋಡಿಕೊಂಡು ನಡೆದು ಮನೆ ತಲುಪುತ್ತಿದ್ದೆ. ಆದರೆ ಈಗ ಹತ್ತು ನಿಮಿಷಕ್ಕೊಮ್ಮೆ ಊರಿಗೆ ಬಸ್ಸುಗಳಿವೆ. ಮಳೆ ಬಂದಾಗ ಕಾಲುದಾರಿಯಲ್ಲಿ ಹರಿದು ಬರುವ ನೀರಿನಲ್ಲಿ ಕಾಲು ನೆನೆಸಿಕೊಂಡು ನಡೆದಾಡುವ ಸುಖ ಈಗಿಲ್ಲ. ಕಾಲುದಾರಿ ಈಗ ಟಾರ್ ರಸ್ತೆಯಾಗಿದೆ. ಸಂತೋಷದ ವಿಷಯವೆಂದರೆ, ಮಳೆ ಬರುವಾಗ ಅಟ್ಟದ ಮನೆಯ ಚಿಕ್ಕ ಕೋಣೆಯ ಪುಟ್ಟ ಕಿಟಕಿಯ ಹತ್ತಿರ ಕುಳಿತುಕೊಳ್ಳಲು ಇಮ್ದಿಗೂ ನಾವು ಪುಟ್ಟ ಮಕ್ಕಳಂತೆ ಜಗಳವಾಡುತ್ತೇವೆ. ನಮ್ಮೂರ ಮಳೆ ಮಾತ್ರ ಇಂದಿಗೂ ಬದಲಾಗಿಲ್ಲ

ಕಥೆ 5: ಪರದೆಯ ಹಿಂದೆ

"ಟೈಟಲ್ ಕಾರ್ಡ್ ಪೂರ್ತಿ ತೋರಿಸ್ರೀ" ಕೂಗಿ ಹೇಳಿದ.ಆದರೆ ಬೆಳ್ಳಿಪರದೆ ಬರಿದಾಯಿತು. ಸಿನಿಮಾ ನೋಡಿ ಹೋಗುತ್ತಿದ್ದ ಜನರೆಲ್ಲರೂ ಅವನನ್ನೇ ಆಶ್ಚರ್ಯದಿಂದ ನೋಡಿದರು.

"ನಾನು ಸ್ವತಂತ್ರನಾಗಿ ಸಂಕಲನ ಮಾಡಿದ ಮೊದಲ ಚಿತ್ರ, ಆದರೆ ಈ ಚಿತ್ರದಲ್ಲಿ ಟೈಟಲ್ ಕಾರ್ಡ್ ತೋರಿಸುತ್ತಿರುವುದು ಕೊನೆಯಲ್ಲಿ, ಏನು ಮಾಡುವುದು? ನನ್ನ ಹೆಸರನ್ನು ಥಿಯೇಟರಿನಲ್ಲಿ ನೋಡೋ ಭಾಗ್ಯ ನನಗಿಲ್ಲ" ಆತನ ಮನಸ್ಸಿನ ವೇದನೆ ಬೇರೆಯವರಿಗೆ ಕೀಟಲೆ ನಗುವಿಗೆ ಕಾರಣವಾಯ್ತು

ಗೋಪಕುಮಾರ್ ಅವರ ನ್ಯಾನೋ ಕಥೆಗಳ ಸರಣಿ 2

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X