ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮ ಎಲ್ಲಿದ್ದಾಳೆ ?

By Staff
|
Google Oneindia Kannada News

Dinesh M. Haladakattaಅಮ್ಮ ಅಂದ್ರೆ ಪ್ರೀತಿ, ದ್ವೇಷ, ಸಿಟ್ಟು, ನಿದ್ದೆ, ಈ ಜೀವನ ಎಲ್ಲಾ. ಅಮ್ಮ ಇಲ್ಲದಿದ್ದರೆ ಇವೆಲ್ಲಾ ಇರುತ್ತಲೇ ಇರಲಿಲ್ಲ. ಆದರೂ ಅಮ್ಮ ಹೀಗೇಕೆ? ಅಮ್ಮ ಅಮ್ಮನಥರ ಇದ್ದಿದ್ರೆ ಎಷ್ಟೋ ಚೆನ್ನಾಗಿತ್ತು. ಅಮ್ಮ ಇರೋತನಕ ಈ ಪ್ರಶ್ನೆಗಳೇ ಎದ್ದಿರಲಿಲ್ಲ. ಪ್ರಶ್ನೆಗಳೆದ್ದಾಗ ಅಮ್ಮನೇ ಇರಲಿಲ್ಲ.ಈಗ ಎದ್ದಿರುವ ಪ್ರಶ್ನೆಗಳಿಗೂ ಉತ್ತರಗಳಿಲ್ಲ. ದಿನೇಶ್ ಎಂ. ಹಾಳದಕಟ್ಟಾ ಅವರ ಮನೋಜ್ಞ ಕಥೆ.

***

ನನಗೆ ಅಮ್ಮನೆಂದರೆ ಹೇಸಿಗೆ.

ಥೂ... ಹಾಗೆಲ್ಲ ಹೇಳಬಾರದು. ನನಗೆ ಜನ್ಮ ನೀಡಿದ ಅಮ್ಮನ ಕುರಿತು ಹಾಗೆಲ್ಲ ಹೇಳಬಾರದು ಎಂದೆನಿಸುತ್ತದೆ ನನಗೆ. ಪ್ರಪಂಚವನ್ನು ದಿಟ್ಟಿಸಿ ನೋಡುವುದ ನಾನು ಕಲಿಯುವುದರೊಳಗೆ ನನ್ನ ಬೀದಿಪಾಲು ಮಾಡಿ ಬದುಕಿಗೆ ಹೆದರಿ ಅಥವಾ ನನ್ನ ಬದುಕು ಕಟ್ಟಿಕೊಡಲು ಸಾಧ್ಯವಾಗದೇ ಕೈಚೆಲ್ಲಿ ಎಲ್ಲೋ ಹೋದ ನನ್ನಮ್ಮನ ನೆನೆದರೆ ನನಗೆ ಸಿಟ್ಟು ಉಕ್ಕಿ ಬರುತ್ತದೆ. ಆದರೂ ಅಮ್ಮನನ್ನು ಇಷ್ಟೆಲ್ಲಾ ದ್ವೇಷಿಸುವ ನಾನು ಪದೇಪದೇ ಅವಳನ್ನು ಬಯಸುವುದೇಕೆ? ನನ್ನಮ್ಮ ಮತ್ತೆ ಸಿಗಲಿ ಎಂದೆನಿಸುವುದೇಕೋ? ನನ್ನಮ್ಮ ಇದ್ದಾಳೋ ಇಲ್ಲವೋ ?

***

ತೆಂಗಿನ ಮಡ್ಲು ಮೇಲೆ ಹೊದ್ದಿಸಿ ಅದಕ್ಕೊಂದು ತಗಡಿನ ಬಾಗಿಲಿರುವ ಸಣ್ಣ ಗುಡಿಸಲು ನನ್ನ ಮನೆ. ಮನೆ ಎದುರು ವಿಶಾಲ ಸಮುದ್ರ. ಸಮುದ್ರ ನೋಡಿದಾಗಲೆಲ್ಲ ನನಗೆ ಎಷ್ಟೋ ಸೂಕ್ಷ್ಮಗಳನ್ನು ಬಚ್ಚಿಟ್ಟುಕೊಂಡು ಯಾವೊಂದು ಪ್ರಶ್ನೆಗೂ ಉತ್ತರ ಕೊಡದೇ ಗಂಭೀರವಾಗಿ ನನ್ನ ಎದೆಗವಚಿ ಮಲಗುತ್ತಿದ್ದ ನನ್ನಮ್ಮ ನೆನಪಾಗುತ್ತಾಳೆ.

ವಿಶಾಲ ಸಮುದ್ರದೆದುರಿನ ಪುಟ್ಟ ಗುಡಿಸಲು ಯಾವೊತ್ತು ಸಮುದ್ರದ ಆಗಾಧತೆಯ ಕುರಿತು ಚಿಂತಿಸಲಿಲ್ಲ. ಹೆಚ್ಚು ಸಮಯ ನನಗಿಂತ ನನ್ನಮ್ಮ ಮನೆಯಲ್ಲಿರುತ್ತಿದ್ದಳು, ನಾನೋ ಸಮುದ್ರದೆದುರು ಮರಳುಗೂಡು ಕಟ್ಟುವಾಟದಲ್ಲಿ ಯಾವತ್ತೂ ಮುಳುಗಿರುತ್ತಿದ್ದೆ. ನನ್ನಪ್ಪನ ಪ್ರೀತಿಯ ಆಡ್ಕೋ ಹೋಗ್ ಅನ್ನೋ ಮಾತಿಗೆ ನಾನು ನಿಷ್ಟನಾಗಿರುತ್ತಿದ್ದೆ. ಅಪ್ಪ ಆಡ್ಕೋ ಹೋಗ್ ಅಂದ ನಂತರ ಮನೆಗೆ ಹೋಗೋದಕ್ಕೆ ಏನೋ ಒಂದು ರೀತಿಯ ಭಯವಾಗುತ್ತಿತ್ತು. ಅದಕ್ಕೆ ಮರಳುಗೂಡು ಕಟ್ಟುವಾಟ. ತೆರೆ ಹಿಂದ್ಹೋದಾಗ ಹಾಂ! ಈಗ ಬಯವಿಲ್ಲ ಎಂಬಂತೆ ಮುಖ ಮಾಡಿ ಕ್ಷಣಾರ್ಧದಲ್ಲಿ ಗೂಡುಕಟ್ಟಿ ತೆರೆ ಬಂದು ಗೂಡು ಎಳೆದ್ಹೋದಾಗ ಮತ್ತೆ ಅಯ್ಯೋ ಎಂಬಂತೆ ನಟಿಸುವುದು ನನ್ನ ದಿನನಿತ್ಯದ ಆಟ.

***
ನನಗೆ ನೆನಪಿದ್ದ ಹಾಗೆ ಇದು ದಿನನಿತ್ಯದ ಪರಿಪಾಠ !

ಬೆಳಿಗ್ಗೆ ಅದೆಲ್ಲಿಂದಲೋ ಅಪ್ಪ ಪ್ರತ್ಯಕ್ಷನಾಗಿರುತ್ತಿದ್ದ. ಇನ್ನೂ ನಿದ್ದೆಯಲ್ಲಿ ಉರುಳಾಡುತ್ತಿದ್ದ ನನ್ನ ಮುದ್ದಿನಿಂದ ಎಬ್ಬಿಸುತ್ತಿದ್ದ. ಮುಖ ತೊಳೆದ ನಂತರ ನನ್ನ ಊರ ಮುಂದಿನ ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದ. ಜುಟ್ಟು ಬಿಟ್ಟ ಭಟ್ಟನೊಬ್ಬ ಪ್ರಸಾದ ನೀಡಿ ಹಣೆಗೆ ದೊಡ್ಡ ಕುಂಕುಮವನ್ನು ತನ್ನ ಕೈಯಾರೆ ಹಚ್ಚುತ್ತಿದ್ದ. ದೇವಸ್ಥಾನದ ಎದುರು ನಿಂತಿರುವ ಆಕಳಿನ ಹತ್ತಿರ ಕರೆದೊಯ್ದು ಇದು ನಮಗೆಲ್ಲಾ ದೇವ್ರು ಕಣೋ, ನಮಸ್ಕಾರ ಮಾಡು ಎನ್ನುತ್ತಿದ್ದಂತೆ ನಾನು ಕೈಯಿಂದ ಮೃದುವಾಗಿ ಮುಟ್ಟಿ ಕೈ ಮುಗಿಯುತ್ತಿದ್ದೆ. ಮನೆಗೆ ಬಂದವನು ಕುಚ್ಚಲಕ್ಕಿಯ ಗಂಜಿ ಕುಡಿಯುತ್ತಲೇ ಅಪ್ಪನ ಆಡ್ಕೋ ಹೋಗ್ ಎಂಬ ಪ್ರೀತಿಯ ಮಾತಿಗೆ ಸಮುದ್ರ ದಂಡೆಗೆ ಓಡುತ್ತಿದ್ದೆ.

ಮಧ್ಯಾಹ್ನ ಮನೆಗೆ ಬಂದ್ರೆ ಅಪ್ಪ ಇಲ್ಲ. ಅಮ್ಮ ಸ್ನಾನಕ್ಕೆ ಹೋಗಿರುತ್ತಿದ್ದಳು. ಸ್ನಾನದಿಂದ ಬಂದವಳೇ ನನ್ನ ಮೊಗ ತೊಳೆದು ದೊಡ್ಡಕ್ಕೆ ದೇವಸ್ಥಾನದ ಪೂಜಾರಿ ಇಟ್ಟ ಕುಂಕುಮವನ್ನು ಒರೆಸಿ ತೆಗೆಯುತ್ತಿದ್ದಳು. ಸ್ನಾನ ಮಾಡಿದ ನಂತರ ರಾತ್ರಿ ಆಗುವವರಗೆ ಅಮ್ಮ ಕುಂಕುಮ ಇಟ್ಟು ಕೊಳ್ಳುತ್ತಿರಲಿಲ್ಲ.

ಮಧ್ಯಾಹ್ನ ಊಟದ ನಂತರ ನಾನು ಗಾಢ ನಿದ್ರೆಗೆ ಜಾರುತ್ತಿದ್ದೆ. ಮನೆ ಎದುರಿನ ಕಟ್ಟೆ ನನ್ನ ನಿದ್ರೆಗೆ ಸೂಕ್ತ ಜಾಗವಾಗಿತ್ತು. ಸಂಜೆ ಎಚ್ಚರಾಗುತ್ತಲೇ ನಾನು ಎದ್ದು ನೋಡಿದ್ರೆ ಮನೆ ಬಾಗಿಲು ಮುಚ್ಚಿರುತ್ತಿತ್ತು. ಬಾಗಿಲು ಬಡಿದರೆ ಎದುರಿಗೆ ಬರುವ ಅಪ್ಪ ನನ್ನ ತಲೆ ನೇವರಿಸಿ ಮುದ್ದು ಮಾಡುತ್ತಿದ್ದ. ಲಘುಬಗೆಯಲ್ಲಿ ಮುಖ ತೊಳೆದ್ರೆ ನನ್ನ ಕರೆದುಕೊಂಡು ಅಪ್ಪ ಹೊರಡುತ್ತಿದ್ದ. ಹೋಗುವಾಗ ದಾರಿಯಲ್ಲಿ ಬಿಳಿ ಟೊಪ್ಪಿಯೊಂದನ್ನ ತೆಗೆದವನು ನನ್ನ ತಲೆಗೇರಿಸುತ್ತಿದ್ದ. ನನಗೆ ಆ ಟೊಪ್ಪಿಯನ್ನು ಹಾಕಿಕೊಳ್ಳುವುದೆಂದರೆ ಭಾರೀ ಖುಷಿ. ಊರ ಮುಂದಿನ ಮಸ್ಜಿದ್‌ಗೆ ನನ್ನ ಕರೆದೊಯ್ಯುತ್ತಿದ್ದ. ಗುಂಪುಗೂಡಿ ಸಾಲಾಗಿ ನಿಂತವರ ಮಧ್ಯೆ ನಾನು ನಿಲ್ಲುತ್ತಿದ್ದೆ. ಮಂಡಿಯೂರಿ ಕಣ್ಮುಚ್ಚಿ ಹಣೆ ಹಚ್ಚಿ ಎದ್ದರೆ ಬರುವಾಗ ಅಪ್ಪ ಆಲದ ಮರದ ಕೆಳಗಿನ ಆಕಳು ನೋಡಿದವನೇ ನಾಳೆ ನಿನಗೆ ಬಡಾ ಬಿರಿಯಾನಿ ತರ್ತೆನೆ, ಆಯ್ತಾ ಈಗ ಆಡ್ಕೋ ಹೋಗ್. ಅಪ್ಪನ ಪ್ರೀತಿಯ ಮಾತಿಗೆ ನಿಲ್ಲದೇ ನಾನು ಸಮುದ್ರ ದಂಡೆಗೆ ಓಡುತ್ತಿದ್ದೆ. ಮತ್ತೆ ಮರಳು ಗೂಡು ಕಟ್ಟುವಾಟ.

***

ನನಗೆ ಇಬ್ಬರೂ ಅಪ್ಪಂದಿರೂ ಪ್ರಿಯರೇ ! ಬೆಳಿಗ್ಗೆ ದೇವಸ್ಥಾನಕ್ಕೆ ಕರೆದೊಯ್ಯುವ ಅಪ್ಪ. ಸಂಜೆ ಮಸ್ಜಿದ್‌ಗೆ ಕರೆದೊಯ್ಯುವ ಅಪ್ಪ. ಆದ್ರೆ ನನಗೇಕೆ ಒಬ್ಳೆ ಅಮ್ಮ ? ಇಬ್ಬರು ಅಮ್ಮಂದಿರಿದ್ದರೆ ಚೆನ್ನ ಎಂದೆನಿಸುತ್ತಿತ್ತು. ಒಬ್ಬ ಅಪ್ಪ ಮನೇಲಿದ್ದಾಗ ಹೂವು ಮುಡಿದು ಕುಂಕುಮ ಇಟ್ಟುಕೊಳ್ಳುತ್ತಿದ್ದ ಅಮ್ಮ, ಇನ್ನೊಬ್ಬ ಅಪ್ಪನಿದ್ದಾಗ ಕುಂಕುಮ ಇಡುತ್ತಿರಲಿಲ್ಲ. ನನ್ನ ಹಣೆಯ ಕುಂಕುಮವನ್ನೂ ಬಿಡದೇ ಒರೆಸಿ ತೆಗೆಯುತ್ತಿದ್ದಳು. ಅಮ್ಮ ಎರಡೂ ರೀತಿಯಲ್ಲೂ ನನಗೆ ಸುಂದರವಾಗೇ ಕಾಣುತ್ತಿದ್ದಳು.

ಅಪ್ಪ ರಾತ್ರಿ ಬರುತ್ತಿದ್ದ ಎಂದು ಅಮ್ಮ ಎಂದೋ ಹೇಳಿದ ನೆನಪು. ಆತ ಬಂದಾಗ ನಾನು ಎಂದೂ ಎಚ್ಚರ ಇರಲಿಲ್ಲ. ಬೆಳಿಗ್ಗೆ ಎದ್ದಾಗ ದೇವಸ್ಥಾನಕ್ಕೆ ಹೋಗೋದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ.

ಅಪ್ಪ ಮಧ್ಯಾಹ್ನ ಬರುತ್ತಿದ್ದ ಎಂದು ಅಮ್ಮ ಎಂದೋ ಹೇಳಿದ ನೆನಪು. ಅವನು ಬರುವುದರೊಳಗಾಗಿ ನಾನು ಮಧ್ಯಾಹ್ನ ಊಟ ಮಾಡಿ ನಿದ್ದೆಗೆ ಹೋಗಿರುತ್ತಿದ್ದೆ, ಅಮ್ಮ ತಪ್ಪದೇ ಎದೆಗವಚಿಕೊಂಡು ನಿದ್ದೆ ಮಾಡಿಸುತ್ತಿದ್ದಳು. ಎದ್ದಾಗ ಮನೆ ಎದುರಿನ ಕಟ್ಟೆಯ ಮೇಲಿರುತ್ತಿದ್ದೆ. ಸಾಯಂಕಾಲ ಅಪ್ಪನೊಂದಿಗೆ ಮಸ್ಜಿದ್‌ಗೆ ಹೋಗೋದನ್ನ ಮಾತ್ರ ತಪ್ಪಿಸುತ್ತಿರಲಿಲ್ಲ.

ಆದರೆ ಒಂದು ವಿಷಯ ನನಗೆ ಅರ್ಥ ಆಗ್ತಾ ಇರಲಿಲ್ಲ. ಇಬ್ಬರು ಅಪ್ಪಂದಿರು ಎಂದೂ ಎದುರು ಬದಿರಾಗಿರಲಿಲ್ಲ. ಅಮ್ಮ ಯಾವತ್ತೂ ಒಬ್ಬ ಅಪ್ಪನ ಕುರಿತು ಇನ್ನೊಬ್ಬ ಅಪ್ಪನೊಂದಿಗೆ ಮಾತನಾಡುತ್ತಿರಲಿಲ್ಲ. ವಿಚಿತ್ರ ಎಂದರೆ ನಾನು ಯಾವತ್ತೂ ಇವರಿಬ್ಬರಲ್ಲಿ ಒಬ್ಬರೊಬ್ಬರ ಬಗ್ಗೆ ಯಾವತ್ತೂ ಪ್ರಶ್ನೆ ಎತ್ತಲಿಲ್ಲ. ಒಂದು ರೀತಿಯ ನಿಗೂಢ ಭಯ ನನ್ನಲ್ಲಿ ತುಂಬಿಕೊಂಡಿತ್ತು.

***

ಅವತ್ತೊಂದು ದಿನ ಬೆಳಿಗ್ಗೆ ಅಮ್ಮ ಏನೋ ಗಂಭೀರವಾಗಿ ಮಾತನಾಡುತ್ತಿದ್ದಳು. ಯಾಕೆ ಹೊಡೆದಾಡ್ತೀರಾ ? ಧರ್ಮ ನಿಮಗೆ ಅನ್ನ ಕೊಡೊಲ್ಲಾ. ಧರ್ಮ ಮನುಷ್ಯತ್ವ ಇಲ್ಲದ್ದು. ದೇವರು ಬರೀ ಕಲ್ಪನೆ. ನಿಮ್ಮ ಮನಸ್ಸಿನ ಮೇಲೆ ನಂಬಿಕೆ ಇಡ್ರಪ್ಪಾ. ಮನುಷ್ಯರ ಮೇಲೆ ನಂಬಿಕೇನೆ ಕಳೆಯುವಂತದ್ದು ಧರ್ಮ. ಅದನ್ನ ಕಟ್ಟಕೊಂಡು ಯಾಕೆ ಹೆಣಗಾಡ್ತೀರಿ ? ಬಿಟ್ಟ ಬಿಡ್ರಿ, ಸುಮ್ಮನೆ ಮನುಷ್ಯರಂತೆ (?) ಇದ್ದಬಿಡ್ರಿ. ಅಮ್ಮ ಹೇಳಿದ್ದು ನನಗೆ ಯಾಕೆ ನೆನಪಿದೆ ? ಅಮ್ಮನ ಮಾತುಗಳಲ್ಲಿ ಏನೋ ನಿಗೂಡತೆ ನೋವು ನನಗೆ ಕಾಣಿಸುತ್ತಿತ್ತು. ಅಪ್ಪ ಕೇಸರಿ ರುಮಾಲು ಹೆಗಲಿಗೆ ಹಾಕಿಕೊಂಡು ಹಣೆಗೆ ಉದ್ದನೆ ತಿಲಕವಿಟ್ಟಿದ್ದ. ನಾನು ಏಳುವ ಮೊದಲೇ ಅಪ್ಪ ದೇವಸ್ಥಾನಕ್ಕೆ ಹೋಗಿ ಬಂದನೇ? ಅಪ್ಪ ಹೇಳುತ್ತಿದ್ದ, ಅವರನ್ನು ನಿರ್ನಾಮ ಮಾಡಬೇಕು. ನಮ್ಮ ದೇಶದಿಂದಲೇ ಅವರನ್ನು ಓಡಿಸಬೇಕು ಎಂದು ಏನೇನೋ ಹೇಳುತ್ತಿದ್ದ. ಅಮ್ಮ ಅಪ್ಪನ ಮಾತು ಅರಗಿಸಿಕೊಳ್ಳುವುದು ಕಷ್ಟ ಎಂಬಂತೆ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತಿದ್ದಳು.

ನಾನು ಹಾಸಿಗೆಯಲ್ಲಿ ಮಿಸುಕಾಡಿದ್ದ ಕಂಡ ಅಪ್ಪ ನನ್ನ ಎಬ್ಬಿಸಿದವನೇ ಮುಖ ತೊಳೆಸಿ ನಡೆ, ಇವತ್ತು ನೀನು ನಂಜೊತೆ ಇರಲೇಬೇಕು ಎಂದು ಕರೆದೊಯ್ದ. ಅಮ್ಮ ಯಾಕೋ ಮುಖ ಸಣ್ಣಗೆ ಮಾಡಿಕೊಂಡು ನನ್ನ ತಡೆದಳು. ಅಪ್ಪ ಅವಳಿಗೆ ಸನ್ನೆ ಮಾಡಿ ನನ್ನ ಕರೆದೊಯ್ದ. ಪ್ರತಿದಿನದಂತೆ ಆ ದಿನ ಅಪ್ಪ ದೇವಸ್ಥಾನಕ್ಕೆ ನನ್ನ ಕರೆದೊಯ್ಯಲಿಲ್ಲ. ಊರ ಮುಂದಿನ ಮುಖ್ಯ ರಸ್ತೆಗೆ ನನ್ನ ಕರೆದುಕೊಂಡು ಹೊರಟ. ಅದೆಲ್ಲಿಂದಲೋ ಆವತ್ತು ಸಾವಿರಾರು ಜನ ರಸ್ತೆಯ ಎರಡೂ ಬದಿಗಳಲ್ಲಿ ಜಮಾಯಿಸಿದ್ದರು. ಎಲ್ಲೆಲ್ಲೂ ಕೇಸರಿ. ಎಲ್ಲೆಲ್ಲೂ ಬಾವುಟಗಳು. ಎಲ್ಲರೂ ಮೆರವಣಿಗೆ ಹೊರಟಿದ್ದರು. ನನ್ನ ಕೈಯಲ್ಲೂ ಅಪ್ಪ ಒಂದು ಬಾವುಟ ನೀಡಿ ಹಣೆಗೆ ಉದ್ದ ತಿಲಕವಿಟ್ಟ. ನಾನು ಖುಷಿಯಿಂದ ಬಾವುಟ ಹಿಡಿದು ಹೊರಟೆ. ಊರ ಮುಂದಿನ ದೊಡ್ಡ ಮೈದಾನದಲ್ಲಿ ಯಾರೋ ಉದ್ದುದ್ದ ಮಾತನಾಡಿದರು. ನನಗೆ ತುಂಬಾ ಸುಸ್ತಾಗಿತ್ತು.

ಮಧ್ಯಾಹ್ನದ ಊಟದ ಹೊತ್ತಿಗೆ ಮನೆ ಎದುರು ನನ್ನ ಬಿಟ್ಟು ಅಮ್ಮನ ಕರೆದು ಹೇಳಿ ಅಪ್ಪ ಹೊರಟೋದ. ನಾನು ಮನೆಗೆ ಬಂದದ್ದೇ ನನ್ನ ಹಣಗೆ ಬಳಿದ ಕುಂಕುಮವನ್ನೆಲ್ಲಾ ಅಳಿಸಿದ ಅಮ್ಮ, ಕೈಲಿದ್ದ ಬಾವುಟ ಕಸಿದು ಒಲೆಗೆ ಎಸೆದಳು. ನಾನು ಊಟ ಮಾಡಿದವನೇ ಮಲಗಿದೆ. ಸ೦ಜೆ ಎಚ್ಚರಾದಾಗ ಸಣ್ಣಗೆ ಜ್ವರವಿತ್ತು. ನಾನು ನರಳುತ್ತಿದ್ದೆ. ಅಪ್ಪ ಇದ್ದಾನೇನೋ ॒ನಾನು ಹುಡುಕಾಡಿದೆ. ಅಪ್ಪ ಕಾಣಲಿಲ್ಲ. ಒಬ್ಬನೇ ಮಸ್ಭಿದ್‌ಗೆ ಹೋಗಿರಬೇಕು ಎಂದುಕೊಂಡೆ.

ಅಮ್ಮ ಯಾಕೋ ತುಂಬಾ ಖಿನ್ನಳಾಗಿದ್ದಳು. ಕ್ಷಣಕ್ಷಣ ಬಾಗಿಲೆಡೆಗೆ ಇಣುಕಿ ನೋಡಿಕೊ೦ಡು ಬರುತ್ತಿದ್ದಳು. ಸುಮಾರು ಹೊತ್ತಿನವರೆಗೆ ನನ್ನೆಡೆಗೆ ಮತ್ತು ಬಾಗಿಲ ಕಡೆಗೆ ನೋಡಿದ ಅಮ್ಮ ಆವರೆಗೆ ಕುಂಕುಮ ಇಟ್ಟುಕೊಳ್ಳದ ಹಣೆಗೆ ಕುಂಕುಮ ಇಟ್ಟುಕೊಂಡು ತಲೆಗೆ ಸುವಾಸನೆಯ ಮಲ್ಲಿಗೆ ಮುಡಿದು ನನ್ನ ಪಕ್ಕದಲ್ಲಿ ಬಂದು ಕುಳಿತಳು.

ನನಗೆ ಜ್ವರ ವಿಪರೀತವಿತ್ತು. ಬಾಗಿಲು ಬಡಿದ ಸದ್ದಾಯಿತು. ಪ್ರತೀ ಸಲ ಬಾಗಿಲು ತೆರೆವಾಗೊಮ್ಮೆ ಯಾರು ? ಎಂದು ಪ್ರಶ್ನಿಸದೆ ಬಾಗಿಲು ತೆರೆಯದ ಅಮ್ಮ ನನ್ನ ನರಳಾಟದಲ್ಲಿ ಎಲ್ಲಾ ಮರೆತು ದಢಕ್ಕನೆದ್ದು ಬಾಗಿಲು ತೆರೆದಳು. ನಾನು ಅರೆ ತೆರೆದ ಕಣ್ಣಲ್ಲಿ ನೋಡುತ್ತಿದ್ದೆ. ಅಪ್ಪ ಬಂದಿರಬಹುದು. ಹೌದು! ಅಪ್ಪ ಬಂದಿದ್ದ. ಆದ್ರೆ ಪ್ರತಿದಿನ ರಾತ್ರಿ ಬರುವ ಅಪ್ಪ ಬರದೇ ಮಸ್ಜ್ಭಿದ್‌ಗೆ ಕರೆದೊಯ್ಯುವ ಅಪ್ಪ ಬಂದಿದ್ದ. ಅಪ್ಪ ನನ್ನತ್ತ ಬಂದು ತಲೆ ನೇವರಿಸಿ ಮುದ್ದು ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಜ್ವರದ ತಾಪದಿಂದ ನಿದ್ದೆಗೆ ಜಾರಿದ್ದೆ.

ರಾತ್ರಿ ಉಕ್ಕುವ ಸಮುದ್ರದ ಆರ್ಭಟಕ್ಕಿಂತ ಜೋರು ಮಾತಿಗೆ ಎಚ್ಚರವಾಯ್ತು. ಹಲ್ಕಾ ಸೂಳೆ! ನನಗೆ ಮೋಸ ಮಾಡಿದೆ. ನಾನೊಬ್ಬನೇ ಅಂದ್ಕೊಂಡಿದ್ದೆ. ಮತ್ತೆಷ್ಟು ಜನ ಇದ್ದಾರೋ? ನಮ್ಮ ಧರ್ಮದವಳಂತೆ ಸೋಗು ಬೇರೆ ಹಾಕಿದ್ದಿ. ಇವತ್ತು ನಿನ್ನ ಬಣ್ಣ ಬಯಲಾಯ್ತು.

ನಾನು ಅರೆ ತೆರೆದ ಕಣ್ಣುಗಳನ್ನು ತೆರೆಯಲು ಪ್ರಯತ್ನ ಪಟ್ಟೆ. ಅಮ್ಮನ ಜಡೆ ಹಿಡಿದುಕೊಂಡಿದ್ದ ಅಪ್ಪ(?) ಹಣೆಯ ಕುಂಕುಮ ಒರೆಸುತ್ತಿದ್ದ. ಹೂವು ಹರಿದ ರಭಸಕ್ಕೆ ಅದು ನನ್ನ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಕೂಗಬೇಕೆಂದುಕೊಂಡೆ. ಸಮುದ್ರದ ಆರ್ಭಟ ಜೋರಾಯ್ತು. ನಾನು ಅಪ್ರಯತ್ನವಾಗಿ ಕಣ್ಣು ಮುಚ್ಚಿದೆ. ಎಚ್ಚರಾದಾಗ ನಾನು ಗೌಜುಗದ್ದಲ ರಾಶಿರಾಶಿ ಜನರ ಓಡಾಟವಿರುವ ಯಾವುದೋ ಊರಲ್ಲಿದ್ದೆ. ನಾನೆಲ್ಲಿದ್ದೇನೆ? ಅಮ್ಮ ಎಲ್ಲಿ? ಅಪ್ಪ? ಅಳು ಒತ್ತರಿಸಿಕೊಂಡು ಬಂತು. ಜ್ವರದಿಂದ ನಡುಕ. ಅಪರಿಚಿತ ಊರಲ್ಲಿ ನಾನು ಜ್ವರದಿಂದ ನಡುಗುತ್ತ ಅಲೆದಾಡಿದೆ. ಹಸಿವಾದಾಗ ಅಪ್ರಯತ್ನವಾಗಿ ಕೈ ಮುಂದಕ್ಕೆ ಚಾಚಿತ್ತು.

ಆವತ್ತು ಬೀದಿಗೆ ಬಿದ್ದವನು ಇವತ್ತಿನವರೆಗೂ ನಾನು ಪ್ರಪಂಚದ ಮನುಷ್ಯ. ನಾನು ಹೋದಲ್ಲೇ ಮನೆ. ಮಲಗಿದಲ್ಲೇ ನಿದ್ದೆ. ನಾನು ದೇವರನ್ನು ನಂಬುವುದಿಲ್ಲ. ಸಹಾಯ ಕೇಳಿದವರಿಗೆ ಇಲ್ಲಾ ಎನ್ನುವುದಿಲ್ಲ. ಮಗುವಿನ ಮುಗ್ದತನ ನನ್ನಲ್ಲಿ ಇನ್ನೂ ಉಳಿದುಕೊಂಡಿದೆ. ನಾನು ಯಾವ ಧರ್ಮ ಹಾಗೂ ಸಂಬಂಧದಿಂದ ಕಲ್ಷ್ಮಶನಾಗಲಿಲ್ಲ. ನನ್ನೆದೆ ಮಗುತನದ ಮುಗ್ದತೆ ತುಂಬಿರುವ ಗೂಡು. ಮುಸ್ಲಿಂರೆಂದರೂ ಸೈ, ಹಿಂದೂಗಳೆಂದರೂ ಸೈ, ನನ್ನೆದೆ ಮನುಷ್ಯನಾಗಿ ತೆರೆದುಕೊಳ್ಳುತ್ತೆ. ನಾನು ಯಾರೊಂದಿಗೆ ಮಾತನಾಡುವಾಗಲೂ ಭಯ ಬೀಳುವುದಿಲ್ಲ. ಧರ್ಮವೆಂದರೆ ನನಗೆ ರೇಜಿಗೆ.

ಹಲ್ಕಾ ಸೂಳೆ! ಆ ಶಬ್ದ ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿದೆ. ನನಗದರ ಅರ್ಥ ಅಂದು ಆಗಿರಲಿಲ್ಲ. ಅಮ್ಮ(?) ಕೆಲವೊಮ್ಮೆ ಕುಂಕುಮವಿಟ್ಟು, ಕೆಲವೊಮ್ಮೆ ಕುಂಕುಮ ಅಳಿಸಿ ಇರುತ್ತಿದ್ದ ರೀತಿ ಬರೀ ಸಿಂಗರಿಸಿಕೊಳ್ಳುವ ವಿಧಾನ ಅಂದ್ಕೊಂಡಿದ್ದೆ. ಅಪ್ಪ(?)ಆಡ್ಕೋ ಹೋಗ್ ಅನ್ನುತ್ತಿದ್ದುದು ಅವನಿಗೆ ನನ್ನ ಮೇಲಿನ ಪ್ರೀತಿ ಅಂದುಕೊಂಡಿದ್ದೆ. ಅಮ್ಮನಿಲ್ಲದೆ ಬೆಳೆದ ಬುದ್ಧಿಗೆ ಅವೆಲ್ಲದರ ಅರ್ಥ ತಿಳಿಯುತ್ತ ಬಂದಂತೆ ಕೆಲವೊಮ್ಮೆ ನನಗೆ ಅಮ್ಮನೆಂದರೆ ಹೇಸಿಗೆ. ಸಂಬಂಧಗಳೆಂದರೆ ಬರೀ ಮುಚ್ಚಿದ ಬಾಗಿಲೊಳಗಿನ ಆಟ. ವಯಸ್ಸು ಮುಗಿದ ನಂತರ ಅದು ಬರೀ ಹೊರಲಾರದೇ ಹೊತ್ತುಕೊಳ್ಳುವ ಭಾರ. ನನ್ನಮ್ಮ ನನ್ನ ತೊರೆದು ಹೋಗಲು ಕಾರಣವಾದ ಧರ್ಮವೆಂದರೆ ನನಗೆ ರೇಜಿಗೆ.

ನನಗೆ ಅಮ್ಮನೆಂದರೆ ಹೇಸಿಗೆ ! ನನ್ನ ಅಮ್ಮನ ಬಗ್ಗೆ ಪ್ರೀತಿ! ಅಮ್ಮ ಬರೀ ಕಾಮಕ್ಕಾಗಿ ಹಾಗೇ ಮಾಡಿರಲಿಕ್ಕಿಲ್ಲ ಅನ್ನಿಸುತ್ತೇ. ಹಾಗಾದರೆ ನನ್ನಮ್ಮ ನನ್ನ ಬಿಟ್ಟು ಹೋಗಿದ್ದೇಕೆ? ಹೋದದ್ದಾದರೂ ಎಲ್ಲಿಗೆ ? ಬದುಕು ಪ್ರಶ್ನೆಗಳನ್ನು ಹೊತ್ತುಕೊಂಡು ಉತ್ತರವನ್ನೂ ಅದನ್ನು ನೀಡುವ ಅಮ್ಮನನ್ನೂ ಹುಡುಕಿಕೊಂಡು ಅಲೆಯಿತು. ಪ್ರಶ್ನೆ ಕೇಳುವ ಮನಸ್ಸು ತರ್ಕಿಸುವುದನ್ನೂ ಕಲಿತುಕೊಂಡು ಉತ್ತರ ತಂತಾನೆ ಕಂಡುಕೊಂಡಿತು. ಅದೆಲ್ಲಾ ಸತ್ಯಾನಾ? ಉತ್ತರ ಕೊಡೋಕೆ ಅಮ್ಮ ಎಲ್ಲಿದ್ದಾಳೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X