ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟ್ಟದಗೊಂಬೆಯೂ ಪರದೇಶವೂ

By Staff
|
Google Oneindia Kannada News

Dasara Dollಪರದೇಶಕ್ಕೆ ಹೊರಟುನಿಂತ ಮಗ ಮತ್ತು ಸೊಸೆಗೆ ಅತ್ತೆ ತನ್ನ ಕೈಯ್ಯಾರ ತಯ್ಯಾರು ಮಾಡಿದ ಪಟ್ಟದಗೊಂಬೆಯ ಕಥೆಯಿದು. ಈ ಕಥೆ ಬರೆದ ಲೇಖಕಿ ಅಲ್ಲಿಗೆ ಸುಮ್ಮನಾಗಲಿಲ್ಲ; ಪಟ್ಟದಗೊಂಬೆಗೆ ತಾವೇ ಶ್ರದ್ಧೆಯಿಂದ ಅಲಂಕಾರ ಮಾಡಿ ಅದರ ಫೋಟೋ ಕ್ಲಿಕ್ಕಿಸಿ ನೀಟಾಗಿ ಪಾರ್ಸೆಲ್ ಮಾಡಿ ಕಳಿಸಿದ್ದಾರೆ, ನಿಮಗಾಗಿ!

ಶಾಂತಾನಾಗರಾಜ್, ಬೆಂಗಳೂರು

ತನ್ನ ಆಷ್ಟ್ರೇಲಿಯಾದ ಹೊಸ ಸ್ವಂತ ಮನೆಯ ವಿಡಿಯೋವನ್ನು ತೋರಿಸಲು ಅಂತೂ ಇಂತೂ ಎಲ್ಲರನ್ನೂ ಸೇರಿಸಿದ್ದಳು ನಿಧಿ. ಆ ಹೊತ್ತಿಗೆ ಕೊನೆಯ ಅತ್ತೆಯ ಮಗ ನಟರಾಜ ಬಂದ " ಬಾ ನಟರಾಜ ಈ ಬೆಂಗಳೂರಿನ ಜನ ಕಪ್ಪೆ ತಕ್ಕಡಿಗೆ ಹಾಕ್ದಂಗೆ. ಒಟ್ಗೇ ಸೇರೋದೇ ಇಲ್ಲಾಂತಾರೆ. ಅಮ್ಮ ಇದ್ದಾಗ ಅಪ್ಪ ಹೊರಗೆ ಹೋಗಿರ್ತಾರೆ, ಅಣ್ಣ ಇದ್ದಾಗ ಅತ್ಗೆ ಇನ್ನೂ ಬ್ಯಾಂಕಿಂದ ಬಂದಿರಲ್ಲ, ನಾನೂ ಊರಿಗೆ ಬಂದು ಮೂರು ವಾರ ಆಯ್ತಪ್ಪ, ಇನ್ನೇನು ನಾಳೆ ನಮ್ಮತ್ತೆಮನೆಗೆ ಹೋಗಿ, ನಾಡಿದ್ದು ನಮ್ಮೂರು ಫ್ಲೈಟ್ ಹತ್ತೋದು. ಇವತ್ತು ಕಷ್ಟಪಟ್ಟು ಎಲ್ಲರನ್ನ ಸೇರ್ಸಿದೀನಿ, ಬಾ ಬಾ ನೀನೂ ನಮ್ಮ ಹೊಸಾ ಮನೆ ನೋಡೂವಂತೆ" ಆದರದಿಂದ ಸ್ವಾಗತಿಸಿದಳು.

ಮನೆಯ ದೃಶ್ಯಗಳು ಮೂಡತೊಡಗಿದವು. ವಿಶಾಲವಾದ ಲಾನ್. ಅಲ್ಲಲ್ಲಿ ಕ್ರೋಟನ್ ಗಿಡಗಳು. ಬಿಳಿಯಬಣ್ಣದ ಚೆಂದದ ಡಿಸೈನ್ ಇರುವ ಹೊರಬಾಗಿಲು, ಪ್ರಾರಂಭದ ಡ್ರಾಯಿಂಗ್ ರೂಮು, ಎಲ್ಲವೂ ವಿಶಾಲ ಸುಂದರ! ಅಡುಗೆಮನೆಯ ಚೆಂದವನ್ನು ನೋಡಿದ ಎಲ್ಲರೂ "ವ್ಹಾವ್" ಎಂದು ಉದ್ಗರಿಸಿದರು. ಬೆಡ್ ರೂಮಿನ ಸೊಬಗು ಹೊಟ್ಟೆಕಿಚ್ಚು ಪಡುವಷ್ಟು ಮೋಹಕವಾಗಿತ್ತು. "ನಮ್ಮಲ್ಲೂ ಎಷ್ಟೊಂದು ದುಡ್ಡು ಖರ್ಚು ಮಾಡ್ತೀವಿ ಇಷ್ಟ್ ಚೆನ್ನಾಗಿ ಯಾಕೆ ಆಗಲ್ಲ"? ನಿಧಿಯ ಅತ್ತಿಗೆ ನೀತಾ ಅಲವತ್ತು ಕೊಂಡಳು. " ಅದೂ ವರ್ಕ್‌ಮನ್‌ಶಿಪ್ ಅತ್ತಿಗೆ. ಮತ್ತೆ ಪೇಂಟ್ ಮರ ಮೊಳೆ ಆದಿಯಾಗಿ ಅಲ್ಲಿ ಎಷ್ಟು ಚೆನ್ನಾಗಿರೋದು ಸಿಕ್ಕುತ್ತೆ ಗೊತ್ತಾ?" ಹೆಮ್ಮೆ ಪಟ್ಟುಕೊಂಡಳು ನಿಧಿ. " ಏನಿಲ್ಲ ಇಲ್ಲೂ ಚೆನ್ನಾಗೇ ಇರತ್ತೆ. ಇವೆಲ್ಲ ವಿಡಿಯೋದಲ್ಲಿ ಕಾಣೋದೇ ಹೀಗೆ. ಬೇಕಾದ್ರೆ ನಾವೂ ಹೊಸಮನೆ ಗೃಹಪ್ರವೇಶದಲ್ಲಿ ವಿಡಿಯೋ ತೆಗೆದಿದೀವಲ್ಲ ಅದನ್ನ ನೋಡು. ಅದು ಹೀಗೇ ಕಾಣತ್ತೆ" ತನ್ನ ಮನೆಯನ್ನೂ ತನ್ನ ದೇಶವನ್ನೂ ಸಮರ್ಥಿಸಿಕೊಂಡ ನಿಧಿಯ ಅಣ್ಣ ನಿಶಾಂತ.

ಆದರೆ ಒಳಗೊಳಗೇ ಅವನಿಗೆ ತಾನೂ ಮುಂದಿನ ತಿಂಗಳು ಸಂಸಾರ ಸಮೇತ ಈ ದೇಶ ಬಿಟ್ಟು ಎರಡು ವರ್ಷಕ್ಕೆ ಅಮೆರಿಕೆಗೆ ಹೋಗಲಿರುವ ಸಂಗತಿ ಚುಚ್ಚಿತು. ಆ ಹೊತ್ತಿಗೆ ಕ್ಯಾಮೆರಾ ಮತ್ತೆ ಡ್ರಾಯಿಂಗ್ ರೂಮಿಗೆ ಬಂದಿತ್ತು. ಗೋಡೆಯ ಮೇಲಿನ ವಿಶಾಲ ಎಲ್.ಸಿ.ಡಿ ಟಿವಿ, ಅದರ ಕೆಳಗೇ ಇದ್ದ ಒಂದು ಶೋಕೇಸಿನಂತಹ ಪುಟ್ಟ ಬಾಕ್ಸ್ ಕಾಣಿಸಿದೊಡನೇ ಅದುವರೆವಿಗೂ ಮಾತೇ ಆಡದಿದ್ದ ನಿಧಿಯ ಸೋದರತ್ತೆ ನಾಗತ್ತೆ " ಏ ನಿಧಿ ಅದೇನು"? ಎಂದರು. "ಅದಾ" ಎನ್ನುತ್ತಾ ರಿಮೋಟಿನಿಂದ ಪಾಸ್ ಒತ್ತಿ ಟಿವಿ ಪರದೆಯ ತುಂಬಾ ಆ ಪುಟ್ಟ ಶೋಕೇಸ್ ಕಾಣುವಂತೆ ಮಾಡುತ್ತಾ ಹೇಳಿದಳು " ನಮ್ಮೂರಲ್ಲಿ ಶೋಕೇಸ್‌ನ ಗೋಡೆಯಲ್ಲಿ ಇಲ್ಲೀಥರಾ ಮಾಡಿರಲ್ಲಾ ನಾಗತ್ತೆ. ಅದಕ್ಕೆ ಅಂಗಡಿಯಿಂದ ಒಂದು ಗಾಜಿನ ಬಾಗಿಲಿರೋ ಶೋಕೇಸ್ ಥರದ್ದು ತಂದಿಟ್ಟಿದೀನಿ. ಅದರ ಒಳಗಡೆ ಪಾರ್ಟಿಶನ್ಸ್ ಇದೆ. ನಮ್ಮ ಹಳ್ಳೀಲಿ ಚೆಂದದ ಸಾಮಾನು ಸಿಗಲ್ಲ. ಅದಕ್ಕೆ ನಾವು ಸಿಡ್ನಿಗೇ ಹೋಗಬೇಕು. ನನಗೆ ರಾಜೀವಂಗೆ ಒಟ್ಗೆ ಬಿಡುವಾಗಿಲ್ಲ. ಅದಕ್ಕೆ ಅದು ಖಾಲಿ ಇದೆ" ವಿವರಣೆ ಮುಗಿಯುತ್ತಿದ್ದಂತೇ ನಾಗತ್ತೆ " ನಾನು ಪಟ್ಟದಗೊಂಬೆಗೆ ಅಲಂಕಾರ ಮಾಡಿ ಕೊಡಲಾ? ತಗೊಂಡ್ ಹೋಗಿ ಅದರಲ್ಲಿ ಇಡತೀಯಾ?" ಎಂದರು. ಅಲ್ಲಿದ್ದವರೆಲ್ಲಾ "ಹೋ" ಎಂದು ನಕ್ಕರು. "ನಾಗತ್ತೆ ಅಲ್ಲೇ ಸಾಫ್ಟ್ ಟಾಯ್ಸು, ಪೋರ್ಸಿಲಿನ್ ಟಾಯ್ಸೂ ಎಲ್ಲ ಸಿಗತ್ತೆ ಇಲ್ಲಿಂದಾ ಈ ಕರೀಮುಖದ ಚಂದನದ ಗೊಂಬೆ ಹೊತ್ಗೊಂಡ್ ಹೋಗ್ಬೇಕಾ"? ನಿಶಾಂತ ಚುಡಾಯಿಸಿದ.

ಮಗ ಚುಡಾಯಿಸಿದ್ದು ತಾಯಿ ಸೀತಮ್ಮನಿಗೆ ಇಷ್ಟವಾಗಲಿಲ್ಲ. " ಆ ಗೊಂಬೆಗಳಿಗೆಲ್ಲಾ ದೇವರ ಭಾವ ಇರಲ್ಲ ಕಣೋ. ನಾವೂ ದಸರಾದಲ್ಲಿ ಮೇಲೆ ಪಟ್ಟದ ಗೊಂಬೆ ಕೂಡ್ಸಿ ಕೆಳಗಿನ ಹಂತಗಳಲ್ಲಿ ತಾನೆ ಇಂಥವನ್ನೆಲ್ಲಾ ಇಡೋದು. ಪಟ್ಟದಗೊಂಬೆ ಮನೇಲಿದ್ರೆ ಮಕ್ಕಳಾಗತ್ತೆ ಅಂತಾರೆ. ಮದುವೇನಲ್ಲೂ ಶಾಸ್ತ್ರಕ್ಕೆ ಪಟ್ಟದಗೊಂಬೇನೆ ಮಕ್ಕಳೂಂತ ಆಡಿಸಿ ಕೊಡಲ್ವೇ"? ತಲೆಗೊಂದು ಮಾತು ಒಬ್ಬೊಬ್ಬರದು ಒಂದೊಂದು ಥರದ ವಾದ. ಇಡೀ ವಾತಾವರಣದಲ್ಲಿ ನಿಧಿಯ ಹೊಸಮನೆಯನ್ನು ಬಿಟ್ಟು ಪಟ್ಟದಗೊಂಬೆಯ ಪಾತ್ರ ಹಿರಿದಾಗಿ ಹೋಯಿತು. ತಾನು ಯಾಕಾದರೂ ಈ ಮಾತು ತೆಗೆದೆನೋ ಅನ್ನುವಹಾಗೆ ಸಪ್ಪೆ ಮುಖ ಮಾಡಿ ಕುಳಿತುಬಿಟ್ಟ ನಾಗತ್ತೆಯ ಮುಖ ನೋಡಿ ನಿಧಿಗೆ ಬೇಸರವಾಯಿತು.

" ಇರಲಿ ನಾಗತ್ತೆ ನೀವು ಮಾಡಿಕೊಡಿ. ಆದ್ರೆ ನಾನು ನಾಳೇ ಬೆಳಿಗ್ಗೇನೇ ನಮ್ಮತ್ತೆ ಮನೆಗೆ ಹೋಗ್ತೀನಿ. ಅಲ್ಲಿಂದ ನಾಳಿದ್ದು ನಮ್ಮೂರಿಗೆ. ಅಷ್ಟರಲ್ಲಿ ನಿಮಗೆ ಮಾಡಕ್ಕಾಗಲ್ಲ ಅಲ್ಲವಾ? ಅದಕ್ಕೆ ನಿಮಗೆ ಬಿಡುವಾದಾಗ ಮಾಡಿಡಿ. ಅಣ್ಣ ಕೊರಿಯರ್ ನಲ್ಲಿ ಕಳಿಸ್ತಾನೆ". ನಾಗತ್ತೆಗೆ ರೆಕ್ಕೆಪುಕ್ಕಗಳು ಮೂಡಿದಷ್ಟು ಹುರುಪು ಬಂತು. " ಏನಿಲ್ಲ ನಿಧಿ ಈಗಲೇ ಮಲ್ಲೇಶ್ವರಕ್ಕೆ ಹೋಗಿ ಗೊಂಬೆ ತರ್ತೀನಿ ರಾತ್ರಿ ಕೂತು ಮಾಡಿದ್ರೆ ಆಯ್ತು. ಅದೆಷ್ಟೊತ್ತಿನ ಕೆಲಸ? ಮುಂದಿನ ತಿಂಗಳೇ ನವರಾತ್ರಿ. ದೇವರ ಹತ್ತಿರ ಇಟ್ಟು ಪೂಜೆ ಮಾಡು. ಮುಂದಿನ ವರ್ಷ ಆ ಗೊಂಬೆ ವಾರಸುದಾರ ಪುಟ್ಟ ರಾಜಕುಮಾರ ಬರ್ತಾನೆ"!! ಸ್ವತಃ ಗೈನಿಕಾಲಜಿಸ್ಟ್ ಆದ ಡಾ. ನಿಧಿಗೆ ಮದುವೆಯಾಗಿ ಐದುವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಮೊದಲ ಮೂರು ವರ್ಷಗಳು ಹೊಸದೇಶ, ಹೊಸವೃತ್ತಿಗಳಿಗೆ ಹೊಂದಿಕೊಳ್ಳುವ ತವಕದಲ್ಲಿ ಮಕ್ಕಳ ಹುಟ್ಟುವಿಕೆಯನ್ನು ತಾವೇ ಮುಂದೂಡಿದರು. ಈಗೆರಡು ವರ್ಷಗಳಿಂದ "ಆಗಲಿ" ಎನ್ನುವ ಮನೋಭಾವ, ಆದರೆ ಆಗುತ್ತಿಲ್ಲ ಎನ್ನುವ ಸಣ್ಣ ನೋವು. ಪ್ರಾರಂಭಿಕ ಟೆಸ್ಟ್ ಮುಗಿದಿವೆ. ಇಬ್ಬರಲ್ಲೂ ತೊಂದರೆ ಇಲ್ಲ. ಕೆಲವರಿಗೆ ನಿಧಾನ ಆಗಬಹುದು ಎನ್ನುವ ಆಶಾಭಾವ. ನಾಗತ್ತೆಯ "ಮುಂದಿನವರ್ಷದ ವಾರಸುದಾರ"ನ ಹಾರೈಕೆ ಒಂದು ಕ್ಷಣ ಸುಖದ ರೋಮಾಂಚನ ಭಾವ ತಂದಿತು. " ಆಯಿತು ಅತ್ತೆ ಮಾಡಿಕೊಡಿ, ಆದರೆ ಚಿಕ್ಕದು ಸಾಕು ತುಂಬಾ ದೊಡ್ಡದು ಅದರಲ್ಲಿ ಹಿಡಿಯಲ್ಲ" ಎಂದಳು.

ನಾಗತ್ತೆ ಪೋಲಿಯೋ ಆದ ತನ್ನ ಎಡದ ಕಾಲನ್ನು ಎಳೆಯುತ್ತಾ ಸರಿಯಾದ ಕಾಲಿನಿಂದ ಹುಮ್ಮಸ್ಸಿನಹೆಜ್ಜೆ ಹಾಕುತ್ತಾ ತನ್ನ ರೂಮಿಗೆ ನಡೆಯುತ್ತಾ " ನಟರಾಜ ನನ್ನ ಸ್ವಲ್ಪ ಮಲ್ಲೇಶ್ವರದ ಗ್ರಂಥಿಗೆ ಅಂಗಡಿ ಹತ್ತಿರ ಬಿಡೋ. ನಾನು ವಾಪಸ್ ಬರುವಾಗ ಆಟೋ ಮಾಡಿಕೊಂದು ಬರ್ತೀನಿ" ಎಂದು ಉತ್ತರಕ್ಕೂ ಕಾಯದೇ ಒಳಗೆ ಬೇರೆ ಸೀರೆಯುಟ್ಟು ತಯಾರಾಗಲು ಹೊರೆಟೇ ಹೋದರು. ನಿಶಾಂತನ ಎಂಟು ವರ್ಷದ ಮಗ ವಿಷ್ಣು ಮತ್ತು ಆರು ವರ್ಷದ ಮಗಳು ಗೌರಿ " ನಾವೂ ಹೋಗೋಣವೇನಮ್ಮ ಗೊಂಬೆ ಅಂಗಡಿಗೆ" ಎನ್ನುತ್ತಾ ವರಾತ ಹಚ್ಚಿದವು. " ಅವರು ಹೋಗ್ತಾ ಇರೋದು ಗ್ರಂಥಿಗೆ ಅಂಗಡಿಗೆ. ನೀವು ನೋಡಿರೋ ಟಾಯ್ಸ್ ಅಂಗಡಿಗಲ್ಲ. ಗ್ರಂಥಿಗೆ ಅಂಗಡಿ ಅಂದ್ರೆ ಯಾವುದು ಗೊತ್ತಾ? ನಾವು ಯಾವಾಗಲೂ ಅರಿಶಿನ ಕುಂಕುಮ ತಗೋತೀವಲ್ಲ? ಅದರ ಪಕ್ಕ ಮೆಟ್ಟಿಲಿಳಿದು ಹೋದ್ರೆ ಅಲ್ಲಿ ಜೀರಿಗೆ ಇಂಗು ಎಲ್ಲಾ ತಗೋತೀವಲ್ಲ? ಅದು" ನೀತಾ ಮಕ್ಕಳಿಗೆ ನಾಗತ್ತೆ ತರಲಿರುವ ಟಾಯ್ ಅಂಗಡಿಯ ವಿವರಣೆ ನೀಡಿದಳು. ವಿಷ್ಣುಗೆ ಆ ಅನಾಕರ್ಷಕ ಅಂಗಡಿ ಕಣ್ಣಮುಂದೆ ಬಂದಂತಾಗಿ " ಅಯ್ಯೋ ಅದಾ? ನಾನು ಹೋಗಲ್ಲಪ್ಪ" ಎಂದವನೇ ಅದನ್ನು ಮತ್ತಷ್ಟು ಅನಾಕರ್ಷಕವಾಗಿ ತಂಗಿಗೆ ಬಣ್ಣಿಸಿದ. "ಅದೇ ಕಣೇ ಗೌರಿ ಕೊಳಕು ಡಬ್ಬಾಗಳು, ಕರೀ ಪೆಟ್ಟಿಗೆಗಳು, ತೂಗಾಡ್ತಾ ಇರೋ ಒಣಗಿದ ಹೀರೇಕಾಯಿ ಎಲ್ಲಾ ಇರತ್ತಲ್ಲ ಆ ಅಂಗಡಿ". " ಓ ಅದಾ ಅಲ್ಲಿ ಇಂಗಿನ ಕೆಟ್ಟ ವಾಸನೆ" ಎಂದು ಗೌರಿಯೂ ಹೇಳಿದಾಗ ಮಕ್ಕಳ "ಟಾಯ್ ಅಂಗಡಿಯ ಪ್ರವಾಸ ರದ್ದಾಗುತ್ತದೆ. ನಿಧಿಯ ತಂದೆ ರಾಮಣ್ಣ " ನಾನೂ ಹೋಗ್ತೀನಿ ನಾಗು ಜೊತೆ. ಅವಳೇನೋ ಆಟೋದಲ್ಲಿ ಒಬ್ಬಳೇ ಬರ್ತೀನಿ ಅಂತಾಳೆ. ಬರೀ ಗೊಂಬೆ ಒಂದೇನಾ ಅವಳ ವ್ಯಾಪಾರ ಲೇಸು ಅದು ಇದೂಂತ ಅಂಗಡಿ ಅಂಗಡಿ ಸುತ್ತುತ್ತಾ ಹೊತ್ತು ಮಾಡ್ಕೋತಾಳೆ. ಆಮೇಲೆ ಕತ್ತಲಾದ್ರೆ ಸದಾಶಿವನಗರ ಹತ್ತಿರಾಂತ ಯಾರೂ ಆಟೋದವ್ರು ಬರಲ್ಲ. ಒದ್ದಾಡ್ತಾಳೆ"

ಸೀತಮ್ಮನಿಗೆ ತನ್ನ ಗಂಡ ಅವರ ತಂಗಿ ನಾಗು ಬಗ್ಗೆ ಇಟ್ಟಿರುವ ಕಾಳಜಿಗಳು ಹೊಸತೇನಲ್ಲ. ಮೊದಲಾಗಿದ್ದರೆ "ನೀನೂ ಹೋಗು ನಾಗು ಜೊತೆ" ಅನ್ನುತ್ತಿದ್ದರು. ಈಗ ತಮಗೆ ಅಸಾಧ್ಯವಾದ ಮಂಡಿ ನೋವು. ಹೊರಗೆ ಹೆಜ್ಜೆ ಹಾಕಲಾರರು. ಮಗ ಕಾರು ತಂದು ಮನೆಯ ಮುಂಬಾಗಿಲಿಗೇ ನಿಲ್ಲಿಸಿದಾಗ ಮಾತ್ರ ಸೀತಮ್ಮನ ಸವಾರಿ ಹೊರಗೆ ಹೊರಡುವುದು. ಆದರೂ ಗಂಡನಿಗೆ ಬೇಸರವಾಗಬಾರದೆಂದು " ನಾನೇ ಹೋಗಲೇನು" ಎಂದರು. ಈ ಅತ್ತೆಮಾವನ ಕಕ್ಕುಲಾತಿಗಳನ್ನು ನೋಡಿ ನಟರಾಜ " ಬಿಡಿ ಮಾವ ನಾನೇ ದೊಡ್ಡಮ್ಮನನ್ನು ವಾಪಸ್ ಬಿಟ್ಟು ಹೋಗುತ್ತೇನೆ. ನನಗೆ ನಿಧಿಜೊತೆ ಸ್ವಲ್ಪ ಮಾತಾಡುವುದಿದೆ, ಅದಕ್ಕೇ ಬಂದೆ" ಎನ್ನುತ್ತಾನೆ. ದಿಲ್ಲಿಯಲ್ಲಿ ಎಂ.ಡಿ ಓದುತ್ತಿರುವ ನಟರಾಜನದೂ ಇನ್ನೇನು ಕೋರ್ಸ್ ಮುಗಿಯಲಿದೆ. ಅವನಿಗೂ ಪರದೇಶಗಳ ಮೇಲೆ ಕಣ್ಣು ಬಿದ್ದಿದೆ. " ಹಾಗಾದರೆ ನಟರಾಜ ನೀನು ಅತ್ತೆಯನ್ನು ವಾಪಸ್ ಕರೆದುಕೊಂಡು ಬರುವ ಹೊತ್ತಿಗೆ ನಾನೂ ರಡಿಯಾಗುತ್ತೇನೆ. ನನಗೆ ಸ್ವಲ್ಪ ಮಹಾಲಕ್ಷಮಿ ಲೇಔಟ್‌ಗೆ ನನ್ನ ಗಂಡನ ಅಜ್ಜಿ ಮನೆಗೆ ಹೋಗೋದಿದೆ. ಬಾ ನನ್ನ ಜೊತೆಗೆ ಹಾಗೇ ಕಾರಲ್ಲೇ ಮಾತಾಡೋಣ" ಎಂದು ಪ್ರೋಗ್ರಾಮ್ ಫಿಕ್ಸ್ ಮಾಡುತ್ತಾಳೆ ನಿಧಿ. " ಏ ರಾತ್ರಿ ಊಟ ಮಾಡಿಕೊಂಡೇ ಹೋಗೋ. ನೀ ಮುಂದಿನ ವಾರ ಡೆಲ್ಲಿಗೆ ಹೋದ್ರೆ ಮತ್ತೆ ವಾಪಸ್ ಬರ್ತೀಯೋ ಇಲ್ಲಾ ಅಲ್ಲಿಂದಾನೇ ಯಾವುದಾದ್ರೂ ದೇಶಕ್ಕೆ ಹಾರ್ತೀಯೋ ಯಾರಿಗೆ ಗೊತ್ತು" ಆ ವೇಳೆಗಾಗಲೇ ಅಡಿಗೆ ಮನೆ ಸೇರಿದ್ದ ಸೀತಮ್ಮ ಧ್ವನಿ ಮೊಳಗುತ್ತದೆ.

ಕಥೆಯ ಮುಂದಿನ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X