ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟ್ಟದಗೊಂಬೆಯೂ ಪರದೇಶವೂ

By Staff
|
Google Oneindia Kannada News

(ಕಥೆಯ ಮುಂದುವರಿದ ಭಾಗ)

ನಾಗತ್ತೆಯ ಗೊಂಬೆ ವ್ಯಾಪರ ಮುಗಿದು, ನಿಧಿ ತನ್ನ ಗಂಡನ ಅಜ್ಜಿಯ ಮನೆಗೆ ಹೋಗಿ, ಅಪರೂಪಕ್ಕೆ ಬಂದ ಈ ಆಷ್ಟ್ರೇಲಿಯಾ ಸೊಸೆಗೆ ಅವರು ಬಲವಂತದಿಂದ ಭಾರಿ ಔತಣವನ್ನೇ ಮಾಡಿ, ನಟರಾಜನೂ ಅದರಲ್ಲಿ ಪಾಲುದಾರನಾಗಿ ಅವರಿಬ್ಬರೂ ವಾಪಸ್ ಮನೆಗೆ ಬರುವ ಹೊತ್ತಿಗೆ ರಾತ್ರಿ ಹನ್ನೊಂದೂವರೆಯಾಗಿರುತ್ತದೆ. ನಟರಾಜನಿಗೆ ಟಾಟಾ ಹೇಳಿ ಮನೆಹೊಕ್ಕ ನಿಧಿಗೆ ನಾಗತ್ತೆಯ ಕೋಣೆಯ ದೀಪ ಇನ್ನೂ ಉರಿಯುತ್ತಿರುವುದನ್ನು ಕಂಡು ಅಚ್ಚರಿಯಾಗುತ್ತದೆ. ನೈಟಿ ಧರಿಸಿ ನಾಗತ್ತೆಯ ರೂಮಿನಲ್ಲಿ ಬಂದು ನೋಡುತ್ತಾಳೆ!, ನಾಗತ್ತೆ ತಮ್ಮ ಸುತ್ತಲೂ ಸಾಮಾನುಗಳನ್ನು ಹರಡಿಕೊಂಡು ತಾವು ತಂದ ಗೇಣುದ್ದದ ಚಂದನದ ಗೊಂಬೆಯ ಅಲಂಕಾರದಲ್ಲಿ ಮಗ್ನರಾಗಿ ಹೋಗಿದ್ದಾರೆ! " ಇದೇನು ನಾಗತ್ತೆ? ಇನ್ನೂ ಮಲಗೇ ಇಲ್ಲ ನೀವು. ಅದಕ್ಕೇ ನಾನು ಹೇಳಿದ್ದು ನಿಧಾನವಾಗಿ ಮಾಡಿ ಕೊರಿಯರ್‍ನಲ್ಲಿ ಕಳಿಸಬಹುದು ಅಂತ" ಅವಳ ಕಕ್ಕುಲಾತಿ ಕಂಡು ನಾಗತ್ತೆ ನಗುತ್ತಾರೆ.

" ಏನೇ ಹುಡುಗಿ ಆಗಲೇ ಮರೆತುಬಿಟ್ಟೆಯಾ? ನೀನು ಮೆಡಿಸನ್ ಓದುವಾಗ ನಾನೂ ನಿನ್ನಜೊತೆ ಎಷ್ಟೋ ರಾತ್ರಿಗಳನ್ನು ಕಥೆ ಪುಸ್ತಕ ಓದುತ್ತಾ ಕಳೆದಿಲ್ಲವೇನು"? ಎನ್ನುತ್ತಾರೆ. " ಅದೆಲ್ಲಾ ಆಗಾಯಿತು ನಾಗತ್ತೆ. ಈಗ ಯಾಕೆ ಸುಮ್ಮನೇ ಸುಸ್ತಾಗುತ್ತೀರಿ"?. "ಏನಿಲ್ಲ ಬಿಡು ನನಗೂ ಈ ಕೆಲಸ ಮಾಡಿ ಬಹಳ ದಿನ ಆಗಿತ್ತು ಕೈ ಚುಟುಚುಟು ಅಂತಿತ್ತು. ಈಗ ಖುಷಿಯಾಗ್ತಿದೆ. ನೋಡು ಆಗಲೇ ಗಂಡು ಗೊಂಬೆ ಆಗೇ ಹೋಯ್ತು" ಮುಂದೆ ಹಿಡಿಯುತ್ತಾರೆ. " ವ್ಹಾವ್! ನಿಮ್ಮ ಕೈಚಳಕಾನೇ ಚೆಂದ ಅತ್ತೆ" ಎನ್ನುತ್ತಾ ಗಂಡುಗೊಂಬೆಯನ್ನು ತನ್ನ ಅಂಗೈಲಿಟ್ಟು ಸಂಭ್ರಮಿಸುತ್ತಾಳೆ. ಅಣ್ಣ ಕೊಟ್ಟ ಒಂದು ಹೊಸಾ ಜರಿಯಂಚಿನ ಶಲ್ಯವನ್ನು ಕತ್ತರಿಸಿ ತಿರುಪತಿ ಶ್ರೀನಿವಾಸನಿಗೆ ಉಡಿಸುವಂತೆ ಕಚ್ಚೆಪಂಚೆಯನ್ನು ಉಡಿಸಿದ್ದಾರೆ. ಮೇಲೆ ಹಸಿರು ವೆಲ್ವೆಟ್ಟಿನ ಕೋಟು. ಅದಕ್ಕೆ ಕುತ್ತಿಗೆಗೆ, ತೋಳಿಗೆ, ಅಂಚಿಗೆ ಎಲ್ಲಾ ಪುಟ್ಟ ಜರಿ ಲೇಸಿನ ಶೃಂಗಾರ! ಕಿವಿಗೆ ಹರಳಿನ ಓಲೆ! ಕುತ್ತಿಗೆಗೆ ಬಂಗಾರದ ಬಣ್ಣದ ದಾರದ ಸರ, ತಲೆಗಂತೂ ಮೈಸೂರು ಮಹಾರಾಜರಂತೆ ನೀಟಾಗಿ ಸುತ್ತಿದ ಜರಿ ಪೇಟ! ಅದಕ್ಕೆ ಮುತ್ತಿನ ಮಣಿಗಳ ಅಲಂಕಾರ, ಮೇಲೆ ಪುಟ್ಟ ಹಸಿರು ಮಾವಿನಕಾಯಿ ಆಕಾರಕ್ಕೆ ಹರಳಿನ ಅಲಂಕಾರ, ಅದರ ಬಾಗಿದ ಚೂಪಿಗೆ ಜೋತಾಡುವ ಮುತ್ತಿನ ಗೊಂಚಲು!! ನೋಡಲು ಎರಡು ಕಣ್ಣುಸಾಲದು ಎನ್ನಿಸುವಷ್ಟು ಸುಂದರ!!

" ನಾನಿಲ್ಲೇ ಮಲಗ್ತೀನಿ ಅತ್ತೆ. ಗೆಸ್ಟ್ ರೂಮಲ್ಲಿ ಒಬ್ಬಳಿಗೇ ಬೇಜಾರು" ಎನ್ನುತ್ತಾ ತನ್ನ ಹೊದ್ದಿಕೆಯನ್ನು ತಂದು ನಾಗತ್ತೆಯ ಹಳೆಯಕಾಲದ ದೊಡ್ಡಮಂಚದ ಮೇಲೆ ಅಡ್ಡಾಗುತ್ತಾಳೆ. ಬೆಳಗಿನಿಂದಾ ಸುತ್ತಾಡಿ ಸುಸ್ತಾಗಿದ್ದರೂ ಕಣ್ಣುಗಳು ಎಳೆದುಕೊಂಡೇ ಹೋಗುತ್ತಿದ್ದರೂ ಮೂರುವಾರಗಳಿಂದ ಕೇಳಬೇಕೆಂದುಕೊಂಡಿದ್ದ ಪ್ರಶ್ನೆಯನ್ನು ಮೆಲ್ಲಗೆ ಕೇಳುತ್ತಾಳೆ " ರವಿ ಸಮಾಚಾರ ಏನು ಅತ್ತೆ"? ನಾಗತ್ತೆ ಹೆಣ್ಣುಗೊಂಬೆಗೆ ಜರಿಯಂಚಿನ ಸೀರೆ ಉಡಿಸುತ್ತಿದ್ದವರು ತಟ್ಟನೆ ಅದನ್ನು ತಮ್ಮ ತೊಡೆಯ ಮೇಲಿರಿಸಿ ನಿಧಿಯನ್ನೇ ನಿಟ್ಟಿಸಿ ನೋಡುತ್ತಾರೆ. ನಿಧಿಯ ಕಣ್ಣುಗಳಲ್ಲಿ ನಿದ್ದೆಯ ಜೊತೆಗೆ ಮಮತೆಯನ್ನೂ ಕಂಡು, ಅಷ್ಟೇ ಮೆತ್ತಗೆ ಮತ್ತು ಅಷ್ಟೇ ನಿಸೂರಾಗಿ ಹೇಳುತ್ತಾರೆ " ಅವನ್ ನನ್ ಪಾಲಿಗೆ ಎಂದೋ ಸತ್ತ ಕಣೆ. ನಾನು ಕೊನೇ ವರೆಗೂ ನಿಮ್ಮಪ್ಪನ ಕುತ್ತಿಗೆಗೇ ಗಂಟು ಬಿದ್ದವಳು". " ಛೇ ಯಾಕ್ ಹಾಗಂತೀರಾ? ನಮ್ಮಪ್ಪನ ಜೀವ ನೀವು. ಅವರಿಗೇನೂ ನೀವು ಹೊರೆ ಅನಿಸಿಲ್ಲ" ಎನ್ನುವ ಹೊತ್ತಿಗೆ ನಿದ್ದೆ ಸಮುದ್ರದ ತೆರೆಯಂತೆ ಅವಳನ್ನು ಆವರಿಸಿಕೊಂಡುಬಿಡುತ್ತದೆ. ನಾಗತ್ತೆಯ ಬೆರಳುಗಳು ಮತ್ತೆ ಹೆಣ್ಣುಗೊಂಬೆಯ ಅಲಂಕಾರದಲ್ಲಿ ತೊಡಗುತ್ತದೆ.

ಮನಸ್ಸು ನಲವತ್ತೊಂದು ವರ್ಷದ ಹಿಂದೆ ಸರಿಯುತ್ತದೆ. ಆಗ ಅವರಿಗೆ ಇಪ್ಪತ್ತೇಳು ವರ್ಷ. ಆ ಕಾಲಕ್ಕೆ ಇವರಿಗೆ ಮದುವೆಯೇ ಆಗದು ಎಂದು ಸಮಾಜ ನಿರ್ಧರಿಸಿದ ಹೊತ್ತಿಗೇ ಅಣ್ಣ ಅವನನ್ನು ಹುಡುಕಿದ್ದ. ಆತ ಅನಾಥ, ಬಡ ಮೇಷ್ಟರು, ಮತ್ತು ವಿಪರೀತ ಅಂಜುಬುರುಕ. ಅತ್ತಿಗೆಯ ದೂರದ ಸಂಬಂಧಿ. ನಲವತ್ತು ವರ್ಷಗಳಾದರೂ ಅದ್ಯಾಕೋ ಮದುವೆಯಾಗಿಲ್ಲ. ಸೀತಕ್ಕನ ಗಂಡ ದೊಡ್ಡ ಇಂಜಿನಿಯರ್ ಹೇಳಿಕಳಿಸಿದ್ದಾರೆ ಎಂದು ಹೆದರುತ್ತಲೇ ತಮ್ಮ ಮನೆಗೆ ಬಂದವ. "ನನ್ನ ತಂಗಿಗೆ ಕಾಲು ಸ್ವಲ್ಪ ಕುಂಟು ಅದು ಹುಟ್ಟಿನಿಂದ ಬಂದಿಲ್ಲ ಐದುವರ್ಷದವಳಿದ್ದಾಗ ಪೋಲಿಯೋ ಆಗಿ ಒಂದು ಕಾಲು ಕೃಶವಾಗಿದೆ ಅಷ್ಟೆ ನೀವು ಅವಳನ್ನು ಮದುವೆಯಾಗುತ್ತೀರಾ"? ಎಂದು ಕೇಳಲಿಕ್ಕಿಲ್ಲ " ಹೂಂ" ಎಂದು ಒಪ್ಪಿಯೇಬಿಟ್ಟ ತನ್ನನ್ನು ನೋಡದೆಯೇ! ಅವನನ್ನು ಮದುವೆಯಾಗಿ ಸಂಸಾರ ಮಾಡಿದ್ದು ಕೇವಲ ಎರಡೇ ತಿಂಗಳು. ಎಲ್ಲಕ್ಕೂ ಸುಮ್ಮಸುಮ್ಮನೇ ಹೆದರುತ್ತಿದ್ದ ಆತ ಅದೇನು ಪ್ರೈಮರಿ ಮಕ್ಕಳಿಗೆ ಪಾಠ ಮಾಡುತ್ತಿದ್ದನೋ ದೇವರಿಗೇ ಗೊತ್ತು. ಬರುವ ಸಂಬಳವೋ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ ಬಟ್ಟೆಗಿದ್ದರೆ ಹೊಟ್ಟೆಗಿಲ್ಲ. ಅದ್ಯಾರೋ ಕಿಡಿಗೇಡಿಗಳು ಒಂದೆರಡು ಬಾರಿ ರಸ್ತೆಯಲ್ಲಿ ರೇಗಿಸಿದಂತೆ " ಅಲ್ಲಿ ಹೋಗ್ತಾಇದಾನೆ ನೋಡಿ ಆ ಕುಂಟಿಗಂಡ" ಅಂತ. ಅಷ್ಟೇ ಸಾಕಾಯಿತು ಈ ಜೀವನಹೇಡಿಗೆ ಊರು ಬಿಟ್ಟು ಹೋಗಲು. ಹೆಂಡತಿ, ಮನೆ, ಕೆಲಸ ಎಲ್ಲಬಿಟ್ಟು ಪರಾರಿಯಾದ. ತನ್ನ ಸುಕೃತ ಅಷ್ಟಕ್ಕೇ ಮುಗಿದಿದ್ದರೆ ಎಷ್ಟೋ ಚೆನ್ನಾಗಿತ್ತು. ಇವತ್ತು ಬರುತ್ತಾನೆ, ನಾಳೆ ಬರುತ್ತಾನೆ , ಎಂದು ಒಂದು ತಿಂಗಳವರೆಗೂ ಕಾದು ಅಣ್ಣನ ಮನೆಗೆ ವಾಪಸ್ ಬರುವ ವೇಳೆಗೆ ಹೊಟ್ಟೆಯಲ್ಲಿ ಮೂರುತಿಂಗಳ ಗರ್ಭ!!

"ರವಿರಾಜ"!! ಅಣ್ಣ ಎಷ್ಟೊಂದು ಅಕ್ಕರೆಯಿಂದ ಇಟ್ಟ ಇವನಿಗೆ ಈ ಹೆಸರನ್ನು. ಆದರೆ ಅವನು ಎಂದಿಗೂ ಈ ಅಮ್ಮನ ಪಾಲಿಗೆ ಸೂರ್ಯನ ಕಿರಣವಾಗಲೇ ಇಲ್ಲ. ಬದಲಿಗೆ ತನ್ನನ್ನೇ ಕತ್ತಲೆಯೊಳಗಿಟ್ಟು ಕೊಂಡು ನೆರಳಿದ. ಭಗವಂತ ತನ್ನ ಕಾಲನ್ನಷ್ಟೇ ಕಿತ್ತುಕೊಳ್ಳಲಿಲ್ಲ, ಈ ದರಿದ್ರಸಂಬಂಧಗಳನ್ನೂ ಕುತ್ತಿಗೆಗೆ ಕಟ್ಟಿ, ಅದೇನು ಅವನ ಇಚ್ಛೆಯೋ. ಈ ಮನೆಯಲ್ಲಿ ಎಷ್ಟೊಂದು ಸುಖವಾಗಿ ಬೆಳೆಯಬಹುದಿತ್ತು? ಒಂದೇ ವರ್ಷ ದೊಡ್ಡವನಾದ ನಿಶಾಂತ ಗೆಳೆಯನಂತೆ ಇದ್ದ. ಆದರೂ ಈ ಹುಡುಗ ಇಲ್ಲಿಯ ಎಲ್ಲವನ್ನೂ ಬೆಳೆಯುತ್ತ ಬೆಳೆಯುತ್ತಲೇ ಕಾಮಾಲೆ ಕಣ್ಣಿನಿಂದ ಕಂಡ. ತನಗೆ ಅಪ್ಪ ಇಲ್ಲ ಎನ್ನುವ ಕೊರಗು, ತನ್ನಮ್ಮ ಕುಂಟಿ ಎನ್ನುವ ಕೊರಗು, ಅದು ಸುಮ್ಮಸುಮ್ಮನೇ ಕೋಪವಾಗಿ ತಿರುಗಿ, ಈ ಮನೆಯ ಎಲ್ಲರೂ ಶತೃಗಳ ಹಾಗೆ ಯಾಕೆ ಕಂಡರೋ ಅವನಿಗೆ? ಹತ್ತು ವರ್ಷದ ಹುಡುಗ ಹೊರಗೆ ಬಾಯಿಯೇ ಬಿಚ್ಚದೇ ಮೌನಿಯಾಗಿದ್ದುಕೊಂಡು ತಮ್ಮ ರೂಮಿಗೆ ಬರುತ್ತಲೇ ಏನೆಲ್ಲ ವರಾತ ಹಚ್ಚುತ್ತಿದ್ದ? "ಅವರು ನನ್ನನ್ನು ಆಳಿನಂತೆ ಕಾಣುತ್ತಾರೆ, ನೀನು ಈ ಮನೆಯಲ್ಲಿ ಕೂಲಿಯಂತೆ ಕೆಲಸ ಮಾಡುತ್ತೀ, ಅತ್ತೆಗೆ ನಮ್ಮನ್ನು ಕಂಡರಾಗುವುದಿಲ್ಲ, ಮಾವ ಇದನ್ನು ನೋಡಿಯೂ ಸುಮ್ಮನಿರುತ್ತಾರೆ" ಒಂದೇ ಎರಡೇ ಅವನ ತಗಾದೆಗಳು? ಶಾಲೆಯಲ್ಲಿ ಅತೀ ಬುದ್ಧಿವಂತ, ಮನೆಯಲ್ಲಿ ಇಲ್ಲದ ವಕ್ರತನ. ಹದಿಮೂರನೇ ವಯಸ್ಸಿಗೇ ಬಿಜಾಪುರದ ಸೈನಿಕ ಶಾಲೆಯಲ್ಲಿ ಸೀಟು ಸಿಕ್ಕಿದೊಡನೆಯೇ ಅವನಪ್ಪ ನಡೆದಹಾಗೆಯೇ ನಿಸೂರಾಗಿ ನಡೆದು ಬಿಟ್ಟ, ಅಮ್ಮೆನೆನ್ನುವ ಮೋಹವನ್ನು ಕಳಚಿಹಾಕಿ!! ಸೈನಿಕ ಶಾಲೆ, ನಂತರ ಅಲ್ಲೇ ಪಿ.ಯು.ಸಿ ಅಲ್ಲಿಂದ ನೇರ ಖರಗಪುರಕ್ಕೆ ಬಿ.ಇ ಓದಲು! ಅಲ್ಲಿಂದ ನೇರ ಅಮೆರಿಕಕ್ಕೆ!! ರಜೆಯಲ್ಲಿ ಇಲ್ಲಿಗೆ ಬಂದರೆ ಬಂದ ಬಿಟ್ಟರೆ ಬಿಟ್ಟ. ಅವನೇನೋ ತುಂಬಾ ಜಾಣ. ಸ್ಕಾಲರ್ ಶಿಪ್ ಫ್ರೀಶಿಪ್ ಅಂತ ಬಡವರಿಗೆ ಇರುವ ಎಲ್ಲ ಸೌಲಭ್ಯಗಳನ್ನೂ ಎಟುಕಿಸಿಕೊಂಡು ತನ್ನ ದಾರಿಯನ್ನು ಸುಗಮ ಮಾಡಿಕೊಂಡ. ಆದರೂ ಯಾವಜನ್ಮದ ತಂದೆಯೋ ರಾಮಣ್ಣ ಅವನ ಮೇಲು ಖರ್ಚನ್ನೆಲ್ಲಾ ಯಾರೂ ಕೇಳದೇ ನಿಭಾಯಿಸಿದ. ಜನ್ಮಜನ್ಮಾಂತರದಲ್ಲೂ ತೀರಿಸಲಾಗದ ಋಣ!

ಅಮೆರಿಕೆಗೆ ಹೋದಮೇಲೆ ಅದೇನೋ ಅಮ್ಮನೆನ್ನುವ ಮಮತೆ ಸ್ವಲ್ಪ ಹುಟ್ಟಿತೇನೋ. ಕಾಗದ ಬರೆಯುವುದು. ಅಗಾಗ್ಗೆ ಸ್ವಲ್ಪ ಹಣಕಳಿಸುವುದು, ಮಾಡುತ್ತಿದ್ದ. ಅವನು ಕಳಿಸಿದ ಹಣವನ್ನೆಲ್ಲಾ ರಾಮಣ್ಣ ನಾಗತ್ತೆಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಕೂಡಿಡುತ್ತಿದ್ದರು. ಒಂದೆರಡು ಬಾರಿ ಮೂರು ನಾಲ್ಕು ವಾರಗಳಿಗೆ ಬಂದೂ ಹೋದ. ಮೊದಲಿನ ಸಿಟ್ಟು ಹೋಗಿ ಅದರ ಜಾಗದಲ್ಲಿ ಅಹಂಕಾರ ಬಂದು ಕೂತಿತ್ತು. ತಾನು ತುಂಬಾ ಜಾಣನೆನ್ನುವ ಗರ್ವ, ಅಮೆರಿಕೆಯಲ್ಲಿ ದೊಡ್ಡ ಕಂಪನಿಯಲ್ಲಿ ಆಗಲೇ ಮ್ಯಾನೇಜರ್ ಹುದ್ದೆ ಅಲಂಕರಿಸಿರುವ ಗರ್ವ, ನೋಡಲು ತುಂಬಾ ಚೆನ್ನಾಗಿದ್ದೇನೆಂಬ ಗರ್ವ, ಎಲ್ಲವೂ ಅವನ ಮಾತಿನಲ್ಲಿ ಇಣುಕುತ್ತಿತ್ತು. " ಮದುವೆಯಾಗುತ್ತೀಯಾ? ಹೆಣ್ಣು ನೋಡಲೇ"? ಎಂಬ ಪ್ರಶ್ನೆಗೆ " ನೀವ್ಯಾರೂ ನನಗೆ ಹೆಣ್ಣು ನೋಡಬೇಕಾಗಿಲ್ಲ" ಎನ್ನುವ ಉತ್ತರ. " ಹಾಗಾದರೆ ಅಲ್ಲೇ ಯಾರನ್ನಾದರೂ ನೋಡಿಕೊಂಡಿದ್ದೀಯಾ" ಎಂದರೆ, "ಕಾಲ ಬಂದಾಗ ತಿಳಿಸುತ್ತೇನೆ" ಎನ್ನುವ ಹಾರಿಕೆ ಮಾತು. ಈ ಗಂಡು ತನ್ನ ಬದುಕಿಂದ ಹೊರಗೇ ಎನ್ನುವುದು ಖಚಿತವೇ ಆಗಿಹೋದಂತೆ ಅಮೆರಿಕೆಯಿಂದ ಒಂದು ಪತ್ರ " ನಾನು ಸ್ಕಾಟ್ಲೆಂಡ್ ಮೂಲದ ಅಮೆರಿಕೆಯಲ್ಲೇ ನೆಲೆಸಿರುವ ಹುಡುಗಿಯೊಬ್ಬಳನ್ನು ಮದುವೆಯಾಗಿದ್ದೇನೆ" ಎಂದು! ನಾಗತ್ತೆ ಇದನ್ನು ಎಂದೋ ನಿರೀಕ್ಷಿಸಿದ್ದರು. ರಾಮಣ್ಣ ಸೀತಮ್ಮನೇ "ಇದ್ದೊಬ್ಬ ಮಗ ಹೀಗಾದನಲ್ಲ" ಎಂದು ಪೇಚಾಡಿಕೊಂಡರು. ಈಗ ಅವನೂ ಇಲ್ಲ, ಅವನಿಂದ ಹಣವೂ ಇಲ್ಲ, ಅಗಾಗ್ಗೆ ಬರುತ್ತಿದ್ದ ಪತ್ರವೂ ಇಲ್ಲ, ಫೋನಂತೂ ಇಲ್ಲವೇ ಇಲ್ಲ! ಈ ಜಗತ್ತಿಗೆ ಅವನನ್ನು ತಂದದ್ದಷ್ಟೇ ತಮ್ಮ ಕೆಲಸ. ಈಗೆಲ್ಲ ಮುಗಿದಿದೆ ಮೋಹಪಾಶ!

ಬೆಳಿಗ್ಗೆ ನಿಧಿ ಏಳುವ ಹೊತ್ತಿಗೆ ಅವಳ ಅಣ್ಣ ಅತ್ತಿಗೆ ಮಕ್ಕಳು ಎಲ್ಲಾ ತಮ್ಮ ತಮ್ಮ ಕೆಲಸ, ಮತ್ತು ಸ್ಕೂಲುಗಳಿಗೆ ಹೋಗಿಯಾಗಿತ್ತು. ರಾಮಣ್ಣನೂ ತರಕಾರಿ ತರಲು ಹೊರಗೆ ಹೋಗಿದ್ದರು. ಕಾಫಿ ಕುಡಿಯುತ್ತಾ ನಿಧಿ ಕೇಳಿದಳು. " ಅದೇನಮ್ಮ ಅಣ್ಣ ನಾನು ಫಾರಿನ್‌ಗೇ ಹೋಗಲ್ಲ, ಮೇರಾ ಭಾರತ್ ಮಹಾನ್ ಅಂತಿದ್ದ! ಈಗ ಅತ್ತಿಗೆ ಮಕ್ಕಳ ಸಮೇತ ಎರಡು ವರ್ಷಕ್ಕೆ ಅಮೆರಿಕಾಗೆ ಹೋಗ್ತಾನಂತೆ? ಅದೇನು ಇದ್ದಕ್ಕಿದ್ದಹಾಗೆ ಬದಲಾವಣೆ"? " ಅವನೇನು ಸಂತ ಅಲ್ಲವಲ್ಲ? ಇದುವರೆಗೂ ಛಾನ್ಸ್ ಸಿಕ್ಕಿರಲಿಲ್ಲ, ಈಗ ಚೆನ್ನಾಗಿರೋ ಕೆಲಸ ಸಿಕ್ಕಿದೆ ಹೋಗ್ತಾನೆ, ಅವಳೂ ಅಲ್ಲಿ ಏನೋ ಓದ್ತಾಳಂತೆ ಒಳ್ಳೆ ಕೆಲಸ ಸಿಗತ್ತಂತೆ. ಹೋಗ್ಲಿ ಬಿಡು, "ನಾವು ಮುದುಕರಾಗ್ತಾ ಇದೀವಿ ನಮ್ಮನ್ನ ನೋಡಿಕೊಳ್ಳಕ್ಕೆ ನೀವು ಇಲ್ಲೇ ಇರಬೇಕು" ಅಂತ ಕೇಳಿದರೆ ನಮ್ಮದು ಸ್ವಾರ್ಥ ಆಗಲ್ಲವಾ? ನಿಮ್ಮಪ್ಪ ಇಂಜಿನಿಯರ್ ಆಗಿ ಅವರ ಅಪ್ಪ ಅಮ್ಮನ್ನ ಹಳ್ಳೀಲಿ ಬಿಟ್ಟು ಪಟ್ಟಣಕ್ಕೆ ಬಂದ್ರು, ಆ ಕಾಲ ಹಾಗಿತ್ತು. ಈಗಿನವರು ದೇಶಬಿಟ್ಟು ಪರದೇಶಕ್ಕೆ ಹೋಗ್ತಾರೆ. ಈಗ ನೀನೇ ಹೋಗಿಲ್ವಾ"?

ನಿಧಿಯ ಮುಖ ಸಣ್ಣಗಾಯಿತು. ನಾಗತ್ತೆ ಅವಳನ್ನು ಸಮರ್ಥಿಸಿಕೊಳ್ಳುತ್ತಾ " ನನಗರ್ಥ ಆಗತ್ತೆ ನಿಧಿ ನಿನ್ನ ತೊಳಲಾಟ, ನಾನು ಹೊರದೇಶಕ್ಕೆ ಹೋದೆ ಅಣ್ಣನಾದ್ರೂ ಇಲ್ಲಿ ಅಪ್ಪ ಅಮ್ಮನಜೊತೆ ಇದಾನೆ ಅಂತ ನಿಂಗೆ ನೆಮ್ಮದಿ ಇತ್ತು, ಈಗ ಅಲ್ಲಿಗೆ ಹೋದ್ಮೇಲೆ ಅಪ್ಪ ಅಮ್ಮ ಇಬ್ರೆ ಇದಾರೆ ಅಂತ ಶುರುವಾಗತ್ತೆ ಕೊರಗು ಅಲ್ವಾ"? ನಿಧಿ ಮೌನಿಯಾದಳು. ಅವಳನ್ನು ಖುಷಿಯಾಗಿಸಲು ನಾಗತ್ತೆ " ನಿನ್ನ ಹೆಣ್ಣುಗೊಂಬೇಗೂ ಅಲಂಕಾರ ಮಾಡಿ ಶೋಕೇಸಿನಲ್ಲಿಟ್ಟಿದ್ದೇನೆ ನೋಡು ಹೋಗು" ಎಂದರು. ನಿಧಿ ಒಂದೇ ಹಾರಿಕೆಯಲ್ಲಿ ಶೋಕೇಸ್ ಬಳಿ ಬಂದು ಗೊಂಬೆಯ ವೀಕ್ಷಣೆಗೆ ತೊಡಗಿದಳು. ಥೇಟ್ ತನ್ನ ಮದುವೆಯಲ್ಲಿ ನಾಗತ್ತೆ ತನಗೆ ಅಲಂಕಾರ ಮಾಡಿದಂತೆ ಈ ಗೊಂಬೆಗೂ ಮಾಡಿದ್ದರು. ಜರಿಯಂಚಿನ ಹಸಿರು ಬ್ಲೌಸ್‌ಪೀಸ್ ಕತ್ತರಿಸಿ ಸೀರೆಯನ್ನಾಗಿಸಿದ್ದರು. ಅದಕ್ಕೆ ಜರಿಯದೇ ಕುಪ್ಪುಸ. ಸೊಂಟಕ್ಕೆ ಡಾಬು, ಕುತ್ತಿಗೆಗೆ ನಕ್ಲೇಸ್, ಉದ್ದನೆಯ ಸರ ಅದಕ್ಕೆ ತೂಗಾಡುವ ಪದಕ, ಕೈಗಳಿಗೆ ಬಳೆಯಂತೆ ಕಟ್ಟಿದ ಬಂಗಾರದ ಲೇಸ್, ತಲೆಗೆ ಕೂದಲು ಅಂಟಿಸಿ ಮಾರುದ್ದ ಜಡೆ ಹೆಣೆದಿದ್ದರು, ಜಡೆಯ ಮೇಲೆ ಬಂಗಾರದ ಲೇಸ್, ಅದರ ಮೇಲೆ ಬಣ್ಣಬಣ್ಣದ ಹರಳುಗಳು, ಮುತ್ತಿನ ಬೈತಲೆ ಬಟ್ಟು, ಹಣೆಗೆ ತಿಲಕ, ಕಿವಿಗೆ ಬಿಳಿಹರಳಿನ ಓಲೆ, ತಲೆತುಂಬಾ ಲೇಸಿನ ಹೂಮಾಲೆ, ತಲೆಯ ಮೇಲೆ ಅರ್ಧಚಂದ್ರಾಕಾರದ ಪುಟ್ಟ ಕಿರೀಟ ಬೇರೆ!! "ತುಂಬಾ ಚೆನ್ನಾಗಿದೆ ನಾಗತ್ತೇ. ನಾನು ಪರ್ಸಿನಲ್ಲಿಟ್ಟುಕೊಂಡು ಜೋಪಾನವಾಗಿ ತಗೊಂಡು ಹೋಗ್ತೀನಿ" ನಾಗತ್ತೆಗೆ ಕೂಗಿ ಹೇಳಿ ಗೊಂಬೆಯನ್ನು ಪ್ಯಾಕ್ ಮಾಡಲು ತಯಾರಿ ನಡೆಸಿದಳು.

ನಿಧಿ ಈಗ ಸಿಡ್ನಿಯ ಏರ್ ಪೋರ್ಟ್ ನಲ್ಲಿ ಚಕ್ ಔಟ್ ಆಗುವ ಮೊದಲ ವಿಧಿವಿಧಾನಗಳನ್ನು ಪೂರೈಸಲು ಕಸ್ಟಮ್ಸ್ ಅಧಿಕಾರಿಯ ಮುಂದೆ ನಿಂತಿದ್ದಾಳೆ. ಅವನು ಇವಳ ಹಾಂಡ್ ಕ್ಯಾರಿ ಬ್ಯಾಗ್ ನಿಂದ ಪಟ್ಟದಗೊಂಬೆಗಳನ್ನು ತೆಗೆಸಿ ತನ್ನ ಟೇಬಲ್ ಮೇಲಿರಿಸಿಕೊಂಡಿದ್ದಾನೆ. ಸಿಡುಕುಮೋರೆಯ ಆ ಅಧಿಕಾರಿಗೆ ಭಾರತದಿಂದ ಬಂದವರೆಲ್ಲಾ ಭಯೋತ್ಪಾದಕರಂತೇ ಕಾಣುತ್ತಾರೆ. ಒರಟು ಧ್ವನಿಯಲ್ಲಿ ಕೇಳುತ್ತಾನೆ " ಈ ಗೊಂಬೆ ಯಾತರಿಂದ ಮಾಡಿರುವುದು"? " ಮರದ್ದು. ಆದರೆ ಅದು ಹೊಸಾಮರದ್ದು ಹಳೆಯದಲ್ಲ, ಅದರಲ್ಲಿ ಫಂಗಸ್ ಬರುವುದಿಲ್ಲ" ನಿಧಿಯ ದೃಢವಾದ ತಣ್ಣನೆಯ ಧ್ವನಿಯನ್ನು ಆಲಿಸಲು ಆತನಿಗೆ ತಾಳ್ಮೆಯೇ ಇಲ್ಲ. "ಏನೂ ಮರದ್ದೇ"? ಹಾವನ್ನು ಕಂಡವನಂತೆ ಬೆಚ್ಚಿ ಬೀಳುತ್ತಾನೆ. ನಿಧಿಯ ಯಾವ ವಿವವರಣೆಯನ್ನೂ ಆಲಿಸದೇ ಬಲವಾಗಿ "ಸಾಧ್ಯವೇಇಲ್ಲ" ಎನ್ನುವಂತೆ ತಲೆಯಾಡಿಸುತ್ತಾನೆ. ನಿಧಿಯ ತಲೆಯಲ್ಲಿ ನೂರಾರು ಮಾತುಗಳು ಉಕ್ಕುತ್ತವೆ.

" ಅಯ್ಯಾ ಇದು ಚಂದನದ ಗೊಂಬೆ, ನನ್ನಮ್ಮನ ಮನೆಯಲ್ಲಿ ನನ್ನಜ್ಜಿಯ ಅಜ್ಜಿಯಕಾಲದ ನೂರಾರು ವರ್ಷಗಳ ಹಳೆಯ ಗೊಂಬೆ ಇವತ್ತಿಗೂ ಹೊಸದರಂತೆ ಇದೆ. ಈ ಮರಕ್ಕೆ ಹುಳ ಹತ್ತುವುದಿಲ್ಲ. ನಿನ್ನ ದೇಶದ ಟೊಳ್ಳುಮರದಂತೆ ಅಲ್ಲ. ಇದನ್ನು ತೇಯ್ದು ಚರ್ಮಕ್ಕೆ ಲೇಪಿಸಿಕೊಂಡು ಸೌಂದರ್ಯ ಪಡೆಯುತ್ತಿದ್ದರು ನಮ್ಮ ಪೂರ್ವಜರು. ಇದನ್ನು ತೇಯ್ದರಸಕ್ಕೆ ಹಾಲು ಸೇರಿಸಿ ಗರ್ಭಿಣಿಯರಿಗೆ ಕುಡಿಸಿ "ಬ್ಲೂಬೇಬಿ" ಹುಟ್ಟುವುದನ್ನು ನಮ್ಮ ಹಿರಿಯರು ತಪ್ಪಿಸುತ್ತಿದ್ದರು" ಬರೀ ಮಾತುಗಳು... ಮಾತುಗಳು... ಆದರೆ ಎಲ್ಲವೂ ಗಂಟಲಲ್ಲೇ. ಆತ ಮತ್ತೊಮ್ಮೆ ಕಠೋರ ಮುಖವನ್ನು ಮಾಡಿಕೊಂಡು "ದಯವಿಟ್ಟು ಕ್ಷಮಿಸು ಈ ಇದನ್ನು ದೇಶದೊಳಕ್ಕೆ ಬಿಡಲು ಸಾಧ್ಯವೇ ಇಲ್ಲ" ಎಂದು ತಲೆಯಾಡಿಸಿ, ಡ್ರಾವರ್ ನಿಂದ ಎರಡು ಟಿಶ್ಯೂ ಪೇಪರ್ ತೆಗೆದು ಗಂಡು ಗೊಂಬೆಯನ್ನು ಒಮ್ಮೆ ತೀಕ್ಷಣವಾಗಿ ನೋಡಿ ಅದರಲ್ಲಿ ಜರಿಗಳು ತುಂಬಾ ಇರುವುದರಿಂದ ಅದು ಸಿಂಥೆಟಿಕ್ ಇರಬಹುದೆಂದು, ಅದರ ಮೇಲೆ ಟಿಶ್ಯೂ ಪೇಪರ್ ಹರಡಿ, ಒಳ್ಳೆ ಅಸಹ್ಯವಸ್ತುವನ್ನು ಹಿಡಿಯುವಂತೆ ಹಿಡಿದು ಅದನ್ನು ಡಿ.ಕೆ ಆಗದಿರುವ ವಸ್ತುಗಳು ಇರುವ ಕಸದ ಬುಟ್ಟಿಗೂ, ಸೀರೆಯ ರೂಪದ ಬಟ್ಟೆಯೇ ಹೆಚ್ಚು ಕಾಣುತ್ತಿರುವ ಹೆಣ್ಣುಗೊಂಬೆಯನ್ನು ಡಿ.ಕೆ ಆಗುವ ವಸ್ತು ಇರುವ ಟ್ರಾನ್ಸ್‌ಪರೆಂಟ್ ಕಸದ ಬುಟ್ಟಿಗೂ ಎಸೆದೇ ಬಿಡುತ್ತಾನೆ. ನಿಧಿಗೆ ತನ್ನ ಮುಂದೆ ಏನಾಗುತ್ತಿದೆ ಎನ್ನುವುದೇ ಇನ್ನೂ ಅರಗಿಸಿಕೊಳ್ಳಲಾರದ ಸ್ಥಿತಿಯಿರುವಾಗಲೇ " ನೀನಿನ್ನು ಹೋಗಬಹುದು... ನೆಕ್ಸ್ಟ್" ಎಂದು ನಿಧಿಯ ಬೆನ್ನ ಹಿಂದಿರುವವರನ್ನು ಕರೆಯುತ್ತಾನೆ. ನಿಧಿ ತನ್ನ ಪಾಸ್‌ಪೋರ್ಟ್ ಇತ್ಯಾದಿಗಳನ್ನು ಬಾಚಿಕೊಂಡು ಪಕ್ಕಕ್ಕೆ ಬಂದು ಕಸದ ಬುಟ್ಟಿಯ ಕಡೆ ಅಧೀರಳಾಗಿ ನೋಡುತ್ತಾಳೆ. ಮುದ್ದಾದ ಪಟ್ಟದಗೊಂಬೆ ಪಕ್ಕಕ್ಕೆ ತಿರುಗಿ ಮಲಗಿ ಅವಳನ್ನೇ ನೋಡುತ್ತಿರುವಂತೆ ಎನಿಸುತ್ತದೆ. ಎಸ್ಕಲೇಟರ್ ನಲ್ಲಿ ಇಳಿಯುತ್ತಾ ಮತ್ತೆ ತಿರುಗಿ ನೋಡುತ್ತಾಳೆ ನಿಧಿ. ಈಗ ಆ ಗೊಂಬೆಯ ಬದಲು ಕಸದ ಬುಟ್ಟಿಯಲ್ಲಿ ನಾಗತ್ತೆ ಮುಖ ಕಂಡಂತಾಗಿ ಕಣ್ಣೀರು ತುಂಬಿಕೊಳ್ಳುತ್ತಾಳೆ.

« ಕಥೆಯ ಮೊದಲ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X