• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೋಗೆರ ದಾಸಪ್ಪ ದಾಸರ ಜೋಗೆಪ್ಪ:

By Staff
|

ನೀರು ನೀರನ್ನು ಆಕರ್ಷಿಸುವಂತೆ, ದುಡ್ಡು ದುಡ್ಡನ್ನು ಆಕರ್ಷಿಸುತ್ತದೆ ಮತ್ತು ದಾರಿದ್ರ್ಯ ದಾರಿದ್ರ್ಯವನ್ನು. ವ್ಯಾಪಾರ ಊರಲ್ಲೆಲ್ಲ ಆದರೂ ದುಡ್ಡು-ಬಂಗಾರ ಸೇರುವದು ಶೇಠಜಿಯ ಖಜಾನೆಗೆಯೇ. ಅದು ಹೇಗೆ ಅಂದರೆ, ಸಂತೆ ಬರುವ ಮೊದಲು ಆ ಬಡ ವ್ಯಾಪಾರಸ್ಥ ಏನಾದರೂ ಅಡವಿಟ್ಟು ಕೆಲವು ಸಾವಿರ ರೂಪಾಯಿ ಶೇಠನಿಂದ ಪಡೆದು (1 ತಿಂಗಳ ಬಡ್ಡಿ ಹಣ ಕಡಿದು ಕೊಡಲಾಗುತ್ತೆ), ಉಳಿದ ರಖಮ್ಮಿನಲ್ಲಿ ಮನೆಯ ಖರ್ಚಿಗೆ ದುಡ್ಡು ಕೊಟ್ಟು ತನ್ನ ಕಚ್ಚಾ ಮಾಲು ಬಟ್ಟೆಯನ್ನು ಇನ್ನೊಬ್ಬ ಶೇಠಜಿಯ ಅಂಗಡಿಯಿಂದ ಖರೀದಿಸಿ, ಹೊಲಿದು, 2/3 ವಾರದ ಸಂತೆಗಳಲ್ಲಿ ಮಾರಿದ್ದಷ್ಟನ್ನು ಮಾರಿ, ನಾಲ್ಕನೇ ವಾರಕ್ಕೆ ಇದ್ದ ಬಟ್ಟೆಗಳನ್ನೆಲ್ಲ ಇನ್ನೊಬ್ಬ ಶೇಠನ ಅಂಗಡಿಗೆ ಲೀಲಾವು ಹಾಕಿ ಅವನು ಕೊಟ್ಟಿದ್ದಷ್ಟನ್ನು ಪಡೆದುಕೊಂಡು ಹೊರಡುತ್ತಾನೆ. ಆ ಹಣದಿಂದ ಉಳಿದ ಸಾಲವನ್ನು ತೀರಿಸಿ, ಸಾಧ್ಯವಾದರೆ ಅಡವಿಟ್ಟ ಸಾಮಾನನ್ನು ಬಿಡಿಸಿಕೊಂಡು, ಸಾಧ್ಯವಿಲ್ಲದಿದ್ದರೆ ಅಡವಿಟ್ಟ ಸಾಮಾನನ್ನು ಬಿಡಿಸಿಕೊಳ್ಳುವ ಕನಸನ್ನು ಕೈ ಬಿಟ್ಟು ಮನೆಗೆ ಹೋಗುವದಕ್ಕೂ ಮುಂಚೆ ಕಷ್ಟಪಟ್ಟ ದೇಹಕ್ಕೆ ತೀರ್ಥ ಹಾಕಿ ಹೀಗ್ಯಾಕೆ ಮಾಡಿದೆ ಎಂದು ಕೇಳಿದ ತಪ್ಪಿಗೆ ಹೆಂಡತಿ-ಮಕ್ಕಳಿಗೆ ನೈವೇದ್ಯ ಕೊಟ್ಟು ಮಲಗಿ ಬಿಟ್ಟರಾಯಿತು. ನೀರು-ನೀರನ್ನೇ ಸೇರಿತು ಅಲ್ಲವೇ...? ಈ ಲಕ್ಷ್ಮಮ್ಮಳೂ ಬಲೂ ಚಂಚಲೆ. ಈ ಶೇಠಜಿಯ ಬಂಧನದಿಂದ ಸ್ವಲ್ಪ ದಿನ ಪಾರಾಗಿ ಝಲ್ಲ-ಝಲ್ಲೆಂದು ಕುಣಿದು ಪುನಃ ದಣಿವಾರಿಸಿಕೊಳ್ಳಲು ಮತ್ತೊಬ್ಬ ಶೇಠಜಿಯ ಹೊಸ ಬಂಗಲೆಯಂಥ ಖಜಾನೆಗೆ ಹೋಗಿ ಸೇರುತಾಳೆ.

ಶೇಠನ ಫೋರ್ಡ ಕಾರು ಕೋಟ್ಯಾಧಿಪತಿಯಂತೆ ಬಾಳುತ್ತಿರುವ ಜೋಗೆರ ದಾಸಪ್ಪ/ದಾಸರ ಜೋಗೆಪ್ಪನ ಅಂಗಡಿ ಮುಂದೆ ಬಂದು ನಿಂತಿತು. ಅಷ್ಟಕ್ಕೆಲ್ಲ ಕಣ್ಣರಳಿಸುವ ಆಸಾಮಿಯೇ ಅದು ! ಶೇಠ್ ಅವನ ಮುಂದೆ ಬಂದು ನಿಂತುಕೊಂಡ. ದಾಸಪ್ಪ ತನ್ನ ಕೈಯಲ್ಲಿದ್ದ ಕೆಲಸ ಮುಗಿದ ಮೇಲೆ ಗೋಣೆತ್ತಿ ನೋಡಿ ಏನೆಂದು ಕೇಳಿದ. ಶೇಠಜಿ ಅವನಿಗೆ ಬರುವ ಅಲ್ಪ ಕನ್ನಡದಲ್ಲಿ ಹಿಂದಿ ಸೇರಿಸಿ , ಸ್ವಲ್ಪ ಹಿಂದಿ ತಿಳಿಯುವ ದಾಸಪ್ಪನಿಗೆ ಅಲ್ಪ-ಸ್ವಲ್ಪವಾಗಿ ವಿವರಿಸಿದ. ಶೇಠ ಮತ್ತು ದಾಸಪ್ಪ ಅಕ್ಕಪಕ್ಕದಲ್ಲಿ ಕುಳಿತು ಕಾರಿನಲ್ಲಿ ಹೊರಟರು. ಶೇಠನ ಮನೆ ಹತ್ತಿರವೇ ಬಂದಿದ್ದೇವೆ ಎಂದು ಅಲಾರ್ಮ್ ಕೊಡುವಂತೆ ತುಪ್ಪದ ಘಮ ಮೂಗಿಗೆ ಬಡಿಯಲಾರಂಭಿಸಿತು. ಮನೆಯೊಳಕ್ಕೆ ಹೊಕ್ಕು ಎಡ,ಬಲ,ನೇರ,ಬಲ,ನೇರ,ಎಡಕ್ಕೆ ನಡೆದು ಹೇಗೋ ಅಂತೂ ಆ ಖಜಾನೆಯ ಕಬ್ಬಿಣದ ಬಾಗಿಲ ಬಳಿ ಬಂದು ನಿಂತರು ಇಬ್ಬರೂ. ಶೇಠ್ ಮಶೀನ್ ಡ್ರಿಲ್ಲ್ ನಿಂದ ಆಗಲೇ ಒಂದೆರಡು ಕೈ ನೋಡಿ ಸೋತಿದ್ದಾನೆ. ಗೋಡೆ ಮುರಿದು ಖಜಾನೆ ಮುರಿಯಬೇಕೂ ಎಂದರೆ ಊರಿಗೆಲ್ಲ ಸುದ್ದಿ ಹಬ್ಬುತ್ತೆ. ಅಲ್ಲಿ ಎಷ್ಟು ಕೆ.ಜಿ ಲಕ್ಷ್ಮಿಯಿದ್ದಾಳೆ ಅನ್ನೋದು ಅವನಿಗೂ ಖಚಿತವಾಗಿ ಗೊತ್ತಿಲ್ಲ. ಕರೆಕ್ಟಾಗಿ ಲೆಕ್ಕ ಹಾಕಿ ಇಟ್ಟರೆ ಬರಕತ್ತಾಗುವುದಿಲ್ಲ ಎಂದು ಯಾವತ್ತಿಗೂ ಒಂದು ಅಜಮಾಸು ಲೆಕ್ಕ ಶೇಠನದು. ಹೀಗಾಗಿ ಗೋಡೆ ಬೀಳಿಸಿ ಖಜಾನೆ ತೆಗೆಯುವ ರಿಸ್ಕು ತೆಗೆದುಕೊಳ್ಳುವಂತಿಲ್ಲ. ಕೊನೆಗೆ ಸೋತು ವಿಚಾರ ಮಾಡಿ ಜೆ.ಡಿ/ಡಿ.ಜೆ ನೇ ಗತಿ ಎಂದು ಅವನ ಹತ್ರ ಬಂದಿದ್ದ.

ಜೆ.ಡಿ/ಡಿ.ಜೆ ಸುಮಾರು 15/20 ನಿಮಿಷ ಖಜಾನೆಯ ಬಾಗಿಲಿಗೆ ಅಲ್ಲಿ ಇಲ್ಲಿ ಬಡಿದು ಕಿವಿಗೊಟ್ಟು ಶಬ್ದ ಕೇಳಿ, ತನ್ನ ಜೊತೆಗೆ ತಂದಿದ್ದ ದೊಡ್ಡ ಕೀಲಿ ಗೊಂಚಲಿನಿಂದ ಕೇವಲ ನಾಲ್ಕಾರು ಕೀಲಿಗಳನ್ನು ಟ್ರೈ ಮಾಡಿ ಖಜಾನೆಯ ಹ್ಯಾಂಡಲ್ಲನ್ನು ಗಾಡಿಯ ಎಕ್ಸಿಲರೇಟರ ತಿರುವಿದ ಹಾಗೆ ತಿರುವಿ, ಮತ್ತೊಂದು ಸಾರಿ ತನ್ನ ಕೈಲಿದ್ದ ಎರಡು ಕೀಲಿಗಳನ್ನು ಹಾಕಿ, ಅವುಗಳನ್ನು ಗುರುತು ಮಾಡಿಕೊಂಡು, ತನ್ನೊಳಗೆ ಮಾತಡಿಕೊಳ್ಳುತ್ತ ರೂಮಿನಿಂದ ಹೊರಗೆ ಬಂದು ನಿಂತ. ಶೇಠಜಿ ಧಡ್ಡನೆ ಬಂದು ಖಜಾನೆ ತೆರೆದೇ ಬಿಟ್ಟಿತೇನೋ ಎಂಬ ಖುಶಿಯಿಂದ ಅದರ ಕಿವಿಯನ್ನು ಹಿಂಡಿದ. ಪ್ರಯೋಜನವಾಗಲಿಲ್ಲ. ಅದು ಇನ್ನೂ ಬಿಚ್ಚಿಕೊಂಡಿರಲಿಲ್ಲ. ಹೊರಗಿನ ರೂಮಿನಲ್ಲಿ ಚುಟ್ಟ ಎಳೆಯುತ್ತ ನಿಂತಿದ್ದ ಜೆ.ಡಿ/ಡಿ.ಜೆ ಕೈಗೆ ನಿರಾಶನಾಗಿ 10 ರ ನೋಟನ್ನು ಕೊಡಲು ಬಂದ. ಜೆ.ಡಿ/ಡಿ.ಜೆ ಅದರ ಕಡೆಗೆ ನೋಡಲೂ ಇಲ್ಲ. ಬರೀ ಕೈಯಿಂದಲೇ ಸನ್ನೆ ಮಾಡಿ "ನಾಳೆ ಇಲ್ಲ ನಾಡಿದ್ದು ಪುನಃ ಬರುವೆ. ನನ್ನ ಕೀಲಿಗಳಲ್ಲಿ ಸ್ವಲ್ಪ ಮಾರ್ಪಾಟು ಮಾಡಬೇಕಾಗಿದೆ, ಆಗ ನಿನ್ನ ಲಾಕರ್ ತೆರೆದ ನಂತರ 500 ರೂಪಾಯಿ ಕೊಡು ಸಾಕು" ಎಂದ. ತಿಜೋರಿ ತೆರೆಯುವ ಆಸೆಯನ್ನೇ ಬಿಟ್ಟಿದ್ದ ಶೇಠ, ಇದರಿಂದ ಖುಶಿಯಾಗಿ 5000ರೂಪಾಯಿ ಕೊಡಿವುದಾಗಿ ಭರವಸೆಯಿತ್ತ.

ಎರಡು ದಿನಗಳ ಬಳಿಕ ಲಕ್ಷ್ಮೀ ಶೇಠಜಿಯ ತಿಜೋರಿಯಿಂದ ಸ್ವತಂತ್ರಳಾದಳು. ಶೇಠ ಖುಶಿಯಿಂದ 500 ರ ಹತ್ತು ನೋಟುಗಳನ್ನು ಅವನ ಮುಂದಿರಿಸಿದ. ಜೆ.ಡಿ/ಡಿ.ಜೆ ಗೆ ತನ್ನ ನಾಲಿಗೆಗಿಂತ,ನಿಯತ್ತಿನಿಂದ ಬೆಲೆ ಬಾಳುವ ವಸ್ತು ಮತ್ತೊಂದಿಲ್ಲ. ಅದರ ಮುಂದೆ ಈ ಹಸಿರು ನೋಟುಗಳು ಕಸ ಕಂಡ ಹಾಗೆ ಅವನಿಗೆ. ಕೇವಲ 1 ನೋಟನ್ನು ಎಳೆದುಕೊಂಡು ಅದನ್ನು ಸುರುಳಿ ಸುತ್ತಿ ಕಿವಿಯಲ್ಲಿ ತಿರುಗಿಸುತ್ತ ಕಸ ತೆಗೆದು ಪುನಃ ತನ್ನ ಅಂಗಿಯ ತೋಳುಗಳಲ್ಲಿ ಮಡಚಿಕೊಂಡ. ಮರುದಿನ ಜೆ.ಡಿ/ಡಿ.ಜೆ ಗೆ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲವೆಂದೆನಿಸಿತು. ಮಲಗಿಕೊಂಡ ತನ್ನ ಮನೆಯಲ್ಲಿಯೇ. ಜೆ.ಡಿ/ಡಿ.ಜೆ ಯ ಮಗನಾದ ನಾಣಿ ವಯಸ್ಸಿಗೆ ಬಂದಿದ್ದ. ತಂದೆಯ ಸಾಮ್ರಾಜ್ಯವನ್ನು ಈ ಯುವರಾಜನೇ ನೋಡಿಕೊಳ್ಳಬೇಕಲ್ಲ. ನಾಣಿಯೂ ಅಷ್ಟಿಷ್ಟು ಕೆಲಸ ಚೆನ್ನಾಗಿಯೇ ಕಲಿತುಕೊಂಡಿದ್ದ. ಇವತ್ತು ತಂದೆಯ ಅಂಗಡಿಗೆ ಬಾರದೆ ಹೋದಾಗ ತಾನೇ ಬಂದು ಅಂಗಡಿ ತೆರೆದ (ಅಂಗಡಿ ತೆರೆದಯೋದು ಅಂದ್ರೆ ನಾಲ್ಕಾರು ಪೆಟ್ಟಿಗೆಗಳನ್ನಿಟ್ಟುಕೊಂಡು ಆ ಗಟಾರಿನ ಬಂಡೆಗಲ್ಲಿನ ಮೇಲೆ ಕುಳಿತುಕೊಳ್ಳುವದು). ಇವತ್ತು ಮತ್ತೊಮ್ಮೆ ಅದೇ ಕಾರು ಬಂದು ನಿಂತಿತು. ಕಾರಿನಿಂದ ಬಂದಿಳಿದವನು ಛೋಟಾ ಶೇಠ. ಅಂದರೆ ಶೇಠಜಿಯ ಮಗ.

ನಾಣಿಯೂ ಜೆ.ಡಿ/ಡಿ.ಜೆ ಯ ಸ್ವಂತ ಮಗನಲ್ಲವೇ ಸ್ವಲ್ಪ ಹೊತ್ತು ಕಳೆದ ಬಳಿಕ ತನ್ನ ಕೈಯಲ್ಲಿದ್ದ ಕೆಲಸ ಮುಗಿದ ಬಳಿಕ ಎದುರು ನಿಂತಿದ್ದ ಕಾರಿನೆಡೆಗೆ ಕಣ್ಣು ಹಾಯಿಸಿದ. ಮಾತುಕತೆಯ ಬಳಿಕ ಕಾರು ಏರಿ ಕುಳಿತ. ಕಾರು ಊರ ಹೊರಗಿನ ಹೆದ್ದಾರಿಯ ಪಕ್ಕದಲ್ಲಿರುವ ಡಾಬಾದಲ್ಲಿ ನಿಂತಿತು. ಒಂದು ಸೋಪಿನ ಗಡ್ಡೆ ಮುಂದು ಮಾಡಿದ ಛೋಟಾ ಶೇಠ. ಅದರಲ್ಲಿ ಜೋರಾಗಿ ಒತ್ತಿ ಕೀಲಿಯ ಅಚ್ಚು ಮಾಡಿಕೊಂಡು ಬಂದಿದ್ದ ಗುಟ್ಟಾಗಿ. ತನಗೆ ತಯಾರು ಮಾಡಿಕೊಡಲು ಕೇಳಿಕೊಂಡ ನಾಣಿಯಲ್ಲಿ. ಅನುವಂಶಿಕವಾಗಿ ಬರುವ ರೋಗಗಳಲ್ಲಿ ದೊಡ್ಡ ರೋಗ "ನೀಯತ್ತಿ" ನದು. ಅದಕ್ಕೇ ಅದು ಛೋಟಾ ಶೇಠನಲ್ಲಿ ಇರಲಿಲ್ಲ. ನಾಣಿಗೆ ಗೊತ್ತಾಗಿ ಹೋಯಿತು, ಇದು ಮೊನ್ನೆ ತನ್ನ ತಂದೆ ತಯಾರಿಸುತ್ತಿದ್ದ ಕೀಲಿ ಎಂದು. ನಾಣಿ ಈ ಕೆಲಸ ಒಪ್ಪಿಕೊಳ್ಳಲಿಲ್ಲ. ಛೋಟಾ ಶೇಠನಲ್ಲಿ ಬಹು ಬೇಗ ಬಡಾ ಶೇಠ ಆಗುವ ಎಲ್ಲ ಲಕ್ಷಣಗಳಿದ್ದವು. ಅವನು ಹಾಗೆಯೇ ಬಂದಿರಲಿಲ್ಲ. ನಾಣಿ ಈ ಮಾತಿಗೆ ಒಪ್ಪುವುದಿಲ್ಲ ಎಂದು ಮೊದಲೇ ಊಹಿಸಿದ್ದ. ಅದಕ್ಕೇ ಸರಿಯಾದ ಮಾಸ್ಟರ್ ಪ್ಲಾನ್ ನೊಂದಿಗೆ ಬಂದಿದ್ದ. ನಾಣಿ ಕೀಲಿ ಮಾಡಿಕೊಡಲು ನಿರಾಕರಿಸಿದರೆ ನಾಳೆ ಸ್ಟೇಶನ್ನಿನಲ್ಲಿ ಈ ಸೋಪು ತೋರಿಸಿ ನಾಣಿ ನಕಲಿ ಕೀಲಿ ತಯಾರಿಸಿ ಎಲ್ಲ ಹಣ ದೋಚಲು ಸಂಚು ಹೂಡಿದ್ದ ಎಂದು ಕಂಪ್ಲೇಂಟು ಕೊಡುವೆನು ಎಂದು ನಾಣಿಗೆ ಹೆದರಿಸಿದ. ನಾಣಿ ಅನ್ಯ ಮಾರ್ಗವಿಲ್ಲದೇ ಒಪ್ಪಿಕೊಂಡು ಕೀಲಿ ತಯಾರಿಸಿ ಕೊಟ್ಟು ಬಿಟ್ಟ. ಒಂಭತ್ತು 500 ರ ನೋಟುಗಳು ನಾಣಿಯ ಕಿಸೆ ಸೇರಿದವು.

ಒಂದೇ ವಾರದಲ್ಲಿ ಗುಲ್ಲು ಎದ್ದಿತು. ಶೇಠಜಿಯ ಖಜಾನೆ ಲೂಟಿಯಾಗಿದೆ. ಶೇಠಜಿ ಗೆ ಜೋಗೆರ ದಾಸಪ್ಪ/ದಾಸರ ಜೋಗೆಪ್ಪನ ಮೇಲೆ ಸ್ವಲ್ಪವೂ ಸಂಶಯವಿಲ್ಲ. ಅವನಿಗೂ ತನ್ನ ಮಗನ ಮೇಲೆಯೇ ಸಂಶಯ. ಹೀಗೊಂದು ದಿನ ನಾಣಿಯ ಪ್ಯಾಂಟಿಗೆ ಅವರಪ್ಪ ಜೆ.ಡಿ/ಡಿ.ಜೆ ಕೈ ಹಾಕಲು 500 ರ ನೋಟುಗಳು ಸಿಕ್ಕವು. ಸಂಶಯವೇ ಉಳಿಯಲಿಲ್ಲ ಜೆ.ಡಿ/ಡಿ.ಜೆಗೆ. ಶೇಠನನ್ನು ಕರೆದುಕೊಂಡು ನೇರವಾಗಿ ಸ್ಟೇಷನ್ನಿಗೆ ಹೋಗಿ ತನ್ನ ಮಗನ ಮೇಲೆಯೇ ಕಂಪ್ಲೇಂಟು ಕೊಡಿಸಿದ. ಅದೇ ದಿನ ನಾಣಿಯ ಬಂಧನವೂ ಆಯಿತು. ಅವನ ಕಿಸೆಯಲ್ಲಿನ ನೋಟುಗಳು ಶೇಠನ ಖಜಾನೆಯವು ಎಂದೂ ಸಾಬೀತಾಯಿತು. ಶೇಠ ತನ್ನ ಮೂರ್ಖತನಕ್ಕೆ ಶಪಿಸಿಕೊಂಡು, ಇಂತಹ ಕಳ್ಳ ಸೂಳೆ ಮಕ್ಕಳು ಈ ಕೆಳಮಟ್ಟದ ಜನರಲ್ಲಿಯೇ ಹುಟ್ಟುತ್ತಾರೆ ಎಂಬ ನಿರ್ಧಾರಕ್ಕೆ ಬಂದ. ಮನೆಗೆ ಬಂದು ಸೋಫಾದಲ್ಲಿ ಕುಳಿತುಕೊಂಡ. ತೂಗು ಹಾಕಿದ ಛೋಟಾ ಶೇಠನ ಪ್ಯಾಂಟಿನ ಕಿಸೆಯಲ್ಲಿ ಒಂದು ಕೀಲಿ ಕೈ ಇಣುಕುತ್ತಿತ್ತು. ಹಾಗೆಯೇ ಪರೀಕ್ಷಿಸೋಣವೆಂದು ನೋಡಿದ. ಇಂತಹ ಕಳ್ಳ ತನ್ನ ಮನೆಯಲ್ಲಿ ಹೇಗೆ ಹುಟ್ಟಿದ..??? ಯಾರ ಹಾದರವಿರಬಹುದು, ತನ್ನದೋ ತನ್ನ ಹೆಂಡತಿಯದೋ ! ! !

ಮೊದಲ ಪುಟ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more