ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಯತ್ತು (ಭಾಗ 2)

By Staff
|
Google Oneindia Kannada News

(ಕಥೆ ಮುಂದುವರಿದಿದೆ...)

ದಿನಾ ಮಾರಮ್ಮನ ಗುಡಿ ಮುಂದೆ 10 ನಿಮಿಷ ಹಂಗೆ ಅಡ್ಡ ಬಿದ್ದಿರುವ…ಗೌಡ್ರ ಮುಂದೆ ಯಾವತ್ತು ನಿಂತಾವನಲ್ಲ,ದೂರದಾಗೆಲ್ಲೊ ಬೆನ್ನು ಬಗ್ಗಿಸಿ ನಿಲ್ಲವ.. ಆಗ ಈಗ ಲಕ್ಷಮ್ಮವ್ವ ಕಾಯಿ ಕೀಳೊಕೆ ಏನಾರ ಕರೆಸಿ,,ಉಣ್ಣಾಕಿಕ್ಕಿದ್ದರೆ ಎಲೆ ಎತ್ಕೊಂಡು ಹಿತ್ತಲಿಗೆ ಓಡಾವ.ಆವತ್ತೊಂದು ದಿನ ಗೌಡ್ರೇ ಕರೆಸಿದ್ರು.

ಛಾವಡಿ ಮ್ಯಾಗೆ ಕೂತ ಗೌಡ್ರಿಂದ ಆಟು ದೂರದಾಗೆ ನಿಂತ ನರಸನ್ನ ..ಗೌಡ್ರು ಕರೆದೆ ಕರೆದ್ರು.."ಬಾರಲ…ಪರವಾಗಿಲ್ಲ..,ಇಲ್ಲೇ ಕುಂತ್ಕಾ ಬಾ..ಯಾರು ದೊಡ್ಡವ್ರು,ಸಣ್ಣೊರು ಅಂತ ಇಲ್ಲ ..ಆ ಮಾದೇಸನ ಮುಂದೆ ಎಲ್ಲಾ ಒಂದೆ .." ಅಂದ್ರು ನರಸ ಹಲ್ಲು ಗಿಂಜಿಕೊಂಡು ಅಲ್ಲೇ ನಿಂತ .. ಈ ಮೂದೇವಿ ಈ ವಿಶ್ಯದಾಗೆ ಮತ್ತೆ ಆ ಹಾಳು ಬೀಡಿ ವಿಶ್ಯದಾಗೆ .., ನನ್ನ ಮಾತು ಕೇಳೊಲ್ಲ ಅಂತ ಗೌಡ್ರಿಗು ಗೊತ್ತಿದ್ದೆಯ..ರು.

"ಮೇಷ್ಟ್ರು ಸಿಕ್ಕಿದ್ರು ಕಣ್ಲ..ಗಂಗವ್ವನ ಹೋಟ್ಲ ತಾವ,ನಿನ್ನ ಹೈಕಳು ಶಾನೆ ಸಂದಾಗಿ ಓದ್ತಾವಂತೆ ಕಣ್ಲ..ಮುಂದೇನು ಮಾಡಿಯ ಅವಕ್ಕೆ" ಅಂದ್ರು.ಅಲ್ಲಿವರೆಗು ಅವನ ಕಡೆ ನೋಡ್ತ ಇದ್ದ ಗೌಡ್ರುನೂವೆ ಅವನ ಗಿಂಜಿದ ಹಲ್ಲು ನೋಡಿ ಒಸಿ ಹಂಗೆ ದೃಷ್ಟಿ ಬದಲಾಯಿಸಿದರು.

"ಏನೈತೆ ಅಪ್ಪ,ನಿಮ್ಮ ತ್ವಾಟದ ಕಾಯಿ ನಿಮ್ಮ ಮನೀಗೆ ತಾನೆ…?, ಏನು ಓದ್ತಾವೋ ಏನೊ..? ನನಗೇನು ತಿಳಿದಾತು..ಇನ್ನೆಲ್ಡು ವರ್ಷ ಕಳದ್ರೆ ನಿಮ್ಮ ಮುಂದೆ ತಂದು ನಿಲ್ಲಿಸ್ತಿನಿ,ನಿಮ್ಮ ನೆರಳಾಗೆ ಬದುಕ್ತಾವೆ.." ಅಂದ.ಗೌಡ್ರಿಗೆ ನರಸನ ಈ ನಿಯತ್ತೇ ಬಾಳ ಕುಶಿಯಾಗೋದು…"ನನ್ನ ಬಿಟ್ರೆ ಲೋಕದಾಗೆ ಏನು ಇಲ್ಲದೋರ ಹಂಗೆ ಹೇಳ್ತಾನೆ ಬಡ್ಡಿ ಮಗ,ಆದ್ರೂವೆ ನಿಜಾನೆ …ಯಾರು ಇದ್ದರು..? " ಇದಲ್ಲ ಈಗ ನೆನೆ ಬೇಕಾಗಿರೋ ಇಸ್ಯ ಅಂತ ಗೌಡ್ರು ತಮ್ಮ ಬಿರುಸು ದನಿಯಾಗೆ ಹೇಳಿದ್ರು..

"ಲೇ, ಅಡಕಸಬಿ ಹಂಗೆ ಮಾತಡಬೇಡ ಕಣ್ಲ.. ಚೆನ್ನಾಗಿ ಓದ್ತಾವೆ ಅಂದ್ರೆ ಇಲ್ಲಿ ತಂದು ದಿನಗೂಲಿ ಹಾಕ್ತಾನಂತೆ ಬೇಕೂಪ..ನಾಳೆ ನನ್ನ ಜೊತೆ ತಾಲೂಕು ಆಪೀಸಿಗೆ ಬಾರಲ..ನಿಂದಂತು ಯಾವ ಜಾತಿನೋ ಕಾಣೆ..ನಿಂದು,ಬಸ್ವಿದು,ಹೈಕಳ್ದು ಒಂದೇ ಜಾತಿನೆಯ ಅಂತ ಒಂದು ಸರ್ಕಿಪಿಕೇಟ್ ಮಾಡ್ಸಿ,ಆ ಹೈಕಳನ್ನ ಅಲ್ಲೇ ಹಾಸ್ಟೆಲ್ ನಾಗೆ ಬಿಡು..ಸರ್ಕಾರ ವ್ಯವಸ್ಥೆ ಮಾಡೈತೆ,ನೀನು ಏನು ಮಾಡಬೇಕಾದು ಇಲ್ಲ..ಅಲ್ಲೇ ಇದ್ದು ಓದಿ ..ಇದ್ಯ,ಬುದ್ಧಿ ಕಲೀಲಿ ಅವಾರ" ಅಂದ್ರು.

ಗೌಡ್ರು ಹೇಳಿದ ಮೇಲೆ ಅದು ಒಳ್ಳೆದಕ್ಕೆ ಅಂತ ನರಸನ ಮನಸ್ಸಿನಾಗೆ ಅಚ್ಚೊತ್ತಿದ್ರು,ಇವನ ಮಕ್ಳು ಗೌಡ್ರ ಸೇವೆ ಮಾಡಿ ಋಣ ತೀರಿಸಬೇಕು ಅಂತ ಅವನ ಆಸೆ…ಹೇಳೇಬಿಡಾವ ಅಂತ ಒಂದು ಸಲ ಯೋಚ್ನೆ ಬಂದ್ರು ..ಗೌಡ್ರಿಗೆ ಉತ್ತರ ಕೊಡೊದಾ..?? ಅಪ್ಪರಾಣೆ ಆಯಾಕಿಲ್ಲ ಅಂತ ತಲೆ ಅಲ್ಲಾಡಿಸಿ ಹೊಂಟ.."ಇರಲ, ಕಾಪಿ ಕುಡಿದು ಹೋಗವಂತೆ" ಅಂತ ಗೌಡ್ರು ಕೂಗೋ ಹೊತ್ತಿಗೆ ದನಿ ಕೇಳದಷ್ಟು ದೂರ ಹೊಂಟು ಹೋಗಿದ್ದ.

ಅಮಾಸೆಗೆ ಒಂದು ಸಲ ಹುಣ್ಣಿಮೆಗೆ ಒಂದು ಸಲ ಸದ್ದಿಲ್ಲದೆ ಕುಡಿದು ಮಲಗಾವ..ಆವತ್ತು 4 ಪ್ಯಾಕೇಟು ಕುಡಿದು, ಜಗಲಿ ಮ್ಯಾಗೆ ಕೂತು ಬಸ್ವಿನ, ಮಕ್ಕಳನ ತಾರ ಮಾರ ಬೈದು, ಬೈದು ..ಉಗುಳೆಲ್ಲ ಖಾಲಿ ಆದಂಗೆ ಆಗಿ..ಅಲ್ಲೇ ಬಿದ್ಕೊಂಡ..ಈ ಮೂದೇವಿಗೆ ಯಾನ ಬಂತ ಯಾವತ್ತು ಇರದ ರ್‍ವಾಗ ಅಂತ ಮಕ್ಕಳನ್ನ ಸಮಧಾನ ಮಾಡ್ಕೊಂಡು ಬಸ್ವಿ ಕದ ಗಟ್ಟಿ ಮಾಡಿ ಕಣ್ಣೀರು ಹಾಕ್ತ ಕೂತಳು.

ಮಕ್ಳು ಹೋದ್ವು,ನಿಂಗಿ ಮ್ಯಾಲು ಅಷ್ಟಕಷ್ಟೆಯಾ ಈಗ..ಗೌಡ್ರು ಸಂಬಳ ಅಂತ ಕೊಡೊ ಕಾಸಿನಾಗೆ ಗಣೇಶ ಬೀಡಿಗೆ ಅರ್ಧ ಸುರೀತಾ ಇದ್ದ.ಬಸ್ವಿ ಉಣ್ಣಾಕೆ ಇಟ್ರೆ ಉಂಡ,ಇಲ್ಲಂದ್ರೆ ಅದರ ಮ್ಯಾಗು ದ್ಯಾಸ ಇಲ್ಲದಂಗೆ ಇರ್ತಿದ್ದ. ಕಾವಲು ಕೆಲ್ಸದಾಗೆ ಏನು ಕಮ್ಮಿ ಆಗಲಿಲ್ಲ.

ಎಲ್ಲಾ ಸರಿ.., ಮುಂಡೇದು… ಬಿಡದಂಗೆ ಬೀಡಿ ಸೇದಿ ಸೇದಿ ಹಾಳಾಯ್ತು…ಅಂತ ಗೌಡ್ರು ಮರುಗಿದರು.ಟಿ.ಬಿ ಕಾಯಿಲೆ ಅಂತ ಅವನು ಹಾಸಿಗೆ ಹಿಡಿದಾಗ ಮಾಡೋ ಪ್ರಯತ್ನ ಎಲ್ಲಾ ಮಾಡಿ ,ಸಾವಿರಾರು ರೂಪಾಯಿ ಖರ್ಚೂ ಮಾಡಿ,ಮೈಸೂರಿನಾಗಿನ ಕೆ.ಆರ್ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರೂವೆ ಉಳಿಲಿಲ್ಲ ಜೀವ..ನಾಳೆ ಸಾವು ಅಂತ ನರಸಂಗೆ ಕನಸೇನಾದ್ರು ಬಿದ್ದಿತ್ತೋ ಏನೋ ….ಅವ್ನ ನೋಡಾಕೆ ಹೋದ ಗೌಡ್ರ ಕಣ್ಣಿನಾಗೆ ಆವತ್ತೇ ಇರಬೇಕು ಕಣ್ಣಿಟ್ಟು ಮಾತಡಿದ್ದು.. "ನನ್ನಪ್ಪ…ನಾ ಸತ್ರೂ ನಿಮ್ಮ ಋಣದಾಗೆ ಇರ್ತೀನಿ….ಇನ್ನಾ ಏಳು ಜನುಮದಾಗು ತೀರಿಸೋಕೆ ಅಯಾಕಿಲ್ಲ ನನ್ನ ಕೈಲಿ.." ಎಲ್ಡು ಕೈಯೆತ್ತಿ ಮುಗಿದ..ಅವನ ಕೈ ಹಿಡಿದ ಗೌಡ್ರು "ಲೇ ಅದೇನು ಮಾತು ಅಂತ ಆಡಿದಿ..ಬಿಡ್ತು ಅನ್ಲ…ಗಡಾನೆ ಹುಸಾರಾಗು,ಈ ಋಣ,ಗಿಣ ಅಂತ ಮಾತಡಾದೊ ನಾನು ಏನು ಮಾಡಿಲ್ಲ ..ತಗಿ ಅತ್ಲಾಗೆ" ಅಂತ ಗದರಿಕೊಂಡರು.

"ನನ್ನಪ್ಪ…." ದೂರದಾಗೆ ಯಾರೊ ಕರೆದಂತಾಯ್ತು..,ಗೌಡ್ರು ಬೆಚ್ಚಿದರು..ಸಣ್ಣಗೆ ಬೆವರು,ಕೋವಿ ಹಿಡಿದ ಕೈ ನಡುಗೋಕೆ ಶುರು ಆಯ್ತು …ಗಂಟಲು ಬಿಗಿದಂತಾಯ್ತು…ನಾಲಿಗೆ ಒಣಗಿ, ಕೂಗಾನ ಅಂದ್ರು ತನಗೆ ಮಾತು ಬಾರದ ಮೂಕ ಅನಿಸ್ತ ಇತ್ತು.ಇನ್ನೊಂದು ಸಲ ಅಲ್ಲಿಂದಾನೆ "ನನ್ನಪ್ಪ…………" ದನಿ ನರಸಂದು ಇದ್ದಂಗೆ ಐತೆ… !! ಗೌಡ್ರ ಮೈ ಮೇಲಿದ್ದ ಬೆಳ್ಳನೆ ಕೂದಲೆಲ್ಲ ನಿಗಿರಿ,ಕಾಲು ಅದುರಿ,ಏನು ಮಾಡಬೇಕು ತೋಚವಲ್ಲದು.. ಮಾರವ್ವ,ಮಲೆ ಮಾದೇಸ,ಈರಭದ್ರ ಸಾಮಿ,ಒಬ್ಬರು ಆದ ಮ್ಯಾಗೆ ಒಬ್ಬರು ಎಲ್ಲರ ನೆನೆಸ್ಕೊಂಡು ಜೀವ ಭಿಕ್ಷೆ ಬೇಡೋಕೆ ನಿಂತರು…ಯಾವು ದೇವ್ರು ಕೇಳ್ತೊ ಗೊತ್ತಿಲ್ಲ..ಅಂತು ಗೌಡ್ರಿಗೆ ಮತ್ತೆ ಧೈರ್ಯ ಬಂತು.. "ಯಾವನ್ಲ ಅವನು..ಏನು ಹುಡುಗಾಟ ಆಡಿಯ..ಬಾರಲ ಮುಂದಕ್ಕೆ ..ಬರ್ತಿಯ ಇಲ್ಲ ನಿನ್ನ ತಿಥಿ ಮಾಡವ " ಅಂತ ಏರು ದನಿನಾಗೆ ಕಿರುಚಿ…ನನ್ನ ದನಿನೇನಾ ಇದು ಅಂತ ಗೌಡ್ರಿಗೆ ಆಶ್ಚರ್ಯ ಆಯ್ತು.

"ನನ್ನಪ್ಪ…" ದನಿ ಸ್ವಲ್ಪ ಹತ್ರ ಆದಂಗೆ ಆಯ್ತು.. "ಮುಲಾಜಿಲ್ಲ,ಇದು ನರಸಂದೆ ದನಿ.." ಗೌಡ್ರು ದೆವ್ವ,ಭೂತದ ಕಥೆ ಕೇಳಿದ್ರು ..ಸಣ್ಣೋರಿದ್ದಾಗ ಬೆಚ್ಚಿ ಬೆಚ್ಚಿ ಹಾಸಿಗೆನು ಬೆಚ್ಚಗೆ ಮಾಡಿದ್ರು..ದೇವ್ರು ಇದ್ದ ಮ್ಯಾಗೆ ದೆವ್ವನು ಇರಬಹುದ ಅಂತ ನಂಬೊದ್ರು,ಅವರಜ್ಜಿ ಯಲ್ಲಮ್ಮ ಹಿಂಗೆ ಒಂದು ಕಥೆ ಹೇಳ್ತ ಒಂದು ಒಳ್ಳೆ ದೆವ್ವ ರಾಜಂಗೆ ಒಬ್ಬಂಗೆ ಸಹಾಯ ಮಾಡಿದ್ದು ಜ್ನಾಪಕ ಬಂತ.."ಅಂದ್ರೆ ಏನು,ಈ ದೆವ್ವ ನರಸಂದೆ ಆಗಿದ್ರೆ….?? ನನ್ನ ಏನು ಮಾಡದ…?" ಅವರೇ ಕೇಳಿಕೊಂಡ ಪ್ರಶ್ನೆಗೆ ಯಾರು ಉತ್ತರ ಕೊಡಲಿಲ್ಲ ..

ಜೀವ ಹೊಗೊದಾದ್ರೆ ಯಾವನು ತಡಿತಾನೆ..ಹೆದರಿ ಅಂತೂ ಸಾಯಕಿಲ್ಲ ಅಂತ ಗಟ್ಟಿ ಮನಸು ಮಾಡಿ .."ಯಾವನ್ಲಾ…ಅವನು ಬೇವರ್ಸಿ ನನ್ನ ಮಗ .. ತಿಮ್ಮೇಗೌಡನ ಹೆದರಿಸೋ ಅಷ್ಟು ಧಿಮಾಕೆನ್ಲ.." ಅಂತ ಕೋವಿ ಎತ್ತಿ ಹಿಡಿದು ಗಾಳಿನಾಗೆ ಒಂದು ಗುಂಡು ಮೇಲಕ್ಕೆ ಹಾರಿಸಿ ಸಮಾಧಾನ ಮಾಡ್ಕೊಂಡ್ರು….ಮತ್ತೆ ಹಕ್ಕಿಗಳ ಸದ್ದು ನಿಂತ ಮೇಲೆ … . " ನನ್ನಪ್ಪ , ನೀವು ಯಾಕೆ ಬರೋಕೆ ಹೋದ್ರಿ ಇಲ್ಲಿಗಂಟ..ಇಷ್ಟು ಹೊತ್ತಿನಾಗೆ … ನಾನು ಇದ್ದನಲ್ಲ ಇಲ್ಲೇ" ಅಂತ ಕೀರಲು ದನಿ ಕೇಳಿಸ್ತು.

ಗೌಡ್ರಿಗೆ ಈಗ ಖಾತ್ರಿ ಆಯ್ತು .."ಲೇ ನರಸ …ನೀನೆ ಏನಲ ಅಲ್ಲಿ " ಅಂತ ಬಿದ್ದು ಹೋಗ್ತಿದ್ದ ಧೈರ್ಯನೆಲ್ಲ ಒಟ್ಟಿಗೆ ಮಾಡ್ಕೊಂಡು ಕೇಳಿದ್ರು.. " ನಾನೇ ಅಪ್ಪ .. ನಿಮ್ಮ ನರಸ ..,ಯಾಕೆ ಬರೋಕೋದ್ರಿ ಸರಿ ರಾತ್ರಿನಾಗೆ,ನೀವು ಹೋಗಿ ಮಲಿಕೊಳ್ಳಿ …ನಾನು ಇದಿನಿ ಅಪ್ಪ " ಮತ್ತದೇ ಕೀರಲು ದನಿ ..ಎಲ್ಲೋ ಮರದ ಹಿಂದೆ ನಿಂತು ಮಾತಾಡಿದಂಗೆ…

ಹೆಗಲ ಮೇಲಿದ್ದ ಟವೆಲ್ ಕೈನಾಗೆ,ಕೋವಿ ಕೆಳಗೆ ಮಾಡ್ಕೊಡು ಬಂದ ಗೌಡ್ರನ ಕಾಯ್ತ ಇದ್ದ ಲಕ್ಷಮವ್ವ "ಏನಾತು , ಯಾಕ ಹಿಂಗೆ ಇದಿರ.?.,ಏನಾರ ಗೊತ್ತಾತ..?" ಒಂದಾದ ಮೇಲೆ ಒಂದು ಪ್ರಶ್ನೆ ಕೇಳ್ತ ಇದ್ದೊರ ಕಡೆ ಗೌಡ್ರು ಒಂದು ಸಲ ನೋಡಿ.. " ಇನ್ನು ಮ್ಯಾಗೆ ಯಾವನು ಕಾವಲು ಕಾಯಂಗಿಲ್ಲ ಹಂಗೆ ಜೋಪಾನ ಮಾಡಿವ್ನಿ.." ಅನ್ನುತ ಹೊಸಲು ದಾಟಿ ಒಳಗೆ ಹೋಗಾಕು,ಅಲ್ಲೇ ಕಾದ್ಕೊಂಡು ಕೂತಿತ್ತೇನು ಅನ್ನೊ ಹಂಗೆ ಬಾಗಿಲ ಮ್ಯಾಲಿನ ಹಲ್ಲಿ ಲೊಚ ಗುಟ್ಟಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X