ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಯತ್ತು

By Staff
|
Google Oneindia Kannada News

ತನ್ನಲ್ಲಿ ತನಗೆ ನಂಬಿಕೆ ಇರಬೇಕು ಅಥವಾ ಇನ್ನೊಬ್ಬರನ್ನು ನಂಬಿ ಬದುಕಬೇಕು.ಎರಡರ ಹೊರತಾಗಿ ಅನ್ಯ ಮಾರ್ಗ ಉಂಟಾ?

ಜಯಂತ್ ಬಾಬು, ಶಿಕಾಗೊ

Niyattu : A short story in Kannada by Jayanth Babu in Chicagoತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ "ಜೀವನದಾಗೆ ಯಾವ ನನ್ನ ಮಗಂಗೂ ಹೆದರಲಿಲ್ಲ..ನೋಡೆಬಿಡಾವ ಅದೇನೋ" ಅಂತ ಮತ್ತೆ ಇನ್ನು ಒಳಕ್ಕೆ ನುಗ್ಗಿದರು.

ಒಂದು ತಿಂಗಳಿನಾಗೆ ಆಗಲೇ ಮೂರು ಜನ ಕಾವಲಿಗೆ ಅಂತ ಇಟ್ಟೋರು ಅದೇನೋ ದೆಯ್ಯ, ಪಿಸಾಚಿ ಅಂತ ಹೆದರಿ ಓಡಿ ಹೋಗಿದ್ದರು."ಎಲ್ಲಾ ನರ ಸತ್ತ ನಾಮರ್ದ ಗಳು, ಯಾವೋ ಪೋಲಿ ಹುಡುಗರು ಕಾಯಿ ಕೀಳೋಕೆ ಬಂದು ಇವರನ್ನ ಹೆದರಿಸಿದಂಗೆ ಐತೆ,ಇವು ಮೂದೇವಿಗಳು ಭಯ ಬಿದ್ದಾವೆ." ಅಂತ ಮಾತಡ್ಕೊಂಡ್ರುನೆ,ಕಾವಲು ಇಲ್ಲದಾಗಲೂ ಯಾವ ಕಳ್ಳತನ ಆಗದೇ ಇರೋದು ನೋಡಿ ಗೌಡ್ರಿಗೆ ಸ್ವಲ್ಪ ಕುಶಿ,ಜಾಸ್ತಿ ದಿಗಿಲಾಗಿತ್ತು.

ಮನೆ ದೇವ್ರು ಜಾತ್ರೆಗೆ ಅಂತ ಮಲೆ ಮಾದೇಸನ ಬೆಟ್ಟಕ್ಕೆ ಹೋಗಿ ಬಂದ ಗೌಡ್ರಿಗೆ ಹೊಸ ಹುರುಪು.."ನಮ್ಮಪ್ಪ ಮಾದೇಸ ಅವ್ನೆ ನನ್ನ ಜೊತೆಗೆ,ಅದೇನೊ ಒಂದು ಕಿಟ ನೋಡಿಬರ್‍ತೀನಿ..ನೀನ್ ಯಾಕ ಹಿಂಗೆ ಆಡಿದಿ,ಏನು ಆಗಾಕಿಲ್ಲ ..ಸುಮ್ಮನಿರಮ್ಮಿ " ಅಂತ ಲಕ್ಷಮ್ಮನಿಗೆ ಭರವಸೆ ನೀಡಿ,ನಾಲ್ಕು ದಪ್ಪ ಬ್ಯಾಟರಿಯ ಸರ್ಚ್ ಲೈಟು,ಕಾಡು ಹಂದಿ ಹೊಡೆಯೋಕೆ ಅಂತ ಇಟ್ಟ ಕೋವಿ ಎತ್ತಿಕೊಂಡು..ಹೆಗಲ ಮೇಲಿನ ಟವಲ್ ನ ಒಂದು ಸಲ ಕೊಡವಿ,ಹೊರಟು ಬಂದಾಗಿತ್ತು.

ಊರಿಗೆ ದೊಡ್ಡ ಸಾಹುಕಾರ ಅಲ್ಲದೇ ಇದ್ರೂನೆ ತಿಮ್ಮೇಗೌಡರು ಸ್ಥಿತಿವಂತರೆ..ಅಜ್ಜ,ಮುತ್ತಜ್ಜ ಕಾಲದ ಆಸ್ತಿನ ಉಳಿಸಿ,ಬೆಳೆಸಿಕೊಂಡು ಬಂದ ಮನೆತನ,ಈ ಮನೆತನದ ಮರ್ಯಾದೆ ಹೆಚ್ಚಿಸಿಕೊಂಡೆ ಬಂದ ತಿಮ್ಮೆಗೌಡ್ರು,ಮನೆ ಜವಾಬ್ದಾರಿ ವಹಿಸಿಕೊಂಡ ಮೇಲೆ ಸಾಕಷ್ಟು ಕಷ್ಟಪಟ್ಟು ಹೊಲ,ಗದ್ದೆ,ತೋಪು ಚೆನ್ನಾಗಿ ಗೇಯೊದಲ್ಲದೆ ಇನ್ನಷ್ಟು ಹೆಚ್ಚಿಸಿದ್ದರು.

ಗೌಡ್ರಿಗೆ ಈ ತೋಪು ಅಂದ್ರೆ ಒಸಿ ಅಕ್ಕರೆ ಜಾಸ್ತಿನೆಯ..ತಮ್ಮದೇ ಅಂತ ಮಾಡಿದ ಮೊದಲ ಆಸ್ತಿ ಇದು..ತೋಪಿಗೆ ಹಾಕಿದ್ದ ಬೇಲಿ,ಬೇಲಿಯ ಒಂದು ಮೂಲೆಗೆ ಅಡಿಕೆ ದಬ್ಬೆಯ ಗೇಟು..ಬೀಗ ತೆಗೆದು ಒಳಗೆ ಬಂದ ಗೌಡ್ರಿಗೆ ನೆನಪಾದದ್ದು.."ಈ ತೋಪಿಗೆ ಕಾಲಿಟ್ಟೇ ಶ್ಯಾನೆ ದಿನ ಆಯ್ತಲ್ಲ" ಅಂತ,ಹಂಗೆ ನೆನಪಾದ ನರಸ,ಅವನು ಇರ್‍ಓಗಂಟ ಈ ತೋಪೆ ಏನು ಊರಿನ ಪೂರ್ವಕ್ಕಿದ್ದ ಅವರ ಹೊಲ,ಗದ್ದೆ,ಎಲ್ಲದರ ಕಾವಲು ಕಾದು,ಒಂದು ದಿನಾನು ಇಂತಾದ್ದು ಇಲ್ಲಿ ಇದ್ದದ್ದು ,ಇಲ್ಲದಂಗೆ ಆಗೈತೆ ಅನ್ನೋ ಮಾತೇ ಇಲ್ಲದಂಗೆ ಮಾಡಿ..ಗೌಡ್ರು ಈ ಕಡೆಯ ಯೋಚನೆ ಬಿಟ್ಟೇ ಬಿಟ್ಟಿದ್ರು.

ದೂರದಾಗೆಲ್ಲೋ ಗೂಬೆ ಕೂಗಿದಂತಾದಾಗ ಗೌಡ್ರು ಬೆಚ್ಚಿ ನೆನಪಿಂದ ಹೊರಗೆ ಬಂದು, ಹಂಗೆ ಸುತ್ತು ಹಾಕ್ತ ಹೊಂಟರು..ಒಣಗಿದ ಎಲೆ ಮೇಲಿಟ್ಟ ಕಾಲಿನ ಸದ್ದು "ಚರ್ ಚರ್" ಅಂತ ಹಿಮ್ಮೇಳ ಕೊಟ್ಟಿತ್ತು.."ಚರ್..ಚರ್..ಚರ್…" ಇದ್ದಕಿದ್ದ ಹಂಗೆ ಪಕ್ಕದಾಗೆ ಯಾರೊ ಓಡಿ ಹೋದಂಗೆ ಆಯ್ತು ಅನಿಸಿ ನಿಂತವು.. ಹೆಜ್ಜೆ.ನನಗೆಲ್ಲೋ ಐಲು ಈ ಕೆಲ್ಸಕ್ಕೆ ಬಾರದವರ ಮಾತು ಕಟ್ಟಿಕೊಂಡು ಏನೇನೊ ಅಂದ್ಕತೀವ್ನಿ ಅಂತ ಸಮಾಧಾನ ಮಾಡ್ಕೊಂಡು,ತೋಳಿನಾಗಿದ್ದ ಮಾರಮ್ಮನ ತಾಯಿತ ಮುಟ್ಟಿ ನಮಸ್ಕಾರ ಮಾಡ್ಕೊಂಡು ಮತ್ತೆ ಮುಂದೆ ಹೊರಟರು.ಚರ್,ಚರ್,ಚರ್……ನಡಿತಿದ್ದ ಗೌಡ್ರು ಮತ್ತೆ ನಿಂತರು.

ಏನೊ ಸದ್ದು…ಮೈಯೆಲ್ಲಾ ಕಿವಿಯಾದಂಗೆ ಕೇಳಿದ್ರು …ಅಲ್ಲೇ ಎಲ್ಲೋ ಸ್ವಲ್ಪ ದೂರದಾಗೆ …ಗಂಡಸು ಅಳೋ ದನಿ..ಎಲ್ಲಿ ಸದ್ದು ಹೊರಗೆ ಬಂದಾತೊ ಅಂತ ತಡ್ಕೊಂಡು,ತಡ್ಕೊಂಡು..ಬಿಕ್ಕಿ ಬಿಕ್ಕಿ ಅತ್ತಂಗೆ.ಇದ್ಯಾವ ಶನಿ ಇದ್ದಾತು ಈ ರಾತ್ರಿನಾಗೆ ಮಾವಿನ ತೋಪಿಗೆ ಬಂದು ಅಳೊ ಅಂತ ಸಂಕಟ ಇದಕ್ಕೇನು ಅಂತ ಗೌಡ್ರು.."ಯಾವನ್ಲ ಅಲ್ಲಿ…ಬಾರಲ ಇತ್ಲಾಗೆ " ಅಂತ ಕೂಗು ಹಾಕಿದರು..ಆ ಕೂಗಿಗೆ ಮರದಾಗಿದ್ದ ಹಕ್ಕಿಗಳು ಎದ್ದು ಕಿರುಚಾಡಿ…ಮತ್ತೆ ಬಂದು ಕೂತವೋ,ಮಲಗಿದವೋ..? ಗೌಡ್ರಿಗೆ ಯಾರು ಕಾಣಲಿಲ್ಲ .

.ಅಳು ಕೇಳಿಸಿದ ಕಡೆ ಕೋವಿ ಮುಂದೆ ಮಾಡಿ ನಡೆದ್ರು..,"ಯಾವ ನನ್ನ ಮಗನೂ ಇಲ್ವಲ್ಲ ..",ಈಗ ಮನಸ್ಸಿನಾಗಿನ ದಿಗಿಲು ಗೌಡ್ರ ಮುಖದ ಮ್ಯಾಗೆ ನೆರಿಗೆ ಹಂಗೆ ಕಾಣಾಕೆ ಶುರು ಆಯ್ತು.ಗೌಡ್ರಿಗೆ ನರಸ ಮತ್ತೆ ನೆನಪಾದ… "ಬಡ್ಡಿ ಮಗ ಇದ್ದಿದ್ರೆ ನನಗೆ ಈ ಪಾಡು ಯಾಕೆ ಬರುತ್ತಿತ್ತು"..

30 ವರ್ಷದ ಕೆಳಗಿನ ಮಾತು,ಗೌಡ್ರಿಗೆ ಮದುವೆಯಾಗಿ ಆರು ತಿಂಗಳಾಗಿತ್ತು,ಯೌವನ, ಮುದ್ದಾದ ಹೆಂಡತಿ, ಹೆಗಲ ಮೇಲಿದ್ದ ಸ್ವಲ್ಪ ಜವಾಬ್ದಾರಿ ಅದೇನೋ ನಡಿತಿದ್ರೆ ಕುಣಿತವರೆ ಅನ್ನೋ ಹಾಗೆ ನಡಿತಾ ಇದ್ರು ..ಆವತ್ತು ಶನಿವಾರ ಸಂತೆಗೆ ಅಂತ ಶ್ರೀರಂಗಪಟ್ಟಣ ಹೋದವರು,ಮೂರು ತುಂಬಿದ ಬ್ಯಾಗು ಹೊರಲಾಗದೆ ಸಂಜೆಯ ಕೊನೆಯ ಬಸ್ಸಿಗೆ ಕಾಯ್ತ,ಪ್ರೈವೇಟ್ ಬಸ್ ಸ್ಟಾಂಡಿನಾಗಿ ನಿಂತಿದ್ದರು.

ಇದ್ದಕಿದ್ದಂಗೆ "ಹಿಡಿರಲಾ,ಬಿಡ್ ಬ್ಯಾಡಿ ನನ್ನ ಮಗನ್ನ.. "ಅಂತ ಕೂಗು ಕೇಳಿಸಿದ ಕಡೆ ನೋಡಿದ್ರೆ, ಒಂದೈದು ಜನ ಒಂದು 15 ವರ್ಷದ ಹುಡುಗನ್ನ ಒಬ್ಬನ ಅಟ್ಟಿಸಿಕೊಂಡು ಇತ್ತಲಾಗೆ ಬರ್ತಾ ಇದ್ದರು,ಏನೋ ಕದ್ದು ಇರಬೇಕು ಬಡ್ಡೆತ್ತದು ಅಂತ ಗೌಡ್ರು ಯೋಚಿಸ್ತಿದ್ದಂಗೆ ಹುಡುಗ ಇವರ ಹತ್ತಿರಕ್ಕೆ ಬಂದಿದ್ದ,ಧಿಡೀರ್ ಅಂತ, ಓಡೋ ಹುಡುಗನ ಕೊಳಪಟ್ಟೆ ಹಿಡಿದ ಗೌಡ್ರು …"ಏನಲ…ಏನು ಕದ್ದೆ .. " ಅಂತ ಕೇಳೋದ್ರಾಗೆ ಅಟ್ಟಿಸಿಕೊಂಡು ಬಂದವರು ಅವನ ಸಾಯಿಸೊ ತರಹ ಗುರಾಯಿಸ್ತ,"ಇಕ್ರಲಾ ಅವಂಗೆ" ಅಂತ ಕೂಗಾಡೋಕೆ ಶುರು ಮಾಡಿದರು.ಗೌಡ್ರು "ಅಯ್ಯಾ ಅದ್ಯಾಕೆ ಹಂಗೆ ಆಡಿರಿ.. ಏನು ಕದ್ದ..ಕಳ್ಳ ಬಡ್ಡಿ ಮಗ,ವಸಿ ಅದಾರ ಹೇಳ್ರಲಾ" ಅಂತ ಗದರಿಕೊಂಡರು.

"ಬಿಡಿ ಗೌಡ್ರೇ ಅವನ,ನನ್ನ ಮಗನ್ನ ಸಿಗಿದು ತೋರಣ ಕಟ್ತೀವಿ" ಅಂತ ಅವರಳೊಗೆ ಸ್ವಲ್ಪ ಚಿಕ್ಕವನು ಅನಿಸೋನು ಗುರುಗುಟ್ಟಿದ."ಕಟ್ಟವಂತೆ,ಬಾಯಿ ಬಿಟ್ಟು ಅದೇನು ಕದ್ದ ಅಂತ ಹೇಳ್ರಲಾ.." ಅಂತ ಸ್ವಲ್ಪ ಗಟ್ಟಿಯಾಗೇ ಕೇಳಿದರು."ಇವರಪ್ಪನ ಮನೆ ಆಸ್ತಿ ಅಂದುಕೊಂಡಾವ್ನ ಕಳ್ಳ ಬಡ್ಡಿ ಮಗ,3 ಪ್ಲೇಟ್ ಇಡ್ಲಿ ತಿಂದು ಓಡಿ ಹೋಗ್ತನೆ..—-ಗುಟ್ಟಿದ –ಮಗ " ಅಂತ ಯದ್ವಾತದ್ವ ಕಿರುಚುತಿದ್ದವರ ಮೇಲೆ ಗೌಡ್ರಿಗೆ ಅದ್ಯಾಕೋ ಶ್ಯಾನೆ ಕ್ವಾಪ ಬಂದು "ಅಲ್ಲ ಕಣ್ರಲ,ಏನೊ ಹಸಿವು ಇಂತಹ ಕೆಲಸ ಮಾಡಾವ್ನೆ,ಅದ್ಕ್ಯಾಕ್ರಲ ಹಿಂಗೆ ಆಡ್ತಿರ..,ತಗಾ ಇದ.., ಎರಡು ರೂಪಾಯಿ..ನಿಮ್ಮ ಮೂರು ಪ್ಲೇಟ್ ಇಡ್ಲಿ ಕಾಸು, ಹೋಗ್ರಲಾ ಸಾಕು"ಅಂತ ಪಂಚೆ ಎತ್ತಿ ನಿಕ್ಕರಿನ ಜೇಬಿನಾಗಿದ್ದ ಕಾಸು ತೆಗೆದು ಕೈ ಚಾಚಿದರು,ಕಾಸು ಇಸ್ಕೊಂಡವನೊಬ್ಬ "ಗೌಡ್ರೇ ಇಂತಾವನೆಲ್ಲ ಹಿಂಗೆ ಬಿಟ್ರೆ ಆಯ್ತದ.,ದುಡಿದು ತಿನ್ನೋಕೆ ಏನಂತೆ..ಒದ್ದು ಒಳಿಕೆ ಹಾಕಬೇಕು ..ನನ್ನ ಮಕ್ಕಳನ" ಅಂತ ಮಾತಡ್ತಲೇ ,ಹುಡುಗನ ಗುರಾಯಿಸ್ತ ಹೊರಟ.

ಆ ಹರಕು ಚಡ್ಡಿ, ತೂತು ಬನಿಯನ್, ಕೆದರಿದ ಕೂದಲು, ಮೈ ತೊಳೆದು ಅದೆಷ್ಟು ದಿನವಾಗಿತ್ತೋ ಅನ್ನೋ ಹಾಗಿದ್ದ ನರಸ ನಡುಗ್ತ ಇದ್ದ…ಹೆಚ್ಚಿಗೆ ಮಾತಾಡಲಿಲ್ಲ… ಗೌಡ್ರೂನೂವೆ, ..ದಿಕ್ಕು ದೆಸೆ ಇಲ್ಲ ಅಂತ ಅವನ ಕಡೆಯಿಂದ ತಿಳಿದು,ಜೊತೆಗೆ ಊರಿಗೆ ಕರ್ಕೊಂಡು ಬಂದಾಗ ಹೊಸಿಲ ತಾವ ಕೂತಿದ್ದ ಅವ್ವ,"ಇದು ಯಾರಲ .. ಎಲ್ಲಿಂದ ಕರ್ಕೊಂಡು ಬಂದೆ ಈ ಮೂದೇವಿಯ " ಅನ್ನೊಕು ಗೌಡ್ರಿಗೆ ಥಟ್ಟನೆ ಹೊಳೆದಿದ್ದು "ಅದೇ ಕಣವ್ವ, ತ್ವಾಟಕ್ಕೆ ಕಾವಲು ಬೇಕಿತ್ತಲ್ಲ,ಈ ಹೈದನ ಕರ್ಕೊಂಡು ಬಂದೀವ್ನಿ..ಇದಕ್ಕು ಯಾರು ದಿಕ್ಕಿಲ್ಲ, ಎಲ್ಡು ಹೊತ್ತು ಅಂಬಲಿ ಕೊಟ್ರೆ ಸಾಕು ಬಿಡು" ಅಂದ. ಅಂದಕೊಂಡದ್ದಕ್ಕಿಂತ ಚೆನ್ನಾಗೆ ಕೆಲಸ ಮಾಡ್ತಿದ್ದ ನರಸನ್ನ ಕಂಡು ಗೌಡ್ರಿಗೆ "ಸದ್ಯ, ಇವನು ಕರ್ಕೊಂಡು ಬಂದಿದ್ದಕ್ಕೆ,ತಪ್ಪು ಕೆಲ್ಸ ಮಾಡಿದೆ ಅಂತ ಅನಿಸದಂಗೆ ಮಾಡಿದನಲ್ಲ" ಅಂತ ಖುಶಿಯಾಯ್ತು.

ಆವತ್ತು ಗೌಡ್ರು ಹಂಗೆ ತೋಪಿನಾಗೆ ನಡಿತ ತ್ವಾಟದ ಮನೆ ತಾವ ಹೋಗಿ ನರಸನ ವಿಚಾರಿಸ್ವ ಅಂತ ಆ ಕಡೆ ನಡೀವಾಗ … ತ್ವಾಟದ ಮನೆ ಹಿತ್ತಲಿನಾಗೆ ನರಸ ತೂತು ಬಿದ್ದಿದ್ದ ಪಟ್ಟ್ ಪಟ್ಟೆ ನಿಕ್ಕರಿನಾಗೆ ಕೂತು ಬಳಪದ ಹಂಗಿದ್ದ ಬಟ್ಟೆ ಸೋಪಿನಾಗೆ ಬಟ್ಟೆ ತಿಕ್ಕಾದ ನೋಡಿ ..ಅದ್ಯಾಕೋ ಗೌಡ್ರ ಕಳ್ಳು ಚುರ್ ಅಂತು. ಯಾರನು ಮಾತಡಿಸದಂಗೆ ತನ್ನ ಪಾಡಿಗೆ ತಾನು ತೋಟದ ಮನೆಯಲ್ಲಿ ಇರ್ತಿದ್ದ ಇವಂಗೆ ಒಂದು ಮದುವೆ ಮಾಡಬೇಕು ಅನಿಸಿ..ಮೂರು ಹುಣ್ಣಿಮೆ ಮುಗಿಯೋ ಮುಂಚೆ ಪಕ್ಕದೂರ ಮಾದಿಗರ ಕರಿಯಣ್ಣನ ಮಗಳು ಬಸ್ವಿಯ ತಂದು ಗಂಟು ಹಾಕಿದ್ರು.

ಹಾಕಿದ ಗಂಟು ಗಟ್ಟಿಯಾಗೇ ಇತ್ತು,ಮೂರು ಮಕ್ಕಳಾದ ಮೇಲೆ ಗೌಡ್ರು ಅವನ ಮುಖಕ್ಕೆ ಉಗಿದು ಆಪರೇಶನ್ ಮಾಡಿಸ್ಕೊ ಅಂತ ಕಾಸಿ ಕೊಟ್ಟು ಅಕಳಿಸಿದ್ರು. ಗೌಡ್ರ ಹೆಸರಿನಾಗೆ ದೀಪ ಹಚ್ಚತಿದ್ದವ ನರಸ ಒಬ್ಬನೆಯ..ಬಸ್ವಿಗು ಅದೇನು ಯಾವ ಗೌಡ್ರನ ಕಂಡ್ರೂನವೇ "ಎಲ್ಲ ರಕ್ತ ಹೀರ್ತಾವೆ ..,ಅವರೇನು ಪುಕಸಟ್ಟೆ ಮಾಡವರ…ಹಗಲು,ರಾತ್ರಿ ಗೇಯಕಿಲ್ವ ನೀನು" ಅನ್ನೋಳು ,ನರಸ..,ಗೌಡ್ರ ವಿಶ್ಯ ಎತ್ತಿದಾಗಲೆಲ್ಲ.ಎಲ್ಡು ಗಂಡು ಹಿಂದೆ ಒಂದು ಹೆಣ್ಣು ಎಲ್ಲಾನೂವೆ ಗೌರ್ ಮೆಂಟ್ ಸ್ಕೂಲಿನಾಗೆ ಓದೋಕೆ ಹೊಗ್ತಿದ್ವು.

ಕಥೆಯ ಮುಂದಿನ ಭಾಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X