ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆವ್ವದ ಮನೆಯಲ್ಲಿ... (ಭಾಗ 4)

By Staff
|
Google Oneindia Kannada News

(ಕಥೆ ಮುಂದುವರಿದಿದೆ...)

ಅವನು ಹೇಳಿದ ವಿಷಯಗಳನ್ನು ನಾನೂ ಓದಿದ್ದೆ. ಆದರೆ ಅವುಗಳ ಬಗ್ಗೆ ನನಗೆ ನಂಬಿಕೆಯಾಗಿರಲಿಲ್ಲ. ಓಮ್ಮೆ ಓರೆನೋಟದಿಂದ ಮೂರ್ತಿಯ ಕಡೆ ನೋಡಿದೆ. ಅವನ ಮುಖದಲ್ಲಿ ನಸುನಗೆ ಹರಡಿತ್ತು. ನಾನು ಒಮ್ಮೆ ಆಕಳಿಸಿದೆ. ಅದನ್ನು ಗಮನಕ್ಕೆ ತೆಗೆದುಕೊಳ್ಳದೆ ದಿವಾಕರ ಹೇಳುತ್ತಲೇ ಹೋದ.

''ನೋಡು, ಎಲ್ಲ ದೆವ್ವಗಳು ಕೆಟ್ಟವಲ್ಲ. ಹೆಚ್ಚಿನವು ತಮ್ಮ ಇರುವಿಕೆ ನಮ್ಮ ಅರಿವಿಗೆ ಬಾರದಂತೆಯೇ ಇದ್ದುಬಿಟ್ಟಿರುತ್ತವೆ ಹಾಗೂ ತಮ್ಮ ಕರ್ಮ ಕಳೆದ ನಂತರ ಪ್ರೇತರೂಪ ತ್ಯಜಿಸಿ ಮತ್ತೆಲ್ಲೋ ಒಂದುಕಡೆ ಮನುಷ್ಯಯೋನಿಯಲ್ಲಿ ಜನ್ಮ ತಾಳುತ್ತವೆ. ಕೆಲವೇ ಕೆಲವು ಪ್ರೇತಗಳು, ಬದುಕಿದ್ದಾಗ ಅಥವಾ ಸಾಯುವ ಗಳಿಗೆಯಲ್ಲಿ ನೋವು ಹಿಂಸೆ ಅನುಭವಿಸಿದಂಥವು ಮಾತ್ರ ನಮಗೆ ತೊಂದರೆ ಕಾಟ ಕೊಡಲು ಪ್ರಯತ್ನಿಸುತ್ತವೆ. ಯಾವುದೇ ದೆವ್ವ ಒಳ್ಳೆಯದೋ ಕೆಟ್ಟದ್ದೋ ಎಂದು ತಿಳಿಯಲು ಒಂದು ಸರಳ ಮಾರ್ಗ ಇದೆ. ಅದು ನಮಗೆ ಬಿಳಿಯದಾಗಿ ಕಾಣಿಸಿದರೆ ಅದು ಒಳ್ಳೆಯ ದೆವ್ವ, ಕಪ್ಪಾಗಿ ಕಂಡರೆ ಅದು ನಿಜಕ್ಕೂ ಕೆಟ್ಟ ದೆವ್ವ,..""

ನನಗೆ ಅವನ ಮಾತುಗಳು ಸಾಕೆನಿಸಿಬಿಟ್ಟವು. ಕೈಯನ್ನು ಅಡ್ಡ ತಂದು ಅವನ ಮಾತನ್ನು ತಡೆದೆ.

''ಇಲ್ಲಿ ಕೇಳು ದಿವೂ, ಇದೆಲ್ಲಾ ಯೂರೋಪಿಯನ್ನರು ಕಟ್ಟಿದ ಕಥೆಗಳು. ತಮ್ಮ ಮೈಬಣ್ಣ ಮಾತ್ರ ಶ್ರೇಷ್ಠತೆಯ ಸಾಕಾರರೂಪ; ಆಫ್ರಿಕನ್ನರ, ನಮ್ಮವರ ಕಪ್ಪು ಕಂದು ಬಣ್ಣಗಳು ಕೀಳು, ಕೆಟ್ಟದ್ದರ ಸಂಕೇತ ಎಂಬ ವಸಾಹತುಶಾಹಿ ವಿಚಾರಧಾರೆವನ್ನು ದೆವ್ವಗಳಿಗೂ ವಿಸ್ತರಿಸುವ ಅವರ ಪ್ರಯತ್ನ ಇದು"" ಎಂದೆ. ನನ್ನ ದನಿ ತುಸು ಏರಿತ್ತೆನಿಸುತ್ತದೆ, ದಿವಾಕರ ಅಪ್ರತಿಭನಾದ. ನನ್ನನ್ನೇ ಒಂದುಕ್ಷಣ ಮಿಕಿಮಿಕಿ ನೋಡಿದ. ಮರುಕ್ಷಣ ಸಾವರಿಸಿಕೊಂಡು ''ಸರಿ ನಿನಗೆ ನಿದ್ದೆ ಬರುತ್ತಿದೆ ಅಲ್ಲವೇ? ನೀನು ಮಲಗು. ಒಂದು ಮಾತು, ಇಲ್ಲಿರುವುದು ಸಾಧ್ಯವಿಲ್ಲ ಎಂದು ಅನಿಸಿದ ಕ್ಷಣ ಮನೆಗೆ ಬಂದುಬಿಡಿ. ಇಲ್ಲೇ ಪಕ್ಕದ ಕವಿತಾ ಬೇಕರಿಯ ಬಳಿ ರಾತ್ರಿಯಿಡೀ ಆಟೋಗಳು ಸಿಗುತ್ತವೆ"" ಎಂದು ಹೇಳಿ ಅವನು ಬಾಗಿಲತ್ತ ನಡೆದ. ನಾನು ಅವನ ಹಿಂದೆಯೇ ಹೋದೆ. ದಿವಾಕರ ಬಾಗಿಲು ತೆರೆಯುವಷ್ಟರಲ್ಲಿ ಹಿಂದಿನಿಂದ ಮೂರ್ತಿ ಕರೆದದ್ದು ಕೇಳೆ ಗಕ್ಕನೆ ನಿಂತ. ನಾನೂ ಮೂರ್ತಿಯ ಕಡೆ ತಿರುಗಿದೆ. ಆಗಿನಿಂದ ಮೌನವಾಗಿ ಕುಳಿತಿದ್ದ ಅವನು ಈಗೇನು ಹೇಳಬಹುದೆಂದು ನಾನೂ ಕುತೂಹಲಗೊಂಡೆ.

ಪಾಯಿಜಾಮದ ಲಾಡಿಯನ್ನು ಸಡಿಲ ಮಾಡಿಕೊಳ್ಳುತ್ತ ಮೂರ್ತಿ ಬಾಯಿ ತೆರೆದ.

''ಇಂಥಾ ಭರ್ಜರಿ ಮನೆಯನ್ನ ಮಾರಹೊರಟಿದ್ದಾರಲ್ಲಯ್ಯ ನಿಮ್ಮ ಮಾವ? ಒಂದು ಕೆಲಸ ಮಾಡೋಣ. ನಿನ್ನ ಹೆಂಡತಿಗೆ ಒಬ್ಬಳು ತಂಗಿ ಇದ್ದಾಳೆ ಅಲ್ಲವಾ? ಹೇಗಾದರೂ ಮಾಡಿ ಅವಳನ್ನ ನನಗೆ ಕೊಡಿಸಿಬಿಡು ಮಾರಾಯ. ಜತೆಗೆ ವರದಕ್ಷಿಣೆ ಅಂತ ಈ ಮನೇನೂ ನನಗೆ ಕೊಡಿಸಿಬಿಡಪ್ಪ. ನೆಮ್ಮದಿಯಾಗಿ ಬದುಕು ಕಳೆದುಬಿಡ್ತೀನಿ.""

ಅವನ ಮಾತು ಕೇಳಿ ನನಗೆ ನಗು ಬಂತು. ನಕ್ಕುಬಿಟ್ಟೆ. ಆದರೆ ದಿವಾಕರ ನಗಲಿಲ್ಲ. ಮೂರ್ತಿಯತ್ತ ನೇರವಾಗಿ ನೋಡುತ್ತಾ ಹೇಳಿದ:

''ಈ ಮನೆಯ ಬಗ್ಗೆ ಇದೇ ಮೋಹ ಬೆಳಗಿನವರೆಗೂ ನಿನ್ನಲ್ಲಿ ಉಳಿದರೆ ಆಗ ಖಂಡಿತಾ ನಾನೇ ನಿಂತು ನಿನಗೂ ಕಸ್ತೂರಿಗೂ ಮದುವೆ ಮಾಡಿಸಿ ನಿನ್ನನ್ನು ನನ್ನ ಷಡ್ಡಕನನ್ನಾಗಿ ಮಾಡಿಕೊಳ್ಳುತ್ತೇನೆ. ಈ ಮನೆಯೂ ನಿನಗೇ.""

ದಿವಾಕರ ಹೊರಟುಹೋದ ನಂತರ ನಾವಿಬ್ಬರೂ ಮಾಸ್ಟರ್‌ ಬೆಡ್‌ರೂಮ್‌ಗೆ ಹೋದೆವು. ಇಪ್ಪತ್ತಡಿ ಉದ್ದ, ಹದಿನೈದಡಿ ಅಗಲದ ವಿಶಾಲವಾದ ಕೋಣೆ ಅದು. ಒಂದು ಪಕ್ಕ ಜೋಡಿ ಮಂಚ, ಹಾಸಿಗೆ. ಮತ್ತೊಂದು ಪಕ್ಕ ಒಂದು ಮೇಜು, ಕುರ್ಚಿ. ಅಷ್ಟರ ಹೊರತಾಗಿ ಬೇರೇನೂ ಇರಲಿಲ್ಲ.

''ಇನ್ನು ಮಲಗೋಣ. ನನಗಂತೂ ಆಯಾಸವಾಗಿಹೋಗಿದೆ. ದೆವ್ವವೇನಾದರೂ ಬಂದರೆ ನನ್ನನ್ನು ಎಬ್ಬಿಸಯ್ಯ"" ಎನ್ನುತ್ತಾ ಮೂರ್ತಿ ಹಾಸಿಗೆಯಲ್ಲುರುಳಿದ. ನಾನು ಬಟ್ಟೆ ಬದಲಿಸಿ ಟಾಯ್ಲೆಟ್ಟಿಗೆ ಹೋಗಿ ಬರುವಷ್ಟರಲ್ಲಿ ಅವನು ಸಣ್ಣಗೆ ಗೊರಕೆ ಹೊಡೆಯಲಾರಂಭಿಸಿದ್ದ.

ದೀಪವಾರಿಸಿ ಹಾಸಿಗೆಯಲ್ಲುರುಳಿದೆ.

ಸುಮಾರು ಹೊತ್ತು ನನಗೆ ನಿದ್ದೆಯೇ ಬರಲಿಲ್ಲ. ಏನೇನೋ ಯೋಚನೆಗಳು. ಹೆಚ್ಚಿನವು ದೆವ್ವಗಳಿಗೆ ಸಂಬಂಧಿಸಿದಂತಹವೇ. ಕೆಲವರ್ಷಗಳ ಹಿಂದೆ ಒಂದು ರಾತ್ರಿ ನಾನೂ ಮೂರ್ತಿಯೂ ಅಮಾವಾಸ್ಯೆಯ ರಾತ್ರಿಯಲ್ಲಿ ಪಾಂಡಿಚೆರಿಯ ಪಕ್ಕದ ಸಮುದ್ರ ತೀರದ ಸುಡುಗಾಡಿನಲ್ಲಿ ಇನ್ನೂ ಉರಿಯುತ್ತಿದ್ದ ಚಿತೆಯೊಂದರ ಪಕ್ಕ ದೆವ್ವಗಳಿಗಾಗಿ ಕಾದು ಕುಳಿತದ್ದೇ ಬೇಡಬೇಡವೆಂದರೂ ಮತ್ತೆ ಮತ್ತೆ ನೆನಪಿಗೆ ಬರುತ್ತಿತ್ತು. ''ಥತ್‌"" ಎಂದುಕೊಂಡು ಮಗ್ಗಲು ಬದಲಿಸಿದೆ.

ಇಡೀ ಮನೆ ಮೌನದಲ್ಲಿ ಮುಳುಗಿತ್ತು. ತೆರೆದಿದ್ದ ಕಿಟಕಿಯಿಂದ ಜೀರುಂಡೆಗಳ ''ರಿkುೕ"" ನಾದ ಒಂದೇ ಸಮನೆ ಕೇಳಿಬರುತ್ತಿತ್ತು. ದೂರದಲ್ಲೆಲ್ಲೋ ಒಂದು ಕಡೆ ಯಾವುದೋ ವಾಹನವೊಂದರ ಕ್ಷೀಣ ಮೊರೆತ.... ಹತ್ತಿರದಲ್ಲೇ ಒಂದು ಕಡೆ ನಾಯಿಯೊಂದು ವಿಕಾರವಾಗಿ ಊಳಿಟ್ಟಿತು... ಹಿಂದೆಯೇ ಯಾವುದೋ ಇರುಳ್ವಕ್ಕಿಯ ರೆಕ್ಕೆಗಳ ಪಟಪಟ ಬಡಿತ... ಮರುಕ್ಷಣ ಎಲ್ಲೆಡೆ ನಿಶ್ಶಬ್ದ. ನಾನು ಮತ್ತೊಮ್ಮೆ ಮಗ್ಗಲು ಬದಲಿಸಿದೆ. ನಿಧಾನವಾಗಿ ಜೋಂಪು ಹತ್ತಿತು.

ರಾತ್ರಿ ಒಂದುಹೊತ್ತಿನಲ್ಲಿ ಗಕ್ಕನೆ ಎಚ್ಚರವಾಯಿತು. ಕಣ್ಣುಬಿಟ್ಟೆ. ಕತ್ತಲಲ್ಲಿ ಹತ್ತಿರದಲ್ಲೇ ಹೆಜ್ಜೆಗಳ ಸಪ್ಪಳ ಕೇಳಿಬಂತು. ಪಕ್ಕಕ್ಕೆ ಹೊರಳಿ ನೋಡಿದೆ. ಮೂರ್ತಿ ಹಾಸಿಗೆಯಲ್ಲಿರಲಿಲ್ಲ. ಓಡಾಡುತ್ತಿರುವವನು ಇವನೇ, ಭೂತವಲ್ಲ ಎಂದು ಅರಿವಾಗಿ ನಗು ಬಂತು. ಅದೇ ಸಮಯಕ್ಕೆ ಸರಿಯಾಗಿ ಅವನ ದನಿ ಕೋಣೆಯ ಬಾಗಿಲ ಬಳಿಯಿಂದ ಕೇಳಿಬಂತು.

''ಓಹ್‌, ನಿನಗೆ ಎಚ್ಚರವಾಗಿಬಿಟ್ಟಿತೇನು? ಸಾರೀ ಕಣಯ್ಯ.""

''ಯಾಕೆ ಎದ್ದದ್ದು?"" ಕೇಳಿದೆ.

''ಏನಿಲ್ಲ, ಸ್ವಲ್ಪ ಬಾತ್‌ರೂಮಿಗೆ ಹೋಗಬೇಕೆನಿಸುತ್ತಿದೆ. ಬಿಯರ್‌ ಕುಡಿದದ್ದು ಅತಿಯಾಯಿತು ಅಂತ ಕಾಣುತ್ತೆ"" ಎನ್ನುತ್ತಾ ಸ್ವಿಚ್ಚೊಂದನ್ನು ಒತ್ತಿ ಡ್ರಾಯಿಂಗ್‌ ರೂಂನಲ್ಲಿ ಬೆಳಕು ಮಾಡಿದ. ಬೆಳಕನ್ನು ತಪ್ಪಿಸಲು ನಾನು ಗೋಡೆಯ ಕಡೆ ತಿರುಗಿದೆ.

ಅವನು ಯಾವುಯವುದೋ ಸ್ವಿಚ್‌ಗಳನ್ನು ಒತ್ತಿದ ಪಟಪಟ ಸದ್ದು ಆ ನೀರವತೆಯಲ್ಲಿ ಸ್ಪಷ್ಟವಾಗಿ ಕೇಳಿಸಿತು. ನಾನೂ ಒಮ್ಮೆ ದೇಹ ಹಗುರ ಮಾಡಿಕೊಂಡರೆ ಒಳ್ಳೆಯದು ಎಂಬ ಯೋಚನೆ ಬಂದು ಮೇಲೇಳುವಷ್ಟರಲ್ಲಿ ಹೊರಗೆ ಹಾಲ್‌ನಿಂದ ಮೂರ್ತಿಯ ವಿಕಾರ ಚೀತ್ಕಾರ ಕೇಳಿಬಂತು!

ಕಥೆಯ ಐದನೆಯ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X