ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆವ್ವದ ಮನೆಯಲ್ಲಿ... (ಭಾಗ 2)

By Staff
|
Google Oneindia Kannada News

(ಕಥೆ ಮುಂದುವರಿದಿದೆ...)

''ಮಾರನೆಯ ರಾತ್ರಿ ಅವರು ಅಲ್ಲಿಗೆ ಹೋದರೇನು?"" ಕೇಳಿದೆ.

''ಹ್ಞೂಂ ಹೋದರು. ಆದರೆ...""

''ಏನು ಆದರೆ...?""

''ಹೋದ ಒಂದು ಗಂಟೆಯಲ್ಲಿ ಆಟೋ ಮಾಡಿಕೊಂಡು ಮನೆಗೆ ಬಂದುಬಿಟ್ಟರು.""

''ಯಾಕೆ ಏನಾಯಿತು? ಭೂತ ಅವರಿಗೂ ದರ್ಶನ ಕೊಟ್ಟಿತೇ?"" ನಗುತ್ತಾ ಪ್ರಶ್ನಿಸಿದ ಮೂರ್ತಿ. ದಿವಾಕರನ ಕಥೆಯನ್ನು ಅವನು ಸ್ವಲ್ಪವೂ ನಂಬಿದಂತಿರಲಿಲ್ಲ.

ಅವನ ಕೀಟಲೆಯ ನಗುವನ್ನು ನಿರ್ಲಕ್ಷಿಸಿ ಹೇಳಿದ ದಿವಾಕರ:

''ತಿರುಗಿ ಬಂದವರು ಆ ರಾತ್ರಿ ಯಾರೊಂದಿಗೂ ಮಾತಾಡಲಿಲ್ಲ. ಹೊಸ ಮನೆಯಲ್ಲಿ ಏನು ನಡೆಯಿತೆಂದು ಯಾರಿಗೂ ಹೇಳಲಿಲ್ಲ. ಕಂಬಳಿ ಹೊದ್ದು ಮಲಗಿಬಿಟ್ಟರು. ಮಾರನೆಯ ಬೆಳಿಗ್ಗೆ ಎದ್ದವರೇ ಆ ಮನೆಗೆ ಯಾರೂ ಹೋಗುವುದು ಬೇಡ, ಎಷ್ಟಕ್ಕೆ ಹೋಗುತ್ತದೋ ಅಷ್ಟಕ್ಕೆ ಅದನ್ನ ಮಾರಿಬಿಡೋಣ ಅಂದರು. ಆ ಗಳಿಗೆಯಿಂದ ಅವರದ್ದು ಅದೊಂದೇ ರಾಗ."

ನಮ್ಮ ನಡುವೆ ಕೆಲಕ್ಷಣಗಳವರೆಗೆ ಮೌನ ಮುಸುಕಿತು. ದಿವಾಕರನ ಕಥೆಯ ಸತ್ಯಾಸತ್ಯತೆಯ ಬಗ್ಗೆ ನಾನು ಯೋಚಿಸುತ್ತಿರುವಂತೇ ಮೂರ್ತಿ ದಿವಾಕರನತ್ತ ನೋಡುತ್ತಾ ಪ್ರಶ್ನಿಸಿದ:

''ಅಂದರೆ ಈಗ ಅಲ್ಲಿ ಯಾರೂ ಇಲ್ಲ?""

''ಇಲ್ಲ.""

''ಅಲ್ಲಿ ದೀಪ, ನೀರು ಇದೆ ತಾನೆ?""

''ಹ್ಞೂಂ ಇದೆ. ಹೊಸದಾಗಿ ಕಾಪರ್‌ ವಯರಿಂಗ್‌ ಮಾಡಿಸಿ ಎಲ್ಲ ಕೋಣೆಗಳಲ್ಲೂ ಟ್ಯೂಬ್‌ ಲೈಟ್‌ ಹಾಕಿಸಿದ್ದೇವೆ.""

ನಾನು ಕುತೂಹಲಗೊಂಡು ಆಲಿಸುತ್ತಿದ್ದಂತೇ ಮೂರ್ತಿಯ ಮುಂದಿನ ಪ್ರಶ್ನೆ ಬಂತು.

''ಅಲ್ಲಿ ಮಲಗಲಿಕ್ಕೆ ಚಾಪೆ ದಿಂಬುಗಳೇನಾದರೂ ಇವೆಯೇ?""

ದಿವಾಕರನ ಉತ್ತರ ಕ್ಷಣ ತಡೆದು ಬಂತು.

''ಚಾಪೆ ಯಾಕೆ? ಹೊಸಾ ಮಂಚ ಹಾಸಿಗೆಗಳೇ ಇವೆ. ಅವಷ್ಟೇ ಅಲ್ಲ, ಹೊಚ್ಚಹೊಸಾ ಸೋಫಾ ಸೆಟ್‌, ಕುರ್ಚಿ ಮೇಜುಗಳೆಲ್ಲಾ ಇವೆ. ಹೊಸ ಮನೆಗೆಂದೇ ಮಾವನವರು ಎಲ್ಲವನ್ನೂ ಹೊಸದಾಗಿ ಮಾಡಿಸಿದರು. ಗೃಹಪ್ರವೇಶವಾದ ಒಂದೆರದು ದಿನಗಳಳಿಂದಲೇ ಅಲ್ಲಿ ವಾಸಿಸುವ ಉದ್ದೇಶ ಅವರಿಗಿತ್ತು. ಅದಿರಲಿ, ಇದೆಲ್ಲವನ್ನೂ ನೀನು ಯಾಕೆ ಕೇಳುತ್ತಿದ್ದೀಯ?""

ಅವನ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡದೇ ಮೂರ್ತಿ ನನ್ನ ಕಡೆ ತಿರುಗಿದ.

''ನೋಡಯ್ಯ, ಹಾಂಟೆಡ್‌ ಹೌಸ್‌ನಲ್ಲಿ ಒಂದು ರಾತ್ರಿ ಕಳೆಯೋ ಅವಕಾಶ! ಇವನು ಹೇಳೋದನ್ನ ಕೇಳಿದ್ರೆ ಆ ಮನೇಲಿ ಏನಾದ್ರೂ ಇರಬೋದೇನೋ ಅನ್ನೋ ಅನುಮಾನ ನಂಗೂ ಬರ್ತಾ ಇದೆ. ದೆವ್ವವೊಂದನ್ನ ನೋಡ್ಬೇಕು ಅನ್ನೋ ನಮ್ಮ ಆಸೆ ಈವತ್ತು ನೆರವೇರಬೋದೇನೋ. ಏನಂತೀ?""

ಒಂದು ಕಾಲದಲ್ಲಿ ದೆವ್ವ ಭೂತಗಳಲ್ಲಿ ನನಗೆ ನಂಬಿಕೆ ಇತ್ತು. ಆದರೆ ಅವು ಜನ ಹೇಳುವಷ್ಟು ಅಪಾಯಕಾರಿಯಾಗಿರಲಾರವು ಎಂಬ ಅನುಮಾನವೂ ನನ್ನಲ್ಲಿತ್ತು. ದೆವ್ವಗಳ ಬಗ್ಗೆ ಪ್ರಚಲಿತವಿರುವ ಕಥೆಗಳೆಲ್ಲವೂ ಕೇವಲ ಕಲ್ಪನೆ, ಅವ್ಯಾವುವೂ ಸತ್ಯಸಂಗತಿಗಳಲ್ಲ ಎಂಬುದು ನನ್ನ ಭಾವನೆ. ಮೂರ್ತಿಗೆ ದೇವರು, ದೆವ್ವ ಎರಡರ ಅಸ್ತಿತ್ವದಲ್ಲೂ ನಂಬಿಕೆ ಇರಲಿಲ್ಲ. ನಾವಿಬ್ಬರೂ ಸೇರಿ ದೆವ್ವವನ್ನು ಭೇಟಿಯಾಗಬೇಕು ಎಂದು ತಿರುಗದ ಜಾಗವಿಲ್ಲ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿನ ಸ್ಮಶಾನದಲ್ಲಿ ಕುಳಿತು ದೆವ್ವದ ನಿರೀಕ್ಷೆಯಲ್ಲಿ ಹಲವು ಅಮಾವಾಸ್ಯೆಯ ರಾತ್ರಿಗಳನ್ನು ಕಳೆದಿದ್ದೆವು! ಇದೇ ಕೆಲಸವನ್ನು ಪಾಂಡಿಚೆರಿಯ ಹೊರವಲಯದ ಸಮುದ್ರತೀರದಲ್ಲಿನ ಸುಡುಗಾಡಿನಲ್ಲೂ ಮಾಡಿದ್ದೆವು. ದೆವ್ವವಿದೆ ಎಂದು ಜನ ಹೇಳುತ್ತಿದ್ದ ಹಳೆಯ ಫ್ರೆಂಚ್‌ ಕಟ್ಟಡವೊಂದರಲ್ಲಿ ವಾರಗಟ್ಟಲೆ ಇಬ್ಬರೂ ಕಳೆದಿದ್ದೆವು. ಆದರೆ ಯಾವ ದೆವ್ವವೂ ನಮಗೆ ಕಾಣಿಸಿಕೊಂಡಿರಲಿಲ್ಲ. ಕೊನೆಗೆ ಬೇಸತ್ತು ದೆವ್ವ ಭೂತಗಳೆ ಇಲ್ಲ, ಅದೆಲ್ಲವೂ ಭೀತ ಮನಸ್ಸಿನ ಕಲ್ಪನೆಯ ಅತಿರೇಕಗಳು ಎಂಬ ನಿರ್ಧಾರಕ್ಕೆ ಬಂದಿದ್ದೆವು. ಆ ವಿಷಯದ ಬಗ್ಗೆ ಮಾತಾಡುವುದನ್ನು ನಾವು ಸರಿಸುಮಾರು ನಿಲ್ಲಿಸಿಯೇ ಬಿಟ್ಟಿದ್ದೆವು. ಈಗ ದಿವಾಕರನ ಮಾತು ಕೇಳಿ ನನ್ನಲ್ಲಿ ಮತ್ತೆ ಕುತೂಹಲದ ಅಲೆಯೆದ್ದಿತು. ಹೀಗಾಗಿ ಮೂರ್ತಿಯ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ''ಹ್ಞೂಂ"" ಎನ್ನುವಂತೆ ಮುಗಳ್ನಕ್ಕೆ.

ನನ್ನ ಸಮ್ಮತಿ ದೊರೆತೊಡನೆ ಮೂರ್ತಿಯ ಮುಖ ಅರಳಿತು. ನಮ್ಮಿಬ್ಬರನ್ನೇ ಬೆರಗಿನಿಂದ ನಿರುಕಿಸುತ್ತಿದ್ದ ದಿವಾಕರನತ್ತ ತಿರುಗಿ ಹೇಳಿದ:

''ನೋಡು ದಿವೂ, ನಾವು ಮೈಸೂರಿಗೆ ಬಂದಿರೋದಕ್ಕೆ ಮನೋಜನ ಮದುವೆ ಒಂದು ನೆಪ ಅಷ್ಟೇ. ಹುಟ್ಟಿ ಬೆಳೆದ ಊರಿನಲ್ಲಿ ನಾಲ್ಕು ದಿನ ಇದ್ದು ಹಳೆಯ ಪರಿಚಯದವರನ್ನೆಲ್ಲ ಒಮ್ಮೆ ನೋಡಿ ಹೋಗೋಣ ಅನ್ನೋದು ಮುಖ್ಯ ಉದ್ದೇಶ. ಒಂದು ವಾರ ಇಲ್ಲೇ ಕ್ಯಾಂಪ್‌ ಹಾಕೋ ಪ್ಲಾನ್‌ ನಮ್ಮದು, ಅಷ್ಟು ದಿನಗಳನ್ನೂ ನಿನ್ನ ಮನೆಯಲ್ಲಿ ನಿನ್ನ ಹೆಂಡತಿ ಮಕ್ಕಳಿಗೆ ತೊಂದರೆ ಕೊಟ್ಟುಕೊಂಡು ಹೇಗಪ್ಪಾ ಕಳೆಯೋದು ಅನ್ನೋ ಯೋಚನೆ ಇತ್ತು. ಈಗ ಈ ದೆವ್ವದ ಮನೆಯ ವಿಚಾರ ಕೇಳಿದೊಡನೆ ನನಗೆ ಸಮಾಧಾನವೇ ಆಯ್ತು. ಹೇಗೂ ಅದೀಗ ಖಾಲಿಯಾಗೇ ಇದೆ. ಇನ್ನೊಂದು ವಾರದಲ್ಲಿ ಅದಕ್ಕೆ ಗಿರಾಕಿ ಸಿಕ್ಕಿ ನೀವದನ್ನ ಮಾರೋದು ಅಸಂಭವ ಅಲ್ಲವೇ? ಒಂದುವಾರ ನಾವಿಬ್ಬರೂ ಅಲ್ಲಿ ಆರಾಮವಾಗಿ ಇರುತ್ತೇವೆ. ನಮಗೆ ಹೇಳಿಮಾಡಿಸಿದ ಜಾಗ ಅದು.""

ದಿವಾಕರ ಒಂದುಕ್ಷಣ ಬೆಚ್ಚಿದ. ''ಮೂರ್ತಿ ನಿನಗೆ ತಲೆಕೆಟ್ಟಿದೆಯೇನು?"" ಹೆಚ್ಚುಕಡಿಮೆ ಅರಚಿದ. ''ಅದು ದೆವ್ವದ ಮನೆ ಕಣೋ. ಅಲ್ಲಿ ಒಂದುವಾರ ಇರ್ತೀನಿ ಅಂತೀಯಲ್ಲ?""

ಮೂರ್ತಿ ನಕ್ಕುಬಿಟ್ಟ.

''ನೋಡು ದಿವೂ, ಅಲ್ಲಿ ದೆವ್ವವಿದೆ ಎಂದೇ ತಿಳಿಯೋಣ, ನಿನ್ನ ಮಾತನ್ನ ನಂಬೋದಾದ್ರೆ ಅದರ ಅನುಭವ ನಿನಗೆ, ನಿನ್ನ ಭಾವಮೈದುನನಿಗೆ ಹಾಗೂ ನಿಮ್ಮ ಮಾವನವರಿಗೆ- ಮೂವರಿಗೂ ಆಗಿದೆ. ಆದರೆ ಆ ದೆವ್ವದಿಂದ ನೀವು ಮೂವರಿಗೂ ಏನೂ ಅಪಾಯವಾಗಿಲ್ಲ ಅನ್ನೋದು ನಿಜ ತಾನೆ? ನಿಮಗೆ ಹಾನಿ ಮಾಡದ ಅದು ನಮಗೂ ಯಾವ ಹಾನೀನೂ ಮಾಡೋದಿಲ್ಲ ಅಂತ ನಂಬಬೋದು ಅಲ್ಲವಾ?""

ಕಥೆಯ ಮೂರನೆಯ ಭಾಗ »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X