• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಚಾರ

By Staff
|

-1-

ಸುಮನ ಆಫೀಸ್‌ ತಲುಪಿದಾಗಲೇ ಸಮಯ ಒಂಭತ್ತು ಗಂಟೆಯಾಗಿತ್ತು. ಇನ್ನರ್ಧ ಗಂಟೆಗೆ ಗ್ರೂಪ್‌ ಮೀಟಿಂಗ್‌ ಶುರುವಾಗುವುದರಲ್ಲಿತ್ತು. ಈ ವಾರ ಯಾರು ಯಾರು ಎಷ್ಟೆಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ, ಅವರ ಕಾರ್ಯಗಳಲ್ಲಿ ಏನಾದರೂ ಎಡರು-ತೊಡರುಗಳು ಬಂದಿವೆಯೆ, ಹಾಗೆ ಬಂದಿದ್ದರೆ ಅವಕ್ಕೇನಾದರೂ ತಾಂತ್ರಿಕ ಪರಿಹಾರಗಳೇನಾದರೂ ಇವೆಯೆ - ಎಂಬುದನ್ನು ಸಿಂಹಾವಲೋಕನ ಮಾಡಲು ಪ್ರತಿ ವಾರ ನಡೆಸುತ್ತಿದ್ದ ಮೀಟಿಂಗ್‌ಗಳಲ್ಲಿ ಅದು ಒಂದಾಗಿತ್ತು. ಸುಮನ ತಾಂತ್ರಿಕವಾಗಿ ಸಮರ್ಥ ಇಂಜಿನಿಯರ್‌ ಆಗಿದ್ದರಿಂದ, ಪ್ರತಿ ವಾರದ ಮೀಟಿಂಗ್‌ನಲ್ಲಿ ಅವಳ ಕೆಲಸದ ಪರಾಮರ್ಶೆ ಸುಸೂತ್ರವಾಗಿಯೇ ನಡೆಯುತ್ತಿತ್ತು. ತನಗೆ ವಹಿಸಿದ ಕೆಲಸಗಳನ್ನು ಸಮರ್ಪಕವಾಗಿ, ಮೈಲಿಗಲ್ಲಿಗನುಗುಣವಾಗಿ - ಕಾಲಕ್ಕೆ ಸರಿಯಾಗಿ - ಮಾಡಿ ಮುಗಿಸುತ್ತಿದ್ದುದರಿಂದ, ಮೀಟಿಂಗ್‌ ಬಗ್ಗೆ ಅವಳಿಗೆ - ತನ್ನ ಗುಂಪಿನ ಇತರ ಕೆಲವು ಅಭಿಯಂತರಿಗಿರುವಂತೆ - ಭಯವಿರುತ್ತಿರಲಿಲ್ಲ. ಒಂದು ಅತಿ ದೊಡ್ಡ ಸಾಫ್ಟ್‌ವೇರ್‌ ಪ್ರಾಡಕ್ಟ್‌ನ ವಿನ್ಯಾಸ ಮತ್ತು ಅಭಿವೃದ್ಧಿ ಮಾಡುತ್ತಿದ್ದ ಆ ಸಂಸ್ಥೆಯಲ್ಲಿ ನೂರಾರು ಇಂಜಿನಿಯರಗಳು ಕೆಲಸ ಮಾಡುತ್ತಿದ್ದರು. ಒಂದು ಕೆಲಸವನ್ನು ಅನೇಕ ಚಿಕ್ಕ ಚಿಕ್ಕ ಭಾಗಗಳಾಗಿ ವಿಂಗಡಿಸಿದಾಗ, ಅದರಲ್ಲಿ ಒಂದು ಅಂಶವನ್ನು ಸುಮನ ರಚಿಸುತ್ತಿದ್ದಳು. ಇನ್ನು ನಾಲ್ಕು ತಿಂಗಳಿಗೆ ಆ ಪ್ರಾಡಕ್ಟ್‌ಅನ್ನು ಬಿಡುಗಡೆ ಮಾಡುವ ಉದ್ದೇಶವಿದ್ದುದರಿಂದ, ಸಹಜವಾಗಿಯೇ ಕೆಲಸ ಹೇರಳವಾಗಿತ್ತು; ಕಾಲದ ಜೊತೆ ಓಡಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿತ್ತು. ಇನ್ನುಳಿದ ಅರ್ಧ ಗಂಟೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲು, ತಾನು ಹಿಂದಿನ ದಿನ ಬರೆಯುತ್ತಿದ್ದ 'ಪ್ರೋಗ್ರಾಂ"ಅನ್ನು ಮುಂದುವರೆಸತೊಡಗಿದಳು. ಬರೆಯುವ ಭಾಷೆ 'ಜಾವಾ" ಅವಳಿಗೆ ಕರಗತವಾದ್ದರಿಂದ, ಬರಹ ಸುಲಲಿತವಾಗಿ ಓಡತೊಡಗಿತು; ಅರ್ಧ ಗಂಟೆ ಹೋದದ್ದೇ ತಿಳಿಯಲಿಲ್ಲ. ಆ ಅಮೇರಿಕನ್‌ ಕಂಪನಿಗಳಲ್ಲಿ ಸರಿಯಾದ ಸಮಯಕ್ಕೆ ಮೀಟಿಂಗ್‌ಗೆ ಹೋಗುವುದು ಶಿಷ್ಟಾಚಾರವಾದ್ದರಿಂದ, 9:30ಕ್ಕೆ ಸರಿಯಗಿ ಕಾನ್‌ಫೆರೆನ್ಸ್‌ ರೂಂನಲ್ಲಿ ಹಾಜರಾದಳು.

ಆ ಮೀಟಿಂಗನ್ನು ನಡೆಸುತ್ತಿದ್ದವರು ಅವಳ ನಿರ್ವಾಹಕರಾದ ಮೈಕೇಲ್‌. ಅಲ್ಲಿನ ಆಗುಹೋಗುಗಳನ್ನು ದಾಖಲಿಸುತ್ತಿದ್ದವರು ಇನ್ನೊಬ್ಬ ಇಂಜಿನಿಯರ್‌; ಕೆಲಸದ ಪ್ರಗತಿಯ ಮೇಲೆ ನಿಗಾ ಇಡಲು ಆ ದಾಖಲೆ ಉಪಯೋಗಕ್ಕೆ ಬರುತ್ತಿತ್ತು. ತನ್ನ ಗುಂಪಿನವರೆಲ್ಲಾ ಬಂದಿದ್ದಾರೆಂದು ಖಾತ್ರಿ ಮಾಡಿಕೊಂಡು, ಮೈಕೇಲ್‌ ಮೀಟಿಂಗ್‌ ಆರಂಭಿಸಿದ. ಒಬ್ಬರಾದ ಮೇಲೊಬ್ಬರು ಸರತಿಯಂತೆ ತಮ್ಮ ಕೆಲಸದ ಪ್ರಗತಿಯ ಬಗ್ಗೆ ವರದಿ ಒಪ್ಪಿಸತೊಡಗಿದರು. ಸುಮನ ತನ್ನ ಪ್ರಗತಿಯನ್ನು ನೈಜವಾಗಿ ಹಾಗೂ ಚುಟುಕಾಗಿ ಹೇಳಿದಳು; ತನ್ನ ಕೆಲಸದಲ್ಲಿ ಅನೇಕ ಸಂಕಷ್ಟಗಳು ಬಂದಿದ್ದರೂ, ಅವುಗಳನ್ನು ತಾನು ಹೇಗೆ ಬಗೆಹರಿಸಿದೆ ಎಂದು ವಿಶದೀಕರಿಸಲಿಲ್ಲ. ತನ್ನ ತುತ್ತೂರಿಯನ್ನು ತಾನೇ ಊದಿಕೊಂಡು, ತನ್ನ ಗುಣಗಾನ ಮಾಡಿಕೊಳ್ಳುವ ಪ್ರವೃತ್ತಿ ಅವಳ ಸರಳ ಸ್ವಭಾವದ ಭಾಗವಾಗಿರಲಿಲ್ಲ. ತನ್ನ ನೈಜ ಯೋಗ್ಯತೆಯನ್ನು ಮಾಡಿ ಮುಗಿಸಿದ ಕೆಲಸದ ಪರಿಪೂರ್ಣತೆ ಸಾರಬೇಕೇ ವಿನಃ, ತಾನೇ ಕೊಚ್ಚಿಕೊಳ್ಳುವಂತಾಗಬಾರದೆಂಬುದೇ ಅವಳ ಧೃಡ ನಂಬಿಕೆಯಾಗಿತ್ತು.

ಅವಳ ನಂತರದ ಸರದಿ, ಅವಳ ಸಹ ಕೆಲಸಗಾರ ಡಿಕ್‌ನದು ಆಗಿತ್ತು. ಮಾಡಿದ ಕೆಲಸ ಎಷ್ಟೇ ಕಡಿಮೆಯಾಗಿದ್ದರೂ, ಅದರ ಮಹತ್ವವನ್ನು ಬಣ್ಣ ಹಚ್ಚಿ ಹೇಳುವ ಕಲೆಯನ್ನು ಅವನು ಚೆನ್ನಾಗಿ ಕರಗತ ಮಾಡಿಕೊಂಡಿದ್ದ. ಕಳೆದ ವಾರ ತಾನು ಸಮರ್ಪಕವಾಗಿ ಮಾಡಿ ಮುಗಿಸಿದ ಕೆಲಸ ಏನು, ಅದರಲ್ಲಿ ಬಂದೊದಗಿದ ಸಮಸ್ಯೆಗಳನ್ನು ತಾನು ಹೇಗೆ ಸಮರ್ಥವಾಗಿ ಎದುರಿಸಿ ಪರಿಹರಿಸಿದೆ ಎಂದು ವಿವರಿಸಿದ; ಇಡೀ ಪ್ರಾಡಕ್ಟ್‌ನಲ್ಲಿ ತಾನು ಅಭಿವೃದ್ಧಿ ಪಡಿಸುತ್ತಿರುವ ಭಾಗ ಮಾನವನ ದೇಹದಲ್ಲಿ ಹೃದಯವಿದ್ದಂತೆ ಎಂದು ಹೇಳುವುದನ್ನು ಮರೆಯಲಿಲ್ಲ.

ಆ ಗುಂಪಿನ ಇತರ ಸದಸ್ಯರೆಲ್ಲರೂ ತಮ್ಮ ತಮ್ಮ ಕೆಲಸಗಳ ಬಗ್ಗೆ ವರದಿ ಒಪ್ಪಿಸಿದ ನಂತರ, ಅಂದಿನ ಮೀಟಿಂಗ್‌, ಯಾವುದೇ ಗಮನ ಸೆಳೆಯುವ ಘಟನೆಗಳಿಲ್ಲದೆ ಮುಗಿಯಿತು.

-2-

ಇನ್ನೊಂದು ದಿನ ಸುಮನ 'ಕ್ಯೂಬ್‌"ನಲ್ಲಿ ಕುಳಿತು ತಾನು ಬರೆದ 'ಪ್ರೋಗ್ರಾಂ"ಅನ್ನು ತಿದ್ದುತ್ತಿದ್ದಳು. ಪ್ರತಿದಿನದ ಕಾರ್ಯ ಮಗ್ನತೆ ಅಂದು ಅವಳಿಗಿರಲಿಲ್ಲ ; ಹಾಗಾಗಲು ಕಾರಣವೂ ಇಲ್ಲದಿರಲಿಲ್ಲ : ಆ ಹೊತ್ತಿಗೆ ಸ್ವಲ್ಪ ಮುಂಚೆ, ಮೈಕೇಲ್‌ ಅವಳನ್ನು ತನ್ನ ಕೋಣೆಗೆ ಕರೆದು, ಅಪರೂಪವಾಗಿ ಅವಳು ಮಾಡಿದ ತಪ್ಪನ್ನು ಅವಳ ಅವಗಾಹನೆಗೆ ತಂದಿದ್ದ. ಸಾಮಾನ್ಯವಾಗಿ ಅಚ್ಚುಕಟ್ಟಾಗಿ ಕೆಲಸ ಮಾಡುವ ಅವಳು, ತುಂಬಾ ಕಷ್ಟಕರವಾದ ಭಾಗವನ್ನು ರಚಿಸುವುದರಲ್ಲಿ ಎಡವಿದ್ದಳು. ತನ್ನ ತಪ್ಪಿನ ಅರಿವಾದ ಕೂದಲೇ, 'ಬಾಸ್‌"ನಲ್ಲಿ ಪ್ರಾಮಾಣಿಕವಾಗಿ ಕ್ಷಮಾಯಾಚನೆ ಮಾಡಿದ್ದಳು. ಹೀಗೆ ಕೆಲಸವನ್ನು ಸರಿಯಾಗಿ ಮಾಡಿದಾಗ ತಮಟೆ ಹೊಡೆದು ಪ್ರಪಂಚಕ್ಕೆ ಸಾರದೆ, ತಪ್ಪು ಮಾಡಿದಾಗ ಸುಲಭವಾಗಿ ಒಪ್ಪಿಕೊಳ್ಳುವ ಅವಳ ದೊಡ್ಡ ಗುಣವೇ, ಎಷ್ಟೋ ಸಲ ಅವಳಿಗೆ ಮುಳುವಾಗಿದ್ದುದೂ ಉಂಟು! ಆ ಬಾರಿಯೂ ಸಹ, ಬಾಸ್‌ನಿಂದ ಎಚ್ಚರಿಕೆಯ ಮಾತುಗಳನ್ನು ಕೇಳಬೇಕಾಗಿ ಬಂದಿತ್ತು. ಹೀಗಾಗಿ ಸಹಜವಾಗಿಯೇ ಅವಳ ಮನಸ್ಸು ವ್ಯಗ್ರವಾಗಿತ್ತು. ಅದಕ್ಕೆ ಕಾರಣ - ತಾನು ತಪ್ಪು ಮಾಡಿ, ಆ ತಪ್ಪು ಬಾಸ್‌ನ ಗಮನಕ್ಕೆ ಬಂದು, ತಾನು ತಪ್ಪೊಪ್ಪಿಕೊಳ್ಳುವ ಪ್ರಮೇಯ ಬಂದೊದಗಿದುದು ಆಗಿರಲಿಲ್ಲ ! ಬದಲಾಗಿ, ಇದೇ ಸಂದರ್ಭ ತನ್ನ ಸಹೋದ್ಯೋಗಿ ಡಿಕ್‌ಗೆ ಬಂದಿದ್ದರೆ, ಅದಕ್ಕೆ ಅವನು ಹೇಗೆ ಪ್ರತಿಕ್ರಿಯಿಸುತ್ತಿದ್ದ ಎಂಬುದೇ ಆಗಿತ್ತು : ಹಿಂದೊಂದು ಸಲ (ಒಂದು ಸಲವೇಕೆ, ಅನೇಕ ಸಲ) ಡಿಕ್‌ ಪ್ರೋಗ್ರಾಂ ರಚನೆಯಲ್ಲಿ ಮಹಾ ಪ್ರಮಾದ ಮಾಡಿದ್ದ ; ವಿಷಯವನ್ನು ಅರ್ಧಂಬರ್ಧ ತಿಳಿದುಕೊಂಡು ಉಡಾಫೆಯಿಂದ ಕೆಲಸ ಮಾಡಿದುದೇ, ಅಚಾತುರ್ಯಕ್ಕೆ ಕಾರಣವಾಗಿರುತ್ತಿತ್ತು. ಅವನು ಮಾಡಿದ ತಪ್ಪು ಅಂಗೈ ಮೇಲಿನ ಹುಣ್ಣಿನಂತೆ ಸ್ಪಷ್ಟವಾಗಿ ತನ್ನ ಸಹೋದ್ಯೋಗಿಗಳೆಲ್ಲರಿಗೂ ಗೊತ್ತಿದ್ದರೂ, ಅವನು ಅದನ್ನು ನಿರ್ವಾಹಕನಲ್ಲಿ ಹೇಳಿಕೊಳ್ಳುತ್ತಿದ್ದ ರೀತಿಯೇ ಬೇರೆ: ತನ್ನ ತಪ್ಪನ್ನು ಸಾರಾ ಸಗಟಾಗಿ ನಿರಾಕರಿಸಿ, ಬೇರೆಯವರ ತಲೆಯ ಮೇಲೆ ಗೂಬೆ ಕೂರಿಸುತ್ತಿದ್ದ ! ತಾಂತ್ರಿಕ ವಿವರಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಸಮರ್ಥನಾದ ಮೈಕೇಲ್‌, ಡಿಕ್‌ನದು ಏನೂ ತಪ್ಪಿಲ್ಲವೆಂದೇ ಭಾವಿಸುತ್ತಿದ್ದ.

-3-

ಡಿಕ್‌ನ ಕಾರ್ಯ ಶೈಲಿ, ಸಹೋದ್ಯೋಗಿಗಳೊಡನೆ ಅವನು ಸ್ಥಾಪಿಸಿಕೊಂಡಿದ್ದ ಸಂಬಂಧ ಹೀಗಿತ್ತು: ಅವನು ಕೆಲಸ ಮಾಡುವುದಕ್ಕಿಂತ, ಅದರ ದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದನು - ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವ ಹಾಗೆ! ಹೀಗಾಗಿ ಅವನ ದಿನಚರಿಯಲ್ಲಿ ಹೆಚ್ಚು ವೇಳೆ ಸಹೋದ್ಯೋಗಿಗಳೊಡನೆ, ತನ್ನ ನಿರ್ವಾಹಕರೊಡನೆ, ಮತ್ತು ಮೇಲಧಿಕಾರಿಗಳೊಡನೆ ಮಾತನಾಡಲು ವ್ಯಯಿಸುತ್ತಿದ್ದ. ಬೇರೆಯವರ ಜೊತೆ ಉತ್ತಮ ಸಂಬಂಧಗಳನ್ನು ಉಳಿಸಿ ಬೆಳೆಸಿಕೊಳ್ಳುವುದು ಅವನ ಉಳಿವಿನ ದೃಷ್ಟಿಯಿಂದಲೂ, ಪ್ರಾಯೋಗಿಕವಾಗಿ ಸಾಕಷ್ಟು ಮಹತ್ವ ಪಡೆದಿತ್ತು. ಆದ್ದರಿಂದ ಆಗಾಗ್ಗೆ ಇತರರನ್ನು ತನ್ನ ಖರ್ಚಿನಲ್ಲಿ ಊಟಕ್ಕೆ ಕರೆದುಕೊಂಡು ಹೋಗುವುದೇನು, ಅವರ ಜೊತೆ ಫುಟ್‌ಬಾಲ್‌ ಆಟದ ವೀಕ್ಷಣೆಗೆ ಹೋಗುವುದೇನು, ಸ್ಕೀ ಟ್ರಿಪ್‌ಗಳನ್ನು ಆಯೋಜಿಸುವುದೇನು - ಹೀಗೆ ಕಛೇರಿಯ ಕೆಲಸದ ವೇಳೆಯಲ್ಲಿ ಈ ಬಗೆಯ ಪಠ್ಯೇತರ ಚಟುವಟಿಕೆಗಳು ಭರದಿಂದ ನಡೆಯುತ್ತಿದ್ದವು.

ಡಿಕ್‌ ತನ್ನ ಸಹೋದ್ಯೋಗಿಗಳೊಡನೆ ಸುಮಧುರ ಬಾಂಧವ್ಯವನ್ನು ಅಪೇಕ್ಷಿಸಿಕೊಂಡು ಹೋಗುತ್ತಿದ್ದುದಕ್ಕೆ ಇನ್ನೊಂದು ಪ್ರಬಲವಾದ ಕಾರಣವೂ ಇತ್ತು: ತಾಂತ್ರಿಕ ಸಾಮರ್ಥ್ಯದಲ್ಲಿ ಕೆಳ ಮಟ್ಟದಲ್ಲಿದ್ದ ಅವನಿಗೆ, ತನಗೆ ವಹಿಸಿದ ಕೆಲಸಗಳನ್ನು ಪೂರೈಸಲು ತನ್ನ ಸಹಚರರ ಸಹಕಾರ ಮತ್ತು ಬೆಂಬಲ ಅಗತ್ಯವಲ್ಲದೆ ಅನಿವಾರ್ಯ ಸಹ ಆಗಿತ್ತು. ಒಂದೆರಡು ಬಾರಿ ಸಣ್ಣ ಪುಟ್ಟ ಸಹಾಯ ಯಾಚಿಸಿದರೆ, ಯಾರಾದರೂ ಒಪ್ಪಿಯಾರು! ಆದರೆ ಇದನ್ನೇ ಅಭ್ಯಾಸ ಮಾಡಿಕೊಂಡರೆ, ನಿಯಮಿತವಾಗಿ ಸಹಕರಿಸಬೇಕಾದರೆ, ಅತ್ಯುತ್ತಮ ಸಂಬಂಧ ಇಟ್ಟುಕೊಳ್ಳಬೇಕಿತ್ತು.

ತಾನು ಮಾಡಿ ಮುಗಿಸಿದ ಕೆಲಸಗಳನ್ನು ಅವಲೋಕಿಸಿ, ತನ್ನ ಕೆಲಸದ ಸಾಮರ್ಥ್ಯದ ವಾರ್ಷಿಕ ವಿಮರ್ಶೆ ಮಾಡುತ್ತಿದ್ದವನು ಮೈಕೆಲ್‌. ಅವನ ಜೊತೆ ಅತ್ಯಂತ ಹಾರ್ದಿಕ ಸಂಬಂಧ ಇಟ್ಟುಕೊಳ್ಳುವುದು ಡಿಕ್‌ಗೆ ಇನ್ನೂ ಮುಖ್ಯವಾಗಿತ್ತು. ತಾನು ಮಾಡಿದ ಕೆಲಸದ ಮಹತ್ವವನ್ನು ಬಾಸ್‌ಗೆ ಮನಗಾಣಿಸುವುದು, ಅದನ್ನು ಮುಗಿಸುವ ಪ್ರಕ್ರಿಯೆಯಲ್ಲಿ ಒದಗಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾನು ಪ್ರದರ್ಶಿಸಿದ ತಾಂತ್ರಿಕ ಕೌಶಲ್ಯಗಳನ್ನು ಮನವರಿಕೆ ಮಾಡುವುದು, ಸದಾ ಕಂಪನಿಯ ಹಿತದ ಬಗ್ಗೆ ಮಾತನಾಡಿ ಕಾಳಜಿಗಳನ್ನು ವೇದ್ಯಪಡಿಸುವುದು, ತಾನೇ ಸ್ವತಃ ಬೇರೆಯವರಿಂದ ಉಪಕೃತನಾದರೂ, ತಾನು ಇತರರಿಗೆ ಹೇಗೆ ಸಹಾಯಕಾರಿಯಾದೆ ಎಂಬ ಬಗ್ಗೆ ಸುಳ್ಳು ಹೇಳುವುದು, ದೊಡ್ಡ ದೊಡ್ಡ ಮಾತನಾಡಿ ತನ್ನ ತಾಂತ್ರಿಕ ಮುಂದಾಳತ್ವವನ್ನು ತೋರಿಸುವುದು - ಇವೆಲ್ಲಾ ಅವ್ಯಾಹತವಾಗಿ ನಡೆದಿದ್ದವು.

-4-

ಸುಮನ ಡಿಕ್‌ಗೆ ತೀರಾ ಭಿನ್ನವಾಗಿದ್ದಳು. ಸ್ವತಂತ್ರವಾಗಿ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದಳು. ಕ್ಕೆ ಏನೇನೂ ಪ್ರಾಶಸ್ತ್ಯ ಕೊಡುತ್ತಿರಲಿಲ್ಲ. ಹೀಗಾಗಿ ಕೆಲಸ ಮಾಡುವಾಗ, ಸಂಪೂರ್ಣ ಮಗ್ನತೆ ಲಭಿಸಿ - ಯಾವ ಬಗೆಯ ಚಿತ್ತ ಚಾಂಚಲ್ಯಗಳಿಲ್ಲದೆ - ಮಾಡಿದ ಕೆಲಸ ಸಾಮಾನ್ಯವಾಗಿ ಉತ್ತಮ ಮಟ್ಟದಲ್ಲಿರುತ್ತಿತ್ತು. ಅಮೇರಿಕದಲ್ಲಿ ನೆಲೆಸಲು ತೀರ ಅಗತ್ಯವಿರುವ ಗುಣಗಳಾದ ತಾಂತ್ರಿಕ ಕೌಶಲ, ಕಷ್ಟಪಟ್ಟು ಕೆಲಸ ಮಾಡುವಿಕೆ, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ವೃತ್ತಿಪರತೆ - ಇವೆಲ್ಲವನ್ನೂ ರೂಢಿಸಿಕೊಂಡಿದ್ದಳು. ಅಮೇರಿಕಾ ನೆಲದ ಈ ಒಳ್ಳೆಯ ಅಂಶಗಳೊಡನೆ, ಭಾರತೀಯ ಸಂಸ್ಕೃತಿಯ ಮೌಲ್ಯಗಳಾದ ಸರಳತೆ, ವಿನಮ್ರತೆ, ಸತ್ಯ ಸಂಧತೆ, ವಿನಯ ಶೀಲತೆ, ಕರ್ತವ್ಯ ಪ್ರಜ್ಞೆಗಳನ್ನು ತನ್ನ ಸ್ವಭಾವದ ಸಹಜ ಅಂಗವಾಗಿ ಮಾಡಿಕೊಂಡು - ತುಂಬಿದ ಕೊಡ ತುಳುಕದಂತೆ - ಇದ್ದಳು. ಅವಳು ಕೆಲಸದಲ್ಲಿ ಎಷ್ಟೊಂದು ಮಗ್ನಳಾಗಿರುತ್ತಿದ್ದಳೆಂದರೆ, ತಾನು ಮಾಡಿ ಮುಗಿಸಿದ ಕೆಲಸವನ್ನು - ಬಾಸ್‌ನ ಮುಂದೆ ಸಹ - ಪ್ರಚುರ ಪಡಿಸುವುದನ್ನು ಸಂಪೂರ್ಣವಾಗಿ ಅಲಕ್ಷಿಸುತ್ತಿದ್ದಳು. ಅವಳ ವರ್ತನೆ ಹೀಗಿರಲು ಇನ್ನೊಂದು ಕಾರಣವೂ ಇತ್ತು : ಒಳ್ಳೆಯ ಕೆಲಸ ಮಾಡಿದರೆ, ಅದು ತಾನಾಗಿಯೇ ಎಲ್ಲರ ಗಮನಕ್ಕೆ ಬರುವುದೆಂದು ಧೃಡ ನಂಬಿಕೆ ಅವಳದು. ಅವಳ ಸರಳತೆ ಹಾಗೂ ವಿನಮ್ರತೆಗಳು ತನ್ನ ಬಗ್ಗೆ ತಾನೆ ತಮಟೆ ಹೊಡೆಯುವುದನ್ನು ತಪ್ಪಿಸುತ್ತಿದ್ದವು.

ಇನ್ನೊಂದು ಸಂದರ್ಭದಲ್ಲಿ, ಮೈಕೆಲ್‌ ಸುಮನಳನ್ನು ತನ್ನ ಕಛೇರಿಗೆ ಬರಲು ಹೇಳಿದ. ದೇಶದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟು, ಸಹಸ್ರಾರು ಸಂಖ್ಯೆಯಲ್ಲಿ ಜನರು ಕೆಲಸ ಕಳೆದುಕೊಳ್ಳುವ ಕಾಲ ಅದಾಗಿತ್ತು. ಹೆದರಿ ಹೆದರಿಕೊಂಡೇ ಸುಮನ ಬಾಸ್‌ ಕೋಣೆ ಸೇರಿದ್ದಳು. ಹಸನ್ಮುಖನಾಗಿದ್ದ ಮೈಕೆಲ್‌ ಸುಮನನ ಕೆಲಸದ ಬಗ್ಗೆ ಹೊಗಳಿ, ಅವಳಿಗೆ ಅಭಿನಂದನೆ ಸಲ್ಲಿಸಿದ. ಆ ಕೆಲಸ ಹೇಗೆ ಮಾಡಿದೆಯೆಂದು ಕೇಳಿದಾಗ, ಸರಳ ಸ್ವಭಾವದ ಅವಳು, ಆ ಕೆಲಸದ ಸಮಸ್ತ ಆಂತರಿಕ ತಾಂತ್ರಿಕ ವಿವರಗಳನ್ನು - ತೆರೆದಿಟ್ಟ ಪುಸ್ತಕದಂತೆ - ವಿಶದೀಕರಿಸಿದಳು. ಅಂತರಿಕ ವಿವರಗಳನ್ನು ಮುಚ್ಚಿಟ್ಟುಕೊಂಡು, ತನ್ಮೂಲಕ ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳದೆ, ಎಲ್ಲವನ್ನೂ ಹೇಳಿಕೊಂಡುಬಿಟ್ಟಳು!

-5-

ಇದಾಗಿ ಆರು ತಿಂಗಳುಗಳುರುಳಿದವು. ಆ ಕಂಪನಿಯ ಪ್ರಾಡಕ್ಟ್‌ ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಯಿತು. ಆಗ ದೇಶದ ಆರ್ಥಿಕ ಸ್ಥಿತಿ ಹಿನ್ನಡೆಯಲ್ಲಿದ್ದು, ಎಲ್ಲಾ ಕಂಪನಿಗಳು ಯವುದೇ ಬಗೆಯ ತಾಂತ್ರಿಕ ವಸ್ತು ಮತ್ತು ಸೇವೆಗಳನ್ನು ಕೊಂಡುಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದವು! ಆದ್ದರಿಂದ, ಆ ಪ್ರಾಡಕ್ಟ್‌ ತಾಂತ್ರಿಕ ನಿಯತ ಕಾಲಿಕೆಗಳಿಂದ ಅನೇಕ ಪುರಸ್ಕಾರಗಳನ್ನು ಪಡೆದಿದ್ದರೂ, ಅದನ್ನು ಕೊಳ್ಳುವವರೇ ಗತಿ ಇರಲಿಲ್ಲ ! ಮಾರ್ಕೆಟಿಂಗ್‌ ಮತ್ತು ಸೇಲ್ಸ್‌ ವಿಭಾಗ ಎಷ್ಟೇ ಕಷ್ಟಪಟ್ಟರೂ, ಆ ಕಂಪನಿಯ ಕಾಲು ವರ್ಷದ ವಹಿವಾಟು ಮತ್ತು ನಷ್ಟ ತೀರಾ ನಿರಾಶಾದಾಯಕವಾಗಿದ್ದವು. ತಿಂಗಳಿಂದ ತಿಂಗಳಿಗೆ, ಕಂಪನಿ ಹೆಚ್ಚು ಹೆಚ್ಚು ನಷ್ಟ ಅನುಭವಿಸುತ್ತಾ ಹೋಯಿತು. ತನ್ನೆಲ್ಲಾ ಕೆಲಸಗಾರರಿಗೆ ಸಂಬಳ ಕೊಟ್ಟು ಉಳಿಸಿಕೊಳ್ಳುವುದು - ವ್ಯಾವಹಾರಿಕ ದೃಷ್ಟಿಯಿಂದ - ಕಂಪನಿಗೆ ಅಸಾಧ್ಯ ಮತ್ತು ಅಸಾಧುವಾದ ಕೆಲಸವಾಯಿತು. ಶೇಕಡಾ 30ರಷ್ಟು ಕೆಲಸಗಾರರನ್ನು ಕೆಲಸದಿಂದ ತೆಗೆಯುವ ನಿರ್ಣಯವನ್ನು ಕಂಪನಿ ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಯಿತು.

ಆ ಸುದ್ದಿ ಕೆಲಸಗಾರರಿಗಿನ್ನೂ ತಿಳಿದಿರಲಿಲ್ಲ. ಮೈಕೇಲ್‌ ನಿರ್ವಾಹಕನಾಗಿದ್ದ ಅಭಿವೃದ್ದಿ ಘಟಕದಲ್ಲಿ ಹತ್ತು ಜನ ಅಭಿಯಂತರಿದ್ದರು. ಕೆಲಸಗಾರರನ್ನು ಓಡಿಸಲು ಮಾರ್ಗದರ್ಶಿ ಸೂತ್ರಗಳು ಇಂತಿದ್ದವು: ಕೆಲಸಗಾರನಿಗೆ ಸಂಬಳ ಜಾಸ್ತಿ ಬರುತ್ತಿದ್ದರೆ, ಅವನ ಕಾರ್ಯವೈಖರಿ ಅಸಮರ್ಪಕವಾಗಿದ್ದರೆ, ಅವನು ನಿರ್ವಹಿಸುತ್ತಿದ್ದ ಕೆಲಸ ಕಂಪನಿಗೆ ಅಗತ್ಯವಿಲ್ಲದಿದ್ದರೆ - ಅವನ (ಅವಳ) ಕೆಲಸ ಹೋಗುವ ಸಂಭಾವ್ಯತೆ ಜಾಸ್ತಿ ಇರುತ್ತಿತ್ತು. ಇಷ್ಟೆಲ್ಲಾ ಮಾನದಂಡಗಳನ್ನು ಪ್ರಕಟಿಸಿದ್ದರೂ, ಯಾರನ್ನು ಕೆಲಸದಿಂದ ತೆಗೆಯಬೇಕೆಂಬುದನ್ನು, ಕಂಪನಿಯವರು ಮೈಕೇಲ್‌ಗೇ ಬಿಟ್ಟಿದ್ದರು.

ಇರುವ ಒಂಭತ್ತು ಜನರಲ್ಲಿ ಐದು ಜನರು ಸಮರ್ಪಕವಾಗಿ ಕೆಲಸ ಮಾಡುತ್ತಿದರು; ಅವರು ಉಳಿದುಕೊಂಡರು. ಇಬ್ಬರು ತೀರ ಕಳಪೆ ಕೆಲಸ ಮಾಡುತ್ತಿದ್ದರು, ಅವರನ್ನು ತೆಗೆಯಬೇಕೆಂಬ ನಿರ್ಧಾರ ಮಾಡುವುದೇನೂ ಕಷ್ಟವಾಗಲಿಲ್ಲ. ಇನ್ನುಳಿದ ಇಬ್ಬರಲ್ಲಿ - ಡಿಕ್‌ ಮತ್ತು ಸುಮನ - ಯಾರನ್ನು ತೆಗೆಯಬೇಕೆಂಬುದು ಮೈಕೇಲ್‌ಗೆ ಕಷ್ಟಕರವಾದ ನಿರ್ಧಾರವಾಗಿತ್ತು.

ಡಿಕ್‌ ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತಿದ್ದ. ಕಂಪನಿಯ ಬಗ್ಗೆ ಕಾಳಜಿ ವಹಿಸುತ್ತಿದ್ದ. ಪ್ರಾಡಕ್ಟ್‌ನ ಬಗ್ಗೆ ಸಮಗ್ರ ದೃಷ್ಟಿ ಹೊಂದಿದ್ದ. ನಾಯಕತ್ವದ ಲಕ್ಷಣಗಳನ್ನು ತೋರಿಸುತ್ತಿದ್ದ. ತನಗೆ ವಹಿಸಿದ ಕೆಲಸಗಳನ್ನು ಹೇಗೋ ಮಾಡಿ ಪೂರೈಸುತ್ತಿದ್ದ; ಬೇರೆಯವರಿಂದ ಸಹಾಯ ಪಡೆಯಲು ಅಥವಾ ನೀಡಲು ಹಿಂಜರೆಯುತ್ತಿರಲಿಲ್ಲ.

ಸುಮನ ತನ್ನ ಕೆಲಸವನ್ನು ಸಾಮಾನ್ಯವಾಗಿ ಚೆನ್ನಾಗಿ ಮಾಡುತ್ತಿದ್ದಳು. ಆದರೆ ಅವಳೊಬ್ಬಳು ಮಾತ್ರ ಆ ಗುಂಪಿನಲ್ಲಿ 'ದ್ವೀಪ"ದಂತೆ ಇದ್ದಳು; ಬೇರೆಯವರೊಂದಿಗೆ ಮಿಳಿತವಾಗುವ ಕಲೆ ಅವಳಿಗೆ ಸಿದ್ಧಿಸಿರಲಿಲ್ಲ. ತಾನು ರಚಿಸಿದ ಭಾಗದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರೂ, ಪ್ರಾಡಕ್ಟ್‌ನ ಬಗ್ಗೆ ಸಮಗ್ರ ಜ್ಞಾನ ಇರಲಿಲ್ಲ. ಮೀಟಿಂಗ್‌ನಲ್ಲಿ ಸಹ, ಅವಳ ಕೊಡುಗೆ ತೀರ ಕಡಿಮೆಯಾಗಿತ್ತು. ವಹಿಸಿದ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದರೂ, ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ವಿನ್ಯಾಸ ಅಥವಾ ರಚನೆಯ ಬಗ್ಗೆ ಹೊಸ ಹೊಸ ವಿಚಾರಗಳನ್ನು ಕೊಡುವುದು, ಗುಂಪಿನ ಕಾರ್ಯವೈಖರಿಯನ್ನು ಉತ್ತಮ ಪಡಿಸುವಲ್ಲಿ ಸಲಹೆ ಕೊಡುವುದು, ಬೇರೆಯವರು ಕಷ್ಟದಲ್ಲಿದ್ದಾಗ ಸಹಕರಿಸುವುದು - ಇತ್ಯಾದಿ ನೇತೃತ್ವವನ್ನು ತೆಗೆದುಕೊಳ್ಳುವುದರಲ್ಲಿ ತೀರಾ ಹಿಂದುಳಿದಿದ್ದಳು. ನಾಯಕತ್ವ ಗುಣದಲ್ಲಿ ಡಿಕ್‌ಗಿಂತ ಹಿಂದಿದ್ದಳು. ಸುಮನಳ ಸಂಬಳ ಸಹ, ಡಿಕ್‌ಗಿಂತ ಜಾಸ್ತಿ ಇತ್ತು.

ಇಷ್ಟೆಲ್ಲಾ ವಿಮರ್ಶೆಗಳಿಂದ ಮನೆ ಸೇರಿದ ಮೈಕೆಲ್‌ಗೆ, ಮಾರನೆ ದಿನ ಬೆಳಗಾಗುವುದರಲ್ಲಿ ಮನಸ್ಸು ನಿಚ್ಚಳವಾಗಿತ್ತು : ಸುಮನಳನ್ನು ಕೆಲಸದಿಂದ ಓಡಿಸಿ, ಡಿಕ್‌ನನ್ನು ತಾಂತ್ರಿಕ ನಾಯಕನನ್ನಾಗಿ ಮಾಡುವುದೆಂದು ನಿರ್ಧರಿಸಿದ್ದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more