ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ.ಡಿ-10: ಕನ್ನಡಿಗರಿಗೆ ಉದ್ಯೋಗ ವರದಿ ಗೆದ್ದಲು ತಿನ್ನುತಿದೆ

By Mahesh
|
Google Oneindia Kannada News

ಶಿಕ್ಷಣ ಅಂದಾಗ ನನಗೆ ನೆನಪಾಗುವುದು ನಮ್ಮ ವಿಶ್ವವಿದ್ಯಾಲಯಗಳು. ಒಂದು ಕಾಲದಲ್ಲಿ ಇಡೀ ಕನ್ನಡ ನಾಡಿನಲ್ಲಿ ಎರಡೇ ಎರಡು ವಿಶ್ವವಿದ್ಯಾಲಯಗಳು ಇದ್ದವು. ಮೈಸೂರು ಹಾಕು ಕರ್ನಾಟಕ ವಿ.ವಿ. ಗಳು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದವು. ಅಲ್ಲಿ ಪ್ರಕಾಂಡ ಪಂಡಿತರು, ವಿದ್ವಾಂಸರು, ನಾಡು ನುಡಿಯ ನಿಜವಾದ ಅಭಿಮಾನಿಗಳು ಇದ್ದರು. ಪ್ರಚಾರೋಪನ್ಯಾಸಗಳ ಮೂಲಕ ಹಳ್ಳಿಗಳನ್ನ ಈ ವಿ.ವಿ.ಗಳು ಮುಟ್ಟುತ್ತಿದ್ದವು. ಪುಸ್ತಕ ಪತ್ರಿಕೆಗಳ ಮೂಲಕ ಜನಜಾಗೃತಿಯನ್ನ ಉಂಟು ಮಾಡುತ್ತಲಿದ್ದವು. ಹೊರನಾಡಿನಲ್ಲಿ ಈ ವಿವಿ. ಗಳ ಬಗ್ಗೆ ತುಂಬಾ ಗೌರವವಿತ್ತು. ಇಂದು ಹಲವಾರು ವಿವಿ.ಗಳಿವೆ, ಹೊಸದಾಗಿ ಕೆಲವು ಹುಟ್ಟಿ ಕೊಳ್ಳುತ್ತಿವೆ.

ಒಳಜಗಳ, ಕಾಲು ಹಿಡಿದು ಎಳೆಯುವುದು, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಪೈಪೋಟಿ, ಗುಂಪುಗಾರಿಕೆ, ಕೋಮು ಕಲಹ, ಅಶಿಸ್ತು, ಈ ಬಗೆಯ ಹಲವು ಶಾಪಗಳು ನಮ್ಮ ಇಂದಿನ ವಿವಿ.ಗಳನ್ನ ಕಾಡುತ್ತಿದೆ. ಹೊರಗಿನ ರಾಜ್ಯಗಳು ನಮ್ಮ ವಿವಿ.ಗಳ ಪ್ರಶಸ್ತಿ ಪತ್ರಗಳನ್ನ ಮುಟ್ಟಲು ಕೂಡ ಹಿಂಜರಿಯುತ್ತಿವೆ. ಈ ಪರಿಸ್ಥಿತಿ ಸರಿ ಆಗುವುದು ಯಾವಾಗ, ಸರಿಮಾಡುವವರು ಯಾರು? ಈ ಪ್ರಶ್ನೆಗಳು ನಮ್ಮ ಮುಂದಿವೆ.

ಹೇಳ ಬೇಕಾದ ವಿಷಯಗಳು ಬಹಳ ಇವೆ. ಇಲ್ಲಿ ಅವುಗಳನ್ನ ಸೂಕ್ಷ್ನವಾಗಿ ಹೇಳ ಬಹುದು- ಹೊಸ ಸರಕಾರ ಬಂದು ಕೆಲ ತಿಂಗಳುಗಳು ಕಳೆದರೂ ಇನ್ನೂ ಅಕ್ಯಾಡೆಮಿಗಳು ಅಸ್ತಿತ್ವಕ್ಕೆ ಬಂದಿಲ್ಲ. ನಾಡಿನ ಸಾಂಸ್ಕೃತಿಕ ಬದುಕಿಗೆ ಒಂದು ಬಗೆಯ ಗರ ಬಡಿದಿದೆ. ಬೇರೆ ಭಾಷೆಯ ಚಲನ ಚಿತ್ರಗಳು ವಿಜೃಂಭಣೆಯಿಂದ ಕನ್ನಡ ನಾಡಿನಲ್ಲಿ ಪ್ರದರ್ಶಿತವಾಗುತ್ತಿವೆ. ಕನ್ನಡ ಬಾರದೇನೆ ಇಲ್ಲಿ ಬುದುಕುವಂತಹಾ ವಾತಾವರಣವನ್ನ ನಾವು ಸೃಷ್ಟಿ ಮಾಡಿ ಇರಿಸಿದ್ದೇವೆ.

President Norbert D'Souza Speech

ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಅನ್ನುವ ಉದ್ದೇಶದಿಂದ, ಇತರೇ ಕೆಲ ಸಮಸ್ಯೆಗಳನ್ನ ಬಗೆಹರಿಸಲು ಸಿಧ್ದಪಡಿಸಿದ ವರದಿಗಳು ಗೆದ್ದಲು ತಿನ್ನುತ್ತ ವಿಧಾನ ಸೌಧದಲ್ಲಿ ಬಿದ್ದಿವೆ. ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಬಿ ಬಲವಾಗುತ್ತಿದೆ. ಕೋಮು ಶಕ್ತಿಗಳು ತಮ್ಮೆಲ್ಲ ಆಂತರಿಕ ಶಕ್ತಿಯನ್ನ ಬಳಸಿ ಕೊಂಡು ಜನರ ನಡುವೆ ವಿಷ ಬೀಜವನ್ನ ಬಿತ್ತುವ ಕೆಲಸವನ್ನ ಮುಂದುವರೆಸಿವೆ. ನೈತಿಕ ಪೊಲೀಸ್ ಅನ್ನುವ ಪರ್ಯಾಯ ವ್ಯವಸ್ಥೆ ಇನ್ನೂ ಜೀವಂತವಾಗಿದೆ.

ನಮ್ಮ ಸಹಜೀವಿಗಳನ್ನ ಅನುಮಾನದಿಂದ ನೋಡುವ ಪ್ರವೃತ್ತಿಗೆ ತಡೆ ಬಂದಿಲ್ಲ. ಕಿರುತೆರೆ ಅನ್ನುವ ಆಧುನಿಕ ಅಪಾಯ ಮೌಢ್ಯ, ಭಯ, ಅಪರಾಧ, ಇತ್ಯಾದಿಗಳನ್ನ ವೈಭವೀಕರಿಸಿ ಜನರ ಬೇಡಿಕೆಯನ್ನ ಪೂರೈಸುತ್ತ ತನ್ನ ನಿಜವಾದ ಶಕ್ತಿಯ ದುರುಪಯೋಗವನ್ನ ಮಾಡಿಕೊಳ್ಳುತ್ತದೆ. ಇವುಗಳನ್ನ ಸರಕಾರ, ಜನ, ಗಮನಿಸ ಬೇಕು. ಇಂತಹಾ ಸಮಸ್ಯೆಗಳನ್ನ ಇರಿಸಿ ಕೊಂಡು ನಾವು ಬದುಕುವುದರಲ್ಲಿ ಸುಖ ಇಲ್ಲ. ನೆಮ್ಮದಿಯೂ ಇಲ್ಲ. ಅದು ಪುರುಷಾರ್ಥವೂ ಅಲ್ಲ.

ನಾನು ಇಡೀ ಕರ್ನಾಟಕವನ್ನ ಸುತ್ತಿ ಬಂದವನು. ಇಲ್ಲಿಯ ವೈವಿಧ್ಯಮಯವಾದ ಭಾಷೆ, ಜನಬದುಕು, ರೀತಿ, ನೀತಿ, ಉಡುಗೆ, ಆಹಾರ, ನೀರಿನ ಗುಣ, ಮಣ್ಣಿನ ಬಣ್ಣ, ಪರಿಸರದ ವಿವಿಧತೆ ನನ್ನನ್ನ ಮರಳು ಮಾಡಿದೆ. ಒಂದು ಕಡೆ ಕುರಿಗಳನ್ನ ಕರೆದುಕೊಂಡು ಓರ್ವ ಕುರುಬು ಹೆಗಲ ಮೇಲೆ ದೋಟಿ ಹೊತ್ತು ನಡೆದರೆ ಕುರಿಗಳು ಅವನನ್ನ ಅನುಕರಿಸುತ್ತವೆ, ಇನ್ನೊಂದು ಕಡೆ ಕುರಿಗಳನ್ನ ಕುರುಬ ಹೊಡೆದು ಕೊಂಡು ಹೋಗ ಬೇಕಾಗುತ್ತದೆ. ಒಂದು ಕಡೆ ನೀರು ಬೆಟ್ಟದ ತುದಿಯಲ್ಲಿ ಪುಟಿದು ಬಚ್ಚಲು ಮನೆಯ ಹಂಡೆಗೆ ಬಂದು ಬಿದ್ದರೆ, ಇನ್ನೊಂದು ಕಡೆ ಒಂದು ಕೊಡಪಾನ ನೀರಿಗಾಗಿ ನಮ್ಮ ಹೆಂಗಳೆಯರು ಇಂದು ಒಂದು ಕಿಮೀ. ನಾಳೆ ಮೂರು ಕಿಮೀ ಹೋಗ ಬೇಕಾಗುತ್ತದೆ. ಒಂದು ಕಡೆ ಸಮೃಧ್ದವಾದ ಹಸಿರು ಇನ್ನೊಂದು ಕಡೆ ಹಸಿರೇ ಇಲ್ಲದ ಬೆಂಗಾಡು. ಇದು ಕರ್ನಾಟಕ.

ಶತಮಾನಗಳಿಂದ ನಮ್ಮ ಜನ ಇಲ್ಲಿ ಬದುಕಿದ್ದಾರೆ. ನಾನು ನೆಮ್ಮದಿಯಿಂದ ಇರುವವರನ್ನ ಕಂಡು ಸಂತಸ ಪಟ್ಟಿದ್ದೇನೆ, ಕಷ್ಟದಲ್ಲಿ ಇರುವವರ ಕುರಿತು ನೊಂದಿದ್ದೇನೆ. ದಿನ ನಿತ್ಯ ನೋವನ್ನ ಅನುಭವಿಸುವವರ ನೋವು ದೂರವಾಗಲಿ ಎಂದು ಹಾರೈಸುತ್ತೇನೆ. ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಎಂಬ ಸಾಹಿತ್ಯದ ಉದ್ದೇಶ ನಮ್ಮ ನಾಡಿನ ಎಲ್ಲರ ವಿಷಯದಲ್ಲೂ ನಿಜವಾಗಬೇಕು.

ನಮ್ಮ ಸರಕಾರ, ನಾಡಿನ ಕ್ರಿಯಾಶೀಲರು, ವೈಜ್ಞಾನಿಕ ವಿಧಿ ವಿಧಾನಗಳ ಮೂಲಕ ಆ ಆಶಯವನ್ನು ಸಾಧಿಸುವಂತಾಗಲಿ ಎಂದು ಹಾರೈಸುತ್ತೇನೆ. ಈ ನಾಡನ್ನ ಕವಿಗಳು, ದೃಷ್ಟಾರರು, ರಾಜಕೀಯ ವ್ಯಕ್ತಿಗಳು, ನಾಡಿನ ಕೃಷಿ ಕಾಮಿಕರು, ವ್ಯಾಪಾರಿಗಳು, ಕ್ರೀಡಾ ಪಟುಗಳು, ಮತ್ತೆಲ್ಲರೂ ಬಯಸಿ ಬಯಸಿ ಹಂಬಲಿಸಿ ನಿರ್ಮಿಸಿದರು ಅನ್ನುವ ಅಂಶ ಸದಾ ನಮ್ಮ ನೆನಪಿನಲ್ಲಿ ಇರಬೇಕು. ಈ ನಾಡನ್ನ ಒಡೆಯುವ, ಇಲ್ಲಿ ಅಶಾಂತಿಯನ್ನ ಹುಟ್ಟಿಸುವ ಕೆಲಸ ಆಗದಿರಲಿ ಅನ್ನುವುದೇ ನಮ್ಮೆಲ್ಲರ ಹಾರೈಕೆ.

ನನ್ನ ಮಾತು ತುಸು ದೀರ್ಘವಾಗಿದ್ದರೂ ಕೇಳಿದ್ದೀರಿ. ಹಂಸ ಕ್ಷೀರ ನ್ಯಾಯ ಅನ್ನುವ ಮಾತನ್ನ ನಿಮ್ಮ ನೆನಪಿಗೆ ತರುತ್ತೇನೆ. ಬೇಂದ್ರೆಯವರ ಈ ಮಾತುಗಳ ಮೂಲಕ ನನ್ನ ಮಾತಿಗೆ ಮಂಗಳ ಹಾಡುತ್ತೇನೆ.

ಲೇಸೆ ಕೇಳಿಸಲಿ ಕಿವಿಗೆ, ನಾಲಗೆಗೆ ಲೇಸೆ ನುಡಿದು ಬರಲಿ, ಲೇಸೆ ಕಾಣಿಸಲಿ ಕಣ್ಗೆ, ಜಗದೊಳಗೆ ಲೇಸೆ ಹಬ್ಬುತಿರಲಿ, ಲೇಸೆ ಕೈಗಳಿಂದಾಗುತಿರಲಿ, ತಾ ಬರಲಿ ಲೇಸೆ ನಡೆದು, ಲೇಸನುಂಡು, ಲೇಸುಸಿರಿ, ಇಲ್ಲಿರಲಿ ಲೇಸೆ ಮೈಯ ಪಡೆದು.-ಅಂಬಿಕಾತನಯ ದತ್ತ.

ನಮಸ್ಕಾರ.
ನಾ. ಡಿಸೋಜ

English summary
The three day Kannada Sahitya Sammelana inaugurated today (Jan.7). Here is the part 10 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X