• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಮರ್ಶೆ : ಅಂತರ ಹಾಗು ಇತರ ಕವನಗಳು

By ನಾಗೇಶ ಮೈಸೂರು (ಸಿಂಗಪುರ)
|
ಹುಟ್ಟಿದ ನೆಲದಿಂದ ಯಾವ್ಯಾವುದೋ ಅನಿವಾರ್ಯಗಳಿಂದ ಹೊರಗೆ ಬಂದು ನೆಲೆಸಿದ ಮನಗಳಲ್ಲಿ ತಾಯ್ನೆಲದ ತುಡಿತ, ಕಳಚಿದ ಕೊಂಡಿಯಂತಾಗಿ ಏನೋ ಆತ್ಮೀಯವಾದದ್ದನ್ನು ಕಳೆದುಕೊಂಡ ಭಾವನೆ ಸ್ವಂತ ನೆಲದಲ್ಲೆ ಸದಾ ಇರುವವರಿಗಿಂತ ಹೆಚ್ಚು ತೀವ್ರವಾಗಿ ಬಾಧಿಸುವುದು ಸಹಜ. ಅಂತಹ ಬಾಧೆಗಳೇ ತೀವ್ರವಾಗಿ ಯಾತನೆ, ತುಡಿತಗಳಾದಾಗ, ಆ ಭಾವೋತ್ಕರ್ಷದ ತೀವ್ರತೆ ಅಭಿವ್ಯಕ್ತವಾಗಲೂ ಸೂಕ್ತ ಮಾಧ್ಯಮಕ್ಕಾಗಿ ಹುಡುಕಾಟ ನಡೆಸುವುದು ಅಷ್ಟೇ ಸಹಜ. ಆ ತುಡಿತ, ಯಾತನೆ, ಉಲ್ಲಾಸ, ಮುಗ್ಧತೆ, ಉತ್ಸಾಹಗಳೆಲ್ಲ ಕ್ರಿಯಾಶೀಲತೆಯ ಮಾರ್ಗ ಹಿಡಿದರೆ ಸೃಷ್ಟಿಯಾಗುವ ಸರಕುಗಳು ಆ ವಿಶೇಷತೆಯಿಂದಲೆ ಆಪ್ತವಾಗಿ ಆಪ್ಯಾಯಮಾನವಾಗುತ್ತವೆ.

ಅಂಥದೊಂದು ಅನುಭವಕ್ಕೆ ಉದಾಹರಣೆ, ವಸಂತ ಕುಲಕರ್ಣಿಯವರ ಮೊದಲ ಕವನ ಸಂಕಲನ "ಅಂತರ ಹಾಗು ಇತರ ಕವನಗಳು". ಸುಮಾರು ಏಳು ವರ್ಷಗಳಿಂದ ಬರೆದುಕೊಂಡುಬಂದ ಕವನಗಳನ್ನೆಲ್ಲ ಒಂದೆಡೆ ಕಲೆ ಹಾಕಿ ಚೊಕ್ಕ ಪುಸ್ತಕದ ರೂಪಕೊಟ್ಟು, ಹಿತವಾದ ಔತಣ ಬಡಿಸುವ ಸೊಗಸಾದ ಕಾರ್ಯ ಮಾಡಿದ್ದಾರೆ ವಸಂತ ಕುಲಕರ್ಣಿ. ಮೊದಲಿಗೆ ಪುಸ್ತಕ ಮುದ್ರಣ ಕುರಿತು ನನಗೆ ಮೆಚ್ಚಿಗೆಯಾದ ಒಂದು ಮಾತು - ಓದಲು ಶ್ರಮವಿರದ ಹಾಗೆ ದಪ್ಪಕ್ಷರದ ಮುದ್ರಣ ಕಣ್ಣಿಗೆ ತುಸುವೂ ತ್ರಾಸ ನೀಡದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಎರಡನೆಯ ಮೆಚ್ಚಿಕೆಯಾದ ಅಂಶವೆಂದರೆ, ಕವನಗಳ ಸರಳತೆ ಮತ್ತು ಭಾವ ಬಂಧಾತ್ಮಕತೆ; ಮುನ್ನುಡಿಯಲ್ಲಿ ವಸಂತರವರೇ ಹೇಳಿರುವಂತೆ ಸಂಗೀತವನ್ನಳವಡಿಸಿ ಹಾಡಲೂ ಸುಲಭವಾಗುವಂತೆಯೇ ಇದೆ ಈ ರಚನೆಗಳ ಬಂಧ.

ಸರಳ ಹಾಗೂ ಸುಸಂಗತ ಪರಿಸರದ ಸಂಗತಿಗಳನ್ನು ಹೆಕ್ಕಿ, ಪದ ಪಂಜರದಡಿ ಶುದ್ಧವಾಗಿ ಪೋಣಿಸಿ ಕವಿತೆಗಳ ಹಾರವನ್ನು ಕಟ್ಟಿಕೊಡುವ ಕವಿಯ ಯತ್ನ, ಶ್ರಮ ಪ್ರತಿ ಕವನದಲ್ಲೂ ಅನುರಣಿತವಾಗಿದೆ. ಆಯ್ದುಕೊಂಡ ಸಂಗತಿಗಳಲ್ಲಿ ಆಳಕ್ಕಿಳಿದು ತಾದ್ಯಾತ್ಮಕತೆ, ಭಾವನಾತ್ಮಕತೆ, ಮುಗ್ಧತೆ ಹಾಗೂ ಸರಳತೆಗಳನ್ನು ಏಕೀಕರಿಸಿ ಪದ ಸಾಲುಗಳಾಗಿ ಕಟ್ಟುವ ಕಾರ್ಯದಲ್ಲಿ ವಸಂತರ ನಿಷ್ಠೆ, ಪರಿಶ್ರಮ ಸ್ಪಷ್ಟವಾಗಿ ಗೋಚರವಾಗುತ್ತದೆ. ಅಷ್ಟೆ ವೈವಿಧ್ಯತೆ, ವೈಶಿಷ್ಟ್ಯಗಳು ಕಾಣಸಿಗುವುದು ಕವನದ ವಸ್ತುಗಳ ಆಯ್ಕೆಯಲ್ಲಿ. ಇಡಿ ಸಂಕಲನದ ಕವಿತೆಗಳನ್ನು ಸ್ಥೂಲವಾಗಿ ಅವಲೋಕಿಸಿದರೆ, ನನ್ನ ದೃಷ್ಟಿಯಲ್ಲಿ ಅವುಗಳನ್ನೆಲ್ಲಾ ಈ ಕೆಳಕಂಡ ಗುಂಪುಗಳಡಿ ವಿಂಗಡಿಸಬಹುದು (ಸಾಕಷ್ಟು ಕವನಗಳು ಒಂದಕ್ಕಿಂತಲು ಹೆಚ್ಚು ಗುಂಪಿನಲ್ಲಿ ಸೇರಬಲ್ಲ ವಸ್ತು-ವಿಸ್ತಾರಗಳನ್ನೊಳಗೊಂಡಿವೆಯಾದರೂ, ವಿಮರ್ಶೆಯ ದೃಷ್ಟಿಯಿಂದ ಈ ವಿಂಗಡನೆಯ ವ್ಯಾಪ್ತಿ ಸಾಕೆಂದು ನನ್ನನಿಸಿಕೆ):

1. ಭಾವನಾತ್ಮಕ ಕವನಗಳು (ಆಶಾದೀಪ, ದ್ವಂದ್ವ, ಒಬ್ಬಂಟಿ, ಪಯಣಿಗ, ಮುಗಿಲ ಹಕ್ಕಿ, ಜೀವನ ರಾಗ, ನನ್ನ ಮನ, ಯೌವನ, ಮೌನ, ಕನವರಿಕೆ, ಒಡಲಾಳ, ಎಂದೂ ಬತ್ತದು ಎದೆಯ ತೊರೆ..)
2. ಪ್ರಕೃತಿ/ಪರಿಸರ ಕುರಿತದ್ದು (ಮೌನದ ಮೌನ, ಬೆಳ್ಳಿ ಚುಕ್ಕಿ, ಸಮತೋಲನ, ಹುಟ್ಟಿನ ಹಲವು ರೂಪಗಳು, ಹೀಗೊಂದು ಪಯಣ, ಕೋಗಿಲೆಯ ಹಾಡು, ಆ ಶ್ರಾವಣದ ನೆನಪು, ವರ್ಷಾಧಾರೆ, ಸಂಜೆ ಮಳೆ..)
3. ಪ್ರಾಸಂಗಿಕ/ವಾಸ್ತವಿಕ/ಸಂಗತಿ ಕುರಿತಾದ ಕವನಗಳು (ಕವಿ ಸಂಚಯ, ವಿಶ್ವ ಕನ್ನಡ ಗೀತೆ, ನಿಲುವುಗಳು, ಒಂದು ಮಧ್ಯಾಹ್ನ, ಯಾಂತ್ರಿಕ ಜೀವನ, ಗುರಿ, ಶಬ್ದಗಳ ಮಿತಿ, ಆಗ-ಈಗ..)
4. ಮಾನವ/ಮಾನವ ಸಂಬಂಧಗಳ ಸುತ್ತ (ಸಾಗೋಣ ಬನ್ನಿ, ಸಂಚಯ, ಸಾವಿನಲ್ಲೊಂದು ಹುಟ್ಟು, ನಿರೀಕ್ಷೆ, ಬೆಳಗಾವಿ ಮತ್ತು ಮುಂಬಯಿಯ ಜನ, ತೇಜಸ್ವಿ, ಅವಳು ಮತ್ತು ಅವನು, ಬೆಳಗಾವಿಯಾಂವ, ಸುರೇಶ, ನಾನು ನೀನು, ನೆನಪು, ಹಂಬಲ, ಕಾಣೆಯಾದ ಬಾಲಕ, ಮರೆಯಾದ ಮುದುಕ, ಗುಲಬರ್ಗಾದ ಗಾಂಧಿ...)
5. ಮಾನವ ಸಹಜ ಕಾಮನೆಗಳ/ಭಾವನೆಗಳ ಸುತ್ತ (ಸಂತೃಪ್ತಿ, ಅಚ್ಚರಿ, ವಿರಹ, ಕರೆ, ಸ್ಪಂದನ, ಇಚ್ಚೆ, ತಲ್ಲಣ...)
6. ನೀತಿ, ಸೂಕ್ತಿ, ಕಾಳಜಿ, ಚಿಂತನೆ, ಇತರೆಗಳ ಸುತ್ತ (ನಿತ್ಯ ನೂತನ, ಹಣತೆ, ದಶಾವತಾರ, ಅಂತರ, ಹಲ್ಲೆ, ಗೂಡು, ಗಾಳಿಪಟ..)

ಪ್ರತಿ ಕವನವನ್ನು ಇಲ್ಲಿ ನೋಡಿ ವಿಮರ್ಶಿಸುವುದು ಈ ಬರಹದ ವ್ಯಾಪ್ತಿಗೆ ಮೀರಿದ್ದಾದ್ದರಿಂದ ನನ್ನ ಒಟ್ಟಾರೆ ವಿಮರ್ಶೆಯನ್ನು ಮೇಲಿನ ವಿಂಗಡನೆಯಿಂದಾಯ್ದ ಗುಂಪು ಕವನದ ಪರಿಮಿತಿಯಲ್ಲಿ ವಿಶ್ಲೇಷಿಸಲೆತ್ನಿಸಿದ್ದೇನೆ. ಈ ಅನಿಸಿಕೆಯನ್ನು ಆಯಾ ಗುಂಪಿನ ಋಣ ಯಾ ಧನಾತ್ಮಕ ರಾಯಭಾರಿಗಳಂತೆ ಪರಿಗಣಿಸಿದರೆ, ಸಂಕಲನದ ಒಟ್ಟಾರೆ ಆಶಯಕ್ಕೆ, ಮೌಲ್ಯಕ್ಕೆ ಧಕ್ಕೆ ಬರದೆಂದೆ ನನ್ನ ಭಾವನೆ.

ಮೊದಲಿನ ಗುಂಪಿನ ಭಾವನಾತ್ಮಕ ಕವಿತೆಗಳಲ್ಲಿ ಸಹಜವಾಗಿಯೇ ಕವಿಭಾವಝರಿ ಹರಿಸುವ ವಸಂತರ ಭಾವಲಹರಿಯ ಸಂಚಯ ಪ್ರತಿ ಕವನದಲ್ಲೂ ವ್ಯಕ್ತವಾಗಿರುವುದನ್ನು ಕಾಣಬಹುದು. "ಜೀವನೋತ್ಸಾಹದಲಿ ಬದುಕು ಪ್ರತಿ ಕ್ಷಣವನ್ನು" ಎಂದ 'ದ್ವಂದ್ವ' ದಲ್ಲಾಗಲಿ, "ಹೇಗೋ ಎಲ್ಲೋ ಇರಲಿ ಜೀವ ಸಂಕುಲದಲ್ಲಿ, ಅನುಭಾವದೆಡೆಯಿರಲಿ ನಮ್ಮ ಈ ಭಾವ" ಎನ್ನುವ 'ಪಯಣಿಗ' ದವರೆಗೆ ಕವಿ ಭಾವನೆಯ ಸವಿಯುಣಿಸುತ್ತಾ ಸಾಗುತ್ತವೆ ಈ ಕವಿತೆಗಳು.

ಪ್ರಕೃತಿ, ಪರಿಸರ, ನಿಸರ್ಗದ ಕುರಿತಾದ ಎರಡನೇ ಗುಂಪಿನಲ್ಲಿ ಬರುವ ಕವನಗಳಲ್ಲಿ "ಎಂಥ ಅಪರೂಪದ ಸಮತೋಲನವಿದು? ನಿಯಂತ್ರಣದ ದಾರ ಹಿಡಿದ ಪ್ರಕೃತಿಯದು" ಎನ್ನುವ 'ಸಮತೋಲನ' ದಿಂದ ಹಿಡಿದು, ಮೌನದ ಹೆಗಲೇರಿ "ದಿವ್ಯ ಮೌನವೆ ನೀನು ನಿಯತಿಯ ಒಡಲಲ್ಲಿ, ತಪೋನಿದ್ದೆಯಲಿ ಅದೇಕೆ ಇರುವೆ?" ಎಂದು ಪ್ರಶ್ನಿಸುವ 'ಮೌನದ ಮೌನ' ವಾಗಲಿ, ಹುಟ್ಟೂರಿನ ಭಾಷಾ ಸೊಗಡಿನ 'ಬೆಳ್ಳಿ ಚುಕ್ಕಿ' ಯಾಗಲಿ, ಮಳೆಯಂತೆ ಹರ್ಷೋಲ್ಲಾಸದಿಂದ ಕುಣಿವ 'ವರ್ಷಧಾರೆ' , 'ಸಂಜೆ ಮಳೆ'ಯಾಗಲಿ - ತಾ ಕಂಡ ವಿಸ್ಮಯಗಳ ಕಂತೆಯನೆಲ್ಲ ಎಲ್ಲರಿಗೂ ಹಂಚುಣ್ಣುವ ಉತ್ಸಾಹ, ಆ ವಸ್ತುಗಳ ಮೇಲಿನ ಆದರ , ತುಂಬು ಪ್ರೀತಿಯ ಉಲ್ಲೇಖಗಳು ಯಥೇಚ್ಚವಾಗಿ ಕಾಣಸಿಗುತ್ತವೆ - ಅಂತೆಯೆ ಕವಿಯ ಜೀವನೋತ್ಸಾಹ ಕೂಡ!

ಪ್ರಾಸಂಗಿಕ, ವಾಸ್ತವಿಕ ಸಂಗತಿಗಳ ಕುರಿತಾದ ಮೂರನೆಯ ಗುಂಪಿನ ಕವನಕ್ಕೆ ಕವಿ 'ಸಂಚಯ', 'ನಿಲುವುಗಳು', 'ಯಾಂತ್ರಿಕ ಜೀವನ' ಇತ್ಯಾದಿಗಳು ಹೆಸರೆ ಹೇಳುವ ಸಂಗತಿಗಳನ್ನು ಪ್ರತಿಬಿಂಬಿಸುವ ಬರಹಗಳು. 'ಒಂದು ಮಧ್ಯಾಹ್ನ', ನಿದ್ದೆಗೆ ಜಾರಿ ಅನುಭೂತಿಯಲಿ ತೇಲಿದ ಅನುಭಾವವನ್ನು ಕಟ್ಟಿಕೊಡುವ ವಿಶೇಷ ಕವನ - "ಆವರಿಸಿದಾ ಒಂದು ಜಿಕ್ಕ ಜಂಪು, ಕಾಣಿಸಿತು ಜೀವನದ ನಿಜವಾದ ಕಂಪು" ಎನ್ನುತಲೆ ಎಚ್ಚರಕೆ ಕರೆತರುತ್ತದೆ.

'ಸಂಚಯ', 'ಸಾವಿನಲ್ಲೊಂದು ಹುಟ್ಟು', 'ತೇಜಸ್ವಿ', 'ಗುಲಬರ್ಗಾದ ಗಾಂಧಿ' ಇವೆಲ್ಲ ನಾಲ್ಕನೆ ಗುಂಪಿನಲ್ಲಿ ವ್ಯಕ್ತಿ ಚಿತ್ರಣವಾಗಿಯೊ, ವ್ಯಕ್ತಿಗಳನ್ನು ಕವಿ ಕಂಡ ರೂಪಿನಲ್ಲಾಗಿಯೊ ರೂಪು ಪಡೆಯುತ್ತ, ಮಾನವ ಯಾ ಮಾನವ ಸಂಬಂಧಗಳ ಸುತ್ತ ಹೆಣೆದುಕೊಳ್ಳುತ್ತ ಬಿಚ್ಚಿಕೊಳ್ಳುವ ಕಾವ್ಯಧಾರೆ. ಇಲ್ಲಿ ಬರುವ ತೇಜಸ್ವಿ, ಸದ್ದಾಂ, ಗುಲಬರ್ಗಾದ ಗಾಂಧಿ - ಎಲ್ಲರು ಚಿತ್ರಣದ ರೂಪದಲ್ಲಿ ಕಣ್ಮುಂದೆ ನಿಂತಾಗ ಕವಿಯಾಗಿ ವಸಂತರ ಮತ್ತೊಂದು ಆಯಾಮದ ಮಜಲು, ವೈವಿಧ್ಯತೆಯನ್ನು ಅರಿವು ಮಾಡಿಕೊಡುತ್ತದೆ.

ಮಾನವ ಸಹಜ, ಭಾವನೆ ಕಾಮನೆಗಳ ಸುತ್ತ ಹೆಣೆದ 'ಸಂತೃಪ್ತಿ', 'ವಿರಹ' ಇತ್ಯಾದಿಗಳ ಐದನೆ ಗುಂಪು ಹೆಸರೆ ಹೇಳುವಂತೆ ಆಯಾ ವಸ್ತುವಿನ ಕುರಿತಾದ ಬರಹಗಳು. "ಸೃಷ್ಟಿಕರ್ತನ ಬಯಕೆ ನಮ್ಮಯ ಪಥವಿರಲಿ, ಚೆಲುವೆ ನಮಗವನ ನಂಬಿಕೆಯ ಬಲವಿರಲಿ" ಎಂದು ಆಶಾವಾದವನ್ನು ಬಿಂಬಿಸುವ 'ವಿರಹ', "ಮಳೆಯ ರಭಸಕೆ ಕೊಚ್ಚಿ ಹೋಗುವ ಗೌಣತೆಯು, ಪ್ರಭೆ ಮಾತ್ರ ಕ್ಷೀಣಿಸದು ಅದರ ಜಾಯಮಾನ"ಎನ್ನುವ ' ಸ್ಪಂದನ' - ಎರಡೂ ತಮ್ಮದೇ ಆದ ವಿಶಿಷ್ಟ ಬಗೆಯಲ್ಲಿ ಮುದ ನೀಡುವ ಪರಿ ರಮಣೀಯ.

ಇನ್ನು ಕಟ್ಟಕಡೆಯ ಗುಂಪಾದ ಕಾಳಜಿ, ಚಿಂತನೆ, ನೀತಿ, ಸೂಕ್ತಿಗಳ ಸುತ್ತ ಗಿರಕಿ ಹಾಕುತ್ತ ಅರಳಿದ ಕಾವ್ಯಲಹರಿಯ ಗುಂಪಿಗೆ ಸೇರುತ್ತವೆ - ನಿತ್ಯ ನೂತನ, ಹಣತೆ, ದಶಾವತಾರ..ಇತ್ಯಾದಿ. ಪುಸ್ತಕದ ಹೆಸರೂ ಆಗಿರುವ 'ಅಂತರ' ಇದೆ ಗುಂಪಿಗೆ ಸೇರುತ್ತದೆ ಹಾಗು ಪ್ರತಿಯೊಂದರಲ್ಲೂ ವಸಂತರ ಬರಹದ ಛಾಪು, ಬದುಕಿನ ಆಗುಹೋಗು ಹಾಗೂ ನಿಯತಾನಿಯತಗಳ ಕಾಳಜಿ ಎದ್ದು ಕಾಣುತ್ತದೆ.

ಕಡೆಯದಾಗಿ ಸಂಕಲನದ / ಕವನಗಳ ದೌರ್ಬಲ್ಯದ ಕುರಿತು - ಒಂದೆರಡು ಕವಿತೆಗಳಲ್ಲಿ ಕಾಣಿಸಬಹುದಾದ ಮೆಲು ಬಾಲಿಶತೆ ಹಾಗೂ ಮಿಕ್ಕಿದ್ದರಲ್ಲಿ ಎದ್ದು ಕಾಣುವ ಅಷ್ಟೇ ವೈರುಧ್ಯದ ಪ್ರಬುದ್ಧತೆ - ಇದು, ವಸಂತರವರು ಕವಿಯಾಗಿ ಬೆಳೆದ, ಹಾಗೆ ಬೆಳೆಯುತ್ತಲೇ ಅನುಭವದೊಂದಿಗೆ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡು ಬಂದ ಬಗೆಯನ್ನು ಎತ್ತಿ ತೋರುವುದೆ ವಿನಃ, ಆಳವಾದ ದೌರ್ಬಲ್ಯವನ್ನಲ್ಲ. ಹಾಗೆಯೆ, ಇಲ್ಲಿ ಕವಿ ಯಾವುದೆ 'ಇಸಂ' ಅನ್ನು ಪ್ರತಿಪಾದಿಸದೆ ಸರಳ ಭಾವಲೋಕದಲಿ ಸಾಮಾನ್ಯಸ್ತರದಲ್ಲಿ ವಿಹರಿಸುವುದರಿಂದ, ಇಲ್ಲದ್ದನ್ನು ಹುಡುಕುವ ಯತ್ನಕ್ಕಿಳಿಯದೆ ಇರುವುದನ್ನು ಮನಸಿಟ್ಟು ಆಸ್ವಾದಿಸುವ ದೃಷ್ಟಿಕೋನದಿಂದ ಓದಿದರೆ ಇಲ್ಲಿನ ಕವನಗಳು ಇಷ್ಟವಾಗಿ, ಆಪ್ತವಾಗಿ ಮುದ ಕೊಡುತ್ತವೆ. ಇಷ್ಟು ಮಾತ್ರವಲ್ಲದೆ, ವಸಂತ್ ಈ ಸಂಕಲನವನ್ನು ಮುದ್ರಿಸಿ, ಪ್ರಕಟಿಸಿ, ಪ್ರಕಾಶಿಸಲು ಸಾಕಷ್ಟು ಸಮಯ ಸಂಪನ್ಮೂಲಗಳನ್ನು ವ್ಯಯಿಸಿ ದುಡಿದಿದ್ದಾರೆ - ಕನ್ನಡದ ಅಳಿಲು ಸೇವೆಗೆ ಆದಷ್ಟೂ, ಶಕ್ತಿಮೀರಿ ಕಾಣಿಕೆ ನೀಡುವ ಸದುದ್ದೇಶದಿಂದ. ಆ ಶ್ರಮಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ, ವಸಂತರವರಲ್ಲಿರುವ ಕವಿ ಮತ್ತಷ್ಟು ಸೊಗಸಾದ ರುಚಿಯಾದ ನಳಪಾಕವನ್ನು ಮಾಡಿ ನಮಗೆಲ್ಲ ಉಣಬಡಿಸುವುದರಲ್ಲಿ ಸಂದೇಹವೆ ಇಲ್ಲ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada poem collection by Vasanth Kulkarni, Singapore. Review by Nagesh Mysore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more