ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬರುವನು ಚಂದಿರ

By Staff
|
Google Oneindia Kannada News

Chandrashekhar
'ಚಂದಿನ" ಅವರ ಪದ್ಯಗಳನ್ನು ಕುತೂಹಲದಿಂದ ಓದಿದ್ದೇನೆ. ಒಂದು ಸದಸದ್ ವಿವೇಕದ ಮನಸ್ಸು ಇಲ್ಲಿ ಕಾರ್ಯಶೀಲವಾಗಿದೆ. ಈ ಲೇಖಕರು ಲೋಕಾಂತ ಮತ್ತು ಏಕಾಂತ ಎರಡಕ್ಕೂ ಸೂಕ್ಷವಾಗಿ ಸ್ಪಂದಿಸಬಲ್ಲರು. ಹಾಡಬಹುದಾದ 'ಚಂದಿನ" ಅವರ ಅನೇಕ ರಚನೆಗಳು ಭಾಷೆಯ ಬಳಕೆಯ ದೃಷ್ಟಿಯಿಂದ ವಿಶೇಷವಾದ ಮುಕ್ತತೆಯನ್ನು ತೋರಿಸುತ್ತವೆ. ಒತ್ತಾಯದ ಪ್ರಾಸಕ್ಕೆ ಅವರು ಹಾತೊರೆಯಬೇಕಾಗಿಲ್ಲ. ಕೆಲವು ಕಡೆ ಅವರ ರಚನೆಗಳು ಸಹಜವಾಗಿಯೇ ತಮ್ಮನ್ನು ಕಟ್ಟಿಕೊಳ್ಳುತ್ತವೆ. ಹಕ್ಕಿ, ಕತ್ತಲೆಯೆಡೆಗೆ, ಭೂರಮೆಯೊಂದಿಗೆ ಪಿಸುಮಾತು, ಯಾವ ಕೊರತೆ, ಕೋಪವೆಂಬ ಧೂರ್ತ, ಕಡಲ ಕಿನಾರೆ, ನೀ ಯಾರಂತ, ಮಚ್ಚಬಹುದಾದ ರಚನೆಗಳು. ಕಾವ್ಯ ಪ್ರತಿಭೆಯು ಈ ಕವಿಗೆ ಕರುಣಿಸಲಿ ಎಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ - ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ.

* ಚಂದಿನ, ಹೈದರಾಬಾದ್

ಹಣದ ಮೇಲೆ ಹೊಳೆವ ಕಣ್ಣು
ಹೆಣದ ಮೇಲೆ ಧೂಳು ಮಣ್ಣು
ಗಂಧ, ನೀರು, ಹೂವು, ಹಣ್ಣು
ಗೌಣ ಗುಣವೊ ಚಂದಿರ

ಋತುಚಕ್ರ ತಿರುಗಿ ತರುವ
ನವ ನವೀನ ಪ್ರತಿ ದಿನವ
ಕಪ್ಪು ಬಿಳುಪು ನೆನಪು ಉಳಿಸಿ
ಮರೆಯಾಗುವ ಚಂದಿರ

ಕನ್ನಡಿಯೆದುರು ನೋಡಬೇಕು
ಜ್ಞಾನವಿದ್ದಕಡೆ ಹೋಗಬೇಕು
ನಿಜವ ನುಡಿವವರ ಬೆನ್ನುತಟ್ಟಿ
ನೀನಾಗು ಮನುಜ ಚಂದಿರ

ಎಳೆಬಿಸಿಲಿಗೆ ಮೈ ತೆರೆದಿಟ್ಟು
ತಂಗಾಳಿಗೆ ರೋಮಾಂಚನ
ತೆಳುವಾದ ಮನದ ನೋವು
ತೂಗಾಡುವ ಹೂವು ಚಂದಿರ

ಆದಿ ಶೂನ್ಯ, ಅಂತ್ಯ ಶೂನ್ಯ
ಶೂನ್ಯ ಜಗದ ಪಯಣವು
ಪಡೆದುದೆಲ್ಲ ಪಡೆದುದಲ್ಲ
ಶೂನ್ಯ ನಿಜವು ಚಂದಿರ

ಇತಿ ಮಿತಿಗಳ ಅರಿವಿರದೆ
ಆಳ, ಅಗಲ ತಿಳಿಯದೆ
ಬಲ್ಲೆನೆಂದು ನಟಿಸುವವಗೆ
ಭಯವು ಒಳಗೆ ಚಂದಿರ

ಹಾಲೊಳಗೆ ಬೆಣ್ಣೆ, ಕಾಯೊಳಗೆ ಎಣ್ಣೆ
ಅಡಗಿರುವುದು ನಿಜವು ತಾನೆ
ಹುಡುಕಿ ಪಡೆಯೊ ಉತ್ತರ
ದುಗುಡ ತೊರೆದು ಚಂದಿರ

ಹೊರಗೆ ಬೆಳಕು, ಒಳಗೆ ಕೊಳಕು
ಕಪ್ಪು ಬಿಳುಪು ಪ್ರತಿ ದಿನದ ಬದುಕು
ಕಪ್ಪ ಕೊಟ್ಟು ಬೆಪ್ಪನಾಗಿ,
ತುಪ್ಪ ಬೇಡುತಿರುವೆ ಚಂದಿರ

ಉದ್ದೇಶರಹಿತ ಸ್ನೇಹ ವಿರಳ
ಕಾಲಹರಣಕಿಂದು ಕಾಲವಿಲ್ಲ
ತಿರುಗಿನೋಡದೆ ಓಡುತಿಹರು
ಒಮ್ಮೆ ಕೂಗಿ ತಡೆಯೊ ಚಂದಿರ

ಗಮನಕೊಡದೆ ಕಳೆದ ಬಾಲ್ಯ
ಯಶಸ್ಸಿಗಾಗಿ ಮರೆತು ಮೌಲ್ಯ
ತೂಗು ತಕ್ಕಡಿಯಲ್ಲಿ ತತ್ತರಿಸಿ
ಬಿದ್ದು, ಉಸಿರು ಬಿಟ್ಟ ಚಂದಿರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X