ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಮಾತು

By Staff
|
Google Oneindia Kannada News

ಅಮ್ಮನ ಒಳ್ಳೆಯ ಇಮೇಜು, ಅಪ್ಪನನ್ನು ಮರೆಗೆ ತಳ್ಳುತ್ತದೆ. ಎಲೆಮರೆ ಕಾಯಿಯಂತೆ ಮಕ್ಕಳ ಪ್ರಗತಿಯಲ್ಲಿ ಅಪ್ಪ ಇದ್ದೇ ಇರುತ್ತಾನೆ! ಅವನನ್ನು ಗುರ್ತಿಸುವ ಪ್ರಯತ್ನವನ್ನು ಬಹುಮಂದಿ ಮಾಡುವುದೇ ಇಲ್ಲ. ಈ ಕವನದಲ್ಲೊಬ್ಬ ಅಪ್ಪ ಇದ್ದಾನೆ.. ಈ ಅಪ್ಪನ ಬಗ್ಗೆ , ನಿಮ್ಮಪ್ಪನ ಬಗ್ಗೆ ಎರಡು ಸಾಲು ಬರೆಯಿರಿ.

  • ಕೃಷ್ಣಮೂರ್ತಿ ಅಜ್ಜಹಳ್ಳಿ, ಬೆಂಗಳೂರು
    [email protected]
ಅಪ್ಪನ ನೆನಪು ಬರುವುದೆ ಇಲ್ಲ
ನನಗೆ ಅಪ್ಪನೆ ಇರಲಿಲ್ಲ
ಅಪ್ಪನ ನೆನಪು ಬರುವುದೆ ಇಲ್ಲ
ನನಗೆ ಎಲ್ಲರಹಾಗೆ ಸ್ಲೇಟು ಬಳಪ
ಕೊಡಿಸಿರಲಿಲ್ಲ
ಪಕ್ಕದಿ ಕುಳಿತು ಅ ಆ ಇ ಈ ಬರೆಸಿರಲಿಲ್ಲ
ಅಪ್ಪನ ನೆನಪು ಬರುವುದೆ ಇಲ್ಲ
ನನಗೆ ಎಲ್ಲರ ಹಾಗೆ ಅಂಗಿ ಚಡ್ಡಿ
ಕೊಡಿಸಿರಲಿಲ್ಲ
ತೊಡಿಸಿ ಆಡಿಸಿ, ನಗಿಸಿ ಕುಣಿಸಿರಲಿಲ್ಲ
ಅಪ್ಪನ ನೆನಪು ಬರುವುದೆ ಇಲ್ಲ
ಎಲ್ಲರಹಾಗೆ ಪೆನ್ನು ಪುಸ್ತಕ ತಂದಿರಲಿಲ್ಲ
ಪಕ್ಕದಿ ಕುಳಿತು ನಾ ಬರೆಯಲು,ಓದಲು
ಬೆನ್ನು ತಟ್ಟಿ ಭೇಷ್‌ ಎಂದಿರಲಿಲ್ಲ
ಅಪ್ಪನ ನೆನಪು ಬರುವುದೆ ಇಲ್ಲ
ನನಗೆ ಎಲ್ಲರಹಾಗೆ ಸ್ಕೂಟರ್‌, ಬೈಕ್‌ ಕೊಡಿಸಿರಲಿಲ್ಲ
ಕೊಡಿಸಿ ಹಿಂದೆ ಕುಳಿತು ನನ್ನ ತಬ್ಬಿ ಹಿಡಿದಿರಲಿಲ್ಲ
ಅಪ್ಪನ ನೆನಪು ಬರುವುದೆ ಇಲ್ಲ
ಎಲ್ಲರಹಾಗೆ ಆಸ್ತಿ ಪಾಸ್ತಿ ತೆಗಿದಿರಲಿಲ್ಲ
ಮನೆಯನ್ನೇನು ಕಟ್ಟಿಸಿರಲಿಲ್ಲ
ಕಟ್ಟಿಸಿ ನನಗೆ ಬಿಟ್ಟಿರಲಿಲ್ಲ
ಅಪ್ಪನ ನೆನಪು ಬರುವುದೆ ಇಲ್ಲ
ಎಲ್ಲರಹಾಗೆ ಹುಡುಗಿಯ ಹುಡುಕಿರಲಿಲ್ಲ
ಹುಡುಕಿ ಮದುವೆ ಮಾಡಿರಲಿಲ್ಲ
ಮೊಮ್ಮಕ್ಕಳೊಂದಿಗೆ ಆಟ ಆಡಿರಲಿಲ್ಲ
ಯಾಕೆಂದರೆ ನನಗೆ ಅಪ್ಪನೆ ಇರಲಿಲ್ಲ
***

ಅಪ್ಪನಾ ಮಾತು ಸವಿನುಡಿ ಮುತ್ತು
ಅವನ ಬಗ್ಗೆ ಏನ ಹೇಳಿದರೂ ಸಾಲದು ಯಾವತ್ತೂ
ಮಗನೆ....
ನಿನಗೆ ಹೇಳುವೆ ಕೆಲಮಾತು
ಮಾತೆಯು(ಮಗುವಿಗೆ) ಸಂಸಾರಕ್ಕೆ ಮುತ್ತು
ನಿನ್ನ ಜನುಮದ ಋಣಕ್ಕೆ ನಿನ್ನ ಮೈ
ಚರ್ಮ ತೆಗೆದು ಚಪ್ಪಲಿ ಮಾಡಿ ಕೊಟ್ಟರೂ
ಆಕೆಯ ಋಣ ತೀರದು ಯಾವತ್ತೂ....
ಮಗನೆ....
ನಿನಗೆ ಮೊದಲ ಗುರು ಅವಳೆ
ನಿನ್ನ ಒಂಭತ್ತು ತಿಂಗಳು ಓತ್ತವಳೆ
ಕೈತುತ್ತು ಇತ್ತು ಸಲಹವಳೆ
ಬಾಯಕಟ್ಟಿ ತಿಂದು ಒಪ್ಪೊತ್ತು
ಮರೆಯದಿರು ಮಗನೆ ನೀ ಅವಳ ಯಾವತ್ತೂ
ಮಗನೆ....
ಮದುವೆಯಾಗಿ ಆರೇಳು ವರ್ಷ
ಮಕ್ಕಳಾಗಲಿಲ್ಲವೆಂದು
ಕಣ್ಣೀರಕೊಡಿ ಅರಿಸವಳೆ
ಗಿರಿ, ದೇವಳ ಮಸೀದಿ, ಮಠ
ಹತ್ತಿ, ಸುತ್ತಿ,ಬೇಸತ್ತು ಬಸವಳಿದವಳೆ
ಮಗನೆ....
ನೀ ಅವಳಲ್ಲಿ ಜನಿಸಿದಂದಿನಿಂದಲೂ
ಮೂರ್‌ ನಾಲ್ಕು ವರ್ಷ ಅನ್ನ ತಿನ್ನಿಸಿ
ಆನಂದದ ಹೊಳೆಯಲ್ಲಿ
ತೇಲುತ್ತಿರುವಾಗಲೇ ನೀ ಬಿದ್ದು
ಕೈ ಮುರಿದು ಕೊಂಡೆ ಆಗ
ನಿನ್ನ ತಬ್ಬಿಕೊಂಡು ಬಿದ್ದು ಬಿದ್ದು
ಕಣ್ಣೀರ ಕೊಡಿ ಹರಿಸಿದಳು ಎದೆ ಚಚ್ಚಿಕೊಂಡು
ನಾನು ಅತ್ತದ್ದೇ ನೆನಪಿಲ್ಲ
ಅವಳ ಅವಸ್ಥೆ ಕಂಡು ನನ್ನ ಕಣ್ಣಲ್ಲಿ
ರಕ್ತ ಹನಿ ಹನಿಯಾಗಿ ಹರಿದುದು ಗೊತ್ತಾಗಲಿಲ್ಲ
ಮಗನೆ....
ನೀ ಮೊದಲಿನಂತಾಗುವ ವರೆಗೆ ಅವಳಿಗೆ
ಊಟ, ನಿದ್ದೆ, ನೆನಪಿರಲಿಲ್ಲ
ಮಗನೆ...
ನಿನ್ನ ಶಾಲೆಗೆ ಕಳಿಸಿದ ಮೇಲೆ
ಒಂದು ದಿನವೂ ಅವಳು ಮನೆಯಲ್ಲಿ
ಕೂರಲಿಲ್ಲ
ಕಬ್ಬು ಕಡಿಯುವುದ ಬಿಡಲಿಲ್ಲ
ಕಾಸಿಗೆ ಕಾಸು ಕೂಡಿಸುವುದ ಮರೆಯಲಿಲ್ಲ
ಮಗನೆ...

ನೀ ಐದಾರನೆ ಕ್ಲಾಸಿರಬಹುದು
ನಿನ್ನಮ್ಮ ನಿನ್ನ ತಮ್ಮನ ಉದರದಲ್ಲಿಟ್ಟುಕೊಂಡು
ಕಬ್ಬ ಕಡಿಯುವುದ ನನ್ನಿಂದ ನೊಡಲಾಗಲಿಲ್ಲ
ಹೋಗಬೇಡ ಮನೆಯಲ್ಲಿರು ಎಂದೆ
ಹಗಲು ರಾತ್ರಿ ಆಲೆಗೆ ಕಬ್ಬು ಕೊಡಲು
ನಾ ನಿರತನಾದೆ ತೂಕಡಿಸಿ
ಅದೊಂದು ದಿನ ನಿದ್ದೆಯಲ್ಲಿ ನನ್ನ ಕೈ
ಆಲೆಗೆ ಕೊಟ್ಟು ಮುರಿದುಕೊಂಡೆ
ಮಗನೆ...
ನಮಗೆ ಕಷ್ಟಗಳ ಮೇಲೆ ಕಷ್ಟಬಂದರೂ
ಕೈಯಿರದ ನನ್ನ ಕೂಸಾದ ನಿಮ್ಮ
ಕೈ ಹಿಡಿದು ಕೈ ಬಿಡದೆ ಸಲಹವಳೆ
ಮಗನೆ...
ನಾನಂತೂ ನಿಮ್ಮನ್ನ, ನಿಮ್ಮ ಅಮ್ಮನನ್ನ
ಚೆನ್ನಾಗಿಡಲು ಆಗಲಿಲ್ಲ ನೀನು
ಓದಿ ದೊಡ್ಡವನಾಗಿ ನಿನ್ನ ಅಮ್ಮನ
ಅನುಜರ ಕೈ ಬಿಡದೆ ಕಾಪಾಡು
ಕಾಪಾಡು....
ಮಗನೆ....
ಮುಂದೆ ಅಪ್ಪನಿಗೆ ಮಾತು ಆಡಲಾಗಲಿಲ್ಲ
ಅಳುತ ನನ್ನ ಮುಂದಲೆಯ ತನ್ನ
ಮೊಂಡ ಕೈಯಲ್ಲೇ ಸವರಿದನಲ್ಲ
ಇಂದು ಅಪ್ಪನಿಲ್ಲದಿದ್ದರೂ
ಅವನ ಮಾತುಗಳು ನನ್ನಲ್ಲಿ
ನೆನಪಾಗಿ ಉಳಿದವಲ್ಲ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X