ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಹಾದಿಯಲ್ಲಿ

By Staff
|
Google Oneindia Kannada News
ತೋಳ ತೊಟ್ಟಿಲ ತೂಗಿ ತೊನೆವ
ಈ ಹೆಜ್ಜಾಲ ನೆಲ ತಾಗಿದಲ್ಲೆಲ್ಲ
ಟಿಸಿಲು ಮತ್ತೆ ಆಕಾಶದೆಡೆಗೆ ರಭಸದ ಚಿಗಿತ
ನೆಲ ತಾಗಿದಲ್ಲೆಲ್ಲ ಬಿತ್ತುವ, ಮೊಳೆವ
ನಿರಂತರ ಕಾರ್ಯ ಇದರ ಒಡಲಲ್ಲೇ.

ಎಷ್ಟೊಂದು ತರತರದ ಹಕ್ಕಿಗಳು
ಹಾಡುತ್ತಾ ನೆರಳನರಸಿ ಬಂದವು ಇಲ್ಲಿಗೆ
ತಮ್ಮ ಕಥೆ ವ್ಯಥೆಗಳ ಹಾಡಾಗಿಸಿ
ವಿಶ್ರಮಿಸಿದವು ಅರೆಗಳಿಗೆ
ಬಣ್ಣ ಬಣ್ಣದ ರೆಕ್ಕೆಪುಕ್ಕಗಳ ಹಕ್ಕಿಗಳು
ತಾಯಾಡಲ ಬೆಚ್ಚನೆ ಕಾವಿನಲ್ಲಿ ಅಡಗಿದವು
ಬಿರುಗಾಳಿ, ಮಳೆ, ಬಿಸಿಲಿಗೆ ಅಂಜಿ
ಕಣ್ತೆರೆದು ಕಲಿತವು ಹಾರುವುದರ ಜೊತೆಗೇ
ಹಾಡುವುದ ಕೂಡ.

ಬಿತ್ತಿದವರೆಲ್ಲ ಬಂಗಾರ ಬೆಳೆಯುವುದಿಲ್ಲ
ನೆಲದೊಡಲ ಗುಟ್ಟಿನಂತೆ ಕಸ, ಕಡ್ಡಿ , ಕಾಳು
ಸಿಕ್ಕಷ್ಟು ಗಾಳಿ, ನೀರು ಬಿಸಿಲ ಹೀರಿದ
ಸಹಜ ಕೃಷಿಯ ಹರಿಕಾರ.

ಈ ಮರಕ್ಕೆ ನಿರಂತರ ಸೃಷ್ಟಿಯ ಆಸೆ
ತನ್ನ ಬೇರು ಸಡಿಲಗೊಳ್ಳುತ್ತಿದ್ದರೂ
ಮತ್ತೆ ಮತ್ತೆ ಹೊಸ ಬೇರುಗಳ ನೆಲದಾಳಕ್ಕೆ ಇಳಿಸಿ
ಬಿಗಿದುಕೊಳ್ಳುತ್ತದೆ ತನ್ನನ್ನು ನೆಲದೊಡಲಿಗೆ
ಅಲ್ಲೊಂದು ಇಲ್ಲೊಂದು ಮಾವು, ಬೇವು, ಹೊಂಗೆ
ತಲೆಯೆತ್ತಿದವು ಸಿಹಿ ಕಹಿಯ ಸೂಸಿ
ಮರಕ್ಕೂ ನಿಶ್ಚಿಂತೆ ಬೆಳೆಯಲಿ ಅವು
ನೀಡಲಿ ತನ್ನಂತೆ ನೆಳಲು, ಆಶ್ರಯ
ಬರುವ ಹೋಗುವ ಹಾದಿಹೋಕರಿಗೆ

ಎಷ್ಟೋ ವರ್ಷಗಳಿಂದ ಕಂಡ
ಸೂರ್ಯ, ಚಂದ್ರರ ಚೆಲುವು ಮಾಸದಿದೆ
ಹಾಡುವ ಕೊರಳು ಹಾಡುತ್ತಲಿದೆ ಸೋಲದೆ
ನೀ ಕೊಟ್ಟೆ ಇದ, ತೆಗೆದುಕೋ ಎಂಬ ನಿರ್ಲಿಪ್ತತನ.

ನೀ ಬರುವ ಮುನ್ನ ಹಾದಿಯಿರಲಿಲ್ಲವೆಂದಲ್ಲ
ಹಲವು ಪಂಥ, ಹಲವು ಮತಗಳ ನಡುವೆ
ಜಾತಿಯಿಲ್ಲದ ಅಜಾತನ ಹಾದಿ ತೆರೆದಿತ್ತು
ಕೋಟೆ ಕಟ್ಟಿಕೊಳ್ಳಬಹುದು ಸುತ್ತ
ದಂಡು ದಳವಾಯಿಗಳ ನೇಮಿಸಬಹುದು
ಗಾಳಿ ಬೆಳಕು ಬಾರದ ಹಾಗೆ ಕಾವಲಿಗೆಂದು
ಜನ ಕೇಳುತ್ತಾರೆ ‘ಯಾಕೆ ಇವರಿಗೆ ಕಾವಲು,
ಯಾಕೆ ಇವರಿಗೆ ಗೋಡೆ.
ಗೋಡೆಯಾಡೆಯದವನು ದೊರೆಯಲ್ಲ , ಕವಿಯಲ್ಲ
ಅವನು ನಮ್ಮನು ಮುಟ್ಟುವುದಿಲ್ಲವೆಂದು.’

ಗುರುವೇ ನೀವು ತೋರಿದ ಹಾದಿ
ಹಾದಿಯಲ್ಲದ ಹಾದಿ
ಬೆಳಕು ತೋರುವ ದೀವಿಗೆಗೆ ಆಕಾರವಿರಲಿಲ್ಲ
ಬರಿಯ ಬೆಳಕಿತ್ತು
ಮೊಟ್ಟೆಯಾಡೆದು ಹೊರಬಂದ
ಮರಿಹಕ್ಕಿಯ ಕೊರಲಿನಲಿ ತವಕವಿತ್ತು
ಹಿಡಿಗೆ ಸಿಗದ ಆಕಾಶದೆಡೆಗೆ ನೀವು
ನಿಮ್ಮೊಂದಿಗೆ ನೂರಾರು ಹಾಡುವ ಹಕ್ಕಿಗಳು.

( ‘ಹಣತೆಯ ಕವಿ’ ಡಾ.ಜಿ.ಎಸ್‌. ಶಿವರುದ್ರಪ್ಪನವರಿಗೆ 75 ತುಂಬಿದ ಸಂದರ್ಭದಲ್ಲಿ ಬರೆದ ಕವಿತೆ. ಲೋಹಿಯಾ ಪ್ರಕಾಶನ ಪ್ರಕಟಿಸಿದ ‘ಹಣತೆ’ ಅಭಿನಂದನಾ ಗ್ರಂಥದಲ್ಲಿ ಈ ಕವಿತೆ ಪ್ರಕಟವಾಗಿದೆ.)


ಹಣತೆಯ ಬೆಳಕು-
ಡಾ.ಜಿ.ಎಸ್‌.ಎಸ್‌. ಕಾವ್ಯದಲ್ಲಿ ವಿಡಂಬನೆಯ ಸೊಗಸು
ಜಿಎಸ್‌ಎಸ್‌ - ಬದುಕಿಗೆ ಬದ್ಧವಾದ ಹಾಡುಹಕ್ಕಿ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X